“ಗುರಿ ಬಿಡಬೇಡಿ. ಇವತ್ತಲ್ಲ ನಾಳೆ ನಾನು ಯಶಸ್ಸು ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲದಿಂದ ಮುನ್ನಡೆಯಿರಿ. ಆಗ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ,” ಎನ್ನುವ ಗೀತಾ ಇಂದಿನ ಯುವತಿಯರಿಗೆ ಮಾರ್ಗದರ್ಶಿ ಆಗಿದ್ದಾರೆ.
ಪುಟ್ಟ ಮಗುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರಲ್ಲೂ ಸಂಗೀತ ವಿಶಿಷ್ಟ ಸಂವೇದನೆ ಹುಟ್ಟಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಮಂದಬುದ್ಧಿಯವರಲ್ಲೂ ಅದು ಚೈತನ್ಯ ತುಂಬುತ್ತದೆ. ಅವರ ವರ್ತನೆ, ನಡವಳಿಕೆಯಲ್ಲಿ ಬದಲಾವಣೆ ತರುತ್ತದೆ ಎಂಬುದನ್ನು ಮಲ್ಲೇಶ್ವರದ `ಹಂಸ ಕುಟೀರ’ದ ವೀಣಾ ವಾದಕಿ ಡಾ. ಗೀತಾ ಭಟ್ ಸಾಬೀತು ಮಾಡಿ ತೋರಿಸಿದ್ದಾರೆ. ಕಳೆದ 20 ವರ್ಷದ ತಮ್ಮ ಸಂಗೀತ ಪಯಣದಲ್ಲಿ ಸುಮಾರು 500ಕ್ಕೂ ಹೆಚ್ಚು ಬುದ್ಧಿಮಾಂದ್ಯರ ಜೀವನದಲ್ಲಿ ಸಾಕಷ್ಟು ಬದಲಾವಣೆಯ ಬೆಳಕು ಬೀರಿರುವ ಗೀತಾ ಭಟ್ ಸಂಗೀತ ಲೋಕದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಾರೆ.
ಮನೋತಜ್ಞೆಯಾದ ಸಂಗೀತ ಆರಾಧಕಿ
5ನೇ ವರ್ಷದಿಂದಲೇ ಸಂಗೀತಾಭ್ಯಾಸ ಶುರು ಮಾಡಿದ ಅವರು, ಕಾಲೇಜು ಶಿಕ್ಷಣ ಮುಗಿಸುವ ಹೊತ್ತಿಗೆ ಅವರಲ್ಲಿ ಮನೋವಿಜ್ಞಾನದ ಬಗ್ಗೆ ಒಲವು ಹೆಚ್ಚಿತು. ಸಂಗೀತ ಹಾಗೂ ಮನೋವಿಜ್ಞಾನ ಒಂದೆಡೆ ಸೇರಿದರೆ ಅಲ್ಲೊಂದು ಹೊಸ ಕ್ರಾಂತಿ ಮಾಡಬಹುದು ಎಂಬ ಸಣ್ಣ ಸುಳಿವು ಅವರಿಗೆ ಆಗಲೇ ಸಿಕ್ಕಿತು.
ಬುದ್ಧಿಮಾಂದ್ಯ ಮಕ್ಕಳಿದ್ದ `ಸೃಷ್ಟಿ ಸ್ಪೆಷಲ್ ಅಕಾಡೆಮಿ’ಗೆ ಗೀತಾ ಆಗಾಗ ಭೇಟಿ ಕೊಡುತ್ತಿದ್ದರು. ಬುದ್ಧಿಮಾಂದ್ಯ ಮಕ್ಕಳಿಗೆ ಅರ್ಥ ಆಗುವಂತಹ ಹಾಡುಗಳನ್ನು ಅವರ ಮುಂದೆ ಹಾಡಿ ತೋರಿಸುತ್ತಿದ್ದರು. ಮಕ್ಕಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಗತೊಡಗಿತು. ಇದರಿಂದ ಪ್ರೇರಿತರಾದ ಗೀತಾ ಅಂತಹ ಮಕ್ಕಳ ಬಗ್ಗೆ ಸಂಶೋಧನೆ ಶುರು ಮಾಡಿದರು. ಅಲ್ಲಿಂದಲೇ ಬುದ್ಧಿಮಾಂದ್ಯರಲ್ಲಿ ಸಂಗೀತ ಬಹಳಷ್ಟು ಬದಲಾವಣೆ ತರಲು ಕಾರಣವಾಗುತ್ತದೆ ಎಂಬುದು ಸ್ಪಷ್ಟವಾಗುತ್ತಾ ಹೋಯಿತು.
ಹಂಸ ಕುಟೀರ ಫೌಂಡೇಶನ್
ಬುದ್ಧಿಮಾಂದ್ಯ ಮಕ್ಕಳಲ್ಲಿ ಸಂಗೀತದ ಮೂಲಕ ಬದಲಾವಣೆ ತರಬೇಕೆಂಬ ಮೂಲ ಕಲ್ಪನೆಯಿಂದ 2003ರಲ್ಲಿ `ಹಂಸ ಕುಟೀರ ಫೌಂಡೇಶನ್’ ಜನ್ಮ ತಾಳಿತು. ಬುದ್ಧಿಮಾಂದ್ಯ ಮಕ್ಕಳು ಪರಿಸರದ ಪ್ರಭಾವದಿಂದಿಲೂ, ಕುಟುಂಬದ ವಾತಾವರಣದಿಂದಲೋ ಮೌನಕ್ಕೆ ಶರಣಾಗಿ ಬಿಟ್ಟಿರುತ್ತಾರೆ. ಅವರನ್ನು ಮೌನದಿಂದ ಹೊರತರಲು ಸಂಗೀತ ಬಹಳಷ್ಟು ಕೆಲಸ ಮಾಡುತ್ತದೆ. `ಹಂಸ ಕುಟೀರ’ದಲ್ಲಿ ಬುದ್ಧಿಮಾಂದ್ಯ ಮಕ್ಕಳಷ್ಟೇ ಅಲ್ಲ, ಸಾಮಾನ್ಯ ಬುದ್ಧಿಮಟ್ಟದ ಮಕ್ಕಳು ಸಹ ಸಂಗೀತ ಕಲಿಯಲು ಬರುತ್ತಾರೆ. ಹೀಗಾಗಿ ಬುದ್ಧಿಮಾಂದ್ಯ ಮಕ್ಕಳು ಇತರರೊಡನೆ ಬೆರೆತು ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ರೀತಿ ಸಾಮಾನ್ಯ ಮಕ್ಕಳಲ್ಲಿ ಇರುವ ಬುದ್ಧಿಮಾಂದ್ಯರ ಬಗೆಗಿನ ಹಿಂಜರಿಕೆಯನ್ನು ನೀಗಿಸಲು ಇದು ಸಹಾಯ ಮಾಡುತ್ತದೆ.
ಬಹಳಷ್ಟು ಸಂಗೀತ ಶಾಲೆಗಳು ಬುದ್ಧಿಮಾಂದ್ಯ ಮಕ್ಕಳಿಗೆ ಸಂಗೀತಾಭ್ಯಾಸಕ್ಕೆ ಅನುವು ಮಾಡಿಕೊಡುವುದಿಲ್ಲ. ಅಂತಹ ಒಂದೇ ಒಂದು ಮಗುವಿಗೆ ತರಬೇತಿ ನೀಡುತ್ತಿದ್ದರೆ, ಎಲ್ಲಿ ಇತರೆ ಮಕ್ಕಳು ತಮ್ಮ ಶಾಲೆ ತೊರೆದು ಹೋಗುತ್ತಾರೋ ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ. ಆದರೆ `ಹಂಸ ಕುಟೀರ’ ಅಂಥದಕ್ಕೆ ಅಪವಾದ. ಇಲ್ಲಿ ಸಾಮಾನ್ಯ ಮಕ್ಕಳು ಹಾಗೂ ಬುದ್ಧಿಮಾಂದ್ಯ ಮಕ್ಕಳ ಸಮನ್ವಯತೆ ಎದ್ದು ಕಾಣುತ್ತದೆ.
ಬುದ್ಧಿಮಾಂದ್ಯರ ಸಂಗೀತ ಕಾರ್ಯಕ್ರಮ
2002ರಲ್ಲಿ ಡಾ. ಗೀತಾ ಭಟ್ ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ `ಸೃಷ್ಟಿ ಸ್ಪೆಷಲ್ ಅಕಾಡೆಮಿ’ಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ಸಂಗೀತ ಚಿಕಿತ್ಸೆ ಶುರು ಮಾಡಿದ್ದರು. ಅದೊಂದು ದಿನ ಅಕಾಡೆಮಿಯ ಡೀನ್ ಮೀನಾ ಜೈನ್ ಹಾಗೂ ಸುಚಿತ್ರಾ ಸೋಮಶೇಖರ್‌ರವರು ಗೀತಾ ಭಟ್‌ರನ್ನು ಕರೆದು, ಭಾರತೀಯ ವಿದ್ಯಾಭವನದಲ್ಲಿ ಒಂದು ಕಾರ್ಯಕ್ರಮ ನಡೆಯಲಿದ್ದು, ಈ ಮಕ್ಕಳಿಂದ ಒಂದು ಕಾರ್ಯಕ್ರಮ ಕೊಡಿಸೋಕೆ ಆಗುತ್ತಾ ಎಂದು ಕೇಳಿದರು, “ಅದನ್ನು ನಾನು ಒಂದು ಸವಾಲು ಎಂಬಂತೆ ಸ್ವೀಕರಿಸಿ, 10 ಮಕ್ಕಳನ್ನು ಸಂಗೀತ ಕಾರ್ಯಕ್ರಮ ನೀಡಲು ಸಿದ್ಧಪಡಿಸಿದೆ. ಆ ಮಕ್ಕಳು ಶ್ಲೋಕ, ಜನಪದ ಗೀತೆ, ದಾಸರ ಪದಗಳನ್ನು ಹಾಡಿ ಅಲ್ಲಿನ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು,” ಎಂದು ಡಾ. ಗೀತಾ ತಮ್ಮ ಪ್ರಥಮ ಸಾಹಸದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.
ಅಲ್ಲಿಂದ ಮುಂದೆ ಬುದ್ಧಿಮಾಂದ್ಯ ಮಕ್ಕಳು ಹಂಸ ಕುಟೀರದ ಒಂದು ಭಾಗವೇ ಆಗಿಹೋದರು. ಅವರು ಬುದ್ಧಿಮಾಂದ್ಯ ಮಕ್ಕಳಲ್ಲಿ ಚೈತನ್ಯ ತುಂಬಿ, ಅವರು ಧೈರ್ಯದಿಂದ ವೇದಿಕೆಯ ಮೇಲೆ ಕುಳಿತು ಹಾಡುವಷ್ಟರ ಮಟ್ಟಿಗೆ ಅವರನ್ನು ತರಬೇತುಗೊಳಿಸುತ್ತಾರೆ.
ಬುದ್ಧಿಮಾಂದ್ಯ ಮಕ್ಕಳ ಸಂಗೀತದ ಬಗೆಗಿನ ಆಸಕ್ತಿಯ ಕುರಿತಂತೆ ಡಾ. ಗೀತಾ ಹೀಗೆ ಹೇಳುತ್ತಾರೆ, “ಕೆಲವು ಮಕ್ಕಳು ಶಬ್ದದ ಉಚ್ಚಾರದಲ್ಲಿ, ಇನ್ನು ಕೆಲವು ಮಕ್ಕಳು ರಾಗದಲ್ಲಿ ಮತ್ತೆ ಕೆಲವರು ಲಯದಲ್ಲಿ ಗಟ್ಟಿಯಾಗಿರುತ್ತಾರೆ. ಅವರ ಮೆದುಳಿನ ಯಾವ ಭಾಗ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಗಮನಿಸಿ ನಾವು ಅವರಿಗೆ ಸಂಗೀತದ ಬಗ್ಗೆ ಹೇಳಿ ಕೊಡಬೇಕಾಗುತ್ತದೆ. ಅವರಿಗೆ ಎತ್ತರದ ಧ್ವನಿಯಲ್ಲಿ ಹಾಡಿದರೆ ಕರ್ಕಶವಾಗಿ ಕೇಳಿಸುತ್ತದೆ.”
ಬುದ್ಧಿಮಾಂದ್ಯರಿಗೆ ತಾಳ್ಮೆಯ ಪಾಠ
ಬುದ್ಧಿಮಾಂದ್ಯರಿಗೆ ಸಂಗೀತ ಹೇಳಿಕೊಡುವುದು ನಿಜಕ್ಕೂ ಒಂದು ಚಾಲೆಂಜ್. ಏಕೆಂದರೆ ಬುದ್ಧಿಮಾಂದ್ಯ ಮಕ್ಕಳನ್ನು 5 ನಿಮಿಷ ಒಂದೇ ಕಡೆ ಕೂರಿಸುವುದೇ ಕಷ್ಟ. ಹೀಗಾಗಿ ಡಾ. ಗೀತಾ ಭಟ್ ಬುದ್ಧಿಮಾಂದ್ಯ ಮಗುವೊಂದರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಮೊದಲು ಅದಕ್ಕೆ ವೈಯಕ್ತಿಕವಾಗಿ ಪಾಠ ಶುರು ಮಾಡುತ್ತಾರೆ, ಕ್ರಮೇಣ ಗುಂಪಿನಲ್ಲಿ ಹಾಗೂ ಬಳಿಕ ಇತರೆ ಸಾಮಾನ್ಯ ಮಕ್ಕಳ ಜೊತೆ ಕೂರಿಸಿ ಸಂಗೀತ ಅಭ್ಯಾಸ ಮಾಡಿಸುತ್ತಾರೆ. ಈ ರೀತಿ ಆ ಮಕ್ಕಳ ವ್ಯಕ್ತಿತ್ವ ವಿಕಸನದ ಬಗ್ಗೆ ಗಮನ ಕೊಡುತ್ತಾರೆ. ಬುದ್ಧಿಮಾಂದ್ಯ ಮಗುವೊಂದು 4-8 ವಯಸ್ಸಿಲ್ಲಿಯೇ ಸಂಗೀತ ಕಲಿಕೆ ಆರಂಭಿಸಿದರೆ ಬಹಳ ಉತ್ತಮ ಪರಿಣಾಮ ಕಂಡುಬರುತ್ತದೆ. 12 ವಯಸ್ಸಿನ ಬಳಿಕ ಬಂದರೆ ಅವರನ್ನು ಒಂದೆಡೆ ಕೂರಿಸುವುದೇ ಕಷ್ಟವಾಗುತ್ತದೆ. ಆದರೂ ಅಂತಹ ಮಕ್ಕಳಿಗೆ ತಾವು ಸಂಗೀತದ ಮೂಲಕ ಬದಲಾವಣೆ ತರಲು ಪ್ರಯತ್ನ ನಡೆಸಿರುವುದಾಗಿ ಡಾ. ಗೀತಾ ಭಟ್ ಹೇಳುತ್ತಾರೆ.
ಅವರಿಂದಲೇ ನಿರೂಪಣೆ
ಬುದ್ಧಿಮಾಂದ್ಯ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿ ಅವರಿಂದ ಕಾರ್ಯಕ್ರಮ ಕೊಡಿಸುವಷ್ಟರಮಟ್ಟಿಗೆ ಡಾ. ಗೀತಾ ಭಟ್ ಅವರನ್ನು ಹುರಿದುಂಬಿಸುತ್ತಾರೆ. ಆರಂಭದ 3-4 ಕಡೆ ಕಾರ್ಯಕ್ರಮ ಕೊಡುವಾಗ ಅವರಲ್ಲಿ ಹಿಂಜರಿಕೆ ಇರುತ್ತಿತ್ತು. ಆದರೆ ಈಗ ಅವರಲ್ಲಿ ಹಿಂಜರಿಕೆ ಮಾಯವಾಗಿದೆ. ಈಗ ಅವರೇ ಕಾರ್ಯಕ್ರಮ ನಿರೂಪಣೆ ಮಾಡುತ್ತಾರೆ, ಜೊತೆಗೆ ಹಾಡುತ್ತಾರೆ. ಇದು ಬಹಳ ಅದ್ಭುತ ಬದಲಾವಣೆ! ಅವರು ಕಾರ್ಯಕ್ರಮ ಕೊಡುವಾಗ ಜೊತೆಗೇ ಡಾ. ಗೀತಾ ಭಟ್ ಕುಳಿತಿರಲೇಬೇಕು. ಇಲ್ಲದಿದ್ದರೆ ಅವರಿಗೆ ಧ್ವನಿಯೇ ಹೊರಡುವುದಿಲ್ಲ.
ಹೇಗಿದ್ದವರು, ಹೇಗಾದರು?
ಆರಂಭದಲ್ಲಿ 5 ನಿಮಿಷ ಒಂದೇ ಕಡೆ ಕೂರಿಸಲು ಕಷ್ಟಪಡಬೇಕಾಗುತ್ತಿತ್ತು. ಸಂಗೀತ ಅಭ್ಯಾಸದ ಮೂಲಕ ಈಗ ಬಹಳಷ್ಟು ಮಕ್ಕಳಲ್ಲಿ ಏಕಾಗ್ರತೆ ಬಂದಿದೆ. ಕೆಲವು ಮಕ್ಕಳು ಈಗ 2-3 ಗಂಟೆಗಳ ಕಾಲ ಒಂದೇ ಕಡೆ ಕುಳಿತು ಶಾಸ್ತ್ರೀಯ ಸಂಗೀತ ಸಹ ಆಲಿಸುತ್ತಾರೆ. ಸಾಮಾನ್ಯ ಮಕ್ಕಳೇ ಹೀಗೆ ಕುಳಿತುಕೊಳ್ಳುವುದಿಲ್ಲ. ಇದು ನಿಜಕ್ಕೂ ಅವರಲ್ಲಿ ಬಂದ ಸಕಾರಾತ್ಮಕ ಬದಲಾವಣೆ.
ಡಾ. ಗೀತಾ ಭಟ್ ಆಗಾಗ ಬುದ್ಧಿಮಾಂದ್ಯ ಮಕ್ಕಳಿಂದ ವೇದಿಕೆ ಕಾರ್ಯಕ್ರಮ ಕೊಡಿಸಲೇಬೇಕು. ಇಲ್ಲದಿದ್ದರೆ ಆ ಮಕ್ಕಳು `ಯಾವಾಗ ಕಾರ್ಯಕ್ರಮ ಮೇಡಂ?’ ಎಂದು ದುಂಬಾಲು ಬೀಳುತ್ತಾರೆ.
ಕ್ಯಾನ್ಸರ್ ರೋಗಿಗಳಿಗೂ ಸಂಗೀತ ಚಿಕಿತ್ಸೆ
ಡಾ. ಗೀತಾ ಕೇವಲ ಬುದ್ಧಿಮಾಂದ್ಯ ಮಕ್ಕಳಿಗಷ್ಟೇ ಅಲ್ಲ, ಕ್ಯಾನ್ಸರ್ ರೋಗಿಗಳಿಗೆ, ಕ್ಯಾನ್ಸರ್‌ನಿಂದ ಗುಣಮುಖರಾದವರಿಗೆ ಹಾಗೂ ಅವರನ್ನು ನಿರ್ವಹಣೆ ಮಾಡುವವರಿಗೂ ಸಂಗೀತದ ಮೂಲಕ ಕೌನ್ಸೆಲಿಂಗ್ ಮಾಡುತ್ತಾರೆ. ಇದು ಒಂದು ರೀತಿಯಲ್ಲಿ ನೋವು ನಿರ್ವಹಣೆಗೆ ಅನುಕೂಲವಾಗುತ್ತದೆ.
ಜಾಗೃತಿ ಕಾರ್ಯಕ್ರಮ
ಬುದ್ಧಿಮಾಂದ್ಯ ಮಕ್ಕಳನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಡಾ. ಗೀತಾ ಮಾಂಟೆಸ್ಸರಿ ಶಿಕ್ಷಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೂಡ ನಡೆಸುತ್ತಾರೆ.
ಹಿಂಜರಿಕೆ ನೀಗಬೇಕು
ಬುದ್ಧಿಮಾಂದ್ಯತೆ ಒಂದು ಸಾಮಾಜಿಕ ಸಮಸ್ಯೆ. ಅಂಥವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿದೆ. ಅವರಿಗಾಗಿ ಮಿಡಿಯುವವರ ಸಂಖ್ಯೆ ಕೂಡ ಹೆಚ್ಚಬೇಕು. ಆದರೆ ದುರ್ದೈವ ಎಂಬಂತೆ ಆ ಕೆಲಸ ನಮ್ಮಲ್ಲಿ ಆಗುತ್ತಿಲ್ಲ. ನಮ್ಮ ಬಹಳಷ್ಟು ಸಂಗೀತ ಶಾಲೆಗಳು ಬುದ್ಧಿಮಾಂದ್ಯರಿಗೆ ಕಲಿಸುವ ಆಸಕ್ತಿ ತೋರಿಸುತ್ತಿಲ್ಲ. ಅಂಥವರಿಗೆ ಅವಕಾಶ ಕೊಟ್ಟರೆ ಎಲ್ಲಿ ಸಾಮಾನ್ಯ ಮಕ್ಕಳು ತಮ್ಮ ಕಡೆ ಬರುವುದನ್ನು ಬಿಟ್ಟುಬಿಡುತ್ತಾರೊ ಎಂಬ ಹಿಂಜರಿಕೆ ಇದೆ.
ಅಮೆರಿಕದಲ್ಲಿ ಇತ್ತೀಚೆಗೆ ಹೊಸ ಟ್ರೆಂಡ್‌ವೊಂದು ಆರಂಭವಾಗಿದೆ. ಅಲ್ಲಿ ಉದ್ಯೋಗ ಮಾಡುತ್ತಿರುವ ನಮ್ಮ ಕನ್ನಡಿಗರ ಸಂಗೀತಾಸಕ್ತ ಮಕ್ಕಳು ಭಾವೀ ಜೀವನದಲ್ಲಿ ಬುದ್ಧಿಮಾಂದ್ಯರಿಗಾಗಿ ಸ್ಪಂದಿಸಲು ಈಗಲೇ ಸನ್ನದ್ಧರಾಗುತ್ತಿದ್ದಾರೆ. ಅಂತಹ ಆಸಕ್ತ ಮಕ್ಕಳ ತಂಡಗಳು ಪ್ರತಿವರ್ಷ ಡಾ. ಗೀತಾ ಭಟ್ ಬಳಿ ಬಂದು ಬುದ್ಧಿಮಾಂದ್ಯ ಮಕ್ಕಳ ಬಗ್ಗೆ ಅಧ್ಯಯನ ನಡೆಸುತ್ತಾರೆ. ಬಳಿಕ ಅದರ ಪ್ರಾಜೆಕ್ಟ್ ವರದಿಯನ್ನು ತಮ್ಮ ಶಾಲೆಗಳಿಗೊ ವಿಶ್ವವಿದ್ಯಾಲಯಕ್ಕೂ ನೀಡುತ್ತಾರೆ. ನಿಜಕ್ಕೂ ಇದು ಉತ್ತಮ ಬೆಳವಣಿಗೆ. ಇಂತಹ ಯುವಜನರು ನಮ್ಮಲ್ಲೂ ಸೃಷ್ಟಿಯಾಗಬೇಕು ಎಂದು ಡಾ. ಗೀತಾ ಭಟ್ ಆಶಿಸುತ್ತಾರೆ.
– ಅಶೋಕ ಚಿಕ್ಕಪರಪ್ಪಾ