ಸೆಕ್ಸ್ ಇಲ್ಲಿ ಕಾಮನ್ ಬಿಡಿ
ನೀವು ಮೇಲಿನ ಶೀರ್ಷಿಕೆ ನೋಡಿ ಏನೇನೋ ಚಿಂತಿಸಲು ಹೋಗಬೇಡಿ. ಹೀಗೊಂದು ಮಹಾನ್ ಸ್ಟೇಟ್‌ಮೆಂಟ್‌ನ್ನು ಕೊಟ್ಟವಳು ರಾಧಿಕಾ ಆಪ್ಟೆ. ಈಕೆಯ ಹೊಸ ಚಿತ್ರದ ಹಾಟ್ ದೃಶ್ಯವೊಂದು ವೈರಲ್ ಆದಾಗ ಈ ರೀತಿ ತಿಪ್ಪೆ ಸಾರಿಸಿದ್ದಾಳೆ. ಈಕೆಯ ಮುಂದಿನ ಹೊಸ ಚಿತ್ರ `ದಿ ವೆಡ್ಡಿಂಗ್ ಗೆಸ್ಟ್’ನ ಹಾಟ್ ದೃಶ್ಯ ಲೀಕ್ ಆದದ್ದೇ ತಡ, ಇಂಥ ಅಣಿಮುತ್ತು ಉದುರಿಸಿದ್ದಾಳೆ. ರಾಧಿಕಾ ಹೇಳುವುದೆಂದರೆ, ಜನ ಇಲ್ಲಿ ಸೆಕ್ಸ್ ಕುರಿತು ಮಾತನಾಡಲು ಬಯಸುವುದಿಲ್ಲ ಎಂಬುದೊಂದು ವಿಡಂಬನೆ. ಆದರೆ ಜನರ ಮಧ್ಯೆ ಸೆಕ್ಸ್ ಸಂಬಂಧ ಕಾಮನ್. ಜನ ಮಾಡುವುದೂ ಅದನ್ನೇ…. ಆದರೆ ಬಾಯಲ್ಲಿ ಹೇಳುವುದಿಲ್ಲ ಅಷ್ಟೆ. ಆಲ್ ದಿ ಬೆಸ್ಟ್ ರಾಧಿಕಾ, ಇಂಥ ನಿನ್ನ ಹುರುಳಿಲ್ಲದ ಮಾತುಗಳಿಂದ ಎಲ್ಲರ ಬಾಯಿಗೆ ಬೀಗ ಹಾಕುತ್ತಿರುವೆ!
ಮೊದಲ ವಿವಾಹ ವಾರ್ಷಿಕೋತ್ಸವ
ದೀಪಿಕಾ ರಣವೀರ್‌ರ ಮದುವೆ ಆದಾಗಿನಿಂದ ಈ ಜೋಡಿ ಚರ್ಚೆಯಲ್ಲಿದೆ. ಇವರ ಬೊಂಬಾಟ್ ಬಾಂಧವ್ಯದ ಬಗ್ಗೆ ಎಲ್ಲೆಲ್ಲೂ ಹೊಗಳಿಕೆ ಮಾತುಗಳೇ! ಈ ಜೋಡಿ `ಬಿ’ ಟೌನ್‌ನಲ್ಲಿ ಬಲು ಚರ್ಚಿತರು. ಫ್ಯಾನ್ಸ್ ಸಹ ಇವರ ಎಲ್ಲಾ ವಿಷಯ ತಿಳಿಯ ಬಯಸುತ್ತಾರೆ. ಕಳೆದ ವರ್ಷ ನವೆಂಬರ್ 15ರಂದು ಇವರು ಶಾಸ್ತ್ರೋಕವಾಗಿ ವಿವಾಹವಾಗಿದ್ದರು. ಕಳೆದ ತಿಂಗಳು ಇವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಮೊದಲು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನಂತರ ಪಂಜಾಬಿನ ಅಮೃತಸರ್ ನಗರದ ಸ್ವರ್ಣ ಮಂದಿರಕ್ಕೆ ಪರಿವಾರ ಸಮೇತ ಭೇಟಿ ಕೊಟ್ಟು, ಮುಂಬೈನಲ್ಲಿ ಗ್ರಾಂಡ್ ಪಾರ್ಟಿ ನಡೆಸಿದರು. ಮೆನಿ ಮೆನಿ ಹ್ಯಾಪಿ ರಿಟರ್ಸ್ ಆಫ್ ದಿ ಡೇ ದೀಪ್‌ವೀರ್!
ಗಾಯಗೊಂಡ ಅಕ್ಷಯ್
ಖತರೋಂಕೀ ಕಿಲಾಡಿ ಎಂದೇ ಖ್ಯಾತಗೊಂಡ ಮೇರು ಸ್ಟಂಟ್ ನಟ ಅಕ್ಷಯ್ ಕುಮಾರ್ `ಸೂರ್ಯವಂಶಿ’ ಚಿತ್ರದ ಶೂಟಿಂಗ್‌ನಲ್ಲಿ ಗಾಯಗೊಂಡ. ಆದರೆ ಆತ ಚಿತ್ರೀಕರಣ ನಿಲ್ಲಿಸಲಿಲ್ಲ. ಅಸಲಿಗೆ ಶೂಟಿಂಗ್‌ನಲ್ಲಿ ಆತನ ಕೈಗಳಿಗೆ ಅಪಾರ ಪೆಟ್ಟು ಬಿದ್ದು ದೊಡ್ಡ ಗಾಯವಾಗಿತ್ತು. ಇದಾಗಿ ಬೇಸಿಕ್ ಟ್ರೀಟ್‌ಮೆಂಟ್ ನೀಡಲಾಯಿತು. ಅಲ್ಲಿಂದ ಸತತ ಶೂಟಿಂಗ್ ಮುಂದುವರಿಯಿತು. ಈ ಚಿತ್ರದಲ್ಲಿ ಈತ ಜಬರ್ದಸ್ತ್ ಪೊಲೀಸ್ ಇನ್‌ಸ್ಪೆಕ್ಟರ್. ನಾಯಕಿಯಾಗಿ ಕತ್ರೀನಾ ಮಿಂಚಲಿದ್ದಾಳೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಅಜಯ್ ದೇವ್‌ಗನ್ ಅತಿಥಿ ನಟರಾಗಿ ಕಾಣಿಸಲಿದ್ದಾರೆ. ಹೀಗಾದರೆ ಹೇಗಪ್ಪ ಅಜಯ್, ನಿಮ್ಮ ಅಭಿಮಾನಿಗಳಿಗಾದರೂ ನೀವು ಅನಿವಾರ್ಯಾದಾಗ ಡೂಪ್ ಬಳಸಲೇಬೇಕು.
ನಟನೆ ನಿಲ್ಲಿಸಲಿರುವ ಬಿಗ್ ಬೀ
ಬಿಗ್ ಬೀ ಅಂದ್ರೆ ಅಮಿತಾಭಾ ಕಡೆಯಿಂದ ಲಕ್ಷಾಂತರ ಅಭಿಮಾನಿಗಳಿಗೆ ಕೆಟ್ಟ ಸುದ್ದಿ ಇದೆ. ತಮ್ಮ ಸತತ ಅನಾರೋಗ್ಯದ ಕಾರಣ ಅಮಿತಾಭ್ ಚಿತ್ರೀಕರಣದಿಂದ ಲಾಂಗ್ ಬ್ರೇಕ್ ಪಡೆಯಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಇವರು ಆನ್‌ಲೈನ್‌ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದರು, ಅದರಲ್ಲಿ ಇವರು ಬೆಡ್ ಮೇಲೆ ಸುಸ್ತಾಗಿ ಒರಗಿದ್ದರು. ಇದಾದ ಮೇಲೆ ಅಭಿಮಾನಿಗಳೆಲ್ಲ ದೊಡ್ಡ ಟೆನ್ಶನ್‌ಗೆ ಒಳಗಾಗಿದ್ದರು. ಅವರು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸತೊಡಗಿದರು. ಅವರು ಫೇಸ್‌ಬುಕ್‌ನಲ್ಲಿ, ಶೂಟಿಂಗ್‌ನಿಂದಾದ ಗಾಯಗಳು ತಮ್ಮನ್ನು ಘಾಸಿಗೊಳಿಸಿವೆ ಎಂದು ಹೇಳಿಕೊಂಡಿದ್ದರು. ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ಮತ್ತೆ ನಟನೆಗೆ ಮರಳಲಿ ಎಂದು ಕಾತುರದಿಂದ ಇಡೀ ಬಾಲಿವುಡ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಹಾಟ್‌ನೆಸ್ ಹೈಟ್ ರೀಚಾದ ಅನುಷ್ಕಾ ಕತ್ರೀನಾ
ಕತ್ರೀನಾ ಮತ್ತು ಅನುಷ್ಕಾ ಇಬ್ಬರೂ ಇತ್ತೀಚೆಗೆ ಒಂದು ಫೋಟೋಶೂಟ್ ಮಾಡಿಸಿದರು. ಅದಾದ ಮೇಲೆ ಇಬ್ಬರ ಹಾಟ್‌ನೆಸ್ ಕುರಿತು ಫೋಟೋ ಸಮೇತ ಚರ್ಚೆಗಳೂ ವೈರಲ್ ಆದವು. ಇಬ್ಬರು ನಾಯಕಿಯರೂ ಬೀ ಟೌನಿನ ಟಾಪ್ ಎನಿಸಿದ್ದಾರೆ. ಇವರ ಬೆಡಗು ಬಿನ್ನಾಣಗಳ ಜಾದೂ ಪ್ರೇಕ್ಷಕರನ್ನು ಪರವಶಗೊಳಿಸಿವೆ. ತಮ್ಮ ಫ್ಯಾನ್ಸ್ ಮನ ಗೆಲ್ಲುವುದು ಹೇಗೆಂದು ಕತ್ರೀನಾ ಅನುಷ್ಕಾರಿಂದ ಇತರರು ಕಲಿಯಬೇಕಿದೆ.
ಬಾಲಿವುಡ್‌ನ ಹೊಸ ಹಿಟ್ ಮೆಶೀನ್
ದಿನೇದಿನೇ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿರುವ ಆಯುಷ್ಮಾನ್ ಖುರಾನಾನ ಸೂಪರ್‌ಹಿಟ್ ಚಿತ್ರಗಳನ್ನು ನೋಡುತ್ತಿದ್ದರೆ, ವೀಕ್ಷಕರಿಗೆ ಈತ ಯಾವ ಹಿಟ್ಟನ್ನು ಸವಿದು ಇಂಥ ಸಕ್ಸಸ್ ಮೇಲೆ ಸಕ್ಸಸ್ ಚಿತ್ರ (ಅದೂ ಲೋ ಬಡ್ಜೆಟ್!) ಕೊಡುತ್ತಿದ್ದಾನೆ ಎಂದು ಆಶ್ಚರ್ಯವಾಗುತ್ತಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ಈತನ ಬೊಕ್ಕತಲೆಯ ಕುರಿತಾದ `ಬಾಲಾ’ (ಕನ್ನಡದ `ಒಂದು ಮೊಟ್ಟೆಯ ಕಥೆ’ ಪ್ರೇರಿತ) ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿ ಮೊದಲ ದಿನವೇ 10-15 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಮಾಡಿದೆ! `ವಿಕ್ಕಿ ಡೋನರ್’ ಚಿತ್ರದಿಂದ ತನ್ನ ಪ್ರತಿಯೊಂದು ಚಿತ್ರ ನಿಜ ಅರ್ಥದಲ್ಲಿ ಡಿಫರೆಂಟ್ ಆಗಿರುವಂತೆ ನೋಡಿಕೊಂಡಿರುವ ಈತನ ಚಾಕಚಕ್ಯತೆ ಮೆಚ್ಚತಕ್ಕದ್ದು. ಕಂಗ್ರಾಟ್ಸ್ ಆಯುಷ್ಮಾನ್….. ಆಲ್ ದಿ ಬೆಸ್ಟ್!
ಮತ್ತೆ ಡೈರೆಕ್ಟರ್ ಆದ ಶ್ರೇಯಸ್
`ಪೋಸ್ಟರ್ ಬಾಯ್ಸ್’ ಚಿತ್ರದ ಯಶಸ್ಸಿನ ನಂತರ ಶ್ರೇಯಸ್ ತಲ್ಪಡೆ, ಇದೀಗ ಮತ್ತೆ ಒಂದು ಸಲ `ಸರಕಾರ್ ಕೀ ಸೇವಾ ಮೇ’ ಚಿತ್ರದಲ್ಲಿ ಡೈರೆಕ್ಟರ್ ಆಗಿ ಮಿಂಚಲಿದ್ದಾನೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಇದರ ಬಹುಪಾಲಿನ ಚಿತ್ರೀಕರಣ ಸಣ್ಣಪುಟ್ಟ ಊರುಗಳಲ್ಲೇ ನಡೆಯಲಿದೆ. ಈ ಚಿತ್ರ ಯಾವ ವಿಷಯ ಆಧಾರಿತ ಎಂಬ ಗುಟ್ಟನ್ನು ಈತ ಬಿಟ್ಟುಕೊಟ್ಟಿಲ್ಲ. ನಟನಾಗಿ ಮುಂದುವರಿಯದಿದ್ದರೆ ಏನಂತೆ ಶ್ರೇಯಸ್, ನಿರ್ದೇಶಕನಾಗಿ ತೆರೆಮರೆಯಲ್ಲಿ ಮಿಂಚುತ್ತಲೇ ಶ್ರೇಯಸ್ಸು ಪಡೆಯುವುದು ಮುಖ್ಯ.
ತಂಗಿಯನ್ನು ಪ್ರಮೋಟ್ ಮಾಡಲು
ಕೃತಿ ಸೇನನ್‌ಳ ತಂಗಿ ನೂಪುರ್ ಸೇನನ್‌ಳ ಬಹುಕಾಲ ನಿರೀಕ್ಷಿತ ವಿಡಿಯೋ `ಫಿಲ್‌ಹಾಲ್’ ರಿಲೀಸ್ ಆಗಿದೆ, ಇದರಲ್ಲಿ ಇವಳು ಅಕ್ಷಯ್ ಕುಮಾರ್ ಜೊತೆ ರೊಮಾನ್ಸ್ ನಡೆಸಿದ್ದಾಳೆ. ಈ ಮ್ಯೂಸಿಕ್ ವಿಡಿಯೋ ಸಾಕಷ್ಟು ಹೆಸರು ಗಳಿಸುತ್ತಿದೆ. ಇತ್ತೀಚೆಗಂತೂ ಕೃತಿ ಎಲ್ಲಿಗೇ ಹೊರಡಲಿ, ತನ್ನ ತಂಗಿಯ ಪರವಾಗಿ ಪ್ರಚಾರ ಮಾಡುವುದನ್ನು ಬಿಡುವುದಿಲ್ಲ. ಕೃತಿ ತನ್ನ ಹಲವಾರು ಸಂದರ್ಶನಗಳಲ್ಲಿ, ತಾನು ತಂಗಿಯ ಜೊತೆ ಚಿತ್ರಗಳಲ್ಲಿ ನಟಿಸ ಬಯಸುತ್ತೇನೆ ಎಂದು ಸ್ಪಷ್ಟ ಹೇಳಿಕೊಂಡಿದ್ದಾಳೆ. ನಂಬಲರ್ಹ ಮೂಲಗಳ ಪ್ರಕಾರ ಇಷ್ಟರಲ್ಲೇ ನೂಪುರ್‌ಳ ಅರಂಗೇಟ್ರಂ ಬಾಲಿವುಡ್‌ನಲ್ಲಿ ನಡೆಯಲಿದೆ. ತಂಗಿಗಾಗಿ ಮಿಡಿಯುವ ಅಕ್ಕನ ಹೃದಯ…. ಯಾರಾದ್ರೂ ಇದನ್ನೇ ಚಿತ್ರ ಮಾಡ್ರಪ್ಪಾ!
ಫರ್ಹಾನ್‌ಗೆ ಮರುಮದುವೆ
ಬಹುಶಃ ಹೊಸ ವರ್ಷದಲ್ಲಿ ಆದಷ್ಟು ಬೇಗ ಫರ್ಹಾನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಡಲಿದ್ದಾನೆ. ಅಸಲಿಗೆ, ಫರ್ಹಾನ್ ಮತ್ತು ಶಿವಾನಿ ದಾಂಡೇಕರ್ ಸುಮಾರು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಆದರೆ ಸಾರ್ವಜನಿಕವಾಗಿ ಇಬ್ಬರೂ ಈ ಬಗ್ಗೆ ಏನೂ ಹೇಳಿಕೊಂಡಿರಲಿಲ್ಲ. ಆದರೆ ಕೆಲವು ದಿನಗಳ ನಂತರ ತಾವಿಬ್ಬರೂ ಮದುವೆ ಆಗಲಿರುವುದಾಗಿ ಹೇಳಿಕೊಂಡಿದ್ದಾರೆ. ಕಂಗ್ರಾಟ್ಸ್, ನಿಮ್ಮ ಕನಸು ನನಸಾಗಲಿ!
ನನಗೆ ಪಾರಂಪರಿಕ ಆಸ್ತಿ ಸಿಕ್ಕಿಲ್ಲ
ಬಾಲಿವುಡ್‌ನಲ್ಲಿ ಹಿಂದಿನಿಂದಲೂ ಛೋಟಾ ನವಾಬ್ ಎಂದೇ ಖ್ಯಾತನಾದ ಸೈಫ್ ಅಲೀ ಖಾನ್ ಹೇಳುವುದೆಂದರೆ, ವಂಶ ಪಾರಂಪರ್ಯವಾಗಿ ಬರಬೇಕಿದ್ದ ಹಿರಿಯರ ಆಸ್ತಿ ಏನೂ ಅವನಿಗೆ ದಕ್ಕಿಲ್ಲವಂತೆ! ತನ್ನ ಪಾಲಿಗೆ ಬರಬೇಕಿದ್ದ ನೀಮ್ ರಾಣಾ ಹೋಟೆಲ್ಸ್ ಬಳಿ ಬಾಡಿಗೆಗಿದ್ದ ಪಟೌಡಿ ಪ್ಯಾಲೆಸ್‌ನ್ನು ವಾಪಸ್ಸು ಪಡೆಯಲಿಕ್ಕೂ ಸಾಧ್ಯವಾಗುತ್ತಿಲ್ಲ ಎಂಬ ಈ ಎಲ್ಲಾ ವಿವರಗಳನ್ನೂ ಈತ ಒಂದು ಇಂಗ್ಲಿಷ್ ನ್ಯೂಸ್ ವೆಬ್‌ಸೈಟ್‌ವೊಂದಕ್ಕೆ ಸಂದರ್ಶನ ನೀಡುವಾಗ ಹೇಳಿಕೊಂಡಿದ್ದಾನೆ. ಏನಾದರೂ ಮಾಡು, ಮರಳಿ ಯತ್ನ ಮಾಡು…. ಪ್ರಯತ್ನ ಬಿಡಬೇಡ ಎಂಬುದು ಹಿತೈಷಿಗಳ ಸಲಹೆ.
ಲೈಕ್ ಆಗದ ಅನನ್ಯಾ
`ಪತಿ ಪತ್ನಿ ಔರ್ ವೋ’ ಚಿತ್ರದಲ್ಲಿ ಬಾಲಿವುಡ್‌ನ ಕಾರ್ತಿಕ್ ಜೊತೆ ಅನನ್ಯಾ ಪಾಂಡೆ ರೊಮಾನ್ಸ್ ಮಾಡುವವಳಿದ್ದಳು. ಈ ಚಿತ್ರದ ಹಾಡು ವೈರಲ್ ಆದಾಗ, ವೀಕ್ಷಕರಿಗೆ ಕಾರ್ತಿಕ್‌ನ ಈ ನಾಯಕಿ ಯಾಕೋ ಇಷ್ಟವಾಗಲಿಲ್ಲ. ಅದೇ ಜಾಗದಲ್ಲಿ ಮತ್ತೊಂದು ಚಿತ್ರದ `ಧೀಮೆ ಧೀಮೇ….’ ಹಾಡಿನಲ್ಲಿ ಕಾರ್ತಿಕ್ ಭೂಮಿ ಪೆಡ್ನೇಕರ್ ಒಟ್ಟಾಗಿ ಕಾಣಿಸಿಕೊಂಡರು. ವೀಕ್ಷಕರಿಗೆ ಇವರಿಬ್ಬರ ಕೆಮಿಸ್ಟ್ರಿ ಬಹಳ ಇಷ್ಟವಾಯಿತು. ಒಂದು ಕಡೆ ಎಲ್ಲರೂ ಭೂಮಿಯನ್ನು ಹೊಗಳುತ್ತಿದ್ದರೆ, ಇನ್ನೊಂದು ಕಡೆ ಯಾರಪ್ಪ ಈ ಅನನ್ಯಾಳನ್ನು ನಾಯಕಿ ಮಾಡಿದ್ದು, ಎಂದು ಅವಳನ್ನು ತೆಗಳುತ್ತಿದ್ದಾರೆ. ಕೆಲವರಂತೂ ಸಾರಾಸಗಟಾಗಿ ಭೂಮಿ ಹೆಚ್ಚು ಬ್ಯೂಟಿ ಟ್ಯಾಲೆಂಟೆಡ್, ಅನನ್ಯಾಳಿಗೆ ಸಹಜವಾಗಿ ಭಾವನೆ ವ್ಯಕ್ತಪಡಿಸಲಿಕ್ಕೂ ಬರೋದಿಲ್ಲ ಎಂದು ಆಡಿಕೊಂಡಿದ್ದಾರೆ. ಇದಂತೂ ಹಾಡಿನ ವಿಷಯವಾಯಿತು, ಅನನ್ಯಾಳ ಚಿತ್ರ ರಿಲೀಸ್ ಆದಮೇಲೆ ಪ್ರೇಕ್ಷಕರು ಅವಳ ಭವಿಷ್ಯ ಹೇಗೆ ಬದಲಾಯಿಸುತ್ತಾರೋ…. ಕಾದು ನೋಡಬೇಕು.
TAGS : ಚಿತ್ರಶೋಭಾ, ರಾಧಿಕಾ ಹೇಳಿಕೆ, ವಿವಾಹ ವಾರ್ಷಿಕೋತ್ಸವ, ಗಾಯಗೊಂಡ ಅಕ್ಷಯ್, ಬಿಗ್ ಬೀ ಚಿಂತೆ, ಅನೂಷ್ಕಾ ಕತ್ರಿನಾ, ಅಯುಷ್ಮಾನ್ ಖುರಾನಾ, ನಿರ್ದೇಶಕ ಶ್ರೇಯಸ್, ಅಕ್ಕ-ತಂಗಿ, ಮರುಮದುವೆ, ನವಾಬನ ನೋವು, ಅನನ್ಯಾ ಸೋಲು,