ಮಣಿರತ್ನಂರಂಥ ಖ್ಯಾತ ನಿರ್ದೇಶಕರ ಗರಡಿಯಲ್ಲಿ ಪಳಗಿದ ನಿತ್ಯಶ್ರೀ ವೃತ್ರ ಚಿತ್ರದ ಮೂಲಕ ತಾನೊಬ್ಬ ಪರ್ಫೆಕ್ಟ್ ಕಲಾವಿದೆ ಎಂದು ನಿರೂಪಿಸುತ್ತಿದ್ದಾಳೆ. ಆಕೆಯ ಮಾತುಗಳಲ್ಲೇ ವಿವರ ಅರಿಯೋಣ.

ಅದೃಷ್ಟವೋ ಅಥವಾ ಪಾತ್ರಕ್ಕೆ ಸೂಕ್ತವಾದ ಆಯ್ಕೆಯೋ ಗೊತ್ತಿಲ್ಲ. `ವೃತ್ರ’ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು ರಶ್ಮಿಕಾ ಮಂದಣ್ಣ. ಆದರೆ ತೆಲುಗು ಚಿತ್ರಗಳಲ್ಲಿ ಬಿಝಿಯಾಗಿದ್ದ ರಶ್ಮಿಕಾಳಿಗೆ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳಲು ಸಮಯ ಸಾಕಾಗುವುದಿಲ್ಲವೆಂದು ಚಿತ್ರದಿಂದ ಹೊರಬಂದಿದ್ದಳು.

ನಿರ್ದೇಶಕ ಗೌತಮ್ ಅಯ್ಯರ್‌ ಆ ಚಿತ್ರದ ನಾಯಕಿಯ ಪಾತ್ರಕ್ಕಾಗಿ ಹುಡುಕುತ್ತಿದ್ದಾಗ ಫೇಸ್‌ಬುಕ್‌ನಲ್ಲಿ ಸಿಕ್ಕ ಒಂದು ಫೋಟೋದಲ್ಲಿನ ಹುಡುಗಿ ಈ ಪಾತ್ರ ನಿರ್ವಹಿಸುವಂತಾಯಿತು. ಆ ಹುಡುಗಿಯೇ ನಿತ್ಯಶ್ರೀ. ನಿತ್ಯಾ ಕನ್ನಡದವಳು, ನೃತ್ಯಪಟು, ಖ್ಯಾತ ನೃತ್ಯಗಾರ್ತಿ ಮಯೂರಿ ಅವರ ತಂಡದಲ್ಲಿ ಸಾಕಷ್ಟು ಶೋಗಳನ್ನು ಕೊಟ್ಟಂಥ ಪ್ರತಿಭಾವಂತೆ. ಅಷ್ಟೇ ಅಲ್ಲ, ಖ್ಯಾತ ನಿರ್ದೇಶಕ ಮಣಿರತ್ನಂ ಅವರ `ಕಾಟ್ರು ವೆಳಿಯಿಡೈ’ ಚಿತ್ರದಲ್ಲಿ ನಾಯಕನ ತಂಗಿ ಪಾತ್ರ ಮಾಡಿದ್ದಳು. `ಸೊಲ್‌’ ಎನ್ನುವ ತಮಿಳು ಚಿತ್ರದಲ್ಲಿ ದುಲ್ಕರ್‌ ಜೊತೆ ನಟಿಸಿದ್ದಳು.

ಇಷ್ಟೆಲ್ಲಾ ಅನುಭವವಿರುವ ನಿತ್ಯಶ್ರೀ `ವೃತ್ರ’ ಚಿತ್ರದಲ್ಲಿ ತನ್ನ ಪಾತ್ರವನ್ನು ಅಷ್ಟೇ ಗಂಭೀರವಾಗಿ ನಿರ್ವಹಿಸಿದಳು. ಪ್ರಶಂಸೆಗಳು ಸುರಿದವು. ಕಿಚ್ಚ ಸುದೀಪ್‌ ಟ್ವೀಟ್‌ ಮಾಡುವುದರ ಮೂಲಕ `ವೃತ್ರ’ ಚಿತ್ರದಲ್ಲಿ ಇನ್‌ವೆಸ್ಟಿಗೇಟಿವ್‌ ಆಫೀಸರ್‌ ಪಾತ್ರ ನಿರ್ವಹಿಸಿದ್ದ ನಿತ್ಯಶ್ರೀಯನ್ನು ಹೊಗಳಿದ್ದರು.

ವೃತ್ರ ನಂತರ ಮುಂದೇನು?

ನಿತ್ಯಶ್ರೀಯನ್ನು ಮಾತನಾಡಿಸಿದಾಗ ಎಲ್ಲವನ್ನೂ ನಮ್ಮೊಂದಿಗೆ ಹಂಚಿಕೊಂಡಳು. ಭರತನಾಟ್ಯ ಪಟು, ಖ್ಯಾತ ನೃತ್ಯಗಾರ್ತಿ ಮಯೂರಿಯವರ ಟ್ರೂಪಲ್ಲಿ ನಾನು ಸಾಕಷ್ಟು ಪ್ರೋಗ್ರಾಂ ಕೊಟ್ಟಿದ್ದೇನೆ. ಸಿನಿಮಾ ಬಗ್ಗೆ ಆಸಕ್ತಿ ಇದ್ದುದರಿಂದ ಶಾರ್ಟ್‌ ಫಿಲಂ ಮಾಡಿದ್ದುಂಟು. ಕನ್ನಡದಲ್ಲೂ ಆಫರ್ಸ್‌ ಬಂದಿತ್ತು. ಕೆಲವು ಇಷ್ಟವಾಗಿದ್ದರೂ ಆ ಸಮಯದಲ್ಲಿ ನಾನು ಮಣಿರತ್ನಂ ಅವರ  `ಕಾಟ್ರು ವೆಳಿಯಿಡೈ’  ಸಿನಿಮಾದ ಶೂಟಿಂಗ್‌ನಲ್ಲಿದ್ದೆ. ರಾಜೀವ್‌ ಮೆನನ್‌ ಚಿತ್ರದಲ್ಲೂ ನಟಿಸಿದ್ದೆ. ಸಿನಿಮಾ ಮೇಕಿಂಗ್‌ ಮತ್ತು ನಟನೆ ನನ್ನ ಪ್ಯಾಶನ್‌ ಆಗಿರೋದ್ರಿಂದ ಕ್ಯಾಮೆರಾ ಹಿಂದೆನೂ ಕೆಲಸ ಮಾಡಿದ್ದಿದೆ.

ವೃತ್ರ ಚಿತ್ರದ ಅನುಭವ ಹೇಗಿತ್ತು?

ಇಡೀ ತಂಡ ಹೊಸಬರದು. ಸಿನಿಮಾ ಅನುಭವ ಇದ್ದೋಳು ನಾನೊಬ್ಬಳೇ ಅನ್ಸುತ್ತೆ. ಗೌತಮ್ ಅವರ ಮೊದಲ ಚಿತ್ರ ಇದಾಗಿತ್ತು. ಆದರೂ ಒಬ್ಬ ನಿರ್ದೇಶಕರಿಗೆ ಇರಬೇಕಾಗಿದ್ದ ದೃಷ್ಟಿ ಅವರಲ್ಲಿತ್ತು.

ಗೌತಮ್ ಇಡೀ ತಂಡದ ಜೊತೆ ತುಂಬಾ ಡಿಸ್ಕಸ್‌ ಮಾಡೋರು. ನಮ್ಮ ಪಾತ್ರದ ಬಗ್ಗೆ, ಅದಕ್ಕಿರಬೇಕಾದ ಮ್ಯಾನರಿಸಮ್ ಎಲ್ಲವನ್ನೂ ಹೇಳೋರು. ಪಾತ್ರ ನಿರ್ವಹಿಸುವಾಗ ಅದು ನಟನೆ ಅಂತ ಪ್ರೇಕ್ಷಕರಿಗೆ ಅನಿಸಬಾರದು, ನೈಜವಾಗಿರಬೇಕು ಎಂಬುದನ್ನು ಅರಿತುಕೊಂಡೇ ಇಡೀ ತಂಡದವರು ಕ್ಯಾಮೆರಾ ಮುಂದೆ ಬರುತ್ತಿದ್ದೆವು.

ರಿಯಲ್ ಲೈಫ್‌ನಲ್ಲಿ ಹೇಗೆ?

ನನಗೂ ಆ ಪಾತ್ರಕ್ಕೂ ಅಜಗಜಾಂತರ! ನಾನು ಅವಳ ತರಹ ಸೈಲೆಂಟ್‌ ಅಲ್ಲ. ಅವಳು ತುಂಬಾ ಯೋಚಿಸುತ್ತಾಳೆ, ನಾನು ಫಟಾಫಟ್‌ ಕೆಲಸ ಮಾಡುವವಳು.

ವೃತ್ರ ನಂತರ ಮುಂದೇನು?

ನಾನು ಏನೇ ಮಾಡಿದರೂ ಸಮಾಜಕ್ಕೆ ಧ್ವನಿಯಾಗಬೇಕು! ಇತ್ತೀಚಿನ ಸಿನಿಮಾಗಳಲ್ಲಿ ಅಂತಹ ಪ್ರಯೋಗವಾಗುತ್ತಿದೆ. ಅಂತಹ ಅವಕಾಶಗಳು ಬಂದರೆ ಖಂಡಿತವಾಗಿ ನಟಿಸುತ್ತೇನೆ. ಸಿನಿಮಾ ಮೇಕಿಂಗ್‌ ಬಗ್ಗೆ ಆಸಕ್ತಿಯಿದೆ.

ಎಂತಹ ಸಿನಿಮಾ ಮಾಡುವಾಸೆ?

ಮನೋರೋಗಿ ಬಗ್ಗೆ ಮಾಡಬೇಕಿದೆ…. ಏಕೆಂದರೆ ಬಹಳ ಜನ ಡಿಪ್ರೆಶನ್‌ನಿಂದ ಬಳಲುತ್ತಿದ್ದಾರೆ. ಹೆಚ್ಚಾಗಿ ಆತ್ಮಹತ್ಯೆ ಡಿಪ್ರೆಶನ್‌ನಿಂದಾಗುತ್ತಿದೆ.

ಮಣಿರತ್ನಂ ಅವರಿಂದ ಕಲಿತದ್ದೇನು?

ತುಂಬಾನೆ ಸರಳವಾದ ವ್ಯಕ್ತಿ. ಹೊಸಬರಿರಲಿ… ಜನಪ್ರಿಯ ತಾರೆಯರಿರಲಿ, ಎಲ್ಲರನ್ನೂ ಒಂದೇ ರೀತಿ ಕಾಣುತ್ತಾರೆ, ಗೌರವಿಸುತ್ತಾರೆ. ಅವರ ಸೆಟ್‌ನಲ್ಲಿ ನಾವಿದ್ದೀವಲ್ಲ ಎನ್ನುವುದೇ ಹೆಮ್ಮೆಯ ಸಂಗತಿ. ಕಲಾವಿದರಿಗೆ ಅಭಿನಯಿಸುವಾಗ ತುಂಬಾ ಫ್ರೀಡಂ ಕೊಡುತ್ತಾರೆ. ಹಾಗಾಗಿ ಇನ್ನಷ್ಟು ಎಫರ್ಟ್‌ ಹಾಕಿ ಕೆಲಸ ಮಾಡಬೇಕು ಅನಿಸುತ್ತೆ. ಗೃಹಶೋಭಾ ಪರವಾಗಿ ಗುಡ್‌ಲಕ್‌ ನಿತ್ಯಶ್ರೀ!

– ಜಾಗೀರ್‌ದಾರ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ