ವಿವಾಹ ಅಥವಾ ರಿಸೆಪ್ಶನ್ ಪಾರ್ಟಿಗೆ ಈ ರೀತಿಯಲ್ಲಿ ಸಿದ್ಧರಾಗ
ವಿವಾಹ ಸಮಾರಂಭವಾಗಲಿ ಅಥವಾ ಯಾವುದೇ ವಿಶೇಷ ಕಾರ್ಯಕ್ರಮವಾಗಲಿ, ಸಿಂಗರಿಸಿಕೊಂಡು ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬ ಮಹಿಳೆಯೂ ಬಯಸುತ್ತಾಳೆ. ವೆಡ್ಡಿಂಗ್ ಪಾರ್ಟಿಗಳಲ್ಲಿ ತಾನು ಇತರರಿಗಿಂತ ಚೆಂದವಾಗಿ ಕಾಣಬೇಕೆಂದು ತವಕಪಡುತ್ತಾಳೆ. ಇದಕ್ಕಾಗಿ ಏನು ಮಾಡಬೇಕೆಂದು ತಿಳಿಯೋಣ :
ಕಾಂತಿಯುತ ತ್ವಚೆ
ಚರ್ಮದ ಕಾಂತಿಗಾಗಿ ಮಿಲ್ಕ್ ಪೌಡರ್, ಬಾದಾಮಿ, ಅಕ್ಕಿಹಿಟ್ಟು ಮತ್ತು ಗುಲಾಬಿ ದಳಗಳನ್ನು ಬೆರೆಸಿ ಒಂದು ಬಟ್ಟೆಯಲ್ಲಿ ಕಟ್ಟಿ. ಸ್ನಾನ ಮಾಡುವಾಗ ಇದನ್ನು ಚರ್ಮದ ಮೇಲೆ ಉಜ್ಜಿ. ಇದರಿಂದ ಚರ್ಮ ಮೃದುವಾಗಿ ಆಕರ್ಷಕವಾಗಿ ಕಾಣುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ತಾಜಾತನವನ್ನು ನೀಡುತ್ತದೆ.
ಚರ್ಮವನ್ನು ಸ್ವಚ್ಛ ಹಾಗೂ ಕೋಮಲವಾಗಿರಿಸುವ ಒಂದು ಉತ್ತಮ ಉಪಾಯವೆಂದರೆ ಮುಲ್ತಾನಿ ಮಿಟ್ಟಿಯ ಬಳಕೆ. ಎಣ್ಣೆ ಚರ್ಮವಾದರೆ ಮುಲ್ತಾನಿ ಮಿಟ್ಟಿಗೆ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ. ಕಣ್ಣು ಮತ್ತು ತುಟಿಗಳಿಂದ ದೂರವಿರಲಿ. ಅದು ಒಣಗಿದ ನಂತರ ಸ್ವಚ್ಛಗೊಳಿಸಿ. ಮೊಡವೆ ಅಥವಾ ಗುಳ್ಳೆಗಳಿದ್ದರೆ ಇದಕ್ಕೆ ಗಂಧದ ಪುಡಿ, ರೋಸ್ ವಾಟರ್ ಮತ್ತು ಬೇವಿನ ಎಲೆಯ ಪುಡಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ, ಒಣಗಿಸಿದ ನಂತರ ತೊಳೆಯಿರಿ.
ಕೂದಲಿನ ರಕ್ಷಣೆ
1 ಚಮಚ ಬಾದಾಮಿ ಎಣ್ಣೆಗೆ, 1 ಚಮಚ ಅರ್ಕವನ್ನು ಸೇರಿಸಿ ಅದರಿಂದ ಕೂದಲನ್ನು ಮಸಾಜ್ ಮಾಡಿ. ನಂತರ ಕೂದಲನ್ನು ಬಿಸಿ ಟವೆಲ್‌ನಿಂದ ಸುತ್ತಿಟ್ಟು 1 ಗಂಟೆಯಾದ ಮೇಲೆ ತೊಳೆಯಿರಿ. ಇದರಿಂದ ಕೂದಲು ಮೃದು ಮತ್ತು ಕಾಂತಿಯುತಾಗುತ್ತದೆ.
ಶುಷ್ಕ ಮತ್ತು ಗುಂಗುರು ಕೂದಲಿಗೆ ಹೊಳಪು ನೀಡಲು ಕ್ರೀಮ್ ಯುಕ್ತವಾದ ಹೇರ್ ಕಂಡೀಶನರ್‌ಗೆ ಸ್ವಲ್ಪ ನೀರು ಸೇರಿಸಿ ಸ್ಪ್ರೇ ಬಾಟಲ್‌ನಲ್ಲಿ ತುಂಬಿಟ್ಟುಕೊಂಡು ಕೂದಲಿಗೆ ಹಚ್ಚಿ. ಅದು ಎಲ್ಲ ಕೂದಲಿಗೂ ಹರಡುವಂತೆ ಬಾಚಣಿಗೆಯಿಂದ ಬಾಚಿ.
ಮೇಕಪ್ ಫೌಂಡೇಶನ್ : ಸಮಾರಂಭಗಳಲ್ಲಿ ಪ್ರಕಾಶಮಾನವಾದ ಲೈಟಿಂಗ್ ವ್ಯವಸ್ಥೆ ಇರುತ್ತದೆ. ರಾತ್ರಿಯ ಸಮಯದಲ್ಲಿ ನಿಮ್ಮ ಮೇಕಪ್‌ಗೆ ಹೊಳೆಯುವ ಬಣ್ಣಗಳು ಅಗತ್ಯ. ಇಲ್ಲವಾದರೆ ನಿಮ್ಮ ಮುಖ ಮಂಕಾಗಿ ಕಾಣುತ್ತದೆ. ಮೊದಲು ಮುಖವನ್ನು ಚೆನ್ನಾಗಿ ತೊಳೆದು ಮಾಯಿಶ್ಚರೈಸರ್ ಹಚ್ಚಿ. ಎಣ್ಣೆ ಚರ್ಮಕ್ಕೆ ಹತ್ತಿಯಿಂದ ಆ್ಯಸ್ಟ್ರಿಂಜೆಂಟ್ ಲೋಶನ್ ಹಚ್ಚಿ ಸ್ವಲ್ಪ ಹೊತ್ತು ಬಿಡಿ.
ಬ್ಲಶರ್ : ಕೆನ್ನೆಗಳಿಗೆ ಬ್ಲಶರ್ ಹಚ್ಚಿ. ಇದನ್ನು ಮೇಲಿನಿಂದ ಕೆನ್ನೆಯ ಹೊರಭಾಗದತ್ತ ಹಚ್ಚಿ. ನಂತರ ತಿಳಿ ಬಣ್ಣದ ಹೈಲೈಟರ್ ಹಚ್ಚಿ ಚೆನ್ನಾಗಿ ಹೊಂದಿಕೊಳ್ಳುವಂತೆ ಮಾಡಿ. ಬ್ಲಶರ್ ಆರಿಸುವಾಗ ಲಿಪ್‌ಸ್ಟಿಕ್ ಬಣ್ಣದ ಸಮಾನ ಟೋನ್ ಇರುವಂತೆ ನೋಡಿಕೊಳ್ಳಿ.
ಐ ಮೇಕಪ್ : ಕಣ್ಣಿನ ಮೇಲ್ಭಾಗದ ಕಡೆಗೆ ತಿಳಿ ಕಂದು ಬಣ್ಣದ ಐ ಶ್ಯಾಡೋ ಹಚ್ಚಿ. ಗಾಢ ಬಣ್ಣದ ಐ ಶ್ಯಾಡೋವನ್ನು ಮೇಲು ತುದಿಯಿಂದ ಕಣ್ಣಿನ ಹೊರ ತುದಿಯವರೆಗೆ ಎಳೆಯಿರಿ. ಸ್ಪಂಜ್ ಟಿಪ್ ಅಪ್ಲಿಕೇಟರ್‌ನಿಂದ ಸ್ಮಡ್ಜ್ ಮಾಡಿ. ಐ ಪೆನ್ಸಿಲ್ ಅಥವಾ ಐ ಲೈನರ್‌ನಿಂದ ಕಣ್ಣಿನ ಔಟ್‌ಲೈನ್ ಮಾಡಿ. ಗೋಲ್ಡನ್, ಐವರಿ ಅಥವಾ ತಿಳಿ ಬಣ್ಣದ ಐ ಶ್ಯಾಡೋನಿಂದ ಐ ಬ್ರೋ ತಿದ್ದಿರಿ. ನಂತರ ಮಸ್ಕರಾ ಹಚ್ಚಿ.
ರೋಲ್ ಆನ್ ಮಸ್ಕರಾ ಹಚ್ಚುವುದು ಸುಲಭ. ಗಾಢವಾಗಿ ಕಾಣಲು ಮೇಲೆ ಮತ್ತು ಕೆಳಗೆ ಎರಡೂ ಕಡೆಯ ರೆಪ್ಪೆಗಳಿಗೆ ಮಸ್ಕರಾ ಹಚ್ಚಿ. ಕೆಲವು ನಿಮಿಷ ಬಿಟ್ಟು ಮತ್ತೊಮ್ಮೆ ಹಚ್ಚಿ. ಚಿಕ್ಕ ಐ ಲ್ಯಾಶ್ ಬ್ರಶ್‌ನಿಂದ ಲ್ಯಾಶೆಸ್ ಮೇಲೆ ಬ್ರಶ್ ಆಡಿಸಿ. ಮಸ್ಕರಾದ 2 ಕೋಟ್‌ಗಳ ನಡುವೆ ಪೌಡರ್ ಹಚ್ಚಿದರೆ ಲ್ಯಾಶೆಸ್ ಎದ್ದು ಕಾಣುತ್ತವೆ.
ಲಿಪ್ ಮೇಕಪ್ : ತುಟಿಗಳ ವಿಷಯದಲ್ಲಿ ಲಿಪ್ ಗ್ಲಾಸ್ ಫ್ಯಾಷನ್‌ನಲ್ಲಿದೆ. ನಿಮ್ಮ ಲಿಪ್‌ಸ್ಟಿಕ್ ಬಣ್ಣದ ಲಿಪ್ ಲೈನರ್ ಹಚ್ಚಿ. ಲಿಪ್‌ಸ್ಟಿಕ್ ಹಚ್ಚಿದ ನಂತರ ಲಿಪ್‌ಗ್ಲಾಸ್ ಹಚ್ಚಿ. 2 ಬಣ್ಣದ ಲಿಪ್‌ಸ್ಟಿಕ್‌ಗಳನ್ನು ಸೇರಿಸಿ, ನಿಮಗೆ ಬೇಕೆನಿಸಿದ ಬಣ್ಣವನ್ನೂ ಬರಿಸಿ ಹಚ್ಚಿಕೊಳ್ಳಬಹುದು.
ಫ್ಯಾಷನ್‌ನಲ್ಲಿರುವ ಫ್ರಿಂಜ್ : ಸೈಡ್ ಸ್ಟೆಪ್ ಫ್ರಿಂಜ್ ಈಗ ಫ್ಯಾಷನ್‌ನಲ್ಲಿದೆ. ನೀವು ಮಧ್ಯದಲ್ಲಿಯೂ ಫ್ರಿಂಜ್ ಮಾಡಬಹುದು. ಓವಲ್ ಮತ್ತು ಉದ್ದವಾದ ಮುಖಕ್ಕೆ ಫ್ರಿಂಜ್ ಚೆನ್ನಾಗಿ ಕಾಣುತ್ತದೆ. ಫ್ರಿಂಜ್‌ನ ಪದರದಿಂದ ಗುಂಡು ಮುಖ ಸಣ್ಣದಾಗಿ ಕಾಣುತ್ತದೆ. ಚಿಕ್ಕದಾದ ಮುಖಕ್ಕೆ ಚಿಕ್ಕ ಫ್ರಿಂಜ್ ಚೆನ್ನ. ಒಂದು ಜಡೆ ಮತ್ತು ಸೈಡ್ ಬ್ರೆಡ್ಸ್ ಸಹ ಫ್ಯಾಷನಲ್ಲಿದೆ.
ಸೌಂದರ್ಯಕ್ಕೆ ಅನೇಕ ನಮೂನೆಗಳಿವೆ. ಆದರೆ ಅದನ್ನು ಪ್ರದರ್ಶಿಸುವ ರೀತಿ ಮುಖ್ಯವಾಗಿರುತ್ತದೆ. ಚರ್ಮ, ಕೂದಲು, ಡ್ರೆಸ್, ಮೇಕಪ್ ಇತ್ಯಾದಿಗಳು ಇದರಲ್ಲಿ ಸೇರಿವೆ. ಇವೆಲ್ಲವನ್ನೂ ಒಟ್ಟಿಗೆ ಆಕರ್ಷಕವಾಗಿರುವಂತೆ ಮಾಡುವುದು ಒಂದು ಕಲೆ. ಇದನ್ನು ನೀವು ಕಲಿತಿರೆಂದರೆ ನಿಮ್ಮ ಸೌಂದರ್ಯಕ್ಕೆ ಸಾಟಿಯೇ ಇರದು.
– ಸುನಂದಾ