ಜವಾಬ್ದಾರಿಗಳನ್ನು ನಿಭಾಯಿಸುತ್ತ ನಮ್ಮ ಕನಸುಗಳು ಯಾವಾಗ ತೆರೆಯ ಹಿಂದೆ ಸರಿದು ಬಿಡುತ್ತವೋ ಗೊತ್ತೇ ಆಗುವುದಿಲ್ಲ. ಅಂತಹ ಕನಸುಗಳನ್ನು ನನಸು ಮಾಡಲು ನಾವಿಲ್ಲಿ ನಿಮಗೆ ದಾರಿ ತೋರಿಸುತ್ತೇವೆ.
50 ವರ್ಷದ ದೀಕ್ಷಾ ಕಪ್ಪು ಕೋಟು ಧರಿಸಿ ನಾಗಪುರದ ಸೆಷನ್ಸ್ ನ್ಯಾಯಾಲಯದಲ್ಲಿ ವಕಾಲತ್ತು ನಡೆಸುತ್ತಿರುವುದನ್ನು ನೋಡಿ ಜನರು ಹುಬ್ಬೇರಿಸುತ್ತ ನೋಡುತ್ತಾರೆ. 3 ವರ್ಷಗಳ ಹಿಂದಷ್ಟೇ ಅವರು ಎಲ್ಎಲ್ಬಿ ಪರೀಕ್ಷೆ ಪಾಸ್ ಮಾಡಿದ್ದರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಅವರು ತಮ್ಮ ಎಲ್ಎಲ್ಬಿ ಪರೀಕ್ಷೆಯನ್ನು ಪೂರ್ಣಗೊಳಿಸಿದರು. ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ದೀಕ್ಷಾ ಹೀಗೆ ಹೇಳುತ್ತಾರೆ, “ನಾನು ಆರಂಭದಿಂದಲೇ ಓದುಬರಹದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದೆ. ನನಗೆ ವಕೀಲಳಾಗಬೇಕೆಂಬ ಆಸೆ ಮೊದಲಿನಿಂದಲೇ ಇತ್ತು. ಆದರೆ ನಾನು 18 ವರ್ಷದವಳಿದ್ದಾಗ, ಹಾಸಿಗೆ ಹಿಡಿದಿದ್ದ ತಂದೆಯವರ ಆಗ್ರಹಕ್ಕೆ ಮಣಿದು ಮದುವೆಯಾಗಬೇಕಾಯಿತು. 10 ಜನರ ಒಟ್ಟು ಕುಟುಂಬದ ಜವಾಬ್ದಾರಿಯ ಶೋಷಣೆಯಲ್ಲಿ ವಕೀಲಳಾಗಬೇಕೆಂಬ ನನ್ನ ಕನಸು ಕನಸಾಗಿಯೇ ಉಳಿಯಿತು. 5 ವರ್ಷದೊಳಗೆ ನಾನು ಮೂವರು ಪುತ್ರಿಯರ ತಾಯಿಯಾದೆ. 45ನೇ ವರ್ಷದಷ್ಟೊತ್ತಿಗೆ ನಾನು ಅಜ್ಜಿಯೂ ಆಗಿಬಿಟ್ಟೆ.
“ಗಂಡನಿಗೆ ತಮ್ಮದೇ ಆದ ಬಿಸ್ನೆಸ್ ಇತ್ತು. ಅವರು ಅದರಲ್ಲಿ ಮಗ್ನರಾಗಿದ್ದರು. ಹೆಣ್ಣುಮಕ್ಕಳ ಮದುವೆಯ ಬಳಿಕ ಜೀವನ ಒಂಥರಾ ನಿಂತ ನೀರಾಗಿ ಬಿಟ್ಟಿತ್ತು. ಆಗ ನನಗೆ ನನ್ನ ಅಪೂರ್ಣ ಕನಸನ್ನು ನನಸಾಗಿಸಿಕೊಳ್ಳಬೇಕೆಂಬ ಇಚ್ಛೆ ಮತ್ತೊಮ್ಮೆ ಬಯಲಾಯಿತು.
“ಒಂದು ದಿನ ನಾನು ನನ್ನ ಮನದ ಮಾತನ್ನು ಗಂಡನ ಮುಂದೆ ಹೇಳಿಕೊಂಡೆ. `ಈ ವಯಸ್ಸಿನಲ್ಲಿ ಓದಿ ಏನ್ ಮಾಡ್ತಿಯಾ?’ ಎಂದು ಅವರು ಕೂಗಾಡಿ, `ಮನೆಯಲ್ಲಿ ಆರಾಮವಾಗಿರು, ಅಪ್ಪಅಮ್ಮನನ್ನು ಚೆನ್ನಾಗಿ ನೋಡಿಕೊ’ ಎಂದು ಬುದ್ಧಿವಾದ ಹೇಳಿದರು. ನಾನು ಅವರ ಮಾತಿಗೆ ಒಪ್ಪಿಕೊಳ್ಳದೇ ಇದ್ದಾಗ `ಏನ್ ಮಾಡುತ್ತೀಯೋ ಮಾಡು’ ಎಂದು ಹೇಳಿದರು.
“ಮನೆಯ ಇತರೆ ಸದಸ್ಯರ ಅನುಮತಿ ಪಡೆದುಕೊಳ್ಳುವುದು ಇನ್ನು ಬಾಕಿ ಇತ್ತು. ಅವಿಭಕ್ತ ಕುಟುಂಬದಲ್ಲಿ ನನ್ನ ಈ ಯೋಚನೆ ಒಂದು ರೀತಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಹುಡುಗಿ…. ಹೆಂಗಸೊಬ್ಬಳು ಓದೋದು ಅವಳ ಮದುವೆಗಾಗಿ ಮಾತ್ರ. ಮದುವೆಯ ಬಳಿಕ ಮಹಿಳೆಯೊಬ್ಬಳ ಜೀವನ ಅವಳ ಕುಟುಂಬಕ್ಕಾಗಿ ಮೀಸಲಿರುತ್ತದೆ. ಆದರೆ ನಾನು ನನ್ನ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಒಂದು ದಿನ ನಾನು ಸೂಕ್ತ ಸಮಯ ನೋಡಿಕೊಂಡು ಅತ್ತೆ ಮಾವನ ಮುಂದೆ ನನ್ನ ಮನಸ್ಸಿನ ಮಾತನ್ನು ಹೇಳಿಕೊಂಡೆ, `ಮಾವ, ನಾನು ಮುಂದೆ ಓದಬೇಕು ಅವಕಾಶ ಕೊಡಿ,’ ಎಂದು ಕೇಳಿದೆ. ಆದರೆ ಅವರು ಕಠೋರ ಸ್ವರದಲ್ಲಿ ಹೇಳಿದರು, “ಅಜ್ಜಿಯಾಗಿರುವ ನಿನ್ನ ವಯಸ್ಸಿನಲ್ಲಿ ಓದಿ ಮುಂದೇನು ಮಾಡ್ತೀಯಾ? ನಿನ್ನ ಮನಸ್ಸಿನಲ್ಲಿ ಏನು ವಿಚಾರ ನಡೀತಿದೆ? ನಮ್ಮ ಮನೆಯಲ್ಲಿ ನಿನಗೆ ಏನು ತಾನೇ ಕಡಿಮೆಯಾಗಿದೆ? ಒಟ್ಟಾರೆ ನಿನ್ನ ಮನಸ್ಸು ಹೇಗೆ ಹೇಳುತ್ತೋ ಹಾಗೆ ಮಾಡು,” ಎಂದರು.
“ಕುಟುಂಬದ ಯಾವೊಬ್ಬ ಸದಸ್ಯರೂ ನಾನು ಮುಂದುವರಿಯುವ ನಿಟ್ಟಿನಲ್ಲಿ ನೆರವು ನೀಡುವ ಪರವಾಗಿ ಇರಲಿಲ್ಲ. ನನ್ನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲದ ಸ್ಥಿತಿ ಮುಂದುವರಿದಿತ್ತು. ಕೊನೆಗೊಮ್ಮೆ ನಾನು ನಾಗಪುರದ ಲಾ ಕಾಲೇಜಿಗೆ ಹೋಗಿ ಅಡ್ಮಿಶನ್ ಪಡೆದುಕೊಂಡೆ. ಅಷ್ಟಿಷ್ಟು ವಿರೋಧದ ನಡುವೆಯೂ ಎಲ್ಲರೂ ನನ್ನ ನಿರ್ಧಾರವನ್ನು ಒಪ್ಪಿಕೊಂಡರು.
”ಕಾನೂನು ಶಿಕ್ಷಣ ಪಡೆದ ಬಳಿಕ ಅಡ್ವೋಕೇಟ್ ದೀಕ್ಷಾ, ನಾಗಪುರ ಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ದೀಕ್ಷಾ ಉದಾಹರಣೆ ಕಂಡು ನಿಮ್ಮ ಮನಸ್ಸಿನಲ್ಲಿಯೂ ಏನಾದರೂ ಸಾಧಿಸಬೇಕೆಂಬ ಛಲ ಮೂಡಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಿಮ್ಮ ಪ್ರಗತಿಯ ದಾರಿಯಲ್ಲಿ ಅಡ್ಡಗಾಲು ಹಾಕಲಾರದು.’’ ತಮ್ಮ ಯಶಸ್ಸಿನ ಕಥೆಯನ್ನು ವಿವರಿಸುತ್ತ ದೀಕ್ಷಾ ಹೇಳುತ್ತಾರೆ,
“ನನ್ನ ಬಳಿ ಹಣ, ಗಂಡ ಮತ್ತು ಅತ್ತೆಮನೆಯವರ ಸಹಕಾರ ಎಲ್ಲ ಇತ್ತು. ಎಲ್ಲದಕ್ಕೂ ಹೆಚ್ಚಾಗಿ ನನ್ನ ಅಸ್ತಿತ್ವ ಇದ್ದೇ ಇತ್ತು. ಓದನ್ನು ಅರ್ಧಕ್ಕೇ ಬಿಟ್ಟುಬಿಟ್ಟ ಖೇದವಂತೂ ಇದ್ದೇ ಇತ್ತು. ಈಗ ನನಗೆ ಬಹು ದೊಡ್ಡ ನೆಮ್ಮದಿ ಇದೆ. ಜೀವನ ಒಮ್ಮೆ ಮಾತ್ರ ಸಿಗುತ್ತದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿಯೇ ನಮ್ಮ ಜಾಣತನ ಅಡಗಿದೆ.”
ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
ದೀಕ್ಷಾ ಎಂತಹ ಕೆಲವು ಮಹಿಳೆಯರಿಗೆ ಮಾದರಿಯಾಗಿದ್ದಾರೆಂದರೆ, ಕೆಲವು ಮಹಿಳೆಯರು ತಾವೇನೂ ಮಾಡದಿರುವುದಕ್ಕೆ ತಮ್ಮ ಗಂಡ, ಮಕ್ಕಳು ಹಾಗೂ ಅತ್ತೆಮನೆಯವರನ್ನು ದೂಷಿಸುತ್ತಿರುತ್ತಾರೆ. ಮದುವೆಯ ಬಳಿಕ ಬಹಳಷ್ಟು ಮಹಿಳೆಯರು ತಮ್ಮ ಸಮಯವನ್ನು ಕುಟುಂಬಕ್ಕಾಗಿ ಕಳೆಯಬೇಕು ಎಂದು ಯೋಚಿಸುತ್ತಾರೆ. ನಾನು ಅಷ್ಟೊಂದು ಶ್ರಮಪಡುವ ಅಗತ್ಯವಾದರೂ ಏನಿದೆ ಎಂಬ ಪೂರ್ವಾಗ್ರಹದಿಂದ ಹೊರಬಂದು, ನಿಮ್ಮ ಆತ್ಮಬಲವನ್ನು ಜಾಗೃತಗೊಳಿಸಿ, ನಿಮಗಾಗಿ ಏನಾದರೂ ಮಾಡುವ ಅಗತ್ಯವಿದೆ.
ಮದುವೆಯ ಬಳಿಕ ತಾನೂ ಏನಾದರೂ ಮಾಡಬೇಕು ಎಂದು ನಿರ್ಮಲಾ 25 ವರ್ಷದಿಂದ ಯೋಚಿಸುತ್ತಲೇ ಬಂದಿದ್ದಾಳೆ. ಆದರೆ ಇದುವರೆಗೂ ಆಕೆ ಏನೂ ಮಾಡಲು ಸಾಧ್ಯವಾಗಿಲ್ಲ. ಆದರೆ ಸೀಮಾಳ ಮನೆ ಪರಿಸ್ಥಿತಿ ಮಾತ್ರ ತುಂಬಾ ಭಿನ್ನವಾಗಿತ್ತು. ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುವ ಸ್ಥಿತಿಯೂ ಆಕೆಗಿರಲಿಲ್ಲ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಆಕೆಗೆ ಅಷ್ಟಿಷ್ಟು ಸಮಯ ದೊರೆಯತೊಡಗಿತು. ಆಕೆ ಮನೆಯಲ್ಲಿಯೇ ಹಪ್ಪಳ, ಸಂಡಿಗೆ, ಚಟ್ನಿಪುಡಿ, ಉಪ್ಪಿನಕಾಯಿ ತಯಾರಿಸತೊಡಗಿದಳು. ಅವನ್ನು ಒಂದು ಅಂಗಡಿಯಲ್ಲಿ ಚಿಕ್ಕ ಚಿಕ್ಕ ಪ್ಯಾಕೇಟ್ಗಳಲ್ಲಿಟ್ಟು ಮಾರತೊಡಗಿದಳು. ತನ್ನ ಉತ್ಪನ್ನಗಳು ಮಾರಾಟ ಆಗತೊಡಗಿದಾಗ ಅದಕ್ಕೆ ಹೊಸ ರೂಪ ಕೊಟ್ಟಳು.
ಈಗ ಆಕೆಯ ಗೃಹ ಉದ್ಯಮ ಚೆನ್ನಾಗಿ ನಡೆಯುತ್ತಿದೆ. ಮೊದಲು ಕುಟುಂಬದವರ ಸಹಾಯ ಸಹಕಾರ ಅಷ್ಟಾಗಿ ಸಿಗುತ್ತಿರಲಿಲ್ಲ. ಆಕೆಗೆ ಯಶಸ್ಸು ಸಿಗುತ್ತಿದ್ದಂತೆಯೇ ಕುಟುಂಬದವರು ಆಕೆಗೆ ಬೆಂಬಲ ನೀಡತೊಡಗಿದರು. ಸಾಮಾನ್ಯವಾಗಿ ಮನೆಯಲ್ಲಿರುವ ಮಹಿಳೆಯರು ಮನೆಗೆಲಸಗಳು ಮುಗಿದ ಬಳಿಕ ಅಕ್ಕಪಕ್ಕದ ಮಹಿಳೆಯರೊಂದಿಗೆ ವ್ಯರ್ಥ ಚರ್ಚೆಯಲ್ಲಿ ಕಳೆಯುತ್ತಾರೆ. ಒಂದು ವೇಳೆ ಇಡೀ ಸಮಯವನ್ನು ಕೆಲವು ಉತ್ಪಾದಕ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಕೈಗೆ ನಾಲ್ಕು ಕಾಸು ಬರುತ್ತದೆ. ಜೊತೆಗೆ ನಿಮ್ಮ ಯೋಚನೆ ಕೂಡ ಬದಲಾಗುತ್ತದೆ.
ಸೀಮಾ ಅದಕ್ಕೊಂದು ಉದಾಹರಣೆ. ಇಬ್ಬರು ಮಕ್ಕಳ ತಾಯಿ, ಹೆಚ್ಚಿನ ಸಮಯವನ್ನು ತನ್ನ ಗೆಳತಿಯರ ಜೊತೆಗೇ ಕಳೆಯುತ್ತಿದ್ದಳು. ಆಕೆಯ ಒಬ್ಬ ಗೆಳತಿ ಲೀನಾ ತನ್ನದೇ ಆದ ಬೊಟಿಕ್ ತೆರೆದಾಗ ಅದರಲ್ಲಿ ಕೆಲಸ ಮಾಡಲು ಆಫರ್ ಕೊಟ್ಟಳು.
ಆ ಕುರಿತಂತೆ ಸೀಮಾ ಹೀಗೆ ಹೇಳುತ್ತಾಳೆ, “ನಾನು ಗೆಳತಿಯರೊಂದಿಗೆ ನೆರೆಮನೆಯವರ ಜೊತೆ ವ್ಯರ್ಥ ಚರ್ಚೆ ಮಾಡಿದ ಬಳಿಕ ನಕಾರಾತ್ಮಕ ವಿಚಾರಗಳೊಂದಿಗೆ ಮನೆಗೆ ವಾಪಸ್ಸಾಗುತ್ತಿದ್ದೆ. ಆದರೆ ಈಗ ಕೈಯಲ್ಲಿ ಒಂದಿಷ್ಟು ಮೊತ್ತ ಹಾಗೂ ಮಾನಸಿಕ ನೆಮ್ಮದಿಯೊಂದಿಗೆ ಮನೆಗೆ ವಾಪಸ್ಸಾಗುತ್ತೇನೆ.”
ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ
ಅನುರಾಧಾಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈಗ ಆಕೆ ಪ್ರತಿಷ್ಠಿತ ಬೊಟಿಕ್ ಒಂದರ ಮಾಲೀಕಳು. ಮೊದಲು ಆಕೆ ಗೆಳತಿಯರೊಂದಿಗೆ ಹರಟೆ, ಪೂಜೆ, ಪುನಸ್ಕಾರ, ಭಜನೆ ಕೀರ್ತನೆ ಇವುಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಆಕೆಯ ಮನೆಯ ಸ್ಥಿತಿ ಕಂಡು ತಂಗಿ ಹೊಲಿಗೆ ತರಬೇತಿ ಪಡೆಯಲು ಹೇಳಿದಳು. ತಂಗಿಯ ಸಲಹೆಯ ಮೇರೆಗೆ ಹೊಲಿಗೆ, ಕಸೂತಿ ಕಲಿತಳು. ತನ್ನ ಬೊಟಿಕ್ನ ಕಾರಣದಿಂದ ಅವಳು ಗಂಡನ ಹೆಗಲಿಗೆ ಹೆಗಲು ಕೊಟ್ಟು ಈಗ ಆರ್ಥಿಕ ಸಹಕಾರ ನೀಡುತ್ತಿದ್ದಾಳೆ.
ಬೇರೆಯರ ಮೇಲೆ ಸದಾ ದೋಷಾರೋಪ ಹೊರಿಸಿ ನಮ್ಮ ತಪ್ಪುಗಳನ್ನು ಬಚ್ಚಿಟ್ಟುಕೊಳ್ಳುವ ಬದಲು, ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು ಏನಾದರೂ ಹೊಸದನ್ನು ಕಲಿಯುವ, ಓದುವ, ಬರೆಯುವ ಹವ್ಯಾಸ ರೂಢಿಸಿಕೊಳ್ಳಿ. ನಿಮ್ಮನ್ನು ನೀವು ಯಾವುದಾದರೂ ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
ಎಷ್ಟೋ ಸಲ ಮಹಿಳೆಯರಿಗೆ ಕುಟುಂಬದವರ ಸಹಕಾರ ದೊರೆಯುವುದಿಲ್ಲ. ಆದರೆ ನೀವು ಪರಿಪೂರ್ಣ ವಿಶ್ವಾಸದೊಂದಿಗೆ ಹೆಜ್ಜೆ ಹಾಕಿದರೆ, ನಿಮ್ಮ ಉತ್ಸಾಹ ಹಾಗೂ ಪರಿಶ್ರಮವನ್ನು ಕಂಡು ಕುಟುಂಬದವರು ತಾವೇ ಸ್ವತಃ ಸಹಾಯಕ್ಕಾಗಿ ಧಾವಿಸುತ್ತಾರೆ. ಇದಕ್ಕಾಗಿ ನೀವು ದಿಟ್ಟ ಹೆಜ್ಜೆ ಇಡುವ ಮತ್ತು ನಿಮ್ಮ ಮೇಲೆ ನಂಬಿಕೆ ಇಡುವ ಕೆಲಸ ಮೊದಲು ಆಗಬೇಕು.
ಅಂದಹಾಗೆ ಹೆಚ್ಚಿನ ಮಹಿಳೆಯರು ಏನನ್ನಾದರೂ ಮಾಡಬೇಕೆಂದು ಯೋಚಿಸುತ್ತಾರೆ. ಆದರೆ ಸಂಕೋಚ, ಆತ್ಮವಿಶ್ವಾಸದ ಕೊರತೆ, ಯಾರು ಏನು ಹೇಳುತ್ತಾರೋ ಎಂಬ ಭಯ, ಯಶಸ್ಸು ದೊರೆಯುತ್ತೊ, ಇಲ್ಲವೋ ಎಂಬ ಆತಂಕ ಅವರನ್ನು ಮುಂದೆ ಹೆಜ್ಜೆ ಇಡಲು ಹೆದರಿಸುತ್ತದೆ. ಇದಕ್ಕಾಗಿ ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಹಾಕುವ ಧೈರ್ಯ ಬೇಕು.
ಸಂಕೋಚ ಬೇಡ : ನೀವು ಯಾವ ಕೆಲಸ ಮಾಡಲು ಇಚ್ಛಿಸುತ್ತೀರೋ, ಅದಕ್ಕಾಗಿ ಸಂಕೋಚ ಪಡುವುದೇಕೆ? ವಯಸ್ಸು ಎಷ್ಟೇ ಆಗಿರಲಿ, ಅದು ನಿಮ್ಮ ಪ್ರಗತಿಯಲ್ಲಿ ಅಡ್ಡಿ ಆಗಬಾರದು. ತನ್ನ ಮಗನ ಜೊತೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಯಶಸ್ವಿನಿ ಹೇಳುತ್ತಾರೆ, “ಅಷ್ಟೊಂದು ವರ್ಷಗಳ ಬಳಿಕ ಅಪೂರ್ಣ ಶಿಕ್ಷಣವನ್ನು ಪೂರ್ಣಗೊಳಿಸಬೇಕೆಂಬ ವಿಚಾರ ಬಂದಾಗ ಸಂಕೋಚವೇನೊ ಆಯಿತು. ಆದರೆ ಮುಂದೆ ಹೆಜ್ಜೆ ಹಾಕಿದಾಗ ಹೆದರಿಕೆ ಆಗಲಿಲ್ಲ. ಈಗ ನಾನು ಸ್ನಾತಕೋತ್ತರ ಪದವೀಧರೆ. ನನಗೆ ನನ್ನ ನಿರ್ಣಯದ ಬಗ್ಗೆ ಹೆಮ್ಮೆ ಎನಿಸುತ್ತದೆ.”
ಫೇಲ್ಯೂರ್ ಬಗ್ಗೆ ಹೆದರದಿರಿ : ಆರಂಭದಲ್ಲಿ ಯಾವುದೇ ಕೆಲಸದ ಯಶಸ್ಸಿನ ಶೇಕಡವಾರು ಪ್ರಮಾಣ ಕಡಿಮೆ ಇರುತ್ತದೆ. ಆದರೆ ಅದರಲ್ಲಿ ಕ್ರಮೇಣ ಅನುಭವ ಸಿಗುತ್ತಾ ಹೋದಂತೆ ನಾವು ಯಶಸ್ಸಿಗೆ ಹತ್ತಿರವಾಗುತ್ತ ಹೋಗುತ್ತೇವೆ. ಪ್ರತಿಭಾ ಲೇಖನ ಬರೆಯುತ್ತಿದ್ದಳು. ಅವಳ 10 ಲೇಖನಗಳಲ್ಲಿ 9 ಲೇಖನಗಳು ವಾಪಸ್ ಬರುತ್ತಿದ್ದವು. ಆದರೆ ಈಗ ಅವಳ 10 ಲೇಖನಗಳಲ್ಲಿ 2 ಮಾತ್ರ ತಿರಸ್ಕೃತವಾಗುತ್ತವೆ. ಯಶಸ್ಸು ಸಿಗುತ್ತೊ, ಇಲ್ಲವೋ ಎಂಬ ಭಯ ಬಿಡಿ, ಆತ್ಮವಿಶ್ವಾಸದೊಂದಿಗೆ ಮುಂದುವರಿಯಿರಿ. ವೈಫಲ್ಯತೆಗೆ ಹೆದರುವ ಬದಲು, ನಿಮ್ಮ ವೈಫಲ್ಯತೆಯನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮಲ್ಲಿರುವ ಲೋಪದೋಷಗಳನ್ನು ಹುಡುಕಿ ಅವನ್ನು ಸರಿಪಡಿಸುವ ಮಾರ್ಗ ಕಂಡುಕೊಳ್ಳಿ.
ಸಕಾರಾತ್ಮಕ ವಿಚಾರ : ನಿಮ್ಮೊಳಗೆ ನಕಾರಾತ್ಮಕ ವಿಚಾರಗಳನ್ನು ಬರಲು ಅವಕಾಶ ಕೊಡಲೇಬೇಡಿ. ನಿಮಗೆ ಏನು ಮಾಡಬೇಕು ಅನಿಸುತ್ತೊ ಅದನ್ನು ಮಾಡಿ. ಜನರಿಗೆ ಏನನ್ನಾದರೂ ಹೇಳುವುದೇ ಕೆಲಸವಾಗಿರುತ್ತದೆ. ನಿಮಗೆ ಯಾವ ಕೆಲಸದಿಂದ ಮನಶ್ಶಾಂತಿ ದೊರೆಯುತ್ತೋ, ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತೊ, ಅಂಥ ಕೆಲಸ ಮಾಡಲು ಹಿಂದೇಟು ಹಾಕಬೇಡಿ. ಅದರಿಂದ ನಿಮಗೆ ಆರ್ಥಿಕ ಲಾಭ ಆಗಬೇಕು.
ಅಪೇಕ್ಷೆ ಇಟ್ಟುಕೊಳ್ಳಬೇಡಿ : ಮದುವೆಯ ಬಳಿಕ ಹುಡುಗಿಯೊಬ್ಬಳ ಜೀವನ ಸಂಪೂರ್ಣ ಬದಲಾಗುತ್ತದೆ. ಎಷ್ಟೋ ಸಲ ಮಹಿಳೆಯರು ತಮ್ಮ ಮುಂದಿನ ವಿದ್ಯಾಭ್ಯಾಸ ಮಾಡಲು ಬಯಸುತ್ತಾರೆ. ಇಲ್ಲವೇ ಯಾವುದಾದರೂ ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಇಚ್ಛಿಸುತ್ತಾರೆ. ಅದಕ್ಕೆ ಕುಟುಂಬದವರು ಬೇಡ ಎಂದೇನೂ ಹೇಳುವುದಿಲ್ಲ. ಆದರೆ ಅಷ್ಟೊಂದು ಸಹಕಾರ ಕೂಡ ಕೊಡುವುದಿಲ್ಲ. ಆದರೆ ಅವರು ನೀವು ಯಾವ ರೀತಿಯ ಸಹಾಯ ಅಪೇಕ್ಷೆ ಮಾಡುತ್ತಿದ್ದೀರಿ ಎಂದು ಅರ್ಥ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ನಿಮ್ಮ ಯೋಜನೆ ಬಗ್ಗೆ ಹೇಳಿ ಸಹಕಾರ ಕೇಳುವುದರಲ್ಲಿ ತಪ್ಪೇನಿಲ್ಲ.
– ಪ್ರತಿಭಾ ಅಗ್ನಿಹೋತ್ರಿ