ಜವಾಬ್ದಾರಿಗಳನ್ನು ನಿಭಾಯಿಸುತ್ತ ನಮ್ಮ ಕನಸುಗಳು ಯಾವಾಗ ತೆರೆಯ ಹಿಂದೆ ಸರಿದು ಬಿಡುತ್ತವೋ ಗೊತ್ತೇ ಆಗುವುದಿಲ್ಲ. ಅಂತಹ ಕನಸುಗಳನ್ನು ನನಸು ಮಾಡಲು ನಾವಿಲ್ಲಿ ನಿಮಗೆ ದಾರಿ ತೋರಿಸುತ್ತೇವೆ.
50 ವರ್ಷದ ದೀಕ್ಷಾ ಕಪ್ಪು ಕೋಟು ಧರಿಸಿ ನಾಗಪುರದ ಸೆಷನ್ಸ್ ನ್ಯಾಯಾಲಯದಲ್ಲಿ ವಕಾಲತ್ತು ನಡೆಸುತ್ತಿರುವುದನ್ನು ನೋಡಿ ಜನರು ಹುಬ್ಬೇರಿಸುತ್ತ ನೋಡುತ್ತಾರೆ. 3 ವರ್ಷಗಳ ಹಿಂದಷ್ಟೇ ಅವರು ಎಲ್ಎಲ್‌ಬಿ ಪರೀಕ್ಷೆ ಪಾಸ್ ಮಾಡಿದ್ದರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಅವರು ತಮ್ಮ ಎಲ್ಎಲ್‌ಬಿ ಪರೀಕ್ಷೆಯನ್ನು ಪೂರ್ಣಗೊಳಿಸಿದರು. ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ದೀಕ್ಷಾ ಹೀಗೆ ಹೇಳುತ್ತಾರೆ, ``ನಾನು ಆರಂಭದಿಂದಲೇ ಓದುಬರಹದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದೆ. ನನಗೆ ವಕೀಲಳಾಗಬೇಕೆಂಬ ಆಸೆ ಮೊದಲಿನಿಂದಲೇ ಇತ್ತು. ಆದರೆ ನಾನು 18 ವರ್ಷದವಳಿದ್ದಾಗ, ಹಾಸಿಗೆ ಹಿಡಿದಿದ್ದ ತಂದೆಯವರ ಆಗ್ರಹಕ್ಕೆ ಮಣಿದು ಮದುವೆಯಾಗಬೇಕಾಯಿತು. 10 ಜನರ ಒಟ್ಟು ಕುಟುಂಬದ ಜವಾಬ್ದಾರಿಯ ಶೋಷಣೆಯಲ್ಲಿ ವಕೀಲಳಾಗಬೇಕೆಂಬ ನನ್ನ ಕನಸು ಕನಸಾಗಿಯೇ ಉಳಿಯಿತು. 5 ವರ್ಷದೊಳಗೆ ನಾನು ಮೂವರು ಪುತ್ರಿಯರ ತಾಯಿಯಾದೆ. 45ನೇ ವರ್ಷದಷ್ಟೊತ್ತಿಗೆ ನಾನು ಅಜ್ಜಿಯೂ ಆಗಿಬಿಟ್ಟೆ.
``ಗಂಡನಿಗೆ ತಮ್ಮದೇ ಆದ ಬಿಸ್‌ನೆಸ್ ಇತ್ತು. ಅವರು ಅದರಲ್ಲಿ ಮಗ್ನರಾಗಿದ್ದರು. ಹೆಣ್ಣುಮಕ್ಕಳ ಮದುವೆಯ ಬಳಿಕ ಜೀವನ ಒಂಥರಾ ನಿಂತ ನೀರಾಗಿ ಬಿಟ್ಟಿತ್ತು. ಆಗ ನನಗೆ ನನ್ನ ಅಪೂರ್ಣ ಕನಸನ್ನು ನನಸಾಗಿಸಿಕೊಳ್ಳಬೇಕೆಂಬ ಇಚ್ಛೆ ಮತ್ತೊಮ್ಮೆ ಬಯಲಾಯಿತು.
``ಒಂದು ದಿನ ನಾನು ನನ್ನ ಮನದ ಮಾತನ್ನು ಗಂಡನ ಮುಂದೆ ಹೇಳಿಕೊಂಡೆ. `ಈ ವಯಸ್ಸಿನಲ್ಲಿ ಓದಿ ಏನ್ ಮಾಡ್ತಿಯಾ?' ಎಂದು ಅವರು ಕೂಗಾಡಿ, `ಮನೆಯಲ್ಲಿ ಆರಾಮವಾಗಿರು, ಅಪ್ಪಅಮ್ಮನನ್ನು ಚೆನ್ನಾಗಿ ನೋಡಿಕೊ' ಎಂದು ಬುದ್ಧಿವಾದ ಹೇಳಿದರು. ನಾನು ಅವರ ಮಾತಿಗೆ ಒಪ್ಪಿಕೊಳ್ಳದೇ ಇದ್ದಾಗ `ಏನ್ ಮಾಡುತ್ತೀಯೋ ಮಾಡು' ಎಂದು ಹೇಳಿದರು.
``ಮನೆಯ ಇತರೆ ಸದಸ್ಯರ ಅನುಮತಿ ಪಡೆದುಕೊಳ್ಳುವುದು ಇನ್ನು ಬಾಕಿ ಇತ್ತು. ಅವಿಭಕ್ತ ಕುಟುಂಬದಲ್ಲಿ ನನ್ನ ಈ ಯೋಚನೆ ಒಂದು ರೀತಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಹುಡುಗಿ.... ಹೆಂಗಸೊಬ್ಬಳು ಓದೋದು ಅವಳ ಮದುವೆಗಾಗಿ ಮಾತ್ರ. ಮದುವೆಯ ಬಳಿಕ ಮಹಿಳೆಯೊಬ್ಬಳ ಜೀವನ ಅವಳ ಕುಟುಂಬಕ್ಕಾಗಿ ಮೀಸಲಿರುತ್ತದೆ. ಆದರೆ ನಾನು ನನ್ನ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಒಂದು ದಿನ ನಾನು ಸೂಕ್ತ ಸಮಯ ನೋಡಿಕೊಂಡು ಅತ್ತೆ ಮಾವನ ಮುಂದೆ ನನ್ನ ಮನಸ್ಸಿನ ಮಾತನ್ನು ಹೇಳಿಕೊಂಡೆ, `ಮಾವ, ನಾನು ಮುಂದೆ ಓದಬೇಕು ಅವಕಾಶ ಕೊಡಿ,' ಎಂದು ಕೇಳಿದೆ. ಆದರೆ ಅವರು ಕಠೋರ ಸ್ವರದಲ್ಲಿ ಹೇಳಿದರು, ``ಅಜ್ಜಿಯಾಗಿರುವ ನಿನ್ನ ವಯಸ್ಸಿನಲ್ಲಿ ಓದಿ ಮುಂದೇನು ಮಾಡ್ತೀಯಾ? ನಿನ್ನ ಮನಸ್ಸಿನಲ್ಲಿ ಏನು ವಿಚಾರ ನಡೀತಿದೆ? ನಮ್ಮ ಮನೆಯಲ್ಲಿ ನಿನಗೆ ಏನು ತಾನೇ ಕಡಿಮೆಯಾಗಿದೆ? ಒಟ್ಟಾರೆ ನಿನ್ನ ಮನಸ್ಸು ಹೇಗೆ ಹೇಳುತ್ತೋ ಹಾಗೆ ಮಾಡು,'' ಎಂದರು.
``ಕುಟುಂಬದ ಯಾವೊಬ್ಬ ಸದಸ್ಯರೂ ನಾನು ಮುಂದುವರಿಯುವ ನಿಟ್ಟಿನಲ್ಲಿ ನೆರವು ನೀಡುವ ಪರವಾಗಿ ಇರಲಿಲ್ಲ. ನನ್ನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲದ ಸ್ಥಿತಿ ಮುಂದುವರಿದಿತ್ತು. ಕೊನೆಗೊಮ್ಮೆ ನಾನು ನಾಗಪುರದ ಲಾ ಕಾಲೇಜಿಗೆ ಹೋಗಿ ಅಡ್ಮಿಶನ್ ಪಡೆದುಕೊಂಡೆ. ಅಷ್ಟಿಷ್ಟು ವಿರೋಧದ ನಡುವೆಯೂ ಎಲ್ಲರೂ ನನ್ನ ನಿರ್ಧಾರವನ್ನು ಒಪ್ಪಿಕೊಂಡರು.