ಸರಸ್ವತಿ*
ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ದಿ ಡೆವಿಲ್" ಚಿತ್ರ ಇದೇ ಡಿಸೆಂಬರ್ 11 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಪೂರ್ವದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು "ದಿ ಡೆವಿಲ್" ಚಿತ್ರದ ಕುರಿತು ಮಾತನಾಡಿದರು.
ಡಿಸೆಂಬರ್ 11 ರಂದು ನಮ್ಮ "ದಿ ಡೆವಿಲ್" ಚಿತ್ರ ಬಿಡುಗಡೆಯಾಗುತ್ತಿದೆ. ರಿಲೀಸ್ ಗೆ ಇಷ್ಟು ಹತ್ತಿರದಲ್ಲಿ ನಾವು ಪತ್ರಿಕಾಗೋಷ್ಠಿ ಮಾಡುತ್ತಿದ್ದೇವೆ. ಅದಕ್ಕೆ ಕಾರಣವಿದೆ. ದರ್ಶನ್ ಅವರು ಬಂದು ಬಿಡಲಿ. ಅವರ ಜೊತೆ ಕುಳಿತು ಪತ್ರಿಕಾಗೋಷ್ಠಿ ಮಾಡೋಣ ಎಂಬ ಉದ್ದೇಶ ನನಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ದರ್ಶನ್ ಅವರ ಅನುಪಸ್ಥಿತಿ ಬಹಳ ಕಾಡುತ್ತಿದೆ. ದರ್ಶನ್ ಅವರು ನನ್ನೊಂದಿಗೆ ಇದ್ದರೆ ಒಂದು ರೀತಿ ಬಲ. ಇನ್ನು, "ದಿ ಡೆವಿಲ್" ಚಿತ್ರದ ಕಥೆ ಬಗ್ಗೆ ನನ್ನ ಮತ್ತು ದರ್ಶನ್ ಅವರ ಜೊತೆಗೆ ಚರ್ಚಿಸಿದ್ದು 2018 ರಲ್ಲಿ. ಆನಂತರ ಕೋವಿಡ್ ಬಂತು. "ಕಾಟೇರ" ಸಿನಿಮಾ ಮುಗಿಸಿದ ನಂತರ ಈ ಚಿತ್ರ ಮಾಡುವುದಾಗಿ ನಿರ್ಧಾರವಾಯಿತು. ಹೀಗೆ ಎರಡು ವರ್ಷಗಳ ಹಿಂದೆ ನಮ್ಮ "ದಿ ಡೆವಿಲ್" ಚಿತ್ರ ಆರಂಭವಾಯಿತು. ದರ್ಶನ್ ಅವರು ಸೇರಿದಂತೆ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜಿಸಿರುವ ಐದು ಹಾಡುಗಳು ಚಿತ್ರದಲ್ಲಿದೆ. "ಸರಿಗಮಪ" ಸಂಸ್ಥೆಯ ಮೂಲಕ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಕನ್ನಡಿಗರ ಮನ ಗೆದ್ದಿದೆ. ಟ್ರೇಲರ್ ಡಿಸೆಂಬರ್ 5 ರಂದು ರಿಲೀಸ್ ಆಗಲಿದೆ. ವಿಜಯಲಕ್ಷ್ಮಿ ದರ್ಶನ್ ಅವರು, ದಿನಕರ್ ಹಾಗೂ ದರ್ಶನ್ ಅವರ ಅಭಿಮಾನಿಗಳು ನಮ್ಮ ಜೊತೆಯಲ್ಲಿದ್ದು ಸಾಕಷ್ಟು ಸಹಕಾರ ನೀಡಿದ್ದಾರೆ. ಸುಪ್ರೀತ್ ಹಾಗೂ ಗಂಗಾಧರ್ ಅವರು ವಿತರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಬಿಡುಗಡೆಯ ಹೊಸ್ತಿಲಿನಲ್ಲಿರುವ ನಮ್ಮ ಚಿತ್ರಕ್ಕೆ ಮಾಧ್ಯಮದ ಮಿತ್ರರು ಮೊದಲಿನಿಂದಲೂ ನೀಡಿದ್ದಾರೆ. ಅದೇ ಪ್ರೋತ್ಸಾಹ ಮುಂದುವರೆಯಲಿ ಎಂದು ನಿರ್ದೇಶಕ ಪ್ರಕಾಶ್ ವೀರ್ ಹೇಳಿದರು.

ಎರಡು ವರ್ಷಗಳಿಂದ ನಮ್ಮ ಮನೆಯಲ್ಲಿ "ದಿ ಡೆವಿಲ್" ಚಿತ್ರದ ಕುರಿತೇ ಮಾತು. ಈ ಚಿತ್ರ ನಮಗೆ ಮಗು ಇದ್ದ ಹಾಗೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರೆ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರೆ ಕಾರಣ. ಈ ಸಂದರ್ಭದಲ್ಲಿ ಇಡೀ ತಂಡಕ್ಕೆ ಹಾಗೂ ವಿಶೇಷವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು ಎಕ್ಸಿಕ್ಯುಟಿವ್ ಪ್ರೊಡ್ಯುಸರ್ ತಶ್ವಿನಿ ವೀರ್.
ನಾನು ಈ ಸಂದರ್ಭದಲ್ಲಿ ಅವಕಾಶ ನೀಡಿದ ಜೈ ಮಾತಾ ಕಂಬೈನ್ಸ್ ಸಂಸ್ಥೆಗೆ, ನಿರ್ದೇಶಕ ಪ್ರಕಾಶ್ ವೀರ್ ಹಾಗೂ ದರ್ಶನ್ ಅವರಿಗೆ ಧನ್ಯವಾದ ಹೇಳುತ್ತೇನೆ. ಈ ಚಿತ್ರದಲ್ಲಿ ನಟಿಸಬೇಕುಂಬುದು ನನ್ನ ಆಸೆ. ಹಾಗಾಗಿ ಎರಡು ಚಿತ್ರಗಳನ್ನು ಬಿಟ್ಟಿದ್ದೇನೆ ಎಂದರು ನಾಯಕಿ ರಚನ ರೈ.





