ತಜ್ಞರ ಅಭಿಪ್ರಾಯದ ಪ್ರಕಾರ, ನಿರಂತರ ಒತ್ತಡದಲ್ಲಿ ಇರುವುದರಿಂದ ಹಲವು ಬಗೆಯ ರೋಗಗಳು ಅಂದರೆ ಮಧುಮೇಹ, ಅತಿರಕ್ತದ ಒತ್ತಡದಂತಹ ಸಮಸ್ಯೆಗಳ ಅಪಾಯ ಎದುರಿಸಬೇಕಾಗಿ ಬರಬಹುದು. ಇದರ ಪರಿಣಾಮ ಎಂಬಂತೆ ಹೃದ್ರೋಗದ ಅಪಾಯ ಕೂಡ ಉಂಟಾಗಬಹುದು. ಒತ್ತಡ ಹೃದ್ರೋಗವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ನೋಡಿ ತಿಳಿದುಕೊಳ್ಳಿ.

ಹಲವು ದಿನಗಳ ರಜೆಗಳ ಬಳಿಕ ಮಾಧುರಿಯ ಗೆಳತಿ ಸುಮಿತ್ರಾ ಆಫೀಸ್‌ಗೆ ಬಂದಾಗ, ಅವಳು ಮಾಧುರಿಯ ಹೆಚ್ಚಿದ ತೂಕದ ಬಗ್ಗೆ ಟೀಕಿಸಿದಳು. ಮಾಧುರಿಗೂ ಕೂಡ ಹೆಚ್ಚುತ್ತಿರುವ ತೂಕದ ಬಗ್ಗೆ ಒಳಗೊಳಗೆ ಆತಂಕ ಉಂಟಾಗುತ್ತಿತ್ತು. ಅಂದಹಾಗೆ 45 ವರ್ಷದ ಮಾಧುರಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಅವಳಿಗೆ ಟಾರ್ಗೆಟ್‌ ಪೂರೈಸುವುದು ಅನಿವಾರ್ಯವಾಗಿತ್ತು.

ಟಾರ್ಗೆಟ್‌ ಮುಗಿಸಲು ಅವಳು ಇಡೀ ದಿನ ಒತ್ತಡದಲ್ಲಿ ಇರುತ್ತಿದ್ದಳು. ಅವಳ ಜೀವನ ಅದೆಷ್ಟು ವ್ಯಸ್ತವಾಗಿದೆಯೆಂದರೆ, ಅವಳಿಗೆ ವ್ಯಾಯಾಮ ಮಾಡುವುದಕ್ಕೆ ಸಮಯ ಬಿಡಿ, ಸರಿಯಾಗಿ ಊಟ ತಿಂಡಿ ಮಾಡಲು ಕೂಡ ಸಮಯ ದೊರೆಯುವುದಿಲ್ಲ. ಅತಿ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವ ಮಾಧುರಿಗೆ ಕೇವಲ ತೂಕವೊಂದೇ ಹೆಚ್ಚುತ್ತಿಲ್ಲ, ದೇಹದಲ್ಲಿ ಹಲವು ಬದಲಾವಣೆ ಆಗುತ್ತಿರುವುದು ಅವಳ ಗಮನಕ್ಕೆ ಬರುತ್ತಿದೆ. ಒಂದಿಷ್ಟು ಮುಂದೆ ನಡೆದರೂ ಸಾಕು, ಅವಳಿಗೆ ಏದುಸಿರು ಬರುತ್ತದೆ. ಕೆಲವರು ಅವಳಿಗೆ ಈ ಎಲ್ಲ ಸಮಸ್ಯೆಗಳಿಗೆ ಹೆಚ್ಚುತ್ತಿರುವ ವಯಸ್ಸು ಕಾರಣ ಎಂದು ಹೇಳಿದರೆ, ಮತ್ತೆ ಕೆಲವರು ಇದಕ್ಕೆ ಹೈ ಬಿಪಿ ಕಾರಣ ಎಂದು ಹೇಳಿದರು.

ಕೊನೆಗೊಮ್ಮೆ ಮಾಧುರಿ ತಮ್ಮ ಫ್ಯಾಮಿಲಿ ಡಾಕ್ಟರ್‌ರನ್ನು ಭೇಟಿಯಾಗಲು ಹೋದಳು. ಅವಳ ಈ ಲಕ್ಷಣಗಳನ್ನು ಆಲಿಸಿ ಅವರು ಹೃದಯರೋಗ ತಜ್ಞರನ್ನು ಕಾಣಲು ತಿಳಿಸಿದರು. ಅವರ ಮಾತು ಕೇಳಿ ಮಾಧುರಿಗೆ ಗಾಬರಿಯೇ ಆಯಿತು. ತಾನು ಹೃದಯರೋಗಕ್ಕೆ ಸಿಲುಕಿರಬಹುದು ಎಂದು ಅನಿಸಿರಲಿಲ್ಲ.

ಫ್ಯಾಮಿಲಿ ಡಾಕ್ಟರ್‌ ಸಲಹೆಯ ಮೇರೆಗೆ ಕಾರ್ಡಿಯಾಲಜಿಸ್ಟ್ ರನ್ನು ಭೇಟಿ ಮಾಡಿದಳು. ಪರೀಕ್ಷೆಯ ಬಳಿಕ ಅವಳು ಹಾರ್ಟ್‌ ಫೇಲ್ಯೂರ್‌ ಸಮಸ್ಯೆಯಿಂದ ಬಳಲುತ್ತಿದ್ದಳೆಂದು ತಿಳಿಯಿತು. ಇಡೀ ದಿನ ಒತ್ತಡದಲ್ಲಿ ಇರುವುದರಿಂದ ಹಾಗೂ ಅಸ್ವಸ್ಥ ಜೀವನಶೈಲಿಯಿಂದ ಅವಳಿಗೆ ಈ ಸಮಸ್ಯೆ ಆಗಿದೆಯೆಂದು ವೈದ್ಯರು ಹೇಳಿದರು.

ಒತ್ತಡ ದೇಹದಲ್ಲಿ ಕೆಮಿಕಲ್ ಪ್ರಕ್ರಿಯೆಯನ್ನು ಉಂಟುಮಾಡುತ್ತದೆ. ಅದರಿಂದ ಅಡ್ರಿನಾಲಿನ್‌ ಹಾಗೂ ಇತರೆ ಹಾರ್ಮೋನುಗಳು ಹೃದಯದ ಕಾರ್ಯ ಚಟುವಟಿಕೆ ಮತ್ತು ಉಸಿರಾಟದ ಗತಿಗೆ ಮತ್ತಷ್ಟು ವೇಗ ನೀಡುತ್ತದೆ. ಅದರಿಂದಾಗಿ ಬ್ಲಡ್‌ ಶುಗರ್‌ನ ಮಟ್ಟ ಹೆಚ್ಚುತ್ತದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೃದಯಕ್ಕೆ ಹೆಚ್ಚಿನ ವೇಗದಲ್ಲಿ ಪಂಪ್‌ ಮಾಡಬೇಕಾಗಿ ಬರುತ್ತದೆ. ಏಕೆಂದರೆ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಆಗಬೇಕು. ಒಂದು ವೇಳೆ  ಪ್ರಕ್ರಿಯೆ ಪ್ರತಿದಿನ ನಿರಂತರವಾಗಿದ್ದರೆ, ಹೃದಯಕ್ಕೆ ನಿರಂತರವಾಗಿ ಇಷ್ಟೊಂದು ವೇಗದಲ್ಲಿ ಪಂಪ್‌ ಮಾಡುವುದು ಕಷ್ಟಕರವಾಗುತ್ತದೆ ಹಾಗೂ ಆಕ್ಸಿಜನ್‌ ಸೂಕ್ತ ಪ್ರಮಾಣದಲ್ಲಿ ದೇಹದಲ್ಲಿ ತಲುಪುದಿಲ್ಲ.

ಹೃದಯಾಘಾತಕ್ಕೆ ಸಂಬಂಧಪಟ್ಟ ಲಕ್ಷಣಗಳನ್ನು ಗುರುತಿಸಿ, ತಕ್ಷಣವೇ ಚಿಕಿತ್ಸೆ ಆರಂಭಿಸಿ. ಏಕೆಂದರೆ ಸಕಾಲಕ್ಕೆ ಪಡೆದ ಚಿಕಿತ್ಸೆ ಹಾಗೂ ಔಷಧಿಗಳ ಸಹಾಯದಿಂದ ಅದನ್ನು ನಿರ್ವಹಿಸಲು ಸಹಾಯವಾಗುತ್ತದೆ. ಹೃದಯಾಘಾತದ ಲಕ್ಷಣಗಳನ್ನು ಗುರುತಿಸುವುದು ಹೆಚ್ಚು ಕಠಿಣವೇನಲ್ಲ. ರೋಗಿಯ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಿ, ದೈಹಿಕ ಪರೀಕ್ಷೆ, ರಿಸ್ಕ್ ಫ್ಯಾಕ್ಟರ್‌ ಅಂದರೆ ರಕ್ತದೊತ್ತಡ, ಕರೊನರಿ ಆರ್ಟರಿ ರೋಗ ಅಥವಾ ಮಧುಮೇಹ ಮತ್ತು ಲ್ಯಾಬೊರೆಟರಿ ಟೆಸ್ಟ್ ಗಳಿಂದಲೂ ಪತ್ತೆ ಹಚ್ಚಬಹುದಾಗಿದೆ. ಇಕೊಕಾರ್ಡಿಯೊಗ್ರಾಮ್ ಎದೆಯ ಎಕ್ಸರೇ, ಕಾರ್ಡಿಯಾಕ್‌ ಸ್ಟ್ರೆಸ್‌ ಟೆಸ್ಟ್, ಹಾರ್ಟ್‌ ಕೆಥೆಟರೈಸೇಶನ್‌ ಮತ್ತು ಎಂಆರ್‌ಐನಿಂದ ಈ ಸಮಸ್ಯೆಯನ್ನು ಸರಿಯಾಗಿ ಪತ್ತೆ ಹಚ್ಚಬಹುದು. ಇದರ ಹೊರತಾಗಿ ಹಾರ್ಟ್‌ ಫೇಲ್ಯೂರ್‌ನಿಂದ ರಕ್ಷಿಸಿಕೊಳ್ಳಲು ಇತರ ರಿಸ್ಕ್ ಕಾರಣಗಳನ್ನು ಮ್ಯಾನೇಜ್‌ ಮಾಡುವುದು ಬಹಳ ಅಗತ್ಯ. ಅವುಗಳಲ್ಲಿ ಎಲ್ಲಕ್ಕೂ ಮಹತ್ವದ್ದು ಎಂದರೆ ಒತ್ತಡ. ಏಕೆಂದರೆ ಒತ್ತಡದಿಂದಲೇ ಮಧುಮೇಹ, ತೂಕ ಹೆಚ್ಚುವುದು, ಅತಿ ರಕ್ತದೊತ್ತಡ ಮುಂತಾದವು ಉಂಟಾಗುತ್ತವೆ.

ಹೃದಯಾಘಾತ ನಿರ್ಹಿಸುವ ವಿಧಾನಗಳು

ಆರೋಗ್ಯಕರ ಆಹಾರ : ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ ಆಹಾರದ ಬಗ್ಗೆ ಗಮನ ಕೊಡುವುದಾಗಿದೆ. ಆರೋಗ್ಯಕರ ಆಹಾರಷ್ಟೇ ಮುಖ್ಯವಲ್ಲ, ಸಕಾಲಕ್ಕೆ ಆಹಾರ ಸೇವಿಸುವುದು ಕೂಡ ಮಹತ್ವದ್ದು.

ಧೂಮಪಾನ ಮದ್ಯಪಾನ ನಿಲ್ಲಿಸಿ : ಧೂಮಪಾನ ಹಾಗೂ ಮದ್ಯಪಾನ ಮಾಡುವುದನ್ನು ತಕ್ಷಣದಿಂದಲೇ ನಿಲ್ಲಿಸಿ. ನಿಕೋಟಿನ್‌ನಂತಹ ಕೆಮಿಕಲ್ ಒತ್ತಡದ ಲಕ್ಷಣಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆಗಳನ್ನು ನಿರ್ವಹಿಸಲು ಧೂಮಪಾನ ಮದ್ಯಪಾನ ನಿಲ್ಲಿಸಿ.

ವ್ಯಾಯಾಮ ಮಾಡಿ : ವೈದ್ಯರ ಪರಾಮರ್ಶೆಯ ಮೇರೆಗೆ ಮುಂಜಾನೆ ಸಂಜೆ ಅಷ್ಟಿಷ್ಟು ವ್ಯಾಯಾಮ ಮಾಡಿ.

ಒತ್ತಡ ಕಡಿಮೆಗೊಳಿಸುವ ವಿಧಾನ

ಬಹಳಷ್ಟು ಜನರು ತಮ್ಮ ಜೀವನದಲ್ಲಿ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಅವನ್ನು ಈಡೇರಿಸಿಕೊಳ್ಳುವುದು ಅವರ ಕೈಯಲ್ಲಿಲ್ಲ. ಹಾಗಾಗಿ ಅವರು ಒತ್ತಡದಲ್ಲಿ ಜೀವಿಸತೊಡಗುತ್ತಾರೆ. ಎಷ್ಟೋ ಜನರು ತಮ್ಮ ಕೆಲಸವನ್ನು ಉತ್ತಮಗೊಳಿಸುವ ಭರದಲ್ಲಿ ಇಡೀ ದಿನ ಒತ್ತಡದಲ್ಲಿ ಜೀವಿಸುತ್ತಾರೆ. ಹೀಗಾಗಿ ಕುಟುಂಬದವರೊಂದಿಗೆ ಒಂದಿಷ್ಟು ಹೊತ್ತು ಕಾಲ ಕಳೆಯಿರಿ. ಅವರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಇದರಿಂದ ಒತ್ತಡ ಸಾಕಷ್ಟು ಕಡಿಮೆಯಾಗುತ್ತದೆ. ಕೆಲಸ ಮಾಡುತ್ತಲೇ ಇರುವುದು ಜೀವನವಲ್ಲ. ಸ್ವಲ್ಪ ಹೊತ್ತು ನಮಗಾಗಿಯೂ ಸಮಯ ಹೊಂದಿಸಿಕೊಳ್ಳಬೇಕು. ಏಕೆಂದರೆ  ಮೆದುಳಿಗೂ ವಿಶ್ರಾಂತಿ ಸಿಗಬೇಕು. ಮೆದುಳನ್ನು ಶಾಂತಗೊಳಿಸಲು ಓದು, ನೃತ್ಯ, ತೋಟಗಾರಿಕೆಯಂತಹ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

– ಡಾ. ಸಂದೀಪ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ