ಐವತ್ತನೇ ವಿವಾಹ ವಾರ್ಷಿಕೋತ್ಸವದಂದು ಗಂಡನ ಕಣ್ಣಲ್ಲಿ ಎರಡು ಹನಿ ಕಣ್ಣೀರನ್ನು ನೋಡಿದ  ಹೆಂಡತಿ, “ನೀವು ಇಷ್ಟು ಭಾವುಕರು ಅಂತ ತಿಳಿದಿರಲಿಲ್ಲ ರೀ…..” ಎಂದಳು.

ಗಂಡ ಹೇಳಿದ, “50 ವರ್ಷಗಳ ಹಿಂದೆ ನಾನು ಕೋಣೆಯಲ್ಲಿ ಸಿಕ್ಕಾಗ ನಿಮ್ಮಪ್ಪ `ಲಗ್ನ ಆಗ್ತೀಯಾ… ಇಲ್ಲಾ ಐವತ್ತು ವರ್ಷ ಜೈಲಿಗೆ ಹಾಕ್ಲಾ….’ ಅಂತ ಕೇಳಿದ್ದರು. ಜೈಲಿಗೆ ಹೋಗಿದ್ದಿದ್ದರೆ ಇಂದು ಬಿಡುಗಡೆ ಆಗ್ತಿತ್ತು. ಅದನ್ನು ನೆನಪಿಸಿಕೊಂಡು ಕಣ್ಣೀರು ಬಂತು ಅಷ್ಟೆ….”

ತಂದೆ : ಮಗನೇ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದಿದ್ದರೆ ಮದುವೆಗೆ ಮೊದಲು ಸಾಧಿಸು.

ಮಗ : ಯಾಕಪ್ಪಾ?

ತಂದೆ : ಮದುವೆಯಾದ ನಂತರ ಸಾಧಿಸಿದರೆ ಹೆಂಡತಿಯ ಕಾಲ್ಗುಣ ಅಂತಾರೆ.

ಗೆಳೆಯ : ನೀನು ಮಾಡಿದ ತಪ್ಪಿಗೆ ನೀನೇ ಕಠಿಣ ಶಿಕ್ಷೆ ವಿಧಿಸಿಕೊಳ್ಳುತ್ತಿದ್ದೀಯಂತೆ ಹೌದಾ….?

ಗುಂಡ : ಹೌದಯ್ಯ…. ಮುಂದಿನ ತಿಂಗಳು ನಾನು ಮದುವೆ ಆಗ್ತಾ ಇದೀನಿ.

ಗುಂಡ : ಇತ್ತೀಚೆಗೆ ಒಂದೇ ಕಡೆ ನೋಡಿ ನೋಡಿ ಕಣ್ಣು ನೋಯ್ತಾ ಇದೆ ಡಾಕ್ಟರ್‌.

ವೈದ್ಯ : ಸ್ವಲ್ಪ ಲೇಡೀಸ್‌ ಹಾಸ್ಟೆಲ್‌ ಕಡೆ ನೋಡೋದನ್ನು ಕಡಿಮೆ ಮಾಡು. ಎಲ್ಲಾ ಸರಿ ಹೋಗುತ್ತೆ.

ಹೆಂಡತಿ : ಆ ಕಾಮಿಡಿ ಸಿನಿಮಾ ನೋಡಿ ನಕ್ಕು ನಕ್ಕು ನನ್ನ ಅರ್ಧ ಪ್ರಾಣಾನೇ ಹೋದ ಹಾಗಾಯ್ತು ರೀ.

ಗಂಡ : ಹೌದಾ…? ಹಾಗಾದರೆ ಆ ಸಿನಿಮಾನ ಇನ್ನೊಂದು ಸಲ ನೋಡು.

ಹೆಂಡತಿ : ರೀ ಅಡುಗೆ ಏನ್ಮಾಡ್ಲಿ ಅಂತ ಯೋಚನೆ ಆಗ್ತಿದೆ.

ಗಂಡ : ನಿನ್ನದೊಂದು ಯೋಚನೆ ಆದರೆ ನನ್ನದೊಂದು ಯೋಚನೆ.

ಹೆಂಡತಿ : ನಿಮ್ಮದೇನು ಯೋಚನೆ?

ಗಂಡ : ಅದನ್ನು ತಿನ್ನುವುದು ಹೇಗೇಂತ….?

ಪತಿ : ಇಂತಹ ತುಂತುರು ಮಳೆ ಬಿದ್ದು ವಾತಾವರಣ ತುಂಬಾ ಹಿತಕರವಾಗಿದೆ. ಇಂಥ ಸಮಯದಲ್ಲಿ ನೀನು ಏನಾದರೂ ವಿಶೇಷವಾದದ್ದನ್ನು ಹೇಳಬಾರದೇ ಡಾರ್ಲಿಂಗ್‌…..?

ಪತ್ನಿ : ವಾವ್‌…. ಹೌ ನೈಸ್‌! ನಡೀರಿ ಶಾಪಿಂಗ್‌ ಹೋಗೋಣ.

ಗೆಳೆಯ : ಏನೋ ಗುಂಡ ತುಂಬಾ ಸಂತೋಷದಿಂದ ಸ್ವೀಟ್ಸ್ ಹಂಚುತ್ತಾ ಇದೀಯಾ? ಲಾಟರಿ ಏನಾದರೂ ಹೊಡೀತಾ….?

ಗುಂಡ : ಅಯ್ಯೋ ಹಾಗೇನೂ ಇಲ್ಲ ಕಣೋ… ನಾಳೆಯಿಂದ ನನ್ನ ಹೆಂಡತಿನೇ ಅಡುಗೆ ಮಾಡ್ತೀನೀಂತ ಹೇಳಿದಾಳೆ.

ತಾಯಿ : ಮಗಳೇ ನೀನು ಮಾತನಾಡುವ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ್ದಕ್ಕೆ ನಿನ್ನ ತಂದೆ ಏನೆಂದರು?

ಮಗಳು : ಮಗಳೇ… ನೀನು ದಿನದಿಂದ ದಿನಕ್ಕೆ ಮಾತನಾಡುವುದರಲ್ಲಿ ನಿನ್ನ ತಾಯಿಯನ್ನು ಮೀರಿಸುತ್ತಿದ್ದೀಯಾ ಎಂದರು.

ವಿಮಲಮ್ಮ ಸೀರೆ ಕೊಳ್ಳಲೆಂದು ಅಂಗಡಿಗೆ ಹೋದರು. ಸೇಲ್ಸ್ ಮ್ಯಾನ್‌ ಎಂಥ ಸೀರೆ ತೋರಿಸಿದರೂ ಬಡಪಟ್ಟಿಗೆ ಅವರು ಒಪ್ಪುತ್ತಿರಲಿಲ್ಲ.

ಸೇಲ್ಸ್ ಮ್ಯಾನ್‌: ಮೇಡಂ, ಮತ್ತೆ… ನಿಮಗೆಂಥ ಸೀರೆ ತಾನೇ ತೋರಿಸಲಿ, ಹೇಳಿ!

ವಿಮಲಮ್ಮ : ಅದನ್ನು ನಾನು ಉಟ್ಟುಕೊಂಡು ಹೊರಗೆ ಬಂದು ನಿಂತ ತಕ್ಷಣ ಅಕ್ಕಪಕ್ಕದ ಮನೆಯವಳು, ಎದುರು ಮನೆಯವಳು ಹೊಟ್ಟೆಕಿಚ್ಚಿಗೆ ಎದೆಯೊಡೆದು ಸಾಯಬೇಕು…. ಅಂಥದ್ದು ತೋರಿಸಿ!

ಅಜಿತ್‌: ಒಂದು ಪಕ್ಷ ನಿನ್ನ ಮದುವೆ ಅವಳಿ ಸಹೋದರಿಯರಲ್ಲಿ ಒಬ್ಬಳ ಜೊತೆ ಆಯಿತು ಅಂತಿಟ್ಕೊ, ಆಗ ನಿಮ್ಮ ಮನೆಗೆ ಅಕ್ಕನನ್ನು ನೋಡಲು ತಂಗಿ ಬರುತ್ತಾಳೆ. ಒಂದೇ ತರಹ ಇವರು ಇಬ್ಬರೂ ಒಂದೇ ಡಿಸೈನಿನ ಸೀರೆ ಉಟ್ಟಿದ್ದರೆ, ನಿನ್ನ ಹೆಂಡತಿಯನ್ನು ಹೇಗೆ ಗುರುತಿಸುತ್ತೀಯಾ?

ಸುಜಿತ್‌: ಅದೇನು ಕಷ್ಟ…..? ಒಬ್ಬಳನ್ನು ಮೆಲ್ಲಗೆ ಗಿಲ್ಲಿಬಿಡುತ್ತೇನೆ. ಯಾರು ರೇಗಾಡುತ್ತಾಳೋ ಅವಳೇ ಹೆಂಡತಿ, ಯಾರು ಕಣ್ಣು ಮಿಟುಕಿಸುತ್ತಾಳೋ ಅವಳೇ ನನ್ನ ನಾದಿನಿ!

ಗುಂಡ ಹೆಂಡತಿಯ ಕಾಟ ತಾಳಾರದೆ ಅಂತೂ ಹೊಸ ಕಾರು ಕೊಂಡುಕೊಂಡ. ಮೊದಲ ದಿನವೇ ಗಂಡನನ್ನು ಕೂರಿಸಿಕೊಂಡು ಅವಳು ಜಬರ್ದಸ್ತಾಗಿ ಕಾರು ಓಡಿಸುತ್ತಿದ್ದಳು.

ಗುಂಡ : ಅದು ಸರಿ, ಕಾರು ಟರ್ನ್‌ ಮಾಡುವಾಗ ನೀನೇಕೆ ಇಂಡಿಕೇಟರ್‌ ಬಳಸುವುದಿಲ್ಲ?

ಗುಂಡಿ : ಅದೇನು ಅಷ್ಟು ಮುಖ್ಯವೇ?

ಗುಂಡ : ಆಗ ತಾನೇ ಬೇರೆ ಡ್ರೈವರ್‌ಗಳಿಗೆ ನೀನು ಯಾವ ಕಡೆ ತಿರುಗುತ್ತಿದ್ದಿ ಅಂತ ಗೊತ್ತಾಗುವುದು?

ಗುಂಡಿ : ಅಲ್ರೀ…. ಕಾರು ನನ್ನದು, ಹೋಗುತ್ತಿರುವ ದಾರಿ ನನ್ನದು…. ಅದನ್ನು ಕಟ್ಟಿಕೊಂಡು ಬೇರೆಯವರಿಗೆ ಯಾಕೆ ಉಸಾಬರಿ ಅಂತ?

ಗುಂಡ : ನಾನು ನಿನ್ನನ್ನು ಕಟ್ಟಿಕೊಂಡಷ್ಟೇ ಲಾಭ ಆಯ್ತು, ಕಾರು ಕೊಡಿಸಿದ್ದು!

ಗುಂಡನ ಕೈಗೆ ಡೈಸ್‌ ಕೊಡುತ್ತಾ ಗುಂಡಿ ಹೇಳಿದಳು, “ನೋಡ್ರಿ….  1, 2, 3, 4 ಅಥವಾ 5 ಬಿದ್ದರೆ ನೀವು ನನ್ನನ್ನು ಶಾಪಿಂಗ್‌ಗೇ ಕರೆದುಕೊಂಡು ಹೋಗಲೇಬೇಕು.”

“ಮತ್ತೆ 6 ಬಿದ್ದರೆ….?”

“ಛೇ…ಛೇ! ಅಷ್ಟೂ ಗೊತ್ತಾಗೋಲ್ವೇ? ಚೌಕಾಬಾರಾ ಆಡುವಾಗ 6 ಬಿದ್ದರೆ ಇನ್ನೊಂದು ಚಾನ್ಸ್ ಕೊಡಲೇಬೇಕು…..”

“ಈ ಲಕ್ಷಣಕ್ಕೆ ಹಾಗೇ ಶಾಪಿಂಗ್‌ಹೋಗಬಹುದಿತ್ತು…..”

“ಅದೇನು ಗೊಣಗಿದ್ರಿ?”

“ಏನೂ ಇಲ್ಲ ಅಂತೀನಿ.”

88ರ ಮಹೇದಪ್ಪನವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿಸಿದರು. ಕೊನೆಗೆ ಆಪರೇಷನ್‌ ಮಾಡಲು ಅವರ ಅಳಿಯನೇ ಬರಬೇಕಾಯಿತು. ಅಂಥ ಸಿಡುಕು ಮೋರೆ ಮಗಳನ್ನು ಹೆಂಡತಿಯಾಗಿ ಪಡೆದ ಅಳಿಯ ತಮ್ಮ ಮೇಲೆ ಎಲ್ಲಿ ಸೇಡು ತೀರಿಸಿಕೊಳ್ಳಲಿದ್ದಾನೋ ಎಂದು ಅವರಿಗೆ ಗಾಬರಿಯಾಯ್ತು.

ಹಾಗಾಗಿ ಅವರು ಅಳಿಯನ ಕೈ ಹಿಡಿದು ಬಲು ಪ್ರೀತಿಯಿಂದ, “ನೋಡಪ್ಪ, ನಿನ್ನ ಮನಸ್ಸಿನಲ್ಲಿ ಏನೇ ಇರಲಿ, ನನ್ನನ್ನು ಉಳಿಸಿಕೊಳ್ತೀಯಾ ಅಂತ ಗೊತ್ತು. ಅಕಸ್ಮಾತ್‌ ನಾನು ಹೋಗಿಬಿಟ್ಟರೆ…. ಆಗ ನಿನ್ನ ಏಕಮಾತ್ರ ಅತ್ತೆ ನಿಮ್ಮ ಜೊತೆಯೇ ಉಳಿಯುತ್ತಾರೆ ಅಂತ ಮರೆಯಬೇಡ….” ಅಂತೂ ಅವರ ಆಪರೇಷನ್‌ ಸಕ್ಸಸ್‌ ಆಯ್ತಂತೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ