ಸ್ಪೆಷಲ್ ಮಸಾಲವಡೆ

ಸಾಮಗ್ರಿ : 250 ಗ್ರಾಂ ಸೀಮೆಗೆಡ್ಡೆ, 2 ಕಪ್‌ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಇಂಗು, ಅರಿಶಿನ, ಧನಿಯಾಪುಡಿ, ಗರಂಮಸಾಲ, ಚಾಟ್‌ಮಸಾಲ, ನಿಂಬೆರಸ, ತುಸು ಹೆಚ್ಚಿದ ಹಸಿಮೆಣಸು, ಒಣ ಮೆಣಸಿನ ತುಂಡು, ಶೇಂಗಾ ಬೀಜ, ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ಎಣ್ಣೆ.

ವಿಧಾನ : ಮೊದಲು ಸೀಮೆಗೆಡ್ಡೆ ಬೇಯಿಸಿ, ಸಿಪ್ಪೆ ಸುಲಿದು ಮಸೆದಿಡಿ. ಒಂದು ಬಟ್ಟಲಿಗೆ ಕಡಲೆಹಿಟ್ಟು ಉಪ್ಪು, ಖಾರ, ಇಂಗು, ಅರಿಶಿನ ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ (ಮಂದ ಉರಿಯಲ್ಲಿ) ಶೇಂಗಾ ಹಾಕಿ ಚಟಪಟಾಯಿಸಿ. ನಂತರ ಮಸೆದ ಗೆಡ್ಡೆ ಹಾಗೂ ಉಳಿದೆಲ್ಲ ಸಾಮಗ್ರಿ ಒಂದೊಂದಾಗಿ ಹಾಕಿ ಕೆದಕುತ್ತಾ, ಪಲ್ಯ ಸಿದ್ಧಪಡಿಸಿ. ಇದನ್ನು ಕೆಳಗಿಳಿಸಿ ಆರಿದ ಮೇಲೆ, ಉಂಡೆ ಕಟ್ಟಿ ತುಸು ಚಪ್ಪಟೆ ಮಾಡಿ. ನಂತರ ಹಿಟ್ಟಿನಲ್ಲಿ ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ. ಪುದೀನ ಚಟ್ನಿ ಜೊತೆ ಸವಿಯಲು ಕೊಡಿ.

ಕ್ರಿಸ್ಪಿ ದಮ್ ಕರೀ

ಸಾಮಗ್ರಿ : ಅರ್ಧ ಕಿಲೋ ಸೀಮೆಗೆಡ್ಡೆ, 2-3 ಈರುಳ್ಳಿ ಪೇಸ್ಟ್, 2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2-3 ಟೊಮೇಟೊ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಖಾರ, ಓಮ, ಅರಿಶಿನ, ಗರಂಮಸಾಲ, ಹಸಿ ಮೆಣಸಿನ ಪೇಸ್ಟ್, ಹುಳಿ ಮೊಸರು, ಒಂದಿಷ್ಟು ಕೊ.ಸೊಪ್ಪು, ಕರಿಯಲು ಎಣ್ಣೆ.

ವಿಧಾನ : ಸೀಮೆಗೆಡ್ಡೆ ಬೇಯಿಸಿ, ಸಿಪ್ಪೆ ಸುಲಿದು, ಲಘುವಾಗಿ ಮಸೆದಿಡಿ. ನಂತರ ಕಾದ ಎಣ್ಣೆಯಲ್ಲಿ ಇವನ್ನು ಕರಿದು ತೆಗೆಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಓಮದ ಜೊತೆ ಒಗ್ಗರಣೆ ಕೊಡಿ. ನಂತರ ಒಂದೊಂದಾಗಿ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಿರಿ. ಆಮೇಲೆ ಟೊಮೇಟೊ ಪೇಸ್ಟ್ ಹಾಕಬೇಕು. ನಂತರ ಎಲ್ಲಾ ಮಸಾಲೆ, ಉಪ್ಪು, ಖಾರ ಸೇರಿಸಿ ಕೆದಕಿ, ಮೊಸರು ಬೆರೆಸಿ ಕುದಿಯಲು ಬಿಡಿ. ಇದಕ್ಕೆ ಕರಿದ ಗೆಡ್ಡೆ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಮೇಲೆ ಕೊ.ಸೊಪ್ಪು ಉದುರಿಸಿ ಬಿಸಿ ಅನ್ನ, ಚಪಾತಿ, ದೋಸೆ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಪಲ್ಯ

ಸಾಮಗ್ರಿ : 250 ಗ್ರಾಂ ಸೀಮೆಗೆಡ್ಡೆ, ಒಂದು ಗಿಟುಕು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಹೆಚ್ಚಿದ ಹಸಿಮೆಣಸು, ಗರಂಮಸಾಲ, ಚಾಟ್‌ ಮಸಾಲ, ಓಮ, ಅರಿಶಿನ, ಗಸಗಸೆ, ಇಂಗು, ಧನಿಯಾಪುಡಿ, ತುಸು ಹೆಚ್ಚಿದ ಕೊ.ಸೊಪ್ಪು, ಕರಿಯಲು ಎಣ್ಣೆ.

ವಿಧಾನ : ಸೀಮೆಗೆಡ್ಡೆ ತೊಳೆದು, (ಹಸಿಯಾಗಿಯೇ) ಸಿಪ್ಪೆ ಹೆರೆಯಿರಿ. ಇದನ್ನು ಉದ್ದುದ್ದ ಹೋಳುಗಳಾಗಿ ಹೆಚ್ಚಿಕೊಳ್ಳಿ. ಕಾದ ಎಣ್ಣೆಯಲ್ಲಿ ಕರಿದು ಒಂದು ಬದಿಗಿಡಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಒಗ್ಗರಣೆ ಕೊಡಿ, ಕರಿಬೇವು ಹಾಕಿ. ಆಮೇಲೆ ಹೆಚ್ಚಿದ ಹಸಿಮೆಣಸು, ತೆಂಗಿನ ತುರಿ, ಉಪ್ಪು, ಖಾರ, ಮಸಾಲೆ ಎಲ್ಲಾ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಕರಿದ ಗೆಡ್ಡೆ ಹಾಕಿ ಎಲ್ಲವನ್ನೂ ಕೆದಕಿ, ಕೆಳಗಿಳಿಸಿ. ಇದಕ್ಕೆ ನಿಂಬೆಹಣ್ಣು ಹಿಂಡಿಕೊಂಡು ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

ಸ್ಪೈಸಿ ಸ್ಪೆಷಲ್

ಸಾಮಗ್ರಿ : 250 ಗ್ರಾಂ ಸೀಮೆಗೆಡ್ಡೆ, 2-3 ಚಮಚ ಬಿಳಿ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಇಂಗು, ಅಮ್ಚೂರ್‌ಪುಡಿ, ಅರಿಶಿನ, ಧನಿಯಾಪುಡಿ, 3-4 ಚಮಚ ಕಡಲೆಹಿಟ್ಟು, ಕರಿಯಲು ಎಣ್ಣೆ.

ವಿಧಾನ : ಸೀಮೆಗೆಡ್ಡೆ ಬೇಯಿಸಿ, ಉದ್ದಕ್ಕೆ ಹೆಚ್ಚಿಡಿ. ಒಂದು ಬಟ್ಟಲಿಗೆ ಕಡಲೆಹಿಟ್ಟು, ಉಪ್ಪು, ಖಾರ, ಮಸಾಲೆ ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಅದರಲ್ಲಿ ಒಂದೊಂದಾಗಿ ಈ ಗೆಡ್ಡೆ ಅದ್ದಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಒಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಎಳ್ಳು ಹಾಕಿ ಒಗ್ಗರಣೆ ಕೊಡಿ. ಅದನ್ನು ಈ ಕರಿದ ವ್ಯಂಜನದ ಮೇಲೆ ಹಾಕಿ, ಬಿಸಿಯಾಗಿ ಸವಿಯಲು ಕೊಡಿ.

ಸ್ಪೆಷಲ್ ಸಮೋಸಾ

ಸಾಮಗ್ರಿ : 250 ಗ್ರಾಂ ಸೀಮೆಗೆಡ್ಡೆ, ಅಷ್ಟೇ ಮೈದಾ, ಕರಿಯಲು ಎಣ್ಣೆ, 2 ಚಿಟಕಿ ಸೋಡ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಹೆಚ್ಚಿದ ಹಸಿ ಮೆಣಸು, ಧನಿಯಾಪುಡಿ, ಗರಂಮಸಾಲ, ಅರಿಶಿನ, ನಿಂಬೆ ರಸ, 3 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೈದಾಗೆ ತುಸು ಉಪ್ಪು, ಅರಿಶಿನ ಹಾಕಿ, ನೀರು ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ ನೆನೆಯಲು ಬಿಡಿ. ನಂತರ ಸೀಮೆಗೆಡ್ಡೆ ಬೇಯಿಸಿ, ಸಿಪ್ಪೆ ಸುಲಿದು, ಚೆನ್ನಾಗಿ ಮಸೆಯಿರಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಕರಿಬೇವಿನ ಜೊತೆ ಒಗ್ಗರಣೆ ಕೊಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿ ಮೆಣಸು, ಬೆಳ್ಳುಳ್ಳಿ ನಂತರ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಮಸಾಲೆ ಹಾಕಿ ಕೆದಕಬೇಕು. ಕೊನೆಯಲ್ಲಿ ಬೆಂದ ಗೆಡ್ಡೆ ಸೇರಿಸಿ ಎಲ್ಲ ಚೆನ್ನಾಗಿ ಬೆರೆಯುವಂತೆ ಮಾಡಿ, ಕೆಳಗಿಳಿಸಿ ನಿಂಬೆಹಣ್ಣು ಹಿಂಡಿ, ಕೊ.ಸೊಪ್ಪು ಉದುರಿಸಿ. ಮೈದಾ ಮಿಶ್ರಣವನ್ನು ಸಣ್ಣ ಉಂಡೆ ಮಾಡಿ, ಪೂರಿಗಳಾಗಿ ಲಟ್ಟಿಸಿ. ಅರ್ಧ ಚಂದ್ರಕಾರವಾಗಿ ಕತ್ತರಿಸಿ, ಶಂಖುವಿನಾಕಾರ ಕೊಡಿ. ಪ್ರತಿಯೊಂದಕ್ಕೂ 2-3 ಚಮಚ ಗೆಡ್ಡೆ ಪಲ್ಯ ತುಂಬಿಸಿ, ಅಂಚು ಬಿಡದಂತೆ ಅಂಟಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿ, ಕಾದ ಎಣ್ಣೆಯಲ್ಲಿ ಕರಿದು, ಸವೋಸಾಗಳನ್ನು ಬಿಸಿಯಾಗಿ ಸಾಸ್‌ ಜೊತೆ ಸವಿಯಲು ಕೊಡಿ.

 

ಸೇವರಿಟ್‌ ಪಾಸ್ತಾ ಆಲ್‌ಫ್ರೆಡೋ

ಸಾಮಗ್ರಿ : 2 ಕಪ್‌ಬೆಂದ ಸೇರಿಟ್‌ ಪಾಸ್ತಾ, ಅರ್ಧ ಕಪ್‌ ಮೈದಾ, 2 ಕಪ್‌ಹಾಲು, ತುಸು ಆರಿಗ್ಯಾನೋ, ರೋಸ್‌ಮೆರಿ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಖಾರ, ಪಾಮೇಸಾನ್‌ ಚೀಸ್‌, ಬೆಣ್ಣೆ.

ವಿಧಾನ : ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಅದಕ್ಕೆ ಆರಿಗ್ಯಾನೋ, ರೋಸ್‌ಮೆರಿ ಹಾಕಿ ಬಾಡಿಸಿ. ಇದಕ್ಕೆ ಮುಕ್ಕಾಲು ಭಾಗ ಹಾಲು ಬೆರೆಸಿ ಮಂದ ಉರಿಯಲ್ಲಿ ಕುದಿಸಿರಿ. ಉಳಿದ ಹಾಲನ್ನು ತುಸು ಬಿಸಿ ಮಾಡಿ, ಅದರಲ್ಲಿ ಮೈದಾ ಹಾಕಿ ಗಂಟಿಲ್ಲದಂತೆ ಕದಡಿಕೊಳ್ಳಿ. ಇದನ್ನು ಬಾಣಲೆಗೆ ನಿಧಾನವಾಗಿ ಬೆರೆಸುತ್ತಾ ಕೈಯಾಡಿಸುತ್ತಿರಿ. ನಂತರ ಉಪ್ಪು, ಖಾರ, ಸಕ್ಕರೆ ಹಾಕಿ ಕೆದಕಿರಿ. ಇದು ಚೆನ್ನಾಗಿ ಕುದ್ದು ಸಾಸ್‌ಹದಕ್ಕೆ ಬರಬೇಕು. ನಂತರ ಇದಕ್ಕೆ ಬೆಂದ ಪಾಸ್ತಾ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಸರ್ವ್ ಮಾಡುವ ಮೊದಲು ತುಸು ಮೆಣಸು ಉದುರಿಸಿ, ಬಿಸಿಯಾಗಿ ಸವಿಯಲು ಕೊಡಿ.

 

ಸೇವರಿಟ್‌ ಪಾಸ್ತಾ ಟೊಮೇಟೊ ಸೂಪ್‌

ಸಾಮಗ್ರಿ : ಅರ್ಧ ಕಪ್‌ತುಂಡರಿಸಿದ ಸೇರಿಟ್‌ ಸ್ಪೈರಲ್ ಪಾಸ್ತಾ, 1 ಕಪ್‌ಬೆಂದ ಕಾಬೂಲ್‌ ಕಡಲೆಕಾಳು, 4-5 ಹುಳಿ ಟೊಮೇಟೊ, 2 ಈರುಳ್ಳಿ, ಒಂದಿಷ್ಟು ಆರಿಗ್ಯಾನೋ, ಬೇಸಿಲ್‌, ಉಪ್ಪು, ಖಾರ, ರೀಫೈಂಡ್‌ಎಣ್ಣೆ, ಬ್ರೆಡ್‌ ಕ್ಯೂಬ್ಸ್, ಕ್ರೀಂ.

ವಿಧಾನ : ಹಿಂದಿನ ದಿನ ಕಾಬೂಲ್‌ ಕಡಲೆ ನೆನೆಸಿ ಮಾರನೇ ದಿನ ಬೇಯಿಸಿಡಿ. ಪಾಸ್ತಾ ಸಹ ಬೆಂದು ರೆಡಿ ಆಗಿರಲಿ. ಒಂದು ಬಾಣಲೆಯಲ್ಲಿ ರೀಫೈಂಡ್‌ ಎಣ್ಣೆ ಬಿಸಿ ಮಾಡಿ. ಮೊದಲು ಸಣ್ಣಗೆ ಹೆಚ್ಚಿದ ಈರುಳ್ಳಿ, ನಂತರ ಟೊಮೇಟೊ ಹಾಕಿ ಬಾಡಿಸಿ. ನಂತರ ಪಾಸ್ತಾ, ಕಡಲೆಕಾಳು ಬೇಯಿಸಿದ ಸ್ಟಾಕ್‌, ಉಪ್ಪು, ಖಾರ, ಆರಿಗ್ಯಾನೋ, ಬೇಸಿಲ್ ಇತ್ಯಾದಿ ಎಲ್ಲಾ ಸೇರಿಸಿ ಕುದಿಸಿರಿ. ಆಮೇಲೆ ಪಾಸ್ತಾ, ಕಡಲೆಕಾಳು ಹಾಕಿ ಎಲ್ಲ ಚೆನ್ನಾಗಿ ಬೆರೆತು ಕುದಿಯುವಂತೆ ಮಾಡಿ.  ಕೆಳಗಿಳಿಸಿದ ನಂತರ ತುಸು ಕ್ರೀಂ, ಬ್ರೆಡ್‌ ಕ್ಯೂಬ್ಸ್ ತೇಲಿಬಿಟ್ಟು ಬಿಸಿ ಬಿಸಿಯಾಗಿ ಸೂಪ್‌ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ