ಮದುವೆಗೂ ಮುಂಚೆ ಪರಸ್ಪರರನ್ನು ಪಡೆದುಕೊಳ್ಳುವ ಅಪೇಕ್ಷೆಯಲ್ಲಿ ಪ್ರೇಮಿಗಳು ಸಮಾಜ ಮತ್ತು ಕುಟುಂಬದವರ ವಿರುದ್ಧ ಹೋಗಲು ಕೂಡ ಹಿಂದೇಟು ಹಾಕುವುದಿಲ್ಲ. ಆಕಸ್ಮಿಕವಾಗಿ ಮದುವೆಯಾಗುತ್ತಿದ್ದಂತೆ ಅಥವಾ ವಯಸ್ಸಿನ ಯಾವುದೇ ಹಂತದಲ್ಲಿ ಪರಸ್ಪರರಿಂದ ಪ್ರತ್ಯೇಕಗೊಳ್ಳಲು ಏಕೆ ನಿರ್ಧಾರ ಕೈಗೊಳ್ಳಲಾಗುತ್ತದೆ?
ಇದು ನಿಜಕ್ಕೂ ಖೇದದ ಸಂಗತಿ. ಏಕೆಂದರೆ ಹಳೆಯ ಕಾಲಕ್ಕೆ ತದ್ವಿರುದ್ಧ ಎಂಬಂತೆ ಇಂದಿನ ಆಧುನಿಕ ಮನೋಭಾವದ ಹೆಚ್ಚಿನ ಯುವಕ/ಯುವತಿಯರು ಸ್ವೇಚ್ಚೆಯಿಂದ ಮದುವೆ ಮಾಡಿಕೊಳ್ಳುತ್ತಿದ್ದಾರೆ. ತಂದೆ ತಾಯಿ ನೋಡಿದ ಹುಡುಗ ಅಥವಾ ಹುಡುಗಿಯನ್ನು ಅವರು ತಿರಸ್ಕರಿಸುತ್ತಿದ್ದಾರೆ. ಈ ಪ್ರೇಮ ವಿವಾಹಗಳು ಯಶಸ್ವಿಯಾಗದೇ ಇರಲು ಅನೇಕ ಕಾರಣಗಳಿವೆ :
ಪ್ರೇಮ ವಿವಾಹಗಳು ಸಿನಿಮಾಗಳ ಉಡುಗೊರೆ ಎನ್ನಬಹುದು. ಅಲ್ಲಿ ಸಂಗಾತಿಯನ್ನು ಹುಡುಕುವಾಗ ವಯಸ್ಸಿನ ಭೇದವಾಗಲಿ, ಜಾತಿಯ ಹಂಗಾಗಲಿ ಇರದು. ಯಾವ ವೇಗದಲ್ಲಿ ಪ್ರೀತಿಸಿ ಮದುವೆಯಾಗುವ ನಿರ್ಧಾರ ಕೈಗೊಳ್ಳಲಾಗುತ್ತದೋ, ಅದೇ ವೇಗದಲ್ಲಿ ವಿಚ್ಛೇದನ ಕೂಡ ಆಗಿಬಿಡುತ್ತದೆ. `ನೀನಿಲ್ಲದಿದ್ದರೆ ಮತ್ಯಾರೊ’ ಎಂಬ ಧೋರಣೆ ಅವರದ್ದಾಗಿರುತ್ತದೆ. ಅದರ ಪ್ರಭಾವ ಜನಸಾಮಾನ್ಯರ ಮೇಲೂ ಆಗಿದೆ. ಸಿನಿಮಾ ನಾಯಕ ನಾಯಕಿಯರ ಜೀವನಶೈಲಿಯ ಪ್ರಭಾವ ಜನಸಾಮಾನ್ಯರ ಮೇಲೆ ಉಂಟಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಏಕೆಂದರೆ ಅವರು ಇವರಿಗೆ ಆದರ್ಶಪ್ರಾಯರಾಗಿದ್ದಾರೆ.
ಮುಂಬೈ ಹೈಕೋರ್ಟ್ 2012ರಲ್ಲಿ ಒಂದು ಪ್ರಕರಣದ ಕುರಿತಂತೆ ತೀರ್ಪು ನೀಡುತ್ತ, ಅರೇಂಜ್ಡ್ ಮ್ಯಾರೇಜ್ಗಳಿಗೆ ಹೋಲಿಸಿದರೆ, ಪ್ರೀತಿಸಿ ಮಾಡಿದ ಮದುವೆಗಳಲ್ಲಿ ವಿಚ್ಛೇದನಗಳ ಪ್ರಮಾಣ ಹೆಚ್ಚು ಎಂದು ಹೇಳಿತ್ತು. 1980ರ ಸಾಲಿನಲ್ಲಿ ಪ್ರೇಮ ವಿವಾಹಗಳಿಗೆ ಹೆಚ್ಚಿನ ಚಾಲನೆ ಸಿಕ್ಕಿತ್ತು. ಅದಕ್ಕೂ ಮುಂಚೆ ಮನಸ್ಸಿನಲ್ಲಿನ ಪ್ರಥಮ ಪ್ರೀತಿಯನ್ನು ಕುಟುಂಬದವರ ಮುಂದೆ ವ್ಯಕ್ತಪಡಿಸುವುದು ಬಹಳ ಕಷ್ಟವಿತ್ತು. ಹಾಗೆ ಹೇಳಿಕೊಳ್ಳುವ ಮುನ್ನವೇ ಬೇರೊಂದು ಕಡೆ ಮದುವೆ ಸೆಟ್ ಆಗಿ ಆ ಪ್ರೀತಿ ಅಲ್ಲೇ ಕೊನೆಯುಸಿರೆಳೆಯುತ್ತಿತ್ತು. ಪ್ರೀತಿ ಪ್ರೇಮದ ಮದುವೆಗಳು ಈಗಲೂ ನಗರ ಪ್ರದೇಶಗಳಿಗೆ ಹೆಚ್ಚು ಸೀಮಿತಗೊಂಡಿವೆ. ಸಣ್ಣ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಇದಕ್ಕೆ ಇನ್ನೂ ಅಷ್ಟೊಂದು ಮುಕ್ತ ಮಾನ್ಯತೆ ದೊರಕಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ಪ್ರೀತಿ ಮಾಡಿ ಮದುವೆಯಾದ ಹುಡುಗ ಅಥವಾ ಹುಡುಗಿಯನ್ನು ಹತ್ಯೆಗೈದ ಘಟನೆಗಳು ಕೂಡ ನಡೆದಿವೆ. ಅವರಿಗೆ ಮನೆಯ ಗೌರವ ಮುಖ್ಯವೇ ವಿನಾ ತಮ್ಮ ಹುಡುಗ ಅಥವಾ ಹುಡುಗಿಯ ಭಾವನೆ ಮುಖ್ಯವಾಗಿರುವುದಿಲ್ಲ.
ಯಾವ ಪ್ರೀತಿಯು ಮದುವೆಯಲ್ಲಿ ಪರಿವರ್ತನೆಗೊಳ್ಳುತ್ತದೋ, ಅದು ವಾಸ್ತವದಲ್ಲಿ ಪ್ರೀತಿ ಆಗಿರದೆ, ದೈಹಿಕ ಆಕರ್ಷಣೆ ಆಗಿರುತ್ತದೆ. ಪ್ರೀತಿ ಮತ್ತು ವಿವಾಹ ಒಂದೇ ನಾಣ್ಯದ ಎರಡು ಮುಖಗಳು. ಪ್ರೇಮಿಯೊಬ್ಬ ಒಳ್ಳೆಯ ಗಂಡನಾಗುತ್ತಾನೆ ಅಥವಾ ಪ್ರೇಯಸಿಯೊಬ್ಬಳು ಒಳ್ಳೆಯ ಹೆಂಡತಿಯಾಗುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಮದುವೆಗೂ ಮುಂಚೆ ವ್ಯಕ್ತಿಯ ನಯವಿನಯದ ಗುಣಗಳಿಗೆ ಮನಸೋತು ಅಂಥವರೊಂದಿಗೆ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಆದರೆ ಭಾರತದಲ್ಲಿ ಮದುವೆಯ ಬಳಿಕ ಹೆಂಡತಿಗೆ ಗಂಡನ ಕುಟುಂಬದವರೆಲ್ಲರ ಜೊತೆ ಹೊಂದಾಣಿಕೆಯಿಂದ ಹೋಗಬೇಕಾಗುತ್ತದೆ. ಗಂಡನಾದವನಿಗೆ ಹೆಂಡತಿಯ ಜೊತೆಗೆ ಕುಟುಂಬದವರೆಲ್ಲರ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ.
ಪ್ರೇಮ ವಿವಾಹವೊಂದು ಯಾವಾಗ ಯಶಸ್ವಿಯಾಗುತ್ತದೆ ಎಂದರೆ, ಅದರ ಮೂಲ ಆಧಾರ ತ್ಯಾಗ, ಸಮರ್ಪಣೆ, ಹೊಂದಾಣಿಕೆಯಿಂದ ಕೂಡಿರಬೇಕು. ಆದರೆ ಇಂದಿನ ಯುವ ಪೀಳಿಗೆಯಲ್ಲಿ ಈ ಯಾವ ಗುಣಗಳೂ ಗೋಚರಿಸುವುದಿಲ್ಲ. ಹೀಗಾಗಿ ಮದುವೆಗೆ ಮುಂಚೆ ಕಂಡುಬಂದ ಹಗಲುಗನಸು ಮದುವೆಯ ಬಳಿಕ ನೆಲಸಮ ಆಗುವುದನ್ನು ನೋಡಿ ಬಂಡೇಳುತ್ತಾರೆ. ಅದರ ಮುಂದಿನ ಪರಿಣಾಮ ವಿಚ್ಛೇದನ.
ಇಂದಿನ ಆಧುನಿಕ ಹುಡುಗಿಯರು ಸಾಕಷ್ಟು ಉನ್ನತ ಶಿಕ್ಷಣ ಪಡೆದವರಾಗಿದ್ದು, ಆರ್ಥಿಕವಾಗಿ ಸ್ವಾವಲಂಬಿ ಮತ್ತು ತಮ್ಮ ಹಕ್ಕುಗಳ ಬಗ್ಗೆ ಜಾಗರೂಕರಾಗಿದ್ದಾರೆ. ಇದರ ಸಕಾರಾತ್ಮಕ ಪ್ರಭಾವದ ಜೊತೆಗೆ ನಕಾರಾತ್ಮಕ ಪ್ರಭಾವ ಏನಾಗುತ್ತಿದೆ ಎಂದರೆ ಅವರು ಅಸಹನೆಯ ಗುಣ ರೂಢಿಸಿಕೊಳ್ಳುವುದರ ಜೊತೆ ಜೊತೆಗೆ ಅಹಂಕಾರಿ ಆಗುತ್ತಿದ್ದಾರೆ. ಈ ಎರಡು ಗುಣಗಳೂ ಯಶಸ್ವಿ ದಾಂಪತ್ಯಕ್ಕೆ ಹಾನಿಕಾರಕಾಗಿವೆ.
ಇಂದಿನ ಯುವ ಜನಾಂಗದವರು ತಮ್ಮ ವೈಯಕ್ತಿಕ ಸಂಗತಿಗಳಿಗೆ ಆದ್ಯತೆ ಕೊಡುತ್ತಾರೆ. ಅವರು ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೊಂದಾಣಿಕೆಯೇ ವೈವಾಹಿಕ ಜೀವನದ ಮೊದಲ ಅಗತ್ಯ. ಇದೇ ಕಾರಣದಿಂದ ಕೇರಳ ರಾಜ್ಯದಲ್ಲಿ ವಿಚ್ಛೇದನದ ಪ್ರಮಾಣ ಹೆಚ್ಚುತ್ತಿದೆ. ಅಲ್ಲಿನವರ ಯೋಚನೆ ಎಂದರೆ ಮದುವೆ ಮಾಡಿಕೊಳ್ಳುವ ಅಗತ್ಯವಾದರೂ ಏನಿದೆ ಎಂಬುದಾಗಿದೆ.
ಅಮೆರಿಕಾ ಹಾಗೂ ಕೆನಡಾದ ಜೊತೆ ಜೊತೆಗೆ ಹಲವು ಪಾಶ್ಚಿಮಾತ್ಯ ದೇಶಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತವೆ. ನಮ್ಮಲ್ಲಿನ ಕೆಲವರು ಅಲ್ಲಿಯೇ ಇರುವ ಕಾರಣದಿಂದ ಅಥವಾ ಅಲ್ಲಿದ್ದು ಇಲ್ಲಿಗೆ ಬಂದಿರುವ ಕಾರಣದಿಂದ ಇಲ್ಲಿ ಭಾರತದಲ್ಲಿದ್ದುಕೊಂಡೇ ಅವರ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದ, ಅಲ್ಲಿನ ಜನರ ವೈವಾಹಿಕ ಜೀವನದ ಪ್ರಭಾವ ನಮ್ಮವರ ಮೇಲೂ ಉಂಟಾಗುತ್ತಿದೆ. ಆದರೆ ವಿದೇಶಿ ಯುವಕ/ಯುವತಿಯರಿಗೆ ಕುಟುಂಬದ ಬಗೆಗಾಗಲಿ, ಸಮಾಜದ ಬಗೆಗಾಗಲಿ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. 15-16ನೇ ವಯಸ್ಸಿನ ಬಳಿಕ ಅವರು ತಂದೆತಾಯಿಯ ಕರ್ತವ್ಯಗಳಿಗೆ ಹೊಣೆಗಾರರಾಗಿರುವುದಿಲ್ಲ. ಅದೇ ರೀತಿ ತಂದೆತಾಯಿಯರಿಗೆ ಯಾವುದೇ ಜವಾಬ್ದಾರಿ ವಹಿಸಿಕೊಡಲು ಹಕ್ಕು ಹೊಂದಿರುವುದಿಲ್ಲ. ಅವರಿಗೆ ಸಮಾಜ ಏನು ಹೇಳುತ್ತದೆ ಎಂಬ ಭಯಭೀತಿ ಇರುವುದೇ ಇಲ್ಲ.
ಈಗ ವಿಚ್ಛೇದನ ಪಡೆದುಕೊಳ್ಳುವುದು ಅತ್ಯಂತ ಸುಲಭವಾಗಿಬಿಟ್ಟಿದೆ. ಸಂವಿಧಾನದ 498ನೇ ಅನುಚ್ಛೇದದ ಪ್ರಕಾರ, ಅತ್ತೆ ಮನೆಯವರ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯದ ಆರೋಪ ಹೊರಿಸಿ ಗಂಡನಿಂದ ವಿಚ್ಛೇದನ ಪಡೆದುಕೊಳ್ಳುತ್ತಾಳೆ. ಇದಕ್ಕಾಗಿ ಅವರು ಪುರಾವೆ ಕೊಡಬೇಕಾದ ಅಗತ್ಯವಿಲ್ಲ. ನಮ್ಮಲ್ಲಿ ಮಹಿಳೆಯರು ಈ ಕಾಯ್ದೆಯನ್ನು ಯಥೇಚ್ಛವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾರಣದಿಂದ ಈ ಕಾಯ್ದೆಗೆ ಅಷ್ಟಿಷ್ಟು ತಿದ್ದುಪಡಿ ತರಲಾಗಿದೆ.
ಸಮಾಜದಲ್ಲಿ ದಿನದಿಂದ ದಿನಕ್ಕೆ ವಿಚ್ಚೇದನಗಳ ಪ್ರಮಾಣ ಹೆಚ್ಚುವುದು ಕೂಡ ಅವರಿಗೆ ವಿಚ್ಛೇದನ ನೀಡಲು ಪ್ರೇರಣೆ ಆಗುತ್ತಿದೆ. ಸ್ನೇಹಿತ ತನ್ನ ಹೆಂಡತಿಗೆ ವಿಚ್ಛೇದನ ಕೊಟ್ಟಿದ್ದಾನೆ, ನಾನ್ಯಾಕೆ ಕೊಡಬಾರದು ಎನ್ನುವುದು ಅವರ ಧೋರಣೆ ಆಗಿರುತ್ತದೆ. ಈಗಿರುವ ಸಂಗಾತಿಗಿಂತ ಉತ್ತಮ ಸಂಗಾತಿ ದೊರೆಯಬಹುದು ಎನ್ನುವುದು ನಿರೀಕ್ಷೆಯಾಗಿರುತ್ತದೆ.
ಹೆಚ್ಚಿನ ಪ್ರೇಮ ವಿವಾಹಗಳು ಹಿಂದೆಮುಂದೆ ಯೋಚನೆ ಮಾಡದೆ, ತಾವೇ ಸ್ವತಃ ಮಾಡಿಕೊಂಡದ್ದಾಗಿರುತ್ತವೆ. ಹೀಗಾಗಿ ತಾವೇ ಸ್ವಯಂ ನಿರ್ಧಾರದ ಮೂಲಕ ಮದುವೆ ಮುರಿದು ಹಾಕುವುದು ಸುಲಭ ಎನಿಸುತ್ತದೆ. ಏಕೆಂದರೆ ಸಮಾಜ ಅಥವಾ ಕುಟುಂಬದಿಂದ ಅವರ ಮೇಲೆ ಯಾವುದೇ ಒತ್ತಡ ಇರುವುದಿಲ್ಲ.
ಲಿವ್ ಇನ್ ರಿಲೇಶನ್ ಶಿಪ್ ಕೂಡ ಪ್ರೇಮ ವಿವಾಹದ ಒಂದು ರೂಪವೇ ಆಗಿದೆ. ಮಹಾನಗರಗಳಲ್ಲಿ ಈ ತೆರನಾಗಿ ವಾಸಿಸುವವರ ಸಂಖ್ಯೆ ಹೆಚ್ಚುತ್ತ ಹೊರಟಿದೆ. ಇದರಲ್ಲಿ ಹುಡುಗ ಹುಡುಗಿ ತಮ್ಮ ಕುಟುಂಬದವರಿಗೆ ಯಾವುದೇ ಸೂಚನೆ ಕೊಡದೆಯೇ ಸ್ವೇಚ್ಛೆಯಿಂದ ಜೊತೆ ಜೊತೆಗೆ ಇರುತ್ತಾರೆ. ಜೊತೆ ಜೊತೆಗೆ ಇದ್ದು, ವಿವಾಹ ಬಂಧನದ ಹಾಗೆ ಇಲ್ಲಿ ಯಾವ ಬಂಧನಗಳು ಇರುವುದಿಲ್ಲ. ಸಂಬಂಧ ಮುರಿದು ಬಿದ್ದಾಗ ವಿಚ್ಛೇದನ ಪಡೆಯಲು ಯಾವುದೇ ಕೋರ್ಟ್ಗೆ ಹೋಗುವ ಅವಶ್ಯಕತೆಯೂ ಬೀಳದು. ಬಂಧನರಹಿತ ವಿವಾಹದಲ್ಲಿ ಅವರಿಗೆ ಇದು ಸುಖಕರ ಸಂಬಂಧ ಎನಿಸುತ್ತದೆ. ಇದು ಇಬ್ಬರಲ್ಲಿ ಹೊಂದಾಣಿಕೆ ಇರುವವರೆಗೆ ಸರಿ. ಏಕೆಂದರೆ ಸಮಾಜ ಹಾಗೂ ಕುಟುಂಬದ ಮಾನಸಿಕತೆ ಇದಕ್ಕೆ ಒಪ್ಪಿಗೆ ಕೊಡುವುದಿಲ್ಲ. ಸಂಬಂಧ ಮುರಿದು ಬಿದ್ದಾಗ ಕುಟುಂಬದವರ ಸಹಕಾರ ದೊರೆಯದೆ ಇರುವ ಕಾರಣದಿಂದ ಅವರು ಬಹಳಷ್ಟು ನೋವನ್ನು ಅನುಭವಿಸಬೇಕಾಗುತ್ತದೆ. ಕೆಲವೊಮ್ಮೆ ನೋವಿನ ದುಃಖದಿಂದ ಆತ್ಮಹತ್ಯೆಗೆ ಶರಣಾಗುವುದುಂಟು. ನಟಿ ಪ್ರತ್ಯೂಷಾ ಇದಕ್ಕೊಂದು ಉದಾಹರಣೆ. ಅದಕ್ಕೂ ಮೊದಲು ಜಿಯಾ ಖಾನ್ ಕೂಡ ಇದೇ ನಿರ್ಧಾರ ಕೈಗೊಂಡಿದ್ದಳು.
2005ರಲ್ಲಿ ಹೆಸರಾಂತ ನಟಿ ಖುಷ್ಬೂ ಲಿವ್ ಇನ್ ರಿಲೇಶನ್ ಶಿಪ್ ಮತ್ತು ಮದುವೆಗೂ ಮುನ್ನ ದೈಹಿಕ ಸಂಬಂಧ ಇಟ್ಟುಕೊಳ್ಳುವುದರ ಬಗ್ಗೆ ಒಂದು ಸಂದರ್ಶನದಲ್ಲಿ ಸಮರ್ಥನೆ ಮಾಡಿಕೊಂಡಿದ್ದರು. ಈ ಹೇಳಿಕೆ ನಮ್ಮ ಸಮಾಜ ಹಾಗೂ ಹುಡುಗಿಯರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರ ವಿರುದ್ಧ ಒಟ್ಟು 22 ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು. ಈ ಕುರಿತಂತೆ ಖುಷ್ಬೂ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆ ಕುರಿತಂತೆ ಸುಪ್ರೀಂಕೋರ್ಟ್ ಹೀಗೆ ಹೇಳಿತು, “ಒಬ್ಬ ಮಹಿಳೆ ಹಾಗೂ ಪುರುಷ ಜೊತೆ ಜೊತೆಗೆ ಇರುತ್ತೇನೆಂದರೆ, ಅದಕ್ಕೆ ವಿರೋಧ ಮಾಡುವುದೇಕೆ? ಹೀಗೆ ಮಾಡಿ ಅವರು ಅಪರಾಧ ಎಸಗುವುದೇಕೆ? ಜನರ ಮನೋಭಾವದ ಪ್ರಕಾರ ಇದು ತಪ್ಪಾಗಿರಬಹುದು. ಆದರೆ ಕಾನೂನಿನನ್ವಯ ತಪ್ಪಲ್ಲ,”
ಸಂವಿಧಾನದ ಕಲಂ 21ರಲ್ಲಿ ಕೊಟ್ಟ ಮೂಲಭೂತ ಹಕ್ಕು `ಸ್ವತಂತ್ರರಾಗಿ ಜೀವಿಸುವ ಹಕ್ಕು’ ಅನ್ವಯ ಇದು ಬರುತ್ತದೆ. ಇದು ಅವರ ವೈಯಕ್ತಿಕ ನಿರ್ಧಾರ.ಮೇ 22, 2013 ರಂದು ಸುಪ್ರೀಂ ಕೋರ್ಟ್ ಲವ್ ಮ್ಯಾರೇಜ್ನ ಹಾಗೆ ಲಿವ್ ಇನ್ ರಿಲೇಶನ್ ಶಿಪ್ಗೂ ವೈವಾಹಿಕ ಸಂಬಂಧದ ಮಾನ್ಯತೆ ನೀಡಿತು.
ನಮ್ಮ ಹಿತವನ್ನು ಗಮನದಲ್ಲಿಟ್ಟುಕೊಂಡು ವಿಚ್ಛೇದನ ಪಡೆಯುವ ಕಾನೂನನ್ನು ರೂಪಿಸಲಾಗಿದೆ. ಅದನ್ನು ಬಳಕೆ ಮಾಡಿಕೊಳ್ಳುವ ಬದಲು ದುರ್ಬಳಕೆ ಮಾಡಿಕೊಳ್ಳುವವರ ಪ್ರಮಾಣವೇ ಹೆಚ್ಚು. ಮಾನಸಿಕ ಅಥವಾ ದೈಹಿಕವಾಗಿ ಹಿಂಸೆಯಾದಾಗಲೇ ವಿಚ್ಛೇದನ ಪಡೆಯುವುದು ಸೂಕ್ತ. ಚಿಕ್ಕಪುಟ್ಟ ಸಂಗತಿಗಳಿಗೆ ಮಹತ್ವ ಕೊಟ್ಟು ಅಥವಾ ಮತ್ಯಾರೋ ಇಷ್ಟವಾದರು, ಅಂತ ವಿಚ್ಛೇದನ ಪಡೆಯುವುದರಿಂದ ಯಾವುದೇ ಒಳ್ಳೆಯ ಪರಿಣಾಮ ಗೋಚರಿಸದು. ಮದುವೆ ಹೇಗೆಯೇ ಆಗಲಿ, ಅದರ ಭದ್ರ ಅಡಿಪಾಯ ನಿಮ್ಮ ತಿಳಿವಳಿಕೆ ಹಾಗೂ ಹೊಂದಾಣಿಕೆಯ ಮೇಲೆಯೇ ನಿಂತಿದೆ.
ಪಾಶ್ಚಿಮಾತ್ಯ ದೇಶಗಳಿಗೆ ತದ್ವಿರುದ್ಧ ಎಂಬಂತೆ ನಮ್ಮ ದೇಶದಲ್ಲಿ ಕುಟುಂಬದಿಂದ ಯಾವ ರೀತಿಯ ಸಹಕಾರ ದೊರೆಯುತ್ತೋ , ಅದು ಅದನ್ನು ಯಶಸ್ವಿಗೊಳಿಸಲು ಅವಶ್ಯಕವಾಗಿದೆ.
ಸಾಮಾಜಿಕ ಬಂಧನದ ರೂಪದಲ್ಲಿ ವಿವಾಹ ಅತ್ಯವಶ್ಯಕ. ಯಾವುದೇ ಬಂಧನರಹಿತ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೆ. ಅದಕ್ಕೆ ಯಾವುದೇ ಗುರಿ ಎನ್ನುವುದು ಇರುವುದಿಲ್ಲ.
ತಂದೆತಾಯಿ ತಮ್ಮ ಮಕ್ಕಳ ಭಾವನೆ ಅರಿತು, ಅವರ ಇಷ್ಟವನ್ನು ಸ್ವೀಕರಿಸುತ್ತ ಬೆಂಬಲಕಾರಕ ಪ್ರತಿಕ್ರಿಯೆ ಕೊಡಬೇಕು. ಅವರ ಮಾರ್ಗದರ್ಶನದಲ್ಲಿಯೇ ಮಕ್ಕಳ ವೈವಾಹಿಕ ಜೀವನದಲ್ಲಿ ಸ್ಥಿರತೆ ಮತ್ತು ಶಿಸ್ತಿನ ಕಲ್ಪನೆ ಮಾಡಿಕೊಳ್ಳಬಹುದು
– ಸುನಂದಾ