ಕಥೆ – ಪೂರ್ಣಿಮಾ ಆನಂದ್
“ಈ ಸಂಬಂಧ ಎಲ್ಲ ರೀತಿಯಿಂದಲೂ ಸರಿಹೊಂದುತ್ತದೆ ಅಂತ ನನಗೆ ಅನಿಸುತ್ತಿದೆ. ತನು ಮನೆಗೆ ಬರಲಿ. ಇದನ್ನೇ ಫೈನಲ್ ಮಾಡೋಣ….” ಗಿರೀಶ್‌ಪತ್ನಿ ಸುಧಾಳಿಗೆ ಹೇಳಿದರು.
“ಮೊದಲು ತನು ಹ್ಞೂಂ ಅನ್ನಲಿ. ಸಾಕು ಮಾಡ್ತಾ ಇದ್ದಾಳೆ. ಒಳ್ಳೊಳ್ಳೆ ಸಂಬಂಧಗಳಲ್ಲೂ ಏನಾದರೊಂದು ಕೊಂಕು ಹುಡುಕುತ್ತಾಳೆ… ಒಟ್ಟು ಕುಟುಂಬ ಅಂದರೆ ಸಿಡಿಮಿಡಿ ಮಾಡುತ್ತಾಳೆ. ಅವಳ ಷರತ್ತುಗಳ ಪ್ರಕಾರವೇ ಆಗಬೇಕು ಅಂದರೆ, ಅಂಥ ಸಂಬಂಧವನ್ನೇ ಹೇಗೆ ಎಲ್ಲಿಂದ ಹುಡುಕೋದಕ್ಕೆ ಆಗುತ್ತೆ? ಮೊದಲು ಇವಳು ಹೀಗಿರಲಿಲ್ಲ…. ಎಲ್ಲ ಅವಳ ಸ್ನೇಹಿತೆ ಆ ರಶ್ಮಿ ಇದ್ದಾಳಲ್ಲ ಅವಳಿಂದ ಇದನ್ನೆಲ್ಲಾ ಕಲೀತಾ ಇದ್ದಾಳೆ……” ಸುಧಾ ಬೇಸರದಿಂದ ತಲೆಯ ಮೇಲೆ ಕೈ ಹೊತ್ತು ಕುಳಿತಳು.
“ನಿಜ ಸುಧಾ, ಆ ರಶ್ಮಿ ಹೇಳೋದನ್ನು ಕೇಳಿ ಕೇಳಿ ಹೀಗಾಗಿದ್ದಾಳೆ. ಈಗಿನ ಕಾಲದಲ್ಲಿ ಮಕ್ಕಳಿಗೆ ಸ್ನೇಹಿತರ ಪ್ರಭಾವ ಹೆಚ್ಚಾಗ್ತಾ ಇದೆ. ಸ್ನೇಹಿತರು ಸರಿ ಇಲ್ಲದಿದ್ದರೆ ಹೀಗೇ ಆಗೋದು….” ಎಂದರು ಗಿರೀಶ್. ತಂದೆ ತಾಯಿ ಚಿಂತಿತರಾಗಿ ಗಂಭೀರ ಭಾವದಲ್ಲಿ ಮಾತನಾಡುತ್ತಿರುವಂತೆ, ತನುಜಾ ಆಫೀಸ್‌ನಿಂದ ಮನೆಗೆ ಬಂದಳು. ಖುಷಿಯಾಗಿ ಬಂದವಳಿಗೆ ಮನೆಯ ವಾತಾವರಣ ಕಂಡು ಬೆಚ್ಚುವಂತಾಯಿತು. ಕೊಂಚ ಸಾವರಿಸಿಕೊಂಡು ನಗುತ್ತಾ, “ಮತ್ತೆ ಯಾವುದಾದರೂ ಸಂಬಂಧದ ಪ್ರಸ್ತಾಪ ಬಂದಿದೆಯಾ?” ಕೇಳಿದಳು.
ಅವಳು ಮಾತನಾಡಿದ ರೀತಿ ಕಂಡು ಇಬ್ಬರಿಗೂ ನಗು ಬಂದಿತು. ಸುಧಾ ಒಳಗೆ ಹೋಗಿ ಕಾಫಿ ತಂದಳು. ಮೂವರು ಜೊತೆಯಾಗಿ ಕುಳಿತು ಕಾಫಿ ಕುಡಿದರು. ಕುಡಿದ ಲೋಟವನ್ನು ಕೆಳಗಿರಿಸುತ್ತಾ ಸುಧಾ ಮಗಳಿಗೆ, “ನೋಡು ತನು, ಈ ಸಂಬಂಧ ಸರಿಯಾಗಿ ಹೊಂದುತ್ತಿದೆ. ಹುಡುಗನ ತಂದೆ ತಾಯಿ ತಮ್ಮ ದೊಡ್ಡ ಮಗ ಮತ್ತು ಸೊಸೆಯೊಂದಿಗೆ ದಾವಣಗೆರೆಯಲ್ಲಿದ್ದಾರೆ. ಚಿಕ್ಕ ಮಗ ಬೆಂಗಳೂರಿನಲ್ಲಿ ಒಂದು ಫಾರ್ಮಸಿ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್‌ಆಗಿದ್ದಾರೆ. ನೋಡು ಈ ಸಂಬಂಧವನ್ನು ಒಪ್ಪಿಕೋ,” ಎಂದರು. ತನುಜಾ ಒಂದು ನಿಮಿಷ ಯೋಚಿಸಿ ನಗುತ್ತಾ, “ಸರಿ. ಅವರು ಅಲ್ಲಿ ಒಬ್ಬರೇ ಇರುತ್ತಾರೆ ತಾನೇ?” ಕೇಳಿದಳು. “ಹೌದು….”
“ಹಾಗಿದ್ದರೆ ಓ.ಕೆ. ಆದರೆ ಅವರ ಅಪ್ಪ, ಅಮ್ಮ ಮತ್ತೆ ಮತ್ತೆ ಬೆಂಗಳೂರಿಗೆ ಬರುತ್ತಾ ಇರಬಾರದು ಅಷ್ಟೇ….” ಎಂದಳು.
“ಏನು ಮಾತು ಅಂತ ಆಡುತ್ತೀಯ ತನು… ಅವರ ಮನೆಗೆ ಅವರು ಬರಬಾರದು ಅಂದರೆ ಹೇಗೆ? ಏನಾಗಿದೆ ನಿನಗೆ? ಏನು ಬುದ್ಧಿ ಕಲಿತಿದ್ದೀಯ? ಮದುವೆ ಅಂದರೆ ಕೇವಲ ಗಂಡ ಹೆಂಡತಿಯ ಸಂಬಂಧವಷ್ಟೇ ಅಲ್ಲ. ಬಾಕಿ ಸಂಬಂಧಗಳೂ ಅದರ ಜೊತೆ ಇರುತ್ತದೆ. ಅವುಗಳಲ್ಲೂ ಒಂದು ತರಹದ ಹಿತ ಇರುತ್ತದೆ. ಈಗ ನಮ್ಮನ್ನೇ ನೋಡು…. ಈ ದೂರದ ಊರಿಗೆ ಬಂದು ನಮ್ಮ ಎಲ್ಲ ಸಂಬಂಧಗಳೂ ಬಿಟ್ಟುಹೋದವು. ಯಾರಾದರೂ ಹಿರಿಯರು ನಮ್ಮ ಜೊತೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಈಗಲೂ ಅಂದುಕೊಳ್ಳುತ್ತೇವೆ….” ಎಂದರು ಕೋಪದಿಂದ.
“ಇಲ್ಲ ಅಮ್ಮ…. ನನಗೆ ಭಯ ಆಗುತ್ತೆ. ರಶ್ಮಿ ಹೇಳುತ್ತಿದ್ದಳು…….”
ಸುಧಾ ಅವಳ ಮಾತನ್ನು ಅರ್ಧದಲ್ಲೇ ತಡೆದು ಕೋಪದಿಂದ ಎಂದು ನಿಂತು, “ಆ ಹುಡುಗಿ ವಿಷಯ ನನಗೆ ಹೇಳಬೇಡ…. ನಮ್ಮ ಒಳ್ಳೆಯ ಮಗಳ ಬುದ್ಧಿಯನ್ನು ಕೆಡಿಸಿಬಿಟ್ಟಿದ್ದಾಳೆ ಅವಳು….. ಮೊದಲು ನೀನು ಜಾಯಿಂಟ್ ಫ್ಯಾಮಿಲಿ ಅಂದರೆ ಇಷ್ಟಪಡುತ್ತಿದ್ದೆ. ಆದರೆ ಆ ರಶ್ಮಿ ನೆಗೆಟಿವ್ ಪಾಯಿಂಟ್ಸ್ ಹೇಳಿ ಹೇಳಿ ನಿನ್ನ ತಲೆ ಕೆಡಿಸಿದ್ದಾಳೆ…….” ಎಂದಳು.
ತನುಜಾಳಿಗೂ ಕೋಪ ಬಂದಿತು. ಅವಳು ತನ್ನ ಕಾಲು ಅಪ್ಪಳಿಸುತ್ತಾ ತನ್ನ ರೂಮಿಗೆ ಹೊರಟುಹೋದಳು. ಸುಧಾ ಮತ್ತು ಗಿರೀಶ್‌ಮಗಳು ಹೋದತ್ತಲೇ ದಿಟ್ಟಿಸುತ್ತಾ ಕುಳಿತರು.
ತನುಜಾಳ ಬೆಸ್ಟ್ ಫ್ರೆಂಡ್ ರಶ್ಮಿಯ ವಿವಾಹ 6 ತಿಂಗಳ ಹಿಂದೆ ನಡೆದಿತ್ತು. ಅವಳ ಪತಿ ಆನಂದ್ ಮೈಸೂರಿನಲ್ಲಿ ತಂದೆ ತಾಯಿಯರ ಜೊತೆ ಇದ್ದ. ಅಲ್ಲಿಯೇ ಒಂದು ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಒಳ್ಳೆಯ ಸಮೃದ್ಧ ಕುಟುಂಬ. ರಶ್ಮಿಯೂ ಆಫೀಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಗೆಳತಿಯರು ದಿನ ಚಾಟ್ ಮಾಡುತ್ತಿದ್ದರು. ರಜಾ ದಿನಗಳಲ್ಲಿ ಫೋನ್‌ನಲ್ಲಿ ಅವರು ಆಡುತ್ತಿದ್ದ ಮಾತುಗಳು ಸುಧಾಳ ಕಿವಿಗೂ ಬೀಳುತ್ತಿದ್ದವು. ರಶ್ಮಿ ತನ್ನ ಅತ್ತೆ ಮಾವನ ಬಗ್ಗೆ, ಗಂಡನ ಬಗ್ಗೆ ಮಾಡುತ್ತಿದ್ದ ಟೀಕೆಗೆ ತನುಜಾಳ ಪ್ರತಿಕ್ರಿಯೆಯನ್ನು ಕೇಳಿ ಕೇಳಿ ಸುಧಾಗೆ ಸಿಟ್ಟು ಬರುತ್ತಿತ್ತು. ತನ್ನ ಗೆಳತಿಯ ಬಗ್ಗೆ ಯಾವ ಮಾತನ್ನೂ ಕೇಳಲು ತನುಜಾ ಸಿದ್ಧಳಿರಲಿಲ್ಲ.
ಎಲ್ಲ ವಿಷಯಗಳನ್ನು ತಾಯಿಯೊಡನೆ ಹಂಚಿಕೊಳ್ಳುವುದು ತನುಜಾಳ ಸ್ವಭಾವ. ಆದ್ದರಿಂದ ಅವಳು ತಾನಾಗಿ ರಶ್ಮಿಯ ವಿಷಯ ಹೇಳುತ್ತಿದ್ದಳು. `ಬೆಳಿಗ್ಗೆಯಿಂದ ರಶ್ಮಿಯ ಮೂಡ್‌ಸರಿಯಿಲ್ಲ. ಮಾರ್ನಿಂಗ್ ವಾಕ್‌ಗೆ ಅಂತ ಆನಂದ್ ಅವಳನ್ನು ಎಬ್ಬಿಸಿಬಿಟ್ಟಿದ್ದಾರೆ. ಅವಳಿಗೆ ಇನ್ನೂ ಮಲಗಿರಬೇಕು ಅಂತ ಇಷ್ಟ ಇತ್ತು. ಪಾಪ, ಅವಳು ತನ್ನಿಷ್ಟ ಬಂದ ಹಾಗೆ ಮಲಗೋ ಹಾಗೂ ಇಲ್ಲ….’
ಒಮ್ಮೆ ತನುಜಾ , “ರಶ್ಮಿಯ ಅತ್ತೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಂತೆ. ಹೀಗಾಗಿ ಅದೇ ಬೋರಿಂಗ್ ಟಿಫನ್ ತಿಂದು ತಿಂದೂ ರಶ್ಮಿಗೆ ಬೇಜಾರಾಗಿಬಿಟ್ಟಿದೆ,” ಹೇಳಿದಳು.
“ಅತ್ತೆಯೇ ತಿಂಡಿಯ ಕೆಲಸ ಮಾಡುತ್ತಾರಾ?” ಸುಧಾ ಕೇಳಿದಳು.
“ಹೌದು ರಶ್ಮಿ ಆಫೀಸ್‌ಗೆ ಹೋಗಬೇಕಲ್ಲ. ಆದ್ದರಿಂದ ಅವರೇ ಮನೆಯ ಎಲ್ಲ ಕೆಲಸಗಳನ್ನೂ ನೋಡಿಕೊಳ್ಳುತ್ತಾರೆ. ಅವರಿಗೆ ಅಡುಗೆಯವರು ಇದ್ದಾರೆ. ಅವಳ ಅತ್ತೆಯೇ ಜೊತೆಯಲ್ಲಿ ನಿಂತು ತಿಂಡಿ, ಅಡುಗೆ ಮಾಡಿಸುತ್ತಾರೆ.”
“ಹಾಗಿದ್ದರೆ ರಶ್ಮಿಗೆ ಖುಷಿಯಾಗಬೇಕು. ಇದರಲ್ಲಿ ದೂರುವಂಥದ್ದು ಏನಿದೆ?”
“ಖುಷಿ ಎಲ್ಲಮ್ಮಾ… ಅವಳಿಗೆ ಆ ಊಟ, ತಿಂಡಿ ಇಷ್ಟ ಆಗೋದಿಲ್ಲ. ಆಫೀಸ್‌ನಲ್ಲಿ ಅದನ್ನು ಯಾರಿಗಾದರೂ ಕೊಟ್ಟು, ತನಗೆ ಬೇಕಾದ್ದನ್ನು ಆರ್ಡರ್‌ಮಾಡಿ ತರಿಸಿಕೊಂಡು ತಿನ್ನುತ್ತಾಳೆ ಪಾಪ…”
“ಇದರಲ್ಲಿ ಪಾಪ ಅನ್ನುವಂಥದ್ದು ಏನಿದೆ? ಅವಳ ಅತ್ತೆ ಹೆಲ್ದಿ ಫುಡ್‌ಮಾಡಿಕೊಡುತ್ತಾರಲ್ಲ…. ಅದಕ್ಕೆ ಸಂತೋಷಪಡಬೇಕು.”
ತನುಜಾ ಕೋಪದಿಂದ, “ನೀನು ಅವಳ ಬೇಸರವನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ…..” ಎಂದಳು.
“ಇಲ್ಲಿ ಬೇಸರ ಪಟ್ಟುಕೊಳ್ಳುವುದಕ್ಕೆ ಏನಿದೆ? ಇಲ್ಲದ ಕಥೆ ಹೇಳಿ ನಿನ್ನ ಟೈಮ್ ಮತ್ತು ಬುದ್ದಿ ಎರಡನ್ನೂ ಹಾಳು ಮಾಡುತ್ತಿದ್ದಾಳೆ ಆ ಹುಡುಗಿ.”
ತನುಜಾ ಕೋಪಗೊಂಡು ಎರಡು ದಿನ ರಶ್ಮಿಯ ವಿಷಯವಾಗಿ ತಾಯಿಯೊಡನೆ ಏನೂ ಹೇಳಲಿಲ್ಲ. ಆದರೆ ಅಭ್ಯಾಸಾನುಸಾರವಾಗಿ ಮೂರನೆಯ ದಿನ ಮತ್ತೆ ಮಾತು ಆರಂಭಿಸಿದಳು, “ಆನಂದ್‌ನ ನೆಂಟರೆಲ್ಲ ಮೈಸೂರಿನಲ್ಲೇ ಇದ್ದಾರಂತೆ ಒಂದಲ್ಲ ಒಂದು ಫಂಕ್ಷನ್ ಇದ್ದೇ ಇರುತ್ತದೆ. ದೂರದ ಸಂಬಂಧ ಹೇಳಿಕೊಂಡು ಒಬ್ಬರಲ್ಲ ಒಬ್ಬರು ಮನೆಗೆ ಬರುತ್ತಲೇ ಇರುತ್ತಾರೆ. ಪಾಪ, ರಶ್ಮಿಗೆ ಸಾಕಾಗಿ ಹೋಗುತ್ತದೆ.” ಇದಕ್ಕೆ ಸುಧಾ ಏನೂ ಹೇಳಲಿಲ್ಲ. ರಶ್ಮಿಯ ವಿಷಯ ಕೇಳಿ ಕೇಳಿ ಅಳ ತಲೆ ಚಿಟ್ಟು ಹಿಡಿದಿತ್ತು. ರಶ್ಮಿಯಿಂದಾಗಿ ತನುಜಾಳ ವಿಚಾರಧಾರೆಯೇ ಬದಲಾಗಿಬಿಟ್ಟಿತ್ತು. ಒಳ್ಳೆಯ ಸ್ನೇಹಮಯ ಮಾನಸಿಕತೆಯ ಜಾಗವನ್ನು ನಕಾರಾತ್ಮಕ ಆಲೋಚನಾ ಭಾವನೆ ಆಕ್ರಮಿಸಿಬಿಟ್ಟಿತ್ತು. ಕೆಲವು ದಿನಗಳ ನಂತರ ತನುಜಾಳ ಅದೇ ಸಂಬಂಧದ ಪ್ರಸ್ತಾಪ ಮುಂದುವರಿಯಿತು. ರಾಜನ್‌ಮತ್ತು ತನುಜಾರ ಭೇಟಿ, ಮಾತುಕತೆ ಎಲ್ಲ ನಡೆದು ಪರಸ್ಪರ ಒಪ್ಪಿಕೊಂಡರು. ರಾಜನ್‌ಬೆಂಗಳೂರಿನಲ್ಲಿ ಒಬ್ಬನೇ ಇದ್ದುದರಿಂದ ಅವನ ತಂದೆ ತಾಯಿಯರಿಗೆ ಬೇಗನೆ ಮದುವೆ ಮಾಡಬೇಕೆಂಬ ಅಭಿಲಾಷೆ ಇತ್ತು. ಎಲ್ಲ ಸುಸೂತ್ರವಾಗಿ ನಡೆದು ವಿವಾಹ ಕಾರ್ಯ ವಿಜೃಂಭಣೆಯಿಂದ ನೆರವೇರಿತು.
ರಶ್ಮಿ ತನ್ನ ಪತಿಯ ಜೊತೆ ಮದುವೆಗೆ ಬಂದಿದ್ದಳು. “ನಿನ್ನದು ಒಳ್ಳೆಯ ಅದೃಷ್ಟ ಬಿಡು. ಅರಸನ ಅಂಕೆ ಇಲ್ಲ, ದೆವ್ವದ ಕಾಟವಿಲ್ಲ ಎಂಬಂತೆ ಅತ್ತೆ ಮನೆಯವರ ಕಾಟ ಇಲ್ಲದೆ ಹಾಯಾಗಿ ಗಂಡನ ಜೊತೆ ಸಂಸಾರ ಮಾಡಿಕೊಂಡಿರುತ್ತೀಯ. ನಮ್ಮ ಮನೆ ನೋಡು…. ಒಳ್ಳೆ ಸಂತೆಯಲ್ಲಿ ಇದ್ದ ಹಾಗೆ ಇದೆ,” ರಶ್ಮಿ ಮಗಳ ಜೊತೆ ಆಡುತ್ತಿದ್ದ ಮಾತನ್ನು ಕೇಳಿ ಸುಧಾಳಿಗೆ ಕೋಪ ಬಂದಿತ್ತು.
ವಿವಾಹ ವಿಧಿಗಳೆಲ್ಲ ಮುಗಿದು, ಬಂದಿದ್ದ ನೆಂಟರೆಲ್ಲ ಹಿಂದಿರುಗಿದರು. 1 ವಾರದ ನಂತರ ರಾಜನ್ ಮತ್ತು ತನುಜಾ ಬೆಂಗಳೂರಿಗೆ ಹೊರಡಲು ಸಿದ್ಧರಾದರು. ತನುಜಾಳ ಕಂಪನಿಯ ಹೆಡ್ ಆಫೀಸ್ ಬೆಂಗಳೂರಿನಲ್ಲಿಯೇ ಇತ್ತು. ಅವಳು ಮೊದಲೇ ವರ್ಗ ಕೋರಿ ಪತ್ರ ಸಲ್ಲಿಸಿದ್ದರಿಂದ ಅವಳಿಗೆ ಸುಲಭವಾಗಿ ಬೆಂಗಳೂರಿಗೆ ವರ್ಗ ಸಿಕ್ಕಿತು. ಈ ಅವಧಿಯಲ್ಲಿ ರಶ್ಮಿ ಆಗಾಗ ಗೆಳತಿಗೆ ಉಪದೇಶ ಮಾಡುತ್ತಿದ್ದಳು.
“ಬೆಂಗಳೂರಿಗೆ ಬನ್ನಿ ಅಂತ ನಿಮ್ಮತ್ತೆ ಮಾವನನ್ನು ಕರೆಯುವ ಫಾರ್ಮಾಲಿಟಿಯ ಗೋಜಿಗೆ ಹೋಗಬೇಡ. ಆಮೇಲೆ ಎಲ್ಲರೂ ಬಂದು ಝಾಂಡಾ ಹೂಡುತ್ತಾರೆ.”
ತನುಜಾ ಬೆಂಗಳೂರಿನಲ್ಲಿ ರಾಜನ್ ಜೊತೆಗೆ ಹೊಸ ಜೀವನ ಪ್ರಾರಂಭಿಸಿದಳು. ಸಂಸಾರ ಸುಲಲಿತವಾಗಿ ಸಾಗತೊಡಗಿತು. ಇಬ್ಬರೂ ಬೆಳಗ್ಗೆ ಆಫೀಸಿಗೆ ಹೊರಟರೆ ರಾತ್ರಿ ಹಿಂದಿರುಗುತ್ತಿದ್ದರು. ಬೆಳಗ್ಗೆ ರಾಧಮ್ಮ ಬಂದು ಮನೆಗೆಲಸ ಮಾಡುತ್ತಿದ್ದಳು. ತನುಜಾ ಬೆಳಗ್ಗಿನ ತಿಂಡಿ ಮಾಡಿ ಆಫೀಸಿಗೆ ಸಿದ್ಧಳಾಗುತ್ತಿದ್ದಳು. ಇಬ್ಬರೇ ಇದ್ದುದರಿಂದ ಹೆಚ್ಚು ಕೆಲಸ ಇರುತ್ತಿರಲಿಲ್ಲ. ರಾತ್ರಿ ಆಫೀಸ್‌ನಿಂದ ಬಂದು ಅಡುಗೆಗೆ ತೊಡಗುತ್ತಿದ್ದಳು.
ರಾಜನ್‌ಒಂದೆರಡು ಸಲ, “ರಾತ್ರಿ ಅಡುಗೆಗಾಗಿ ಯಾರನ್ನಾದರೂ ಗೊತ್ತು ಮಾಡೋಣ,” ಎಂದ.
“ಆದರೆ ನಾವು ಇಷ್ಟೇ ಹೊತ್ತಿಗೆ ಮನೆಗೆ ಬರುತ್ತೇವೆ ಅಂಥ ಹೇಳೋಕಾಗಲ್ಲ. ಮನೆಯ ಬೀಗದ ಕೈ ಕೊಟ್ಟು ಹೋಗೋದು ಸೇಫ್‌ಅಲ್ಲ,” ಎಂದಳು ತನು.
“ಅದೂ ಸರಿ. ಇಬ್ಬರೂ ಸೇರಿ ಮಾಡೋಣ ಬಿಡು.” ಎಂದ.
ತನುಜಾ ಮತ್ತು ರಶ್ಮಿ ಈಗಲೂ ಪರಸ್ಪರ ಚ್ಯಾಟ್ ಮಾಡುತ್ತಿದ್ದರು. ತನುಜಾಳ ಸ್ವತಂತ್ರ ಜೀವನದ ಅದೃಷ್ಟವನ್ನು ರಶ್ಮಿ ಸದಾ ಕೊಂಡಾಡುತ್ತಿದ್ದಳು. ವಿವಾಹ ಜೀವನದ 5 ತಿಂಗಳುಗಳು ಕಳೆದಿದ್ದ. ರಾಜನ್ 1 ವಾರದ ಟ್ರೇನಿಂಗ್‌ಗಾಗಿ ಸಿಂಗಾಪುರಕ್ಕೆ ಹೋಗಬೇಕಾಯಿತು.
“ಒಬ್ಬಳೇ ಹೇಗೆ ಇರುತ್ತೀಯಾ? ದಾವಣಗೆರೆಯಿಂದ ಅಪ್ಪ ಅಮ್ಮನನ್ನು ಕರೆಸೋಣ…. ಇದುವರೆಗೂ ಮನೆಯಿಂದ ಯಾರೂ ಬಂದೇ ಇಲ್ಲ….” ಎಂದ ರಾಜನ್
“ಇಲ್ಲ…. ಬೇಡ ನಾನೊಬ್ಬಳೇ ಇರೋದಿಲ್ಲ. ರಶ್ಮಿ ಬರಬೇಕು ಅಂತ ಹೇಳುತ್ತಿದ್ದಳು. ಅವಳಿಗೇ ಬರೋದಿಕ್ಕೆ ಹೇಳುತ್ತೇನೆ. ಅತ್ತೆ ಮಾವರನ್ನು ನೀವು ವಾಪಸು ಬಂದ ಮೇಲೆ ಕರೆಸೋಣ,” ರಶ್ಮಿಯ ಮಾತುಗಳಿಂದ ಪ್ರಭಾವಿತಳಾಗಿದ್ದ ತನುಜಾ ಪತಿಯ ಸಲಹೆಯನ್ನು ನವಿರಾಗಿ ತಿರಸ್ಕರಿಸಿದಳು. ರಾಜನ್ ಸುಮ್ಮನಾದ.
ಮರುದಿನವೇ ತನುಜಾ ಗೆಳತಿಗೆ ಫೋನ್ ಮಾಡಿ ವಿಷಯ ತಿಳಿಸಿ, “ಪ್ರೋಗ್ರಾಂ ಗ್ಯಾರಂಟಿ ಇರಲಿ, ಏನೂ ಕಾರಣ ಹೇಳಬೇಡ.”
“ಖಂಡಿತಾ ಬರುತ್ತೇನೆ. ನನಗೂ ಈ ಗಲಾಟೆಯಿಂದ ದೂರ ಹೋಗಬೇಕು ಅನ್ನಿಸಿದೆ. ಒಂದು ವಾರ ನಿನ್ನ ಜೊತೆ ನೆಮ್ಮದಿಯಿಂದ ಇರುತ್ತೇನೆ,” ಎಂದಳು ರಶ್ಮಿ.
ರಾಜನ್ ಸಿಂಗಾಪುರಕ್ಕೆ ಹೊರಟ ದಿನವೇ ಸಾಯಂಕಾಲ ರಶ್ಮಿ ಮೈಸೂರಿನಿಂದ ಬಂದು ತಲುಪಿದಳು. ಬಹಳ ದಿನಗಳ ನಂತರ ಭೇಟಿಯಾದ ಗೆಳತಿಯರು ಸಂತೋಷದಿಂದ ಒಬ್ಬರನ್ನೊಬ್ಬರು ಆಲಂಗಿಸಿಕೊಂಡರು. ಫೋನ್ ಮತ್ತು ಚಾಟಿಂಗ್‌ನ ಸಂಪರ್ಕದಲ್ಲಿದ್ದರೂ ಮುಖತಃ ಮಾತನಾಡಲು ಇಬ್ಬರಿಗೂ ಸಾಕಷ್ಟು ವಿಷಯಗಳಿದ್ದವು. ನಡುರಾತ್ರಿಯಾದರೂ ರಶ್ಮಿಯ ಅತ್ತೆ ಮಾವರ ವಿಷಯ, ಮೈದುನ ನಾದಿನಿಯರ ಬಗೆಗಿನ ಅಣಕದ ಮಾತು, ನೆಂಟರಿಷ್ಟರ ಫಂಕ್ಷನ್‌ನ ಕಥೆಗಳು ನಡೆಯುತ್ತಲೇ ಇದ್ದವು.
ಮಾರನೆಯ ದಿನ ತನುಜಾ ರಜೆ ತೆಗೆದುಕೊಂಡಿದ್ದಳು. ದಿನವಿಡೀ ಇಬ್ಬರೂ ಸಿಟಿ ಸುತ್ತಿದರು. ಮೂವಿ ನೋಡಿದರು. ಶಾಪಿಂಗ್‌ಮಾಡಿದರು. ಅವರು ಮನೆಗೆ ಬಂದಾಗ ರಾತ್ರಿ ತಡವಾಗಿತ್ತು.
“ಓಹ್! ಬೇರೆ ಪ್ರಪಂಚಕ್ಕೆ ಬಂದ ಹಾಗೆ ಅನ್ನಿಸುತ್ತಿದೆ ತನು. ನಿನ್ನ ಮನೆ ಎಷ್ಟು ಶಾಂತವಾಗಿದೆ. ಇಲ್ಲಿಗೆ ಬಂದು ಮನಸ್ಸಿಗೆ ಬಹಳ ಸಂತೋಷವಾಗಿದೆ,” ಎಂದಳು ರಶ್ಮಿ.
ತನುಜಾ ನಸುನಗುತ್ತಾ, “ಅಬ್ಬಾ! ಸುತ್ತಿ ಸುತ್ತಿ ಸಾಕಾಗಿದೆ. ಈಗ ಮಲಗೋಣ. ಬೆಳಗ್ಗೆ ನಾನು ಆಫೀಸಿಗೆ ಹೋಗಬೇಕು. ರಾಧಮ್ಮ ಬಂದು ಕೆಲಸವನ್ನೆಲ್ಲ ಮಾಡುತ್ತಾಳೆ. ನಾನು ತಿಂಡಿ ಜೊತೆಗೆ ನಿನಗೆ ಮಧ್ಯಾಹ್ನದ ಊಟಕ್ಕೆ ರೆಡಿ ಮಾಡುತ್ತೇನೆ. ನೀನು ಆರಾಮವಾಗಿ ಎದ್ದೇಳು….” ಹೇಳಿದಳು.
ಮಾರನೆಯ ದಿನ ತನುಜಾ ಆಫೀಸಿನಲ್ಲಿರುವಾಗ 12 ಗಂಟೆಗೆ ರಶ್ಮಿ ಫೋನ್‌ಮಾಡಿ, “ತನು, ಒಳ್ಳೆ ಮಜವಾಗಿ ನಿದ್ರೆ ಮಾಡಿ ಈಗ ತಾನೇ ಎದ್ದಿದ್ದೇನೆ. ನಿಮ್ಮ ಮನೆ ಎಷ್ಟು ಶಾಂತವಾಗಿದೆ ಕಣೇ. ಒಂದು ಶಬ್ದ ಇಲ್ಲ, ಗಲಾಟೆಯೂ ಇಲ್ಲ,” ಎಂದಳು.
ತನುಜಾ ತನ್ನ ತಾಯಿಗೆ ಫೋನ್‌ಮಾಡಿ ರಶ್ಮಿ ಮನೆಗೆ ಬಂದಿರುವ ವಿಷಯ ತಿಳಿಸಿದಳು.
“ನೋಡು ಎಷ್ಟು ಒಳ್ಳೆಯ ಜನ. ಸೊಸೆಯನ್ನು ಫ್ರೆಂಡ್ ಮನೆಗೆ ಒಂದು ವಾರ ಇರೋದಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಷ್ಟಾದರೂ ರಶ್ಮಿಗೆ ಅವರ ಬಗ್ಗೆ ಆದರ, ಗೌರವ ಏನೂ ಇಲ್ಲ….” ಎಂದಳು ಸುಧಾ.
ರಶ್ಮಿ ಆರಾಮವಾಗಿ ಸ್ನಾನ, ಊಟ ಮಾಡಿದಳು. ಟಿವಿ ನೋಡಿದಳು ಮತ್ತೆ ನಿದ್ರೆ ಮಾಡಿದಳು. ಸಾಯಂಕಾಲ ತನುಜಾ ಮನೆಗೆ ಬಂದ ಮೇಲೆ ಇಬ್ಬರೂ ಕಾಫಿ ಕುಡಿಯುತ್ತಾ ಸಾಕಷ್ಟು ಮಾತನಾಡಿದರು. ರಶ್ಮಿಯ ಮಾತಿಗೆ ಕೊನೆಯೇ ಇರಲಿಲ್ಲ.
ಮಾತಿನ ಮಧ್ಯೆ ರಶ್ಮಿ, “ನೀನೂ ಏನಾದರೂ ಹೇಳು. ನಿಮ್ಮ ಮನೆಯವರ ವಿಷಯ ಏನೂ ಹೇಳಲೇ ಇಲ್ಲವಲ್ಲ….” ಎಂದಳು.
“ಏನು ವಿಷಯ ಹೇಳಲಿ ನಾನು? ಇಲ್ಲಿ ಇರುವವರು ನಾವಿಬ್ಬರೇ. ಬೆಳಗ್ಗೆ ಹೋಗಿ ರಾತ್ರಿ ಬರುತ್ತೇವೆ. ಇಡೀ ವಾರ ಆಫೀಸಿನ ಓಡಾಟವೇ ಆಗುತ್ತದೆ. ವೀಕ್‌ಎಂಡ್‌ನಲ್ಲೇ ಕೊಂಚ ಆರಾಮ ಸಿಗುತ್ತದೆ. ಮನೆಯಲ್ಲಿ ಮಾತನಾಡೋದಕ್ಕೂ ಯಾರೂ ಜೊತೆ ಇಲ್ಲ…” ಎಂದಳು.
“ಹೌದು ತನು, ಇಲ್ಲಿ ನೀವು ನೀವೇ ಇರೋದ್ರಿಂದ ಇಷ್ಟು ಶಾಂತವಾಗಿದೆ. ನಿನಗೆ ಬೇಕಾದ ಹಾಗೆ ಮಾಡಬಹುದು, ತಿನ್ನಬಹುದು, ಮಲಗಬಹುದು, ಅಲ್ಲಿ ನಾನು ಆಫೀಸಿನಿಂದ ಮನೆಯೊಳಗೆ ಕಾಲಿಡುತ್ತಿದ್ದ ಹಾಗೆ ಅತ್ತೆ ಕಾಫಿ, ತಿಂಡಿ ತಗೋ, ಊಟ ಮಾಡು ಅಂತ ತಲೆ ತಿನ್ನುತ್ತಾರೆ. ನನಗಂತೂ ಸಾಕಾಗಿ ಹೋಗಿದೆ. ಪ್ರತಿದಿನ ಏನಾದರೊಂದು ನಡೆಯುತ್ತಲೇ ಇರುತ್ತದೆ.”
ರಶ್ಮಿಯ ಮಾತು ಕೇಳುತ್ತಾ ತನುಜಾ ರಾತ್ರಿಯ ಅಡುಗೆ ಮಾಡಿದಳು. ಮಧ್ಯೆ ಮಧ್ಯೆ ರಶ್ಮಿಗೆ ಪತಿ ಮತ್ತು ಅತ್ತೆ ಮಾವರಿಂದ ಫೋನ್ ಬರುತ್ತಿತ್ತು. ಅವಳು ಫೋನ್‌ನಲ್ಲಿ ಮಾತನಾಡಿ, ಮತ್ತೆ ಗೆಳತಿಯೊಂದಿಗೆ ಮಾತು ಮುಂದುವರಿಸುತ್ತಿದ್ದಳು.
ಗೆಳತಿಯರು ರಾತ್ರಿ ಮಲಗಿದಾಗ ಇಬ್ಬರ ಮನಸ್ಸಿನಲ್ಲೂ ವಿಭಿನ್ನ ಭಾವನೆಗಳು ಮೂಡುತ್ತಿದ್ದವು. ತನ್ನ ಭಾವನೆಗಳ ಪರಿಯನ್ನು ಕಂಡು ತನುಜಾ ತಾನೇ ಚಕಿತಳಾದಳು. ಅವಳ ಮನಸ್ಸಿನಲ್ಲಿ ಒಂದು ಬಗೆಯ ಉದಾಸೀನತೆ ಮೂಡುತ್ತಿತ್ತು.
ರಶ್ಮಿಯ ಮನಸ್ಸಿನಲ್ಲಿ ಅದೇ ಹಿಂದಿನ ಭಾವನೆಗಳು, `ವಾಹ್! ನನ್ನ ಗೆಳತಿಯದು ಎಂಥ ಬೆಸ್ಟ್ ಲೈಫ್. ಮನೆಯಲ್ಲಿ ಸ್ವಲ್ಪ ಗಲಾಟೆ ಇಲ್ಲ. ಏನು ತಿನ್ನಬೇಕು, ಎಲ್ಲಿಗೆ ಹೋಗಬೇಕು ಎನ್ನುವುದರಲ್ಲಿ ಯಾರ ಹಸ್ತಕ್ಷೇಪ ಇಲ್ಲ. ಇಷ್ಟ ಬಂದ ಹಾಗೆ ಮಾಡಬಹುದು…. ಎಷ್ಟು ಲಕ್ಕಿ.’
ತನುಜಾಳ ಮನಸ್ಸು ಬೇರೆಯೇ ಬಗೆಯಲ್ಲಿ ಚಿಂತಿಸುತ್ತಿತ್ತು, `ಇಷ್ಟು ದಿನಗಳು ಕಳೆದರೂ ರಶ್ಮಿ ತನ್ನ ಅತ್ತೆ ಮನೆಯ ಗೋಳನ್ನೇ ಹೇಳುತ್ತಾಳೆ, ಒಬ್ಬಳೇ ಇರೋದು ಚೆನ್ನ ಅಂತಾಳೆ. ಆದರೆ ಒಬ್ಬಳೇ ಇರುವುದರಲ್ಲಿ ಏನು ಸುಖವಿದೆ ಅಂತ ನನಗೆ ಗೊತ್ತಾಗುತ್ತಿಲ್ಲ. ಇಲ್ಲಿ ನಮ್ಮಿಬ್ಬರನ್ನು ಬಿಟ್ಟರೆ ಬೆಳಗ್ಗೆ ಕೆಲಸದವಳ ಮುಖ ನೋಡುತ್ತೇವೆ ಅಷ್ಟೆ. ಅವಳು ಯಾಂತ್ರಿಕವಾಗಿ ತನ್ನ ಕೆಲಸ ಮುಗಿಸಿ ಹೊರಟುಹೋಗುತ್ತಾಳೆ. ನಮ್ಮ ಬಗ್ಗೆ ಯೋಚನೆ ಮಾಡುವವರು ಇಲ್ಲಿ ಯಾರೂ ಇಲ್ಲ.
`ಅಮ್ಮನ ಮನೆಯಲ್ಲೂ ನಾವು ಮೂವರೇ ಇದ್ದೆವು. ನನಗೆ ಮೊದಲೆಲ್ಲ ಒಟ್ಟು ಕುಟುಂಬಕ್ಕೆ ಸೊಸೆಯಾಗಿ ಹೋಗಬೇಕು ಅಂತ ಎಷ್ಟು ಆಸೆ ಇತ್ತು. ಈಗ ವೀಕ್‌ಎಂಡ್‌ಗೆ ಮಾಲ್ ಅಥವಾ ಮೂವಿಗೆ ಹೋಗಿ ಕಾಲ ಕಳೆಯುತ್ತೇವೆ. ಇಲ್ಲಿ ನಮ್ಮವರು ಅಂತ ಯಾರೂ ಇಲ್ಲ. ಇಂತಹ ಒಂಟಿ ಸಂಸಾರದಲ್ಲಿ ಏನು ಸುಖವಿದೆ ಅಂತ ರಶ್ಮಿ ಇದಕ್ಕೆ ಹಾತೊರೆಯುತ್ತಾಳೆ…. ಮೈದುನನ ತಮಾಷೆಯ ಮಾತುಗಳು, ನಾದಿನಿಯ ನಗೆಚಟಾಕಿ, ಅತ್ತೆ ಮಾವಂದಿರ ಭಯ ಮತ್ತು ಅವರ ಸ್ನೇಹಪೂರ್ಣ ರಕ್ಷಣೆ, ಇವೆಲ್ಲ ಇಲ್ಲದಿರುವ ಈ ಒಂಟಿ ಸಂಸಾರದಲ್ಲಿ ಏನು ಲಾಭವಿದೆ….?
‘ಇಬ್ಬರು ಗೆಳತಿಯರೂ ಪರಸ್ಪರರ ಜೀವನದ ಬಗ್ಗೆಯೇ ಯೋಚಿಸುತ್ತಿದ್ದರು. ಆದರೆ ತನುಜಾ ಮನಸ್ಸಿನಲ್ಲಿಯೇ ತೀರ್ಮಾನಿಸಿದಳು. `ಬೆಳಗ್ಗೆಯೇ ದಾವಣಗೆರೆಗೆ ಫೋನ್ ಮಾಡಿ ಅತ್ತೆ ಮನೆಯಿಂದ ಯಾರಾದರೂ ಬರುವ ಹಾಗೆ ಹೇಳಬೇಕು,’ ಅವಳಿಗೆ ಜೀವನದಲ್ಲಿ ಇತರೆ ಸಂಬಂಧಗಳ ಮಾಧುರ್ಯವನ್ನು ಅನುಭವಿಸುವ ಮನಸ್ಸು ಬಂದಿತ್ತು. ಯೋಚಿಸುತ್ತಲೇ ಅವಳು ರಶ್ಮಿಯತ್ತ ನೋಡಿದಳು. ಅವಳೂ ಇತ್ತ ಕಡೆ ನೋಡುತ್ತಿದ್ದಳು. ಇಬ್ಬರ ದೃಷ್ಟಿ ಸೇರಿದಾಗ ಇಬ್ಬರೂ ನಕ್ಕುಬಿಟ್ಟರು.
“ಏನು ಯೋಚಿಸುತ್ತಿದ್ದೀಯಾ?” ರಶ್ಮಿ ಕೇಳಿದಳು.
“ನಿನ್ನ ವಿಷಯವೇ…. ಮತ್ತೆ ನೀನು….?”
“ನಿನ್ನ ಬಗ್ಗೆ….” ಇಬ್ಬರೂ ಮತ್ತೆ ನಕ್ಕರು.
ಆದರೆ ತನುಜಾಳ ನಗುವಿನಲ್ಲಿ ಒಂದು ರಹಸ್ಯಮಯ ಭಾವವಿತ್ತು. ಅದು ರಶ್ಮಿಯ ತಿಳಿವಿನ ಪರಿಧಿಯಲ್ಲಿರಲಿಲ್ಲ.