ಕಥೆ - ಕರುಣಾ ಶರ್ಮ
ನಿತೀಶ್ ಬೆಳಗ್ಗೆ ಇಷ್ಟು ಬೇಗನೇ ಎದ್ದಿದ್ದು ನನಗೆ ಆಶ್ಚರ್ಯವಾಯಿತು. ನಿನ್ನೆ ತಾನೇ ಅವನ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿದಿದೆ. ತುಂಬಾ ಹೊತ್ತು ಮಲಗ್ತಾನೆ ಅಂತ ನನಗನ್ನಿಸಿತು. ತಿಂಗಳುಗಟ್ಟಲೆ ಅವನು ಹಗಲೂ ರಾತ್ರಿ ಎನ್ನದೇ ಓದುವುದರಲ್ಲಿ ಮಗ್ನನಾಗಿದ್ದ. ಇಷ್ಟು ದೊಡ್ಡ ಹೊರೆ ತಲೆಯಿಂದ ಇಳಿದಿದೆ. ಪರೀಕ್ಷೇಲೂ ಚೆನ್ನಾಗಿ ಮಾಡಿದಾನೆ. ಆದರೆ ಬೆಳಗ್ಗೇನೆ ಬೇಗ ಎದ್ದು ಏನೋ ತೊಂದರೆಯಲ್ಲಿರುವಂತೆ ಬಂದು ಕುಳಿತ. ನಾನು ಕಾಫಿ ಕುಡೀತಾ ಪೇಪರ್ ಓದುತ್ತಿದ್ದೆ.
``ಏನಾಯ್ತು ನಿತೀಶ್, ಇಷ್ಟು ಬೇಗ ಎದ್ದುಬಿಟ್ಟಿದ್ದೀಯ? ಏನೋ ಚಿಂತೆ ಮಾಡ್ತಿದೀಯ?'' ನಾನು ಕೇಳಿದೆ.
``ನಮ್ಮ ಪ್ರೋಗ್ರಾಂ ಎಲ್ಲಾ ಹಾಳಾಯ್ತು, ಪರೀಕ್ಷೆ ಮುಗಿದಿದೆ. ಇವತ್ತು ನಾವೆಲ್ಲಾ ಸ್ನೇಹಿತರು ಸೇರಿಕೊಂಡು ಸಿನಿಮಾ ನೋಡೋಣ, ಸುತ್ತಾಡೋಣ, ಹೋಟೆಲಲ್ಲಿ ಚೆನ್ನಾಗಿ ತಿಂದು ಇಡೀ ದಿನ ಮಜವಾಗಿ ಕಾಲ ಕಳೆಯೋಣ ಅಂತ ಅಂದುಕೊಂಡಿದ್ದೆ. ಆದರೆ ಇವತ್ತು ಬಂದ್ ಅಂತೆ.''
``ನೀನು ಸರಿಯಾಗಿ ಹೇಳಿದೆ. ಪೇಪರಲ್ಲೂ ಬರೀ ಇದೇ ವಿಷಯ ತುಂಬಿದೆ. ಇಂದು ಎಲ್ಲಾ ಅಂಗಡಿಗಳನ್ನೂ ಮುಚ್ಚುತ್ತಾರಂತೆ. ಹೋದ ಸಲದ ಹಾಗೆ ದಂಗೆ, ಬೆಂಕಿ ಹಚ್ಚೋದು, ಲೂಟಿ ಆಗದೇ ಇರಲಿ ಅಂತ ಅಲ್ಲಲ್ಲಿ ಹೆಚ್ಚುವರಿ ಪೊಲೀಸರನ್ನು ನಿಲ್ಲಿಸಿದ್ದಾರಂತೆ. ಆಟೋ ಮತ್ತು ಖಾಸಗಿ ಬಸ್ಸಿನವರು ಕೂಡ ಬಂದ್‌ಗೆ ಬೆಂಬಲ ಕೊಡ್ತಾರಂತೆ.''
``ಈಗ ತಾನೇ ಮೋಹನನ ಫೋನ್ ಬಂದಿತ್ತು. ಹೊರಗೆ ಹೇಗೆ ಹೋಗೋದು ಎಲ್ಲಿಗೆ ಹೋಗೋದು? ಅಂತ ಕೇಳ್ತಾ ಇದ್ದ. ಅಮ್ಮಾ, ಎಷ್ಟು ತಿಂಗಳಿಂದ ಪುಸ್ತಕಗಳಲ್ಲೇ ಮುಳುಗಿದ್ದೆ. ಪರೀಕ್ಷೆ ಹೆದರಿಕೆ ಬೇರೆ ಇತ್ತು. ಈಗ ಫ್ರೀ ಆಗಿದೀವಿ ಅಂದರೆ ಇದು ಬೇರೆ ಶುರುವಾಗಿದೆ.''
ನಿತೀಶ್ ಬೇಸರದಿಂದಿದ್ದ. ಅದನ್ನು ನೋಡಿ ನನಗೂ ಬೇಜಾರಾಯಿತು. ಕಳೆದ ಕೆಲವು ತಿಂಗಳಿಂದ ನನಗೂ ಬೋರ್ ಆಗಿತ್ತು. ಇವತ್ತು ಹೊರಗೆ ಎಲ್ಲಾದರೂ ಹೋಗೋದು ಅಂತ ಯೋಚಿಸಿದ್ದೆ. ಏಕೆಂದರೆ ನಿತೀಶ್ ಓದುವುದರಲ್ಲಿ ಮುಳುಗಿದ್ದ. ನಾನು ಅವನ ಊಟತಿಂಡಿ ಇತರ ಅನುಕೂಲಗಳ ಬಗ್ಗೆ ಗಮನ ಕೊಡುವುದರಲ್ಲಿ ಮಗ್ನಳಾಗಿದ್ದೆ. ಒಂದೇ ಸೂರಿನ ಕೆಳಗಿದ್ದರೂ ಅಪರಿಚಿತರಾಗಿ ದೂರ ದೂರವಾಗಿ ಬಹಳ ವ್ಯಸ್ತರಾಗಿದ್ದೆವು. ನಮಗಿಬ್ಬರಿಗೂ ಸ್ವಲ್ಪ ಮನರಂಜನೆ ಬೇಕಾಗಿತ್ತು. ಸಮಯ ಕ್ಷಣ ಕ್ಷಣ ಕಳೆಯುತ್ತಾ ತಾನು ಸರಿಯುತ್ತಿರುವುದರ ಅನುಭವವನ್ನು ನಾವು ಅದರ ಜೊತೆ ನಡೆಯುತ್ತಾ ಹಿಂದೆ ಬೀಳುವಾಗ ಅಥವಾ ಅದನ್ನು ಕಟ್ಟಿಹಾಕಲು ಪ್ರಯತ್ನಿಸಿದಾಗ ಮಾಡಿಕೊಡುತ್ತದೆ. ನಾವು ಈ ಊರಿಗೆ ಬಂದು 3 ವರ್ಷಗಳಾಗಿವೆ. ನನ್ನ ಪತಿಗೆ ಅಸ್ಸಾಂಗೆ ಪೋಸ್ಟಿಂಗ್ ಆರ್ಡರ್‌ಬಂದಾಗ ಈ ವಿಷಯ ನಮ್ಮ ಅರಿವಿಗೆ ಬಂತು. ಸೇನೆಯಲ್ಲಿ ಅಧಿಕಾರಿಯಾಗಿರುವುದರ ಲಾಭವೆನ್ನಿ, ನಷ್ಟಿವೆನ್ನಿ 3 ವರ್ಷಕ್ಕಿಂತ ಹೆಚ್ಚಿಗೆ ಯಾವ ಸ್ಥಳದಲ್ಲೂ ಇರಲು ಬಿಡುವುದಿಲ್ಲ. ಈ ಸಲ ನಾನು ಮತ್ತು ನಿತೀಶ್ ಅವರ ಜೊತೆ ಹೋಗಲಾಗಲಿಲ್ಲ. ಕಾರಣ ಒಂದು, ಅಸ್ಸಾಂನಂತಹ ಜಾಗ, ಎರಡು ನಿತೀಶನ ಎಸ್.ಎಸ್.ಎಲ್.ಸಿ. ಪರೀಕ್ಷೆ. ನಾವಿಬ್ಬರೂ ಅವರಿಲ್ಲದ ಖಾಲಿತನವನ್ನು ಅನುಭವಿಸುತ್ತಿದ್ದೆ. ಇದರಿಂದ ಪರಸ್ಪರ ಸಂತೋಷದಲ್ಲಿ ನಮ್ಮ ದುಃಖವನ್ನು ಮರೆಯಲು ಯತ್ನಿಸುತ್ತಿದ್ದೆವು.