ಕಾರ್ನ್ ರೋಲ್
ಸಾಮಗ್ರಿ : 2 ಕಪ್ ಬೆಂದ ತಾಜಾ ಜೋಳದ ಕಾಳು, 3-4 ಹಸಿಮೆಣಸು, 1 ತುಂಡು ಶುಂಠಿ, 2 ಬೆಂದ ಆಲೂ, 3-4 ಚಮಚ ಕಾರ್ನ್‌ಫ್ಲೇಕ್ಸ್, 2-3 ಚಮಚ ಚೀಸ್ ಸ್ಪ್ರೆಡ್, 2 ಈರುಳ್ಳಿ, 1-2 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಿಟಕಿ ಅರಿಶಿನ, ಕರಿಯಲು ಎಣ್ಣೆ.
ವಿಧಾನ : ಬೆಂದ ಕಾಳನ್ನು ಮಿಕ್ಸಿಯಲ್ಲಿ ನೀರು ಬೆರೆಸದೆ ತಿರುವಿರಿ. ಇದಕ್ಕೆ ಹೆಚ್ಚಿದ ಹಸಿಮೆಣಸು, ಬೇಯಿಸಿ ಮಸೆದ ಆಲೂ, ಉಪ್ಪು, ಖಾರ, ಹೆಚ್ಚಿದ ಶುಂಠಿ ಹಾಕಿ ಪಕೋಡ ಹದಕ್ಕೆ ಬರುವಂತೆ ಕಲಸಿಡಿ. ಡ್ರೈ ಮಿಕ್ಸಿಯಲ್ಲಿ ಕಾರ್ನ್‌ಫ್ಲೇಕ್ಸ್ ನ್ನು ತರಿತರಿಯಾಗಿಸಿ. ಇದಕ್ಕೆ ಚೀಸ್ ಸ್ಪ್ರೆಡ್, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೇಟೊ, ತುಸು ಉಪ್ಪು, ಖಾರ, ಹಾಕಿ ಮಿಶ್ರಣ ಮಾಡಿ. ಚಿತ್ರದಲ್ಲಿರುವಂತೆ ಕಾಳಿನ ಮಿಶ್ರಣವನ್ನು ಸಣ್ಣ ನಿಂಬೆ ಆಕಾರದಲ್ಲಿ ಉಂಡೆಗಳಾಗಿಸಿ. ಮಧ್ಯದಲ್ಲಿ ರಂಧ್ರ ಮಾಡಿ ಅದಕ್ಕೆ 1-1 ಚಮಚ ಕಾರ್ನ್‌ಫ್ಲೇಕ್ಸ್ ಮಿಶ್ರಣ ತುಂಬಿಸಿ. ನಂತರ ಇವನ್ನು ತಟ್ಟಿಕೊಂಡು ಟಿಕ್ಕಿ ತರಹ ಆಕಾರ ಕೊಡಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಬಿಸಿ ಇರುವಾಗಲೇ ಟೊಮೇಟೊ ಸಾಸ್, ಕಾಫಿಟೀ ಜೊತೆ ಸವಿಯಲು ಕೊಡಿ.
ಕ್ರಿಸ್ಪಿ ಆ್ಯಪಲ್
ಸಾಮಗ್ರಿ : 2 ಸೇಬು, 4-5 ಚಮಚ ಕಾರ್ನ್‌ಫ್ಲೇಕ್ಸ್, 2 ಚಮಚ ಬೆಣ್ಣೆ, 1 ದೊಡ್ಡ ಚಮಚ ಅಖರೋಟು, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾಗಿ ಅರ್ಧ ಕಪ್), ಅರ್ಧ ಕಪ್‌ಸಕ್ಕರೆ, 1 ಕಪ್ ಬ್ರೆಂಡ್ ಕ್ರಂಬ್ಸ್, ಕರಿಯಲು ತುಸು ತುಪ್ಪ.
ವಿಧಾನ : ಬೆಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ ಕಾರ್ನ್‌ಫ್ಲೇಕ್ಸ್ ಹಾಕಿ ಹುರಿಯಿರಿ. ಇದಕ್ಕೆ ತುರಿದ ಸೇಬು, ಸಕ್ಕರೆ, ಡ್ರೈ ಫ್ರೂಟ್ಸ್ ಸೇರಿಸಿ ಬಾಡಿಸಬೇಕು. ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಬ್ರೆಡ್ ಕ್ರಂಬ್ಸ್ ಉದುರಿಸಿ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಸಣ್ಣ ಉಂಡೆ ಕಟ್ಟಿ ಚಿತ್ರದಲ್ಲಿರುವಂತೆ ಆಕಾರ ಕೊಡಿ. ನಂತರ ಇವನ್ನು ಒಂದೊಂದಾಗಿ ತುಪ್ಪ ಹಾಕಿ ಶ್ಯಾಲೋ ಫ್ರೈ ಮಾಡಬೇಕು. ಚಿತ್ರದಂತೆ ಅಲಂಕರಿಸಿ ಸವಿಯಲು ಕೊಡಿ.
ಬೇಕ್ಡ್ ಸ್ಪೈಸಿ ಆಲೂ
ಸಾಮಗ್ರಿ : 2-3 ಆಲೂ, 2-3 ಹಸಿಮೆಣಸು, 2 ಚಮಚ ಕ್ರೀಂ, 1 ಚಮಚ ಬೆಣ್ಣೆ, 4 ಚಮಚ ಚೀಸ್, ಅರ್ಧರ್ಧ ಕಪ್ ಹುಳಿ ಮೊಸರು, ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ, ಬೆಳ್ಳುಳ್ಳಿ ಪೇಸ್ಟ್.
ವಿಧಾನ : ಒಂದು ಬೇಸನ್ನಿಗೆ ಮೊಸರು, ಕ್ರೀಂ, ತುರಿದ ಚೀಸ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಡಲೆಹಿಟ್ಟು, ಉಪ್ಪು, ಹೆಚ್ಚಿದ ಹಸಿ ಮೆಣಸು ಹಾಕಿ ಚೆನ್ನಾಗಿ ಗೊಟಾಯಿಸಿ. ಆಲೂ ಸಿಪ್ಪೆ ಹೆರೆದು ಗೋಲಾಕಾರದ ದಪ್ಪ ಬಿಲ್ಲೆಗಳಾಗಿ ಹೆಚ್ಚಿಡಿ. ಇದನ್ನು ಉಪ್ಪು ಹಾಕಿದ ಕುದಿವ ನೀರಿನಲ್ಲಿ 1-2 ನಿಮಿಷ ಬ್ಲ್ಯಾಂಚ್ ಮಾಡಿ. ಬೇಕಿಂಗ್ ಟ್ರೇಯಲ್ಲಿ ಜಿಡ್ಡು ಸವರಿ ಅದರಲ್ಲಿ ಈ ಆಲೂ ಬಿಲ್ಲೆ ಹರಡಿ, ಮೇಲೆ ಚೀಸ್ ಮಿಶ್ರಣ ಹರಡಿರಿ. ಇದನ್ನು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 8-10 ನಿಮಿಷ ಬೇಕ್ ಮಾಡಿ. ನಂತರ ತುಸು ತುಪ್ಪ ಸವರಿ, ಉಪ್ಪುಖಾರ ಉದುರಿಸಿ ಸವಿಯಲು ಕೊಡಿ.
ಜ್ಯಾಮ್ ರಿಸೋಲ್ಸ್
ಸಾಮಗ್ರಿ : 1 ಕಪ್ ಫ್ರೆಶ್ ಬ್ರೆಡ್ ಕ್ರಂಬ್ಸ್, ಅರ್ಧ ಕಪ್ ತೆಂಗಿನ ತುರಿ, ಅದರಲ್ಲಿ ಅರ್ಧ ತುರಿದ ಪನೀರ್, 2-3 ಚಮಚ ಬಾದಾಮಿ ತರಿ, 5-6 ಚಮಚ ಅನಾನಸ್ ಜ್ಯಾಂ, ಕರಿಯಲು ರೀಫೈಂಡ್ ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಬ್ರೆಡ್ ಕ್ರಂಬ್ಸ್, ತೆಂಗಿನ ತುರಿ, ಪನೀರ್, ಬಾದಾಮಿ ತರಿ, ಜ್ಯಾಂ ಎಲ್ಲಾ ಸೇರಿಸಿ ಚೆನ್ನಾಗಿ ಮಸೆದಿಡಿ. ನಂತರ ಇದರಿಂದ ಸಣ್ಣ ಸುರುಳಿ ಮಾಡಿ, ಲಘುವಾಗಿ ಅದುಮಿ, ಫ್ಲಾಟ್ ಆಗಿಸಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಚೀಸ್ ಎನ್ವಲಪ್
ಸಾಮಗ್ರಿ : 1 ಕಪ್ ಮೈದಾ, 4 ಚಮಚ ಬೆಣ್ಣೆ, 5-6 ಚಮಚ ವೈಟ್ ಸಾಸ್, 2 ಈರುಳ್ಳಿ, 1 ದೊಡ್ಡ ಹುಳಿ ಟೊಮೇಟೊ, 1 ಕ್ಯಾಪ್ಸಿಕಂ, 2-3 ಹಸಿ ಮೆಣಸು, 5-6 ಎಸಳು ಬೆಳ್ಳುಳ್ಳಿ, ಅರ್ಧರ್ಧ ಕಪ್ ತುರಿದ ಚೀಸ್, ಬೆಣ್ಣೆ, ತುಸು ಉಪ್ಪು ಮೆಣಸು.
ವಿಧಾನ : ಮೈದಾ, ಉಪ್ಪು ಸೇರಿಸಿ ಪೂರಿ ಹಿಟ್ಟಿನಂತೆ ಮೃದುವಾಗಿ ಹಿಟ್ಟು ಕಲಸಿ ಬೆಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. ಬಾಣಲೆಯಲ್ಲಿ ಉಳಿದ ಬೆಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಹಸಿ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಚೀಸ್ ಹಾಕಿ ಕೈಯಾಡಿಸಿ, ವೈಟ್ ಸಾಸ್ ಬೆರೆಸಿ, ಉಪ್ಪು, ಮೆಣಸು ಹಾಕಿ ಕೆದಕಬೇಕು. ಇದನ್ನು ಕೆಳಗಿಳಿಸಿ ಆರಲು ಬಿಡಿ. ನಾದಿದ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ, ಚೌಕಾಕಾರವಾಗಿ ಲಟ್ಟಿಸಿ. ಇದಕ್ಕೆ ತುಸು ವೈಟ್ ಸಾಸ್ ಮಿಶ್ರಣ ತುಂಬಿಸಿ, ನೀಟಾಗಿ ಲಕೋಟೆಯಾಗಿ ಮಡಿಸಿ, ಅಂಚು ಬಿಡದಂತೆ ಮೈದಾ ಪೇಸ್ಟಿನಿಂದ ಸೀಲ್ ಮಾಡಿ. ನಂತರ ಇವನ್ನು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ ಬೇಕ್ ಮಾಡಿ.
ಕ್ಯೂಟ್ ಪೈ ಪಾಪ್ಸ್
ಸಾಮಗ್ರಿ : 1 ಕಪ್ ಮೈದಾ, 4-5 ಚಮಚ ಬೆಣ್ಣೆ, 5-6 ಚಮಚ ಜ್ಯಾಂ, 10-12 ಅಖರೋಟ್, 15-20 ದ್ರಾಕ್ಷಿ, 10-12 ಗೋಡಂಬಿ, 2 ಚಮಚ ತುರಿದ ಪನೀರ್, ಒಂದಿಷ್ಟು ಟೂತ್ ಪಿಕ್ಸ್.
ವಿಧಾನ : ಮೈದಾಗೆ ನೀರು ಬೆರೆಸಿ ಪೂರಿ ಹಿಟ್ಟಿನಂತೆ ಕಲಸಿ, ಮೈದಾ ಬೆರೆಸಿ ನಾದಿಕೊಳ್ಳಿ. ಒಂದು ಬಟ್ಟಲಿಗೆ ಜ್ಯಾಂ, ತುರಿದ ಪನೀರ್, ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿಗಳು ಎಲ್ಲಾ ಸೇರಿಸಿ. ನಾದಿದ ಹಿಟ್ಟಿನಿಂದ ದೊಡ್ಡ ಉಂಡೆ ಮಾಡಿ, ದಪ್ಪ ಚಪಾತಿ ಲಟ್ಟಿಸಿ. ಇದನ್ನು ಕಟರ್‌ನಿಂದ ಹಾರ್ಟ್ ಶೇಪ್‌ನಲ್ಲಿ ಕತ್ತರಿಸಿ. ಒಂದರ ಮೇಲೆ ಜ್ಯಾಂ ಸವರಬೇಕು. ಅದರ ಮೇಲೆ ಡ್ರೈ ಫ್ರೂಟ್ಸ್ ಸಮನಾಗಿ ಹರಡಿ, ಇನ್ನೊಂದು ಹಾರ್ಟ್ ಶೇಪ್ ಇದರ ಮೇಲೆ ಬರುವಂತೆ ಕವರ್ ಮಾಡಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿ 180 ಡಿಗ್ರಿ ಶಾಖದಲ್ಲಿ ಓವನ್ನಿನಲ್ಲಿ ಇವನ್ನು 8-10 ನಿಮಿಷ ಬೇಕ್ ಮಾಡಿ. ಹೊರ ತೆಗೆದ ಮೇಲೆ ಉಳಿದ ಗೋಡಂಬಿ ದ್ರಾಕ್ಷಿಗಳಿಂದ ಅಲಂಕರಿಸಿ ಸವಿಯಲು ಕೊಡಿ.
ಹೆಸರುಬೇಳೆ ಟಿಕ್ಕಿ
ಸಾಮಗ್ರಿ : 1 ಕಪ್ ನೆನೆಸಿದ ಹೆಸರುಬೇಳೆ, 2-3 ಹಸಿಮೆಣಸು, 2 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, 1 ಪುಟ್ಟ ಕ್ಯಾಪ್ಸಿಕಂ, 1-2 ಟೊಮೇಟೊ, ಅರ್ಧ ಕಪ್ ತುರಿದ ಸೋರೆಕಾಯಿ, ಅಗತ್ಯವಿದ್ದಷ್ಟು ಉಪ್ಪು, ಬಿಳಿ ಮೆಣಸು, ಎಣ್ಣೆ.
ವಿಧಾನ : ಮೊದಲು ಹೆಸರುಬೇಳೆ ತರಿತರಿಯಾಗಿ ರುಬ್ಬಿಡಿ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಕ್ರಮವಾಗಿ ಹೆಚ್ಚಿದ ಹಸಿ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ, ಸೋರೆಕಾಯಿ, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಬಿಳಿ ಮೆಣಸು, ಬೇಳೆ ಹಾಕಿ ಬೇಗ ಬೇಗ ಕೈಯಾಡಿಸಿ. ಕೆಳಗಿಳಿಸಿ ಆರಲು ಬಿಡಿ. ನಂತರ ಸಣ್ಣ ಉಂಡೆ ಮಾಡಿ, ವಡೆಗಳ ಹಾಗೆ ತಟ್ಟಿಕೊಳ್ಳಿ. ಆಮೇಲೆ ಇವನ್ನು ಅಳ್ಳಕ ತವಾಗೆ ಹಾಕಿ ಶ್ಯಾಲೋ ಫ್ರೈ ಮಾಡಬೇಕು. ಆಮೇಲೆ ಟೊಮೇಟೊ ಸಾಸ್ ಜೊತೆ ಬಿಸಿಯಾಗಿ ಸವಿಯಲು ಕೊಡಿ.
ಕೂಲ್ ಮ್ಯಾಂಗೊ ಡಿಲೈಟ್
ಸಾಮಗ್ರಿ : 1 ಕಪ್ ಮಸೆದ ಪನೀರ್, ಅರ್ಧ ಕಪ್ ಮೊಸರು, ಅದರಲ್ಲಿ ಅರ್ಧ ಹಾಲಿನ ಕೆನೆ, 2 ಮಾಗಿದ ಮಾವಿನ ತಿರುಳು, ಅರ್ಧ ಕಪ್ ಪುಡಿ ಸಕ್ಕರೆ, 2 ಚಮಚ ಹೆಚ್ಚಿದ ಅಖರೋಟ್, 8-10 ಬಾದಾಮಿಗಳ ತರಿ.
ವಿಧಾನ : ಮಿಕ್ಸಿಯ ಬ್ಲೆಂಡರ್‌ಗೆ ಪನೀರ್, ಮೊಸರು, ಕೆನೆ, ಸಕ್ಕರೆ, ಮಾವಿನ ತಿರುಳು ಎಲ್ಲಾ ಸೇರಿಸಿ ನೀಟಾಗಿ ಬ್ಲೆಂಡ್ ಮಾಡಿ. ಆಮೇಲೆ ಇದನ್ನು 15-20 ನಿಮಿಷ ಫ್ರೀಝರ್‌ನಲ್ಲಿಟ್ಟು ಸೆಟ್ ಮಾಡಿ. ಮತ್ತೆ ಬ್ಲೆಂಡರ್‌ಗೆ ಹಾಕಿ ಬ್ಲೆಂಡ್ ಮಾಡಿ. ಇದನ್ನು ಡೆಸರ್ಟ್‌ಬೌಲುಗಳಿಗೆ ಹಾಕಿ, ಮೇಲೆ ಅಖರೋಟ್ ಬಾದಾಮಿ ಉದುರಿಸಿ ಸವಿಯಲು ಕೊಡಿ.