ಸ್ಟಫ್ಡ್ ಬೆಂಡೆ

ಸಾಮಗ್ರಿ : 250 ಗ್ರಾಂ ತಾಜಾ ಬೆಂಡೆಕಾಯಿ, 4 ಚಮಚ ಈರುಳ್ಳಿ ಪೇಸ್ಟ್, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 4 ಚಮಚ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಅಮ್ಚೂರ್‌ ಪುಡಿ, ಅರಿಶಿನ ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕರಿಬೇವು.

ವಿಧಾನ : ಬೆಂಡೆಕಾಯಿ ಶುಚಿಗೊಳಿಸಿ, ಮೇಲೆ ಹಾಗೂ ಕೆಳಗಿನ ತುಸು ಭಾಗ ಕತ್ತರಿಸಿ, ಇಡಿಯಾಗಿ ಇಟ್ಟುಕೊಳ್ಳಿ. ನಂತರ ಇವನ್ನು ಉದ್ದುದ್ದಕ್ಕೆ (ಬಿಟ್ಟುಕೊಳ್ಳದಂತೆ) ಸೀಳಿಕೊಂಡು, ನಿಧಾನವಾಗಿ ಒಳಭಾಗದ ಬೀಜ ತೆಗೆದುಬಿಡಿ. ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ಆಮೇಲೆ ಎಲ್ಲಾ ಡ್ರೈ ಮಸಾಲೆ ಹಾಕಿ ಕೈಯಾಡಿಸಿ. ಕಡಲೆಹಿಟ್ಟು, ಉಪ್ಪು ಸಹ ಹಾಕಿ ಕೆದಕಿರಿ. ಇದನ್ನು ಕೆಳಗಿಳಿಸಿ ಆರಲು ಬಿಡಿ. ನಂತರ ಈ ಮಸಾಲೆಯನ್ನು ಸೀಳಿದ ಬೆಂಡೆಕಾಯಿಗಳಿಗೆ ತುಂಬಿಸಿ. ಅದೇ ಬಾಣಲೆಯಲ್ಲಿ ಇನ್ನಷ್ಟು ಎಣ್ಣೆ ಬಿಸಿ ಮಾಡಿ, ಬೆಂಡೆಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದೀಗ ಸ್ಟಫ್ಡ್ ಬೆಂಡೆ ಮಸಾಲೆ ಚಪಾತಿ, ಅನ್ನಕ್ಕೆ ಸೊಗಸಾಗಿರುತ್ತದೆ.

ಸ್ಪೆಷಲ್ ವೆಜ್‌ ಮಂಚೂರಿಯನ್‌

ಸಾಮಗ್ರಿ : 1-1 ಕಪ್‌ ಹೆಚ್ಚಿದ ಎಲೆಕೋಸು, ಕ್ಯಾರೆಟ್‌ ತುರಿ, ಅರ್ಧರ್ಧ ಕಪ್‌ ಹೆಚ್ಚಿದ ಈರುಳ್ಳಿ ತೆನೆ, ಕ್ಯಾಪ್ಸಿಕಂ, ಬೀನ್ಸ್ 1 -2 ಈರುಳ್ಳಿ, 1-2 ಹಸಿ ಮೆಣಸಿನಕಾಯಿ, 1 ಸಣ್ಣ ಚಮಚ ತುರಿದ ಶುಂಠಿ, 4-5 ಚಮಚ ಕಾರ್ನ್‌ಫ್ಲೋರ್‌, ಮೈದಾ, 1-1 ಸಣ್ಣ ಚಮಚ ಬೆಳ್ಳುಳ್ಳಿ, ಶುಂಠಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುಡಿ ಮೆಣಸು, ಸೋಯಾ ಸಾಸ್‌, ರೆಡ್‌ ಚಿಲೀ ಸಾಸ್‌, ವಿನಿಗರ್‌, ಕರಿಯಲು ಎಣ್ಣೆ.

ವಿಧಾನ : ಹೆಚ್ಚಿದ ಎಲ್ಲಾ ತರಕಾರಿಗೆ ಹಸಿ ಮೆಣಸು, ಶುಂಠಿ, ಕಾರ್ನ್‌ಫ್ಲೋರ್‌, ಮೈದಾ, ಉಪ್ಪು, ಸಾಸ್‌, ಕಾಳು ಮೆಣಸಿನ ಪುಡಿ, ತುಸು ನೀರು ಬೆರೆಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಡಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಹಿಡಿದು ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಅದರಲ್ಲಿ ಹೆಚ್ಚಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಒಂದೊಂದಾಗಿ ಎಲ್ಲಾ ಬಗೆಯ ಸಾಸ್‌, ವಿನಿಗರ್‌ ಹಾಕಿ ಕೈಯಾಡಿಸಿ. 1 ಕಪ್‌ ಬೆಚ್ಚನೆ ನೀರಿಗೆ ಉಳಿದ ಮೈದಾ, ಕಾರ್ನ್‌ಫ್ಲೋರ್‌ ಹಾಕಿ ಪೇಸ್ಟ್ ತರಹ ಮಾಡಿ ಇದಕ್ಕೆ ಬೆರೆಸಿಕೊಳ್ಳಿ. ಇದು ಕುದಿಯತೊಡಗಿದಂತೆ ಫ್ರೈ ಮಾಡಿದ ವೆಜ್‌ ಬಾಲ್ಸ್ ಹಾಕಿ ಲಘುವಾಗಿ ಕೆದಕಬೇಕು. ಕೆಳಗಿಳಿಸುವ ಮುನ್ನ ಹೆಚ್ಚಿದ ಈರುಳ್ಳಿ ತೆನೆ ಹಾಕಿ, ಒಮ್ಮೆ ಕೆದಕಿ ಕೆಳಗಿಳಿಸಿ. ಬಿಸಿ ಬಿಸಿಯಾಗಿ ಊಟಕ್ಕೆ ಮೊದಲು ಸರ್ವ್ ‌ಮಾಡಿ.

ಮಿಕ್ಸ್ಡ್ ವೆಜ್‌ ದಂ ಪುಖ್ತ್

ಸಾಮಗ್ರಿ : 5-6 ತೊಂಡೆಕಾಯಿ, 10 ಬೀನ್ಸ್, 1-2 ಕ್ಯಾರೆಟ್‌, 50 ಗ್ರಾಂ ಹೂಕೋಸು, 1 ಆಲೂಗಡ್ಡೆ, 3 ಟೊಮೇಟೊ, 1-2 ಹೆಚ್ಚಿದ ಈರುಳ್ಳಿ, 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 4 ಲವಂಗ, 10 ಕಾಳುಮೆಣಸು, 1-2 ಏಲಕ್ಕಿ, 1-2 ತುಂಡು ಚಕ್ಕೆ, 2 ಲವಂಗದೆಲೆ, 2 ಇಡಿಯಾದ ಒಣ ಮೆಣಸಿನಕಾಯಿ, 1-2 ಚಮಚ ತರಿತರಿಯಾಗಿ ಕುಟ್ಟಿದ ಧನಿಯಾ, ಅರ್ಧ ಚಮಚ ಜೀರಿಗೆ, 4 ಚಮಚ ರೀಫೈಂಡ್‌ಎಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ.

ವಿಧಾನ : ತೊಂಡೆಕಾಯಿ ಉದ್ದಕ್ಕೆ 4 ಭಾಗವಾಗಿ ಸೀಳಿ. ಆಲೂ, ಕ್ಯಾರೆಟ್‌, ಬೀನ್ಸ್ ಸಹ ಉದ್ದಕ್ಕೆ ಹೆಚ್ಚಿಡಿ. ಒಂದು ನಾನ್‌ಸ್ಟಿಕ್‌

ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಎಲ್ಲಾ ಮಸಾಲೆ ಪದಾರ್ಥ ಹಾಕಿ ಹುರಿಯಿರಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಬೆಳ್ಳುಳ್ಳಿ ಶುಂಠಿ ಪೇಸ್ಟ್, ಧನಿಯಾ ಹಾಕಿ ಹುರಿಯಿರಿ. ಆಮೇಲೆ ಉಳಿದ ಹೆಚ್ಚಿದ ತರಕಾರಿ ಹಾಕಿ ಬಾಡಿಸಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಅರಿಶಿನ ಹಾಕಿ ಕೆದಕಬೇಕು. ಸ್ವಲ್ಪ ನೀರು ಚಿಮುಕಿಸಿ, ಮುಚ್ಚಿಟ್ಟು 5 ನಿಮಿಷ ಬೇಯಲು ಬಿಡಿ. ನಂತರ ಕೆದಕಿ ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಳ್ಳಿ. ಬಿಸಿಯಾಗಿ ಅನ್ನ, ಚಪಾತಿ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಹಾಗಲ ಮಸಾಲೆ

ಸಾಮಗ್ರಿ : 250 ಗ್ರಾಂ ತಾಜಾ ಹಾಗಲಕಾಯಿ, ಅರ್ಧ ಕಪ್‌ ಕಡಲೆಬೇಳೆ, 1-2 ಲವಂಗದೆಲೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ ಪುಡಿ, ಅರಿಶಿನ, ಸೋಂಪಿನ ಪುಡಿ, ಗರಂಮಸಾಲ, ಏಲಕ್ಕಿ, ಲವಂಗ, ಕಾಳುಮೆಣಸು, ಟೊಮೇಟೊ ಪ್ಯೂರಿ, ಶುಂಠಿ ಬೆಳ್ಳುಳ್ಳಿ  ಪೇಸ್ಟ್, ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಕರಿಬೇವು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ.

ವಿಧಾನ : ಹಾಗಲಕಾಯಿ ಬಿಲ್ಲೆ ಮಾಡಿಕೊಳ್ಳಿ. ಇದರ ಮೇಲೆ ತುಸು ಉಪ್ಪು, ಅರಿಶಿನ ಉದುರಿಸಿ 1 ತಾಸು ಹಾಗೇ ಬಿಡಿ. ನಂತರ ಇವನ್ನು ಫ್ಯಾನಿನಡಿ ಅರ್ಧ ಗಂಟೆ ಒಣಗಿಸಿ, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಸಣ್ಣ ಕುಕ್ಕರ್‌ನಲ್ಲಿ ಬೇಳೆ ಬೇಯಿಸಿ. ಆರಿದ ಮೇಲೆ  ನೀರು ಬಸಿದು ತರಿತರಿಯಾಗಿ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕಬೇಕು. ನಂತರ ಇದಕ್ಕೆ ಟೊಮೇಟೊ ಪ್ಯೂರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಕರಿದ ಹಾಗಲ ಬಿಲ್ಲೆಗಳು ಹಾಕಿ ಕೆದಕಿರಿ. ಕೊನೆಯಲ್ಲಿ ರುಬ್ಬಿದ ಬೇಳೆ ಸೇರಿಸಿ ಬೆರೆತುಕೊಳ್ಳುವಂತೆ ಮಾಡಿ. ಕೆಳಗಿಳಿಸಿ ನಿಂಬೆಹಣ್ಣು ಹಿಂಡಿಕೊಂಡು, ಕೊ.ಸೊಪ್ಪು, ಪುದೀನಾ ಉದುರಿಸಿ ಬಿಸಿಯಾಗಿ ಅನ್ನ, ರೊಟ್ಟಿ ಜೊತೆ ಸವಿಯಲು ಕೊಡಿ.

ಹೆಸರುಬೇಳೆ ಫ್ರೆಂಚ್‌ ಬೀನ್ಸ್ ಪಲ್ಯ

ಸಾಮಗ್ರಿ : 250 ಗ್ರಾಂ ಫ್ರೆಂಚ್‌ ಬೀನ್ಸ್. 1-2 ಕ್ಯಾರೆಟ್‌, ಅರ್ಧ ಕಪ್‌ ಹೆಸರುಬೇಳೆ, 1-1 ಚಮಚ ಹೆಚ್ಚಿದ ಬೆಳ್ಳುಳ್ಳಿ, ಹಸಿ ಮೆಣಸು, ಶುಂಠಿ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಓಮ, ಕರಿಬೇವು, ತುಂಡರಿಸಿದ 1-2 ಒಣ ಮೆಣಸಿನಕಾಯಿ, 1 ಗಿಟುಕು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ.

ವಿಧಾನ : ಹೆಸರು ಬೇಳೆಯನ್ನು ಲಘುವಾಗಿ ಹುರಿದು, ಹೆಚ್ಚಿದ ಬೀನ್ಸ್, ಕ್ಯಾರೆಟ್‌ ಜೊತೆ ಕನಿಷ್ಠ ನೀರು ಬೇರೆಸಿ ಕುಕ್ಕರ್‌ನಲ್ಲಿ ಬೇಯಿಸಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ತುಂಡರಿಸಿದ ಒಣ ಮೆಣಸು, ಹಸಿ ಮೆಣಸು ಹಾಕಿ ಕೆದಕಬೇಕು. ಆಮೇಲೆ ಕಾಯಿತುರಿ, ಉಪ್ಪು, ಅರಿಶಿನ ಹಾಕಿ ಬೇಗ ಬೇಗ ಕೈಯಾಡಿಸಿ. ಆಮೇಲೆ ನೀರು ಬಸಿದ ಬೇಳೆ, ತರಕಾರಿ ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಕೈಯಾಡಿಸಿ. ಕೊನೆಯಲ್ಲಿ ಉಪ್ಪು, ನಿಂಬೆರಸ ಬೆರೆಸಿ ಕೆಳಗಿಳಿಸಿ. ಈ ಪಲ್ಯ ಅನ್ನ, ಚಪಾತಿ ಎರಡಕ್ಕೂ ಹೊಂದುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ