ನವಜಾತ ಶಿಶುವಿನ ತ್ವಚೆ ಬಹಳ ನಾಜೂಕು ಮತ್ತು ಸಂವೇದನಾಶೀಲ ಗುಣ ಹೊಂದಿರುತ್ತದೆ. ಸೋಪ್, ಶ್ಯಾಂಪೂ, ಡಿಟರ್ಜೆಂಟ್ಸ್, ಎಣ್ಣೆ, ಪೌಡರ್ ಇತ್ಯಾದಿ ಮಾತ್ರವಲ್ಲದೆ, ಬಟ್ಟೆಗಳಲ್ಲಿನ ರಾಸಾಯನಿಕಗಳಿಂದ ಅದರ ತ್ವಚೆಗೆ ಹಾನಿಯಾಗಬಹುದು. ಇದರಿಂದ ಮಗುವಿನ ತ್ವಚೆಯಲ್ಲಿ ಉರಿ, ಡ್ರೈನೆಸ್, ರಾಶೆಸ್ ಇತ್ಯಾದಿ ಸಮಸ್ಯೆಗಳು ಕಾಣಿಸಬಹುದು. ಇದೇ ತರಹ ಸುಗಂಧಯುಕ್ತ ಬೇಬಿ ಪ್ರಾಡಕ್ಟ್ಸ್ ಬಳಸಲು ಹೋಗಬೇಡಿ. ಮಗುವಿನ ತ್ವಚೆಯನ್ನು ಕೋಮಲವಾಗಿರಿಸಲು ಈ ಸಲಹೆಗಳನ್ನು ಅನುಸರಿಸಿ.
ಸ್ನಾನ : ಮಗು ಹುಟ್ಟಿದ ಮೊದಲ ತಿಂಗಳು, ವಾರಕ್ಕೆ 3-4 ಸಲ ಸ್ಪಂಜ್ ಬಾಥ್ ಕೊಡಿ. ಹಾಲು ಕುಡಿಸಿದ ನಂತರ ಬಾಯಿಯನ್ನು ಸ್ಪಂಜ್‌ನಿಂದ ಒರೆಸಿಬಿಡಿ. ಡೈಪರ್ ಬದಲಿಸಿದ ನಂತರ ಸ್ಪಂಜ್‌ನಿಂದ ಚೆನ್ನಾಗಿ ಒರೆಸಬೇಕು. 2ನೇ ತಿಂಗಳು ಮಗುವಿಗೆ ಸ್ನಾನ ಮಾಡಿಸುವಾಗ, ಬೆಚ್ಚಗಿನ ನೀರು ಬಳಸಿ. ಮೈಲ್ಡ್ ಸೋಪ್, ಆ್ಯಂಟಿ ಬ್ಯಾಕ್ಟೀರಿಯಲ್ ಸೋಪುಗಳನ್ನು ಬಳಸಲೇಬೇಡಿ. ಇಲ್ಲದಿದ್ದರೆ ಅವು ಮಗುವಿನ ಸೆನ್ಸಿಟಿವ್ ಸ್ಕಿನ್‌ಗೆ ಹಾನಿ ಮಾಡಬಹುದು. ಸ್ನಾನದ ನಂತರ ಕಾಟನ್ನಿನ ಮೃದು ಟವೆಲ್‌ನಿಂದ ನಿಧಾನವಾಗಿ ಒರೆಸಿರಿ. ಆಗ ಮಗುವಿನ ತ್ವಚೆಗೆ ಹಾನಿ ಆಗುವುದಿಲ್ಲ.
ಪೌಡರ್ ಹಾಕುವಿಕೆ : ಮಕ್ಕಳಿಗಾಗಿಯೇ ತಯಾರಾಗಿರುವ ಟಾಲ್ಕಂ ಪೌಡರನ್ನೇ ಅವರಿಗಾಗಿ ಬಳಸಿರಿ. ಸುಗಂಧಯುಕ್ತ ಅಥವಾ ಇತರ ರಾಸಾಯನಿಕಗಳ ಪೌಡರ್ ಬಳಸದಿರಿ. ಡೈಪರ್ ಏರಿಯಾದಲ್ಲಿ ಹೆಚ್ಚು ಪೌಡರ್ ಉದುರಿಸಬಾರದು.
ಮಸಾಜ್ : ನವಜಾತ ಶಿಶುಗಳು ಬಲು ನಾಜೂಕು. ಆದ್ದರಿಂದ ಅವಕ್ಕೆ ಮಸಾಜ್ ಮಾಡುವ ಮುನ್ನ, ಮಸಾಜ್‌ನ ಟೆಕ್ನಿಕ್, ಎಂಥ ಬೇಬಿ ಆಯಿಲ್ ಬಳಸಬೇಕು, ಎಷ್ಟು ಹೊತ್ತು ಮಸಾಜ್ ಮಾಡಬೇಕು ಹಾಗೂ ಯಾವಾಗ ಮಾಡಬೇಕು ಇತ್ಯಾದಿ ವಿಷಯಗಳನ್ನು ತಿಳಿದಿರಬೇಕು. ಈ ಸಣ್ಣ ಮಕ್ಕಳ ವಿಶೇಷ ಅಗತ್ಯಗಳ ಅನುಸಾರ, ಮಸಾಜ್‌ನ ಬೇರೆ ಬೇರೆ ಟೆಕ್ನಿಕ್ಸ್ ಬಳಸಿಕೊಳ್ಳಿ.
ಮಸಾಜ್‌ನ ಸಾಮಾನ್ಯ ವಿಧಾನ ಬಳಸುವುದೇ ಸರಿ. ಅದನ್ನು ತಾಯಿ ಅಥವಾ ಅಜ್ಜಿ ಮನೆಯಲ್ಲಿಯೇ ಮಾಡುವುದು ಲೇಸು. ಮಕ್ಕಳ ತ್ವಚೆ ಸೆನ್ಸಿಟಿವ್ ಆಗಿರುವುದರಿಂದ ಯಾವ ಎಣ್ಣೆಯಲ್ಲಿ ಕೆಮಿಕಲ್ಸ್ ಬಳಸಲಾಗಿದೆಯೋ ಅಂಥವನ್ನು ಮನೆಗೆ ತರಬೇಡಿ. ಸನ್ ಫ್ಲವರ್ ಆಯಿಲ್ ಮಗುವಿನ ತ್ವಚೆಗೆ ಬಲು ಉಪಕಾರಿ. ಮಗುವನ್ನು ದಪ್ಪ ಟರ್ಕಿ ಟವೆಲ್ ಮೇಲೆ ಮಲಗಿಸಿ ಮೃದುವಾಗಿ ಮಸಾಜ್ ಮಾಡಿ.
ಡೈಪರ್ ನ್ಯಾಪೀಸ್ : ಮಗುವಿಗಾಗಿ ನ್ಯಾಪಿಯ ಆಯ್ಕೆ ಬಲು ಎಚ್ಚರಿಕೆಯಿಂದ ಮಾಡಬೇಕು. ಇದನ್ನು ಕೊಳ್ಳುವಾಗ ಅದರ ಫಿಟಿಂಗ್ಸ್ ಸರಿ ಇದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಅದರ ಹೀರಿಕೊಳ್ಳುವಿಕೆಯ ಗುಣ ಉತ್ತಮವಾಗಿರಬೇಕು. ಅದರ ಫ್ಯಾಬ್ರಿಕ್ಸ್ ಮಗುವಿನ ಸೆನ್ಸಿಟಿವ್ ಸ್ಕಿನ್‌ಗೆ ಹಾನಿ ಮಾಡದಂತಿರಬೇಕು.
ಯಾವುದೇ ಸೀಸನ್ ಇರಲಿ, ಕಾಟನ್ ಯಾ ಲಿನೆನ್ ನ್ಯಾಪಿ ಎಲ್ಲಕ್ಕೂ ಉತ್ತಮ. ಈ ಫ್ಯಾಬ್ರಿಕ್ ಆರ್ದ್ರತೆಯನ್ನು ಬೇಗ ಹೀರಿಕೊಳ್ಳುತ್ತದೆ. ಹಲವು ಬಗೆಯ ಉತ್ತಮ ಗುಣಮಟ್ಟದ ಡಿಸ್‌ಪೋಸೆಬಲ್ ನ್ಯಾಪಿ ಮಾರುಕಟ್ಟೆಯಲ್ಲಿ ಲಭ್ಯ. ನ್ಯಾಪಿಯನ್ನು ಪ್ರತಿ 3-4 ಗಂಟೆಗೆ ಒಮ್ಮೆ ಬದಲಿಸುತ್ತಿರಬೇಕು, ಗರಿಷ್ಠ 6 ಗಂಟೆಗಳಷ್ಟೇ ಎಂದು ನೆನಪಿಡಿ. ಎಷ್ಟು ಬೇಗ ನ್ಯಾಪಿ ಬದಲಿಸುತ್ತೀರೋ ಸೋಂಕಿನ ಬಾಧೆ ಅಷ್ಟು ಕಡಿಮೆ.
ಬಟ್ಟೆಯ ನ್ಯಾಪಿ ಮಗುವನ್ನು ಡ್ರೈ ಕಂಫರ್ಟೆಬಲ್ ಆಗಿಡುತ್ತದೆ. ಇವು ಮೃದುವಾದ ಮೈಕ್ರೋಫೈಬರ್‌ನಿಂದ ತಯಾರಾಗಿದ್ದು, ತೇವಾಂಶ ಹೀರಿಕೊಳ್ಳುವಲ್ಲಿ ಮುಂದು.
ಬಟ್ಟೆ : ಸಣ್ಣ ಮಕ್ಕಳಿಗೆ ಬಟ್ಟೆ ಕೊಳ್ಳುವಾಗ, ಕೇವಲ ಅದರ ಸ್ಟೈಲ್ ಬ್ಯೂಟಿಗೆ ಮಾರುಹೋಗಬೇಡಿ. ಅದು ಸದಾ ಮೃದುವಾಗಿ, ಆರಾಮದಾಯಕ ಆಗಿರುತ್ತದೆ ತಾನೇ ಎಂಬುದನ್ನು ಗಮನಿಸಿ. ಇವು ಒಗೆಯಲಿಕ್ಕೂ ಸುಲಭ ಆಗಿರಬೇಕು.
ಫ್ಯಾಬ್ರಿಕ್ ಎಂದೂ ಮಗುವಿನ ತ್ವಚೆಗೆ ಹಾನಿ ಮಾಡುವಂತೆ ಇರಬಾರದು. ಮಗುವಿಗಾಗಿ ಕಾಟನ್ ಬೆಸ್ಟ್ ಆಯ್ಕೆ. ಆದರೆ ಕಾಟನ್
ಬಟ್ಟೆ ತುಸು ಶ್ರಿಂಕ್ ಆಗುತ್ತವೆ. ಮೇಲ್ಭಾಗ ಹಾಗೂ ಒಳಭಾಗಕ್ಕೆ ಬೇರೆ ಬೇರೆ ಡ್ರೆಸ್ ಕೊಳ್ಳುವ ಬದಲು 2 ಇನ್ ಇರುವಂಥದ್ದನ್ನೇ ಕೊಳ್ಳಿರಿ. ಇವನ್ನು ತೊಡಿಸಲು, ಕಳಚಲು ಸುಲಭ ಆಗಿರಬೇಕು. ಇದರಿಂದ ಚರ್ಮ ಉಜ್ಜಿದಂತೆ ಆಗುವುದಿಲ್ಲ.
ಸೀಸನ್‌ಗೆ ತಕ್ಕಂತೆ ಮಗುವಿಗೆ ಬಟ್ಟೆ ತೊಡಿಸಿ. ಬೇಸಿಗೆಯಲ್ಲಿ ಮಗುವಿಗೆ ತೆಳು ವಸ್ತ್ರ, ಚಳಿಗಾಲದಲ್ಲಿ ಉಣ್ಣೆ ವಸ್ತ್ರ ತೊಡಿಸಬೇಕು. ಇದರಲ್ಲಿ ಟೈಟ್ ರಬ್ಬರ್ ಯಾ ಎಲಾಸ್ಟಿಕ್ ಇರಬಾರದಷ್ಟೆ.
ಹೇಗೆ ಒಗೆಯಬೇಕು? : ಮಗುವಿನ ಸ್ಕಿನ್ ಸೆನ್ಸಿಟಿವ್ ಆದ್ದರಿಂದ, ಸಾಧಾರಣ ಡಿಟರ್ಜೆಂಟ್ಸ್ ಬಳಸಬೇಡಿ. ಬಣ್ಣ ಬಣ್ಣದ ಸುಗಂಧಯುಕ್ತ ಡಿಟರ್ಜೆಂಟ್ಸ್ ಅಂತೂ ಬೇಡವೇ ಬೇಡ. ಉಣ್ಣೆ ವಸ್ತ್ರಗಳನ್ನು ಒಗೆಯಲು ಬಳಸುವಂಥ ನಾಜೂಕಾದ ಡಿಟರ್ಜೆಂಟ್ಸ್ ನ್ನೇ ಈ ಕಂದಮ್ಮಗಳಿಗಾಗಿ ಬಳಸಿರಿ. ಮಕ್ಕಳ ಬಟ್ಟೆಗಳನ್ನು 2-3 ಸಲ ನೀರಿನಲ್ಲಿ ಜಾಲಿಸಬೇಕು, ಆಗ ಮಾತ್ರ ಸೋಪಿನ ಅಂಶ ಸಂಪೂರ್ಣ ತಪ್ಪುತ್ತದೆ. ನಿಮ್ಮ ಮಗುವಿನ ಚರ್ಮ ಅತಿ ಸೆನ್ಸಿಟಿವ್ ಎನಿಸಿದರೆ, ಸಣ್ಣ ಮಕ್ಕಳಿಗಾಗಿಯೇ ಇರುವ `ಬೇಬಿ ಸ್ಪೆಸಿಫಿಕ್
ಡಿಟರ್ಜೆಂಟ್’ ಮಾತ್ರ ಬಳಸಬೇಕು.
ರಾಶೆಸ್ ಏಕೆ ಉಂಟಾಗುತ್ತವೆ? : ಸತತ ನ್ಯಾಪಿ ಬಳಸುವುದರಿಂದ ಮಗುವಿನ ತೊಡೆ ಸಂಧಿ, ನಿತಂಬಗಳ ಬಳಿ ರಾಶೆಸ್ ಮೂಡುತ್ತವೆ. ತ್ವಚೆ ಎಲ್ಲೆಲ್ಲಿ ಫೋಲ್ಡ್ ಆಗಿರುತ್ತದೋ ಅಲ್ಲೆಲ್ಲ ರಾಶೆಸ್ ಆಗುವ ಸಾಧ್ಯತೆಗಳಿವೆ. ರಾಶೆಸ್ ಆಗಲು ಎಲ್ಲಕ್ಕೂ ಪ್ರಮುಖ ಕಾರಣವೆಂದರೆ ಆರ್ದ್ರತೆ. ಬೇರೆ ಕಾರಣಗಳಲ್ಲಿ ನ್ಯಾಪಿಯನ್ನು ಟೈಟ್ ಆಗಿ ಬಿಗಿಯುವುದು, ಸರಿಯಾಗಿ ಒಗೆಯದೆ ಇರುವುದು, ಸೋಪಿನ ಅಂಶ ಉಳಿಯುವಿಕೆ ಇತ್ಯಾದಿ ಮುಖ್ಯ.
ರಾಶೆಸ್ ಆಗದಿರಲು : ಮಕ್ಕಳನ್ನು ರಾಶೆಸ್‌ನಿಂದ ಕಾಪಾಡಲು ಎಲ್ಲಕ್ಕಿಂತ ಉತ್ತಮ ಉಪಾಯವೆಂದರೆ. ನ್ಯಾಪಿ ಏರಿಯಾವನ್ನು ಸದಾ ಸ್ವಚ್ಛ, ಶುಭ್ರವಾಗಿಡುವುದು. ಒದ್ದೆ ನ್ಯಾಪಿಗಳನ್ನು ತಕ್ಷಣ ಬದಲಾಯಿಸಿ. ಅದನ್ನು ಬದಲಿಸಿದ ನಂತರ ಮಗುವಿನ ಬಾಟಮ್ ನ್ನು ಬೆಚ್ಚಗಿನ ನೀರಿನಿಂದ ಸ್ವಚ್ಛ ಮಾಡಬೇಕು.
ಮಗುವನ್ನು ಬೆಚ್ಚಗಿನ ನೀರು ಹಾಗೂ ಮೈಲ್ಡ್ ಸೋಪಿನಿಂದ ಮಾತ್ರ ಸ್ನಾನ ಮಾಡಿಸಿ.
ತ್ವಚೆ ಪೂರ್ತಿ ಒಣಗಿದ ಮೇಲೆಯೇ ನ್ಯಾಪಿ, ಬಟ್ಟೆ ತೊಡಿಸಬೇಕು.
24 ಗಂಟೆಗಳಲ್ಲಿ ಕನಿಷ್ಠ 8 ಗಂಟೆಗಳನ್ನಾದರೂ ಮಗುವಿಗೆ ನ್ಯಾಪಿ ಇಲ್ಲದಂತೆ ನೋಡಿಕೊಳ್ಳಿ. ಆಗ ಮಗುವಿಗೆ ಸಲೀಸಾಗಿ ಉಸಿರಾಡಲು ಸಾಧ್ಯ.
ರಾಶೆಸ್ ನಿವಾರಣೆಗೆ ಮನೆಮದ್ದು
ರಾಶೆಸ್ ಮೇಲೆ ಆ್ಯಲೋವೆರಾ ಜೆಲ್ ಸವರಿಡಿ.
ರಾಶೆಸ್ ಮೇಲೆ ಪೆಟ್ರೋಲಿಯಂ ಜೆಲ್ಲಿ ಸವರಬೇಕು.
ರಾಶೆಸ್ ಮೇಲೆ ಟ್ಯಾಲ್ಕಂ ಪೌಡರ್ ಸಹ ಉದುರಿಸಬಹುದು, ಆದರೆ ಅತಿ ಆಗಬಾರದು. ಇಲ್ಲದಿದ್ದರೆ ಇದು ಮಗುವಿನ ಲಂಗ್ಸ್ ವರೆಗೂ ತಲುಪಿ ಹಿಂಸೆಪಡಿಸುತ್ತದೆ.
ಮಗುವಿನ ನಿತಂಬ, ತೊಡೆ, ಗುಪ್ತಾಂಗದ ಬಳಿ ಅಧಿಕ ರಾಶೆಸ್ ಕಾಣಿಸಿದರೆ ಮನೆಮದ್ದಿನಿಂದ ಅವನ್ನು ನಿವಾರಿಸಲು ಯತ್ನಿಸಿ, 1 ವಾರವಾದರೂ ಇದು ಸರಿ ಹೋಗದಿದ್ದಾಗ ಉರಿ, ನವೆ, ರಕ್ತ ಸೋರುವಿಕೆ ಆಗಬಹುದು. ಒಮ್ಮೊಮ್ಮೆ ಮಗುವಿಗೆ ಜ್ವರ ಸಹ ಕಾಡಬಹುದು. ತಕ್ಷಣ ವೈದ್ಯರನ್ನು ಸಂಪರ್ಕಿಸಿ.
– ಡಾ. ಗೌರವ್ ಭಾರದ್ವಾಜ್