ಮನೆಯ ಅತಿ ಮಹತ್ವಪೂರ್ಣ ಭಾಗವೆಂದರೆ ಕಿಚನ್. ಇಲ್ಲಿ ಇಡೀ ಕುಟುಂಬದ ಸದಸ್ಯರಿಗಾಗಿ ಆಹಾರ ತಯಾರಾಗುತ್ತದೆ. ಆದರೆ ಕಿಚನ್‌ನಲ್ಲಿ ಕೀಟಾಣುಗಳನ್ನು ದೂರ ಇರಿಸುವ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಲ್ಲದಿದ್ದರೆ, ಮಾಡಿದ ಅಡುಗೆ ಎಲ್ಲಾ ವಿಷಮಯ ಆಗುವ ಅಪಾಯ ತಪ್ಪಿದ್ದಲ್ಲ.
ಇದರರ್ಥ ಘಳಿಗೆಗೊಮ್ಮೆ ನೀವು ಕಿಚನ್ ಗುಡಿಸುತ್ತಾ, ಸಾರಿಸುತ್ತಾ ಸ್ಲ್ಯಾಬ್ಸ್, ಕಿಟಕಿ ಬಾಗಿಲುಗಳನ್ನು ಒರೆಸುತ್ತಾ ಕೂರಬೇಕು ಅಂತಲ್ಲ. ಕೆಲವು ಅತಿ ಅಗತ್ಯದ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ಅದನ್ನು ಅನುಸರಿಸಿದರೆ, ನೀವು ಖಂಡಿತಾ ಈ ಅಪಾಯವನ್ನು ದೂರವಿಡಬಹುದು. ಈ ಹಾಳು ಕೀಟಾಣುಗಳು ಅಡುಗೆಮನೆಯಲ್ಲಿ ಹೆಚ್ಚುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.
ಕಿಚನ್ ಬಟ್ಟೆಗಳು
ಕೀಟಾಣುಗಳು ಬೇಗ ಬೇಗ ಇಮ್ಮಡಿಸಲು ಕಿಚನ್‌ಗಾಗಿ ಬಳಸುವ ಬಟ್ಟೆಗಳು ಒಂದು ಮುಖ್ಯ ಮೂಲ. ಈ ಬಟ್ಟೆಗಳು ಸದಾ ಒದ್ದೆ ಆಗಿರುತ್ತವೆ. ಸ್ಲ್ಯಾಬ್ ಇತ್ಯಾದಿ ಒರೆಸಿದ ಮೇಲೆ, ಅದನ್ನು ನೀವು ವೈರಸ್ ಅಥವಾ ಇನ್ನಿತರ ಕೀಟಾಣು ನಾಶಕ ಲೋಶನ್‌ನಲ್ಲಿ ಅದ್ದಿ, ಹಿಂಡಿ ಚೆನ್ನಾಗಿ ಒಣಗಿಸಿ. ಅದನ್ನು ಹಾಗೇ ಒದ್ದೆಯಾಗಿ ಮತ್ತೆ ಮತ್ತೆ ಬಳಸುವುದರಿಂದ, ಅದು ಕಿಚನ್ ಸ್ಲ್ಯಾಬ್, ಇನ್ನಿತರ ವಸ್ತುಗಳ ಮೇಲೆ ಬೇಗ ಹರಡಿಕೊಳ್ಳುತ್ತವೆ. ಕುಕಿಂಗ್ ಟಾಪ್ ಸ್ಲ್ಯಾಬ್ ಇತ್ಯಾದಿ ಒರೆಸುವ ಬಟ್ಟೆ ಬೇರೆ ಬೇರೆ ಆಗಿರಬೇಕು, ಆಗ ಕೀಟಾಣು ಹರಡುವುದನ್ನು ತಡೆಹಿಡಿಯಬಹುದು.
ಕೀಟಾಣುಗಳ ದಾಳಿಯ ಜಾಗ
ಹಸಿ ತರಕಾರಿ, ಹಣ್ಣು, ಸೊಪ್ಪು, ಸಲಾಡ್ ವಸ್ತುಗಳನ್ನು ಹೆಚ್ಚುವ ಜಾಗಗಳಾದ ಸ್ಲ್ಯಾಬ್, ಈಳಿಗೆ ಮಣೆ, ತರಕಾರಿ ಮಣೆ ಇತ್ಯಾದಿಗಳನ್ನು ವೈರಸ್ ನಂಥ ಕೀಟಾಣು ನಾಶಕದಿಂದ ಆಗಾಗ ಶುಚಿಗೊಳಿಸುತ್ತಿರಿ, ಅದರಲ್ಲೂ ಮುಖ್ಯವಾಗಿ ಬಳಸಿದ ನಂತರ. ಇಂಥ ಜಾಗಗಳನ್ನು ಕ್ಲೀನ್ ಮಾಡದೆ ಹಾಗೇ ಬಿಟ್ಟರೆ ಕೀಟಾಣುಗಳಿಗೆ ಖಂಡಿತಾ ಔತಣ ಕೊಟ್ಟಂತೆಯೇ ಸರಿ. ಇದೇ ತರಹ ಚಾಕು, ಚೂರಿಗಳನ್ನು ಬಳಸಿದ ನಂತರ ಕೀಟಾಣು ಮುಕ್ತಗೊಳಿಸಬೇಕು. ಕಟಿಂಗ್ ಬೋರ್ಡ್‌ಗಳನ್ನು ಬಳಸಿದ ನಂತರ ತಪ್ಪದೆ ಶುಚಿಗೊಳಿಸಿ.
ಸಾಧನಗಳ ಹಿಡಿ
ಕೊಳಾಯಿ, ಫ್ರಿಜ್ ಒಳಭಾಗ, ಪ್ರೆಶರ್ ಕುಕ್ಕರ್ ಹ್ಯಾಂಡಲ್, ಬಾಗಿಲ ಚಿಲಕ, ಡಬ್ಬಾಗಳ ಮುಚ್ಚಳ, ಇತರ ಪರಿಕರಗಳ ಹಿಡಿ ಇತ್ಯಾದಿಗಳೆಲ್ಲೆಡೆ ಆಗಾಗ ಕೀಟಾಣು ಮುಕ್ತಗೊಳಿಸಲು ಏನಾದರೂ ಲೋಶನ್ ಹಚ್ಚಿ ನಿವಾರಿಸಬೇಕು. ಇಲ್ಲದಿದ್ದರೆ ಈ ಭಾಗಗಳಿಂದ ನಮ್ಮ ಕೈಗೆ ಬರುವ ಕೀಟಾಣು ನಮ್ಮ ಆಹಾರ ಸೇರಿ ಆರೋಗ್ಯ ಹಾಳು ಮಾಡುವಲ್ಲಿ ಸಂದೇಹವಿಲ್ಲ.
ಕಸದ ಬುಟ್ಟಿಗಳು
ಕಸದ ಬುಟ್ಟಿಗಳು, ಡಸ್ಟ್ ಬಿನ್ ಇತ್ಯಾದಿ ಸದಾ ಕೀಟಾಣುಗಳ ಆಕರ್ಷಣೆಯ ಕೇಂದ್ರ ಎನಿಸಿವೆ. ಹಣ್ಣು ತರಕಾರಿ ಹೆಚ್ಚಿದ ನಂತರ ಅನಗತ್ಯ ವಸ್ತುಗಳ ಸಮೇತ ಇದಕ್ಕೆ ಎಸೆಯುತ್ತೇವೆ. ಹಾಗೆಯೇ ಅರೆಬರೆ ತಿಂದ ತಿನಿಸುಗಳೂ ಇದಕ್ಕೆ ಸೇರುತ್ತವೆ. ಆಗ ಖಂಡಿತಾ ಸಾವಿರಾರು ಸಂಖ್ಯೆಯಲ್ಲಿ ಕೀಟಾಣುಗಳು ಅಲ್ಲಿ ವೃದ್ಧಿ ಹೊಂದುತ್ತವೆ. ಆದ್ದರಿಂದ ಸಾಧ್ಯವಾದಷ್ಟೂ ನಿಮ್ಮ ಡಸ್ಟ್ ಬಿನ್‌ಗೆ ಮುಚ್ಚಳ ಮುಚ್ಚಿಡಿ ಅಥವಾ ಇರುವಂಥದ್ದನ್ನೇ ಕೊಳ್ಳಿರಿ. ಆಮೇಲೆ ಮರೆಯದೆ ಕಸವನ್ನು ಹಸಿ, ಒಣ ಎಂದು ವಿಂಗಡಿಸಿ ಪ್ಯಾಕೆಟ್ ಮಾಡಿ, ಅದನ್ನು ಡಸ್ಟ್ ಬಿನ್‌ಗೆ ಎಸೆಯಿರಿ. ಇಂಥ ಡಸ್ಟ್ ಬಿನ್ಸ್, ಅದನ್ನು ಇರಿಸುವ ಜಾಗಗಳನ್ನು ಆಗಾಗ ವೈರಸ್ ಅಥವಾ ಇನ್ನಿತರ ಕೀಟಾಣುನಾಶಕ ದ್ರವ ಸಿಂಪಡಿಸಿ ಶುಚಿಗೊಳಿಸುತ್ತಿರಿ.
ಕೈಗಳ ಮೂಲಕ
ಕೈಗಳ ಮೂಲಕ ಕೀಟಾಣು ನಮ್ಮ ಆಹಾರದಿಂದ ದೇಹ ಸೇರುವುದು ಹೊಸತೇನಲ್ಲ. ಆದ್ದರಿಂದ ಅಡುಗೆ ಮಾಡುವುದಕ್ಕೆ ಮೊದಲು, ಊಟಕ್ಕೆ ಬಡಿಸುವ ಮುನ್ನ, ಊಟಕ್ಕೆ ಕೂರುವ ಸಮಯದಲ್ಲಿ ನಿಮ್ಮ ಕೈಗಳನ್ನು ಅಗತ್ಯವಾಗಿ ಕೀಟಾಣು ಮುಕ್ತಗೊಳಿಸಿಕೊಳ್ಳಿ.
ನಿಮ್ಮ ಸ್ಲ್ಯಾಬ್ ಮೇಲೆ ಅನ್ನದ ಅಗುಳು, ಆಹಾರದ ಇನ್ನಿತರ ಪದಾರ್ಥಗಳು ಹರಡಿದ್ದರೆ ಕೀಟಾಣು, ಇರುವೆ, ಜಿರಲೆಗಳಿಗೆ ಔತಣ ನೀಡಿದಂತೆಯೇ ಸರಿ. ಆದ್ದರಿಂದ ಅಡುಗೆ ಮುಗಿದ ನಂತರ ಸ್ಲ್ಯಾಬ್ ಮತ್ತು ಸ್ಟವ್ ನ್ನು ವೈರಸ್ ಕಿಚನ್ ಕ್ಲೀನರ್‌ನಿಂದ ಚೆನ್ನಾಗಿ ಶುಚಿಗೊಳಿಸಲು ಮರೆಯದಿರಿ. ಅಡುಗೆ ಪದಾರ್ಥ ಸದಾ ಮುಚ್ಚಿರಿಸಿ. ನಿಮ್ಮ ಪಾತ್ರೆ, ಬಾಣಲೆ, ಪ್ಯಾನ್‌ಗಳಿಗೆ ಸದಾ ಮುಚ್ಚಳ ಇರಲಿ. ಆಗ ಅವುಗಳ ಮೇಲೆ ನೊಣ, ಜಿರಲೆ, ಕೀಟಾಣುಗಳ ದಾಳಿ ಆಗದು ಹಾಗೂ ಕಲುಷಿತಗೊಳ್ಳುವುದರಿಂದ ಅವು ಬಚಾವಾಗುತ್ತವೆ.
ಕೀಟಾಣು ನಮ್ಮ ದೇಹಕ್ಕೆ ಬಲು ಅಪಾಯಕಾರಿ. ಕೀಟಾಣುಗಳ ಕಾರಣ ಸಾಮಾನ್ಯ ತ್ವಚೆ ರೋಗದಿಂದ ಹಿಡಿದು ದೊಡ್ಡ ದೊಡ್ಡ ಅಪಾಯಕಾರಿ ರೋಗಗಳು ಆಕ್ರಮಿಸುತ್ತವೆ. ಕೀಟಾಣು ಕಾರಣ ಹರಡುವ ರೋಗಗಳ ಬಗ್ಗೆ ತಿಳಿಯೋಣ.
ನಿಮೋನಿಯಾ
ಇದು ಶ್ವಾಸಕೋಶಗಳ ಊತಕ್ಕೆ ಸಂಬಂಧಿಸಿದ ಒಂದು ಅಪಾಯಕಾರಿ ರೋಗ. ಇದರ ಪ್ರಮುಖ ಲಕ್ಷಣವೆಂದರೆ ಎದೆಯಲ್ಲಿ ಉರಿ ಹೆಚ್ಚುತ್ತದೆ, ನೋವು ಕಾಣಿಸುತ್ತದೆ. ತಕ್ಷಣ ಜ್ವರ ಬರುತ್ತದೆ. ಉಸಿರಾಡಲಿಕ್ಕೆ ಬಹಳ ತೊಂದರೆ ಆಗುತ್ತದೆ. ಈ ರೋಗ ನೇರ ವ್ಯಕ್ತಿಯ ಇಮ್ಯೂನ್ ಸಿಸ್ಟಮ್ ನ್ನು ಪ್ರಭಾವಿತಗೊಳಿಸುತ್ತದೆ.
ಟ್ಯೂಬರ್ ಕ್ಯುಲಾಸಿಸ್
ಇದು ಟಿಬಿ ಅಥವಾ ಕ್ಷಯ ರೋಗವೆಂದೂ ಪ್ರಸಿದ್ಧ. ಕೀಟಾಣುಗಳಿಂದಲೇ ಹರಡಿ ಇತರರಿಗೂ ಬರುತ್ತದೆ. ಪ್ರಮುಖ ರೂಪದಲ್ಲಿ ಇದು ಲಂಗ್ಸ್ ಲಿಫೆಂಟಿಕ್ ಗ್ರಂಥಿಗಳನ್ನು ಹಾಳು ಮಾಡಬಲ್ಲದು. ಕ್ಷಯ ಪೀಡಿತ ರೋಗಿಯಿಂದ ಈ ರೋಗ ಕೀಟಾಣು ಮೂಲಕ ಆರೋಗ್ಯಕರ ವ್ಯಕ್ತಿಗಳಿಗೂ ಗಾಳಿಯಿಂದ ಹರಡಬಲ್ಲದು. ಏಕೆಂದರೆ ರೋಗಿಯ ಎಂಜಲು, ಕೆಮ್ಮು, ಕಫದಿಂದ ಕೀಟಾಣು ಬೇರೆಯವರಿಗೆ ಹರಡುತ್ತದೆ. ಜ್ವರ, ಅತಿ ಬೆವರುವಿಕೆ, ಸತತ ಸಣ್ಣಗಾಗುವಿಕೆ, ಕಫಯುಕ್ತ ಕೆಮ್ಮು ಈ ರೋಗದ ಪ್ರಮುಖ ಲಕ್ಷಣಗಳು.
ಅತಿಸಾರ
ಇದು ಕೀಟಾಣುಗಳಿಂದ ಹರಡುವ ಒಂದು ಸಾಂಕ್ರಾಮಿಕ ರೋಗ, ಡಯೇರಿಯಾ ಎನ್ನುತ್ತಾರೆ. ಇದರ ಪ್ರಮುಖ ಲಕ್ಷಣವೆಂದರೆ ಸತತ ವಾಂತಿ, ನೀರು ನೀರಾಗಿ ಭೇದಿ ಆಗುವಿಕೆ, ಮಾಂಸಖಂಡಗಳ ಬಿಗಿತ, ಅತಿಯಾದ ನೋವು. ಹೀಗೆ ಸತತ ಭೇದಿ ಆಗುತ್ತಿದ್ದರೆ ವ್ಯಕ್ತಿಗೆ ಬೇಗ ಡೀಹೈಡ್ರೇಶನ್ ಸಮಸ್ಯೆ ಉಲ್ಬಣಗೊಳ್ಳುತ್ತದೆ, ರೋಗಿಗೆ ಪ್ರಾಣಾಂತಿಕ ಆಗಬಹುದು. ಈ ರೋಗದ ಕೀಟಾಣು ಮುಖ್ಯವಾಗಿ ಕೊಳೆತ ಹಣ್ಣು, ತರಕಾರಿ, ಆಹಾರದ ಕಾರಣ ನಮ್ಮ ದೇಹ ಸೇರುತ್ತದೆ. ಕಲುಷಿತ ನೀರಿನಲ್ಲೂ ಕಾಣಿಸುತ್ತದೆ. ನೊಣಗಳು ಈ ರೋಗ ಹರಡಲು ಪ್ರಮುಖ ವಾಹಕಗಳು. ಇವು ಕೊಳಕು, ಗಲೀಜಿನ ಮೇಲೆ ಕುಳಿತು ನಂತರ ನಮ್ಮ ಆಹಾರದ ಮೇಲೆ ಆಕ್ರಮಿಸಿದಾಗ ನಮಗೆ ತೊಂದರೆ ತಪ್ಪಿದ್ದಲ್ಲ.
ಟೆಟ್‌ನಸ್
ಇದೂ ಸಹ ಕೀಟಾಣು ಕಾರಣ ಹರಡುತ್ತದೆ. ಧೂಳು, ಮಣ್ಣು, ಎಂಜಲು, ಪ್ರಾಣಿಗಳ ಮಲ ಮೂತ್ರಾದಿಗಳಿಂದ ಟೆಟ್‌ನೆಸ್ ಕೀಟಾಣು ದೇಹದ ಗಾಯಗೊಂಡ ಭಾಗದಿಂದ ನಮ್ಮ ದೇಹ ಸೇರುತ್ತವೆ.
ಟೈಫಾಯ್ಡ್
ಇದನ್ನು ಕರುಳಿನ ತೀವ್ರ ಜ್ವರ ಎಂದೂ ಹೇಳುತ್ತಾರೆ. ಟೈಫಾಯ್ಡ್ ಉಂಟು ಮಾಡುವ ಕೀಟಾಣು ಮಾನವರ ಕರುಳಿನಲ್ಲಿ ನೆಲೆಸಿ ಅಲ್ಲಿಂದ ವೃದ್ಧಿಗೊಳ್ಳುತ್ತದೆ. ಅಲ್ಲಿಂದ ಅದು ರಕ್ತ ತಲುಪುತ್ತದೆ. ಇಂಥ ಕೀಟಾಣು ಸದಾ ಕಲುಷಿತ ಆಹಾರ, ನೀರಿನಿಂದ ನಮ್ಮ ದೇಹ ಸೇರುತ್ತದೆ. ಈ ಕಾರಣ ನಮಗೆ ಅತಿಯಾದ ಹೊಟ್ಟೆ ನೋವು, ಮಲಬದ್ಧತೆಯ ಸಮಸ್ಯೆ ಕಾಡುತ್ತವೆ. ಬಹಳ ಸುಸ್ತು, ಸಂಕಟ, ತೀವ್ರ ಜ್ವರ ಸಹ ಕಾಡಬಹುದು.
– ಜಿ. ಪಂಕಜಾ