ಹ್ಯಾಕರ್ಸ್‌ ಬಲೆಗೆ ಬಿದ್ದ ಕೃತಿ

ಸೆಲೆಬ್ರಿಟೀಸ್‌ಗಳ ಸೋಶಿಯಲ್ ಮೀಡಿಯಾ ಅಕೌಂಟ್‌ ಹ್ಯಾಕ್‌ ಆಗುವುದೇನೂ ಹೊಸತಲ್ಲ. ಈ ಸಲ ಅವರ ಬಲೆಗೆ ಬಿದ್ದವಳು ಬಾಲಿವುಡ್‌ನ ಬೆಡಗಿ ಕೃತಿ ಸೇನನ್‌. ಅವಳಿಗೆ ಈ ವಿಷಯ ಬೇಗ ಗೊತ್ತಾಗಿದ್ದು ಒಳ್ಳೆಯದಾಯ್ತು, ತಕ್ಷಣ ತನ್ನ ಅಕೌಂಟ್‌ ರಿಕವರ್ ಮಾಡಿಕೊಂಡಳು. ಯಾರಿಗೆ ಗೊತ್ತು? ಯಾವನಾದರೂ ಇದೇ ಅವಕಾಶ ಎಂದು ತಲೆ ಕೆಟ್ಟವನೊಬ್ಬ ಇವಳ ಎಕ್ಸ್ ಬಾಯ್‌ಫ್ರೆಂಡ್‌ಸುಶಾಂತ್‌ಗೆ ಏನಾದ್ರೂ ಎಬ್ಡಾತಬ್ಡಾ ಮೆಸೇಜ್‌, ಫೋಟೋ ಕಳುಹಿಸದ್ದಿದ್ದರೆ….? ಈಗಂತೂ ಕೃತಿ `ಲುಕಾಛುಪಿ’ ಚಿತ್ರದ ಶೂಟಿಂಗ್‌ನಲ್ಲಿ ಬಿಝಿ. ಮಾಜಿ, ಹಾಲಿ ಬಾಯ್ಸ್ ಜೊತೆ ಸದ್ಯಕ್ಕೆ ಯಾವ ಕಣ್ಣಾಮುಚ್ಚಾಲೆಯೂ ಇಲ್ಲವಂತೆ.

ಹಿರಿಯ ಆಲದ ಮರದ ಕೆಳಗೆ……

`ಠಗ್ಸ್ ಆಫ್‌ ಹಿಂದೂಸ್ಥಾನ್‌’ ಚಿತ್ರದಲ್ಲಿ ಅಮಿತಾಭ್ ‌ಜೊತೆ ಮೊದಲ ಸಲ ಮಿ. ಪರ್ಫೆಕ್ಷನಿಸ್ಟ್ ಆಮೀರ್‌ ಖಾನ್‌ ನಟಿಸುತ್ತಿದ್ದಾನೆ. ಆತ ಯಾಕೋ ತುಸು ನರ್ವಸ್ ಆಗಿದ್ದಾನಂತೆ…. ಛೇ….ಛೇ! ಇದು ಚಿತ್ರದ ಸಕ್ಸಸ್‌ ಕುರಿತಾಗಿ ಅಲ್ಲ, ಬದಲಿಗೆ ಬಿಗ್‌ ಬಿ ಅಂಥ ನಟನೆಯಲ್ಲಿ ಪಳಗಿದ ಹುಲಿ ಎದುರು ತಾನು ಸಾಧಾರಣ ಎನಿಸಬಾರದೆಂಬುದು ಚಿಂತೆ. ಸದಾ ಒಬ್ಬಂಟಿ ಹೀರೋ ಆಗಿ ಚಿತ್ರದಲ್ಲಿ  ಮೆರೆಯುವ ಬದಲು ಯಶಸ್ವೀ ನಟರೊಂದಿಗೂ ಕಾಣಿಸಬೇಕಲ್ಲವೇ? ಅದಕ್ಕೆ ಹೇಳುವುದು, ಆಲದ ಮರದ ನೆರಳಲ್ಲಿ ಬೇರೆ ಗಿಡ ಚೆನ್ನಾಗಿ ಬೆಳೆಯುವುದಿಲ್ಲವಂತೆ!

ಕಂಗನಾ V/S ಹೃತಿಕ್‌ ಎದುರಾದಾಗ

ಬಾಲಿವುಡ್‌ನ ಅತಿ ದೀರ್ಘಕಾಲೀನ ಗಾಸಿಪ್‌ಗಳಲ್ಲಿ ಕಂಗನಾ V/S ಹೃತಿಕ್‌ ಜೋಡಿ ಎಲ್ಲಕ್ಕಿಂತ ಮಿಗಿಲು. ಕಂಗನಾಳ `ಮಣಿಕರ್ಣಿಕಾ’ ಹಾಗೂ ಹೃತಿಕ್‌ನ `ಸೂಪರ್‌-30′ ಚಿತ್ರಗಳು ಈ ತಿಂಗಳು ಒಟ್ಟಿಗೆ ರಿಲೀಸ್‌ ಆಗಲಿವೆ. ಏನೇ ಆದರೂ ಹೃತಿಕ್ ತಂದೆ ನಿರ್ಮಾಪಕ ರಾಕೇಶ್‌ ರೋಶನ್‌ ತಮ್ಮ ರಿಲೀಸ್‌ ಡೇಟ್‌ ಬದಲಾಯಿಸುವುದಿಲ್ಲ  ಎಂಬುದು ಗೊತ್ತಿರುವ ಸಂಗತಿ. ಕಂಗನಾ ಹಠ ಬಿಟ್ಟು ಮುಂದಿನ ಡೇಟ್ಸ್ ನೋಡುತ್ತಾಳೋ ಅಥವಾ ಜಿದ್ದಿಗಿಳಿಯುತ್ತಾಳೋ…. ಗೊತ್ತಿಲ್ಲ.

ಕಣ್ಮರೆಯಾದ ಆ ದಿನಗಳು…..

ರಾಜ್‌ ಕಪೂರ್‌ ಮಧುಬಾಲಾರ `ಬರ್ಸಾತ್‌’ ಚಿತ್ರದ ರೊಮಾನ್ಸ್ ಯಾರಾದರೂ ಮರೆಯಲಿಕ್ಕುಂಟೆ? ಅವರಿಬ್ಬರೂ ಒಂದೇ ಛತ್ರಿಯಡಿ ಹಾಡುವ ಹಾಡಂತೂ ಸುಪರ್ಬ್‌! ಇಂಥ ಸಾವಿರಾರು ಚಿತ್ರಗಳ ಶೂಟಿಂಗ್‌ಗೇ ಮೂಲತಾಣವಾಗಿದ್ದ  ಸ್ಟುಡಿಯೋಸ್‌ ಇಂದು ಹರಾಜಿಗೆ ಬಂದು ನಿಂತಿರುವುದು ಎಷ್ಟು ದಯನೀಯ…! ಕಪೂರ್‌ ಖಾಂದಾನಿನ 4 ತಲೆಮಾರುಗಳ ಚಿತ್ರಗಳಿಗೆ ಸಾಕ್ಷಿಯಾಗಿರುವ ಈ ಸ್ಟುಡಿಯೋ ತನ್ನನ್ನು ಉಳಿಸಿಕೊಳ್ಳುವವರಿಲ್ಲವೇ ಎಂದು `ಜಾನೆ ಕಹಾಂ ಗಯೇ ವೋ ದಿನ್‌…..’ ಎನ್ನುತ್ತಿದೆಯಂತೆ.

ಅಮಾಯ್ರಾ ಇದೀಗ ತುಂಬಾ ಲಕ್ಕಿ!

`ರಾಜ್ಮಾ ಚಾವಲ್’ ಚಿತ್ರದಿಂದ ಸ್ಟಾರಾಗಿ ಮಿಂಚುತ್ತಿರುವ ನವನಟಿ ಅಮಾಯ್ರಾಳ ಕೈಲಿ ಬೇಕಾದಷ್ಟು ಚಿತ್ರಗಳೋ ಚಿತ್ರಗಳು! ರಾಜ್‌ಕಮಾರ್‌ ರಾವ್ ‌ಕಂಗನಾ ಕಾಂಬಿಯ `ಮೆಂಟಲ್ ಹೈ ಕ್ಯಾ’ ಚಿತ್ರದ ಶೂಟಿಂಗ್‌ ನಡೆಯುತ್ತಿರುವಾಗಲೇ, ತೆಲುಗಿನ ಸೂಪರ್‌ ಹಿಟ್‌`ಪ್ರಸ್ಥಾನಂ’ ಚಿತ್ರದ ಹಿಂದಿ ರೀಮೇಕ್‌ಗೂ ಆಯ್ಕೆಯಾಗಿದ್ದಾಳೆ, ಸಂಜಯ್‌ ದತ್ತನ ಜೊತೆಗೆ ಕೂಡ ಸಣ್ಣಪುಟ್ಟ ಪಾತ್ರಗಳ ಚಿತ್ರಗಳೂ ನಡೆಯುತ್ತಿವೆ.

 

ಟೀಕಾಕಾರರಿಗೆ ಶಾಕ್‌ ನೀಡುತ್ತಿರುವ ತಾಪಸಿ

ಮೊದಲ ಚಿತ್ರ `ಬೇಬಿ’ ಹಾಗೂ ನಂತರದ `ನಾಮ್ ಶಬಾನಾ’ಗಳಲ್ಲಿ ಸ್ಪೈ ಪಾತ್ರ, ಆಮೇಲೆ `ಪಿಂಕ್‌, ಮುಲ್ಕ್ ಚಿತ್ರಗಳಲ್ಲಿ ಬೊಂಬಾಟ್‌ ಪಾತ್ರಗಳು, ಇದೀಗ `ಜುಡ್ವಾ2, ಮನ್‌ ಮರ್ಝಿಯಾಂ’ ಚಿತ್ರಗಳಲ್ಲಿ ಹಾಟ್‌ ಬೋಲ್ಡ್ ಪಾತ್ರ ನಿಭಾಯಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾಳೆ. ಎಲ್ಲಾ ಪಾತ್ರಗಳಿಗೂ ಜೀವ ತುಂಬಿ ರಾತ್ರೋರಾತ್ರಿ ಸ್ಟಾರ್‌ ಆಗಿರುವ ತಾಪಸಿ ಪನ್ನು, ತನ್ನ ವಿರುದ್ಧ ವ್ಯಂಗ್ಯ ಆಡಿದವರಿಗೆ 440 ವೋಲ್ಟ್ಸ್ ‌ನ ಶಾಕ್‌ ಕೊಡುತ್ತಿದ್ದಾಳೆ. ಶಭಾಷ್‌ ತಾಪಸಿ!

ಹಿಟ್‌ ಆದಳು ಈ ಹುಡುಗಿ!

ಶ್ರದ್ಧಾಳ ಮೊದಲ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಪಾಸ್‌ ಆಗದಿದ್ದರೂ, ನಟನೆಯಲ್ಲಿ ಈಕೆ ಪಾಸ್‌ ಆದವಳು.  ಮುಂದೆ `ಆಶಿಕಿ-2′ ಚಿತ್ರದ ನಂತರ ಪಡ್ಡೆಗಳಿಗೆ ಇವಳು ಅಚ್ಚುಮೆಚ್ಚಿನ ಆಶಿಕಿ ಆದಳು. ಇದೀಗ ಶ್ರದ್ಧಾ ಶಾಹೀದ್‌ ಕಪೂರ್‌ ಜೊತೆ `ಬತ್ತಿ ಗುಲ್ ಮೀಟರ್‌ ಚಾಲೂ’ ಚಿತ್ರದಲ್ಲಿ ಬಿಝಿ. ಹೀಗೆ ಈಕೆ ಹಿಟ್‌ ಮೇಲೆ ಹಿಟ್‌ ನೀಡುತ್ತಿದ್ದರೆ ಬೇರೆ ನಟೀಮಣಿಯರು ಸಿಟ್ಟಾದಾರು!

ಹಿಟ್‌ ಅರಸುತ್ತಿರುವ ಇಶ್ಕ್

ಸುಮಾರು 6 ವರ್ಷಗಳ ನಂತರ `ಇಶ್ಕ್’ ಚಿತ್ರದ ಜೋಡಿ ಅರ್ಜುನ್‌ ಪರಿಣಿತಿ ಮತ್ತೆ `ನಮಸ್ತೆ ಇಂಗ್ಲೆಂಡ್‌’ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ. ಹಾಗೆ ಇವರಿಬ್ಬರಲ್ಲೂ ಹಲವಾರು ಸಾಮ್ಯತೆಗಳಿವೆ. ಇಬ್ಬರೂ ಫ್ಯಾಟ್‌ನಿಂದ ಫಿಟ್‌ ಆದರು. ಬ್ರೇಕ್ ತೆಗೆದುಕೊಂಡು ಮತ್ತೆ ಬಾಲಿವುಡ್‌ಗೆ ಬಂದರು, ಇಬ್ಬರೂ ಫ್ಲಾಪ್‌ ಮೇಲೆ ಫ್ಲಾಪ್‌ ನೀಡಿದವರೇ…. ಇದೀಗ ಹಿಟ್‌ಗಾಗಿ  ಅರಸುತ್ತಿದ್ದಾರೆ. ಆಲ್ ದಿ ಬೆಸ್ಟ್!

ಮದುವೆಗೆ  ನಾ ರೆಡಿ!

ವಿರುಷ್ಕಾ ವಿವಾಹದ ಬಗ್ಗೆ ನಿಮಗೆ ಗೊತ್ತು, ಇದೀಗ ರ್ಯಾಂಡೀ (ಳಿ) ವಿವಾಹ! ಇದೇನು ಅಂತೀರಾ? ರ್ಯಾಂಡೀ ಅಂದ್ರೆ ರಣವೀರ್‌ ದೀಪಿಕಾ! ಈಗ ಇವರಿಬ್ಬರೂ ತಂತಮ್ಮ ಸಿನಿಮಾಗಳಿಗಿಂತ ಮದುವೆ ತಯಾರಿ ಹೇಗೆ ನಡೆಸುತ್ತಿದ್ದಾರೆ ಎನ್ನುವುದರಲ್ಲಿ ಸುದ್ದಿ ಆಗುತ್ತಿದ್ದಾರೆ. ಇಬ್ಬರ ಅಭಿಮಾನಿಗಳಿಗೂ ಏನಪ್ಪ ಸಂಕಟ ಅಂದರೆ, ಇವರಿಬ್ಬರೂ ತಮ್ಮ ಮದುವೆ ಕುರಿತಾದ ಸುದ್ದಿಗಳನ್ನು ಒಪ್ಪುತ್ತಲೂ ಇಲ್ಲ,  ತಿರಸ್ಕರಿಸುತ್ತಲೂ ಇಲ್ಲ. ವಿರುಷ್ಕಾ ವಿವಾಹದಂತೆಯೇ  ರ್ಯಾಂಡೀ ವಿವಾಹ  ನಡೆಯಲಿದೆಯಂತೆ,  ಅದೇ ಇಟಲಿಯಲ್ಲಿ ಆದ್ರೆ ಪಾರ್ಸಿ ಪದ್ಧತಿಯಲ್ಲಿ! ಅದಕ್ಕೂ ಮುಂಚೆ ದೀಪಿಕಾಳ ತವರು ಬೆಂಗಳೂರಿನಲ್ಲಿ ವಿಶೇಷ ಸಮಾರಂಭ ಇರುತ್ತದೆ.

ಪಿ. ಸಿ.ಯ  ಗುಟ್ಟು ರಟ್ಟು

ಸಲ್ಮಾನ್ ನಟಿಸುತ್ತಿರುವ `ಭಾರತ್‌’ ಚಿತ್ರಕ್ಕೆ ಬೈ ಬೈ ಹೇಳಿ ಪ್ರಿಯಾಂಕಾ ಹೊರಬಂದ ಮೇಲೆ ಅದರ ನಿರ್ಮಾಪಕರಿಗೂ ಇವಳಿಗೂ ಇಲಿ ಬೆಕ್ಕಿನ ಸ್ಪರ್ಧೆ ಏರ್ಪಟ್ಟಿದೆ. ಬೆಕ್ಕಾಗಿ ಪಿಸಿ ನಿರ್ಮಾಪಕರನ್ನು ಗೋಳುಗುಟ್ಟಿಸುತ್ತಿದ್ದಾಳೆ. ಒಮ್ಮೆ ಈವೆಂಟ್‌ ಒಂದರಲ್ಲಿ ಸಲ್ಮಾನ್‌ ಹೇಳಿದ್ದೆಂದರೆ, ಪ್ರಿಯಾಂಕಾ ತನ್ನ ತಂಗಿ ಅರ್ಪಿತಾಳಿಗೆ ಫೋನ್‌ ಮಾಡಿ, ತನ್ನೊಂದಿಗೆ ನಟಿಸಲು ಆಸೆ ಎಂದು ಹೇಳಿಕೊಂಡಿದ್ದಳಂತೆ. ಪ್ರಿಯಾಂಕಾಳ ಗ್ರಹಚಾರ ಎತ್ತ ತಿರುಗುತ್ತದೆಯೋ ಏನೋ…. ಮೊದಲು ಸಲ್ಮಾನ್‌ ಬೇಕು ಎಂದು ಕಾಡಿಬೇಡಿ, ನಂತರ ದಿಢೀರ್‌ ಎಂದು ಆ ಸಿನಿಮಾ ಬಿಟ್ಟು ಅವನ ಕೋಪಕ್ಕೆ ಗುರಿಯಾದಳು. ಬಾಯ್‌ಫ್ರೆಂಡ್‌ ನಿಕ್‌ ಜೊತೆ ಮದುವೆ ಘೋಷಿಸುವಷ್ಟರಲ್ಲಿ ಅವಳ ಮಾವನ ಮನೆಯ ಬಿಸ್‌ನೆಸ್‌ ದಿವಾಳಿ ಆಗಿದೆಯಂತೆ! ಮುಂದೆ ಹೇಗೋ ಏನೋ….

ಕಿಯಾರಾಳ ಕನಸು

`ವೆಬ್‌ ಸೀರೀಸ್‌`ಲಸ್ಟ್ ಸ್ಟೋರೀಸ್‌’ನಲ್ಲಿ ತನ್ನ ಹಾಟ್‌ನೆಸ್‌ ರಾಸಲೀಲೆಗಳಿಂದ ಬಾಲಿವುಡ್‌ನ ಹಾದಿ ಹಿಡಿದಿರುವ ಕಿಯಾರಾ, ಇದೀಗ ಕರಣ್‌ ಜೋಹರ್‌ನ `ಕಳಂಕ್‌’ ಚಿತ್ರದಲ್ಲೂ ಅಂಥದೇ ಪಾತ್ರದಲ್ಲಿ ಮಿಂಚುತ್ತಿದ್ದಾಳೆ. ಕಿಯಾರಾಳನ್ನು ಅವಳ ಕೆಲಸ,  ಬಾಲಿವುಡ್‌ಗೆ ಸಾಗಿಬಂದ ಪಯಣದ ಬಗ್ಗೆ ಕೇಳಿದಾಗ, ಆಕೆ ತಾನು ಇಡೀ ದೇಶ ತಲೆದೂಗುವಂಥ ಪಾತ್ರ ಮಾಡಬೇಕು ಅಂತ ಕನಸು ಕಾಣುತ್ತಿರುವೆ ಎನ್ನುತ್ತಾಳೆ. ಹಾಯ್‌ ಕಿಯಾರಾ ಬೇಬಿ, ಮೊದಲು ನೆಲದ ಮೇಲೆ ನಿಂತು ಕನಸು ಕಾಣು, ಆಮೇಲೆ ಆಕಾಶದಲ್ಲಿ ಹಾರಾಡುವೆಯಂತೆ ಎನ್ನುವುದು ಪರಿಣಿತರ ಸಲಹೆ!

ಹಿಟ್‌ ಚಿತ್ರ ನೀಡುವುದು ಹೇಗೆ?

`ಯಮಲ ಪಗಲ ದಿವಾನಾ ಫಿರ್‌ಸೇ’ ಸೀಕ್ವೆಲ್ ರಿಲೀಸ್‌ಗೊಂಡ ತಕ್ಷಣವೇ ಏಕಾಏಕಿ ಮುಗ್ಗರಿಸಿ ಮಖಾಡೆ ಬಿದ್ದುಬಿಟ್ಟಿದೆ! ಮೊದಲೇ ಫ್ಲಾಪ್‌ ಆದ  ಚಿತ್ರಕ್ಕೆ ಮತ್ತೆ ಸೀಕ್ವೆಲ್‌ ಮಾಡಿದರೆ ಇನ್ನೇನಾದೀತು? ಧರ್ಮೇಂದ್ರರ ಹಿರಿಯ ಮಗ ಸನ್ನಿ ಡಿಯೋಲ್ ‌ಯಾವ ತರಹ ಚಿತ್ರ ಮಾಡಿದರೆ ಈ ಜನ ಅದನ್ನು ಹಿಟ್‌ಗೊಳಿಸುತ್ತಾರೋ ಎಂದು ತಲೆ ಮೇಲೆ ಕೈ ಹೊತ್ತಿದ್ದಾನೆ. ಸನ್ನಿ, ಬೆಟರ್ ಲಕ್‌ ನೆಕ್ಸ್ಟ್ ಟೈಂ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ