ತಾವರೆ ಬೀಜದ ಲಡ್ಡು

ಸಾಮಗ್ರಿ : 100 ಗ್ರಾಂ ತಾವರೆಬೀಜ, 50 ಗ್ರಾಂ ಖೋವಾ, 30 ಗ್ರಾಂ ಕೆಸ್ಟರ್‌ ಶುಗರ್‌, ಅಗತ್ಯವಿದ್ದಷ್ಟು ತುಪ್ಪ, ಕೊಬ್ಬರಿ ತುರಿ, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು, ಏಲಕ್ಕಿಪುಡಿ.

ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ದ್ರಾಕ್ಷಿ ಗೋಡಂಬಿಗಳನ್ನು ಹುರಿದು ಪಕ್ಕಕ್ಕಿಡಿ. ಅದರಲ್ಲಿ ತಾವರೆ ಬೀಜ ಸಹ ಹುರಿದು, ಆರಿದ ಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಆಮೇಲೆ ಅದೇ ಬಾಣಲೆಯಲ್ಲಿ ಮಸೆದ ಖೋವಾ ಹಾಕಿ ಹುರಿಯಿರಿ. ಇದಕ್ಕೆ ಸಕ್ಕರೆ, ತುಸು ತುಪ್ಪ ಹಾಕಿ ಕೆದಕುತ್ತಿರಿ. ಮಂದಉರಿ ಇರಲಿ, ಸೀಯದಂತೆ ನೋಡಿಕೊಳ್ಳಿ. ಇದನ್ನು ಕೆಳಗಿಳಿಸಿ ಒಂದು ಬೇಸನ್‌ಗೆ ಹರಡಿ ಆರಲು ಬಿಡಿ. ತಾವರೆಬೀಜದ ಪುಡಿ, ದ್ರಾಕ್ಷಿ ಗೋಡಂಬಿ, ಕೊಬ್ಬರಿ ತುರಿ, ಏಲಕ್ಕಿಪುಡಿ ಬೆರೆಸಿ, ತುಪ್ಪದ ಕೈಯಿಂದ  ರವೆವುಂಡೆ ತರಹ ಲಡ್ಡು ಕಟ್ಟಬೇಕು. ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಅತಿಥಿಗಳು ಬಂದಾಗ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

 

ಕ್ವಿಕ್‌ ರಸಮಲಾಯಿ

ಸಾಮಗ್ರಿ : 1 ಟಿನ್‌ ರೆಡಿಮೇಡ್‌ ರಸಗುಲ್ಲ (ಇದರಿಂದ 8-10 ಬಳಸಿಕೊಳ್ಳಿ), ಅರ್ಧ ಲೀ. ಹಾಲು, 50 ಗ್ರಾಂ ಸಕ್ಕರೆ, ತುಸು ಏಲಕ್ಕಿ ಪುಡಿ, ಕೇದಗೆ ಎಸೆನ್ಸ್, ಅಲಂಕರಿಸಲು ತುಪ್ಪದಲ್ಲಿ ಹುರಿದ ಪಿಸ್ತಾ ಬಾದಾಮಿ ಚೂರು.

ವಿಧಾನ : ರಸಗುಲ್ಲಾಗಳ ರಸ ಹಿಂಡಿಕೊಂಡು, ಅದನ್ನು ಲಘುವಾಗಿ ಒತ್ತಿಡಿ. ಹಾಲು ಬಿಸಿ ಮಾಡಿ, ಕಾಯಿಸಿ. ಮಂದ ಉರಿ ಮಾಡಿ ಕುದಿಯಲು ಬಿಡಿ. ಅದು ಅರ್ಧದಷ್ಟು ಹಿಂಗಿದಾಗ ಅದಕ್ಕೆ ಸಕ್ಕರೆ, ಏಲಕ್ಕಿ ಹಾಕಿ 2 ನಿಮಿಷ ಕುದಿಸಿ. ನಂತರ ರಸಗುಲ್ಲ ಬೆರೆಸಿ ಮತ್ತೆ 2 ನಿಮಿಷ ಕುದಿಸಿ. ಕೆಳಗಿಳಿಸಿದ ಮೇಲೆ ಎಸೆನ್ಸ್ ಪಿಸ್ತಾ ಬಾದಾಮಿ ಉದುರಿಸಿ, ಹಾಟ್‌ ಅಥವಾ ಕೋಲ್ಡ್ (ಫ್ರಿಜ್‌ನಲ್ಲಿರಿಸಿ) ಆಗಲೇ ಸರ್ವ್ ‌ಮಾಡಿ.

ಟೇಸ್ಟಿ ತೊಂಡೆ

ಸಾಮಗ್ರಿ : 250 ಗ್ರಾಂ ತೊಂಡೆಕಾಯಿ, 200 ಗ್ರಾಂ ಸಕ್ಕರೆ, 350 ಗ್ರಾಂ ಖೋವಾ, ತುಸು ಏಲಕ್ಕಿಪುಡಿ, ಪಚ್ಚಕರ್ಪೂರ, ಅಗತ್ಯವಿದ್ದಷ್ಟು ತುಪ್ಪ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರು, ಬೆಳ್ಳಿ ರೇಕು, ಕೇಸರಿ ಎಸಳು.

ವಿಧಾನ : ಮೊದಲು ತೊಂಡೆಕಾಯಿ ಲಘುವಾಗಿ ಸೀಳಿಕೊಂಡು ಅದರ ಬೀಜದ ಭಾಗ ತೆಗೆದುಬಿಡಿ (ಬೇರೆ ಪಲ್ಯಕ್ಕೆ ಬಳಸಿ). ನೀರು ಕುದಿಸಿ ಅದರಲ್ಲಿ ಇನ್ನು 10 ನಿಮಿಷ ನೆನೆಹಾಕಿ. ಒಂದು ಪ್ಯಾನಿಗೆ ಈ ನೀರು ಹಾಕಿ, ಸಕ್ಕರೆ ಸೇರಿಸಿ ಪಾಕ ತಯಾರಿಸಿ. ಪಾಕಕ್ಕೆ ತೊಂಡೆ ಬೆರೆಸಿ 1-2 ಕುದಿ ಬರಿಸಿ. ನಂತರ ಕೆಳಗಿಳಿಸಿ, ತೊಂಡೆ ಪಾಕದಲ್ಲೇ 1-2 ಗಂಟೆ ಕಾಲ ಇರಲು ಬಿಡಿ. ಅದೇ ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ ದ್ರಾಕ್ಷಿಗಳನ್ನು ಹುರಿದು ಬೇರೆ ಇಡಿ. ಇದಕ್ಕೆ ಮಸೆದ ಖೋವಾ ಹಾಕಿ ಬಾಡಿಸಿ. ಆಮೇಲೆ ಏಲಕ್ಕಿ, ಹಾಲಲ್ಲಿ ನೆನೆದ ಕೇಸರಿ, ಗೋಡಂಬಿಗಳನ್ನು ಹಾಕಿ ಕೆದಕಿ ಕೆಳಗಿಳಿಸಿ. ನಂತರ  ಮಿಶ್ರಣವನ್ನು ಪಾಕಕ್ಕೆ ಹಾಕಿ. ಅದನ್ನು ತೊಂಡೆಗೆ ತುಂಬಿಸಿ, ಬೆಳ್ಳಿ ರೇಕಿನಿಂದ ಅಲಂಕರಿಸಿ ಸವಿಯಲು ಕೊಡಿ.

ಕ್ಯಾರೆಟ್‌ ಕಲಾಕಂದ್‌

ಸಾಮಗ್ರಿ : 100 ಗ್ರಾಂ ತುರಿದ ಕ್ಯಾರೆಟ್‌, 200 ಗ್ರಾಂ ಮಸೆದ ಪನೀರ್‌, ಮಿಲ್ಕ್ ಪೌಡರ್‌ ಕಂಡೆನ್ಸ್ಡ್ ಮಿಲ್ಕ್ (ತಲಾ 65 ಗ್ರಾಂ), 4 ಚಮಚ ತುಪ್ಪ, ಅಗತ್ಯವಿದ್ದಷ್ಟು ಸಕ್ಕರೆ, ಏಲಕ್ಕಿಪುಡಿ, ಬಾದಾಮಿ, ಪಿಸ್ತಾ ಚೂರು.

ವಿಧಾನ : ಒಂದು ಬೇಸನ್ನಿಗೆ ಶುಚಿಗೊಳಿಸಿದ ಕ್ಯಾರೆಟ್‌ನ್ನು ನೀಟಾಗಿ ತುರಿದು ಹಾಕಿ. ಇದಕ್ಕೆ ಹಾಲಿನ ಪುಡಿ, ಮಸೆದ ಪನೀರ್‌, ಏಲಕ್ಕಿ ಪುಡಿ, ಕಂಡೆನ್ಸ್ಡ್ ಮಿಲ್ಕ್ ಬೆರೆಸಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಈ ಮಿಶ್ರಣ ಅದಕ್ಕೆ ಹಾಕಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ ಸಕ್ಕರೆ ಹಾಕಿ ಕುದಿ ಬರುವಂತೆ ಮಾಡಿ. ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಾ ತಳ ಹಿಡಿಯದಂತೆ ಮಾಡಿ. ಕೊನೆಯಲ್ಲಿ ಪಿಸ್ತಾ ಬಾದಾಮಿ ಸೇರಿಸಿ ಕೆದಕಿ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿ, ಆರಿದ ನಂತರ ಚಿತ್ರದಲ್ಲಿರುವಂತೆ ಕತ್ತರಿಸಿ. ಗಾಳಿಯಾಡದ ಡಬ್ಬಕ್ಕೆ ತುಂಬಿಸಿ, ಅತಿಥಿಗಳು ಬಂದಾಗ ಸವಿಯಲು ಕೊಡಿ.

ಬ್ರೆಡ್‌ ಮಿಠಾಯಿ

ಸಾಮಗ್ರಿ : 4 ಸ್ವೀಟ್‌ ಬ್ರೆಡ್‌ ಸ್ಲೈಸ್‌, ಅರ್ಧ ಲೀ. ಗಟ್ಟಿ ಹಾಲು, ಅಗತ್ಯವಿದ್ದಷ್ಟು ಏಲಕ್ಕಿಪುಡಿ, ಗೋಡಂಬಿ, ಬಾದಾಮಿ, ದ್ರಾಕ್ಷಿ, ಪಿಸ್ತಾ ಚೂರು, ತುಪ್ಪ, ಸಕ್ಕರೆ, ತುಸು ಬೆಳ್ಳಿ ರೇಕು.

ವಿಧಾನ : ಬ್ರೆಡ್‌ ಸ್ಲೈಸ್‌ನ್ನು ತ್ರಿಕೋನಾಕಾರವಾಗಿ ಕತ್ತರಿಸಿ, ತವಾ ಮೇಲೆ ತುಪ್ಪ ಹಾಕುತ್ತಾ ಎರಡೂ ಬದಿ ರೋಸ್ಟ್ ಮಾಡಿ. ಸಕ್ಕರೆಯ ಅರ್ಧ ಭಾಗ ತೆಗೆದು ಗಟ್ಟಿ ಪಾಕ ಮಾಡಿ. ಕರಿದ ಬ್ರೆಡ್‌ ಸ್ಲೈಸ್‌ನ್ನು ಇದರಲ್ಲಿ ನೆನೆಹಾಕಿ, ಸ್ವಲ್ಪ ಹೊತ್ತಿನ ನಂತರ ತೆಗೆದುಬಿಡಿ. ಹಾಲನ್ನು ಕಾಯಿಸಿ. ಉಕ್ಕಿದಾಗ ಮಂದ ಉರಿ ಮಾಡಿ, ಅದು ಅರ್ಧದಷ್ಟು ಹಿಂಗುವವರೆಗೂ ಚೆನ್ನಾಗಿ ಕುದಿಸಬೇಕು. ಆಮೇಲೆ ಅದಕ್ಕೆ ಸಕ್ಕರೆ, ದ್ರಾಕ್ಷಿ ಗೋಡಂಬಿಗಳನ್ನು ಹಾಕಿ ಕೈಯಾಡಿಸಿ. ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ. ಒಂದು ಪ್ಲೇಟ್‌ನಲ್ಲಿ ಈ ಕರಿದ ಬ್ರೆಡ್‌ ಸ್ಲೈಸ್‌ ಹರಡಿ, ಅದರ ಮೇಲೆ ಕುದಿಸಿದ ಹಾಲಿನ ಮಿಶ್ರಣ ಹರಡಬೇಕು. 2-3 ತಾಸು ಹಾಗೇ ಬಿಟ್ಟು, ಚಿತ್ರದಲ್ಲಿರುವಂತೆ ಬೆಳ್ಳಿ ರೇಕಿನಿಂದ ಅಲಂಕರಿಸಿ, ಸವಿಯಲು ಕೊಡಿ.

ಸ್ಪೆಷಲ್ ಹಾಲು ಖೀರು

ಸಾಮಗ್ರಿ : ಅರ್ಧ ಲೀ. ಗಟ್ಟಿ ಹಾಲು, 2 ಚಮಚ ಸಬ್ಬಕ್ಕಿ, 1 ಚಮಚ ತಾವರೆಬೀಜ, ಅಗತ್ಯವಿದ್ದಷ್ಟು ಸಕ್ಕರೆ, ತುಪ್ಪ, ಹಾಲಿನ ಪುಡಿ, ಏಲಕ್ಕಿ ಪುಡಿ, ಗೋಡಂಬಿ ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು.

ವಿಧಾನ : ತುಸು ಕಾದಾರಿದ ಹಾಲಿನಲ್ಲಿ 2-3 ತಾಸು ಸಬ್ಬಕ್ಕಿ ನೆನೆಸಿಡಿ. ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ದ್ರಾಕ್ಷಿ ಗೋಡಂಬಿಗಳನ್ನು ಹುರಿದು ತೆಗೆಯಿರಿ. ನಂತರ ಇದರಲ್ಲಿ ತಾವರೆಬೀಜ ಹುರಿದು, ಆರಿದ ಮೇಲೆ ತರಿತರಿಯಾಗಿ ಪುಡಿ ಮಾಡಿ. ಹಾಲನ್ನು ಕಾಯಿಸಲು ಬಿಡಿ. ಇದರಲ್ಲಿ ಅರ್ಧ ಸೌಟು ಹಾಲನ್ನು ತೆಗೆದು ಒಂದು ಬಟ್ಟಲಿಗೆ ಹಾಕಿಡಿ. ಅದಕ್ಕೆ ಹಾಲಿನ ಪುಡಿ ಹಾಕಿ ಚೆನ್ನಾಗಿ ಕದಡಿಕೊಳ್ಳಿ. ಮಂದ ಉರಿ ಮಾಡಿ ಹಾಲು ಕುದಿಯಲು ಬಿಡಿ, ಇದಕ್ಕೆ ಸಬ್ಬಕ್ಕಿ, ಹಾಲಿನ ಪುಡಿಯ ಮಿಶ್ರಣ, ಸಕ್ಕರೆ, ಏಲಕ್ಕಿ ಹಾಕಿ ಅರ್ಧದಷ್ಟು ಹಿಂಗುವವರೆಗೂ ಕೈಯಾಡಿಸುತ್ತಿರಿ. ಕೊನೆಯಲ್ಲಿ ದ್ರಾಕ್ಷಿ ಗೋಡಂಬಿಗಳನ್ನು ತೇಲಿಬಿಟ್ಟು ಕೆಳಗಿಳಿಸಿ. ಬಿಸಿ ಬಿಸಿಯಾಗಿ ಅಥವಾ ಆರಿದ ನಂತರ ಫ್ರಿಜ್‌ನಲ್ಲಿರಿಸಿ ಕೂಲ್ ಮಾಡಿ ಸವಿಯಲು ಕೊಡಿ.

ಪೌಷ್ಟಿಕ ಲಡ್ಡು

ಸಾಮಗ್ರಿ : 150 ಗ್ರಾಂ ಗೋಧಿಹಿಟ್ಟು, 50 ಗ್ರಾಂ ಸಣ್ಣ ರವೆ, ಅಗತ್ಯವಿದ್ದಷ್ಟು ಅಡುಗೆ ಅಂಟು (ಗೋಂದು), ಖರ್ಬೂಜಾ, ಸಿಹಿಕುಂಬಳದ ಬೀಜ, ತುಸು ಜಾಯಿಕಾಯಿ ಪುಡಿ, ಒಣಶುಂಠಿ ಪುಡಿ, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು, ಕೊಬ್ಬರಿ ತುರಿ, ಬೂರಾ ಸಕ್ಕರೆ, ತುಪ್ಪ, ತುಸು ಸೋಯಾ  ಹಿಟ್ಟು, ಏಲಕ್ಕಿ ಪುಡಿ.

ವಿಧಾನ : ಗೋಧಿಹಿಟ್ಟಿಗೆ ಸೋಯಾಹಿಟ್ಟು ಸೇರಿಸಿ ಜರಡಿಯಾಡಿ. ಮೊದಲು ಬಾಣಲೆಗೆ ತುಸು ತುಪ್ಪ ಹಾಕಿ ಬಿಸಿ ಮಾಡಿ. ದ್ರಾಕ್ಷಿ ಗೋಡಂಬಿಗಳನ್ನು ಹುರಿದು ಪಕ್ಕಕ್ಕಿಡಿ. ನಂತರ ಕರ್ಬೂಜ, ಕುಂಬಳ ಬೀಜ ಹಾಕಿ ಫ್ರೈ ಮಾಡಿ, ಬೇರೆ ಇಡಿ. ಹಿಟ್ಟನ್ನು ಸಹ ಲಘುವಾಗಿ ಹುರಿದು ತೆಗೆದಿಡಿ. ರವೆಯನ್ನೂ ಬೇರೆಯಾಗಿ ಹುರಿಯಿರಿ. ಇದೆಲ್ಲವನ್ನೂ ಒಂದು ಬೇಸನ್ನಿಗೆ ಹಾಕಿ ಆರಲು ಬಿಡಿ. ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪ ಬಿಸಿ ಮಾಡಿ ಕೊಬ್ಬರಿ ತುರಿ, ಶುಂಠಿ ಪುಡಿ ಏಲಕ್ಕಿ, ಜಾಯಿಕಾಯಿ ಪುಡಿ ಎಲ್ಲಾ ಸೇರಿಸಿ ಹಿಟ್ಟಿಗೆ ಬೆರೆಸಿಕೊಳ್ಳಿ. ಇದರ ಮೇಲೆ ಬೂರಾ ಸಕ್ಕರೆ, ದ್ರಾಕ್ಷಿ ಗೋಡಂಬಿ, ಕುಂಬಳ ಬೀಜಗಳು, ಬಿಸಿ ಮಾಡಿದ ತುಪ್ಪ, ಗೋಂದು ಎಲ್ಲಾ ಹಾಕಿ ಉಂಡೆ ಕಟ್ಟಿದರೆ ಪೌಷ್ಟಿಕ ಲಡ್ಡು ಸಿದ್ಧ!

ಕೇಸರಿ ಜಿಲೇಬಿ

ಸಾಮಗ್ರಿ : 250 ಗ್ರಾಂ ಮೈದಾ, 200 ಗ್ರಾಂ ಸಕ್ಕರೆ, ಕರಿಯಲು ಎಣ್ಣೆ, ಅರ್ಧ ಸಣ್ಣ ಚಮಚ ಏಲಕ್ಕಿ ಪುಡಿ, ಕೇಸರಿ ಎಸಳು, ಆರೆಂಜ್‌ ಕಲರ್‌, ತುಸು ಬೇಕಿಂಗ್‌ ಪೌಡರ್‌, ಮೊಸರು, ಪಿಸ್ತಾ ಚೂರು, ತುಸು ಅಕ್ಕಿಹಿಟ್ಟು.

ವಿಧಾನ : 1 ಲೋಟ ಬಿಸಿ ನೀರಿಗೆ ಕೇಸರಿ ಹಾಕಿ ನೆನೆಯಲು ಬಿಡಿ. ಅನಂತರ ಅದೇ ಬಿಸಿ ನೀರಿಗೆ ಮೈದಾ, ಅಕ್ಕಿಹಿಟ್ಟು, ಆರೆಂಜ್‌ಕಲರ್‌, ಬೇಕಿಂಗ್‌ ಪೌಡರ್‌, ಮೊಸರು ಎಲ್ಲಾ ಬೆರೆಸಿ ಇಡ್ಲಿ ಹಿಟ್ಟಿನಂತೆ ಕಲಸಿಡಿ. ಇದನ್ನು ಚೆನ್ನಾಗಿ ಗೊಟಾಯಿಸಿ 4-5 ತಾಸು ನೆನೆಯಲು ಬಿಡಿ. ಸಕ್ಕರೆಗೆ 1 ಲೋಟ ನೀರು ಬೆರೆಸಿ ಮಂದ ಉರಿಯಲ್ಲಿ ಕುದಿಸುತ್ತಾ, ಏಲಕ್ಕಿಪುಡಿ, ಕೇಸರಿ ಹಾಕಿ ಪಾಕ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಕಾದ ನಂತರ, ಸಣ್ಣ ತೂತು ಮಾಡಿದ ತೆಳು ಮಸ್ಲಿನ್‌ ಬಟ್ಟೆಗೆ ಹಿಟ್ಟನ್ನು ಹಾಕಿ ಎಣ್ಣೆ ಮೇಲೆ ನೇರ ಒತ್ತುತ್ತಾ ಜಿಲೇಬಿ ತಯಾರಿಸಿ. ಹೊಂಬಣ್ಣಕ್ಕೆ ಬಂದದ್ದನ್ನು ಪಾಕದಲ್ಲಿ ಹಾಕಿ, 4-5 ಗಂಟೆ ಕಾಲ ನೆನೆಸಿ ನಂತರ ಸವಿಯಲು ಕೊಡಿ.

ಶಂಕರಪೋಳಿ

ಸಾಮಗ್ರಿ : 150 ಗ್ರಾಂ ಮೈದಾ, 75 ಗ್ರಾಂ ಸಕ್ಕರೆ, 1 ಚಿಟಕಿ ಉಪ್ಪು, 2 ಚಿಟಕಿ ಸೋಂಪು, ಕರಿಯಲು ಎಣ್ಣೆ, 50 ಗ್ರಾಂ ಕೆಸ್ಟರ್‌ ಶುಗರ್‌.

ವಿಧಾನ : ಒಂದು ಬಟ್ಟಲಿಗೆ ಸಕ್ಕರೆ ಹಾಕಿ ಅರ್ಧ ಲೋಟ ನೀರು ಬೆರೆಸಿ ಒಂದೆಳೆ ಪಾಕ ತಯಾರಿಸಿ. ಒಂದು ಬೇಸನ್ನಿಗೆ ಮೈದಾ, ಉಪ್ರು, ಸೋಂಪು, ತುಸು ತುಪ್ಪ ಬೆರೆಸಿ ಚೆನ್ನಾಗಿ ಮಸೆಯಿರಿ. ಇದು ಬ್ರೆಡ್‌ ಕ್ರಂಬ್ಸ್ ತರಹ ಆಗಬೇಕು. ಇದಕ್ಕೆ ಆರಿದ ಪಾಕ ಬೆರೆಸಿ ಗಟ್ಟಿಯಾಗಿ ಬರುವಂತೆ ಹಿಟ್ಟು ಕಲಸಿ, ತುಪ್ಪ ಹಾಕಿ ನಾದಿ 15 ನಿಮಿಷ ನೆನೆಯಲು ಬಿಡಿ. ನಂತರ ಮತ್ತೊಮ್ಮೆ ತುಪ್ಪದಿಂದ ನಾದಿ, ದಪ್ಪ ಚಪಾತಿಯಾಗಿ ಲಟ್ಟಿಸಿ, ಬೇಕಾದ ಆಕಾರದ ಕಟರ್‌ನಿಂದ ಕತ್ತರಿಸಿ ಅದನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿದು, ಅಗಲ ಟ್ರೇ ಮೇಲೆ ಹರಡಿ, ಮೇಲೆ ಕೆಸ್ಟರ್‌ ಶುಗರ್‌ ಉದುರಿಸಿ. 15 ನಿಮಿಷ ಬಿಟ್ಟು ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ