ಈ ವಯಸ್ಸು ಎಂತಹ ಒಂದು ಘಟ್ಟವೆಂದರೆ, ಮಹಿಳೆ ಸಂತಾನೋತ್ಪತ್ತಿ ವಯಸ್ಸನ್ನು ದಾಟಿ, ಮುಟ್ಟು ನಿಲ್ಲುವ ಹಂತಕ್ಕೆ ಬಂದಾಗ ಅದು ಅತ್ಯಂತ ಸೂಕ್ಷ್ಮ ಹಂತವಾಗಿರುತ್ತದೆ. ಆಗ ದೇಹದಲ್ಲಿ ಹತ್ತು ಹಲವು ಬದಲಾವಣೆಗಳು ಆಗುತ್ತವೆ. ಈ ಸ್ಥಿತಿಯಲ್ಲಿ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನಿನ ಮಟ್ಟ ಕಡಿಮೆಯಾಗುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಟೆಸ್ಟೋಸ್ಟೆರಾನ್ ಹಾರ್ಮೋನಿನ ಪ್ರಮಾಣ ಕಡಿಮೆಯಾಗುವುದರಿಂದ ಮಾಂಸಖಂಡಗಳಲ್ಲಿ ದುರ್ಬಲತೆ ಹಾಗೂ ದೇಹ ತೂಕ ಏರಿಕೆಯಾಗುವುದರಿಂದ ಮಧುಮೇಹ ಹಾಗೂ ಅತಿ ರಕ್ತದೊತ್ತಡದಂತಹ ಸಮಸ್ಯೆಗಳು ಬಾಧಿಸುವ ಸಾಧ್ಯತೆ ಹೆಚ್ಚುತ್ತದೆ.
ಇಂತಹದರಲ್ಲಿ 40 ದಾಟಿದ ಮಹಿಳೆಯರು ತಮ್ಮ ದೇಹದ ಬಗ್ಗೆ ಹೇಗೆ ಗಮನಹರಿಸಬೇಕು? ತಮ್ಮ ನಿಯಮಿತ ದಿನಚರಿಯಲ್ಲಿ ಯಾವ ರೀತಿ ಬದಲಾವಣೆ ತಂದುಕೊಳ್ಳಬೇಕು? ಅದಕ್ಕಾಗಿ ಸ್ತ್ರೀ ರೋಗ ತಜ್ಞೆ ಡಾ. ನಿರ್ಮಲಾ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ :
40+ ವಯಸ್ಸಿನ ಮಹಿಳೆಯರ ದೇಹದಲ್ಲಿ ಏನೇನು ಬದಲಾವಣೆಗಳು ಆಗುತ್ತವೆ?
40+ ವಯಸ್ಸಿನಲ್ಲಿ ಉಂಟಾಗುವ ಪ್ರಮುಖ ದೈಹಿಕ ಬದಲಾವಣೆಗಳೆಂದರೆ, ದೇಹ ತೂಕ ಹೆಚ್ಚಾಗುವುದಾಗಿದೆ. ಪೃಷ್ಠ ಭಾಗದಲ್ಲಿ ತೊಡೆಯ ಭಾಗದಲ್ಲಿ ಹಾಗೂ ಹೊಟ್ಟೆಯ ಆಸುಪಾಸು ಕೊಬ್ಬು ಜಮೆಗೊಳ್ಳುತ್ತದೆ. ತೂಕ ಹೆಚ್ಚುವ ಕಾರಣದಿಂದ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದ ಅಪಾಯ ಕೂಡ ಹೆಚ್ಚುತ್ತದೆ. ಇದರ ಜೊತೆ ಜೊತೆಗೆ ಈಸ್ಟ್ರೋಜೆನ್ ಹಾರ್ಮೊನಿನ ಮಟ್ಟ ಕುಸಿಯುವುದರಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಅದರಿಂದ ರಕ್ಷಿಸಿಕೊಳ್ಳಲು ಆರೋಗ್ಯಕರ ಆಹಾರ (ಕಡಿಮೆ ಕ್ಯಾಲೋರಿ ಆಹಾರ, ಪ್ರೋಟೀನ್‌ನ್ನು ಆಹಾರದಲ್ಲಿ ಸೇರಿಸುವುದು, ಹಣ್ಣು, ತರಕಾರಿಗಳು ಮತ್ತು ಮೊಳಕೆ ಕಾಳುಗಳು) ಸೇವಿಸಬೇಕು.
ತೂಕದ ಮೇಲೆ ನಿಯಂತ್ರಣ ಹೊಂದಲು ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ವ್ಯಾಯಾಮ ಅಂದರೆ ಕಾರ್ಡಿಯೋ ಎಕ್ಸರ್‌ಸೈಜ್, ಏರೋಬಿಕ್ಸ್ ಹೀಗೆ ಯಾವುದೇ ಆಗಿರಬಹುದು. ಟೆಸ್ಟೊಸ್ಟೆರಾನ್ ಹಾರ್ಮೋನ್ ಸ್ರಾವದ ಪ್ರಮಾಣ ಕಡಿಮೆಯಾಗುವುದರಿಂದ ಮಾಂಸಖಂಡಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆ ಕಾರಣದಿಂದ ಶೋಲ್ಡರ್ (ಭುಜದಲ್ಲಿ ತೀವ್ರ ನೋವು ಮತ್ತು ಜೋಮು ಹಿಡಿದಂತಾಗುವುದು) ತೊಂದರೆ ಕೂಡ ಆಗಬಹುದು. ವ್ಯಾಯಾಮದ ಮುಖಾಂತರವಷ್ಟೇ ಇದರ ಮೇಲೆ ನಿಯಂತ್ರಣ ಹೇರಬಹುದಾಗಿದೆ.
ಮತ್ತೊಂದು ರೀತಿಯ ಬದಲಾವಣೆ ಮಾನಸಿಕವಾಗಿ ಆಗುತ್ತದೆ. ಹಾರ್ಮೋನುಗಳ ಏರುಪೇರಿನಿಂದ ಮೂಡ್‌ನಲ್ಲಿ ಬಹಳಷ್ಟು ವ್ಯತ್ಯಾಸಗಳು ಗೋಚರಿಸುತ್ತವೆ. ಒಮ್ಮೊಮ್ಮೆ ಸಿಡಿಮಿಡಿತನ ಹೆಚ್ಚಾಗುತ್ತದೆ. ಕೋಪದ ಮೇಲೆ ನಿಯಂತ್ರಣ ಹೇರಲು ಆಗುವುದೇ ಇಲ್ಲ. ಇಂತಹ ಸ್ಥಿತಿಯಲ್ಲಿ ಅವರಿಗೆ ಸಹಾನುಭೂತಿ, ಪ್ರೀತಿ ತೋರಿಸದೆ ಇದ್ದರೆ, ಎಷ್ಟೋ ಮಹಿಳೆಯರು ಖಿನ್ನತೆಗೆ ತುತ್ತಾಗುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಅತ್ಯಂತ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಸ್ತನ ಕ್ಯಾನ್ಸರಿಗೆ ಈಗ ಚಿಕಿತ್ಸೆ ಲಭ್ಯ ಇದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಸ್ನಾನ ಮಾಡುವ ಸಮಯದಲ್ಲಿ ಒಂದು ಕೈ ಮೇಲೆತ್ತಿ. ಇನ್ನೊಂದು ಕೈಯಿಂದ ಸ್ತನದ ಪರೀಕ್ಷೆ ಮಾಡುತ್ತ ಹೋಗಬೇಕು. ನಿಮಗೆ ಸ್ತನದಲ್ಲಿ ಯಾವುದಾದರೂ ಗಂಟು ಇರುವ ಅನುಭವ ಉಂಟಾದರೆ ತಕ್ಷಣವೇ ವೈದ್ಯರ ಗಮನಕ್ಕೆ ತನ್ನಿ.
ಅದೇ ರೀತಿ ಮುಟ್ಟಿನ ದಿನಗಳನ್ನು ಹೊರತುಪಡಿಸಿ ಯೋನಿಯಿಂದ ಯಾವುದೇ ಬಗೆಯ ಸ್ರಾವ ಉಂಟಾಗುತ್ತಿದ್ದರೆ ಸ್ತ್ರೀರೋಗ ತಜ್ಞರಿಗೆ ಮಾಹಿತಿ ಕೊಡಿ. ಕೆಲವು ಬಗೆಯ ಪರೀಕ್ಷೆಗಳಿಂದ ರೋಗದ ಅಸ್ತಿತ್ವ ಪತ್ತೆ ಹಚ್ಚಿಸಿ, ಸಕಾಲದಲ್ಲಿಯೇ ಚಿಕಿತ್ಸೆ ಪಡೆದರೆ ಹೆಚ್ಚಿನ ಸಮಸ್ಯೆ ಆಗದು.
ಮಹಿಳೆಯರಲ್ಲಿ ರಕ್ತಹೀನತೆ ಕೂಡ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ?
ನಮ್ಮ ದೇಶದಲ್ಲಿ ಇದು ಅತ್ಯಂತ ಸಾಮಾನ್ಯ ಸಮಸ್ಯೆ ಆಗಿಬಿಟ್ಟಿದೆ. ಇದರ ಮುಖ್ಯ ಲಕ್ಷಣವೆಂದರೆ ದೈಹಿಕ ನಿಶ್ಶಕ್ತಿ, ದೇಹದ ಬಣ್ಣ ಹಳದಿಯಾಗುವುದು, ಉಸಿರಾಟಕ್ಕೆ ತೊಂದರೆ. ಗರ್ಭಿಣಿಯರಲ್ಲಿ, ಹಾಲುಣಿಸುವ ತಾಯಂದಿರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಬ್ಬಿಣಾಂಶದ ಮಾತ್ರೆಗಳನ್ನು ವಿತರಿಸಲಾಗುತ್ತದೆ. ಆ ಮಾತ್ರೆಗಳ ಸೇವನೆಯಿಂದ ಕಬ್ಬಿಣಾಂಶದ ಕೊರತೆಯನ್ನು ಸಾಕಷ್ಟು ಮಟ್ಟಿಗೆ ನಿವಾರಿಸಬಹುದು. ಇದರ ಹೊರತಾಗಿ ಹಸಿರು ಸೊಪ್ಪುಗಳು, ಬೆಲ್ಲ, ಕಡಲೆಕಾಳು, ಖರ್ಜೂರ, ಸೇಬು, ದಾಳಿಂಬೆ, ಪೇರಲ ಹಣ್ಣುಗಳಲ್ಲಿ ಕಬ್ಬಿಣಾಂಶ ಧಾರಾಳವಾಗಿ ಇರುತ್ತದೆ.
40+ ಮಹಿಳೆಯರಲ್ಲಿ ಕ್ಯಾಲ್ಶಿಯಂನ ಕೊರತೆ ಏಕೆ ಬಾಧಿಸುತ್ತದೆ?
ಸ್ತನ್ಯಪಾನ ಮಾಡಿಸುವವರು, ಗರ್ಭಿಣಿಯರ ಹೊರತಾಗಿ 40+ ಮಹಿಳೆಯರಲ್ಲಿ ಈಸ್ಟ್ರೋಜೆನ್ ಹಾರ್ಮೋನು ಕೊರತೆಯಿಂದಲೂ ಕ್ಯಾಲ್ಶಿಯಂ ಕೊರತೆಯಾಗುತ್ತದೆ. ಅದರ ಕೊರತೆ ನೀಗಿಸಲು ಹಾಲು, ಪನೀರ್ ಹಾಗೂ ಹಾಲು ಉತ್ಪನ್ನಗಳ ನಿಯಮಿತ ಸೇವನೆ ಮಾಡಬೇಕು. ಗರ್ಭಿಣಿಯರು 3ನೇ ತಿಂಗಳಿನಿಂದಲೇ ಕ್ಯಾಲ್ಶಿಯಂ ಮಾತ್ರೆಗಳನ್ನು ಪ್ರತಿದಿನ ಸೇವಿಸಬೇಕು. ಮಗುವಿಗೆ ಹಾಲುಣಿಸುವ ತಾಯಂದಿರು ಪ್ರತಿದಿನ 3-4 ಗ್ಲಾಸ್ ಹಾಲನ್ನು ನಿಯಮಿತವಾಗಿ ಸೇವಿಸಬೇಕು. 40+ ಮಹಿಳೆಯರು ವಿಟಮಿನ್ `ಡಿ’ ಯುಕ್ತ ಕ್ಯಾಲ್ಶಿಂನ್ನು ಕೂಡ ಸೇವಿಸಬೇಕು. ಪ್ರತಿದಿನ ಸ್ವಲ್ಪ ಹೊತ್ತು ನಮ್ಮ ದೇಹಕ್ಕೆ ಬಿಸಿಲು ಸೋಕುವಂತೆ ಮಾಡಬೇಕು. ವರ್ಷಕ್ಕೆ ಒಮ್ಮೆ ಅಥವಾ 2 ಸಲ ವಿಟಮಿನ್ ಹಾಗೂ ಕ್ಯಾಲ್ಶಿಯಂ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.
ಮಧುಮೇಹ ಅಥವಾ ಡಯಾಬಿಟೀಸ್ ಮಹಾಮಾರಿಯಂತೆ ಪಸರಿಸುತ್ತಿದೆ. ಇದರಿಂದ ರಕ್ಷಣೆ ಹೇಗೆ?
ಯಾವ ಗರ್ಭಿಣಿಯರಿಗೆ ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಇದೆಯೋ, ಅವರಿಗೆ ಗರ್ಭಾವಸ್ಥೆಯಲ್ಲಿ ಮಧುಮೇಹದ ಸಾಧ್ಯತೆ ಹೆಚ್ಚುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಮಧುಮೇಹ ಇದ್ದರೆ 40+ ಮಹಿಳೆಯರಿಗೂ ಅದು ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ಹೊರತಾಗಿ ಆಹಾರ ಸೇವನೆ ಬಗ್ಗೆ ನಿರ್ಲಕ್ಷ್ಯತನ ಹಾಗೂ ದೈಹಿಕ ನಿಷ್ಕ್ರಿಯತೆ ಕೂಡ ಈ ರೋಗ ಉಂಟಾಗಲು ಪ್ರಮುಖ ಕಾರಣಗಳಾಗಿವೆ. ಇದರ ಮುಖ್ಯ ಲಕ್ಷಣಗಳೆಂದರೆ ತೂಕ ಹೆಚ್ಚುವಿಕೆ, ಹೆಚ್ಚು ಹಸಿವಾಗುವಿಕೆ ಮತ್ತು ನೀರಡಿಕೆಯಾಗುವುದು ಮತ್ತು ಮೇಲಿಂದ ಮೇಲೆ ಮೂತ್ರಕ್ಕೆ ಹೋಗಬೇಕು ಎನ್ನಿಸುವುದು.
40+ ಆದಾಗ ವರ್ಷಕ್ಕೆ ಒಂದು ಸಲ ನಿಯಮಿತ ಪರೀಕ್ಷೆ ಮಾಡಿಸಿಕೊಳ್ಳಬೇಕು. ರಕ್ತ ಪರೀಕ್ಷೆ (ಬ್ಲಡ್ ಶುಗರ್ ಫಾಸ್ಟಿಂಗ್) ಮತ್ತು ಬ್ಲಡ್ ಶುಗರ್ ಪಿ.ಪಿ. ಆಹಾರ ಸೇವನೆಯ ಒಂದೂವರೆ ತಾಸಿನ ಬಳಿಕ ಮಾಡಿಸಿಕೊಳ್ಳಬೇಕು.
ಮಧುಮೇಹದ ಸಮಸ್ಯೆ ಕಾಣಿಸಿಕೊಂಡ ಬಳಿಕ ದಿನಚರಿ ಮತ್ತು ಆಹಾರದಲ್ಲಿ ಬದಲಾವಣೆ ತಂದುಕೊಳ್ಳುವುದರ ಮೂಲಕ ಆ ರೋಗದ ಮೇಲೆ ಅಷ್ಟಿಷ್ಟು ಹಿಡಿತ ಇಟ್ಟುಕೊಳ್ಳಬೇಕು. ನಿಯಮಿತ ವ್ಯಾಯಾಮ ಸಿಹಿ ಪದಾರ್ಥಗಳಾದ ಸಿಹಿ ಗೆಣಸು, ಆಲೂ, ಬಾಳೆಹಣ್ಣು, ಮಾವು ಇವನ್ನು ದೂರ ಇಡಬೇಕು. ಸಮಸ್ಯೆ ತೀರಾ ಹೆಚ್ಚಾದಾಗ ಔಷಧಿ ಚಿಕಿತ್ಸೆ ಮತ್ತು ಇನ್ಸುಲಿನ್ ಇಂಜೆಕ್ಷನ್ ಕೂಡ ಹಾಕಿಸಿಕೊಳ್ಳಬೇಕು. ಇವನ್ನೆಲ್ಲ ವೈದ್ಯರ ಸಲಹೆಯ ಮೇರೆಗೆ ಮಾತ್ರ ಮಾಡಬೇಕು.
ಥೈರಾಯ್ಡ್ ಸಮಸ್ಯೆ ಉಂಟಾಗಲು ಏನು ಕಾರಣ?
ಸಾಮಾನ್ಯವಾಗಿ ಹದಿವಯಸ್ಸಿನವರಲ್ಲಿ ಹಾಗೂ ಗರ್ಭಿಣಿಯರಲ್ಲಿ ಕಂಡುಬರುವ ಥೈರಾಯ್ಡ್ ಸಮಸ್ಯೆಯನ್ನು `ಹೈಪೊ ಥೈರಾಯಿಡಿಸಂ’ ಎಂದು ಹೇಳಲಾಗುತ್ತದೆ. ಇದರ ಮುಖ್ಯ ಲಕ್ಷಣಗಳೆಂದರೆ ಕತ್ತಿನಲ್ಲಿ ಊತ, ತೂಕ ಹೆಚ್ಚುವಿಕೆ ಮತ್ತು ಮುಟ್ಟಿನಲ್ಲಿ ಏರುಪೇರು. ಹದಿವಯಸ್ಸಿನ ಹುಡುಗಿಯರಿಗೆ ದೈಹಿಕ ಬೆಳಣಿಗೆಗಾಗಿ ಅಯೋಡಿನ್‌ನ ಅವಶ್ಯಕತೆ ಉಂಟಾಗುತ್ತದೆ. ಅದರ ಕೊರತೆ ಉಂಟಾದಾಗ `ಪ್ಯೂಬರ್ಟಿ ಗಾಯ್ಟರ್’ ಆಗುತ್ತದೆ. ಇದರ ಹೊರತಾಗಿ ಕೆಲವೊಂದು ಸ್ಥಳಗಳಲ್ಲಿ ಇದರ ಕೊರತೆ ಕಂಡುಬರುತ್ತದೆ. ಇದಕ್ಕೆ ಕಾರಣ ಅಲ್ಲಿನ ನೆಲದಲ್ಲಿ ಅಯೋಡಿನ್ ಕೊರತೆ ಉಂಟಾಗುವುದಾಗಿದೆ. ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಅದರ ಕೊರತೆಯ ಬಗ್ಗೆ ಗೊತ್ತಾಗುತ್ತದೆ. ಅಯೋಡಿನ್ ಉಪ್ಪಿನ ಬಳಕೆ ಹಾಗೂ ವೈದ್ಯರ ಸಲಹೆ ಪಡೆದು ನಿಯಮಿತ ಔಷಧಿ ಸೇವನೆ ಮಾಡಬೇಕು. 20-21ನೇ ವಯಸ್ಸಿನ ಬಳಿಕ ಹುಡುಗಿಯರಲ್ಲಿ ಇದು ತಂತಾನೇ ಸರಿಹೋಗುತ್ತದೆ. ಗರ್ಭಿಣಿಯರಲ್ಲಿ ಇದು ಕಂಡು ಬಂದಿದ್ದರೆ, ಹೆರಿಗೆಯ ಬಳಿಕ ಅದರ ಲಕ್ಷಣಗಳು ತಂತಾನೇ ಕಡಿಮೆಯಾಗುತ್ತವೆ.
ಮೆನೋಪಾಸ್ ಅಂದರೆ ಮುಟ್ಟು ನಿಲ್ಲುವ ಹಂತ ವಯಸ್ಸಿನ ಯಾವ ಘಟ್ಟದಲ್ಲಿ ಶುರುವಾಗುತ್ತದೆ?
ಅಂಡಕೋಶದಲ್ಲಿ ಅಂಡಗಳ ಉತ್ಪತ್ತಿ ಸಂಪೂರ್ಣವಾಗಿ ನಿಲ್ಲುವ ಸ್ಥಿತಿಯನ್ನು `ಮೆನೋಪಾಸ್’ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಮುಟ್ಟಿನ ಪ್ರಕ್ರಿಯೆ ನಿಂತುಹೋಗುತ್ತದೆ. 1-2 ತಿಂಗಳುಗಳ ಕಾಲ ಸತತವಾಗಿ ಮುಟ್ಟು ಬರದೇ ಇದ್ದರೆ ಅದನ್ನು `ಮೆನೋಪಾಸ್’ ಎನ್ನುತ್ತಾರೆ. 40-50ನೇ ವಯಸ್ಸಿನವರಲ್ಲಿ ಮುಟ್ಟು ನಿಲ್ಲಬಹುದಾಗಿದೆ.
ಅಂಡಾಣು ಉತ್ಪತ್ತಿ ಹಾಗೂ ಮುಟ್ಟಿನ ಸ್ಥಗಿತಗೊಳ್ಳುವ ಪ್ರಕ್ರಿಯೆ ಬೇರೆ ಬೇರೆ ಮಹಿಳೆಯರಲ್ಲಿ ಬೇರೆ ಬೇರೆ ವಯಸ್ಸಿನಲ್ಲಿ ಆಗಬಹುದು. ಗರ್ಭಧಾರಣೆ ಪ್ರಕ್ರಿಯೆಗೆ ಪ್ರೊಜೆಸ್ಟ್ರಾನ್ ಮತ್ತು ಈಸ್ಟ್ರೋಜೆನ್ ಹಾರ್ಮೋನು ಉತ್ಪತ್ತಿ ಅತ್ಯವಶ್ಯ. ಇವೆರಡು ಹಾರ್ಮೋನು ಉತ್ಪತ್ತಿ ಪ್ರಕ್ರಿಯೆ ಸ್ಥಗಿತಗೊಂಡಾಗ ಮುಟ್ಟಿನ ಹಾಗೂ ಅಂಡಾಣು ಬಿಡುಗಡೆಯ ಪ್ರಕ್ರಿಯೆಯ ಮೇಲಿನ ಹಿಡಿತ ತಪ್ಪುತ್ತದೆ. ಅಲ್ಲಿಂದಾಚೆಗೆ ಮುಟ್ಟು ಅನಿಯಮಿತಗೊಳ್ಳುತ್ತ, ಮುಟ್ಟು ನಿಲ್ಲುವ ಪ್ರಕ್ರಿಯೆ ಶುರುವಾಗುತ್ತದೆ. 40-50ರ ವಯೋಮಿತಿಯ ನಡುವೆ ಈ ಎಲ್ಲ ಪ್ರಕ್ರಿಯೆಗಳು ಜರುಗುತ್ತವೆ.
ಮೆನೋಪಾಸ್‌ನ ಕಾರಣದಿಂದ ದೇಹದಲ್ಲಿ ಕೆಳಕಂಡ ಪರಿವರ್ತನೆಗಳು ಆಗುತ್ತವೆ. ಗರ್ಭಕೋಶದ ಆಕಾರ ಕಿರಿದಾಗುವಿಕೆ, ವಿಪರೀತ ದಣಿವು, ಆಕಸ್ಮಿಕವಾಗಿ ತೀವ್ರ ಬಿಸಿಯ ಅನುಭವ, ಕೀಲುಗಳಲ್ಲಿ ನೋವು, ದೇಹದ ಕೆಲವು ಭಾಗದಲ್ಲಿ ಹೆಚ್ಚುವರಿ ಕೊಬ್ಬಿನ ಸಂಗ್ರಹ, ನಿದ್ರೆಯಲ್ಲಿ ಅಡಚಣೆ ಮುಂತಾದವು. ಈ ಲಕ್ಷಣಗಳ ಕಾರಣದಿಂದ ಸಿಡಿಮಿಡಿತನ ಹಾಗೂ ಖಿನ್ನತೆಯ ಸ್ಥಿತಿಯೂ ಉಂಟಾಗಬಹುದು.
ಮೆನೋಪಾಸ್ ಒಂದು ನೈಸರ್ಗಿಕ ಪ್ರಕ್ರಿಯೆ. ಅದಕ್ಕಾಗಿ ಯಾವುದೇ ಔಷಧಿಯ ಅಗತ್ಯವಿಲ್ಲ. ಆದರೆ ಯೋನಿ ಶುಷ್ಕತೆ ಅಥವಾ ಮೇಲಿಂದ ಮೇಲೆ ತೀವ್ರ ದೇಹ ಬಿಸಿ ಉಂಟಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಿ.
– ಡಾ. ಪಿ. ದೀಪಾ