ಕಥೆ –  ಸಿ.ಕೆ. ವೈಶಾಲಿ 

ಆಟದ ಮೈದಾನದಿಂದ `ಫೋರ್‌,’ `ಸಿಕ್ಸರ್‌’ ಎನ್ನುವ ಕೂಗು ಕೇಳಿ ಬರುತ್ತಿತ್ತು. ಮೈದಾನದಲ್ಲಿ ಬಿಸಿಲು ಸುಡುತ್ತಿದ್ದರೂ ಅದನ್ನು ಲೆಕ್ಕಿಸದೆ ಸುತ್ತಮುತ್ತಲ ಮನೆಗಳಿಂದ ನವೀನ್‌, ರಂಜನ್‌, ಸುಧೀರ್‌, ರಾಬಿನ್‌, ಆಕಾಶ್‌, ಶೇಖರ್‌, ವಿವೇಕ್‌ ಮತ್ತು ಸಂಪ್ರೀತ್‌ ತಮ್ಮ ಇತರೆ ಗೆಳೆಯರೊಡನೆ ಮೈದಾನದಲ್ಲಿ ಬಂದು ಸೇರಿದ್ದರು. ಪರೀಕ್ಷೆ ಹತ್ತಿರವಾಗುತ್ತಿತ್ತು. ಆದರೆ ಈ ಕ್ರಿಕೆಟ್‌ ಪ್ರೇಮಿಗಳಿಗೆ ಆಟದ ಹುಚ್ಚು ಹತ್ತಿತ್ತು. ಅವರ ತಾಯಿ ತಂದೆಯರ ಬುದ್ಧಿ ಮಾತುಗಳೆಲ್ಲಾ ತರೆಗೆಲೆಗಳಂತೆ ಗಾಳಿಗೆ ತೂರಿಹೋಗುತ್ತಿದ್ದವು. ಮಜವಾಗಿ ಆಡುವುದನ್ನು ಬಿಟ್ಟು ಪುಸ್ತಕ ಹಿಡಿದು ಕೂರುವುದು ಬೋರಿಂಗ್‌ಎನ್ನುವುದು ಅವರೆಲ್ಲರ ಅಭಿಪ್ರಾಯ. ಸುಧೀರ್‌ ಸದ್ದು ಮಾಡದೆ ಮನೆಯಿಂದ ಹೊರಬೀಳುವ ಸಮಯದಲ್ಲಿ ಅವನ ತಾಯಿ ನೋಡಿಯೇ ಬಿಟ್ಟರು. ಅವರು ಕೋಪಗೊಂಡು ಬೈಯುತ್ತಿದ್ದರೂ ಅವನು ತಪ್ಪಿಸಿಕೊಂಡು ಆಟಕ್ಕೆ ಓಡಿದ.

ಸ್ನೇಹಿತರ ಗುಂಪನ್ನು ಸೇರಿದ ಸುಧೀರ್‌, “ದೊಡ್ಡವರು ನಮ್ಮನ್ನು ಸ್ವಲ್ಪವೂ  ಅರ್ಥ ಮಾಡಿಕೊಳ್ಳುವುದಿಲ್ಲ. ನಮ್ಮ ಆಸೆ ಇಷ್ಟಗಳ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ…” ಎಂದ.

ಶೇಖರ್‌ ಅವನಿಗೆ ದನಿಗೂಡಿಸುತ್ತಾ, “ಸಚಿನ್‌ ತೆಂಡೂಲ್ಕರ್‌ ಮತ್ತು ಗವಾಸ್ಕರ್‌ರ ತಾಯಿ ತಂದೆಯರು ಅವರ ಜೊತೆ ಈ ರೀತಿ ನಡೆದುಕೊಂಡಿದ್ದರೆ ಅವರು ಕ್ರಿಕೆಟ್‌ ಚಾಂಪಿಯನ್ಸ್ ಆಗುತ್ತಲೇ ಇರಲಿಲ್ಲ,” ಎಂದ.

ನವೀನ್‌ಕೂಡ ಕೋಪದಲ್ಲಿದ್ದ. ಅವನ ತಂದೆ ಹಿಂದಿನ ರಾತ್ರಿ ಅವನ ಕ್ರಿಕೆಟ್‌ ಬ್ಯಾಟ್‌ನ್ನು ಎತ್ತಿಟ್ಟುಬಿಟ್ಟಿದ್ದರು. ಆದರೂ ಅವನಿಗೆ ಮನೆಯಲ್ಲಿ ನಿಲ್ಲಲಾಗಲಿಲ್ಲ. ನೇರವಾಗಿ ಮೈದಾನಕ್ಕೆ ಬಂದಿದ್ದ.

ಭಾನುವಾರದ ದಿನ ಈ ಹುಡುಗರ ಮನೆಗಳಲ್ಲಿ ಹೊರಗೆ ಲಂಚ್‌ ಪ್ರೋಗ್ರಾಮ್ ಅಥವಾ ಸಂಬಂಧಿಕರ ಮನೆಯ ಸಮಾರಂಭಕ್ಕೆ ಹೋಗುವ ಕಾರ್ಯಕ್ರಮದ ಮಾತು ನಡೆಯುತ್ತಿತ್ತು. ಆದರೆ ಆ ಹುಡುಗರಿಗೆ ಅದ್ಯಾವುದೂ ಬೇಕಿರಲಿಲ್ಲ. ಕ್ರಿಕೆಟ್‌ ಭೂತ ಅವರ ಮೇಲೆ ಸವಾರಿ ಮಾಡುತ್ತಿತ್ತು.

ಆಟದ ಮೈದಾನದ ಪಕ್ಕದಲ್ಲಿ ರಾಜಾರಾಮ್ ಅವರ ಬಂಗಲೆ ಕಾಣಿಸುತ್ತಿತ್ತು. ಅಲ್ಲಿಯ ಕಥೆಯೇ ಬೇರೆ ಬಗೆಯದು. ಅವರ ಏಕಮಾತ್ರ ಪುತ್ರ ರಾಹುಲ್‌ ಹೈಸ್ಕೂಲ್‌‌ನಲ್ಲಿ ಓದುತ್ತಿದ್ದ. ಅವನ ತಾಯಿ ರಶ್ಮಿಯದು ಮಿಲಿಟರಿ ಆಫೀಸರ್‌ನ ಶಿಸ್ತು. ಅವನ ದಿನಚರಿಯಲ್ಲಿ ಓದು ಬರಹ ಮಾತ್ರ ಇತ್ತು. ಆಟ, ಕುಣಿತ, ನೆಗೆತಗಳಿಗೆ ಅಲ್ಲಿ ಅವಕಾಶವೇ ಇರಲಿಲ್ಲ. ರಾಜಾರಾಮ್ ಮತ್ತು ರಶ್ಮಿಯ ಪ್ರಕಾರ ಮೈದಾನದಲ್ಲಿ ಕ್ರಿಕೆಟ್‌ ಆಡುವ ಹುಡುಗರು ಜವಾಬ್ದಾರಿ ಇಲ್ಲದೆ ಕೆಟ್ಟಿರುವ ಗುಂಪಿಗೆ ಸೇರಿದವರು. ಆದ್ದರಿಂದ ಅವರು ತಮ್ಮ ಮಗ ರಾಹುಲ್‌‌ನನ್ನು ಆ ಹುಡುಗರಿಂದ ದೂರ ಇರಿಸಿದ್ದರು. ರಸ್ತೆಯಲ್ಲಿ ರಾಜಾರಾಮ್ ದಂಪತಿಗೆ ಆ ಹುಡುಗರೇನಾದರೂ ಎದುರಾದರೆ ಇಬ್ಬರೂ ಅನಿಷ್ಟವನ್ನು ಕಂಡಂತೆ ಹುಡುಗರಿಂದ ಮುಖ ತಿರುಗಿಸಿ ನಡೆಯುತ್ತಿದ್ದರು. ಹುಡುಗರೂ ಸಹ ಅವರನ್ನು ಕಂಡರೆ ಅಂಜುತ್ತಿದ್ದರು.

ಅಂದು ಭಾನುವಾರದ ದಿನ ರಾಹುಲ್‌ ಪುಸ್ತಕ ಹಿಡಿದು ಕುಳಿತಿದ್ದನು. ಹುಡುಗರ ಉತ್ಸಾಹಭರಿತ ಕೇಕೆಯು ಅವನ ಕಿವಿಗೆ ಬೀಳುತ್ತಿತ್ತು. ಅವನ ಮನಸ್ಸೂ ಆ ಕಡೆಗೆ ಎಳೆಯುತ್ತಿತ್ತು. ಆದರೆ ತಾಯಿಯ ಬಿಗಿಯಾದ ಕಟ್ಟುಪಾಡಿನಿಂದಾಗಿ ಮುದುಡಿ ಕುಳಿತಿದ್ದ. ಓದುವುದರ ಕಡೆಗೆ ಗಮನಹರಿಸಲು ಪ್ರಯತ್ನಿಸಿದಷ್ಟೂ ಮನಸ್ಸು ಹಕ್ಕಿಯಂತೆ ಮೈದಾನದ ಕಡೆಗೇ ಹಾರುತ್ತಿತ್ತು.

ರಾಹುಲ್‌ ಹೀಗೆ ಇಬ್ಬಗೆಯ ಮನಸ್ಸಿನಲ್ಲಿ ಕುಳಿತಿರುವಾಗ ಏನೋ ವಿಚಿತ್ರವಾದ ವಾಸನೆ ಮೂಗಿಗೆ ಬಡಿಯಿತು. ಅವರ ತಾಯಿ ತಂದೆ ಇಬ್ಬರೂ ಹೊರಗೆ ಹೋಗಿದ್ದರು. ಅಡುಗೆಯವಳೂ ತನ್ನ ಕೆಲಸ ಮುಗಿಸಿ ಹೊರಟುಹೋಗಿದ್ದಳು. ನಿಧಾನವಾಗಿ ಆ ವಾಸನೆಯು ಕೋಣೆಯನ್ನು ವ್ಯಾಪಿಸಿತು. ಮನೆಯ ವಿಷಯಗಳ ಬಗ್ಗೆ ರಾಹುಲ್‌‌ಗೆ ಏನೂ ತಿಳಿದಿರಲಿಲ್ಲ. ಓದು ಬರಹದ ವಿಷಯವಲ್ಲದೆ ಮತ್ತಾವುದನ್ನೂ ಅವನ ತಾಯಿ ತಂದೆಯರು ಅವನೊಡನೆ ಮಾತನಾಡುತ್ತಿರಲಿಲ್ಲ. ವಾಸನೆಯು ಅತಿ ಹೆಚ್ಚಾದಾಗ ಅವನಿಗೆ ಗಾಬರಿಯಾಯಿತು. ಈಗೇನು ಮಾಡಲಿ ಎಂಬ ಹೆದರಿಕೆಯಿಂದ ಅವನು ನಡುಗಿದನು. ಪ್ರಜ್ಞೆ ತಪ್ಪುವಂತಾಯಿತು. ಸಹಾಯಕ್ಕೆ ಯಾರನ್ನು ಕರೆಯಲಿ? ಮನೆಯ ಮುಂದೆಯೇ ಹುಡುಗರೆಲ್ಲ ಆಡುತ್ತಿದ್ದರು. ತಾಯಿ ಅವರನ್ನೆಲ್ಲ ಕೆಟ್ಟ ಹುಡುಗರೆಂದು ಹಣೆ ಪಟ್ಟಿ ಕಟ್ಟಿಬಿಟ್ಟಿದ್ದಳು. ಹೀಗಾಗಿ ಅವರನ್ನು ಯಾವ ಮುಖದಿಂದ ಸಹಾಯಕ್ಕಾಗಿ ಕರೆಯುವುದು? ಆದರೆ ಅವನಿಗರಿವಿಲ್ಲದೆಯೇ ರಾಹುಲ್‌‌ನ ಬಾಯಿಯಿಂದ ನವೀನ್‌… ನವೀನ್‌… ಸುಧೀರ್‌… ಸುಧೀರ್‌… ಎಂಬ ಕೂಗು ಹೊರಬರತೊಡಗಿತು.

ಆಟವಾಡುತ್ತಿದ್ದ ಹುಡುಗರಿಗೆ ಕಿಟಕಿಯ ಕಂಬಿ ಹಿಡಿದು ಕಷ್ಟಪಟ್ಟು ನಿಂತಿದ್ದ ರಾಹುಲ್‌ ಕಾಣಿಸಿದ. ಅವನು ಕರೆಯುತ್ತಿದ್ದುದೂ ಸ್ವಲ್ಪ ಸ್ವಲ್ಪ ಕೇಳಿಸಿ ಅವರಿಗೆ ಆಶ್ಚರ್ಯವಾಯಿತು. ಆಟ ಅಲ್ಲಿಗೇ ನಿಂತಿತು. ಅವರಿಗೆ ತಮ್ಮ ಕಿವಿಗಳ ಮೇಲೆ ನಂಬಿಕೆಯಾಗಲಿಲ್ಲ. ಆದರೆ ರಾಹುಲ್‌ ಸಹಾಯಕ್ಕಾಗಿ ಕೈ ಬೀಸುತ್ತಿದ್ದುದು ಕಾಣಿಸಿತು. ಬ್ಯಾಟ್‌ ಬಾಲ್‌ಗಳನ್ನು ಅಲ್ಲೇ ಬಿಟ್ಟು ಹುಡುಗರು ಬಂಗಲೆಯ ಕಡೆಗೆ ಓಡಿಬಂದರು.

ಅವರೆಲ್ಲ ತಲುಪುವ ಹೊತ್ತಿಗೆ ರಾಹುಲ್‌ ಪ್ರಜ್ಞಾಹೀನನಾಗಿ ಕುಸಿದಿದ್ದ. ನವೀನ್‌ ಮತ್ತು ಶೇಖರ್‌ ಅವನನ್ನು ಗಾಳಿಯಾಡುವ ಸ್ಥಳಕ್ಕೆ ಎತ್ತಿಕೊಂಡು ಹೋದರು. ಸುಧೀರ್‌, ಆಕಾಶ್‌ ಮತ್ತು ಶೇಖರ್‌ ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆದರು. ರಂಜನ್ ಓಡಿಹೋಗಿ ಗ್ಯಾಸ್‌ ಸಿಲಿಂಡರ್‌ನ ನಾಬ್‌ನ್ನು ಆಫ್‌ ಮಾಡಿದ. ಅಡುಗೆಯವಳು ಹೋಗುವ ಅವಸರದಲ್ಲಿ ಗ್ಯಾಸ್‌ನ್ನು ಸರಿಯಾಗಿ ನಿಲ್ಲಿಸಿರಲಿಲ್ಲ.

ಇದೇ ಹೊತ್ತಿಗೆ ರಶ್ಮಿ ಮನೆಗೆ ಬಂದಳು. ನಡೆದ ವಿಷಯವನ್ನೆಲ್ಲ ತಿಳಿದು ಮಕ್ಕಳ ಎದುರಿಗೇ ಅತ್ತುಬಿಟ್ಟಳು. ಯಾರನ್ನು ಕೆಟ್ಟ ಹುಡುಗರೆಂದು ದೂರವಿರಿಸಿದ್ದಳೋ, ಇಂದು ಅವರಿಂದಲೇ ಒಂದು ದೊಡ್ಡ ದುರ್ಘಟನೆ ನಡೆಯುವುದು ತಪ್ಪಿತ್ತು. ಮಾರನೆಯ ದಿನ ರಾಹುಲ್‌ನ ಆರೋಗ್ಯ ವಿಚಾರಿಸಲು ಆ ಹುಡುಗರೆಲ್ಲ ಮನೆಗೆ ಬಂದಾಗ ರಾಜರಾಮ್ ಅವರಿಗೆಲ್ಲ ಥ್ಯಾಂಕ್ಸ್ ಹೇಳುತ್ತಾ ಒಬ್ಬೊಬ್ಬರಿಗೂ ಚಾಕಲೇಟ್‌ ಕೊಟ್ಟರು. ಈಗ ಅವರಿಗೆ ಓದು ಬರಹದ ಜೊತೆಗೆ ಆಟ ಅಗತ್ಯ ಎಂಬುದು ಅರಿವಾಗಿತ್ತು.

ನಂತರದ ದಿನಗಳಲ್ಲಿ ರಾಹುಲ್‌ ಶಾಲೆಯಿಂದ ಬಂದ ಮೇಲೆ ಆಟದ ಮೈದಾನಕ್ಕೆ ಓಡುತ್ತಿದ್ದನು. ಅವನ ಆಟ ಪಾಠಗಳೆರಡೂ ಸಮಾನವಾಗಿ ಉತ್ತಮಗೊಂಡವು. ಶಾಲಾ ಪರೀಕ್ಷೆಯಲ್ಲಿ ಹಿಂದಿಗಿಂತ ಉತ್ತಮ ಅಂಕಗಳನ್ನು ಪಡೆದ. ಆಟದ ಮೈದಾನದಲ್ಲಿ ಬೇರೆ ಟೀಮಿನೊಡನೆ ಆಡಿದ ಕ್ರಿಕೆಟ್‌ ಮ್ಯಾಚ್‌ನಲ್ಲಿ ರಾಹುಲ್‌‌ನೇ ಅತಿ ಹೆಚ್ಚು ಫೋರ್‌ಗಳನ್ನು ಬಾರಿಸಿ ಪಂದ್ಯ ಶ್ರೇಷ್ಠನೆಂದು ಬಹುಮಾನ ಪಡೆದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ