ಸಿಂಧಿಯಾ ಗರ್ಲ್ಸ್ ಸ್ಕೂಲ್‌’ ಗ್ವಾಲಿಯರ್‌ನ ದಟ್ಟ ಕಾಡಿನಲ್ಲಿದೆ. ನಾನು ಅಲ್ಲಿ 2 ವರ್ಷ ಓದಿದ್ದೆ. ಆ ದಿನಗಳಲ್ಲಿ ನನಗೆ ಕಾಡಿನಲ್ಲಿ ಒಂದು ಚಿಕ್ಕ ದೇವಸ್ಥಾನ ಕಂಡುಬಂದಿತ್ತು.  ಆಗ ನನಗೆ ಯಾರೊ ಒಬ್ಬರು ಶಾಲೆಯ ಹೋಂವರ್ಕ್‌ ಮಾಡುವ ಬದಲು ನಾನು ಅಲ್ಲಿ 101 ಸಲ ಪೂಜೆ ಮಾಡಿಸಿದರೆ, ಕ್ಲಾಸ್‌ನಲ್ಲಿ ಸದಾ ಪ್ರಥಮ ಸ್ಥಾನದಲ್ಲಿ ಇರ್ತೀಯಾ ಎಂದು ಹೇಳಿದ್ದರು.

ದಿನಕ್ಕೆ 2 ಗಂಟೆ ಓದುವ ನಾನು 2 ಗಂಟೆ ಪೂಜೆಯಲ್ಲಿ ಮಗ್ನಳಾದೆ. ಇದರ ಪರಿಣಾಮವೆಂಬಂತೆ, 80% ಅಂಕ ತೆಗೆದುಕೊಳ್ಳುತ್ತಿದ್ದ ನಾನು ತೆಗೆದುಕೊಂಡದ್ದು ಕೇವಲ ಶೇ.50 ಮಾತ್ರ. ನನ್ನ ಮೂರ್ಖತನದ ನಿರ್ಧಾರಕ್ಕಾಗಿ ಪೋಷಕರು ನನ್ನನ್ನು ತರಾಟೆಗೆ ತೆಗೆದುಕೊಂಡರು.

ಮೋಸದ ಹೊಸ ಉದಾಹರಣೆಗಳು

ನಾನು ಪ್ರತಿದಿನ `ಪೀಪಲ್ಸ್ ಫಾರ್‌ ಅನಿಮಲ್’ಗಾಗಿ ಕಾರ್ಯ ನಿರ್ವಹಿಸುತ್ತ ಮಾನವ ಸ್ವಭಾವದ ಮೂರ್ಖತನಗಳು, ಕ್ರೂರತೆ ಹಾಗೂ ವ್ಯಾಪಾರೀಕರಣದ ಉದಾಹರಣೆಗಳ ರಹಸ್ಯಗಳು ಯಥೇಚ್ಛವಾಗಿ ದೊರಕುವುದನ್ನು ಗಮನಿಸಿದೆ. ನಮ್ಮ ಜೊತೆಗೆ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗಿ ಒಂದು ಸುದ್ದಿ ತೆಗೆದುಕೊಂಡು ಬಂದಳು. ಕೆಲವು ಮಂತ್ರವಾದಿಗಳು ಮಧ್ಯಪ್ರದೇಶದ ಕಾಡುಗಳಿಂದ ಅಪರೂಪದ ಗಿಡಮೂಲಿಕೆಗಳನ್ನು ಫ್ಲಿಪ್‌ ಕಾರ್ಟ್‌ ಮತ್ತು ಓಎಲ್ಎಕ್ಸ್ ನಲ್ಲಿ ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗಾಗಿ ಪ್ರಚಾರ ಮಾಡುತ್ತಿದ್ದಾರೆಂದು ಹೇಳಿದಳು. ಸ್ಥಳೀಯ ಭಾಷೆಯಲ್ಲಿ ಅದಕ್ಕೆ `ಹಠ್‌ ಜೋಡಿ’ ಎಂದು ಹೆಸರು. ಫ್ಲಿಪ್‌ಕಾರ್ಟ್‌ಗೆ ಈ ಬಗ್ಗೆ ಕೇಳಿದಾಗ ಅವರು ಖೇದ ವ್ಯಕ್ತಪಡಿಸುತ್ತ ಅದನ್ನು ವಾಪಸ್‌ ಪಡೆದರು. ಆದರೆ ಬೇರೆ ವೆಬ್‌ಸೈಟ್‌ಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ತಂತ್ರವಾದ, ಸ್ಪೀಕಿಂಗ್‌ ಟ್ರೀ, ಆಸ್ಟ್ರೋವಿಧಿ, ಕಾಮ್ಯ ಸಿಂಧೂರ ವೆಬ್‌ಸೈಟ್‌ಗಳು ನಿರಂತರವಾಗಿ ಹೊಸ ಹೊಸ ಬಕರಾಗಳನ್ನು ಹುಡುಕಿ ಇದನ್ನು ಮಾಡುತ್ತಿವೆ. ಅವರು `ಹಠ್‌ ಜೋಡಿ’ಯ ಫೋಟೋ ಹಾಕಿ, ಅದರ ಚಮತ್ಕಾರಿಕ ಶಕ್ತಿಗಳನ್ನು ವಿವರಿಸಿ ಒಂದು ಮೊಬೈಲ್ ನಂಬರಿಗೆ ಸಂಪರ್ಕಿಸಲು ತಿಳಿಸುತ್ತಾರೆ. ಧಾರ್ಮಿಕ ಕೆಲಸ ಮಾಡುವ ಈ ವೆಬ್‌ಸೈಟ್‌ಗಳಿಗೆ ಅನೈತಿಕ ಹಾಗೂ ಅಕ್ರಮ ಕೆಲಸ ಮಾಡುವ ಉದ್ದೇಶವಿರುತ್ತದೆ. ಹೀಗಾಗಿ ಅಲ್ಲಿ ವಿಳಾಸ ಕೊಡುವ ಸಂದರ್ಭವೇ ಉದ್ಭವಿಸುವುದಿಲ್ಲ. ನಾವಿದನ್ನು ಮಾಡುತ್ತಿಲ್ಲ, 40 ದೇಶಗಳಲ್ಲಿ ಮಾನವ ಸೇವೆಯಲ್ಲಿ ನಿರತರಾಗಿದ್ದೇವೆ ಎಂದರು.

ಏನಿದು `ಹಠ್‌ ಜೋಡಿ’?

`ಹಠ್‌ ಜೋಡಿ’ ಹೆಸರಿನ ಇದು ಖಂಡಿತವಾಗಿಯೂ ಸಸ್ಯ ಮೂಲದ್ದಂತೂ ಅಲ್ಲವೇ ಅಲ್ಲ. ಯಾವುದೇ ವೆಬ್‌ಸೈಟ್‌ ಇದರ ವೈಜ್ಞಾನಿಕ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಯಾವ ಕಾಡಿನಲ್ಲಿ ಯಾವ ಆದಿವಾಸಿಗಳು ಇದನ್ನು ಬೆಳೆಯುತ್ತಾರೆ ಎಂಬುದನ್ನು ಕೂಡ ಅವರು ಹೇಳುವುದಿಲ್ಲ. ಕೆಲವರು ಇದನ್ನು ಗಿಡಮೂಲಿಕೆ ಎಂದರೆ, ಇನ್ನೂ ಕೆಲವರು ಇದನ್ನು ಮರದ ಮೇಲೆ ಬೆಳೆ ಒಂದು ವಿಶಿಷ್ಟ ಸಸ್ಯ ಎನ್ನುತ್ತಾರೆ. ಒಂದು ಸೈಟ್‌ನಲ್ಲಿ ಇದರ ಹೆಸರನ್ನು `ಭರ್ನಾನಿಯಾ ಅನುವಾ’ ಎಂದು ಉಲ್ಲೇಖಿಸಲಾಗಿದೆ. ಅದರ ಪರ್ಪಲ್ ಬಣ್ಣದ ಹೂವಿನ ಬೀಜಗಳು ಮಾವಿನ ಹಣ್ಣಿನ ಆಕಾರದಲ್ಲಿರುತ್ತವೆ, ಅದರಲ್ಲಿ ಹುಕ್‌ ತೆರನಾದದ್ದು ಇರುವುದರಿಂದ, ಅದು ಪ್ರಾಣಿಗಳ ಕಾಲುಗಳಲ್ಲಿ ತಗುಲಿ ಹೊಸ ಸ್ಥಳಕ್ಕೆ ಹೋಗಿ ಬೆಳೆಯುತ್ತವೆ.

ಬಂಗಾಳಿಯಲ್ಲಿ ಇದು `ಬಾಘಚರೆ,’ ಹಿಂದಿಯಲ್ಲಿ `ಉಲಟ್‌ ಕಾಂಟಾ’ ಎಂದು ಹೇಳಲಾಗುತ್ತದೆ. ಒಂದು ಸೈಟ್‌ ಇದನ್ನು `ನೇಪಾಳಿ ಸಸ್ಯ’ ಎಂದು ಹೇಳಿದರೆ, ಇನ್ನೊಂದು `ಮೆಕ್ಸಿಕೊ ಸಸ್ಯ’ ಎಂದು ಉಲ್ಲೇಖಿಸುತ್ತದೆ.

`ಹಠ್‌ ಜೋಡಿ’ ಎನ್ನುವುದು ವಾಸ್ತವದಲ್ಲಿ ಒಂದು ಮೂಳೆ. ಕಣ್ಮರೆಯಾಗುತ್ತಿರುವ ಮಾನಿಟರಿ ಹೆಸರಿನ ಹಲ್ಲಿಯಂತಿರುವ ಜೀವಿಯೊಂದರ ಗುಪ್ತಾಂಗದ ಒಂದು ಭಾಗ. ಅದು ಸಂರಕ್ಷಿತ ಪ್ರಾಣಿಗಳ ಪಟ್ಟಿಯಲ್ಲಿದೆ. ಇದನ್ನು ಮಾರಾಟಕ್ಕಿಟ್ಟಿರುವ ಪ್ರತಿಯೊಂದು ವೆಬ್‌ಸೈಟ್‌ಗಳಿಗೂ ಇದು ಗೊತ್ತು. ಹೀಗಾಗಿ ಇದರ ಬಗ್ಗೆ ಬರೆಯುವಾಗ `ಚಮತ್ಕಾರಿ’ ಎಂದು ಸುಳ್ಳು ಹೇಳುತ್ತ ಕೊನೆಯಲ್ಲಿ ಅದು ಮಾರಾಟಕ್ಕಿಲ್ಲ ಎನ್ನುತ್ತವೆ. ಈ ಶುಷ್ಕ ಲಿಂಗ ಎರಡು ಕೈಗಳಂತೆ ಗೋಚರಿಸುತ್ತವೆ. ಕೆಳಗೆ ಒಂದಕ್ಕೊಂದು ತಳುಕು ಹಾಕಿಕೊಂಡಿವೆ. ಹೀಗಾಗಿ ಇದಕ್ಕೆ `ಹಾತ್‌ ಜೋಡಿ’,  `ಹಠ್‌ ಜೋಡಿ’ ಎಂಬ ಹೆಸರು ಬಂದಿದೆ. ಈ ಲಿಂಗದಿಂದ ಏನೇನು  ಆಗಬಹುದು ಎಂದು ಬಡಾಯಿ ಕೊಚ್ಚಿಕೊಳ್ಳಲಾಗುತ್ತಿದೆ? ಒಂದು ವೇಳೆ ಇದರ ಒಂದು ಸಣ್ಣ ತುಂಡನ್ನು  ಪ್ರತಿದಿನ ತಿಂದರೆ ಅಥವಾ ಅದನ್ನು ಬೀರುವಿನಲ್ಲಿ ಇರಿಸಿದರೆ ವೈರಿಗಳ ಮೇಲೆ ಗೆಲವು ಸಾಧಿಸಬಹುದು. ಕೋರ್ಟಿನಲ್ಲಿ ಮೊಕದ್ದಮೆ ಗೆಲ್ಲುವಿರಿ, ಶ್ರೀಮಂತರಾಗುವಿರಿ. ಭೂತಗಳಿಂದ ಮುಕ್ತಿ ದೊರಕುತ್ತದೆ. ಹಲವು ಕಷ್ಟಗಳಿಂದ ಮುಕ್ತಿ ದೊರಕುತ್ತದೆ. ವಶೀಕರಣದ ಶಕ್ತಿ ಪಡೆದುಕೊಳ್ಳುವಿರಿ. ಜೀವನ ಸುಖಕರ ಮತ್ತು ಸುರಕ್ಷಿತವಾಗಿರುತ್ತದೆ ಇತ್ಯಾದಿ ಇತ್ಯಾದಿ…..

ಎಚ್ಚರಿಕೆಯ ನಿಟ್ಟಿನಲ್ಲಿ ಈ ವೆಬ್‌ಸೈಟ್‌ಗಳು ಹೇಳುವುದೇನೆಂದರೆ, ಇದರ ಜೊತೆಗೆ ನೀವು ತಾಂತ್ರಿಕ ವಿಧಿ ವಿಧಾನಗಳನ್ನು ಪೂರೈಸಿದಾಗಲೇ ಇದರ ಲಾಭ ಪಡೆದುಕೊಳ್ಳಬಹುದು. ಅದಕ್ಕಾಗಿ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಪೂಜಾರಿಯೇ ಸೈಟ್‌ಬಗ್ಗೆ ಹೇಳುತ್ತಾನೆ. ಅಷ್ಟೇ ಅಲ್ಲ, ಹಲವು ಬಗೆಯ ಸಾಮಾನುಗಳನ್ನು ತರಲು ಹೇಳುತ್ತಾನೆ. ವಿಧಿ ವಿಧಾನದಲ್ಲಿ ಏನಾದರೂ ಅಡ್ಡಿ ಆತಂಕ ಉಂಟಾದರೆ ನಿಮಗೆ ಬೇಕಾದ ಫಲ ದೊರೆಯದೆ ಹೋಗಬಹುದು.

ಹಲವು ಸೈಟ್‌ ಹಲವು ಮಾತು

ಕೆಲವು ಸೈಟ್‌ಗಳು ಇದನ್ನು ಎಣ್ಣೆಯಲ್ಲಿ ಅದ್ದಿ ಕೆಂಪು ಬಟ್ಟೆಯಲ್ಲಿ ಸುತ್ತಿ ಇಡಬೇಕೆನ್ನುತ್ತದೆ. ಬೇರೊಂದು ಸೈಟ್‌ ಏಲಕ್ಕಿ ಅಥವಾ ತುಳಸಿ ಎಲೆಯಲ್ಲಿ ಸುತ್ತಿ ಬೆಳ್ಳಿಯ ಪೆಟ್ಟಿಗೆಯಲ್ಲಿ ಇಡಬೇಕೆಂದು ಹೇಳುತ್ತದೆ. ಮತ್ತೆ ಕೆಲವು ಅದನ್ನು ಸೇವಿಸುವ ಬಗ್ಗೆ ಹೇಳುತ್ತವೆ. ಏಕೆಂದರೆ ನೀವು ಅದನ್ನು ಮತ್ತೆ ಖರೀದಿಸಲು ಅವರ ಬಳಿಯೇ ಹೋಗಬೇಕಾಗುತ್ತದೆ. ಕೆಲವು ಸೈಟ್‌ಗಳು ಕೋಣೆಯಲ್ಲಿ ಕುಳಿತು ಅದನ್ನು ಕೈಯಲ್ಲಿ ಹಿಡಿದುಕೊಂಡು ಮಂತ್ರಪಠಿಸಬೇಕೆಂದು ಹೇಳುತ್ತವೆ. ಅದನ್ನು ಗಂಗಾಜಲದಲ್ಲಿ ಒದ್ದೆ ಮಾಡಿ, ಪೂಜೆ ಮಾಡಿದ ಬಳಿಕ ಪರ್ಸ್‌ ಅಥವಾ ಕಪಾಟಿನಲ್ಲಿಡಬೇಕು. ಕೆಲವು ಸೈಟ್‌ಗಳು 40-45 ದಿನಗಳ ಕಾಲ ಮಾರುತಿ ಮೂರ್ತಿಯ ಬಳಿ ಇಡಬೇಕು. ಪ್ರತಿದಿನ ಅಕ್ಕಿ, ಲವಂಗ, ಶ್ರೀಗಂಧದೊಂದಿಗೆ ಪೂಜೆ ಮಾಡಬೇಕು ಎಂದು ಹೇಳುತ್ತವೆ. ಬೇರೊಂದು ಸೈಟ್‌ ಕರ್ಪೂರ, ಲವಂಗ, ಅಕ್ಕಿ ಹಾಗೂ ಬೆಳ್ಳಿಯ ನಾಣ್ಯಗಳ ಜೊತೆ ಇಡಬೇಕೆಂದು ಆದೇಶಿಸುತ್ತದೆ. ಒಂದು ಸೈಟ್‌ ಅಂತೂ ಇದನ್ನು ದೀಪಾವಳಿ ಸಮಯದಲ್ಲಿ ಖರೀದಿಸಬೇಕು. ಏಕೆಂದರೆ ಜೂಜಿನಲ್ಲಿ ಸಾಕಷ್ಟು ಹಣ ಗಳಿಸಲು ಅವಕಾಶ ದೊರೆಯುತ್ತದಂತೆ……

ಮಾನಿಟರ್‌ ಲಿಜರ್ಡ್‌ನ 4 ಪ್ರಭೇದಗಳು ದೇಶದಲ್ಲಿ ಕಂಡುಬರುತ್ತವೆ. ಅವುಗಳಲ್ಲಿ ಕೆಲವೇ ಕೆಲವು ಅಂದರೆ 100ರ ಆಸುಪಾಸಿನಲ್ಲಿ ಉಳಿದಿವೆ. ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಹಾಗೂ ಒಡಿಶ್ಶಾದಲ್ಲಿ ಅವು ಇವೆ. ಆದಿವಾಸಿಗಳು ಅವುಗಳ ಲಿಂಗ ಕತ್ತರಿಸಿ ಅವನ್ನು ಮಾರಾಟ ಮಾಡುತ್ತಾರೆ. ವನ್ಯಜೀವಿ ಕಾಯ್ದೆ 1972ರ ಪ್ರಕಾರ ಅವುಗಳ ಅಥವಾ ಅಂಗಗಳ ವ್ಯಾಪಾರ ಕಾನೂನಿನನ್ವಯ ಅಪರಾಧ. ಕೆಲವೇ ಕೆಲವು ಜನರು ಮಾತ್ರ ಸಿಕ್ಕಿ ಬೀಳುತ್ತಾರೆ. ಈವರೆಗೆ 210 `ಹಠ್‌ ಜೋಡಿ’ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ `ಹಠ್‌ ಜೋಡಿ’ಗಳ ಬಗ್ಗೆ ಜಾಹೀರಾತು ನಿಮಗೆಲ್ಲಾದರೂ ಕಂಡುಬಂದರೆ ನನಗೆ ತಿಳಿಸಿ.

– ಮೇನಕಾ ಗಾಂಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ