ಯಾರನ್ನು ಮಗಳು ಮದುವೆ ಆಗ್ತಾಳೆ ಅಂತ ಡ್ಯಾಡಿಗೆ ಗೊತ್ತು!

ಇತ್ತೀಚೆಗೆ ನಡೆದ ಬಾಲಿವುಡ್‌ನ ಒಂದು ಮದುವೆ ಸಮಾರಂಭದ ಅರಿಶಿನದ ಕಾರ್ಯಕ್ರಮಕ್ಕೆ ಶ್ರದ್ಧಾ ಕಪೂರ್‌ ಬಂದಿಳಿದಾಗ, ಜನರು ಇವಳ ಕೈಗೂ ಬೇಗ ಅರಿಶಿನ ತಗುಲಲಿದೆ ಎಂದು ಮಾತನಾಡಿಕೊಂಡರು. ಆದರೆ ಇವಳ ಕನಸಿನ ರಾಜಕುಮಾರ ಯಾರಿರಬಹುದು ಎಂಬುದಂತೂ ಇನ್ನೂ ಸಸ್ಪೆನ್ಸ್. ಶ್ರದ್ಧಾಳ ತಂದೆ ಶಕ್ತಿಕಪೂರ್‌ ಹೇಳುವಂತೆ, ತಾನು ಇಂಥ ಹುಡುಗನನ್ನೇ ಮದುವೆಯಾಗು ಎಂದು ಮಗಳ ಮೇಲೆ ಒತ್ತಡ ಹೇರುವುದಿಲ್ಲವಂತೆ. ಮಗಳು ಯಾರನ್ನು ಮೆಚ್ಚಿ ಆರಿಸುತ್ತಾಳೋ, ಅವನೇ ಅಳಿಯನಂತೆ!

ಹೊಸ ನಟಿಯರಿಗೆ ಈ ಕಾಟ ತಪ್ಪಿದ್ದಲ್ಲ!

ಸಿನಿಮಾಗಳಲ್ಲಿ ಯಾವುದೇ ಎಗ್ಗಿಲ್ಲದೆ ತನ್ನನ್ನು ತಾನು ಎಕ್ಸ್ ಪೋಸಿಂಗ್‌ಗೆ ಒಡ್ಡಿಕೊಳ್ಳುವ ಮಾಹಿ ಗಿಲ್‌, 11 ವರ್ಷಗಳ ಹಿಂದೆ ತಾನು ಅನುಭವಿಸಿದ ಚಿತ್ರಹಿಂಸೆಯನ್ನು ಹೀಗೆ ಹೇಳಿಕೊಳ್ಳುತ್ತಾಳೆ, “ನಾನು ಬಾಲಿವುಡ್‌ನ ಚಿತ್ರಗಳಿಗೆ ಅವಕಾಶಕ್ಕಾಗಿ ಎಡತಾಕುತ್ತಿದ್ದಾಗ, ಒಬ್ಬ ಡೈರೆಕ್ಟರ್‌ ನನಗೆ `ಹೀಗೆ ಸೀರೆ, ಸಲ್ವಾರ್‌ ಸೂಟ್‌ನಲ್ಲಿ ಗೌರಮ್ಮನಂತೆ ನಟಿಸಲು ಇದು 80ರ ದಶಕವಲ್ಲ. ಇಂದಿನ ಚಿತ್ರಗಳಲ್ಲಿ ಅವಕಾಶ ಬೇಕಾ… ನೈಟಿ ಧರಿಸಿ ಬಂದು ಅದನ್ನು ಜಾರಿಸಲು ಯತ್ನಿಸು. ಇಂಥ ಬೋಲ್ಡ್ ನೆಸ್ ಇಲ್ಲದ ನಿನ್ನಂಥ ಮಿಡ್ಲ್ ಕ್ಲಾಸ್‌ ಮೆಂಟಾಲಿಟಿಗೆ ಇಲ್ಲಿ ಅವಕಾಶ ಸಿಗಲ್ಲ!’ ಈ ಮಾತುಗಳಿಂದ ನಾನು ಗಾಬರಿಗೊಂಡಿದ್ದೆ. ಆಗ ನೈಟಿ ಧರಿಸಿ ನಟಿಸಲು ಮುಂದಾದೆ. ಆಗ ಇಂಡಸ್ಟ್ರಿ ಜನ ನನಗೆ ಆತ ಹೊಸ ನಟಿಯರನ್ನು ಹೀಗೇ ಶೋಷಿಸುವುದು ಎಂದಾಗ ನಾನು ಎಚ್ಚೆತ್ತೆ.” ಮಾಹಿಯ ಹೊಸ ಚಿತ್ರ `ಗ್ಯಾಂಗ್‌ಸ್ಟರ್‌` ಬಿಡುಗಡೆಗೆ ಸಿದ್ಧವಿದೆ. ಇವಳೊಂದಿಗೆ ಜಿಮಿ ಶೇರ್‌ ಗಿಲ್‌, ಸಂಜಯ್‌ ದತ್ ಕೂಡ ಇದ್ದಾರೆ.

ನೇವಿ ಆಫಿಸರ್‌ ಆದ ಅಕ್ಷಯ್‌ಗೆ ತಿರುಗೇಟು!

ಫೇಸ್‌ಬುಕ್‌ನಲ್ಲಿ ನೇವಿ ಯೂನಿಫಾರ್ಮ್ ನ್ನು ಹರಾಜಿಗಿಟ್ಟ ಅಕ್ಷಯ್‌ ಕುಮಾರ್‌ಗೆ ಒಬ್ಬ ಹಿರಿಯ ನೇವಿ ಅಧಿಕಾರಿ ಚೆನ್ನಾಗಿ ಛೀಮಾರಿ ಹಾಕಿದ್ದಾರೆ. ಈಗ ಇವನನ್ನು ಕೋರ್ಟಿಗೆಳೆದು ಮಾನ ಹರಾಜು ಹಾಕಲಿದ್ದಾರೆ. ಅಸಲಿಗೆ ನಡೆದದ್ದೇನು? ಅಕ್ಷಯ್‌`ರುಸ್ತುಂ’ ಚಿತ್ರದಲ್ಲಿ ನಟಿಸಿದ ನಂತರ, ತಾನು ಧರಿಸಿದ್ದ ನೇವಿ ಯೂನಿಫಾರ್ಮ್ ಹರಾಜಿಗಿದೆ ಎಂದು ಅನಾಥಾಶ್ರಮಕ್ಕೆ ಚಂದಾ ನೀಡಲಿಕ್ಕಾಗಿ ಇವನ ಪತ್ನಿ ಟ್ವಿಂಕಲ್ ಖನ್ನಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದಳಂತೆ. ಯಾವಾಗ ಇದು ಒಬ್ಬ ಹಿರಿಯ ನೇವಿ ಅಧಿಕಾರಿಯ ಕೆಂಗಣ್ಣಿಗೆ ಬಿತ್ತೋ, ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿ, ದೇಶದ ಉನ್ನತ ನೌಕಾಪಡೆಗೆ ಅವಮಾನಿಸಿದ್ದಕ್ಕಾಗಿ ಪ್ರತಿ ನೌಕಾ ಅಧಿಕಾರಿ ರಾಷ್ಟ್ರಪತಿಗೆ ವಂದಿಸಿ, ಪ್ರಾಣ ಒತ್ತೆಯಿಟ್ಟು ಸಮುದ್ರವನ್ನೇ ಮನೆಯಾಗಿಸಿಕೊಂಡು ಕರ್ತವ್ಯನಿಷ್ಠರಾಗಿರುವವರ ಸಮವಸ್ತ್ರವನ್ನು ಹೀಗಾ ಅವಮಾನಿಸುವುದು ಎಂದು ಕೆಂಡಾಮಂಡಲರಾಗಿದ್ದಾರೆ. ಒಂದು ಒಳ್ಳೆ ಕೆಲಸಕ್ಕಾಗಿ ಹೀಗೆ ಮಾಡಿದೆನಷ್ಟೆ ಎಂದು ಟ್ವಿಂಕಲ್ ತಿಪ್ಪೆ ಸಾರಿಸಿದ್ದಾಳೆ, ಮುಂದೆ ಕಾದು ನೋಡೋಣ.

ಭೂಮೀಗೆ ತುಸು ವಿಭಿನ್ನವಾಗಿ ನಟಿಸುವಾಸೆ

ಭೂಮೀ ಪೆಡ್ನೇಕರ್‌ ಈಗಾಗಲೇ `ದಂ ಲಗಾಕರ್‌ ಐಸಾ, ಶುಭ್‌ಮಂಗಳ್‌ ಸಾವಧಾನ್‌, ಟಾಯ್ಲೆಟ್‌ ಏಕ್‌ ಪ್ರೇಮಕಥಾ’ ಮುಂತಾದ ಚಿತ್ರಗಳಲ್ಲಿ ಸಾಮಾಜಿಕ ಸಮಸ್ಯೆಗಳ ಕುರಿತಾಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿದ್ದಾಳೆ. ಇದೀಗ ಈಕೆ ಆ್ಯಡ್‌ಇಂಡಸ್ಟ್ರಿ ಕುರಿತು ನಟಿಸುತ್ತಿದ್ದಾಳೆ.

ಇತ್ತೀಚೆಗೆ ಭೂಮೀ ದೆಹಲಿಯ ಪ್ರಗತಿ ಮೈದಾನದ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಟೈಡ್‌ಎಕ್ಸ್ ಟ್ರಾ ಪವರ್‌ ಮತ್ತು  ಗೂಂಜ್‌ ತಂಡದ ಜೊತೆ ಜಂಟಿಯಾಗಿ ಭಾಗವಹಿಸಿ, ಒಂದು ಜಾಹೀರಾತಿಗಾಗಿ, ನಮ್ಮ ಉಡುಗೆಗೆ ತಗುಲುವ ಹೋಳಿ ಬಣ್ಣದ ಕಲೆ ನಿವಾರಣೆಯ ಕುರಿತಾಗಿ ಗ್ರಾಹಕರಿಗೆ ಮಾಹಿತಿ ತಿಳಿಸಿಕೊಟ್ಟಳು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ, “ನನ್ನ ಮನೆಯವರು ಮೊದಲಿನಿಂದಲೂ ನನಗೆ ಸಾರ್ವಜನಿಕರಿಗಾಗಿ ಸೇವೆ ಮಾಡುವುದರ ಕುರಿತು ಕಲಿಸಿದ್ದಾರೆ. ಹೀಗಾಗಿ ಈ ಪ್ರಾಕ್ಟಿಕಲ್‌ ಕಾರ್ಯಕ್ರಮದಲ್ಲಿ ಭಾಗಹಿಸಿ ನನಗೆ ಬಹಳ ಖುಷಿ ಆಗಿದೆ. ನಾವೇನಾದರೂ ಒಳ್ಳೆಯ ಕೆಲಸ ಮಾಡಿದಾಗ ಮನಸ್ಸಿಗೆ ಬಹಳ ತೃಪ್ತಿ ಎನಿಸುತ್ತದೆ.

“ನೀರನ್ನು ಹಾಳು ಮಾಡುವವರನ್ನು ಕಂಡರೆ ನನಗೆ ಕೆಂಡದಂಥ ಸಿಟ್ಟು! ಎಲ್ಲಾದರೂ ಮರ ಕಡಿಯುತ್ತಿದ್ದಾರೆ ಎಂದು ಗೊತ್ತಾದರೆ ಅಸಹಾಯಕಳಾಗಿ, ನನ್ನ ಮಟ್ಟದಲ್ಲಿ ಅದನ್ನು ವಿರೋಧಿಸುತ್ತೇನೆ. ಇಂಥ ಮರಗಳನ್ನು ಕಡಿಯುವುದರಿಂದ ಮಾನವ ಜನಾಂಗಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಇವರಿಗೇಕೆ ಗೊತ್ತಾಗೋಲ್ಲ? ನಾನು ಸೆಲೆಬ್ರಿಟಿ ಆದ್ದರಿಂದ ಇಂಥ ಭಾಷಣ ಮಾಡಿ ಪ್ರಚಾರ ಗಿಟ್ಟಿಸುತ್ತಿದ್ದೇನೆ ಎಂದು ಜನ ಭಾವಿಸಬಾರದು, ಮೊದಲು ನಾನೊಬ್ಬ ಮನುಷ್ಯಳು….. ನಂತರ ಉಳಿದದ್ದೆಲ್ಲ. ಮುಂದಿನ ಪೀಳಿಗೆಗೆ ಹಾನಿ  ಆಗುವುದಕ್ಕೆ ನಾನು ಬಿಡಲಾರೆ.”

ಭೂಮೀ ಅನೇಕ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಾಳೆ. ಸದಾ ಆಫ್‌ ಬೀಟ್‌ ಚಿತ್ರಗಳಲ್ಲಿ ನಟಿಸಿ ಎಲ್ಲರಿಂದ ಸೈ ಅನಿಸಿದಾಳೆ. `ಟಾಯ್ಲೆಟ್‌’ ಚಿತ್ರದಲ್ಲಿ ಈಕೆಯದು ಅದ್ಭುತ ನಟನೆ. ಹೆಣ್ಣಾಗಿದ್ದುಕೊಂಡು ಹಳ್ಳಿಯ ಹೆಣ್ಣುಮಕ್ಕಳ ಪರವಾಗಿ, ಇಡೀ ಹಳ್ಳಿಗೆ ಶೌಚಾಲಯ ತರಿಸಿಕೊಡುವ ಇವಳ ಪಾತ್ರ ಪ್ರಶಂಸನೀಯ! ರೀಲ್ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ತಾನು ಇಂಥ ಹೋರಾಟಗಾರ್ತಿಯೇ ಎಂದು ಹೆಮ್ಮೆಯಿಂದ ಹೇಳುತ್ತಾಳೆ.

ಭೂಮೀ ಪ್ರಕಾರ, ಹೊಸಬರಿಗೆ ಇಲ್ಲಿ ಸುಲಭವಾಗಿ ಅವಕಾಶ ಸಿಕ್ಕದು. ಬಹಳ ಕಷ್ಟಪಟ್ಟು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಬೇಕು ಎನ್ನುತ್ತಾಳೆ. ಯಾರಿಗೆ ಅಸಲಿ ಪ್ರತಿಭೆ ಇದೆಯೋ ಅವರು ಖಂಡಿತಾ ಜಳ್ಳನ್ನು ಒದರಿ ಗಟ್ಟಿಯಾಗಿ ನಿಲ್ಲಬಲ್ಲರು. ಆದರೆ ಹೋರಾಟ ತಪ್ಪಿದ್ದಲ್ಲ.

ಅಸಲಿ ಜೀವನದಲ್ಲಿ ಮಹಿಳಾಪರ ಹೋರಾಟದಲ್ಲಿ ಎಷ್ಟು ಸಕ್ರಿಯಳು? ಇದಕ್ಕೆ ಉತ್ತರವಾಗಿ, “ಕೇವಲ ತೆರೆ ಮೇಲೆ ಅಷ್ಟೇ ಅಲ್ಲ, ಎಲ್ಲೇ ಆಗಲಿ, ಹೆಣ್ಣಿಗೆ ಅನ್ಯಾಯವಾಗುತ್ತಿದೆ ಎಂದು ಗೊತ್ತಾದರೆ ನಾನು ಹೋರಾಡದೆ ಅಲ್ಲಿಂದ ಜರುಗುವವಳಲ್ಲ. ನಾನು ಹೇಳುವುದೆಂದರೆ, ಪ್ರತಿಯೊಬ್ಬ ಹೆಣ್ಣೂ ತನಗಾಗಿ ದನಿ ಎತ್ತಲೇಬೇಕು!”

ನೀನು ಫ್ಯಾಷನಿಸ್ಟ್ ಅಥವಾ ಸರಳವಾಗಿ ಇರುತ್ತೀಯೋ? “ನಾನು ಪರ್ಫೆಕ್ಟ್ ಆಗಿರಲಷ್ಟೇ ಬಯಸುತ್ತೇನೆ.”

ಈಕೆ ಮಹಾ ತಿಂಡಿ ಪೋಕರಿ. ಸದಾ ಬಾಯಾಡಿಸುತ್ತಲೇ ಇರಬೇಕು, ಆದರೆ ಅಷ್ಟೇ ವ್ಯಾಯಾಮ ಮಾಡ್ತೀನಿ ಎನ್ನುತ್ತಾಳೆ. ತನ್ನ ಅಭಿಮಾನಿಗಳಿಗೆ ಹೇಳುವ ಕಿವಿಮಾತು, “ಇಷ್ಟ ಬಂದಷ್ಟು ತಿನ್ನಿ…. ಆದರೆ ಫಿಟ್‌ ಆಗಿರಿ!”

102 ನಾಟ್‌ ಔಟ್‌ರ ಅಮಿತಾಭ್‌ ರೇಖಾಗೆ ಇಷ್ಟ

ಮೊದಲನೇ ಪ್ರೇಮವನ್ನು ಯಾರು ತಾನೇ ಮರೆಯಲು ಸಾಧ್ಯ? ರೇಖಾ ಅಮಿತಾಭ್ ರ ಪ್ರೇಮ ಜಗಜ್ಜಾಹೀರು! `ಸಿಲ್‌ಸಿಲಾ’ ಚಿತ್ರದ ನಂತರ ಇವರಿಬ್ಬರೂ ಇದುವರೆಗೆ ಒಟ್ಟಿಗೆ ನಟಿಸಿದ್ದೇ ಇಲ್ಲ. ನಿಜ ಜೀವನದ ಸಭೆ ಸಮಾರಂಭಗಳಲ್ಲೂ ಪರಸ್ಪರರನ್ನು ಅವಾಯ್ಡ್ ಮಾಡುತ್ತಾರೆ. ಆದರೆ ಪರಸ್ಪರರ ಕುರಿತು ಈಗಲೂ ಇಬ್ಬರಿಗೂ ಗೌರವ ಹೆಚ್ಚು. ಇತ್ತೀಚೆಗಷ್ಟೇ ರೇಖಾ ಅಮಿತಾಭ್ ರ `102 ನಾಟ್‌ ಔಟ್‌’ ನೋಡಿದರಂತೆ. ಆ ಚಿತ್ರ ನೋಡಿದ ಮೇಲೆ ಈಕೆಗೆ ಅಮಿತಾಭ್ ರ ಬಗ್ಗೆ ಇನ್ನಷ್ಟು ಗೌರವ ಹೆಚ್ಚಿ, ಎಲ್ಲರ ಮುಂದೆ ಅವರನ್ನು ಸಿಕ್ಕಾಪಟ್ಟೆ ಹೊಗಳಿದರಂತೆ. ಬಟ್‌…. ಆ ಸಮಯದಲ್ಲಿ ಜಯಾ ಬಚ್ಚನ್‌ ಅಲ್ಲಿರಲಿಲ್ಲ!

ಬೇಬೋಳನ್ನು ಮಗುವೆಂದೇ ಭಾವಿಸುವ ಸಲ್ಮಾನ್

ಸಲ್ಮಾನ್‌ ಜೊತೆ ಹಲವಾರು ಚಿತ್ರಗಳಲ್ಲಿ ರೊಮಾನ್ಸ್ ಮಾಡಿ ಈಗ ಒಂದು ಮಗುವಿನ ಅಮ್ಮನಾಗಿರುವ ಬೇಬೋ ಯಾನೆ ಕರೀನಾಳನ್ನು ಈಗಲೂ ಈತ ಮಗುವೆಂದೇ ಭಾವಿಸಿದ್ದಾನೆ. ಇದನ್ನು ಬೇರಾರೂ ಅಲ್ಲ, ಕರೀನಾಳ ಅಕ್ಕಾ ಕರಿಶ್ಮಾ ಒಂದು ಟಾಕ್‌ ಶೋನಲ್ಲಿ ಖಾತ್ರಿಪಡಿಸಿದಳು.

ಅಕ್ಕಾತಂಗಿಯರಲ್ಲಿ ಯಾರು ಸಲ್ಮಾನ್‌ಗೆ ಹೆಚ್ಚು ನಿಕಟವರ್ತಿ ಎಂದು ಪ್ರಶ್ನಿಸಿದಾಗ,  “ನಾನು ಸಲ್ಮಾನ್‌ ಜೊತೆ ಕರೀನಾಗಿಂತ ಹೆಚ್ಚಾಗಿ ರೊಮ್ಯಾಂಟಿಕ್‌ ಚಿತ್ರಗಳಲ್ಲಿ ನಟಿಸಿದ್ದೇನೆ. ಆತ ಈಗಲೂ ಕರೀನಾಳನ್ನು ಮಗುವೆಂದೇ ಭಾವಿಸುತ್ತಾನೆ. ನನ್ನೊಂದಿಗೆ ಆತನ ಕೆಮಿಸ್ಟ್ರಿ ಚೆನ್ನಾಗಿ ವರ್ಕ್‌ಔಟ್‌ ಆಗುತ್ತೆ. ಮುಂದೆ ಅವಕಾಶ ಸಿಕ್ಕಿದರೆ ಆತನ ಜೊತೆ ಮತ್ತೆ `ಬೀವಿ ನಂ.1’ನಂಥ ಚಿತ್ರ ಮಾಡುವೆ.  ಇಂಥ ಟೈಟಲ್ ಇರುವ ಚಿತ್ರ ಬಾಲಿವುಡ್‌ನಲ್ಲಿ ಸದಾ ನಂ.1 ಆಗಿರುತ್ತದೆ!”

ಹೊಸ ಗೆಟಪ್‌ನಲ್ಲಿ ಮಿಂಚುತ್ತಿರುವ ಶಾಹಿದ್‌

ಅರ್ಜುನ್‌ ಕಪೂರ್‌ನನ್ನು ಬದಿಗೆಸರಿಸಿ ಇದೀಗ ಶಾಹಿದ್‌ ಕಪೂರ್‌ ಹೊಸ ಚಿತ್ರಗಳ ರೆಕಾರ್ಡ್‌ ಬ್ರೇಕ್‌ ಮಾಡುತ್ತಿದ್ದಾನೆ. ಯಾಮಿನಿ, ಶ್ರದ್ಧಾರೊಂದಿಗೆ `ಬತ್ತಿ ಗುಲ್ ಮೀಟರ್‌ ಚಾಲೂ’ ಚಿತ್ರ ಮುಗಿಸಿದ ಈತ, ತೆಲುಗು ಆ್ಯಕ್ಷನ್‌ ರೀಮೇಕ್‌ ‘ಅರ್ಜುನ್‌ ರೆಡ್ಡಿ’ ಚಿತ್ರದಲ್ಲಿ ಲಾಂಗ್‌ ಹಿಡಿದು ಹೋರಾಡಲಿದ್ದಾನೆ. ಮೊದಲು ಈ ಚಿತ್ರಕ್ಕಾಗಿ ಅರ್ಜುನ್‌ ಕಪೂರ್‌ ಹೆಸರೇ ಸೂಚಿಸಲಾಗಿತ್ತು. ಆದರೆ ದಕ್ಷಿಣದ ತಯಾರಕರಿಗೆ ಶಾಹಿದ್‌ ಹೆಚ್ಚು ಆಪ್ತನಾದ್ದರಿಂದ ಈ ಚಿತ್ರ ಅವನ ಪಾಲಾಯಿತು.

ಈ ಚಿತ್ರದ ನಿರ್ದೇಶಕರು ಸಂದೀಪ್‌ ರೆಡ್ಡಿ. ಈ ಚಿತ್ರದ ಬಹುತೇಕ ಶೂಟಿಂಗ್‌ ವಿದೇಶದಲ್ಲಿ ನಡೆಯಲಿದೆ. ಈ ತಂಡ ಚಿತ್ರದ ನಾಯಕಿಗಾಗಿ ಹುಡುಕಾಡುತ್ತಿದೆ. ಚಿತ್ರದ ಪ್ರಕಾರ, ಈತ ಒಬ್ಬ ಖ್ಯಾತ ಸರ್ಜನ್‌. ಗರ್ಲ್ ಫ್ರೆಂಡ್‌ ಇವನಿಗೆ ಕೈಕೊಟ್ಟು ಬೇರೆ ಶ್ರೀಮಂತನನ್ನು ವರಿಸುತ್ತಾಳೆ. ಮುಂದೆ ಏನಾಯಿತು ಎಂಬುದೇ ಕುತೂಹಲಕಾರಿ ಅಂಶ.

ಇದೀಗ ಜನರ ದೃಷ್ಟಿ ಬದಲಾಗಿದೆ

`ಸೋನೂ ಕೆ ಟೀಟೂ ಕೀ ಸ್ವೀಟಿ’ ಚಿತ್ರ 100 ಕೋಟಿ ಕ್ಲಬ್‌ ಸೇರಿದಾಗ, ನಾಯಕಿ ನುಸ್ರತ್‌ ಭರೂಚಾ ಆಕಾಶಕ್ಕೆ ಏಣಿ ಹಾಕಿದಳು. ಆಕೆ ಪ್ರಕಾರ,“ ಈ ಚಿತ್ರ ಹಿಟ್‌ ಆದಾಗಿನಿಂದ ಇಂಡಸ್ಟ್ರಿ ಜನ ನನ್ನನ್ನು ನೋಡುವ ದೃಷ್ಟಿಯೇ ಬದಲಾಗಿದೆ. ನಮ್ಮಲ್ಲಿ ಚಮತ್ಕಾರ ನಡೆದಾಗ ಮಾತ್ರ ನಮಸ್ಕಾರ! ಈಗ ನನ್ನ ಬಳಿ ಅನೇಕ ಚಿತ್ರಗಳ ಆಫರ್ಸ್‌ ಇವೆ. ಹಿಂದೆಲ್ಲ ನನ್ನನ್ನು ಅವಾಯ್ಡ್ ಮಾಡುತ್ತಿದ್ದಂಥ ನಿರ್ಮಾಪಕರನ್ನು ಈಗ ನಾನು ಅವಾಯ್ಡ್ ಮಾಡುವಂತಾಗಿದೆ. ಇದೆಲ್ಲ ಒಂದು ಹಿಟ್‌ ಚಿತ್ರದ ಮಹಿಮೆ,” ಎನ್ನುತ್ತಾಳೆ.

ಸಂಜೂ ಪಾತ್ರಕ್ಕೆ ಈತ ಮೊದಲ ಆಯ್ಕೆ ಆಗಿರಲಿಲ್ಲ

ನಿರ್ದೇಶಕ ರಾಜಕುಮಾರ್‌ ಹಿರಾನಿ ಸಂಜಯ್‌ ದತ್ ಕುರಿತಾದ ಬಯೋಪಿಕ್‌ ಚಿತ್ರ ಈಗ ರೆಡಿ. ಈ ಚಿತ್ರದ ನಾಯಕ ರಣಬೀರ್‌ನ ಲುಕ್ಸ್ ನ್ನು ಎಲ್ಲರೂ ಹೊಗಳುವವರೇ! ಇಷ್ಟೆಲ್ಲ ಆದ ಮೇಲೆ ನಿರ್ದೇಶಕರು ಸುಮ್ಮನಿರಲಾಗದೆ ಒಂದೆಡೆ ಪಬ್ಲಿಕ್‌ ಆಗಿ, `ಚಿತ್ರಕ್ಕೆ ನನ್ನ ಮೊದಲ ಆಯ್ಕೆ ರಣಬೀರ್‌ ಆಗಿರಲಿಲ್ಲ. ನಾನೆಂದೂ ಈ ಪಾತ್ರಕ್ಕಾಗಿ ರಣಬೀರ್‌ ಫಿಟ್‌ ಆಗ್ತಾನೆ ಎಂದು ಭಾವಿಸಿರಲಿಲ್ಲ. ಮುಂದೆ ಚಿತ್ರ ಶುರುವಾದಾಗ, ಪರಿಸ್ಥಿತಿ ಬದಲಾಗಿ ರಣಬೀರ್‌ ಅನಿವಾರ್ಯವಾಗಿ ಈ ಚಿತ್ರದ ನಾಯಕ ಆಗಬೇಕಾಯ್ತು. ನಂತರ ನನಗನಿಸಿದ್ದು, ರಣಬೀರ್‌ ಅಲ್ಲದೆ ಯಾರೂ ಈ ಪಾತ್ರವನ್ನು ಇಷ್ಟು ಚೆನ್ನಾಗಿ ನಿಭಾಯಿಸಿರಲಾರರು ಅಂತ,’ ಎಂದರು. ಈ ಚಿತ್ರದಲ್ಲಿ ರಣಬೀರ್‌ ಜೊತೆ ಅನುಷ್ಕಾ ಶರ್ಮ, ದಿಯಾ ಮಿರ್ಜಾ, ಮನೀಷಾ ಕೋಯಿರಾಲಾ,  ಪರೇಶ್‌ ರಾವಲ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಅಷ್ಟು ಮಾತ್ರವಲ್ಲದೆ ಸೋನಂ ಕಪೂರ್‌, ಕರಿಷ್ಮಾ ತಾನ್ಯಾ, ವಿಕ್ಕಿ ಕೌಶಲ್ ಸಹ ವಿಶೇಷ ಪಾತ್ರಗಳಲ್ಲಿರುತ್ತಾರೆ.

ಸಿಹಿ ಕಹಿ ರುಚಿ ತೋರಿಸೋ ಶೋ

ಝೀ ಟಿ.ವಿಯ ವಿಭಿನ್ನ ಟಾಕ್‌ ಶೋ `ಜರ್ಬತ್‌’ ಹಲವು ವಿಧದಲ್ಲಿ ಇತರ ಟಾಕ್‌ ಶೋ ಗಳಿಗಿಂತ ವಿಭಿನ್ನ ಎನಿಸಿದೆ. ಏಕೆಂದರೆ ಈ ಶೋಗೆ ಬರುವ ಅತಿಥಿಗಳಿಗೆ ಕೇಳಲಾಗುವ ಪ್ರಶ್ನೆಗಳಿಗೆ ಅವರು ಮೊದಲೇ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ಈ ಶೋನ ಆ್ಯಂಕರ್‌ ರಾಜೀವ್ ‌ಖಂಡೇಲ್‌ ರಾವ್ ಇದನ್ನು ಖಾತ್ರಿಪಡಿಸಿದ. ಜೀವನದ ಅತಿ ಅಮೂಲ್ಯ ಅನುಭೂತಿಗಳ ಕುರಿತು ಅತಿಥಿಗಳು ಇಲ್ಲಿ ಹಂಚಿಕೊಳ್ಳುತ್ತಾರೆ ಎಂದು ಆತ ತಿಳಿಸಿದ. ಒಮ್ಮೊಮ್ಮೆ ಮಾತುಕಥೆ ಬಿಗಡಾಯಿಸುವ ಹಂತಕ್ಕೆ ಹೋಗುತ್ತದೆ, ಆಗ ತಾನೇ ಅದನ್ನು ಸಂಭಾಳಿಸುತ್ತೇನೆ, ಎನ್ನುತ್ತಾನೆ.

ಟಿ.ವಿ. ತಾರೆಯರ ಮದರ್ಸ್‌ ಡೇ ಆಚರಣೆ

ನಿಖಿಲ್ ‌ಖುರಾನಾ : ನಾನು ಇಡೀ ದಿನ ಅಮ್ಮನ ಜೊತೆ ಕಳೆದೆ. ನನ್ನ ತಾಯಿಯೇ ನನ್ನ ಫ್ರೆಂಡ್‌, ಫಿಲಾಸಫರ್‌, ಗೈಡ್‌. ಒಮ್ಮೆ ನಾನು ಪೊಲೀಸ್‌ ನನ್ನನ್ನು ಅರೆಸ್ಟ್ ಮಾಡಿದ್ದಾರೆ ಎಂಬಂತೆ ನಾನೇ ಅಮ್ಮನಿಗೆ ಕರೆ ಮಾಡಿದಾಗ, ಅಮ್ಮ ನನಗೆ ಚೆನ್ನಾಗಿ ಬೈದಿದ್ದರು.

ಹೀಬಾ ತಾಬ್‌ : ನನ್ನ ತಾಯಿಯೇ ನನಗೆ ಪ್ರೇರಣೆ. ನನ್ನನ್ನು ನಾನು ಪ್ರೀತಿಸುತ್ತೇನೆ. ಆದರೆ ನಮ್ಮಮ್ಮನನ್ನು ನನಗಿಂತ ಹೆಚ್ಚು ಪ್ರೀತಿಸುತ್ತೇನೆ.

ಕೃಷ್ಣಾ ಭಾರದ್ವಜ್‌ : ನಮ್ಮಮ್ಮ ನನ್ನಿಂದ ಬಹು ದೂರ ರಾಂಚಿಯಲ್ಲಿದ್ದಾರೆ. ಆದರೆ ನನ್ನ ಬೆಳಗು ಆರಂಭವಾಗುವುದೇ ಆಕೆಯ ಕರೆಯಿಂದ. ಅಮ್ಮ ದೂರ ಇರುವುದರಿಂದ ನನ್ನ ಫ್ರೆಂಡ್‌ ತಾಯಿಯ ಜೊತೆ ಮದರ್ಸ್‌ ಡೇ ಆಚರಿಸಿದೆ.

ಪಾರ್ವತಿ ಬಜೇ : ನನ್ನ ತಾಯಿ ಕೆನಡಾದಲ್ಲಿದ್ದಾರೆ, ಆದರೆ ನಾನು ಸದಾ ಅವರನ್ನು ನನ್ನ ನೆನಪಲ್ಲಿ ಹತ್ತಿರವೇ ಇರಿಸಿಕೊಂಡಿದ್ದೇನೆ. ಅವರೊಂದಿಗಿನ ನೆನಪುಗಳು ಎಷ್ಟು ಅಂತೀರಾ…. ಹೇಳೋಕ್ಕೆ ಆಗೋಲ್ಲ.

ಹೊಸ ಇಂಡಿಯನ್‌ ಐಡಲ್‌ನ ಅನ್ವೇಷಣೆಯಲ್ಲಿ

`ಇಂಡಿಯನ್‌ ಐಡಿಯಲ್’ನ ಹೊಸ ಸೀಸನ್‌ ಇನ್ನೇನು ಆರಂಭಗೊಳ್ಳಲಿದೆ. ಸೋನಿ ಟಿವಿಯ ಈ ರಿಯಾಲಿಟಿ ಶೋ ಇದೀಗ ಸೀಸನ್‌ 10 ಆಗಿದೆ. ಈ ಶೋ ಮೂಲಕ ದೇಶದ ಗಾಯನ ಕ್ಷೇತ್ರಕ್ಕೆ ಹಲವು ಹೊಸ ಪ್ರತಿಭೆಗಳು ಸಿಕ್ಕಿವೆ. ಈ ಬಾರಿಯ ಜಡ್ಜ್ ಗಳಾಗಿ ಅನು ಮಲಿಕ್‌, ವಿಶಾಲ್ ‌ದಧ್ಲಾನಿ, ನೇಹಾ ಕಕ್ಕಡ್‌ ಇರುತ್ತಾರೆ.

“ಈ ಶೋಗೆ ಸೇರಿದ್ದು ನನ್ನ ಸೌಭಾಗ್ಯವೇ ಸರಿ,” ಎನ್ನುತ್ತಾರೆ ನೇಹಾ.

ಮೊದಲ ರಾತ್ರಿಯ ಶೋ ನಿರಾಕರಿಸಿದ ನಟಿ

`ಜೈ ಕನ್ಹಯ್ಯ ಲಾಲ್‌ಕೀ’ ಧಾರಾವಾಹಿ ಮೂಲಕ ಶ್ವೇತಾ ಭಟ್ಟಾಚಾರ್ಯ, ವಿಶಾಲ್‌ ವಸಿಷ್ಠ್ ವೀಕ್ಷಕರಿಗೆ ಅತಿ ಪ್ರಿಯ ಜೋಡಿ ಎನಿಸಿದ್ದಾರೆ. ವಸಿಷ್ಠ್ ಜೊತೆ ಅಷ್ಟೆಲ್ಲ ಟ್ಯೂನಿಂಗ್‌ ಇದ್ದರೂ ಶ್ವೇತಾ ಆತನ  ಜೊತೆ ಇಂಟಿಮೇಟ್‌ ಸೀನ್ಸ್ ನಲ್ಲಿ ನಟಿಸಲು ಒಪ್ಪಲಿಲ್ಲ. ಈ ಧಾರಾವಾಹಿಯಲ್ಲಿ ಒಂದು ಕಡೆ ನವದಂಪತಿಗಳ ಮೊದಲ ರಾತ್ರಿಯ ದೃಶ್ಯದ ಶೂಟಿಂಗ್‌ ಇತ್ತು. ಆದರೆ ಶ್ವೇತಾ ಬಿಲ್‌ಕುಲ್ ‌ಒಪ್ಪಲಿಲ್ಲ. ಈ ಬಗ್ಗೆ ಆಕೆಯನ್ನು ವಿಚಾರಿಸಿದಾಗ, ಇತ್ತೀಚಿನ ಧಾರಾವಾಹಿಗಳಲ್ಲಿ ಇಂಥ ದೃಶ್ಯ ಮಾಮೂಲಿ ಎಂಬುದು ನಿಜ. ಆದರೆ ಪರ್ಸ್‌ನಲಿ ಇದನ್ನು ನಾನು ಒಪ್ಪುವುದಿಲ್ಲ ಎನ್ನುತ್ತಾಳೆ.

 TAGS : ಚಿತ್ರಶೋಭಾ, ಶ್ರದ್ಧಾಳ ಮದುವೆ, ಕಾಟ ತಪ್ಪಿದ್ದಲ್ಲ, ಅಕ್ಷಯ್ ಗೆ ತಿರುಗೇಟು, ಭೂಮೀಯ ಆಸೆ, 102 ನಾಟ್ ಔಟ್, ಸಲ್ಮಾನ್-ಕರೀಶ್ಮಾ-ಕರೀನಾ, ಮಿಂಚುತ್ತಿರುವ ಶಾಹಿದ್,  ಬದಲಾದ ಜನರ ದೃಷ್ಟಿ, ರಣಬೀರನ ಆಯ್ಕೆ, ಸಿಹಿ ಕಹಿ ಟಿವಿ ಶೋ, ತಾರೆಯರ ಮದರ್ಸ್ ಡೇ, ಇಂಡಿಯನ್ ಐಡಲ್, ಶ್ವೇತಾಳ ಮಡಿವಂತಿಕೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ