ಯಾರನ್ನು ಮಗಳು ಮದುವೆ ಆಗ್ತಾಳೆ ಅಂತ ಡ್ಯಾಡಿಗೆ ಗೊತ್ತು!
ಇತ್ತೀಚೆಗೆ ನಡೆದ ಬಾಲಿವುಡ್‌ನ ಒಂದು ಮದುವೆ ಸಮಾರಂಭದ ಅರಿಶಿನದ ಕಾರ್ಯಕ್ರಮಕ್ಕೆ ಶ್ರದ್ಧಾ ಕಪೂರ್ ಬಂದಿಳಿದಾಗ, ಜನರು ಇವಳ ಕೈಗೂ ಬೇಗ ಅರಿಶಿನ ತಗುಲಲಿದೆ ಎಂದು ಮಾತನಾಡಿಕೊಂಡರು. ಆದರೆ ಇವಳ ಕನಸಿನ ರಾಜಕುಮಾರ ಯಾರಿರಬಹುದು ಎಂಬುದಂತೂ ಇನ್ನೂ ಸಸ್ಪೆನ್ಸ್. ಶ್ರದ್ಧಾಳ ತಂದೆ ಶಕ್ತಿಕಪೂರ್ ಹೇಳುವಂತೆ, ತಾನು ಇಂಥ ಹುಡುಗನನ್ನೇ ಮದುವೆಯಾಗು ಎಂದು ಮಗಳ ಮೇಲೆ ಒತ್ತಡ ಹೇರುವುದಿಲ್ಲವಂತೆ. ಮಗಳು ಯಾರನ್ನು ಮೆಚ್ಚಿ ಆರಿಸುತ್ತಾಳೋ, ಅವನೇ ಅಳಿಯನಂತೆ!
ಹೊಸ ನಟಿಯರಿಗೆ ಈ ಕಾಟ ತಪ್ಪಿದ್ದಲ್ಲ!
ಸಿನಿಮಾಗಳಲ್ಲಿ ಯಾವುದೇ ಎಗ್ಗಿಲ್ಲದೆ ತನ್ನನ್ನು ತಾನು ಎಕ್ಸ್ ಪೋಸಿಂಗ್‌ಗೆ ಒಡ್ಡಿಕೊಳ್ಳುವ ಮಾಹಿ ಗಿಲ್, 11 ವರ್ಷಗಳ ಹಿಂದೆ ತಾನು ಅನುಭವಿಸಿದ ಚಿತ್ರಹಿಂಸೆಯನ್ನು ಹೀಗೆ ಹೇಳಿಕೊಳ್ಳುತ್ತಾಳೆ, ``ನಾನು ಬಾಲಿವುಡ್‌ನ ಚಿತ್ರಗಳಿಗೆ ಅವಕಾಶಕ್ಕಾಗಿ ಎಡತಾಕುತ್ತಿದ್ದಾಗ, ಒಬ್ಬ ಡೈರೆಕ್ಟರ್ ನನಗೆ `ಹೀಗೆ ಸೀರೆ, ಸಲ್ವಾರ್ ಸೂಟ್‌ನಲ್ಲಿ ಗೌರಮ್ಮನಂತೆ ನಟಿಸಲು ಇದು 80ರ ದಶಕವಲ್ಲ. ಇಂದಿನ ಚಿತ್ರಗಳಲ್ಲಿ ಅವಕಾಶ ಬೇಕಾ... ನೈಟಿ ಧರಿಸಿ ಬಂದು ಅದನ್ನು ಜಾರಿಸಲು ಯತ್ನಿಸು. ಇಂಥ ಬೋಲ್ಡ್ ನೆಸ್ ಇಲ್ಲದ ನಿನ್ನಂಥ ಮಿಡ್ಲ್ ಕ್ಲಾಸ್ ಮೆಂಟಾಲಿಟಿಗೆ ಇಲ್ಲಿ ಅವಕಾಶ ಸಿಗಲ್ಲ!' ಈ ಮಾತುಗಳಿಂದ ನಾನು ಗಾಬರಿಗೊಂಡಿದ್ದೆ. ಆಗ ನೈಟಿ ಧರಿಸಿ ನಟಿಸಲು ಮುಂದಾದೆ. ಆಗ ಇಂಡಸ್ಟ್ರಿ ಜನ ನನಗೆ ಆತ ಹೊಸ ನಟಿಯರನ್ನು ಹೀಗೇ ಶೋಷಿಸುವುದು ಎಂದಾಗ ನಾನು ಎಚ್ಚೆತ್ತೆ.'' ಮಾಹಿಯ ಹೊಸ ಚಿತ್ರ `ಗ್ಯಾಂಗ್‌ಸ್ಟರ್` ಬಿಡುಗಡೆಗೆ ಸಿದ್ಧವಿದೆ. ಇವಳೊಂದಿಗೆ ಜಿಮಿ ಶೇರ್ ಗಿಲ್, ಸಂಜಯ್ ದತ್ ಕೂಡ ಇದ್ದಾರೆ.
ನೇವಿ ಆಫಿಸರ್ ಆದ ಅಕ್ಷಯ್‌ಗೆ ತಿರುಗೇಟು!
ಫೇಸ್‌ಬುಕ್‌ನಲ್ಲಿ ನೇವಿ ಯೂನಿಫಾರ್ಮ್ ನ್ನು ಹರಾಜಿಗಿಟ್ಟ ಅಕ್ಷಯ್ ಕುಮಾರ್‌ಗೆ ಒಬ್ಬ ಹಿರಿಯ ನೇವಿ ಅಧಿಕಾರಿ ಚೆನ್ನಾಗಿ ಛೀಮಾರಿ ಹಾಕಿದ್ದಾರೆ. ಈಗ ಇವನನ್ನು ಕೋರ್ಟಿಗೆಳೆದು ಮಾನ ಹರಾಜು ಹಾಕಲಿದ್ದಾರೆ. ಅಸಲಿಗೆ ನಡೆದದ್ದೇನು? ಅಕ್ಷಯ್`ರುಸ್ತುಂ' ಚಿತ್ರದಲ್ಲಿ ನಟಿಸಿದ ನಂತರ, ತಾನು ಧರಿಸಿದ್ದ ನೇವಿ ಯೂನಿಫಾರ್ಮ್ ಹರಾಜಿಗಿದೆ ಎಂದು ಅನಾಥಾಶ್ರಮಕ್ಕೆ ಚಂದಾ ನೀಡಲಿಕ್ಕಾಗಿ ಇವನ ಪತ್ನಿ ಟ್ವಿಂಕಲ್ ಖನ್ನಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದಳಂತೆ. ಯಾವಾಗ ಇದು ಒಬ್ಬ ಹಿರಿಯ ನೇವಿ ಅಧಿಕಾರಿಯ ಕೆಂಗಣ್ಣಿಗೆ ಬಿತ್ತೋ, ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿ, ದೇಶದ ಉನ್ನತ ನೌಕಾಪಡೆಗೆ ಅವಮಾನಿಸಿದ್ದಕ್ಕಾಗಿ ಪ್ರತಿ ನೌಕಾ ಅಧಿಕಾರಿ ರಾಷ್ಟ್ರಪತಿಗೆ ವಂದಿಸಿ, ಪ್ರಾಣ ಒತ್ತೆಯಿಟ್ಟು ಸಮುದ್ರವನ್ನೇ ಮನೆಯಾಗಿಸಿಕೊಂಡು ಕರ್ತವ್ಯನಿಷ್ಠರಾಗಿರುವವರ ಸಮವಸ್ತ್ರವನ್ನು ಹೀಗಾ ಅವಮಾನಿಸುವುದು ಎಂದು ಕೆಂಡಾಮಂಡಲರಾಗಿದ್ದಾರೆ. ಒಂದು ಒಳ್ಳೆ ಕೆಲಸಕ್ಕಾಗಿ ಹೀಗೆ ಮಾಡಿದೆನಷ್ಟೆ ಎಂದು ಟ್ವಿಂಕಲ್ ತಿಪ್ಪೆ ಸಾರಿಸಿದ್ದಾಳೆ, ಮುಂದೆ ಕಾದು ನೋಡೋಣ.
ಭೂಮೀಗೆ ತುಸು ವಿಭಿನ್ನವಾಗಿ ನಟಿಸುವಾಸೆ
ಭೂಮೀ ಪೆಡ್ನೇಕರ್ ಈಗಾಗಲೇ `ದಂ ಲಗಾಕರ್ ಐಸಾ, ಶುಭ್‌ಮಂಗಳ್ ಸಾವಧಾನ್, ಟಾಯ್ಲೆಟ್ ಏಕ್ ಪ್ರೇಮಕಥಾ' ಮುಂತಾದ ಚಿತ್ರಗಳಲ್ಲಿ ಸಾಮಾಜಿಕ ಸಮಸ್ಯೆಗಳ ಕುರಿತಾಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿದ್ದಾಳೆ. ಇದೀಗ ಈಕೆ ಆ್ಯಡ್‌ಇಂಡಸ್ಟ್ರಿ ಕುರಿತು ನಟಿಸುತ್ತಿದ್ದಾಳೆ.