ಕಾಲೇಜು ವಿದ್ಯಾರ್ಥಿನಿಯಾದ ರೀಟಾ ಬಹಳ ಬೇಸರದಲ್ಲಿದ್ದಳು. ಅವಳ ಮನಸ್ಸಿನಲ್ಲಿ ಅನೇಕ ಬಗೆಯ ಅನುಮಾನಗಳು ಮೂಡುತ್ತಿದ್ದವು. ತನ್ನ ಅರಿವಿಲ್ಲದೆಯೇ ತಾನು ಯಾವುದೋ ರಹಸ್ಯ ಕೈಚಳಕಕ್ಕೆ ಬಲಿಯಾಗಿದ್ದೇನೆಂದೂ, ಅದರಿಂದ ತನ್ನ ಬಾಳು ಹಾಳಾಗಬಹುದಿತ್ತೆಂದೂ ಅವಳಿಗೆ ಚೆನ್ನಾಗಿ ಅರ್ಥವಾಗಿತ್ತು. ಆದರೆ ಸಮಾಧಾನದ ವಿಷಯವೆಂದರೆ ಆ ಕೃತ್ಯವನ್ನು ಎಸಗುತ್ತಿದ್ದವನು ಸಿಕ್ಕಿಬಿದ್ದಿದ್ದ.
ರೀಟಾಳಿಗೆ ಶಾಪಿಂಗ್‌ನಲ್ಲಿ ಬಲು ಆಸಕ್ತಿ. ಹೀಗಾಗಿ ಅವಳು ಆಗಾಗ ಬಟ್ಟೆಗಳನ್ನು ಕೊಳ್ಳಲು ಆ ಶೋರೂಮಿಗೆ ಹೋಗುತ್ತಿದ್ದಳು. ಅದೇ ಶೋರೂಮ್ ನ ಟ್ರಯಲ್ ರೂಮಿನಲ್ಲಿ ಹಿಡೆನ್ ಕ್ಯಾಮೆರಾ ಇದ್ದದ್ದು ಪತ್ತೆಯಾಗಿತ್ತು. ಇನ್ನು ಮುಂದೆ ಇಂತಹ ಅವಮಾನಕರ ಘಟನೆಗೆ ಬೇರೆ ಯಾರೂ ಸಿಲುಕಲಾರರು ಎನ್ನುವ ಭರವಸೆಯಿಂದ ಅವಳು ಕೊಂಚ ನಿರಾಳಳಾಗಿದ್ದಳು.
ಹಿಡೆನ್ ಕ್ಯಾಮೆರಾದ ತಂತ್ರಕ್ಕೆ ಬಲಿಯಾಗಿರುವವಳು ರೀಟಾ ಒಬ್ಬಳೇ ಅಲ್ಲ. ಇನ್ನೆಷ್ಟು ಯುವತಿಯರು ಅಥವಾ ಮಹಿಳೆಯರಿಗೆ ಹೀಗಾಗಿದೆಯೋ ತಿಳಿದಿಲ್ಲ. ಒಂದೆರಡು ವರ್ಷಗಳ ಹಿಂದೆ ದೆಹಲಿಯ ಸೆಂಟ್ರಲ್ ಮಾರ್ಕೆಟ್‌ನ ಬ್ರಾಂಡೆಡ್‌ಉಡುಪುಗಳ ಶೋರೂಮ್ ಒಂದರಲ್ಲಿ ಬೆಚ್ಚಿ ಬೀಳಿಸುವಂತಹ ಸುದ್ದಿ ಹೊರಬಂದಿತು. ಮಲ್ಟಿನ್ಯಾಷನಲ್ ಕಂಪನಿಯೊಂದರ ಉದ್ಯೋಗಿ ರೂಬಿ ಆ ಶೋರೂಮ್ ಗೆ ಹೋಗಿದ್ದಳು. ಟ್ರಯಲ್ ರೂಮಿನಲ್ಲಿ ಒಂದು ಗ್ಯಾಪ್‌ನ ಹಿಂದೆ ಕ್ಯಾಮೆರಾ ಲೆನ್ಸ್ ಇರುವುದು ಅವಳಿಗೆ ಕಾಣಿಸಿತು. ಹೊರಗೆ ಬಂದು ಚೆಕ್ ಮಾಡಿದಾಗ ವಿಡಿಯೋ ಮೋಡ್‌ನಲ್ಲಿ ಮೊಬೈಲ್ ಒಂದನ್ನು ಇರಿಸಿರುವುದು ಕಾಣಿಸಿತು. ಗಲಾಟೆ ಮಾಡಿದಾಗ ಪೊಲೀಸರು ಬಂದರು. ಶೋರೂಮ್ ನವರೇ ಇಂತಹ ಲಜ್ಜೆಗೇಡಿ ಕೆಲಸದಲ್ಲಿ ತೊಡಗಿದ್ದುದು ತಿಳಿದು ಬಂದಿತು. ಪೊಲೀಸರು ಅವರ ವಿರುದ್ಧ ಸೆಕ್ಷನ್ 354, 354(ಸಿ) ರಂತೆ ಕೇಸು ದಾಖಲಿಸಿ ಜೈಲಿಗೆ ಕಳಿಸಿದರು.
ಸಾರ್ವಜನಿಕ ಸಮಸ್ಯೆ
ರಾಜಧಾನಿಯ ಒಂದು ಗರ್ಲ್ಸ್ ಹಾಸ್ಟೆಲ್‌ನ ಬಾತ್‌ರೂಮ್ ನಲ್ಲಿ ಕ್ಯಾಮೆರಾ ಇದ್ದುದ್ದು ಪತ್ತೆಯಾಯಿತು. ಪರೀಕ್ಷೆ ಮಾಡಿದಾಗ ಒಟ್ಟು 3 ಹಿಡೆನ್ ಕ್ಯಾಮೆರಾ ದೊರಕಿದವು. ಮತ್ತೊಂದೆಡೆ ಯುವತಿಯೊಬ್ಬಳು ಹೊಸ ಡ್ರೆಸ್ ಕೊಳ್ಳಲೆಂದು ಒಂದು ಶೋ ರೂಮಿಗೆ ಹೋದಳು. ಚೇಂಜಿಂಗ್ ರೂಮಿನಲ್ಲಿ ಅವಳು 3 ಟಾಪ್‌ಗಳನ್ನು ಬದಲಿಸಿ ನೋಡಿದಳು. ಇದ್ದಕ್ಕಿದ್ದಂತೆ ಅವಳ ದೃಷ್ಟಿ ಸೀಲಿಂಗ್‌ನಲ್ಲಿ ಅಡಗಿಸಿ ಇರಿಸಿದ್ದ ಕ್ಯಾಮೆರಾ ಮೇಲೆ ಬಿತ್ತು. ಅವಳಿಗೆ ಬವಳಿ ಬೀಳುವಂತಾಯಿತು. ನಂತರ ಪೊಲೀಸ್ ಬಂದು ವಿಚಾರಣೆ ನಡೆಸಿದರು.
ಕಳೆದ ವರ್ಷ ಗೋವಾದ ಶೋರೂಮ್ ಒಂದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹೋಗಿದ್ದರು. ಟ್ರಯಲ್ ರೂಮ್ ಗೆ ಹೋದಾಗ ಅವರಿಗೆ ಹಿಡೆನ್ ಕ್ಯಾಮೆರಾದ ಸುಳಿವು ಸಿಕ್ಕಿತು. ಕಂಪ್ಯೂಟರ್ ಹಾರ್ಡ್ ಡಿಸ್ಕನ್ನು ಪರೀಕ್ಷಿಸಿದಾಗ ಟ್ರಯಲ್ ರೂಮಿನಲ್ಲಿದ್ದ ಮಹಿಳೆಯರ ಸೊಂಟದಿಂದ ಮೇಲ್ಭಾಗದ ಚಿತ್ರಗಳೆಲ್ಲ ರೆಕಾರ್ಡಿಂಗ್ ಆಗುತ್ತಿದ್ದುದು ಪತ್ತೆಯಾಯಿತು. ಕೇಂದ್ರ ಮಂತ್ರಿಯೊಬ್ಬರು ಇಂತಹ ಚೌರ್ಯಕ್ಕೆ ಬಲಿಯಾದ ಸುದ್ದಿ ಸಾಕಷ್ಟು ಪ್ರಚಾರ ಪಡೆಯಿತು. ಜನರಲ್ಲಿ ಜಾಗೃತಿ ಮೂಡಿಸಿತು.
ಟ್ರಯಲ್ ರೂಮ್, ಬಾತ್ ರೂಮ್, ಸಾರ್ವಜನಿಕ ಶೌಚಾಲಯ, ಗರ್ಲ್ಸ್ ಹಾಸ್ಟೆಲ್, ಹೋಟೆಲ್ ರೂಮುಗಳಲ್ಲಿ ಗುಪ್ತವಾಗಿ ಅಳವಡಿಸಲಾಗಿರುವ ಓಪನ್ ಕ್ಯಾಮೆರಾಗಳು ಯಾರನ್ನಾದರೂ ಬಲಿಯಾಗಿಸಿಕೊಳ್ಳಬಲ್ಲವು. ಆದ್ದರಿಂದ ಯುವತಿಯರು ಮತ್ತು ಮಹಿಳೆಯರು ಇಂತಹ ಸ್ಥಳಗಳನ್ನು ಪ್ರವೇಶಿಸಿದಾಗ, ಚೆನ್ನಾಗಿ ಪರೀಕ್ಷೆ ಮಾಡಬೇಕಾಗುತ್ತದೆ. ಎಚ್ಚರದಿಂದ ಇಲ್ಲದ್ದಿದರೆ ಅವರ ಫೋಟೋ ಮತ್ತು ವೀಡಿಯೋಗಳನ್ನು ಪೋರ್ನ್ ವೆಬ್‌ಸೈಟ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಾರ್ವಜನಿಕ ಮಾಡಬಹುದು. ಇದರಿಂದ ಅವರು ಭವಿಷ್ಯದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಟ್ರಯಲ್ ರೂಮ್ ನಲ್ಲಿ ಕ್ಯಾಮೆರಾ ಅಳವಡಿಸಿರುವುದಾಗಲೀ, ಗಾಜಿನಲ್ಲಿ ಪಾರದರ್ಶಕತೆ ಇರುವುದಾಗಲೀ ತಿಳಿಯುವುದೇ ಇಲ್ಲ. ಗಾಜಿನ ಹಿಂದಿನಿಂದ ನಿಮ್ಮನ್ನು ಯಾರಾದರೂ ನೋಡುತ್ತಿರಬಹುದೆಂಬ ಸುಳಿವು ನಿಮಗಾಗುವುದಿಲ್ಲ. ಟ್ರಯಲ್ ರೂಮಿನಲ್ಲಿ ಕೆಲವು ವಿಶೇಷ ಬಗೆಯ ಗಾಜನ್ನು ಹಾಕಿರಬಹುದಾಗಿದ್ದು, ಅದು ನೋಡಲು ಸಾಮಾನ್ಯವಾದ ಗಾಜಿನಂತೆಯೇ ಇರುತ್ತದೆ. ಅದರಲ್ಲಿ ಏನಾದರೂ ಸಣ್ಣದಾದ ಬೆಳಕು ಅಥವಾ ಕಪ್ಪು ಗುರುತು ಕಾಣಿಸಿದರೆ ಎಚ್ಚರಿಕೆಯಿಂದಿರಿ. ಇಂತಹವನ್ನು ಮಹಿಳೆಯರ ಟ್ರಯಲ್ ರೂಮಿಗಾಗಿಯೇ ವಿಶೇಷವಾಗಿ ತಯಾರಿಸಲಾಗಿದ್ದು, ಅಲ್ಲಿ ಹಿಡೆನ್ ಕ್ಯಾಮೆರಾ ಇರುವ ಸಂಭವ ಹೆಚ್ಚಾಗಿರುತ್ತದೆ.
ಬಲಿಯಾಗುವುದರಿಂದ ಪಾರಾಗಿ
ಕೆಲವು ದುರ್ಮಾರ್ಗಿಗಳು ನಿಮ್ಮ ಖಾಸಗಿ ಚಲನವಲನವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಅದನ್ನು ಎಂ.ಎಂ.ಎಸ್‌ನಲ್ಲಿ ಸಿದ್ಧಪಡಿಸುತ್ತಾರೆ ಮತ್ತು ಬ್ಲಾಕ್‌ಮೇಲ್ ಮಾಡತೊಡಗುತ್ತಾರೆ. ಹರಿಯಾಣದಲ್ಲಿ ಇಂತಹದೇ ಒಂದು ಪ್ರಸಂಗ ನಡೆಯಿತು. ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ಮಾಡಲು ಬಂದಿದ್ದ ಒಬ್ಬ ಅಪ್ರಾಪ್ತ ವಯಸ್ಕ ಕ್ರೀಡಾಳುವಿನ ಚೇಂಜಿಂಗ್ ರೂಮಿನ ವಿಡಿಯೋ ಸಿದ್ಧಪಡಿಸಿ, ಅವಳನ್ನು ಸೆಕ್ಷುಯಲ್ ರಿಲೇಶನ್‌ಗೆ ಬ್ಲಾಕ್‌ಮೇಲ್ ಮಾಡಿ ಒತ್ತಾಯಿಸಲಾಗಿತ್ತು. ಆ ಒತ್ತಡವನ್ನು ತಡೆಯಲಾರದೆ ಹುಡುಗಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ವಿಷಯ ಹೊರಬಂದಿತು.
ಹಾಗೆಯೇ ಯಾವುದಾದರೂ ಹೋಟೆಲ್ ಅಥವಾ ಅಪರಿಚಿತ ಕೋಣೆಗೆ ಹೋಗುವಾಗ ಎಚ್ಚರಿಕೆಯಿಂದಿದ್ದರೆ ಹಿಡೆನ್ ಕ್ಯಾಮೆರಾಗೆ ಬಲಿಯಾಗುವುದರಿಂದ ತಪ್ಪಿಸಿಕೊಳ್ಳಬಹುದು. ಹಿಡೆನ್ ಕ್ಯಾಮರಾ ಕಂಡರೆ ಅದನ್ನು ಉಪೇಕ್ಷಿಸಬಾರದೆಂದು ತಿಳಿದವರು ಹೇಳುತ್ತಾರೆ. ನಿಮ್ಮ ಮೌನ ಬೇರೆ ಹೆಂಗಸರಿಗೆ ಆಪತ್ತು ತರಬಲ್ಲದು. ಕ್ಯಾಮೆರಾ ಪತ್ತೆಯಾದಾಗ ಗಲಾಟೆ ಅಥವಾ ಜಗಳವಾಡಲು ಮುಂದಾಗಬೇಡಿ. ಅದರಿಂದ ಆ ದೃಷ್ಕೃತ್ಯದಲ್ಲಿ ತೊಡಗಿದವರು ಎಚ್ಚೆತ್ತುಕೊಂಡು ಕ್ಯಾಮೆರಾವನ್ನು ಅಥವಾ ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯವನ್ನು ನಾಶಮಾಡಲು ಅವಕಾಶವಾಗುತ್ತದೆ. ಆದ್ದರಿಂದ ನೇರವಾಗಿ ಪೊಲೀಸರಿಗೆ ದೂರು ನೀಡುವುದು ಉತ್ತಮ.
ಮಾನಸಿಕ ತೊಂದರೆ
ಸೈಬರ್ ಕ್ರೈಮ್ ಎಕ್ಸ್ ಪರ್ಟ್ಸ್ ಪ್ರಕಾರ ಯಾವುದೇ ಹೋಟೆಲ್, ಮಾಲ್, ಶೋರೂಮ್ ಗಳ ಟ್ರಯಲ್ ರೂಮ್ ಅಥವಾ ಬಾತ್‌ರೂಮ್ ಗಳಲ್ಲಿ ಗೋಡೆಗಳ ಬಣ್ಣ ಗಾಢವಾಗಿದೆಯೇ ಎಂದು ಮಹಿಳೆಯರು ನೋಡಬೇಕು. ಗೋಡೆಗಳ ಬಣ್ಣ ಬಿಳಿಯಾಗಿದ್ದರೆ ಕ್ಯಾಮೆರಾ ಇರುವ ಸಂಭವ ಕಡಿಮೆ. ಏಕೆಂದರೆ ಕ್ಯಾಮೆರಾದ ಲೆನ್ಸ್ ಬೆಳ್ಳಗಿರುವುದಿಲ್ಲ. ಗಾಢ ಬಣ್ಣದ ಗೋಡೆಗಳಲ್ಲಿ ಕ್ಯಾಮೆರಾ ಅಳವಡಿಕೆ ಸುಲಭ ಮತ್ತು ಅದು ಪತ್ತೆಯಾಗುವುದೂ ಇಲ್ಲ. ಟ್ರಯಲ್ ರೂಮ್ ನಲ್ಲಿ ಬೆಳಕು ಚೆನ್ನಾಗಿರಬೇಕು. ಕಡಿಮೆ ಬೆಳಕಿನಲ್ಲಿ ಕ್ಯಾಮೆರಾದ ಇರುವನ್ನು ಪತ್ತೆ ಮಾಡುವುದು ಕಷ್ಟ.
ಇದರ ಬಗ್ಗೆ ಮಾನಸಿಕ ತಜ್ಞರು ಹೀಗೆ ಹೇಳುತ್ತಾರೆ, “ಇಂತಹ ಕೃತ್ಯ ಮಾಡುವವರು ಮಾನಸಿಕವಾಗಿ ಅಸ್ವಸ್ಥರಾಗಿರುತ್ತಾರೆ. ತಮ್ಮ ಮಾನಸಿಕ ದೌರ್ಬಲ್ಯವನ್ನು ಶಾಂತಗೊಳಿಸಲು ಅವರು ಈ ರೀತಿಯಾಗಿ ವಿಡಿಯೋ ಮಾಡಿ ಅದನ್ನು ನೋಡಿ ಸಂತೋಷ ಪಡುತ್ತಾರೆ ಮತ್ತು ಅವುಗಳ ದುರುಪಯೋಗವನ್ನು ಮಾಡಬಹುದು, ಇಂತಹ ವಿಡಿಯೋವನ್ನು ಸಾರ್ವಜನಿಕಗೊಳಿಸುವುದರಿಂದ ಇತರರ ಬಾಳು ಹಾಳಾಗಬಹುದೆಂಬ ಕಾಳಜಿ ಅವರಿಗಿರುವುದಿಲ್ಲ.”
ಇಂತಹದೊಂದು ಘಟನೆ ಸ್ಟುಡಿಯೋ ಒಂದರಲ್ಲಿ ನಡೆಯುತ್ತಿದ್ದುದು ಬೆಳಕಿಗೆ ಬಂದಿತು. ಒಬ್ಬ ಫೋಟೋಗ್ರಾಫರ್ ತನ್ನ ಸ್ಟುಡಿಯೋದಲ್ಲಿ ಒಂದು ಚೇಂಜಿಂಗ್ ರೂಮ್ ನ ವ್ಯವಸ್ಥೆ ಮಾಡಿದ್ದ. ಮಹಿಳೆಯರು ಫೋಟೋ ತೆಗೆಸುವ ಮುನ್ನ ಬಟ್ಟೆ ಬದಲಾಯಿಸಲು ಅಲ್ಲಿಗೆ ಹೋದರೆ, ಅಲ್ಲಿ ಮುಚ್ಚಿಟ್ಟಿದ್ದ ಕ್ಯಾಮೆರಾವನ್ನು ಆನ್ ಮಾಡುತ್ತಿದ್ದ. ಆಗ ಅಲ್ಲಿನ ಚಲನವಲನವೆಲ್ಲ ಕಂಪ್ಯೂಟರ್‌ನಲ್ಲಿ ರೆಕಾರ್ಡ್ ಆಗುತ್ತಿತ್ತು.
ಅಸಹ್ಯಕರ ಮಾನಸಿಕತೆ
ಡೆಹರಾಡೂನ್‌ನ ಒಬ್ಬ ವ್ಯಕ್ತಿಯ ಅಶ್ಲೀಲ ಮಾನಸಿಕ ಸ್ಥಿತಿ ಎಲ್ಲೇ ಮೀರಿದಂತಹುದಾಗಿತ್ತು. ವಿವಾಹಿತ ಹೆಣ್ಣುಮಕ್ಕಳ ತಂದೆಯಾಗಿದ್ದ ಆತ, ಆದರ್ಶವಾದಿಯಂತೆ ಮಾತನಾಡುತ್ತಿದ್ದ. ಹದಿಹರೆಯದ ಹೆಣ್ಣುಮಕ್ಕಳ ಚಿತ್ರಗಳನ್ನು ನೋಡುವುದು ಮತ್ತು ಅದರ ಕ್ಲಿಪ್‌ತಯಾರಿಸುವುದು ಅವನ ದಿನನಿತ್ಯದ ಕೆಲಸವಾಗಿತ್ತು. ಲೆಕ್ಕವಿಲ್ಲದಷ್ಟು ಯುವತಿಯರ ನಗ್ನ ಶರೀರದ ಚಿತ್ರಗಳನ್ನು ನೋಡಿ ನೋಡಿ ತನ್ನ ದೌರ್ಬಲ್ಯವನ್ನು ತೃಪ್ತಿಪಡಿಸಿಕೊಳ್ಳುತ್ತಿದ್ದ. ಅವನು ಒಂಟಿಯಾಗಿ ವಾಸಿಸುತ್ತಿದ್ದು, ತನ್ನ ಮನೆಯಲ್ಲಿ ವಿದ್ಯಾರ್ಥಿನಿಯರಿಗೆ ಕೋಣೆಗಳನ್ನು ಬಾಡಿಗೆಗೆ ಕೊಡುತ್ತಿದ್ದ. ಹುಡುಗಿಯರ ಬಾತ್‌ರೂಮಿನಲ್ಲಿ ಹಾಕಿದ್ದ ವೆಬ್ ಕ್ಯಾಮೆರಾದ ಮೂಲಕ ಅವರ ಚಲನವಲನಗಳನ್ನು ತನ್ನ ಬೆಡ್‌ರೂಮಿನಲ್ಲಿದ್ದ ಕಂಪ್ಯೂಟರ್‌ನಲ್ಲಿ ಕದ್ದುಮುಚ್ಚಿ ನೋಡುತ್ತಿದ್ದ. ಅವನ ಮತ್ತೊಂದು ವಿಚಿತ್ರ ಮಾನಸಿಕ ದೌರ್ಬಲ್ಯವೆಂದರೆ ಒಬ್ಬ ಹುಡುಗಿಯ ಚಿತ್ರವನ್ನು ನೋಡಿದ ನಂತರ ಅದು ಅವನಿಗೆ ಬೇಸರವಾಗಿ ಬೇರೊಂದು ಹೊಸ ಹುಡುಗಿಯ ಚಿತ್ರ ನೋಡುವ ಬಯಕೆ ಹುಟ್ಟುತ್ತಿತ್ತು.
ಅದಕ್ಕಾಗಿ ಏನಾದರೊಂದು ನೆಪ ಹೂಡಿ ಕೋಣೆಯನ್ನು ಖಾಲಿ ಮಾಡಿಸುತ್ತಿದ್ದ. ಹೀಗೆ ಅದೆಷ್ಟು ಹುಡುಗಿಯರನ್ನು ತನ್ನ ಕೆಟ್ಟ ದೃಷ್ಟಿಗೆ ಬಲಿಯಾಗಿಸಿದ್ದನೋ ಅವನಿಗೇ ತಿಳಿಯದು. ಕಡೆಗೆ ಒಬ್ಬ ಹುಡುಗಿಗೆ ಬಾತ್‌ರೂಮಿನ ಗೀಝರ್‌ನಲ್ಲಿ ಅಳಡಿಸಿದ್ದ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರಿಂದ ಅವನ ದುಷ್ಕೃತ್ಯ ಬೆಳಕಿಗೆ ಬಂದಿತು ಇಂತಹನಿಗೆ ಎಂಥ ಶಿಕ್ಷೆ ವಿಧಿಸಿದರೂ ಕಡಿಮೆಯೇ….!
– ನಿತ್ಯಾ ಶರ್ಮ
ಕ್ಯಾಮೆರಾ ಇಲ್ಲಿರಬಹುದು….
ನೀವು ಎಚ್ಚರಿಕೆಯಿಂದ ಇದ್ದರೆ ಹಿಡೆನ್ ಕ್ಯಾಮೆರಾಗಳನ್ನಿಟ್ಟ ದುಷ್ಟ ಜನರ ಧೂರ್ತರ ಬಯಕೆಗೆ ಬಲಿಯಾಗುವುದನ್ನು ತಪ್ಪಿಸಿಕೊಳ್ಳಬಹುದು. ಎಕ್ಸ್ ಪರ್ಟ್ಸ್ ಪ್ರಕಾರ ಕ್ಯಾಮೆರಾ ಇರಿಸಬಹುದಾದ ಸ್ಥಳವೆಂದರೆ ಫ್ಲವರ್ ವಾಝ್, ಫೋಟೋ ಫ್ರೇಮ್, ಫ್ಯಾನ್, ಬಾತ್‌ರೂಮ್ ನ ಶವರ್, ಹಾಟ್ ವಾಟರ್ ಗೀಝರ್, ಲೈಟ್ ಸ್ವಿಚ್, ಕೋಣೆಯ ಹ್ಯಾಂಗರ್ ಹುಕ್, ವಾಲ್ ಕ್ಲಾಕ್, ಫ್ಯಾನ್ಸಿ ಲೈಟ್, ಉಪಯೋಗಿಸಲ್ಪಡದ ಟಿ.ವಿ. ರಿಮೋಟ್ ಇತ್ಯಾದಿ. ಬಟ್ಟೆಗಳ ಶೋರೂಮ್ ನ ಟ್ರಯಲ್ ರೂಮ್ ನಲ್ಲಿ ಕ್ಯಾಮೆರಾ ಇರಿಸಿರುವ ಸಂಭವ ಹೆಚ್ಚಾಗಿರುತ್ತದೆ.
ಶರೀರದ ಕೆಳಭಾಗವನ್ನು ಕವರ್ ಮಾಡುವ ಕ್ಯಾಮೆರಾವನ್ನು ಸ್ಟೂಲ್, ಮೇಜು, ಬಾಗಿಲಿಗೆ ಅಥವಾ ಉಪಯೋಗಿಸದೆ ಬಿದ್ದಿರುವ ಸಾಮಾನಿಗೆ ಉಪಾಯವಾಗಿ ಸೇರಿಸಿರಬಹುದು. ಗಾಜಿನ ಹಿಂದೆಯೂ ಕ್ಯಾಮೆರಾ ಇದ್ದಿರಬಹುದು. ಹೋಟೆಲ್ ಅಥವಾ ಹಾಸ್ಟೆಲ್‌ರೂಮಿಲ್ಲಿ ಗಾಜಿನ ಹಿಂದೆ, ಟಿವಿ ಸೆಟ್ ಒಳಗೆ, ಎ.ಸಿ. ಒಳಗೆ ಇರಬಹುದು. ವಾಶ್ ರೂಮಿನಲ್ಲಿ ಕ್ಯಾಮೆರಾ ಸಾಮಾನ್ಯವಾಗಿ ಗಾಜಿನ ಹಿಂದೆ, ಯಾವುದಾದರೂ ಮೂಲೆಯಲ್ಲಿ ಅಥವಾ ಡೆಕೊರೇಟಿವ್ ವಸ್ತುವಿನಲ್ಲಿ ಇರಿಸಿರಬಹುದು. ಒಟ್ಟಾರೆ ಹೆಣ್ಣುಮಕ್ಕಳು ಮೈಯೆಲ್ಲಾ ಕಣ್ಣಾಗಿ ಡಬಲ್ ಎಚ್ಚರಿಕೆ ವಹಿಸಬೇಕಾದುದು ಅತ್ಯಗತ್ಯ!