`ರಬ್‌ನೇ ಬನಾ ದೀ ಜೋಡಿ’ ಚಿತ್ರದಿಂದ ಬಾಲಿವುಡ್‌ಗೆ ಎಂಟ್ರಿ ಪಡೆದ ನಟಿ ಅನುಷ್ಕಾ ಶರ್ಮ ಈಗ ನಿರ್ಮಾಪಕಿ ಸಹ ಆಗಿದ್ದಾಳೆ. ಈಕೆಗೆ ಮೊದಲ ಬ್ರೇಕ್‌ ಸಿಕ್ಕಿದ್ದು ಡಿಸೈನರ್‌ ವಿ. ರಾಡ್ರಿಕ್ಸ್ ನ ಪೋಷಾಕಿನಿಂದ. ಅದನ್ನು ಧರಿಸಿ ಅನುಷ್ಕಾ ಫ್ಯಾಷನ್‌ ಶೋನಲ್ಲಿ ಮಿಂಚಿದ್ದಲ್ಲದೆ, ಮಾಡೆಲ್ ‌ಆಗಿಯೂ ಮೆರೆದಳು. ಮುಂದೆ ಯಶ್‌ರಾಜ್‌ ಬ್ಯಾನರ್‌ನಿಂದ ಕರೆಬಂದಾಗ, ದೆಹಲಿ ಬಿಟ್ಟು ಮುಂಬೈಗೆ ಹೊರಟಳು. ಒಂದು ಆಡಿಶನ್‌ನಲ್ಲಿ ಓ.ಕೆ. ಆದ ಇವಳಿಗೆ, ಒಂದಲ್ಲ 3 ಚಿತ್ರಗಳಿಗೆ ಸಹಿ ಮಾಡುವ ಹ್ಯಾಟ್ರಿಕ್‌ ಸಾಧನೆ ದೊರಕಿತು. ರಾತ್ರೋರಾತ್ರಿ ಸ್ಟಾರ್‌ ಆದ ಅನುಷ್ಕಾ, ಏನೇನೂ ಕಷ್ಟವಿಲ್ಲದೆ ಬಾಲಿವುಡ್‌ಗೆ ಎಂಟ್ರಿ ಪಡೆದಳು. ಕಾಸ್ಟಿಂಗ್‌ ಕೌಚ್‌ನ ಕರಿನೆರಳೂ ಸೋಂಕಲಿಲ್ಲ.

ಹೀಗೆ ನಿಧಾನವಾಗಿ ಯಶಸ್ಸಿನ ಒಂದೊಂದೇ ಮೆಟ್ಟಿಲೇರಿ ಶಿಖರವನ್ನೇ ತಲುಪಿದಳು ಅನುಷ್ಕಾ. ಜೊತೆಗೆ ಅನೇಕ ಪ್ರಶಸ್ತಿಗಳೂ ಅರಸಿ ಬಂದವು. 2010ರಲ್ಲಿ `ರಬ್‌ನೇ ಬನಾ ದೀ ಜೋಡಿ’ ಚಿತ್ರಕ್ಕಾಗಿ ಬೆಸ್ಟ್ ಫೀಮೇಲ್ ಡೆಬ್ಯು ಹಾಗೂ 2011ರಲ್ಲಿ `ಬ್ಯಾಂಡ್‌ ಬಾಜಾ ಬಾರಾತ್‌’ ಚಿತ್ರಕ್ಕಾಗಿ `ಬೆಸ್ಟ್ ನಟಿ’ ಪ್ರಶಸ್ತಿಯೂ ಬಂತು.

ಮಾಡೆಲ್ ಆದ ಅನುಷ್ಕಾ, ಶ್ಯಾಂಪೂ ಜಾಹೀರಾತಿಗಾಗಿ ಪ್ರಸಿದ್ಧ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಜೊತೆ ನಟಿಸಬೇಕಾಯಿತು. ಆ ಶ್ಯಾಂಪೂ ಆ್ಯಡ್‌ ಜಬರ್ದಸ್ತ್ ಹಿಟ್‌ ಆಗಿ, ಇದೇ ಜೋಡಿ ಅಂಥ ವಿಭಿನ್ನ ಅವತರಣಿಕೆಗಳಲ್ಲಿ ಕಾಣಿಸಿಕೊಂಡಿತು. ಹೀಗೆ ಅವರಲ್ಲಿ ಹೆಚ್ಚಿದ ನಿಕಟತೆ ಸ್ನೇಹದಿಂದ ಪ್ರೇಮಕ್ಕೆ ತಿರುಗಿ 2017ರ ಡಿಸೆಂಬರ್‌ 11 ರಂದು ಇಟಲಿಯಲ್ಲಿ ಮದುವೆಯಲ್ಲಿ ಶಾಶ್ವತವಾಗಿ ಒಂದಾದರು.

ನಟಿಯಿಂದ ನಿರ್ಮಾಪಕಿ

ನಟಿಯಿಂದ ನಿರ್ಮಾಪಕಿಯಾದ ಅನುಷ್ಕಾ ಹಲವು ಚಿತ್ರಗಳನ್ನು ನಿರ್ಮಿಸಿದಳು. “ಸಿನಿಮಾ ನಿರ್ಮಾಪಕಿ ಆಗಲೇಬೇಕೆಂಬ ಆಸೆ ಇರಲಿಲ್ಲ. ಕಾಲ ಸರಿದಂತೆ ಆಗಬೇಕಾಯ್ತು. ನಟಿಯಾಗಿ ಹೆಚ್ಚಿನ ಜವಾಬ್ದಾರಿ ಇರುವುದಿಲ್ಲ ಎಂಬುದೇನೋ ಸರಿ, ಅವಳಿಂದ ಉತ್ತಮ ನಟನೆ ಮಾತ್ರ ಅಪೇಕ್ಷಿಸಲಾಗುತ್ತದೆ. “ಆದರೆ ನಟಿಯೇ ನಿರ್ಮಾಪಕಿ ಆದಾಗ, ಜವಾಬ್ದಾರಿ 2 ಪಟ್ಟಲ್ಲ, 100 ಪಟ್ಟು ಹೆಚ್ಚುತ್ತದೆ. ಅವಳೇ ಎಲ್ಲಾ ನಿರ್ಧಾರ ಕೈಗೊಳ್ಳಬೇಕು. ಎಲ್ಲರನ್ನೂ ಜೊತೆ ಜೊತೆಯಲ್ಲಿ ನಿಭಾಯಿಸಬೇಕು. ನಿಮ್ಮ ತಂಡ ಉತ್ತಮವಾಗಿದ್ದು, ನಿಮ್ಮ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಿರಾದರೆ, ಆಗ ಏನೂ ಕಷ್ಟ ಅನಿಸುವುದಿಲ್ಲ.

“ಮೊದಲ ಚಿತ್ರದ ನಿರ್ಮಾಣದ ನಂತರ ಹೆಚ್ಚಿದ ಜವಾಬ್ದಾರಿಗಳಿಂದ ನನಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿತು. ಇದರಿಂದ ಹೆಚ್ಚು ಕೆಲಸ ಮಾಡಲು ಸಾಧ್ಯ ಆಗುತ್ತಿದೆ. ನನ್ನಣ್ಣ ಕರ್ನೇಶ್‌ ಶರ್ಮ ಜೊತೆಗೂಡಿ `ಫಿಲ್ಲೋರಿ’ ಚಿತ್ರ ನಿರ್ಮಿಸಿದೆ. ನನ್ನೊಳಗಿನ ಧ್ವನಿಯನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ನಿರ್ಮಾಪಕಿ ಆಗಲೇಬೇಕು ಅಂತ ನಾನು ಯೋಜನೆ ರೂಪಿಸಿದವಳಲ್ಲ…. ಹೇಗೋ ಅದು ತಾನಾಗಿ ಆಯಿತು.”

ಮಹಿಳಾ ನಿರ್ಮಾಪಕಿಯಾಗಿ ಬಾಲಿವುಡ್‌ನಲ್ಲಿ ಸರಾಗವಾಗಿ ಮುಂದುವರಿಯುವುದು ಅನುಷ್ಕಾ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಆದರೆ ಆಕೆ ಧೃತಿಗೆಡದೆ ಮುಂದೆ ಹೆಜ್ಜೆ ಇಟ್ಟಳು. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಹೆಣ್ಣು ಯಾವುದೇ ಕ್ಷೇತ್ರದಲ್ಲಿ ಹೆಜ್ಜೆಯಿಟ್ಟರೂ ಹೀಗೇ ಆಗುತ್ತದೆ ಎಂಬುದು ಅನುಷ್ಕಾಳ ಅಂಬೋಣ. ಒಬ್ಬ ನಟಿಯಾಗಿ ಈಕೆ ಒಂದು ಯಶಸ್ವಿ ಹಂತ ತಲುಪಿದ್ದಳು, ಆದರೆ ನಿರ್ಮಾಪಕಿಯ ಹಾದಿ ಹೂವಿನ ಹಾದಿ ಆಗಿರಲಿಲ್ಲ. ಇದೀಗ ಆಕೆಗೆ ಚಿತ್ರರಂಗ ಕರತಲಾಮಲಕ ಆಗಿದೆ.

ಇವಳ ಹೆಚ್ಚಿನ ಚಿತ್ರಗಳು ಯಶಸ್ವಿ ಆಗಿರುವುದರಿಂದ ವೀಕ್ಷಕರಿಗೆ ಇವಳ ಮೇಲೆ ವಿಶ್ವಾಸ ಇದ್ದೇ ಇದೆ. ಮಹಿಳಾ ನಿರ್ಮಾಪಕಿ ಆಗುವುದೇ ದೊಡ್ಡ ಸವಾಲು ಅಂತಾದರೆ, ಅದನ್ನು ನಿಭಾಯಿಸಲು ಆಕೆಗೆ ಸಮಸ್ಯೆ ಏನಿಲ್ಲ. ತನ್ನ ದೃಷ್ಟಿಕೋನದಲ್ಲಿ ಕಾಂಪ್ರಮೈಸ್‌ಮಾಡಿಕೊಳ್ಳಲು ಇಷ್ಟವಿಲ್ಲ. ಸದಾ ಉತ್ತಮ ಚಿತ್ರಗಳನ್ನು ನಿರ್ಮಿಸುವುದೇ ಗುರಿ.

ಅಣ್ಣ ತುಂಬಿದ ಆತ್ಮವಿಶ್ವಾಸ

ಅನುಷ್ಕಾ ಇಲ್ಲಿಯವರೆಗೂ ತಲುಪಲು ಅವಳ ಅಣ್ಣನ ಸಹಕಾರ ಅಪಾರ. ಮರ್ಚೆಂಟ್‌ ನೇವಿಯಲ್ಲಿದ್ದುಕೊಂಡು ಹೆಚ್ಚು ಪ್ರವಾಸ ಮಾಡುತ್ತಿದ್ದಾಗ, ತನ್ನ ಚಿತ್ರಗಳನ್ನು ಆರಿಸಿಕೊಳ್ಳುವ ಮೊದಲು ಅನುಷ್ಕಾ ಅಣ್ಣನ ಸಲಹೆ ಇಲ್ಲದೆ ಮುಂದುವರಿಯುತ್ತಿರಲಿಲ್ಲ. ತಾನು ಚಿತ್ರರಂಗದವಳಲ್ಲದ ಕಾರಣ, ಸಾಮಾನ್ಯ ವೀಕ್ಷಕರಂತೆಯೇ ಚಿತ್ರರಂಗದ ಅಂತರಂಗ ಅರಿತಿರಲಿಲ್ಲ.

ಯಾವುದೇ ಸಮಾಜವನ್ನು ಬದಲಾಯಿಸುವಲ್ಲಿ ಕುಟುಂಬದ ಪಾತ್ರ ಹಿರಿದು ಎಂದು ಭಾವಿಸುವ ಅನುಷ್ಕಾ, “ನಮ್ಮ ಮನೆಯಲ್ಲಂತೂ ನನ್ನ ತಾಯಿತಂದೆ, ನನ್ನ ಅಣ್ಣನಿಗೆ ಕೊಟ್ಟಷ್ಟೇ ಪ್ರಾಮುಖ್ಯತೆ ನನಗೂ ಕೊಡುತ್ತಾರೆ. ಇಂಥ ಗುಣ ಸಂಸ್ಕಾರದಿಂದ ಮಾತ್ರ ಸಾಧ್ಯ.

“ನನಗೇನಾದರೂ ಸೂಪರ್‌ ಪವರ್‌ ದೊರಕಿದರೆ ನಾನು `ಟ್ರೂ ಸೆನ್ಸ್ ಆಫ್‌ ಫ್ರೀಡಮ್’ನ್ನು ಬದಲಾಯಿಸಲು ಬಯಸುತ್ತೇನೆ. ಯಾರು ತಮ್ಮನ್ನು ತಾವು ಹೆಚ್ಚು ತಿಳಿದವರೆಂದು ಭಾವಿಸಿ, ಇತರರನ್ನು ಕಡೆಗಣಿಸುತ್ತಾರೋ, ಆಗ ಬೇರೆಯವರಿಗೆ ಜೀವನ ದುಸ್ತರ ಎನಿಸುತ್ತದೆ. ಅವರ ಯೋಚನಾ ಧಾಟಿ ಬದಲಾದದ್ದೇ ಆದರೆ, ತಾವು ಮಾತ್ರವಲ್ಲ ಅವರು ಇತರರನ್ನೂ ಸಂತೋಷವಾಗಿ ಇರಿಸಿಕೊಳ್ಳಬಲ್ಲರು.”

– ಪ್ರತಿನಿಧಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ