ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ಹೋಗಿ, ಅಲ್ಲಿಂದ ಹಾಲಿವುಡ್‌ಗೂ ಹಾರಿರುವ ದೀಪಿಕಾ ತನ್ನ ಪ್ರತಿಭೆಯನ್ನು ಲೋಹದಂತೆ ಎರಕ ಹೊಯ್ದು ತನ್ನ ಶ್ರದ್ಧೆ, ಪರಿಶ್ರಮಗಳಿಂದ ಯಶಸ್ಸಿನ ಉತ್ತುಂಗಕ್ಕೇರಿರುವ ದೀಪಿಕಾ, ಬಾಲಿವುಡ್‌ನಲ್ಲಿಂದು ಪ್ರಖ್ಯಾತಿಯ ಶಿಖರಕ್ಕೇರಿದ್ದಾಳೆ. ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಡ್ಮಿಂಟನ್‌ ಕ್ರೀಡಾಪಟುವಾಗಿ ಆಡಿರುವ ದೀಪಿಕಾ, ಕ್ರೀಡೆ ಮುಂದುವರಿಸುವ ಬದಲು ಚಿತ್ರರಂಗಕ್ಕೆ ಬಂದಳು. ಇಂದು ಅವಳ ಹೆಸರು ಅಗ್ರಗಣ್ಯ ನಾಯಕಿಯರ ಪಟ್ಟಿಯಲ್ಲಿದೆ.

ವಿವಾದಗಳನ್ನು ಪರಿಗಣಿಸುವುದೇ ಇಲ್ಲ. ಇತ್ತೀಚಿನವರೆಗೂ ಇವಳ ಚಿತ್ರ `ಪದ್ಮಾವತ್‌’ ಕುರಿತಾಗಿ ಅಖಂಡ ವಿವಾದ ನಡೆಯಿತು. ಇದಕ್ಕೆ ದೀಪಿಕಾ, `ಮೊದ ಮೊದಲು ಇದನ್ನು ನಾನು ಸೀರಿಯಸ್‌ ಆಗಿ ಪರಿಗಣಿಸಲೇ ಇಲ್ಲ. ಆದರೆ ಯಾವುದೇ ಸಮರ್ಪಕ ಕಾರಣಗಳಿಲ್ಲದೆ ಮಾಡುವ ವಿವಾದ ಖಂಡಿತಾ ನನಗೆ ಇಷ್ಟವಾಗದು. ನನ್ನ ಮೇಲೆ ಅತಿ ಹೆಚ್ಚಿನ ಒತ್ತಡ ಹೇರಲಾಯಿತು. ನಾನು ತಪ್ಪು ಒಪ್ಪಿ ಮಂಡಿಯೂರಲೇಬೇಕು ಎಂಬಂತೆ ವರ್ತಿಸಿದರು. ನಾನೇನಾದರೂ ತಪ್ಪು ಮಾಡಿದ್ದರೆ ತಾನೇ ಅವರ ಮಾತನ್ನು ಒಪ್ಪಿ ಮಂಡಿಯೂರುವುದಕ್ಕೆ? ಆಗ ಆ ಜನ ನನ್ನನ್ನು ತುಂಬಾ ಭಯಪಡಿಸಿ ಮೂಗು, ಕಿವಿ ಕತ್ತರಿಸುತ್ತೇವೆ ಎಂದರು. ನನ್ನ ಮನೆಯವರಿಗೆ ಇದರಿಂದ ಟೆನ್ಶನ್‌ ಹೆಚ್ಚಿತು. ಆದರೆ ನಾನು ಮಾತ್ರ ಹೆದರಲಿಲ್ಲ, ಇಂಥ ಬೆದರಿಕೆಗೆ ಮಣಿಯಲೂ ಇಲ್ಲ!” ಎನ್ನುತ್ತಾಳೆ.

ಫೇಸ್‌ಬುಕ್‌ನಲ್ಲಿ ದೀಪಿಕಾಳಿಗೆ 22.9 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. ಇಂಥ ಸೋಶಿಯಲ್ ಮೀಡಿಯಾದ ಲೈಫ್‌ನಲ್ಲಿ ಮೂಗು ತೂರಿಸುವವರ ಕುರಿತು ದೀಪಿಕಾ, “ಪ್ರತಿ ಪ್ರಕರಣಕ್ಕೂ 2 ಮುಖಗಳಿರುತ್ತವೆ….. ಪಾಸಿಟಿವ್ ‌ನೆಗೆಟಿವ್‌! ಇಲ್ಲಿ ಹಾಗೆ ಮೂಗು ತೂರಿಸುವವರು ನಿಮಗೆಷ್ಟು ಮುಖ್ಯ ಎಂಬುದೇ ಪ್ರಶ್ನೆ. ನೀವು ಸೋಶಿಯಲ್ ಮೀಡಿಯಾಗೆ ಬಹಳ ಅಡಿಕ್ಟ್ ಆಗಿದ್ದರೆ, ಖಂಡಿತಾ ನೀವು ಡಿಪ್ರೆಶನ್‌ಗೆ ಗುರಿಯಾಗುತ್ತೀರಿ. ಏಕೆಂದರೆ ಲೈಕ್‌, ಅನ್‌ಲೈಕ್‌, ಟ್ರೋಲ್ ‌ಮುಂತಾದ ಶಬ್ದಗಳನ್ನು ಜನ ನಿಧಾನವಾಗಿ ಸೀರಿಯಸ್‌ ಆಗಿ ತೆಗೆದುಕೊಳ್ಳುತ್ತಿದ್ದಾರೆ.

“ಇಂದು ಸೋಶಿಯಲ್ ಮೀಡಿಯಾ ಇಲ್ಲದ ನಿಮ್ಮ ವ್ಯಕ್ತಿತ್ವವನ್ನು ಯಾರೂ ಕಲ್ಪಿಸಿಕೊಳ್ಳಲಿಕ್ಕೂ ಬಯಸುವುದಿಲ್ಲ. ಆದರೆ ಯಾವುದನ್ನು ಆಯ್ದುಕೊಳ್ಳಬೇಕು, ಬಿಡಬೇಕು ಎಂಬುದು ನಿಮ್ಮ ಕೈಯಲ್ಲಿದೆ,” ಎನ್ನುತ್ತಾಳೆ.

ಏರಿಳಿತಗಳ ಹಾದಿಯಲ್ಲಿ

ಕನ್ನಡದಲ್ಲಿ ಮೊದಲ ಬಾರಿಗೆ ಉಪೇಂದ್ರ ಜೊತೆ `ಐಶ್ವರ್ಯಾ’ದಲ್ಲಿ ಕಾಣಿಸಿಕೊಂಡಳು. ಅಲ್ಲಿಂದ ನೇರವಾಗಿ ಬಾಲಿವುಡ್‌ನ `ಓಂ ಶಾಂತಿ ಓಂ’ ಚಿತ್ರದಲ್ಲಿ ಡೆಬ್ಯು ಪಡೆದಳು. ಶಾರೂಖ್‌ ಜೊತೆಗಿನ ಈ ಚಿತ್ರ ಬ್ಲಾಕ್‌ ಬ್ಲಸ್ಟರ್‌ ಎನಿಸಿತು. ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಗಳಿಸಿತು, ಇವಳಿಗೆ ಅತ್ಯುತ್ತಮ ಡೆಬ್ಯು ನಟಿ ಎಂಬ ಪಟ್ಟ ತಂದುಕೊಟ್ಟಿತು. ಅದಾದ ಮೇಲೆ ಈಕೆಯ ಹಲವು ಚಿತ್ರಗಳು ಫ್ಲಾಪ್‌ಆದವು. ಆದರೆ ದೀಪಿಕಾ ಒಂದಿಷ್ಟೂ ಧೃತಿಗೆಡಲಿಲ್ಲ.

“ಕಾಕ್‌ಟೇಲ್ ‌ಚಿತ್ರ ನಿಜಕ್ಕೂ ನನಗೆ ಒಂದು ಟರ್ನಿಂಗ್‌ ಪಾಯಿಂಟ್‌. ಇದರಿಂದ ನನ್ನ ಆರಾಧಕರು, ನಿಂದಕರು ಇಬ್ಬರೂ ಸಂತೃಪ್ತಿಗೊಂಡರು.”

ಯಾರಾದರೂ ತನಗೆ, ನಿನಗೆ ಅತಿ ಅಚ್ಚುಮೆಚ್ಚಿನದಾದ ಕೆಲಸ ಮಾಡು ಎಂದರೆ ಮನೆ ಕ್ಲೀನಿಂಗ್‌ ಕೆಲಸ ಶುರು ಹಚ್ಚಿಕೊಳ್ಳುತ್ತಾಳಂತೆ. ಆಕೆಗೆ ಶುಚಿತ್ವ ಎಲ್ಲಕ್ಕಿಂತ ಮುಖ್ಯ. ಕೊಳಕು ಎಂಬುದು ನಗರ, ದೇಶ, ಮನಸ್ಸು ಎಲ್ಲೇ ತುಂಬಿರಲಿ. ಅದನ್ನು ಶುಚಿ ಮಾಡಲೇಬೇಕು ಎನ್ನುತ್ತಾಳೆ. ಕೊಳಕು ವಿಚಾರ, ಕೊಳಕಿನ ವಾತಾವರಣ ಎರಡೂ ಅವಳಿಗೆ ಅಲರ್ಜಿ, ಅದನ್ನು ಶುಚಿ ಮಾಡಲೇಬೇಕು.

ತನ್ನ ತಂದೆಯನ್ನೇ ಅತ್ಯುತ್ತಮ ಟೀಚರ್‌ ಎಂದು ಭಾವಿಸುವ ದೀಪಿಕಾ, “ಅಪ್ಪಾಜಿಯವರ ಮಾತುಗಳಿಗೆ ಮಹತ್ವ ಕೊಟ್ಟಿದ್ದರಿಂದಲೇ ನಾನು ಇಂದು ಈ ಮಟ್ಟ ತಲುಪಲು ಸಾಧ್ಯ ಆಗಿರುವುದು. ಏನೇ ಮಾಡಿದರೂ ಮನಸ್ಸಿಟ್ಟು ಮಾಡು ಎನ್ನುವರು. ನನ್ನ ಪಾಲಕರೆಂದೂ ನನಗೆ ಅಥವಾ ನನ್ನ ತಂಗಿಗೆ ತಮ್ಮ ಅಭಿಪ್ರಾಯದಂತೆಯೇ ನಡೆಯಬೇಕೆಂದು ಒತ್ತಾಯ ಹೇರಿದವರಲ್ಲ. ಶಿಕ್ಷಣದಿಂದ ಹಿಡಿದು ಕೆರಿಯರ್‌ ಆರಿಸಿಕೊಳ್ಳುವವರೆಗೂ ನಮಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಅವರು ಈಗಲೂ ಸದಾ ನಮಗೆ ಗೈಡೆನ್ಸ್ ಕೊಡುತ್ತಾರೆ. ನನ್ನ ಪ್ರತಿ ಯಶಸ್ಸಿನಲ್ಲೂ ಅವರ ಮಾರ್ಗದರ್ಶನ ಇದ್ದೇ ಇದೆ!”

ಸದಾ ಸಕಾರಾತ್ಮಕ ನಿಲುವು

ಇಂದಿನ ಯುವ ಜನಾಂಗಕ್ಕೆ ಸಂದೇಶ ನೀಡುತ್ತಾ ದೀಪಿಕಾ, “ಸದಾ ಕೆರಿಯರ್‌ ಕಾನ್ಶಿಯಸ್‌ ಆಗಿರಿ. ಆದರೆ ವರ್ಕೋಹಾಲಿಕ್‌ಆಗಿ ಆ ಪ್ರೆಶರ್‌ ನಿಮ್ಮನ್ನು ಡಿಪ್ರೆಶನ್‌ಗೆ ತಳ್ಳುವಂತಿರಬಾರದು. ಯಾರೇ ಡಿಪ್ರೆಶನ್‌ಗೆ ಜಾರಿರಲಿ, ನೀವು ಯಾಕಾಗಿ ಹಾಗಾದಿರಿ ಎಂದು ನಿಮ್ಮ ನಿಕಟವರ್ತಿಗಳ ಬಳಿ ಹಂಚಿಕೊಳ್ಳಿ. ಕುಟುಂಬದವರೊಡನೆ ಈ ಬಗ್ಗೆ ಚರ್ಚಿಸಿ, ಮಾನಸಿಕ ತಜ್ಞರ ಬಳಿ ಕೌನ್ಸೆಲಿಂಗ್‌ಪಡೆದುಕೊಳ್ಳಿ. ಎಲ್ಲಕ್ಕೂ ಮುಖ್ಯವೆಂದರೆ ಸದಾ ಪಾಸಿಟಿವ್ ‌ಆಗಿ ಯೋಚಿಸಿ. ನೆಗೆಟಿವ್ ‌ವಿಚಾರಗಳನ್ನು ನಿಮ್ಮ ಮನದಿಂದ ತೆಗೆದುಹಾಕಿ ನಿಮ್ಮ ಸಕಾರಾತ್ಮಕ ಧೋರಣೆಯೇ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸಬಲ್ಲದು,” ಎನ್ನುತ್ತಾಳೆ.

– ಟಿ. ದೀಪಾ   

Tags:
COMMENT