ಯೆಲ್ಲೋ ಸ್ಟೋನ್ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗೋಣ ಎಂದು ಮಗ ಅರುಣ್ ಹೇಳಿದಾಗ, ಅದಕ್ಕೆ ತಯಾರಿ ನಡೆಸಲಾಯಿತು. ನಾವಾದರೆ ಟ್ರಾವೆಲ್ ಏಜೆಂಟ್‌ಗೆ ಹಣ ಕೊಟ್ಟುಬಿಟ್ಟರೆ ಎಲ್ಲವನ್ನೂ ಅವನೇ ಮಾಡಿಬಿಡುತ್ತಾನೆ. ಆದರೆ ಈಗಿನ ಮಕ್ಕಳಿಗೆ ಈ ರೀತಿ ಇಷ್ಟವಾಗುವುದಿಲ್ಲ.
ಮಗ ಮತ್ತು ಸೊಸೆ ಕುಳಿತು ಹೋಟೆಲ್ ಬುಕಿಂಗ್ ಮತ್ತು ವಿಮಾನದ ಬುಕಿಂಗ್ ನಡೆಸಿದರು. ಅಂತೂ ಯೆಲ್ಲೋ ಸ್ಟೋನ್‌ಗೆ ಹೋಗುವ ನಿರ್ಧಾರವಾಯಿತು. ಅಲ್ಲಿಗೆ ಬೇಕಾದರೆ ಕಾರಿನಲ್ಲೇ ಹೋಗಬಹುದು. ಆದರೆ ಹದಿನಾರು ಘಂಟೆಗಳ ಕಾಲ ಕಾರನ್ನು ಓಡಿಸಬೇಕು. ಇಲ್ಲಿ ರಸ್ತೆಗಳು ಬಹಳ ಚೆನ್ನಾಗಿರುತ್ತವೆ ಮತ್ತು ಕಾರುಗಳೂ ಸಹ ಅಷ್ಟೇ. ಗೇರಿಲ್ಲದ ವಾಹನ, ಪದೇ ಪದೇ ಗೇರನ್ನು ಬದಲಿಸುವ ಅಗತ್ಯವಿಲ್ಲ. ಆದರೂ ಹದಿನಾರು ಘಂಟೆಗಳ ಕಾಲ ಪ್ರಯಾಣ ಎಂದಾಗ ಒಂದೇ ದಿನದಲ್ಲಿ ಆಗುವುದಿಲ್ಲ, ಎರಡು ದಿನಗಳಾದರೂ ಬೇಕಾಗಬಹುದು. ಆದ್ದರಿಂದ ವಿಮಾನದಲ್ಲಿ ಹೋಗಿ ಅಲ್ಲಿಂದ ರೆಂಟ್ ಕಾರನ್ನು ಪಡೆದು, ಅಲ್ಲಿಂದ ಅದರಲ್ಲಿಯೇ ಹೋಗಲು ನಿರ್ಧಾರವಾಯಿತು.
ಅಲ್ಲೆಲ್ಲಾ ಕಾರುಗಳು ಬಾಡಿಗೆಗೆ ಸಿಗುತ್ತವೆ. ಅವುಗಳು ಅಂತಿಂತಹುವಲ್ಲ, ಬಹಳ ಚೆನ್ನಾಗಿರುತ್ತವೆ. ನಮ್ಮ ಆಯ್ಕೆಗೆ ಅನುಗುಣವಾಗಿ ಹಣವನ್ನೂ ತೆರಬೇಕಾಗುತ್ತದೆ. ಸೆಪ್ಟೆಂಬರ್ ಪ್ರಾರಂಭದಲ್ಲಿ ಸೊಸೆಗೆ ಸ್ವಲ್ಪ ಕೆಲಸವಿದ್ದುದರಿಂದ ಅದನ್ನು ಮುಗಿಸಿ, ಸೆಪ್ಟೆಂಬರ್‌ನಾಲ್ಕರ ಲೇಬರ್ ಡೇ ಮುಗಿಸಿಕೊಂಡು, ಅಂತೂ ಮಂಗಳವಾರ ಮುಂಜಾನೆ ಬೆಳಗ್ಗೆ ಆರು ಘಂಟೆಯ ವಿಮಾನಕ್ಕೆ ಹೊರಟೆವು, ಆರು ಗಂಟೆಗೆ ಹೊರಡಬೇಕೆಂದರೆ ಮನೆಯನ್ನು ಎರಡು ಘಂಟೆಯ ಮೊದಲಾದರೂ ಬಿಡಬೇಕು. ಮಗ ಏರ್‌ಪೋರ್ಟ್ ಶೆಟಲ್ ಬುಕ್ ಮಾಡಿದ. ಮುಂಜಾನೆ ನಾಲ್ಕು ಘಂಟೆಗೆ ಶಟಲ್ ಬರುವ ಹೊತ್ತಿಗೆ ಸಿದ್ಧರಾದೆವು. ಏರ್‌ಪೋರ್ಟ್ ತಲುಪಿ ಅಲ್ಲಿ ಚೆಕ್ ಇನ್‌ಮತ್ತು ಬೋರ್ಡಿಂಗ್ ಪಾಸ್ ತೆಗೆದುಕೊಳ್ಳುವ ಹೊತ್ತಿಗೆ ಸರಿಹೋಯಿತು. ನಮಗೆ ಏರ್‌ಪೋರ್ಟಿನಲ್ಲೂ ನಿದ್ದೆ. ಇನ್ನು ವಿಮಾನದಲ್ಲಿ ಕುಳಿತ ತಕ್ಷಣ ತೂಕಡಿಕೆ ಬಂದಿತು. ಚೆನ್ನಾಗಿ ಮಲಗಿಬಿಟ್ಟೆ. ಗಗನಸಖಿ ಕಾಫಿ ಬಿಸ್ಕೆಟ್ ಕೊಡಲು ಬಂದಾಗಲೇ ನಮಗೆ ಎಚ್ಚರ. ಹೇಗಿದ್ದರೂ ಚಳಿ ಇತ್ತು. ಬಿಸಿ ಬಿಸಿ ಕಾಫಿ ಕುಡಿದು ಬಿಸ್ಕೆಟ್ ತಿನ್ನುವ ಹೊತ್ತಿಗೆ ಮಂಟೊನಾ ರಾಜ್ಯದ ಬೋಜೆಮನ್ ನಗರವನ್ನು ತಲುಪಿದೆವು. ಯೆಲ್ಲೋ ಸ್ಟೋನ್‌ನ ವಿಶೇಷವೆಂದರೆ ಮಂಟೋನಾ, ಇಡಾಹೋ ಮತ್ತು ಲೋಮಿನ್ ಈ ಮೂರೂ ರಾಜ್ಯಗಳಲ್ಲೂ ಹರಡಿಕೊಂಡಿದೆ.
ಬೋಜ್‌ಮನ್ ನಗರಕ್ಕೆ ಆಗಮನ
ವಿಮಾನ ನಿಲ್ದಾಣದಲ್ಲೇ ರೆಂಟ್ ಕಾರನ್ನು ತೆಗೆದುಕೊಂಡು ಮುಂದಿನ ಪ್ರವಾಸಕ್ಕೆ ಸಿದ್ಧರಾದೆವು. ಅಷ್ಟು ಹೊತ್ತಿಗಾಗಲೇ ಮಧ್ಯಾಹ್ನದ ಊಟದ ಸಮಯವಾಯಿತು. ಸೊಸೆ ಮೊದಲೇ ಎಲ್ಲಿಗೆ ಊಟಕ್ಕೆ ಹೋಗಬೇಕೆನ್ನುವ ಬಗ್ಗೆ ತಿಳಿದುಕೊಂಡಿದ್ದಳು. ಯುವ ಜನಾಂಗ ಒಂದು ಮೊಬೈಲ್‌ನ ಮೂಲಕವೇ ಪೂರ್ಣ ಪ್ರವಾಸವನ್ನು ರೂಪಿಸಿಕೊಂಡುಬಿಡುತ್ತಾರೆ. ಅಲ್ಲಿನ ಕರಿ ಮಸಾಲಾ ಎನ್ನುವ ಭಾರತೀಯ ಅಂದರೆ ಉತ್ತರ ಭಾರತೀಯ ಹೋಟೆಲ್‌ಗೆ ಹೋದೆವು. ಅದೊಂದು ಪುಟ್ಟ ಸ್ಥಳ. ನಾವು ಹೋದ ಮೇಲೆ ಆರ್ಡರ್‌ಕೊಟ್ಟಿದ್ದನ್ನು ಬಿಸಿ ಬಿಸಿಯಾಗಿ ತಯಾರಿಸಿಕೊಟ್ಟರು. ನಿಜಕ್ಕೂ ಬಹಳ ಚೆನ್ನಾಗಿತ್ತು. ಮುಂದೆ ನಮ್ಮ ಪ್ರವಾಸದಲ್ಲಿ ಭಾರತೀಯ ಆಹಾರ ಸಿಕ್ಕುವುದು ಕಾಣೆ. ಆದ್ದರಿಂದಲೇ ಇಲ್ಲಿ ಚೆನ್ನಾಗಿ ತಿಂದು ಬಿಡಿ ಎಂದಳು ಸೊಸೆ. ಆದರೆ ಎಷ್ಟಾದರೂ ಒಂದೇ ಬಾರಿಗೆ ತುಂಬಿಸಿಕೊಳ್ಳುವುದಾದರೂ ಹೇಗೆ ಅಲ್ಲವೇ? ಅಂತೂ ಹೊಟ್ಟೆ ತುಂಬಾ ತಿಂದು ಕೊಂಡು ಹೊರಟೆವು.
ಸಾಗುವ ದಾರಿಯ ಹಸಿರಿನ ಸಿರಿ….
ಅಲ್ಲಿಂದ ಯೆಲ್ಲೋ ಸ್ಟೋನ್ ತಲುಪಲು ಕನಿಷ್ಠ ಮೂರು ಗಂಟೆಗಳಾದರೂ ಬೇಕು ಎಂದಾಗ ಬೇಗ ಹೊರಟೆವವು. ಸಾಗುವ ದಾರಿಯಲ್ಲಿ ಅಕ್ಕಪಕ್ಕ ಪೂರ್ಣ ಹಸಿರು ಬೆಟ್ಟಗಳು. ಬಿಸಿಲೇನೋ ಜೋರಾಗಿಯೇ ಇತ್ತು. ದಾರಿಯ ಪಕ್ಕ ಆಗತಾನೇ ಚಿಗುರೊಡೆದ ಹಸಿರು ಸಸಿಗಳು, ಹುಲ್ಲು ಹಾಸಿನಂತೆ ಒತ್ತಾಗಿದ್ದ ಬೆಳೆ. ಬೇಸಿಗೆಯಾದ್ದರಿಂದ ತಂಪು ಮಾಡಲು ತನುವನ್ನುಣಿಸಲು ಸಾಲಾಗಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿದ್ದರು. ಅದಕ್ಕೆ ಏನೋ ಆ ದಟ್ಟ ಬಿಸಿಲಿನಲ್ಲೂ ಆ ಬೆಳೆ ತನ್ನೊಡಲೊಳಗೆ ಹಸಿರನ್ನು ತುಂಬಿಸಿಕೊಂಡು ನೋಡುವ ಕಣ್ಣುಗಳಿಗೂ ಧನ್ಯತೆಯನ್ನು ಮೂಡಿಸುತ್ತಿತ್ತು. ಸಾಲಾದ ಹಸಿರು ಬೆಟ್ಟಗಳು ಹಾಗೆಯೇ ಸಾಗುತ್ತವೇನೋ ಕಲಾಕಾರ ಅಳತೆ ಮಾಡಿಕೊಂಡು ಸಮನಾಗಿ ಕೆತ್ತಿದಂತೆ ಕಾಣುವ ಕಪ್ಪನೆಯ ಶಿಲೆಯ ಸಾಲು ಸಾಲು ಬೆಟ್ಟಗಳು. ಭೂಗೋಳದ ಅಟ್ಲಾಸಿನಲ್ಲಿ ಚಿತ್ತಾರ ಮೂಡಿಸಿದಂತೆ ಅಲ್ಲಲ್ಲಿ ಹಸಿರು, ಕಪ್ಪನೆಯ ಕಣ್ಣು, ಅದಕ್ಕೊಂದು ಅಂಚನ್ನು ಕಟ್ಟಿದಂತೆ ವಿವಿಧ ಆಕಾರಗಳು. ಅದರ ಸುತ್ತಲೂ ಹಸಿರಾದ ಹುಲ್ಲು. ಬಿಸಿಲಿನ ತಾಪಕ್ಕೆ ಹಳದಿ ಬಣ್ಣಕ್ಕೆ ತಿರುಗಿ ಬೆಟ್ಟಕ್ಕೆ ತೆಳು ಹಳದಿ ಉಣ್ಣೆಯ ಶಾಲನ್ನು ಹೊದಿಸಿದಂತೆ ನೋಟ ಬೀರುತ್ತಿತ್ತು. ಹಾಗೆಯೇ ಸಾಗುತ್ತಾ ಹೋದರೆ ಹಸಿರು ಮತ್ತು ಹಳದಿಯ ಹುಲ್ಲು ಹಾಸಿನ ರಂಗೋಲಿಯನ್ನು ತನ್ನ ಮೇಲೆ ಹೊದ್ದುಕೊಂಡ ಬೆಟ್ಟದ ಸಾಲು. ನಿಜಕ್ಕೂ ಕಣ್ಣಿಗೆ ಮುದ ಕೊಡುವ ಪ್ರಕೃತಿಯನ್ನು ಕಂಡು ಕೈ ಮುಗಿಯುವಂತೆನಿಸಿತು. ಸಾಗುವ ದಾರಿ ಅರ್ಥಾತ್ ರಸ್ತೆಗಳಂತೂ ಬಹಳ ಚೆನ್ನಾಗಿತ್ತು. ವಿದೇಶದ ಬಗ್ಗೆ ಬರೆಯುವಾಗ ಎಲ್ಲರೂ ಬರಿಯ ಅಲ್ಲಿಯ ರಸ್ತೆಗಳನ್ನು ಹೊಗಳುತ್ತಾರೆ. ಅಲ್ಲಿಯ ಶುದ್ಧತೆಯನ್ನು ವೈಭವೀಕರಿಸುತ್ತಾರೆ ಎನ್ನುವುದು ಎಲ್ಲರ ಅಂಬೋಣ. ಆದರೆ ಬಹಳಷ್ಟು ಬಾರಿ ವಿದೇಶ ಸುತ್ತಿ ಬಂದರೂ ಮತ್ತೆ ಮತ್ತೆ ಆ ಬಗ್ಗೆ ನನಗಂತೂ ಮೆಚ್ಚುಗೆ ಮೂಡದೆ ಇರದು. ಜೊತೆಗೆ ನಮ್ಮ ಬೆಂಗಳೂರು ಹೀಗೆಯೇ ಆಗಬಾರದೆ ಎಂದು ಅನ್ನಿಸುವುದಂತೂ ಖಂಡಿತ.
ಪ್ರವೇಶ ದ್ವಾರ ತಲುಪಿದಾಗ…..
ಹಾಗೆಯೇ ಸಾಗುತ್ತಾ ಯೆಲ್ಲೋ ಸ್ಟೋನ್ ಪಾರ್ಕಿನ ಪ್ರವೇಶ ದ್ವಾರವನ್ನು ತಲುಪಿದೆವು. ಅಲ್ಲಿ ನಿಂತು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾಯಿತು. ಎತ್ತರವಾದ ಕಮಾನಿನ ಆಕಾರದ ಕಲ್ಲಿನ ದ್ವಾರ. ಅದರ ಮೇಲ್ಭಾಗದಲ್ಲಿ ಜನರ ಲಾಭ ಮತ್ತು ಸಂತೋಷಕ್ಕಾಗಿ ಎನ್ನುವ ಶೀರ್ಷಿಕೆಯನ್ನು ಹೊತ್ತ ಫಲಕ ನಮ್ಮನ್ನು ನೋಡಿ ನಸುನಗೆಯನ್ನು ಬೀರಿದಂತೆನಿಸಿತು. ಆ ಪ್ರವೇಶ ದ್ವಾರದ ಹೆಸರು ರೂಸ್ ವೆಲ್ಟ್ ಆರ್ಚ್ ಎಂದು. ಅಲ್ಲಿಂದ ಮುಂದೆ ಸಾಗಿದರೆ ಮತ್ತಷ್ಟು ಆಕಾರಗಳನ್ನು ಮೂಡಿಸಿಕೊಂಡ ಬೆಟ್ಟದ ಸಾಲುಗಳನ್ನು ನೋಡುತ್ತಾ ನಮ್ಮ ಪಯಣ ಮುಂದುವರಿಯಿತು. ಬೆಟ್ಟದ ಮೇಲೆ ಕಲ್ಲಿನ ಕೋಟೆಯೊಂದನ್ನು ಕಟ್ಟಿದಂತೆ ಭಾಸವಾಗುತ್ತಿತ್ತು. ಅಲ್ಲೊಂದು ಝರಿ ಹರಿಯುತ್ತಿತ್ತು. ನೀರನ್ನು ಕುಡಿಯಲೋ ಏನೋ ಪ್ರಾಣಿಗಳ ಗುಂಪೊಂದು ನಮ್ಮ ಕಣ್ಣಿಗೆ ಬಿದ್ದಿತು. ಅಲ್ಲಿ ಸಾಕಷ್ಟು ಕಾರುಗಳು ನಿಂತಿದ್ದವು. ಎಲ್ಲರೂ ಆ ಪ್ರಾಣಿಯ ಗುಂಪನ್ನು ನಿಂತು ನೋಡುವವರೇ ಮತ್ತು ಪೋಟೋಗಳನ್ನು ತೆಗೆಯುವವರೇ. ಇರುವ ಪ್ರಾಣಿ ಸಂತತಿಯನ್ನೆಲ್ಲಾ ನಾಶ ಮಾಡಿ ಅವುಗಳನ್ನು ನೋಡಲು ಕಾಡನ್ನು ಹುಡುಕಿಕೊಂಡು ಬರುವ ಮನುಷ್ಯನ ಸ್ಥಿತಿ ಶೋಚನೀಯವೆನಿಸಿತು. ಒಂದೆಡೆ ಬೆಟ್ಟದ ಸಾಲು, ಮತ್ತೊಂದೆಡೆ ಹೊಳೆಯುವ ಗಿಡಗಳ ತೆನೆಗಳ ಮಧ್ಯದಲ್ಲಿ ಹರಿಯುವ ಜುಳುಜುಳು ನದಿ. ಅಲ್ಲಿ ನೀರನ್ನು ಕುಡಿಯಲು ಬಂದ ಜಿಂಕೆಯಂತಿರುವ ಪ್ರಾಣಿಗಳ ಮಂದೆ ನಯನ ಮನೋಹರ ದೃಶ್ಯವೆನಿಸಿತು. ಒಂದಷ್ಟು ಮನದಲ್ಲಿ ತುಂಬಿಕೊಂಡು ಮತ್ತೊಂದಷ್ಟನ್ನು ಕ್ಯಾಮೆರಾದಲ್ಲಿ ತುಂಬಿಕೊಂಡು ಮುಂದೆ ಸಾಗಿದೆ.
ಮ್ಯಾಮತ್ ಬಿಸಿ ನೀರಿನ ಬುಗ್ಗೆ…..
ಹಾಗೆಯೇ ಸಾಗುತ್ತಾ ಮ್ಯಾಮತ್ ಬಿಸಿ ನೀರಿನ ಬುಗ್ಗೆಗೆ ಸ್ವಾಗತ ಹಾಡುವಂತೆ ಎತ್ತರದ ನೈಸರ್ಗಿಕ ಶಿಲೆಯೊಂದನ್ನು ಕಂಡೆವು. ಅಂತೆಯೇ ಕಾರನ್ನು ಅಲ್ಲಿಯೇ ಪಾರ್ಕ್ ಮಾಡಿ ಆ ಬಿಸಿ ನೀರಿನ ಬುಗ್ಗೆಯನ್ನು ನೋಡಲು ಹೊರಟೆವು. ಸಾಗಲು ಅಚ್ಚುಕಟ್ಟಾದ ಮರದ ತೊಲೆಗಳಿಂದ ದಾರಿಯನ್ನು ರೂಪಿಸಲಾಗಿದೆ. ಮೇಲಿನಿಂದ ಸುರಿಯುತ್ತಿರುವ ನೀರು ಹರಿದು ಬಂದು, ಅಲ್ಲಲ್ಲಿ ಗಟ್ಟಿಯಾಗಿ ಅಗಲವಾದ ಸಾಲು ಮೆಟ್ಟಿಲುಗಳ ಮೇಲೆ ಮೂಡಿಸಿಕೊಂಡ ಅಗಲವಾದ ಕಮಲದ ಹೂವಿನಾಕಾರದ ಪಾತ್ರೆಯೊಳಗೆ ಕುದಿಯುವ ಲಾವಾಜಲನ್ನು ನೋಡಲೇ ಚೆನ್ನ. ಈ ರೀತಿ ಸಾಲು ಸಾಲು ಮೆಟ್ಟಿಲುಗಳ ಮೇಲೆ ಜೋಡಿಸಿದಂತಹ ಪಾತ್ರೆಗಳು ಅದರೊಳಗೆ ಕುದಿಯುವ ಬಣ್ಣ ಬಣ್ಣದ ಲಾವಾ ಜಲ. ಪಕ್ಕದಲ್ಲೇ ಗಟ್ಟಿಯಾದ ಬಣ್ಣದ ಬೆಟ್ಟ ಮತ್ತು ಅಲ್ಲಿ ಹತ್ತಿರ ಹೋಗಿ ನಿಂತಾಗ ಸಲ್ಛರಿನ ವಾಸನೆ ಮೂಗಿಗೆ ಬಡಿಯುತ್ತಿತ್ತು. ಸಾಲು ಸಾಲಾಗಿ ಈ ಬಿಸಿ ನೀರಿನ ಬುಗ್ಗೆಗಳು ತಾಂಡವವಾಡುತ್ತಿದ್ದು, ಬೆಳ್ಳನೆಯ ಹೊಗೆ ಮೇಲೇರುತ್ತಿತ್ತು. ಅದರ ತಾಪಮಾನ ಸುಮಾರು 160 ಡಿಗ್ರಿಗಳಷ್ಟು ಇದೆ ಎಂದರು. ಅಂದಿಗೆ ನಮ್ಮ ಆ ದಿನದ ಪ್ರವಾಸ ಮುಗಿಯಿತೆನ್ನಬಹುದು. ನಂತರ ನಮ್ಮ ಹೋಟೆಲಿನ ಹತ್ತಿರ ನಮ್ಮ ಪಯಣ. ಮಧ್ನಾಹ್ನ ಊಟ ಮಾಡಿದ್ದು, ಬೆಳಗಿನಿಂದ ಸುತ್ತಿ ಸುತ್ತಿ ಸಾಕಾಗಿತ್ತು. ಮೊದಲಿಗೆ ರೂಮಿಗೆ ಹೋಗಿ ಮುಖ ತೊಳೆದುಕೊಂಡು ಊಟಕ್ಕೆ ಹೊರಟೆವು. ನಾವು ಯೆಲ್ಲೋ ಸ್ಟೋನ್‌ಪಾರ್ಕಿನ ಹೊರಗಡೆ ರೂಮು ಮಾಡಿದ್ದೆವು. ಅದೊಂದು ಪುಟ್ಟ ಊರು. ಬಂದವರು ಉಳಿಯಲು, ಊಟ ಮಾಡಲು ಎಲ್ಲ ರೀತಿಯ ಹೋಟೆಲ್‌ಗಳಿವೆ. ಏನೇ ಆದರೂ ನಮ್ಮ ಸಸ್ಯಾಹಾರಿಗಳಿಗೆ ಎಲ್ಲಿಂದ ಎಲ್ಲಿಗೆ ಹೋದರೂ ಸ್ವಲ್ಪ ತೊಂದರೆಯೇ. ಯೆಲ್ಲೋ ಸ್ಟೋನಿನಲ್ಲಿ ಸಿಕ್ಕುವ ಪ್ರಾಣಿಗಳ ಮತ್ತು ಬೈಸನ್ ಭಕ್ಷ್ಯಗಳು ಅಲ್ಲಿನ ವಿಶೇಷ. ಅಂತೂ ಅಲ್ಲಿ ಸಿಕ್ಕ ಏನೋ ಒಂದನ್ನು ತಿಂದು ಹೊಟ್ಟೆ ತುಂಬಿಸಿ ಕೊಂಡೆವು. ಮಧ್ಯಾಹ್ನ ಚೆನ್ನಾಗಿ ಬಿಸಿಲು ಇದ್ದದ್ದು ರಾತ್ರಿ ಅಲ್ಲಿನ ಹವಾಮಾನ ಬಹಳ ತಣ್ಣಗಿತ್ತು. ಆದರೆ ರೂಮಿನಲ್ಲಿ ನಮಗೆ ಬೇಕಾದಂತೆ ಹವಾಮಾನವನ್ನು ರೂಪಿಸಿಕೊಳ್ಳುವ ಸೌಲಭ್ಯವಿತ್ತು. ಹೀಗಾಗಿ ನಾವು ಚೆನ್ನಾಗಿ ಬೆಚ್ಚಗೆ ಮಾಡಿಕೊಂಡು ಮಲಗಿದೆವು. ಮಾರನೆಯ ದಿನ ಯೆಲ್ಲೋ ಸ್ಟೋನಿನ ವಿಶೇಷವಾದ ಬಿಸಿ ನೀರಿನ ಬುಗ್ಗೆಗಳನ್ನು ನೋಡುವ ಕಾರ್ಯಕ್ರಮ ನಮ್ಮದಿತ್ತು.
ವಿಶ್ವದ ಅತಿ ಹೆಚ್ಚು ಬಿಸಿ ನೀರಿನ ಬುಗ್ಗೆಗಳು
ಯೆಲ್ಲೋ ಸ್ಟೋನಿನಲ್ಲಿ ಸುಮಾರು 500 ಬಿಸಿ ನೀರಿನ ಬುಗ್ಗೆಗಳಿವೆ. 10,000 ಉಷ್ಣ ಲಕ್ಷಣಗಳಿವೆ. ಇದರಲ್ಲಿರುವ ಅತಿ ಹೆಚ್ಚಿನ ಹಾಗೂ ಮುಖ್ಯವೆನಿಸಿಕೊಂಡ ಅತ್ಯಂತ ಆಕರ್ಷಕ ಬಿಸಿ ನೀರಿನ ಬುಗ್ಗೆಗಳಿವೆ. ಅದರಲ್ಲಿ ಓಲ್ಡ್ ಫೈತ್‌ಪ್ ಅಂತೂ ಬಹಳ ಚಂದದ ಬಿಸಿ ನೀರಿನ ಬುಗ್ಗೆ ಎನ್ನಬಹುದು. ಕಾದ ನೀರು ಭೂಮಿಯ ತಳಭಾಗದಿಂದ ಹೊರಬರಲು ತವಕಿಸುತ್ತದೆ. ಆದರೆ ಅದನ್ನು ತಡೆಹಿಡಿದಷ್ಟು ಉಷ್ಣಾಂಶ ಹೆಚ್ಚಾಗುತ್ತದೆ. 199 ಡಿಗ್ರಿ ಫ್ಯಾರನ್ ಹೀಟ್ ಅಥವಾ 93 ಡಿಗ್ರಿ ಸೆಂಟಿಗ್ರೇಡ್‌ವರೆಗೂ ಹೋಗುತ್ತದೆ. ಆಳ ಹೆಚ್ಚಾದಷ್ಟು ಸುತ್ತಲಿನ ಒತ್ತಡ ಹೆಚ್ಚಾಗುತ್ತದೆ. ತಾಯಿಯ ಗರ್ಭದಲ್ಲಿರುವ ಮಗು ಹೊರಬರಲು ತವಕಿಸುವಂತೆ ನಾನಿನ್ನು ಒಳಗಿರಲಾರೆ ಎಂದು ಜೋರಾಗಿ ಚಿಮ್ಮಿ ಎತ್ತರ ಎತ್ತರಕ್ಕೆ ಬಿಸಿ ನೀರಿನ ಬುಗ್ಗೆ ಚಿಮ್ಮುತ್ತದೆ. ಒಳಗಿನಿಂದ ಒತ್ತಡವಿರುವ ತನಕ ಬಿಸಿ ನೀರು ಕಾರಂಜಿಯಂತೆ ಬಲು ಎತ್ತರಕ್ಕೆ ಚಿಮ್ಮುತ್ತದೆ. 50 ರಿಂದ 91 ನಿಮಿಷಗಳಿಗೊಮ್ಮೆ ಮೂರರಿಂದ ಹತ್ತು ನಿಮಿಷಗಳವರೆಗೆ 106 ರಿಂದ 185 ಅಡಿ ಎತ್ತರಕ್ಕೆ ಚಿಮ್ಮುವ ನೋಟ ಬಲು ಚೆನ್ನ. ಬುಗ್ಗೆ ಹೊರ ಹೊಮ್ಮುವ ಸಮಯ ಗೊತ್ತಿರುವುದರಿಂದ ಜನ ಅದೇ ಸಮಯಕ್ಕೆ ಸರಿಯಾಗಿ ಬಂದು ಕುಳಿತುಕೊಂಡಿರುತ್ತಾರೆ. ಜನರಿಗೆ ಕೂರಲು ಆಸನಗಳನ್ನು ಏರ್ಪಡಿಸಲಾಗಿದೆ. ಜನಸ್ತೋಮ ತುಂಬಿ ತುಳುಕುತ್ತಿರುತ್ತದೆ. ಸೃಷ್ಟಿಯ ಈ ನೈಸರ್ಗಿಕ ಅದ್ಭುತವನ್ನು ನೋಡಲು ಎಲ್ಲರಿಗೂ ಕಾತುರ. ಆ ನೋಟವನ್ನು ಕಂಡಾಗ ಕಾದು ಕುಳಿತದ್ದು ಸಾರ್ಥಕ ಎನಿಸುತ್ತದೆ. ಈ ರೀತಿ ಪ್ರತಿಯೊಂದು ಬಿಸಿ ನೀರಿನ ಬುಗ್ಗೆಯೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅತಿರೇಕ ಎನಿಸುವಷ್ಟು ಎತ್ತರಕ್ಕೆ ಹಾರುವ ನೀರಿನ ಬುಗ್ಗೆ ನೋರ್ರಿಸ್. ಯಾವುದೋ ಕಲಾಕಾರ ತನ್ನ ಕುಂಚದಿಂದ ಚಿತ್ರಿಸಿದಂತೆ ಕಾಣುವ ಬಣ್ಣ ಬಣ್ಣದ ಬಿಸಿ ನೀರಿನ ಕುಂಡಗಳು, ಕಿತ್ತಳೆ, ಹಸಿರು, ಹಳದಿ ಮತ್ತು ಆಗಸದ ನೀಲಿ ಬಣ್ಣವನ್ನು ಹೊಂದಿರುವ ನೋಡುಗರನ್ನು ನೋಡುತ್ತಲೇ ಇರಬೇಕೆಂದೆನಿಸುವ ಭಾವ ತರಿಸುವ ಪೇಂಟರ್ ಸ್ಪಾಟ್. ಅತ್ಯಂತ ಎತ್ತರಕ್ಕೆ ಮತ್ತೆ ಮತ್ತೆ ಏರುವ, ಜನಪ್ರಿಯ ಗ್ರಾಂಡ್ ಪ್ರಿಸ್ಮ್ಯಾಟಿಕ್, ಎಮರಾಲ್ಡ್, ಬ್ಲಾಕ್ ಸ್ಯಾಂಡ್ ಈ ರೀತಿ ಒಂದೆಡೆ ಬಿಸಿ ಬಿಸಿಯಾಗಿ ತನ್ನಿಚ್ಛೆ ಬಂದಂತೆ ಎತ್ತರಕ್ಕೆ ಏರುವ ಬಿಸಿ ನೀರಿನ ಬುಗ್ಗೆಗಳು, ಪಕ್ಕದಲ್ಲೇ ಹರಿಯುವ ಶಾಂತ ತಣ್ಣನೆಯ ನದಿ ಈ ರೀತಿ ಎರಡು ವೈಪರೀತ್ಯಗಳ ಆಗರ. ಒಂದಕ್ಕಿಂತ ಒಂದು ಬಿಟ್ಟ ಕಣ್ಣನ್ನು ಮುಚ್ಚದಂತೆ ನೋಡುತ್ತಲೇ ಇರಬೇಕನಿಸುವ ಈ ಪ್ರಕೃತಿಯ ವಿಸ್ಮಯವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು. ಈ ರೀತಿ ಆ ದಿನ ಪೂರ್ತಿ ಸಾಧ್ಯವಾದಷ್ಟು, ಸುಸ್ತಾಗುವಷ್ಟು ಬಿಸಿ ನೀರಿನ ಬುಗ್ಗೆಗಳನ್ನು ನೋಡುತ್ತಾ, ಗಂಧಕದ ಗಮಲಿನಲ್ಲೇ ತೇಲಾಡುತ್ತಾ ನಮ್ಮ ಹೋಟೆಲ್‌ನ್ನು ಸೇರಿದೆವು. ನಂಬಲಸಾಧ್ಯ ಎನಿಸುವಷ್ಟು ನೈಸರ್ಗಿಕ ಅದ್ಭುತ ವಿಶೇಷಗಳನ್ನೊಳಗೊಂಡಿರುವ ಬೆರಗನ್ನು ಮೂಡಿಸುವ ತಾಣ ಯೆಲ್ಲೋ ಸ್ಟೋನ್ ರಾಷ್ಟ್ರೀಯ ಉದ್ಯಾನವನ. ಇವುಗಳ ಮಧ್ಯದಲ್ಲಿ ಅಲ್ಲಲ್ಲಿ ಗುಂಪು ಗುಂಪಾಗಿ ಮೇಯುತ್ತಿದ್ದ ಕಾಡೆಮ್ಮೆಗಳು, ಕರಡಿಗಳ ಬಗ್ಗೆ ಅಲ್ಲಲ್ಲಿ ಫಲಕಗಳಿದ್ದವು. ಆದರೆ ನಮಗೆ ಒಂದೂ ಕಾಣಸಿಗಲಿಲ್ಲ. ಇಲ್ಲಿ ಪ್ರಾಣಿಗಳಿಗಿಂತ ನೈಸರ್ಗಿಕ ಅದ್ಭುತ ನೋಟಗಳು ಹೆಚ್ಚು ಕಣ್ಣು ತುಂಬಿದವು. ಬೆಳಗ್ಗೆ ಅಷ್ಟು ಬಿಸಿಲಿದ್ದದ್ದು ಐಸ್‌ಕ್ರೀಮ್ ತಿನ್ನಬೇಕೆನಿಸುವಷ್ಟು ತಾಪವಿದ್ದುದು ರಾತ್ರಿಯಾದಂತೆ ಕೊರೆಯುವ ಚಳಿ. ಮತ್ತೆ ಕೋಣೆಯ ತಾಪಮಾನವನ್ನು ಬೆಚ್ಚಗೆ ಮಾಡಿಕೊಂಡು ಮಲಗಿದೆವು.
ಯೆಲ್ಲೋ ಸ್ಟೋನಿನ ಗ್ರಾಂಡ್ ಕೆನ್ಯಾನ್….
ಮಾರನೆಯ ದಿನ ನಮ್ಮ ಪ್ರವಾಸದಲ್ಲಿ ಯೆಲ್ಲೋ ಸ್ಟೋನಿನ ಗ್ರಾಂಡ್ ಕೆನ್ಯಾನ್ ಎನಿಸಿಕೊಂಡಿರುವ ತನ್ನೊಳಗೆ ವಿಧವಿಧದ ಆಕಾರಗಳನ್ನು ಮೂಡಿಸಿಕೊಂಡಿರುವ ಪರ್ವತ ಶ್ರೇಣಿಗಳು, ಜಲಪಾತಗಳು, ಯೆಲ್ಲೋ ಸ್ಟೋನಿನ ನದಿಯ ಅಂಚಿಗೆ ಹರಡಿಕೊಂಡಿರುವ ಮನದುಂಬುವ ಹಸಿರು ಸಾಲು ಸಾಲು ಬೆಟ್ಟಗಳು, ನದಿಯ ಭೋರ್ಗರೆತವನ್ನು ಕಿವಿಗೆ ತುಂಬಿಕೊಡುವ ಅಣೆಕಟ್ಟು ಅರ್ಥಾತ್ ಡ್ಯಾಮ್. ಇವುಗಳ ಜೊತೆಗೆ ಪ್ರಾಣಿಗಳ ನೋಟ ಈ ರೀತಿ ವಿಭಿನ್ನತೆಯ ಆಗರವೇ ಅಲ್ಲಿತ್ತು. ನಾವು ಪಯಣಿಸುವಾಗ ಒಂದೆಡೆ ಹಸಿರು ಬೆಟ್ಟಗಳು ನಗು ನಗುತ್ತಿದ್ದರೆ ಮತ್ತೊಂದು ಪಕ್ಕದಲ್ಲಿ ಕಲ್ಲಿನೊಳಗೆ ಏನೆಲ್ಲಾ ಆಕಾರಗಳನ್ನು ಮೂಡಿಸಿಕೊಳ್ಳಬಹುದೆಂದು ಅಚ್ಚರಿಪಡಿಸುವ ಶಿಲಾ ವಿನ್ಯಾಸಗಳು ಅರ್ಥಾತ್ ಕಲ್ಲಿನ ಬೆಟ್ಟಗಳು. ಈ ರೀತಿ ನೆಟ್ಟ ಕಣ್ಣನ್ನು ಅಲುಗಿಸದಂತೆ ಮಾಡುವ ನೋಟ. ತನ್ನಲ್ಲೇ ವಿಭಿನ್ನ ಆಕಾರಗಳನ್ನು ಯಾವುದೋ ಕಲಾವಿದ ಕೆತ್ತಿದ್ದಾನೆ ಎಂದು ಬೀಗುವ ಶಿಲಾಪದರಗಳು, ಅದರ ಜೊತೆ ರಭಸವಾಗಿ ಭೋರ್ಗರೆಯುವ ಜಲಪಾತಗಳು ಅವುಗಳನ್ನು ಬೇರೆ ಬೇರೆ ಕೋನಗಳಿಂದ ನೋಡಲು ವಿಭಿನ್ನ ವಿಶೇಷ ತಾಣಗಳು. ಆದರೆ ಅಲ್ಲಿ ಹತ್ತಿ ಹೋಗಿ ನೋಡಲು ನಮಗೆ ಸಹನೆ ಇರಬೇಕಷ್ಟೆ. ಏನೇ ಅನ್ನಿ, ಅಲ್ಲಿಗೆ ಬಂದವರಲ್ಲಿ ಬಹಳಷ್ಟು ಜನರು ಹಿರಿಯ ನಾಗರಿಕರೇ. ನಿಜಕ್ಕೂ ಅವರ ಹುರುಪನ್ನು ಕಂಡಾಗ ಅಚ್ಚರಿ ಎನಿಸದಿರದು.
ಕಾಡೆಮ್ಮೆಗಳ ದರ್ಶನ
ಇದರ ಜೊತೆ ಅದ್ಭುತ ಪ್ರಕೃತಿ ವಿಶೇಷಗಳು….. ಅಲ್ಲಿಂದ ಮುಂದೆ ಸಾಗಿದರೆ ನೀರು ಕುಡಿಯಲು ಬಂದ ಒಂದಷ್ಟು ಕಾಡೆಮ್ಮೆಗಳು ಅರ್ಥಾತ್ ಬೈಸನ್‌ಗಳು. ಅವುಗಳನ್ನು ನೋಡುತ್ತಲೇ ಬಹಳಷ್ಟು ಕಾಲ ಕಳೆದದ್ದಾಯಿತು. ಪ್ರಾಣಿಗಳ ನೋಟವಾಯಿತು. ಅಲ್ಲಿಯ ಬಣ್ಣ ಬಣ್ಣದ ಸಸ್ಯ ವಿಸ್ಮಯಗಳನ್ನು ನೋಡುವುದು ಮತ್ತೊಂದು ಚೇತೋಹಾರಿ ನೋಟ. ಆಗ ತಾನೇ ಸೆಪ್ಟೆಂಬರ್ ತಿಂಗಳ ಕೊನೆ. ಗಿಡಮರಗಳ ಎಲೆಗಳು ಬಣ್ಣ ಬದಲಿಸುವ ಕಾಲ. ಹೀಗಾಗಿ ಒಂದೆಡೆ ಹಸಿರು ಮತ್ತೊಂದೆಡೆ ಹಳದಿ ಮಗದೊಂದೆಡೆ ಕೇಸರಿ ಬಣ್ಣ. ಈ ರೀತಿ ಬಣ್ಣದೋಕುಳಿಯನ್ನು ಮೈದುಂಬಿಸಿಕೊಂಡ ಸಸ್ಯ ವಿಶೇಷಗಳು ಮನಸೂರೆಗೊಂಡವು.
ಸಾಗುವ ಹಾದಿಯಲ್ಲಿ ಅಕ್ಕಪಕ್ಕದ ನೋಟವನ್ನು ಸವಿಯುವುದರಲ್ಲಿ ನಮಗೆ ದಾರಿ ಸವೆದುದೇ ಗೊತ್ತಾಗಲಿಲ್ಲ. ಅವುಗಳ ಜೊತೆ ಬೋನಸ್ ಎನ್ನುವಂತೆ ನದಿಯ ಪಕ್ಕದಲ್ಲಿರುವ ಹಸಿರು ಬೆಟ್ಟಗಳು ಮತ್ತು ಸಾಲು ಮರಗಳ ಬಿಂಬವನ್ನು ತೋರುವ ನಿಶ್ಚಲವಾಗಿ ನಿಶ್ಶಬ್ದದಿಂದ ನಿಂತ ಜನ ಸನ್ನಿಧಿ ಈ ರೀತಿ ವಿಧ ವಿಧದ ಪ್ರಕೃತಿ ವಿಸ್ಮಯಗಳನ್ನು ನೋಡುತ್ತಾ ಸಾಗಿದ ಕಣ್ಣು ನಿಜಕ್ಕೂ ಸಾರ್ಥಕವಾದಂತೆನಿಸಿತು. ಟೆಟನ್ ನ್ಯಾಷನಲ್ ಪಾರ್ಕ್‌ನಲ್ಲಿ ಜಲಸಾನ್ನಿಧ್ಯ ಮತ್ತು ಸಸ್ಯ ವಿಶೇಷಗಳ ಆಗರ. ಜ್ಯಾಕ್ಸನ್ ಹೋಲ್‌ನಲ್ಲಿ ಪ್ರಾಣಿ ಸಂಕುಲ. ಈ ರೀತಿ ಎಲ್ಲವನ್ನೂ ಮನ, ಕಣ್ಣು ತುಂಬಿಸಿಕೊಂಡು ಮುಂದಿನ ಹಾದಿಯನ್ನು ತಲುಪುವಲ್ಲಿ ಸಾಗುತ್ತಾ ಯೆಲ್ಲೋ ಸ್ಟೋನಿಗೆ ವಿದಾಯ ಹೇಳಿದೆವು.
– ಮಂಜುಳಾ ರಾಜ್