ಯೆಲ್ಲೋ ಸ್ಟೋನ್ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗೋಣ ಎಂದು ಮಗ ಅರುಣ್ ಹೇಳಿದಾಗ, ಅದಕ್ಕೆ ತಯಾರಿ ನಡೆಸಲಾಯಿತು. ನಾವಾದರೆ ಟ್ರಾವೆಲ್ ಏಜೆಂಟ್‌ಗೆ ಹಣ ಕೊಟ್ಟುಬಿಟ್ಟರೆ ಎಲ್ಲವನ್ನೂ ಅವನೇ ಮಾಡಿಬಿಡುತ್ತಾನೆ. ಆದರೆ ಈಗಿನ ಮಕ್ಕಳಿಗೆ ಈ ರೀತಿ ಇಷ್ಟವಾಗುವುದಿಲ್ಲ.
ಮಗ ಮತ್ತು ಸೊಸೆ ಕುಳಿತು ಹೋಟೆಲ್ ಬುಕಿಂಗ್ ಮತ್ತು ವಿಮಾನದ ಬುಕಿಂಗ್ ನಡೆಸಿದರು. ಅಂತೂ ಯೆಲ್ಲೋ ಸ್ಟೋನ್‌ಗೆ ಹೋಗುವ ನಿರ್ಧಾರವಾಯಿತು. ಅಲ್ಲಿಗೆ ಬೇಕಾದರೆ ಕಾರಿನಲ್ಲೇ ಹೋಗಬಹುದು. ಆದರೆ ಹದಿನಾರು ಘಂಟೆಗಳ ಕಾಲ ಕಾರನ್ನು ಓಡಿಸಬೇಕು. ಇಲ್ಲಿ ರಸ್ತೆಗಳು ಬಹಳ ಚೆನ್ನಾಗಿರುತ್ತವೆ ಮತ್ತು ಕಾರುಗಳೂ ಸಹ ಅಷ್ಟೇ. ಗೇರಿಲ್ಲದ ವಾಹನ, ಪದೇ ಪದೇ ಗೇರನ್ನು ಬದಲಿಸುವ ಅಗತ್ಯವಿಲ್ಲ. ಆದರೂ ಹದಿನಾರು ಘಂಟೆಗಳ ಕಾಲ ಪ್ರಯಾಣ ಎಂದಾಗ ಒಂದೇ ದಿನದಲ್ಲಿ ಆಗುವುದಿಲ್ಲ, ಎರಡು ದಿನಗಳಾದರೂ ಬೇಕಾಗಬಹುದು. ಆದ್ದರಿಂದ ವಿಮಾನದಲ್ಲಿ ಹೋಗಿ ಅಲ್ಲಿಂದ ರೆಂಟ್ ಕಾರನ್ನು ಪಡೆದು, ಅಲ್ಲಿಂದ ಅದರಲ್ಲಿಯೇ ಹೋಗಲು ನಿರ್ಧಾರವಾಯಿತು.
ಅಲ್ಲೆಲ್ಲಾ ಕಾರುಗಳು ಬಾಡಿಗೆಗೆ ಸಿಗುತ್ತವೆ. ಅವುಗಳು ಅಂತಿಂತಹುವಲ್ಲ, ಬಹಳ ಚೆನ್ನಾಗಿರುತ್ತವೆ. ನಮ್ಮ ಆಯ್ಕೆಗೆ ಅನುಗುಣವಾಗಿ ಹಣವನ್ನೂ ತೆರಬೇಕಾಗುತ್ತದೆ. ಸೆಪ್ಟೆಂಬರ್ ಪ್ರಾರಂಭದಲ್ಲಿ ಸೊಸೆಗೆ ಸ್ವಲ್ಪ ಕೆಲಸವಿದ್ದುದರಿಂದ ಅದನ್ನು ಮುಗಿಸಿ, ಸೆಪ್ಟೆಂಬರ್‌ನಾಲ್ಕರ ಲೇಬರ್ ಡೇ ಮುಗಿಸಿಕೊಂಡು, ಅಂತೂ ಮಂಗಳವಾರ ಮುಂಜಾನೆ ಬೆಳಗ್ಗೆ ಆರು ಘಂಟೆಯ ವಿಮಾನಕ್ಕೆ ಹೊರಟೆವು, ಆರು ಗಂಟೆಗೆ ಹೊರಡಬೇಕೆಂದರೆ ಮನೆಯನ್ನು ಎರಡು ಘಂಟೆಯ ಮೊದಲಾದರೂ ಬಿಡಬೇಕು. ಮಗ ಏರ್‌ಪೋರ್ಟ್ ಶೆಟಲ್ ಬುಕ್ ಮಾಡಿದ. ಮುಂಜಾನೆ ನಾಲ್ಕು ಘಂಟೆಗೆ ಶಟಲ್ ಬರುವ ಹೊತ್ತಿಗೆ ಸಿದ್ಧರಾದೆವು. ಏರ್‌ಪೋರ್ಟ್ ತಲುಪಿ ಅಲ್ಲಿ ಚೆಕ್ ಇನ್‌ಮತ್ತು ಬೋರ್ಡಿಂಗ್ ಪಾಸ್ ತೆಗೆದುಕೊಳ್ಳುವ ಹೊತ್ತಿಗೆ ಸರಿಹೋಯಿತು. ನಮಗೆ ಏರ್‌ಪೋರ್ಟಿನಲ್ಲೂ ನಿದ್ದೆ. ಇನ್ನು ವಿಮಾನದಲ್ಲಿ ಕುಳಿತ ತಕ್ಷಣ ತೂಕಡಿಕೆ ಬಂದಿತು. ಚೆನ್ನಾಗಿ ಮಲಗಿಬಿಟ್ಟೆ. ಗಗನಸಖಿ ಕಾಫಿ ಬಿಸ್ಕೆಟ್ ಕೊಡಲು ಬಂದಾಗಲೇ ನಮಗೆ ಎಚ್ಚರ. ಹೇಗಿದ್ದರೂ ಚಳಿ ಇತ್ತು. ಬಿಸಿ ಬಿಸಿ ಕಾಫಿ ಕುಡಿದು ಬಿಸ್ಕೆಟ್ ತಿನ್ನುವ ಹೊತ್ತಿಗೆ ಮಂಟೊನಾ ರಾಜ್ಯದ ಬೋಜೆಮನ್ ನಗರವನ್ನು ತಲುಪಿದೆವು. ಯೆಲ್ಲೋ ಸ್ಟೋನ್‌ನ ವಿಶೇಷವೆಂದರೆ ಮಂಟೋನಾ, ಇಡಾಹೋ ಮತ್ತು ಲೋಮಿನ್ ಈ ಮೂರೂ ರಾಜ್ಯಗಳಲ್ಲೂ ಹರಡಿಕೊಂಡಿದೆ.
ಬೋಜ್‌ಮನ್ ನಗರಕ್ಕೆ ಆಗಮನ
ವಿಮಾನ ನಿಲ್ದಾಣದಲ್ಲೇ ರೆಂಟ್ ಕಾರನ್ನು ತೆಗೆದುಕೊಂಡು ಮುಂದಿನ ಪ್ರವಾಸಕ್ಕೆ ಸಿದ್ಧರಾದೆವು. ಅಷ್ಟು ಹೊತ್ತಿಗಾಗಲೇ ಮಧ್ಯಾಹ್ನದ ಊಟದ ಸಮಯವಾಯಿತು. ಸೊಸೆ ಮೊದಲೇ ಎಲ್ಲಿಗೆ ಊಟಕ್ಕೆ ಹೋಗಬೇಕೆನ್ನುವ ಬಗ್ಗೆ ತಿಳಿದುಕೊಂಡಿದ್ದಳು. ಯುವ ಜನಾಂಗ ಒಂದು ಮೊಬೈಲ್‌ನ ಮೂಲಕವೇ ಪೂರ್ಣ ಪ್ರವಾಸವನ್ನು ರೂಪಿಸಿಕೊಂಡುಬಿಡುತ್ತಾರೆ. ಅಲ್ಲಿನ ಕರಿ ಮಸಾಲಾ ಎನ್ನುವ ಭಾರತೀಯ ಅಂದರೆ ಉತ್ತರ ಭಾರತೀಯ ಹೋಟೆಲ್‌ಗೆ ಹೋದೆವು. ಅದೊಂದು ಪುಟ್ಟ ಸ್ಥಳ. ನಾವು ಹೋದ ಮೇಲೆ ಆರ್ಡರ್‌ಕೊಟ್ಟಿದ್ದನ್ನು ಬಿಸಿ ಬಿಸಿಯಾಗಿ ತಯಾರಿಸಿಕೊಟ್ಟರು. ನಿಜಕ್ಕೂ ಬಹಳ ಚೆನ್ನಾಗಿತ್ತು. ಮುಂದೆ ನಮ್ಮ ಪ್ರವಾಸದಲ್ಲಿ ಭಾರತೀಯ ಆಹಾರ ಸಿಕ್ಕುವುದು ಕಾಣೆ. ಆದ್ದರಿಂದಲೇ ಇಲ್ಲಿ ಚೆನ್ನಾಗಿ ತಿಂದು ಬಿಡಿ ಎಂದಳು ಸೊಸೆ. ಆದರೆ ಎಷ್ಟಾದರೂ ಒಂದೇ ಬಾರಿಗೆ ತುಂಬಿಸಿಕೊಳ್ಳುವುದಾದರೂ ಹೇಗೆ ಅಲ್ಲವೇ? ಅಂತೂ ಹೊಟ್ಟೆ ತುಂಬಾ ತಿಂದು ಕೊಂಡು ಹೊರಟೆವು.