`ನಮ್ಮ ಸುತ್ತಮುತ್ತ ಗಿಡಮರಗಳು ಒಣಗುತ್ತಿವೆ, ಹಸಿರು ನಾಶವಾಗುತ್ತಿದೆ. ಇದರಿಂದಾಗಿ ವಾತಾವರಣ ಬಿಸಿಯೇರುತ್ತಿದೆ,’ ಎಂದು ನಿಟ್ಟುಸಿರು ಬಿಡುತ್ತಾ ನಮ್ಮ ಉಸಿರಿನ ಬಿಸಿಯನ್ನೂ ಅದಕ್ಕೆ ಸೇರಿಸುತ್ತೇವೆ, ಅಥವಾ ಸರ್ಕಾರದ ಆಡಳಿತ ರೀತಿಯನ್ನು ದೂಷಿಸುತ್ತೇವೆ. ಆದರೆ ಕೇವಲ ಬೇಸರಿಸುವುದರಿಂದ ಅಥವಾ ದೂಷಿಸುವುದರಿಂದ ಏನೂ ಪ್ರಯೋಜನವಿಲ್ಲ.
ತಮ್ಮ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಪರಿಚಿತರಾಗಿದ್ದ 14 ಜನ ಮಹಿಳೆಯರು ಸೇರಿ ಮುಂಬೈನಲ್ಲಿ ಒಂದು `ಸ್ವಯಂಸೇವಾ’ ಗುಂಪನ್ನು ಪ್ರಾರಂಭಿಸಿದರು. ಇವರೆಲ್ಲ ಪೇಂಟಿಂಗ್‌ನಲ್ಲಿ ಆಸಕ್ತಿ ಹೊಂದಿದವರು. ಇವರು ತಮ್ಮ ಕಲೆ ಮೂಲಕ ಜನರನ್ನು ಜಾಗೃತಗೊಳಿಸುವ ಒಂದು ಹೊಸ ವಿಧಾನವನ್ನು ರೂಪಿಸಿದರು. ಒಣಗಿದ ಮರಗಳ ಮೇಲೆ ಇವರು ಪೇಂಟಿಂಗ್ ಮಾಡಲು ಪ್ರಾರಂಭಿಸಿದರು. ಇದರಿಂದ ಒಣಗಿದ ಮರಗಳು ಆಕರ್ಷಕವಾಗಿ ಕಾಣಲಿ ಮತ್ತು ಜನರ ಗಮನ ಅತ್ತ ಹೋಗಲಿ ಎನ್ನುವುದು ಅವರ ಉದ್ದೇಶ.
ಈ ಗುಂಪಿನ ಸದಸ್ಯೆ ಪ್ರಿಯಾ ಹೇಳುತ್ತಾರೆ, “ನಮ್ಮ ಉದ್ದೇಶ ಮರಗಳನ್ನು ಪ್ರಿಸರ್ವ್, ಪ್ರೊಟೆಕ್ಟ್ ಅಂಡ್ ಪ್ಲಾಂಟ್ ಮಾಡುವುದಾಗಿದೆ. ಈ ಮೂಲಕ ವಾತಾರಣವನ್ನು ಸಮತೋಲನಗೊಳಿಸಲು ನಮ್ಮ ಸಹಕಾರ ನೀಡುವುದು ಮತ್ತು ಜನರನ್ನೂ ಈ ಬಗ್ಗೆ ಪ್ರೇರೇಪಿಸುವುದು ನಮ್ಮ ಗುರಿಯಾಗಿದೆ. ನಾವು ಮರಗಳು ಹಸಿರಾಗಿರುವಂತೆ ಮಾಡಲು ಬಯಸುತ್ತೇವೆ.
“ಒಣಗಿದ ಮರಗಳ ಮೇಲೆ ಪೇಂಟ್ ಮಾಡುವುದರಿಂದ ಒಂದು ಬಗೆಯ `ಫೀಲ್ ಗುಡ್’ನ ಭಾವನೆ ಉಂಟಾಗುತ್ತದೆ. ಆ ಪರಿಸರ ಸುಂದರವಾಗಿ ಕಾಣುತ್ತದೆ.
“ಸುಮಾರು ಒಂದೂವರೆ ವರ್ಷದ ಹಿಂದೆ ಪ್ರಾರಂಭಗೊಂಡ ಈ ಕಾರ್ಯದ ಮೂಲಕ ನಾವು ಜುಹೂ, ಬಾಂದ್ರಾ, ವಾರ್ಸೊವಾ ಮತ್ತು ಖಾರ್‌ನ ಸುತ್ತಮುತ್ತಲ ಭಾಗಗಳಲ್ಲಿ ನಮ್ಮ ಕೆಲಸವನ್ನು ಹಮ್ಮಿಕೊಂಡೆವು. ಕ್ರಮೇಣ ಜನರ ಸಹಕಾರ ನಮಗೆ ದೊರೆಯತೊಡಗಿತು. ಸ್ವಯಂಸಹಾಯ ಸಂಘಗಳು ಮತ್ತು ಸೆಲೆಬ್ರಿಟಿಗಳು ನಮ್ಮ ಬೆಂಬಲಕ್ಕೆ ನಿಂತರು. ಮೀಡಿಯಾದ ಗಮನ ನಮ್ಮ ಕಡೆ ಹರಿಯಿತು.”
ಈ ಗುಂಪಿನ ಮತ್ತೊಬ್ಬ ಸದಸ್ಯೆ ನೀಲೂ ವೀರ್ ಹೇಳುತ್ತಾರೆ, “ಜನರ ಗಮನವನ್ನು ಈ ಸಮಸ್ಯೆಯ ಕಡೆ ಸೆಳೆಯುವುದಕ್ಕಾಗಿ ಪೇಂಟಿಂಗ್‌ನ್ನು ಪ್ರಾರಂಭಿಸಲಾಯಿತು. ನಾವೀಗ ಜುಹು ವಿಭಾಗದಲ್ಲಿ ನಾನೂರು ಗಿಡಗಳನ್ನು ನೆಟ್ಟು ಅವುಗಳನ್ನು ನೋಡಿಕೊಳ್ಳುತ್ತಿದ್ದೇವೆ. ನಾವು ಜನರನ್ನು ಗಿಡ ನೆಡಲು ಮತ್ತು ಟ್ರೀ ಅಡಾಪ್ಟ್ ಮಾಡಿಕೊಳ್ಳಲು ಪ್ರೇರೇಪಿಸುತ್ತಿದ್ದೇವೆ.”
ಮುಖ್ಯವಾದ ವಿಷಯವೆಂದರೆ, ಈ ಮಹಿಳೆಯರು ಯಾರ ಬಳಿಯೂ ದೂರು ಒಯ್ಯುವುದಿಲ್ಲ ಮತ್ತು ಸರ್ಕಾರ ಮಾಡಲಿ ಎಂದು ನಿರೀಕ್ಷಿಸುವುದಿಲ್ಲ. ಗಾಂಧೀವಾದಿಗಳಂತೆ ಸಮಾಜದಲ್ಲಿ ಬದಲಾವಣೆ ಮೂಡಿಸಿ ಈ ಸಮಸ್ಯೆಯ ಪರಿಹಾರ ಹುಡುಕಲು ಬಯಸುತ್ತಾರೆ.
ಸಮಾಜದಲ್ಲಿ ಇಂತಹ ಬದಲಾವಣೆ ತರಬೇಕಾದ ಪರಿಸ್ಥಿತಿಗಳು ಇನ್ನೂ ಅನೇಕವಿವೆ. ಆದರೆ ಆ ಕೆಲಸ ಸುಲಭವಲ್ಲ. ನಾವು ಬೇಸರಪಡುತ್ತಾ ಅಥವಾ ಇತರರನ್ನು ದೂಷಿಸುವ ಬದಲು ಸ್ವತಃ ನಾವೇ ಅಂತಹ ಪರಿವರ್ತನೆಯ ದೂತರಾಗೋಣ. ಇಂತಹ ಕ್ರಾಂತಿಕಾರಿ ಆಲೋಚನೆಯ ಇನ್ನೂ ಕೆಲವು ಮಹಿಳೆಯರ ಬಗ್ಗೆ ತಿಳಿಯೋಣ :
ಬಿಕ್ಸೀ ಪಿಂಕ್ ಕ್ಯಾಬ್ಸ್ : ಮಹಿಳೆಯರು ಆಟೋ ಅಥವಾ ಕ್ಯಾಬ್‌ನಲ್ಲಿ ಪ್ರಯಾಣಿಸಬೇಕೆಂದಾಗ ತಮ್ಮ ಸುರಕ್ಷತೆಯ ಬಗ್ಗೆ ವ್ಯಾಕುಲರಾಗುತ್ತಾರೆ. ಇಂತಹ ಸಮಸ್ಯೆಯನ್ನು ಎದುರಿಸಿದ ದಿವ್ಯಾ ಅದಕ್ಕೆ ಪರಿಹಾರವನ್ನೂ ಹುಡುಕಿದರು.
ದಿವ್ಯಾ ತಮ್ಮ ಆಫೀಸ್‌ಗೆ ನಿತ್ಯ 30 ಕಿ.ಮೀ. ದೂರ ಪ್ರಯಾಣ ಮಾಡಬೇಕಾಗುತ್ತಿತ್ತು. ದಿನ ಟ್ರಾಫಿಕ್ ಜ್ಯಾಮ್ ಮತ್ತು ಪೊಲ್ಯೂಶನ್‌ನ್ನು ಎದುರಿಸಬೇಕಾಗಿತ್ತು. ಜ್ಯಾಮ್ ಆದಾಗ ದೊಡ್ಡ ಗಾಡಿಗಳಿಗಿಂತ ಮೋಟರ್ ಸೈಕಲ್ ಮತ್ತು ಸ್ಕೂಟರ್‌ಗಳು ಸಲೀಸಾಗಿ ಹೋಗಬಹುದೆಂಬುದನ್ನು ಅವರು ಗಮನಿಸಿದರು. ಆಗ ಅವರಿಗೆ ಸ್ತ್ರೀಪುರುಷರಿಗಾಗಿ ಪ್ರತ್ಯೇಕ ಮೋಟರ್ ಸೈಕಲ್ ಟ್ಯಾಕ್ಸಿ ಸರ್ವೀಸ್‌ನ್ನು (ಈಗಿನ ಓಲಾ, ಊಬರ್‌ಗಳಂತೆ) ಪ್ರಾರಂಭಿಸಬಹುದೆಂಬ ಆಲೋಚನೆ ಬಂದಿತು.
ತಮ್ಮ ಈ ಆಲೋಚನೆಯನ್ನು ಕಾರ್ಯರೂಪಕ್ಕಿಳಿಸಲು ದಿವ್ಯಾ ತಮ್ಮ ಪತಿ ಮೋಹಿತ್ ಶರ್ಮ ಮತ್ತು ಅವರ ಗೆಳೆಯ ಡೆನಿಸ್ ಚಿಂಗ್ ಅವರ ಒಡಗೂಡಿ ಜನವರಿ 2016ರಲ್ಲಿ ಬಿಕ್ಸೀ ಬ್ಲೂ ಸರ್ವೀಸಸ್ (ಪುರುಷರಿಗಾಗಿ) ಮತ್ತು ಬಿಕ್ಸೀ ಪಿಂಕ್ ಸರ್ವೀಸಸ್ (ಸ್ತ್ರೀಯರಿಗಾಗಿ) ಪ್ರಾರಂಭಿಸಿದರು.
ಇದೊಂದು ಆ್ಯಪ್ ಬೇಸ್ಡ್ ಸರ್ವೀಸ್ ಆಗಿದ್ದು, ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ. ಪ್ರಾರಂಭದಲ್ಲಿ 2 ಕಿ.ಮೀ.ಗೆ 20 ರೂ., ನಂತರ ಪ್ರತಿ ಕಿ.ಮೀ.ಗೆ 5 ರೂ. ಬಾಡಿಗೆ ದರದಲ್ಲಿ ಈ ಸರ್ವೀಸ್ ಲಭ್ಯವಿರುತ್ತದೆ. ಕೇವಲ ಮಹಿಳೆಯರಿಗೇ ಇರುವ ಪ್ರಥಮ ಸೌಲಭ್ಯವಿದು.
ದಿವ್ಯಾ ಹೇಳುತ್ತಾರೆ, “ಪಿಂಕ್ ಸ್ಕೂಟೀಗಳಲ್ಲಿ ಪಿಂಕ್ ಟೀಶರ್ಟ್ ಮತ್ತು ಯೆಲ್ಲೋ ಹೆಲ್ಮೆಟ್ ಧರಿಸಿದ ಲೇಡಿ ರೈಡರ್‌ಗಳು ಮಹಿಳೆಯರನ್ನು ಕರೆದೊಯ್ಯಲು ತತ್ಪರರಾಗಿರುತ್ತಾರೆ. ಈ ಎಲ್ಲ ದ್ವಿಚಕ್ರ ವಾಹನಗಳಿಗೆ ಯೆಲ್ಲೋ ನಂಬರ್ ಪ್ಲೇಟ್ ನೀಡಲಾಗಿದೆ. ಬಿಕ್ಸೀ ಪಿಂಕ್ ಕ್ಯಾಬ್‌ಗಳಿಗೆ ಸದ್ಯದಲ್ಲಿ 18 ಮಹಿಳಾ ರೈಡರ್‌ಗಳು ಲಭ್ಯವಿದ್ದಾರೆ.”
ಆ್ಯಪ್‌ನ ಇನ್ ಬಿಲ್ಟ್ ಟ್ರಿಪ್ ಟ್ರ್ಯಾಕಿಂಗ್ ವ್ಯವಸ್ಥೆಯಿಂದಾಗಿ ಕುಟುಂಬದವರು ಇಡೀ ಪ್ರಯಾಣದ ಮೇಲೆ ಗಮನವಿಡಬಹುದಾಗಿದೆ. ದಿವ್ಯಾ ಹೇಳುತ್ತಾರೆ, “ರೈಡರ್‌ಗಳನ್ನು ನೇಮಿಸಿಕೊಳ್ಳುವಾಗ ನಾವು ಅವರ 3-4 ವರ್ಷಗಳ ಡ್ರೈವಿಂಗ್ ಅನುಭವವನ್ನು ಪರಿಶೀಲಿಸುತ್ತೇವೆ. ಟ್ಯಾಕ್ಸಿ ಸರ್ವೀಸ್ ಸುರಕ್ಷಿತವಾಗಿರಿಸಲು ಅವರ ಪೊಲೀಸ್ ವೆರಿಫಿಕೇಶನ್‌ನ್ನು ಕೂಡ ಮಾಡಿಸುತ್ತೇವೆ.”
ಮಹಿಳಾ ಸರಪಂಚ
ಅನೇಕ ಜನರ ಮನಸ್ಸಿನಲ್ಲಿ ಹಿಂದುಳಿದ ಹಳ್ಳಿಗಳ ಏಳ್ಗೆಯ ಬಗ್ಗೆ ಕಾಳಜಿ ಇರುತ್ತದೆ. ಕೆಲವರು, `ಇಂತಹ ಹಳ್ಳಿಯ ಜನರ ಅವಶ್ಯಕತೆಗಳ ಬಗ್ಗೆ ಗಮನ ನೀಡಬೇಕು. ಅವರೂ ನಮ್ಮೊಂದಿಗೆ ನಡೆಯುವಂತಾಗಬೇಕು. ಆಗಲೇ ದೇಶದ ಪ್ರಗತಿಯಾಗಲು ಸಾಧ್ಯ’ ಎಂದುಕೊಳ್ಳುವುದುಂಟು. ಆದರೆ ಎಷ್ಟು ಜನರು ವಿದ್ಯಾಭ್ಯಾಸ ಮುಗಿಸಿದ ನಂತರ ಹಳ್ಳಿಗೆ ಹೋಗಲು ಇಷ್ಟಪಡುತ್ತಾರೆ?
ಆದರೆ ಛವಿ ರಾಜಾತ್ ಇವರೆಲ್ಲರಿಗಿಂತ ಪ್ರತ್ಯೇಕವಾಗಿದ್ದಾರೆ. ರಾಜಾಸ್ಥಾನದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ, ಟೋಂಕ್ ಜಿಲ್ಲೆಗೆ ಸೇರಿದ ಸೋಡಾಗಾಂವ್ ಜೈಪುರದಿಂದ ಸುಮಾರು 60 ಕಿ.ಮೀ. ದೂರದಲ್ಲಿದೆ. ಇಲ್ಲಿಯ ಸಾಕ್ಷರತಾ ಮಟ್ಟ ಸರಾಸರಿ 5.3% ಇದೆ. ಈ ಗ್ರಾಮದವರಾದ ಛವಿ ತಮ್ಮ ಊರನ್ನು ಅಭಿವೃದ್ಧಿಗೊಳಿಸಲು ಅಲ್ಲಿಗೆ ಹಿಂದಿರುಗಿದ್ದಾರೆ.
ಪುಣೆಯಲ್ಲಿ ಎಂ.ಬಿ.ಎ. ಮಾಡಿದ ನಂತರ ಛವಿ ಟೈಮ್ಸ್ ಆಫ್ ಇಂಡಿಯಾ ಕಾರ್ವ್ಸನ್ ಗ್ರೂಪ್ ಆಫ್ ಹೋಟೆಲ್ಸ್, ಏರ್‌ಟೆಲ್‌ನಂತಹ ಪ್ರಮುಖ ಕಂಪನಿಗಳಲ್ಲಿ ಉದ್ಯೋಗ ಮಾಡಿದರು. ಆದರೆ ಅವರಿಗೆ ಕೆಳಸ್ತರದಲ್ಲಿ ಬದಲಾವಣೆ ತರುವುದು ಅವಶ್ಯಕವೆಂದು ಭಾಸವಾಯಿತು. ಈ ಭಾವನೆಯಿಂದ ಅವರು ತಮ್ಮ ಹಳ್ಳಿಗೆ ಹಿಂದಿರುಗಿದ್ದಷ್ಟೇ ಅಲ್ಲ, ಅತ್ಯಂತ ಕಿರಿಯ ವಯಸ್ಸಿನ ಮಹಿಳಾ ಸರಪಂಚರೂ ಆಗಿ ಅದನ್ನೇ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು.
ಸೋಡಾಗಾಂವ್‌ನ ಜನರ ವಿದ್ಯಾಭ್ಯಾಸ, ಆರೋಗ್ಯ, ವಿದ್ಯುಚಕ್ತಿ ಹಾಗೂ ಇತರೆ ಮೂಲಭೂತ ಸೌಕರ್ಯಗಳಿಗಾಗಿ ಛವಿ ಕಾರ್ಯನಿರತರಾಗಿದ್ದಾರೆ. ಹಳ್ಳಿಯಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ಶ್ರಮಿಸಿದರು ಮತ್ತು 40ಕ್ಕೂ ಹೆಚ್ಚು ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ತಿಗೊಳಿಸಿದರು.
ಯುವಾ : ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ನೀಡುವುದಿಲ್ಲ. ಕ್ರೀಡಾ ಚಟುವಟಿಕೆಗಳಿಂದಲೂ ಸಂಪೂರ್ಣವಾಗಿ ದೂರವಿರಿಸಲಾಆಗುತ್ತದೆ.
ದೇಶದ ಹಿಂದುಳಿದ ರಾಜ್ಯಗಳಲ್ಲಿ ಒಂದಾದ ಜಾರ್ಖಂಡ್‌ನ ಸೀಮಾರ್ತಿ ವಿಭಾಗದಲ್ಲೂ ಇದೇ ಪರಿಸ್ಥಿತಿ ಇದ್ದಿತು. ಆದರೆ 2009ರಲ್ಲಿ ಸ್ಥಾಪಿತವಾದ `ಯುವಾ’ ಇಲ್ಲಿಯ ಜನರ ದೃಷ್ಟಿಕೋನದಲ್ಲಿ ಬದಲಾವಣೆ ತಂದಿದೆ. ಈ ಸಂಸ್ಥೆಗೆ ಚಾಲನೆ ನೀಡಿದವರು ಅದರ ಫೌಂಡರ್ ಡೈರೆಕ್ಟರ್ ಆದ ಕೋಚ್‌ಫ್ರೆಂರ್‌ಗೆಸ್ಟ್ಲರ್.
ಗ್ರಾಮೀಣ ವಿಭಾಗಗಳಲ್ಲಿ ಗರ್ಲ್ಸ್ ಸ್ಪೋರ್ಟ್ ಟೀಮ್ ನ್ನು `ಯುವಾ’ ವಿಕಾಸಗೊಳಿಸುತ್ತಿದೆ. `ಯುವಾ’ ಟೀಮ್ ಗೆ ಸೇರು ಹುಡುಗಿಯು ಅಲ್ಲಿನ ನಿಯಮಿತ ವಿದ್ಯಾರ್ಥಿಯಾಗುತ್ತಾಳೆ. ಕ್ರೀಡಾಳುಗಳ ಗುಂಪಿಗೆ ಒಬ್ಬಳು ಕ್ಯಾಪ್ಟನ್ ಚುನಾಯಿತಳಾಗಿದ್ದು, ಅವಳು ಹುಡುಗಿಯರ ವಿದ್ಯಾಭ್ಯಾಸ ಮತ್ತು ಆರೋಗ್ಯದ ಕಡೆ ಗಮನವಿರಿಸುತ್ತಾಳೆ. ಒಂದು ದಿನ ಒಬ್ಬ ಹುಡುಗಿ ಶಾಲೆಗೆ ಬರದಿದ್ದರೆ ಟೀಮಿನವರು ಅವಳ ಮನೆಗೆ ಹೋಗಿ ಕಾರಣ ಕೇಳುತ್ತಾರೆ. ಜೊತೆಗೆ ಒಟ್ಟಾಗಿ ಸಮಸ್ಯೆಗೆ ಸಮಾಧಾನ ಹುಡುಕುತ್ತಾರೆ.
ಇಷ್ಟೇ ಅಲ್ಲ, ಈ ಗ್ರೂಪ್‌ಗೆ ಸೇರಿದ ಹುಡುಗಿಯ ಮನೆಗೆ ಟೀಮ್ ಕ್ಯಾಪ್ಟನ್ ಮತ್ತು ಕೋಚ್ ಹೋಗಿ ಹುಡುಗಿಗೆ ಬೇಗನೆ ಮದುವೆ ಮಾಡುವ ಬದಲು ಕೆರಿಯರ್‌ನ ವಿವಿಧ ಆಪ್ಶನ್ಸ್ ಬಗೆಗೆ ಚರ್ಚಿಸುತ್ತಾರೆ. ಹುಡುಗಿ ತಾನೇ ತನ್ನ ಬದುಕಿನ ತೀರ್ಮಾನ ಕೈಗೊಳ್ಳಲು ಮತ್ತು ತನಗೆ ಇಷ್ಟವಾದಾಗ ಮದುವೆಯಾಗಲಿ ಎಂದು ಮನೆಯವರಿಗೆ ತಿಳಿ ಹೇಳುತ್ತಾರೆ.
ಒಬ್ಬ ಹುಡುಗಿ `ಯುವಾ ಫುಟ್ಬಾಲ್ ಟೀಮ್’ಗೆ ಸೇರಿದರೆ, ಅವಳು `ಯುವಾ ಅಕಾಡೆಮಿಕ್ ಬ್ರಿಜ್ ಪ್ರೋಗ್ರಾಂ’ಗೂ ಸೇರಿದಂತಾಗುತ್ತದೆ. ಇದರಿಂದ ಅವಳಿಗೆ ಕಂಪ್ಯೂಟರ್ ಕೋಚಿಂಗ್, ಪರ್ಸನಾಲಿಟಿ ಡೆವಲಪ್‌ಮೆಂಟ್ ಮುಂತಾದ ವರ್ಕ್‌ಶಾಪ್‌ಗಳ ಸೌಲಭ್ಯ ದೊರೆಯುತ್ತದೆ. ವಾರಕ್ಕೊಮ್ಮೆ ಹೆಲ್ತ್, ಜೆಂಡರ್ ಬೇಸ್ಡ್ , ಫೈನ್‌ನೆಸ್ ಮುಂತಾದವುಗಳ ಬಗ್ಗೆ 1 ಗಂಟೆ ಕಾಲದ ವರ್ಕ್‌ಶಾಪ್ ಇರುತ್ತದೆ.
`ಯುವಾ’ ಫುಟ್ಬಾಲ್ ಟೀಮ್ ಪಂದ್ಯಗಳಲ್ಲಿ ಗೆದ್ದು ಬಂದಾಗ, ಅದನ್ನು ನೋಡಿದ ಹಳ್ಳಿಯ ಇತರ ಜನರು ತಮ್ಮ ಹೆಣ್ಮುಮಕ್ಕಳನ್ನೂ ಫುಟ್ಬಾಲ್ ಆಡಲು ಕಳುಹಿಸಬೇಕೆಂದು ಬಯಸುತ್ತಾರೆ. ಹೀಗೆ `ಯುವಾ’ ಹೆಣ್ಣುಮಕ್ಕಳ ಜೀವನದಲ್ಲಿ ಹೊಸ ದಾರಿಯನ್ನು ತೆರೆಯುವ ಅವಕಾಶ ಕಲ್ಪಿಸುತ್ತಿದೆ.
`ಅಪ್ಪನ್’ ಸಮಾಚಾರ್ : ಬಿಹಾರದ ಮುಜಫ್ಛರ್‌ಪುರದಿಂದ ಸುಮಾರು 55 ಕಿ.ಮೀ. ದೂರದಲ್ಲಿರುವ ಒಂದು ಹಳ್ಳಿ. ಚಾಂದ್‌ಕೆರಿ, ಹಿಂದುಳಿದ ಈ ಹಳ್ಳಿಯಲ್ಲಿ ನಕ್ಸಲೀಯರ ಆತಂಕ ಇದ್ದು, ಇಲ್ಲಿನ ಹೆಣ್ಣುಮಕ್ಕಳು ಹೊಸಲಿನಿಂದಾಚೆ ಕಾಲಿರಿಸಿ ಶಾಲೆಗೇ ಹೋಗುವುದೇ ದುಸ್ತರವಾಗಿದೆ.
ಆದರೆ ಆಶ್ಚರ್ಯಕರ ವಿಷಯವೆಂದರೆ, 2007ರಲ್ಲಿ ಈ ಹಳ್ಳಿಯಲ್ಲಿ ಸಾಮಾಜಿಕ ಕಾರ್ಯಕರ್ತ ಮತ್ತು ಪತ್ರಕರ್ತರಾದ ಸಂತೋಷ್‌ಸಾರಂಗ್ `ಅಪ್ಪನ್ ಸಮಾಚಾರ್’ ಎಂಬ ಒಂದು ವಿಶಿಷ್ಟ ವುಮನ್ ಚಾನೆಲ್‌ನ್ನು ಪ್ರಾರಂಭಿಸಿದರು.
ಇದರ ಮೂಲಕ ಸಂತೋಷ್ ಹುಡುಗಿಯರನ್ನು ಮನೆಯಿಂದ ಹೊರಗೆ ತಂದು ಅವರ ಕೈಗಳಲ್ಲಿ ಕ್ಯಾಮರಾವನ್ನು ಹಿಡಿಸಿದರು. ಪ್ರಾರಂಭದಲ್ಲಿ 7 ಜನ ಹುಡುಗಿಯರಿದ್ದು, ಕ್ರಮೇಣ ಸಂಖ್ಯೆ ಹೆಚ್ಚಾಯಿತು. ಹುಡುಗಿಯರು ಕ್ಯಾಮೆರಾ, ಟ್ರೈಪಾಡ್, ಮೈಕ್ರೋಫೋನ್‌ನೊಂದಿಗೆ ಸಮಾಚಾರ ಸಂಗ್ರಹಿಸಲು ಸೈಕಲ್ ಹತ್ತಿ ಹೊರಟರೆ ಅಕ್ಕಪಕ್ಕದವರ ಟೀಕೆಗಳನ್ನು ಕೇಳಬೇಕಾಗುತ್ತಿತ್ತು. ಆದರೆ ಅವರು ಹೆದರಲಿಲ್ಲ. 14 ರಿಂದ 35 ವರ್ಷದ ಈ ಗ್ರಾಮೀಣ ಹೆಣ್ಣುಮಕ್ಕಳು ಸ್ಥಳೀಯ ಸಮಾಚಾರದ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಎಡಿಟಿಂಗ್, ಆ್ಯಂಕರಿಂಗ್ ಮಾಡಿ ಜನರಿಗೆ ವಿಷಯಗಳು ಮುಟ್ಟುವಂತೆ ಮಾಡುತ್ತಾರೆ.
ಸುಮಾರು 45-50 ನಿಮಿಷಗಳ ಈ ನ್ಯೂಸ್ ಬುಲೆಟ್‌ನಲ್ಲಿ ರೈತರ ಕಷ್ಟಗಳು, ಸಾಮಾಜಿಕ ಕೆಟ್ಟ ನಡವಳಿಕೆ, ಕಾನೂನು, ವಾತಾವರಣ, ಕಲ್ಯಾಣಕಾರಿ ಯೋಜನೆಗಳು, ಸರ್ಕಾರೀ ಯೋಜನೆಗಳು, ಮಹಿಳೆಯರ ವಿಚಾರಗಳು ಮುಂತಾದ ಸಮಾಚಾರವಿರುತ್ತದೆ.
ಹಳ್ಳಿಗರ ಕಷ್ಟ ತೊಂದರೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ದೊಡ್ಡ ಸಮಾಚಾರ ಚಾನೆಲ್‌ಗಳು ಮಾಡದಿದ್ದರೂ, ತಾವೇ ಸ್ವತಃ ಕೈಗೊಂಡಿರುವುದು ಇಲ್ಲಿನ ಹುಡುಗಿಯರಿಗೆ ಖುಷಿ ನೀಡಿದೆ. ಇಂದು ಇವರ ಈ ಕಾರ್ಯ ವೈಖರಿಯು ಇತರೆ ಗ್ರಾಮಗಳಿಗೂ ಹರಡಿದೆ.
`ಶೀರೋಸ್’ ಹ್ಯಾಂಗ್‌ಔಟ್ ಕೆಫೆ : ಮಹಿಳೆಯರ ಮೇಲೆ ಎಸಗುವ ಆ್ಯಸಿಡ್ ಅಟ್ಯಾಕ್ ಅಪರಾಧದಿಂದಾಗಿ ಅವರ ಮುಖ ಚಹರೆಯೇ ವಿಕಾರವಾಗುತ್ತದೆ. ತಡೆಯಲಾರದ ಶಾರೀರಿಕ ಹಿಂಸೆಯ ಜೊತೆಗೆ ಸಮಾಜದ ದೂರೀಕರಣ ನೀತಿಯು ಅವರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ.
2013ರಲ್ಲಿ ನ್ಯಾಯಾಲಯ ಈ ಅಪರಾಧವನ್ನು ಸೆಕ್ಷನ್ 326 ಮತ್ತು 326ಬಿ ಅಡಿಯಲ್ಲಿ ತಂದು, ಅಪರಾಧಿಗೆ 10 ವರ್ಷಗಳವರೆಗಿನ ಸಜೆಯನ್ನು ನೀಡಬಹುದೆಂಬ ಆಜ್ಞೆಯನ್ನು ಜಾರಿಗೊಳಿಸಿದೆಯಾದರೂ, ಕಾನೂನಿನ ತೊಡಕಿನಿಂದಾಗಿ, ಈಗಲೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಇದರಿಂದ ಪೀಡಿತರಾದ ಮಹಿಳೆಯರು ಜೀವನಪೂರ್ತಿ ಗೋಳಾಡುತ್ತಾ, ಹೊರಜಗತ್ತಿಗೆ ಮುಖ ತೋರಿಸಲಾರದೆ ನಾಲ್ಕು ಗೋಡೆಗಳ ಮಧ್ಯೆಯೇ ಉಳಿಯಬೇಕಾಗುತ್ತದೆ.
ನಿರ್ಭಯಾ ಕಾಂಡದ ನಂತರ ಮಹಿಳೆಯರಿಗೆ ನ್ಯಾಯ ದೊರಕಿಸುವ ಉದ್ದೇಶದಿಂದ `ಸ್ಟಾಪ್ ಆ್ಯಸಿಡ್ ಅಟ್ಯಾಕ್’ ಎಂಬ ಒಂದು ಕ್ಯಾಂಪೇನ್ ನಡೆಸಲಾಯಿತು. ಇದರ ಫಲವಾಗಿ ಡಿಸೆಂಬರ್ 2014ರಲ್ಲಿ `ಶೀರೋಸ್ ಗ್ಯಾಂಗ್ ಔಟ್’ ಎಂಬ ಹೆಸರಿನ ಒಂದು ಕೆಫೆಯನ್ನು ಪ್ರಾರಂಭಿಸಲಾಯಿತು. ಇದು ಸಂಪೂರ್ಣವಾಗಿ ಆ್ಯಸಿಡ್ ಅಟ್ಯಾಕ್ ಪೀಡಿತರಿಂದಲೇ ನಿಭಾಯಿಸಲ್ಪಡುತ್ತಿದೆ.
ಶೀರೋಸ್‌ನ ಅರ್ಥವೆಂದರೆ ಶೀ+ಹೀರೋಸ್. ಇಲ್ಲಿ ಆರ್ಡರ್ ತೆಗೆದುಕೊಳ್ಳುವುದರಿಂದ ಹಿಡಿದು ಮ್ಯಾನೇಜ್‌ಮೆಂಟ್. ಅಕೌಂಟ್ಸ್ ಎಲ್ಲವನ್ನೂ ಆ್ಯಸಿಡ್ ಅಟ್ಯಾಕ್ ಪೀಡಿತ ಮಹಿಳೆಯರೇ ನೋಡಿಕೊಳ್ಳುತ್ತಾರೆ. ಈ ಕೆಫೆಯು `ಪೇ ಆ್ಯಸ್ ಯು ವಿಶ್’ ಪಾಲಿಸಿಯ ಮೇರೆಗೆ ಕಾರ್ಯ ನಿರ್ವಹಿಸುತ್ತದೆ. ಕೆಫೆಯಿಂದ ದೊರೆಯುವ ಹಣದಿಂದ ಈ ಪೀಡಿತರ ವೈದ್ಯಕೀಯ ಮತ್ತು ಕಾನೂನಿಗೆ ಸಂಬಂಧಪಟ್ಟ ವೆಚ್ಚಗಳನ್ನು ಭರಿಸಲಾಗುತ್ತದೆ.
ಈ ಕೆಫೆಯಲ್ಲಿ ಲೈಬ್ರೆರಿ ಮತ್ತು ಬೊಟಿಕ್ ಕೂಡ ಇರುವುದಲ್ಲದೆ, ಈ ಮಹಿಳೆಯರೇ ತಯಾರಿಸಿದ ಆರ್ಟ್‌ಕ್ರಾಫ್ಟ್ ವಸ್ತುಗಳನ್ನು ಸಹ ಪ್ರದರ್ಶಿಸಲಾಗುತ್ತದೆ. ಕಾಫಿತಿಂಡಿಗಾಗಿ ಇಲ್ಲಿಗೆ ಬರುವ ಜನರಿಗೆ ಇಲ್ಲಿ ಬೇರೊಂದು ಬಗೆಯ ಅನುಭವವಾಗುತ್ತದೆ. ಅವರು ಈ ಮಹಿಳೆಯರ ಕಥೆಗಳಿಂದ ಪ್ರೇರೇಪಿತರಾಗುತ್ತಾರೆ. ಶೀರೋಸ್‌ನ ಕೋಫೌಂಡರ್ ಆದ ಆಶಿಶ್ ಶುಕ್ಲಾ ಹೇಳುತ್ತಾರೆ, “ಮುಖವೆಲ್ಲ ಸುಟ್ಟು ಕುರೂಪ ಹೊಂದಿರುವ ಮಹಿಳೆಯರು ಪುನಃ ಸಮಾಜದಲ್ಲಿ ಒಂದಾಗುವುದು ಕಷ್ಟದ ಕೆಲಸ, ಅದರಲ್ಲೂ ಸೌಂದರ್ಯವೇ ಹುಡುಗಿಯ ರೂಪಕ್ಕೆ ಒಂದು ಅಳತೆಗೋಲು ಎನ್ನುವ ಸಮಾಜದಲ್ಲಿ ಅದು ಮತ್ತಷ್ಟು ಕಷ್ಟವಾಗುತ್ತದೆ.
“ಇಂತಹ ಮನಃಸ್ಥಿತಿಯಲ್ಲಿ ಡಿಪ್ರೆಶನ್‌ಗೆ ಒಳಗಾಗುವ ಈ ಮಹಿಳೆಯರು ಹೊಸತಾಗಿ ಜೀವನವನ್ನು ಪ್ರಾರಂಭಿಸುವ ಆಯ್ಕೆ ಮಾಡಿಕೊಂಡಿದ್ದಾರೆ. ಶೀರೋಸ್‌ನಲ್ಲಿ ಕೆಲಸ ಮಾಡುತ್ತಾ ಇವರ ಜೀವನ ಬದಲಾಗಿದೆ. ಸದ್ಯದಲ್ಲಿ ಆಗ್ರಾದಲ್ಲಲ್ಲದೆ, ಲಖನೌ ಮತ್ತು ಉದಯಪುರದಲ್ಲೂ ಶೀರೋಸ್ ಹ್ಯಾಂಗ್ ಔಟ್ ಪ್ರಾರಂಭಾಗಿವೆ. ಒಟ್ಟು 18 ಹುಡುಗಿಯರು ನಮ್ಮಲ್ಲಿದ್ದಾರೆ. ಮುಂದೆ ದಕ್ಷಿಣ ಭಾರತದಲ್ಲೂ ಇದು ಹೆಚ್ಚಲಿದೆ.”
ಅಪರಾಧಿಗಳು ಈ ಹೆಣ್ಣುಮಕ್ಕಳ ಗುರುತಿನ ಮೇಲೆ ದಾಳಿ ಮಾಡಿದ್ದಾರೆ. ಆದರೀಗ ಅದೇ ಇವರ ಗುರುತಿನ ಸಾಧನವಾಗಿದೆ. ಇವರಲ್ಲಿ ಆತ್ಮವಿಶ್ವಾಸ ಉಂಟಾಗಿದೆ. ಈ ಹುಡುಗಿಯರು ಈಗ ಅಸಹಾಯಕರಾಗಿರದೆ ತಮ್ಮ ಮನೆಗೆ ಬೆಂಬಲವಾಗಿ ನಿಂತಿದ್ದಾರೆ. ಇವರ ಔಟ್‌ಲುಕ್ ಸಂಪೂರ್ಣವಾಗಿ ಬದಲಾಗಿದೆ.
– ಗಿರಿಜಾ ಶಂಕರ್
ಜೀವನದಲ್ಲಿ ಒಮ್ಮೊಮ್ಮೆ ನಮಗೆ ಎದುರಾಗುವ ಪರಿಸ್ಥಿತಿಗಳನ್ನು ಬದಲಾವಣೆ ಮಾಡಲು ನಾವು ಬಯಸುತ್ತೇವೆ. ಆದರೆ ಅದು ಸುಲಭವಲ್ಲ. ಸುಮ್ಮನೆ ಕಾಲನ್ನು ದೂಷಿಸುತ್ತಾ ಅಥವಾ ಬೇಸರಪಟ್ಟುಕೊಳ್ಳುತ್ತಾ ಕುಳಿತಿರುವ ಬದಲು ನಾವು ಇಂತಹ ಬದಲಾವಣೆಗೆ ಕೈಜೋಡಿಸುವುದು ಒಳ್ಳೆಯದು.
ಮಹಿಳೆಯರ ಮೇಲೆ ಎಸಗುವ ಆ್ಯಸಿಡ್ ಅಟ್ಯಾಕ್ ಅಪರಾಧದಿಂದಾಗಿ ಅವರ ಮುಖ ಚಹರೆಯೇ ವಿಕಾರವಾಗುತ್ತದೆ. ತಡೆಯಲಾರದ ಶಾರೀರಿಕ ಹಿಂಸೆಯ ಜೊತೆಗೆ ಸಮಾಜದ ದೂರೀಕರಣ ನೀತಿಯು ಅವರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ.