ಹುಟ್ಟಿದಾಗಿನಿಂದ ಹಿಡಿದು ಸಾಯುವ ತನಕ ಪೂಜಾರಿ ಪುರೋಹಿತರು, ಧರ್ಮದ ಏಜೆಂಟರು ಅದೆಷ್ಟು ಸಲ ಮನುಷ್ಯನೊಬ್ಬನಿಗೆ ಸ್ವರ್ಗ ನರಕದ ದಾರಿ ತೋರಿಸುತ್ತಾರೊ, ಏನೋ! ಹೀಗೆ ಮಾಡುವುದರಿಂದ ಸ್ವರ್ಗಕ್ಕೆ ಹೋಗುವಿರಿ, ಹಾಗೆ ಮಾಡುವುದರಿಂದ ನರಕಕ್ಕೆ ಹೋಗುತ್ತೀರಿ ಎಂದು ಅವರು ಆಗಾಗ ಭಕ್ತರಿಗೆ ಹೇಳುತ್ತಲೇ ಇರುತ್ತಾರೆ. ಜನರನ್ನು ಈ ರೀತಿ ಭ್ರಮೆಯಲ್ಲಿ ತಳ್ಳುವ ಅವರಿಗೆ ಸ್ವತಃ ತಾವು ಸ್ವರ್ಗಕ್ಕೆ ಹೋಗುತ್ತೇವೋ, ನರಕಕ್ಕೆ ಹೋಗುತ್ತೇವೋ ಎಂಬುದೇ ಗೊತ್ತಿರುವುದಿಲ್ಲ.

ಈಗ ಮೂಢನಂಬಿಕೆಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿವೆ. ಇಂದು ಯಾವ ಮಿಥ್ಯ ಪರಂಪರಾಗತ ರೀತಿ ರಿವಾಜುಗಳು ಅವಶ್ಯಕತೆಗೆ ಅನುಕೂಲಕರ ಆಗಿಲ್ಲ, ಅವನ್ನು ಕೂಡ ಪರಂಪರಾಗತ ರೀತಿಯಲ್ಲಿ ಹೆಚ್ಚಿಸುವ ಪ್ರಯತ್ನಗಳು ನಡೆದಿವೆ.

ಹುಡುಗಿಯರು ಬೆಳೆಯುತ್ತ ಹೋದಂತೆ ಹಿರಿಯರು ಅವರಿಗೆ ಕೆಲವೊಂದು ಮಾತುಗಳನ್ನು ಹೇಳುತ್ತಿರುವುದು ಕಂಡುಬರುತ್ತದೆ, “ನೀನು ಆಯಾ ತಿಂಗಳ ಅಥವಾ ವರ್ಷದ ಇಂತಿಂಥ ದಿನ ಈ ವ್ರತ ಮಾಡು, ನಿನಗೆ ಒಪ್ಪುವಂಥ ಗಂಡ ಸಿಗುತ್ತಾನೆ.” ಒಂದು ವೇಳೆ ಹಾಗೇನಾದರೂ ಆಗಿದ್ದರೆ ಇಂದು ಪ್ರತಿಯೊಬ್ಬ ಯುವತಿಯೂ ತನಗೆ ಅನುರೂಪನಾದ ಗಂಡನನ್ನೇ ಪಡೆದಿರುತ್ತಿದ್ದಳು. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮೂಢನಂಬಿಕೆಗಳ ಪ್ರಮಾಣ ಹೆಚ್ಚು. ಇದರಲ್ಲಿ ವೈಜ್ಞಾನಿಕ ದೃಷ್ಟಿಕೋನದ ಕೊರತೆ ಭಾಸವಾಗುತ್ತದೆ. ಹೀಗಾಗಿ ನಾವೆಲ್ಲರೂ ವೈಜ್ಞಾನಿಕ ದೃಷ್ಟಿಕೋನ ಹೊಂದಿರುವವರಾಗಿರುವುದು ಅತ್ಯವಶ್ಯ.

ಒಂದು ವೇಳೆ ನಾವು ದೈನಂದಿನ ಜೀವನದಲ್ಲಿ ವೈಜ್ಞಾನಿಕ ದೃಷ್ಟಿಕೋನ ಅಳವಡಿಸಿಕೊಂಡರೆ ವೈಯಕ್ತಿಕ ಘಟನೆಗಳು ಮತ್ತು ಸಾಮಾಜಿಕ ಘಟನೆಗಳಲ್ಲಿ  ತರ್ಕ ಸಂಗತಿ ಕಾರಣಗಳನ್ನು ಅರಿಯಲು ಸಾಧ್ಯವಾಗುತ್ತದೆ. ಅದರಿಂದ ಅಸುರಕ್ಷತೆಯ ಭಾವನೆ ಮತ್ತು ನಿರರ್ಥಕ ಭಯದಿಂದ ಮುಕ್ತಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಶುಭ ಶಕುನ ಅಪಶಕುನಗಳ ನಂಬಿಕೆ

ನಮ್ಮ ಸಮಾಜದಲ್ಲಿ ಮೂಢನಂಬಿಕೆಗೆ ಮಾನ್ಯತೆ ಕೊಡುವ ಕಥೆಗಳಿಂದ ಹಿಡಿದು ಶುಭ ಶಕುನ ಅಪಶಕುನಗಳ ಅಸಂಖ್ಯಾತ ಮಾನ್ಯತೆಗಳು ಕಾಗೆಗಳಿಗೆ ಸಂಬಂಧಪಟ್ಟಂತೆ ಇವೆ. ಅಂದಹಾಗೆ ಭಾರತೀಯ ಸಮಾಜದಲ್ಲಿ ಕಾಗೆಯನ್ನು ಧೂರ್ತ ಪಕ್ಷಿ ಎಂದು ಹೇಳಲಾಗುತ್ತದೆ. ಆದರೆ ಶ್ರಾದ್ಧದ ಸಂದರ್ಭದಲ್ಲಿ ಅದರ ಆಗಮನದ ನಿರೀಕ್ಷೆ ಮಾಡಲಾಗುತ್ತದೆ. ಅದು ಬರದೇ ಇದ್ದರೆ ಸತ್ತ ವ್ಯಕ್ತಿಯ ಆಸೆಗಳು ಈಡೇರಿಲ್ಲ ಎಂದು ಭಾವಿಸಲಾಗುತ್ತದೆ.

ಕಾಗೆಯೊಂದು ಮನೆ ಮುಂದೆ ಬಂದು ಕುಳಿತು ಕೂಗುತ್ತಿದ್ದರೆ, ಮನೆಗೆ ಯಾರೋ ಅತಿಥಿಗಳು ಬರಲಿದ್ದಾರೆಂಬ ಸೂಚನೆ ಎಂದು ಹೇಳಲಾಗುತ್ತದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಯಾರು ತಾನೇ ಆಕಸ್ಮಿಕ ಅತಿಥಿಗಳ ಆಗಮನವನ್ನು ಇಷ್ಟಪಡುತ್ತಾರೆ? ಮೂಢನಂಬಿಕೆಯ ವಿರೋಧಿ ಎಂದೇ ಹೇಳಲಾಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದೊಂದು ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವರ ಕಾರಿನ ಮೇಲೆ ಕಾಗೆ ಕುಳಿತದ್ದು ಅವರಿಗೆ ಶುಭವಾಗಿ ಪರಿಣಮಿಸಿತು. ಅವರಿಗೆ ಅದಕ್ಕೂ ದುಬಾರಿ ಕಾರು ಬಂತು!

ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ನಾವು ಮಂಗಳ ಲೋಕಕ್ಕೆ, ಚಂದ್ರನ ಅಂಗಳಕ್ಕೆ ಹೋಗುವ ಬಗ್ಗೆ ಯೋಚಿಸುತ್ತಿದ್ದೇವೆ. ಆದರೆ ಮೂಢನಂಬಿಕೆಗಳು ಮಾತ್ರ ನಮ್ಮ ಬೆನ್ನುಬಿಡುವ ಲಕ್ಷಣ ಕಂಡುಬರುತ್ತಿಲ್ಲ. ವೈಜ್ಞಾನಿಕ ಯುಗದ ಹೆಚ್ಚುತ್ತಿರುವ ಪ್ರಭಾವದ ಹೊರತಾಗಿ ಮೂಢನಂಬಿಕೆಯ ಹೊಸ ಹೊಸ ಬೇರುಗಳು ನಮ್ಮ ಮನಸ್ಸಿನಲ್ಲಿ ಇಳಿಯುತ್ತಲೇ ಹೊರಟಿವೆ. ಮೂಢನಂಬಿಕೆಗಳನ್ನು ಅಳಿಸಿ ಹಾಕಲು ಹಲವು ಜನರು ವರ್ಷಾನುವರ್ಷಗಳಿಂದ ಎಡಬಿಡದೆ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಸಿಗುವುದಾದರೂ ಹೇಗೆ? ಇಲ್ಲಿ ಎಲ್ಲರೂ ಅವಕಾಶಾದಿಗಳು. ನಮ್ಮ ಅಂಗಳದಲ್ಲಿ ಚೆಂಡು ಬರುತ್ತಿದ್ದಂತೆಯೇ ಅದನ್ನು ಇನ್ನೊಬ್ಬರ ಅಂಗಳಕ್ಕೆ ಒದೆಯುವುದೇ ಕೆಲಸ.

ಸರ್ಕಾರಗಳು ಈ ಕುರಿತಂತೆ ಕಣ್ಮುಚ್ಚಿ ಕುಳಿತಿವೆ. ಮಾಧ್ಯಮಗಳು ಮೂಢನಂಬಿಕೆಗಳನ್ನೇ ಅತಿರಂಜಿತವಾಗಿ ತೋರಿಸಿಕೊಂಡು ಜನರಲ್ಲಿ ಅವನ್ನು ಇನ್ನೂ ಹಾಸುಹೊಕ್ಕಾಗಿ ಬೇರೂರುವಂತೆ ಮಾಡುತ್ತಿವೆ. ಮೂಢನಂಬಿಕೆಗಳನ್ನು ಪಸರಿಸಲು ಬಹುದೊಡ್ಡ ಜಾಲ ಇಂಟರ್‌ನೆಟ್‌ನಲ್ಲಿ ಸಕ್ರಿಯವಾಗಿದೆ. ಜನರು ವೈದ್ಯರಿಗಿಂತ ಹೆಚ್ಚಾಗಿ ಮಂತ್ರವಾದಿಗಳ ಮೇಲೆ ಹೆಚ್ಚು ನಂಬಿಕೆ ಇಡುತ್ತಾರೆ. ಈ ಬಹುರೂಪಿಗಳಿಗೆ ಬಲಿಯಾಗುತ್ತಿರುವವರಲ್ಲಿ ಹೆಚ್ಚಿನವರು ಮಹಿಳೆಯರೇ ಎನ್ನುವುದೊಂದು ವಿಶೇಷ. ತಂತ್ರಮಂತ್ರವನ್ನು ವಿಜ್ಞಾನ ನಂಬುವುದಿಲ್ಲ. ಆದರೆ ಅದೇ ವಿಜ್ಞಾನದ ಸಹಾಯದಿಂದ ತಂತ್ರಮಂತ್ರಗಳ ಜಾಲ ಮತ್ತಷ್ಟು ಹೆಚ್ಚುತ್ತಿರುವುದು ನಿಜಕ್ಕೂ ವಿಡಂಬನೆಯ ಸಂಗತಿಯಾಗಿದೆ. ಜನರ ಮಹತ್ವಾಕಾಂಕ್ಷೆಗಳು ಹೆಚ್ಚುತ್ತಾ ಹೊರಟಿವೆ. ಅದೇ ರೀತಿ ಬೂಟಾಟಿಕೆಯವರ ಜಾಲ ಕೂಡ ವಿಸ್ತರಣೆಯಾಗುತ್ತಿದೆ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಫೋನ್‌ಗಳಿವೆ. ಇಂಟರ್‌ನೆಟ್‌ ಸೌಕರ್ಯವಿದೆ. ಅದರ ಮುಖಾಂತರವೇ ಮೂಢನಂಬಿಕೆ ಹೆಚ್ಚೆಚ್ಚು ಪ್ರಸಾರ ಆಗುತ್ತಿದೆ.

ತಪ್ಪು ಪರಂಪರೆ

ಈಗ ಪರಿಸ್ಥಿತಿ ಹೇಗಿದೆ ಎಂದರೆ, ನೀವು ಎಲ್ಲಿಯೇ ಪ್ರವಾಸಕ್ಕೆ ಹೋಗಿ ಅಥವಾ ಮಾರುಕಟ್ಟೆಯ ಮುಖಾಂತರ ಹಾದು ಹೋಗುತ್ತಿದ್ದರೆ ಒಂದೇ ಕ್ಲಿಕ್‌ನಲ್ಲಿ ಜೀವನವನ್ನು ಖುಷಿಯಿಂದ ತುಂಬಿಸುವ ಜಾಹೀರಾತುಗಳು ಕಂಡುಬರುತ್ತವೆ. ಮೂಢನಂಬಿಕೆ ಎನ್ನುವುದು ಜನರ ಶೋಷಣೆಗೆ, ಅವರ ಹತ್ಯೆಗೂ ಕೂಡ ಕಾರಣವಾಗುತ್ತಿದೆ. ಇದರ ಆರಂಭವಾಗುವುದು ಮಂತ್ರವಾದಿಗಳ ತಪ್ಪು ಸಲಹೆಯಿಂದ. ಅದನ್ನೇ ಅನುಸರಿಸುವ ನಿರ್ಧಾರವನ್ನೇನಾದರೂ ಮಾಡಿದರೆ ಮುಂದೆ ಹಲವು ಬಗೆಯ ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ಹಲವು ಕಡೆಯ ತಪ್ಪು ಪರಂಪರೆಗಳು ಬೆಂಕಿಯಲ್ಲಿ ತುಪ್ಪ ಸುರಿಯುವ ಕೆಲಸ ಮಾಡುತ್ತವೆ.

ಮೂಢನಂಬಿಕೆಗೆ ಸಂಬಂಧಪಟ್ಟ ಘಟನೆಗಳ ಬಗ್ಗೆ ಜಗಜ್ಜಾಹೀರು ಮಾಡಿದಾಗ ಎಲ್ಲರೂ ಅದರ ಬಗ್ಗೆ ದುಃಖ ವ್ಯಕ್ತಪಡಿಸುತ್ತಾರೆ. ಅದೇ ಮೂಢನಂಬಿಕೆಯೊಂದರ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ, ತಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಾರೆ. `ನಮಗೇನೂ ಗೊತ್ತಿಲ್ಲ’ ಎಂಬ ಧೋರಣೆಯೊಂದಿಗೆ ಜನರು ಜೀವನವಿಡೀ ಮುಂದೆ ಸಾಗುತ್ತಿರುತ್ತಾರೆ. ನಮ್ಮ ದೃಷ್ಟಿಕೋನ, ನಮ್ಮ ಯೋಚನೆ ಮೊದಲೇ ನಿರ್ಧಾರವಾಗಿರುತ್ತದೆ ಮತ್ತು ಈ ಮೂಢನಂಬಿಕೆಯ ಬೇರುಗಳು ಮಹಿಳೆಯರಲ್ಲಿಯೇ ಹೆಚ್ಚು ಆಳವಾಗಿ ಬೇರೂರಿರುತ್ತವೆ. ಪುರುಷರು ಕೂಡ ಇದಕ್ಕೆ ಹೊರತಾಗಿಲ್ಲ. ಈ ಕುರಿತಂತೆ ಕೆಲವು ಮಹಿಳೆಯರು ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಏಕೆಂದರೆ ಅವರಿಗೆ ಇನ್ನೊಬ್ಬರತ್ತ ಬೆರಳು ಮಾಡಿ ತೋರಿಸುವುದು ಸರಿ ಎನಿಸುವುದಿಲ್ಲ.

ಕೆಲವು ಮಹಿಳೆಯರು ಅವಕಾಶ ದೊರೆಯುತ್ತಿದ್ದಂತೆ, ಆಸ್ಥೆ ಅಥವಾ ನಂಬಿಕೆಯ ಬಗ್ಗೆ ತರ್ಕ ಮಾಡುವುದು ಜಗತ್ತಿನ ಭಾರಿ ದೊಡ್ಡ ಮೂರ್ಖತನ ಎನ್ನುತ್ತಾರೆ.

ಕೆಲವು ಮಹಿಳೆಯರ ತಲೆಯಲ್ಲಿ ಏನು ಓಡುತ್ತಿರುತ್ತದೆ ಎಂಬುದನ್ನು ಕಂಡುಹಿಡಿಯುವುದು ಕಷ್ಟ. ಹೀಗಾಗಿ ಅವರು ಆಗಾಗ ಗೊಂದಲಕ್ಕೊಳಗಾಗಿ ಹೇಳುತ್ತಿರುತ್ತಾರೆ, “ವಿಜ್ಞಾನದ ಮುಖಾಂತರ ಪರಂಪರಾಗತ ಯೋಚನೆ ಮುಂದುವರಿಸುವುದನ್ನು ತಡೆಯುತ್ತಿರುವುದು ಸಂತೋಷದ ವಿಚಾರ,” ಎನ್ನುತ್ತಾರೆ.

ಧರ್ಮದ ದಂಧೆ

ಬಹಳಷ್ಟು ಮಹಿಳೆಯರು ಧರ್ಮದ ವಿಷಯದ ಬಗ್ಗೆ ಮೌನವಾಗಿರುವುದು ಅಥವಾ ಯಾವುದೇ ಟಿಪ್ಪಣಿ ಮಾಡದೇ ಇರುವುದನ್ನು ಒಳ್ಳೆಯದು ಎಂದು ಭಾವಿಸುತ್ತಾರೆ. ಮಹಿಳೆಯರ ಸ್ಥಿತಿಗತಿಯ ಬಗ್ಗೆ ಚಿಂತೆ ವ್ಯಕ್ತಪಡಿಸುತ್ತಿರಬಹುದು ಅಥವಾ ಅವರ ಕುರಿತಂತೆ ಕಥೆಕವನ ಬರೆಯುತ್ತಿರಬಹುದು, ಏನೇ ಆದರೂ ತಮ್ಮ ಸ್ಥಿತಿಯ ಬಗ್ಗೆ ಅವರಿಗೆ ಆತಂಕ ಇರುವುದಿಲ್ಲ.

ಮಹಿಳೆಯರು ಒಂದು ಸಂಗತಿಯನ್ನು ಅರಿತುಕೊಳ್ಳುವಲ್ಲಿ ಅಸಮರ್ಥರಾಗಿದ್ದಾರೆ. ಅದೇನೆಂದರೆ, ಮೂಢನಂಬಿಕೆ ತಮ್ಮನ್ನು ಅನೇಕ ರೀತಿಯಲ್ಲಿ ಬಂಧಿಸಿಡುತ್ತಿದೆ, ಮೂಢನಂಬಿಕೆಗಳ ವಿರುದ್ಧ ಹೋರಾಡದಿದ್ದರೆ ನಾವು ಜೀವನ ಪಯಣದಲ್ಲಿ ಯಶಸ್ಸು ಕಾಣುವುದಿಲ್ಲ ಎಂಬುದನ್ನು ಅವರು ಒಪ್ಪುವುದಿಲ್ಲ. ಅಂದಹಾಗೆ ಮಹಿಳೆಯರಲ್ಲಿ ಮೂಢನಂಬಿಕೆಗಳ ವಿರುದ್ಧ ಹೋರಾಡುವ ಉತ್ಸಾಹವಾಗಲಿ, ಪ್ರೇರಣೆಯಾಗಲಿ ಇರುವುದಿಲ್ಲ. ಮಹಿಳೆಯರಲ್ಲಿ ಬಾಲ್ಯದಿಂದಲೇ ಧಾರ್ಮಿಕ ನಂಬಿಕೆಗಳನ್ನು ಬಿತ್ತಲಾಗುತ್ತದೆ. ಅವರು ಜೀವನದ ಇತರ ಉದ್ದೇಶಗಳಿಗಿಂತ ಮೂಢನಂಬಿಕೆಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ. ಅಂದಹಾಗೆ ಹೆಣ್ಣನ್ನು ಗುಲಾಮಗಿರಿಯಲ್ಲಿ ತಳ್ಳುವುದು ಧರ್ಮವೇ ಎನ್ನುವುದನ್ನು ಪ್ರಾಚೀನ ದಾಖಲೆಗಳೇ ಹೇಳುತ್ತವೆ. ಧರ್ಮದಿಂದ ಮುಕ್ತಿ ಸ್ತ್ರೀ ಮುಕ್ತಿಯ ಪೂರ್ವ ಪೀಠಿಕೆಯಾಗಿದೆ. ಧರ್ಮದಲ್ಲಿ ನಂಬಿಕೆ ಮತ್ತು ಮೂಢನಂಬಿಕೆ ಇವೆರಡರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಒಂದೆಡೆ ನಂಬಿಕೆಯ ಆಧಾರ ಒಮ್ಮುಖ ಶ್ರದ್ಧೆಯೇ ಆಗಿದೆ. ಅಲ್ಲಿ ಆ ವ್ಯಕ್ತಿ ಧರ್ಮದಲ್ಲಿ ಕುರುಡನೂ ಆಗಿಬಿಡಬಹುದು. ಧರ್ಮದ ದಂಧೆಕೋರರು ಅತ್ಯಂತ ಚಾಲಾಕಿತನದಿಂದ ಮಹಿಳೆಯರನ್ನು ಮೂಢನಂಬಿಕೆಯಲ್ಲಿ ಸಿಲುಕಿಸಿಬಿಟ್ಟಿದ್ದಾರೆ. ಏಕೆಂದರೆ ಕಾಲ ಕಾಲಕ್ಕೆ ಸಿಗಬೇಕಾದ ದಾನ ದಕ್ಷಿಣೆಗೆ ಯಾವುದೇ ಬರ ಉಂಟಾಗಬಾರದು ಎನ್ನುವುದು ಅವರ ತರ್ಕವಾಗಿರುತ್ತದೆ.

ಧಾರ್ಮಿಕ ಮೂಢನಂಬಿಕೆಗಳೇ ಮಹಿಳೆಯರ ಹಕ್ಕುಗಳ ದಾರಿಯಲ್ಲಿ ಬಹುದೊಡ್ಡ ಅಡ್ಡಿ ಆತಂಕಗಳಾಗಿವೆ. ಅವುಗಳೊಂದಿಗೆ ಹೋರಾಡದೇ ಮಹಿಳಾ ಸ್ವಾತಂತ್ರ್ಯ ಅಸಾಧ್ಯದ ಮಾತೇ ಹೌದು.

ನಾಯಿ, ಬೆಕ್ಕು, ಚಂದ್ರ, ಸೂರ್ಯರ ಕುರಿತಂತೆ ಅನೇಕ ಮೂಢನಂಬಿಕೆಗಳಿವೆ. ಇವು ಸಾಮಾನ್ಯ ಮೂಢನಂಬಿಕೆಗಳು, ಆದರೆ ಇನ್ನಷ್ಟು ಮೂಢನಂಬಿಕೆಗಳಿದ್ದು, ಅವುಗಳೊಂದಿಗೆ ನಾವೇ ಜೋಡಣೆಗೊಳ್ಳುತ್ತೇವೆ. ಅದರಿಂದಾಗಿ ನಾವು ಬಹಳಷ್ಟನ್ನು ಕಳೆದುಕೊಳ್ಳುತ್ತೇವೆ.

ಯೋಚನೆ ಬದಲಿಸಿಕೊಳ್ಳುವ ಅಗತ್ಯವಿದೆ

ಕೆಲವೊಂದು ಉದಾಹರಣೆಗಳನ್ನು ಗಮನಿಸಿ. ತರಕಾರಿ ಮಾರಾಟಗಾರ ನಿಮ್ಮನ್ನು ಸುಳ್ಳು ಸುಳ್ಳೇ ಹೊಗಳುತ್ತಾನೆ. “ಮೇಡಂ, ನೀವು ತರಕಾರಿ ಕೊಂಡರೆ ನಿಮಗೆ ನಿಜಕ್ಕೂ ಶುಭ. ಆ ದಿನ ನನಗೆ ಬಹಳ ವ್ಯಾಪಾರ ಆಗುತ್ತದೆ.”  ಅವನ ಮಾತಿನಿಂದ ಖುಷಿಗೊಂಡು ಪ್ರತಿದಿನ ಅವನಿಂದ ಖರೀದಿ ಮಾಡಲಾರಂಭಿಸುತ್ತೀರಿ. ಇಂತಿಂಥ ದಿನ ಇಂತಿಂಥ ಬಣ್ಣದ ಬಟ್ಟೆ ತೊಟ್ಟರೆ ಶುಭವಾಗುತ್ತದೆ ಎಂಬ ಭ್ರಮೆಯೂ ಅನೇಕರಲ್ಲಿರುತ್ತದೆ. ಗರ್ಭಾವಸ್ಥೆಯಲ್ಲಿ ಕೆಲವರು ಕಪ್ಪು ಬಟ್ಟೆ ತೊಟ್ಟರೆ ಹುಟ್ಟುವ ಮಗು ಕೂಡ ಕಪ್ಪಗೆ ಹುಟ್ಟುತ್ತದೆ ಎಂದು ಭಾವಿಸುತ್ತಾರೆ. ಇವೆಲ್ಲ ಮೂಢನಂಬಿಕೆಯ ಸಂಗತಿಗಳು. ಇವುಗಳಲ್ಲಿ ಯಾವುದೇ ಹುರುಳಿಲ್ಲ. ಆದರೆ ಇವು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತಲೇ ಇವೆ. ಮಹಿಳೆಯನ್ನು ಶೋಷಿಸುವ ಸಮಾಜ ಮಹಿಳೆಯಿಂದಲೇ ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ ಯೋಚನೆ ಬದಲಿಸಿಕೊಂಡರೆ ಸಮಾಜ ಬದಲಾಗುತ್ತದೆ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಹೀಗಾಗಲು ಸಾಧ್ಯವೇ? ಯಾರ ಮೇಲಾದರೂ ಏನಾದರೂ ಆಪಾದನೆ ಬಂದರೆ ಮುಖ ಮರೆಸಿಕೊಳ್ಳಲು ನೋಡುತ್ತಾರೆ.

ಭಾರತೀಯ ಮಹಿಳೆಯರು ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ಇಂತಹ ಎಲ್ಲ ನಂಬಿಕೆಗಳನ್ನು ಮುಕ್ತಕಂಠದಿಂದ ಸ್ವಾಗತಿಸುತ್ತಾರೆ. ಆದರೆ ಅವೆಲ್ಲ ತಮ್ಮ ವಿರುದ್ಧವೇ ಸೃಷ್ಟಿಸಿರುವ ಸಂಚು ಎಂದು ಮಾತ್ರ ಅವರಿಗೆ ಗೊತ್ತಿರುವುದಿಲ್ಲ. ಯಾವುದೇ ಒಬ್ಬ ರೋಗಿಗೆ ತನ್ನ ಚಿಕಿತ್ಸೆಯ ಬಗ್ಗೆ ಅದೆಷ್ಟು ಕಾಳಜಿ ಇರುತ್ತೋ, ಅಷ್ಟು ಕಾಳಜಿ ಬೇರೆಯವರಿಗೆ ಖಂಡಿತ ಇರುವುದಿಲ್ಲ. ಆದರೆ ಈ ಚಿಂತೆ ರೋಗ ನಿವಾರಣೆಗಾಗಿಯೋ ಅಥವಾ ರೋಗಿಗಾಗಿಯೋ?

ತಪ್ಪಿತಸ್ಥೆ ಕೇವಲ ಮಹಿಳೆಯೇ ಏಕೆ?

ಧರ್ಮ ಹೇಳಿರುವುದೇನು ಗೊತ್ತೆ? ಪತಿಯ ಚರಣಗಳನ್ನೇ ಸ್ವರ್ಗ ಎಂದು ಭಾವಿಸಬೇಕು. ಪತಿ ಆ ಸ್ವರ್ಗದ ದೇವತೆ. ಒಂದು ಆಶ್ಚರ್ಯದ ಸಂಗತಿಯೆಂದರೆ, ಪುರುಷನಿಗೆ ನಿಖರವಾಗಿ  ಯಾವುದೇ ಮಾನದಂಡಗಳಿಲ್ಲ. ಒಮ್ಮೆ ಪತ್ನಿಯ ಹೆಸರು, ಅದಾದ ಬಳಿಕ ತಾಯಿಯ ಹೆಸರಿನಲ್ಲಿ ಜೀವಿನವಿಡೀ ಸುರಕ್ಷಾ ಕವಚ ಹೊದ್ದುಕೊಂಡಿರುತ್ತದೆ. ಮದುವೆಗೂ ಮುಂಚೆ ಅವನ ದೀರ್ಘಾಯುಷ್ಯಕ್ಕಾಗಿ ಅಮ್ಮ ಪೂಜೆ ಪುನಸ್ಕಾರ ಮಾಡುತ್ತಿದ್ದಳು. ಮದುವೆಯ ಬಳಿಕ ಅದನ್ನು ಹೆಂಡತಿ ಮುಂದುವರಿಸುತ್ತಾಳೆ. ಇಂತಹದರಲ್ಲಿ ಅವನಿಗೆ ಏನಾದರೂ ಅನಾಹುತವಾದರೆ ಅದಕ್ಕೆ ಮಹಿಳೆಯನ್ನೇ ಹೊಣೆಯಾಗಿಸಲಾಗುತ್ತದೆ.

ಹೆಣ್ಣು ಭ್ರೂಣಹತ್ಯೆಯ ಆಪಾದನೆಯನ್ನು ಕೂಡ ಸ್ತ್ರೀಯ ತಲೆಗೆ ಕಟ್ಟಲಾಗುತ್ತದೆ. ಏಕೆಂದರೆ ಆಕೆಗೆ ಹುಟ್ಟುವ ಮಗು ಗಂಡೇ ಆಗಬೇಕಿರುತ್ತದೆ. ಮಹಿಳೆಗೆ ಮಗನೇ ಏಕೆ ಬೇಕು? ಅವಳೇಕೆ ತನ್ನ ಹೊಟ್ಟೆಯಲ್ಲಿರುವ ಹೆಣ್ಣನ್ನು ಹತ್ಯೆಗೈಯುವ ನೋವನ್ನು ಹೇಳಿಕೊಳ್ಳಲು ಆಗುವುದಿಲ್ಲ? ಹೆಣ್ಣು ಮಗುವಿಗೆ ಜನ್ಮ ನೀಡಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇನೆಂದು ಆಕೆ ಏಕೆ ಅರ್ಥ ಮಾಡಿಕೊಂಡಿದ್ದಾಳೆ? ಆಕೆಯ ಆದರ ಸನ್ಮಾನಗಳೆಲ್ಲ ಪುತ್ರನಿಗೆ ಜನ್ಮ ನೀಡುವುದರ ಮೇಲೆಯೇ ಅವಲಂಬಿಸಿವೆ. ಹೀಗಾಗಿ ಆಕೆ ಪುತ್ರನಿಗಾಗಿ ಹಂಬಲಿಸುತ್ತಾಳೆ.

ಇಲ್ಲಿ ಮಹಿಳೆಗೆ ಯಾವುದೇ ಹಕ್ಕುಗಳಿಲ್ಲ. ಜೀವನ ನಡೆಸುವಂತಹ ವ್ಯವಸ್ಥೆಯೂ ಇಲ್ಲ, ಸುರಕ್ಷತೆಯಂತೂ ಇಲ್ಲವೇ ಇಲ್ಲ. ಮಾಧ್ಯಮದಲ್ಲಿ, ಸೇನೆಯಲ್ಲಿ, ಬ್ಯಾಂಕ್‌ನಲ್ಲಿ, ಬಿಸ್‌ನೆಸ್‌ನಲ್ಲಿ ಹುಡುಗಿಯರ ಬಾಹ್ಯ ಜೀವನವೇನೋ ಬದಲಾಗಿದೆ. ಆದರೆ ಅವರ ಗೃಹ ಸಂಘರ್ಷ ಮಾತ್ರ ಬದಲಾಗಿಲ್ಲ. ಇದಕ್ಕೆ ಕಾರಣ ಧರ್ಮ. ಈ ಸಂಘರ್ಷ ಧರ್ಮದ ದೇಣಿಗೆ. ತನ್ನ ಕೈಗಳಿಗೆ ಹಾಕಿರುವ ಮೂಢನಂಬಿಕೆಯ ಕೈಕೋಳವನ್ನು ಕಿತ್ತು ಬಿಸಾಡುವ ತಾಕತ್ತು ಅವಳಿಗೆ ಇಲ್ಲ.

ಹೇಗೆ ಹೊರಬರುವುದು?

ಮನೆಯಿಂದ ಹೊರಗೆ, ಕ್ಲಬ್‌ನಿಂದ ಬೆಡ್‌ರೂಮ್ ತನಕ ಎಲ್ಲೆಲ್ಲೂ ನಗುನಗುತ್ತಾ ಪರಿಸ್ಥಿತಿ ಸಂಭಾಳಿಸುವವಳು ನಿಜವಾದ ಸೂಪರ್‌ವುಮನ್‌. ಆಕೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾಳೆ. ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುತ್ತಾಳೆ. ಅವಳು ನೈಟ್‌ಕ್ಲಬ್‌ಗೆ ಹೋಗಬಹುದು, ಆದರೆ ತನ್ನ ಮಂಗಳಸೂತ್ರ, ಭೀಮನ ಅಮಾವಾಸ್ಯೆಯಿಂದ ಹಿಂದೆ ಸರಿಯಳು.

ಈ ಸಮಾಜವೆಂಬ ರೈಲುಗಾಡಿಯ ಪ್ರತಿ ಬೋಗಿಯಲ್ಲೂ ಸಮಾಜ ಮಾನ್ಯತೆ ನೀಡಿದ್ದೆಲ್ಲ ಮಾರಾಟಾಗುತ್ತಿದೆ. ಅಲ್ಲಿನ ಪ್ರಯಾಣಿಕರಿಗೆ ಸ್ವಾತಂತ್ರ್ಯವೇನೋ ಇದೆ, ಆದರೆ ತಮ್ಮ ತಮ್ಮ ಬೋಗಿಯೊಳಗೆ ಅಲ್ಲಿಂದ ಕುಳಿತು ಆಕಾಶವನ್ನೇನೋ ನೋಡಬಹುದು. ಆದರೆ ಅದರ ಪರಿಪೂರ್ಣ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಆಗುವುದಿಲ್ಲ. ಧರ್ಮ ಹಾಗೂ ಧರ್ಮದ ನಂಬಿಕೆಗಳು ಬೇರುಗಳು ನಮ್ಮ ಜೀವನದಲ್ಲಿ ಆಳವಾಗುತ್ತ ಸಾಗಿವೆ. ಧರ್ಮದ ಗುತ್ತಿಗೆದಾರರು ಮಹಿಳೆಯನ್ನು ತಮ್ಮ ಕಪಿಮುಷ್ಟಿಯಲ್ಲಿ ಸಿಲುಕಿಸಿದ್ದಾರೆ. ಸ್ತ್ರೀಯರು ತಮ್ಮ ಸ್ವಾತಂತ್ರ್ಯಕ್ಕಾಗಿ, ಪ್ರಗತಿಗಾಗಿ, ಧರ್ಮದ ಸಂಕೋಲೆಯನ್ನು ಕಿತ್ತೊಗೆಯಬೇಕು.

Tags:
COMMENT