ಜೀವನದಲ್ಲೊಮ್ಮೆ ಸಿಮ್ಲಾಗೆ ಹೋಗಲೇ ಬೇಕೆನ್ನುವುದು ನನ್ನವರ ವಾದ. ಮಿಕ್ಕೆಲ್ಲಾ ಗಿರಿಧಾಮಗಳಿಗಿಂತಾ ಅವರ ದೃಷ್ಟಿಯಲ್ಲಿ  ಸಿಮ್ಲಾ ವಿಭಿನ್ನವಾದುದು. ಆದ್ದರಿಂದ ಈ ಬಾರಿ ದೆಹಲಿಗೆ ಹೋದಾಗ ಸಿಮ್ಲಾಗೆ ಹೋಗುವುದೆನ್ನುವ ನಿರ್ಧಾರವಾಯಿತು. ದೆಹಲಿಯಿಂದ ರಸ್ತೆ, ರೈಲು ಮತ್ತು ವಿಮಾನದಿಂದ ಹೋಗಬಹುದು. ಆದರೆ ಸಾಮಾನ್ಯವಾಗಿ ಎಲ್ಲರೂ ಹೋಗುವುದು ರೈಲಿನಲ್ಲಿಯೇ. ಹಾಗಾಗಿ ನಾವು ಸಹ ಹಾಗೆಯೇ ಮಾಡಿದೆವು. ದೆಹಲಿಯಿಂದ ಕಾಲ್ಕಾಗೆ ಶತಾಬ್ದಿಯಲ್ಲಿ, ನಂತರ ಅಲ್ಲಿಂದ ಟಾಯ್‌ಟ್ರೈನ್‌ನಲ್ಲಿ ಸಿಮ್ಲಾಗೆ ಪಯಣ, ಟಾಯ್‌ ಟ್ರೈನ್‌ನಲ್ಲಿ ಹೋಗುವಾಗ ಅದು ಸುತ್ತಿ ಸುತ್ತಿ ಮೇಲೇರುತ್ತಿದ್ದಂತೆ ಉದ್ದಕ್ಕೂ ಸಾಲು ಸಾಲಾಗಿ ಬೆಳೆದ ದೇವದಾರು ವೃಕ್ಷಗಳು, ಹಸಿರು ಕಣಿವೆಗಳ ದರ್ಶನವಾಗುತ್ತಿತ್ತು. ದಟ್ಟವಾದ ಹಸಿರನ್ನು ನೋಡಲು ಕಣ್ಣಿಗೆ ತಂಪೆನಿಸಿತು, ಮಧ್ಯೆ ಮಧ್ಯೆ ಸುರಂಗಗಳ ಒಳಗೆ ನುಸುಳುವಾಗ ಅವರು ವಿದ್ಯುತ್‌ ದೀಪನ್ನು ಆರಿಸಿ ಜೋರಾಗಿ ಕೂಗುತ್ತಿದ್ದರು. ಉತ್ತರ ಭಾರತದವರು ಜೀವನವನ್ನು ಅನುಭವಿಸುವ ರೀತಿಯೇ ಚಂದ. ನೃತ್ಯ, ಹಾಡು ಮತ್ತು ನಗೆಚಾಟಿಕೆ ಅವರ ಸ್ವಭಾವಕ್ಕಂಟಿದ್ದು, ಕೆಲವಂತೂ ಬಹು ಉದ್ದದ ಸುರಂಗಗಳು, ಹಸಿರು ಸವಿಯುತ್ತಾ ಮಧ್ಯೆ ಮಧ್ಯೆ ಇಳಿಯುತ್ತಾ ಐದು ಗಂಟೆಗಳ ಪ್ರಯಾಣ ಮೊದಲಿಗೆ ಹಿತಿವೆನಿಸಿದರೂ ನಂತರ ಸ್ವಲ್ಪ ಬೇಸರವೇ ಆಯಿತು. ಚಿಕ್ಕ ಸೀಟುಗಳ ಟಾಯ್‌ ಟ್ರೈನ್‌ನಿಂದ ಹೊರ ನೋಟ ಚಂದವಾದರೂ ಆಯಾಸವಾದದ್ದಂತೂ ನಿಜವೇ ಸರಿ. ಅಲ್ಲೂ ಲಕ್ಷುರಿಯ ಕೆಲವು ಬೋಗಿಗಳಿದ್ದವು. ಅದಕ್ಕೆ  ಸ್ವಲ್ಪ ಮೊದಲೇ ಬುಕ್‌ ಮಾಡಬೇಕಿತ್ತೆಂದು ನಂತರ ತಿಳಿಯಿತು. ದೆಹಲಿಯಿಂದ ಬೆಳಿಗ್ಗೆ ಏಳಕ್ಕೆ ಹೊರಟರು ಹನ್ನೆರಡಕ್ಕೆ ಕಾಲ್ಕಾ ತಲುಪಿ ನಂತರ ಪುಟ್ಟ ಟ್ರೈನ್‌ನಿಂದ ಸಿಮ್ಲಾ ತಲುಪುವ ಹೊತ್ತಿಗೆ ಐದು ಘಂಟೆಯಾಯಿತು.

ಬ್ರಿಟಿಷರ ಬೇಸಿಗೆಯ ರಾಜಧಾನಿ

ದೆಹಲಿಯಲ್ಲಿ ಬಿಸಿಲು ಸುಡುತ್ತಿದ್ದರೂ ಸಿಮ್ಲಾ ತಂಪಾಗಿತ್ತು. ಅಷ್ಟಲ್ಲದೆ ಬ್ರಿಟಿಷರು ಅದನ್ನು ಅವರ ಬೇಸಿಗೆಯ ರಾಜಧಾನಿ ಮಾಡಿಕೊಂಡಿದ್ದರೇ? ಭಾರತದ ಅತ್ಯಂತ ಸುಂದರ ಗಿರಿಧಾಮಗಳಲ್ಲಿ ಒಂದಾಗಿದೆ. ಬ್ರಿಟಿಷರ ಗಮನ ಅಲ್ಲಿ ಬೀಳುವ ಮುನ್ನ ಅದೊಂದು ಪುಟ್ಟ ಹಳ್ಳಿಯಾಗಿತ್ತು. 1814ರಲ್ಲಿ ಅದನ್ನು ತಮ್ಮ ಬೇಸಿಗೆಯ ರಾಜಧಾನಿಯನ್ನಾಗಿ ಮಾಡಿಕೊಂಡರು. ಕಾಳಿಯ ಅವತಾರವಾದ ಶ್ಯಾಮಾ ಎನ್ನುವ ದೇವತೆಯ ಹೆಸರಿನಿಂದ ಸಿಮ್ಲಾ ಆಯಿತು. ಭೂಲೋಕದ ಸ್ವರ್ಗವೆನಿಸಿಕೊಂಡಿರುವ ಸಿಮ್ಲಾ ಬಲು ಸುಂದರ, ಹಾವಿನಂತೆ ಸಾಗುವ ರಸ್ತೆಗಳ ಅಕ್ಕಪಕ್ಕ ದೇವದಾರು ಮತ್ತು ಪೈನ್‌ ವೃಕ್ಷಗಳ ಧಾರೆಯೇ ಅಲ್ಲಿದೆ.

ಬಲು ಎತ್ತರ ಈ ತಂಪುಧಾಮ

ಸಮುದ್ರದಿಂದ 2130 ಮೀ. ಎತ್ತರದಲ್ಲಿ ಹಿಮಾಲಯ ಪ್ರದೇಶದಲ್ಲಿದೆ. ಈ ಪುಟ್ಟ ನಗರ 25 ಚದರ ಕಿ.ಮೀ. ವಿಸ್ತೀರ್ಣದ ಪರ್ವತ ಶ್ರೇಣಿಯಲ್ಲಿದ್ದು, ಮುಖ್ಯವಾದ ಎರಡು ರಸ್ತೆಗಳನ್ನು ಹೊಂದಿದೆ. ಪಶ್ಚಿಮದಿಂದ ಪೂರ್ವಕ್ಕೆ ಇಳಿಯುವ ಮಾಲ್‌ ರಸ್ತೆಯಿಂದ ದಕ್ಷಿಣ ಭಾಗವನ್ನು ಸುತ್ತುವರೆದಿರುವ ಕಾರ್ಟ್‌ ರಸ್ತೆಯತ್ತ ಸಾಗುತ್ತಾ ಮಾಲ್‌ ರಸ್ತೆಯ ಮೇಲ್ಭಾಗದಲ್ಲಿನ ರಿಡ್ಜ್ ರಸ್ತೆಯಿಂದ ಜಕೊ ಬೆಟ್ಟದವರೆಗೂ ಸಾಗುತ್ತದೆ. ವರ್ಷದ ಯಾವ ಸಮಯದಲ್ಲಿ ಹೋದರೂ ಸಿಮ್ಲಾದಲ್ಲಿ ಚೆನ್ನಾಗಿರುತ್ತದೆ. ಮಳೆಗಾಲದಲ್ಲಿ ಹೊಳೆಯುವ ಹಸಿರು ಮನ ತಣಿಸಿದರೆ, ಚಳಿಗಾಲದಲ್ಲಿ ಮಂಜು ಮೈ ಮರೆಸುತ್ತದೆ. ಇಡೀ ಭಾರತದ ಅತ್ಯುನ್ನತ ಗಿರಿಧಾಮವಾದ ಸಿಮ್ಲಾದಲ್ಲಷ್ಟೆ ನೈಸರ್ಗಿಕ ಮಂಜಿನಲ್ಲಿ ಸ್ಕೀಯಿಂಗ್‌ ಮಾಡಲು ಸಾಧ್ಯವಿರುವುದು. ವಿಸ್ತೀರ್ಣ ಸಣ್ಣದಾದರೂ ನೋಡಲು ಬಹಳಷ್ಟು ಸುಂದರ ಸ್ಥಳಗಳಿವೆ.

ಮಾಲ್‌ ರಸ್ತೆ

ಸಿಮ್ಲಾದ ಹೃದಯ ಭಾಗದಲ್ಲಿರುವ ಮಾಲ್ ರಸ್ತೆಯಲ್ಲಿ ಸುತ್ತು ಹಾಕಿದರೆ ಯಾವುದೋ ಪಾಶ್ಚಾತ್ಯ ದೇಶದಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತದೆ. ಇದರ ನಿರ್ಮಾಣ ಬ್ರಿಟಿಷರ ಕಾಲದಲ್ಲೇ ಆಗಿದ್ದು. ಅಲ್ಲಿ ವಾಹನಗಳಿಗೆ ಪ್ರವೇಶವಿಲ್ಲವಾದ್ದರಿಂದ ಟ್ರಾಫಿಕ್‌ನ ಕಿರಿಕಿರಿಯಿಲ್ಲದೆ ನಿಶ್ಚಿಂತೆಯಿಂದ ಓಡಾಡಬಹುದು. ಅಕ್ಕಪಕ್ಕದಲ್ಲಿ ಉದ್ದಕ್ಕೂ ಅಂಗಡಿಗಳು, ಕರಕುಶಲ ವಸ್ತುಗಳು, ದುಬಾರಿ ಬಟ್ಟೆಗಳಿಂದ ಹಿಡಿದು ಅಲ್ಲಿನ ಹವಾಗುಣಕ್ಕೆ ಬೇಕಾದ ಉಣ್ಣೆ ಬಟ್ಟೆಗಳೆಲ್ಲ ಲಭ್ಯ. ಅಲ್ಲಿನ ವಸ್ತುಗಳನ್ನು ಖರೀದಿಸುವಾಗ ಸ್ವಲ್ಪ ಮಟ್ಟಿನ ಚೌಕಾಶಿ ಅಗತ್ಯ. ಅದರಲ್ಲೂ ಪ್ರವಾಸಿಗರೆಂದರೆ ಅವರಿಗೆ ಟೋಪಿ ಕಟ್ಟಿಟ್ಟ ಬುತ್ತಿ. ಗಾಥಿಕ್‌ ಶೈಲಿಯ ಕೆಲವು ಸರ್ಕಾರಿ ಕಟ್ಟಡಗಳ ವಿನ್ಯಾಸ ಮನಸೆಳೆಯುತ್ತದೆ. ಮಾಲ್ ರಸ್ತೆಯಲ್ಲಿ ಸಾಗುತ್ತಿದ್ದರೆ ಕಾಲ ಕಳೆಯುವುದೇ ಗೊತ್ತಾಗುವುದಿಲ್ಲ.

ಸಿಮ್ಲಾ ರಿಡ್ಜ್ ಮಾಲ್ ರಸ್ತೆಗೆ ಹೊಂದಿಕೊಂಡಂತಿದ್ದು ಲಕ್ಕರ್‌ ಬಜಾರ್‌, ಸ್ಯಾಂಡ್‌ ಪಾಯಿಂಟ್‌, ಜಾಕೂ ಹೀಗೆಲ್ಲಾ ತಲುಪಿಸುತ್ತದೆ. ಸರ್ಕಾರಿ ಕಾರ್ಯಕ್ರಮಗಳು, ಸಮಾರಂಭಗಳು ಮತ್ತು ಹಬ್ಬಗಳು ಇಲ್ಲಿಯೇ ನಡೆಯುತ್ತವೆ. ಎಲ್ಲಕ್ಕಿಂತ ಮುಖ್ಯವಾದುದು ಬೇಸಿಗೆಯ ಹಬ್ಬ, ರಂಗು ರಂಗಾದ ವಸ್ತ್ರಗಳನ್ನು ಧರಿಸಿದ ಸಿಮ್ಲಾ ಜನರನ್ನು ಅಂದು ಕಾಣಬಹುದು. ಕ್ರೈಸ್ಟ್ ಚರ್ಚ್‌ನ ಭವ್ಯ ಕಟ್ಟಡ ರಿಡ್ಜ್ ನ ಹೆಗ್ಗಳಿಕೆಯಾಗಿ ಇರುವುದಲ್ಲದೆ ನೋಡುಗರ ಮನಸೆಳೆಯುತ್ತದೆ.

ಜಕೂ ಬೆಟ್ಟ

ರಿಡ್ಜ್ ನಿಂದ ಮುಂದಕ್ಕೆ ಎತ್ತರಕ್ಕೆ ಜಕೂ ಬೆಟ್ಟ ಸಾಗಿದರೆ ದಾರಿಯುದ್ದಕ್ಕೂ ದಟ್ಟ ಹಸಿರು ದೇವದಾರು ವೃಕ್ಷಗಳು ಸ್ವಾಗತ ಹಾಡುತ್ತವೆ. 2455 ಮೀ. ಎತ್ತರದಲ್ಲಿರುವ ಈ ಜಕೂ ಸಿಮ್ಲಾದಲ್ಲೇ ಅತ್ಯಂತ ಎತ್ತರದ ಶಿಖರವೆಂದೂ ಹೇಳಬಹುದು. ಅಲ್ಲಿ ಹೊಸದಾಗಿ ನೂರು ಅಡಿ ಎತ್ತರದ ಭವ್ಯವಾದ ಹನುಮಂತನ ಮೂರ್ತಿಯನ್ನು ಸಂಜೆಯ ದೀಪಗಳ ಬೆಳಕಿನಲ್ಲಿ ನೋಡಿದಾಗ ನಿಜಕ್ಕೂ ಮನತುಂಬಿ ಬಂತು. ಅಲ್ಲಿ ಹನುಮಂತನ ಗೆಳೆಯರ ಕಾಟ. `ಕನ್ನಡಕವನ್ನು ಹಾಕಿಕೊಳ್ಳಬೇಡಿ, ಕನ್ನಡಕ ಅಥವಾ ತಿಂಡಿ ಕಂಡರೆ ಕಿತ್ತುಕೊಂಡು ಬಿಡುತ್ತವೆ ಜೋಪಾನ’ ಎಂದು ಎಚ್ಚರಿಸಿದರು.

`ಕನ್ನಡಕ ಹಾಕಿಕೊಂಡು ಹೋದರೆ ಕನ್ನಡಕ ಕಿತ್ತುಕೊಂಡು ಏನಾದರೂ ತಿಂಡಿ ಕೊಟ್ಟರೆ ಕನ್ನಡಕ ವಾಪಸ್‌ ಕೊಡುತ್ತವೆ,’ ಎಂದರು. ಅಲ್ಲೆಲ್ಲಾ ಬಹಳಷ್ಟು ಕೋತಿಗಳು ಓಡಾಡುತ್ತಿದ್ದವು. ಭವ್ಯವಾದ ಹನುಮಾನ್‌ ಮೂರ್ತಿ ಮತ್ತು ಅಲ್ಲಿಯ ದೇವಸ್ಥಾನ ನೋಡಿ ಬಂದೆವು. ಆ ಎತ್ತರದ ಶಿಖರದಿಂದ ಬೆಳಕಿನ ರಂಗೋಲಿಯನ್ನು ಚೆಲ್ಲುವಂತಿದ್ದ ಶ್ಯಾಮಲ ದೇವತೆಯ ಸ್ಥಾನವಾದ ಸುಂದರ ನಗರಿಯ ಪೂರ್ಣ ನೋಟವನ್ನು ಕಂಡೆವು. ಸಿಮ್ಲಾದ ರಸ್ತೆಗಳು ಬಲು ಡೊಂಕು ಮತ್ತು ಬಹಳ ಕಿರಿದು. ಆ ರಸ್ತೆಗಳಲ್ಲಿ ವಾಹನ ಓಡಿಸಬೇಕೆಂದರೆ ನಿಜಕ್ಕೂ ಅಭ್ಯಾಸವಿದ್ದರಷ್ಟೇ ಸಾಧ್ಯ. ರಸ್ತೆಗಳೆಲ್ಲಾ ಆಗ ಬ್ರಿಟಿಷರು ಮಾಡಿದ್ದಿರಬೇಕು. ಈಗ ಅದರ ನಿರ್ವಹಣೆಯಾದರೆ ಸಾಕಿದೆ ಎಂದ ನಮ್ಮ ಡ್ರೈವರ್‌.

ಒಂದು ಸ್ವಾರಸ್ಯಕರ ಕಥೆ

ರಾಮಾಯಣದಲ್ಲಿ ಲಕ್ಷ್ಮಣನಿಗೆ ಪೆಟ್ಟು ಬಿದ್ದಾಗ ಹನುಮಂತ ಸಂಜೀವಿನಿ ಸಸ್ಯವನ್ನು ಗುರುತಿಸಲಾಗದೆ ಬೆಟ್ಟವನ್ನೇ ಹೊತ್ತು ತಂದನಂತೆ. ನಂತರ ಆ ಬೆಟ್ಟವನ್ನು ವಾಪಸ್‌ ಅದರ ಸ್ಥಳದಲ್ಲೇ ಇರಿಸಲು ತೆಗೆದುಕೊಂಡು ಹೋಗುವಾಗ ಈ ಜಕೂ ಬೆಟ್ಟದಲ್ಲಿ ಸ್ವಲ್ಪ ಹೊತ್ತು ವಿರಮಿಸಿದನಂತೆ, ಅದಕ್ಕೆ ಆ ಸ್ಥಳ ಸಾಪಾಟಾಗಿದೆ. ಇನ್ನು ಆಂಜನೇಯ ಬಂದು ಹೋದ ಸ್ಥಳವೆಂದರೆ ಕೇಳಬೇಕೆ? ಅವನ ಸಂತತಿಯವರು ಅಲ್ಲಿ ಧಾರಾಳವಾಗಿದ್ದರು. ಅಲ್ಲಿ ಅವನ ದೇವಾಲಯದ ನಿರ್ಮಾಣ ಆಯಿತು.

ಹನುಮಾನ್‌ ಟೆಂಪಲ್

ಸಿಮ್ಲಾದಿಂದ ಐದು ಕಿ.ಮೀ.ದೂರದಲ್ಲಿರುವ ಈ ಸಂಕಟ್‌ ಮೋಚನ್‌ ಹನುಮಾನ್‌ ದೇವಾಲಯ ಪ್ರಾಸಿಗರ ಮತ್ತೊಂದು ಆಕರ್ಷಣೆಯ ಕೇಂದ್ರ. ಸುತ್ತಲೂ ಹಸಿರು ಬೆಟ್ಟಗಳ ನಡುವಿನ ಈ ದೇವಸ್ಥಾನದ ನಿರ್ವಹಣೆ ನಿಜಕ್ಕೂ ಚೆನ್ನಾಗಿದೆ. ಶುಚಿತ್ವ ದೈವತ್ವದ ಸಮಾನ ಎನ್ನುವ ತತ್ವವನ್ನು ಅರ್ಥ ಮಾಡಿಕೊಂಡಂತಿದೆ ಮತ್ತು ಇಲ್ಲೊಂದು ಆಯುರ್ವೇದದ ಆಸ್ಪತ್ರೆ ಇದ್ದು ರೋಗಿಗಳಿಗೆ ಉಚಿತ ಸೇವೆಯನ್ನು ನೀಡಲಾಗುತ್ತದೆ. ಸ್ವಚ್ಛ ಸುಂದರ ಪರಿಸರ ಹಾಗೂ ಸೇವೆ ಮತ್ತಿನ್ನೇನು ಬೇಕು ಅಲ್ಲವೇ?

ಇಂ. ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್ ಸೈನ್ಸ್ ಪ್ರವಾಸಿಗರು ನೋಡಲೇಬೇಕಾದ ಸ್ಥಳ, ಭವ್ಯವಾದ ಕಲ್ಲಿನ ಕಟ್ಟಡ, ಇದನ್ನು ವೈಸ್‌ರೀಗ್‌ ಲಾಡ್ಜ್ ಎಂತಲೂ ಹೇಳುತ್ತಾರೆ. ಸಿಮ್ಲಾದಲ್ಲೂ ನಮ್ಮ ತಿರುಪತಿಯಂತೆ ಏಳು ಬೆಟ್ಟಗಳಿವೆ. ಅದರಲ್ಲಿ ಒಂದಾದ ಅಬ್ಸರ್ವೇಟರಿ ಹಿಲ್‌ನಲ್ಲಿ ಗವರ್ನರ್‌ ಮತ್ತು ವೈಸ್‌ರಾಯ್‌ ತಂಗುತ್ತಿದ್ದ ಈ ತಾಣ ಬಹು ಸುಂದರಾಗಿದೆ. ಸಿಮ್ಲಾ ತನ್ನಷ್ಟಕ್ಕೆ ಒಂದು ಸುಂದರ ಹಸಿರಿನ ತೋಟದಂತೆ, ಅದರ ಮಧ್ಯೆ ಕಳಸವಿಟ್ಟಂತೆ ಈ ಕಲ್ಲಿನ ಕಟ್ಟಡ ಕಂಗೊಳಿಸುತ್ತಿದೆ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಅತಿ ಮುಖ್ಯವಾದ ನಿರ್ಣಯಗಳನ್ನು ತೆಗೆದುಕೊಂಡ ಸ್ಥಳವಿದು. 1945ರಲ್ಲಿ ಸಿಮ್ಲಾ ಸಮ್ಮೇಳನ ನಡೆಯಿತು. 1947ರಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನವನ್ನು ಭಾರತದಿಂದ ಬೇರ್ಪಡಿಸಬೇಕಾದ ನಿರ್ಣಯ ತೆಗೆದುಕೊಂಡಿದ್ದು ಇಲ್ಲೇ. ಸ್ವಾತಂತ್ರ್ಯದ ನಂತರ ಇದನ್ನು ರಾಷ್ಟ್ರಪತಿ ನಿವಾಸವೆಂದು ಹೆಸರಿಡಲಾಯಿತು. ಬೇಸಿಗೆಯಲ್ಲಿ ರಾಷ್ಟ್ರಪತಿಯ ವಾಸ ಇಲ್ಲೇ ಆಗುತ್ತಿತ್ತು. ನಂತರ ಡಾ. ರಾಧಾಕೃಷ್ಣನ್‌ರವರ ಕಾಲದಿಂದ ಇದನ್ನು ಉನ್ನತ ವ್ಯಾಸಂಗದವರ ಅಧ್ಯಯನ ಕೇಂದ್ರವಾಗಿ ಬಳಸಲಾಗುತ್ತಿದೆ. ಹಸಿರಿನ ಪ್ರಾಕೃತಿಕ ಮಡಿಲಿನಲ್ಲಿ ಭವ್ಯವಾದ ಸರಸ್ವತಿಯ ಆವಾಸ ಸ್ಥಾನವನ್ನು ನೋಡಲು ಸಂತಸವೆನಿಸುತ್ತದೆ. ಈ ಸುಂದರ ಕಟ್ಟಡದ ವಿನ್ಯಾಸಕಾರ ಹೆನ್ರಿ ವಿನ್‌.

ಮಿಲಿಟರಿ ಮ್ಯೂಸಿಯಂ

ಪೈನ್‌ ವೃಕ್ಷಗಳ ಸಮೂಹದ ಮಧ್ಯದಲ್ಲಿ ಕೆನಡಿ ಹೌಸ್‌ನಿಂದ ಇಳಿದು ಬಂದರೆ ಹಸಿರಿನ ಮಧ್ಯದಲ್ಲೇ ಕಾಣುವುದು ಮಿಲಿಟರಿ ಮ್ಯೂಸಿಯಂ. ಸುತ್ತಲೂ ದೇವದಾರು ಮತ್ತು ಪೈನ್‌ ವೃಕ್ಷಗಳ ಧಾರೆ, ಬಗೆ ಬಗೆಯ ಮಿಲಿಟರಿ ಉಪಕರಣಗಳು, ಸಮವಸ್ತ್ರಗಳನ್ನು ಧರಿಸಿದ ಸಿಪಾಯಿಗಳ ಪ್ರತಿಮೆಗಳು, ಯುದ್ಧಗಳಲ್ಲಿ ಅವರು ಗಳಿಸಿದ ಪದಕಗಳು, ಫಲಕಗಳು, ಶೀಲ್ಡ್ ಗಳೆಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ವಿಭಾಗಗಳನ್ನಾಗಿ ವಿಂಗಡಿಸಿ ಜೋಡಿಸಲಾಗಿದೆ. ನಡೆದ ಯುದ್ಧಗಳನ್ನು ಸಂಭವಿಸಿದ ಅವಧಿಗನುಗುಣವಾಗಿ ಜೋಡಿಸಿದ್ದಾರೆ. ಎಷ್ಟಾದರೂ ಮಿಲಿಟಿರಿಯವರಲ್ಲವೇ….? ಎಲ್ಲದರಲ್ಲೂ ಶಿಸ್ತು ಅಚ್ಚುಕಟ್ಟು ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಅಪರೂಪದ ಮ್ಯೂಸಿಯಂ ಎನ್ನಬಹುದು. ಅಲ್ಲಿಂದ ಪ್ರತ್ಯೇಕವಾಗಿ ಸ್ವಲ್ಪ ದೂರದಲ್ಲೇ ಕಾನ್‌ಫರೆನ್ಸ್ ಹಾಲ್ ಇದೆ. ಸಿಮ್ಲಾಗೆ ಹೋದವರಿಗೆ ಅಪರೂಪದ ನೋಟವನ್ನು ನೀಡುವ ತಾಣವಿದು.

ಕುರ್ಫಿ

ಇಲ್ಲಿನ ಅತ್ಯಂತ ಮೋಹಕ ತಾಣವೆಂದರೆ ಕುರ್ಫಿ ರೆಸಾರ್ಟ್‌, ಚಳಿಗಾಲದಲ್ಲಿ ಮಂಜು ಸುರಿಯುವ ಸಮಯದಲ್ಲಿ ಮಂಜಿನ ಮೇಲೆ ಸ್ಕೀಯಿಂಗ್‌ನಂತಹ ಬಗೆ ಬಗೆಯ ಆಟಗಳನ್ನು ಆಡುತ್ತಾ ಮಂಜಿನಲ್ಲಿ ಕಾಲ ಕಳೆಯಬಹುದು. ಸಿಮ್ಲಾದಿಂದ ಐದು ಕಿ.ಮೀ. ದೂರದಲ್ಲಿ ಸಾಗಿ ನಂತರ ಕುದುರೆಯ ಮೇಲೆ ಸ್ವಲ್ಪ ದೂರ ಕ್ರಮಿಸಿದ ಮಜಾ ಅಲ್ಲಿಗೆ ಹೋದವರಿಗೇ ಗೊತ್ತಾಗಬೇಕು. ಸಾವಿರಕ್ಕಿಂತಾ ಹೆಚ್ಚು ಕುದುರೆಗಳಿವೆ. ಅಲ್ಲಿಗೆ ಹೋದರೆ ಕುದುರೆಗಳ ದೊಡ್ಡ ಗುಂಪು ಕಾಣುತ್ತದೆ. ಅಷ್ಟು ಸುಂದರ ತಾಣದಲ್ಲಿ ಅವರವರ ಶಕ್ತಿಗನುಸಾರಾಗಿ ಮನರಂಜನೆ ಸಾಧ್ಯ. ಸಿಮ್ಲಾಗೆ ಹೋದವರು ನೋಡಲೇಬೇಕಾದ ಮತ್ತೊಂದು ಮುಖ್ಯ ತಾಣವಿದು. ಹೋಗುವ ದಾರಿಯಲ್ಲಿ ಹಸಿರಿನ ಕಣಿವೆಯ ದೃಶ್ಯ ಅರ್ಥಾತ್‌ ಗ್ರೀನ್‌ ವ್ಯಾಲಿಯ ಸುಂದರ ನೋಟ ಲಭ್ಯ. ಹಸಿರಿನ ಸಾನ್ನಿಧ್ಯದಲ್ಲಿ ಓಡಾಡುವುದೇ ಒಂದು ರೋಮಾಂಚಕ ಅನುಭವ! ಬೇಸಿಗೆಯ ಸುಡು ಬಿಸಿಲಿನಲ್ಲೂ ತಂಪನ್ನೆರೆಯುವ ಸಿಮ್ಲಾ ಸುಂದರ ಗಿರಿಧಾಮ ಎನ್ನುವುದರಲ್ಲಿ ಎರಡು ಮಾತಿಲ್ಲ.

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ