ಪ್ರತಿಯೊಂದು ಉಡುಪು ತನ್ನದೇ ಆದ ಮಹತ್ವ ಮತ್ತು ಉಪಯುಕ್ತತೆಯನ್ನು ಹೊಂದಿರುತ್ತದೆ. ಆದರೆ ಅದನ್ನು ಧರಿಸುವ ಸಂದರ್ಭ ವಿಭಿನ್ನವಾಗಿರುತ್ತದೆ. ಕೆಲವು ಸೌಮ್ಯವಾದ ಅಥವಾ ಮಿಂಚುವಂತಹ, ಹಲವು ಟ್ರೆಡಿಶನಲ್ ಅಥವಾ ಮಾಡರ್ನ್ ಅಥವಾ ಇಂಡೊವೆಸ್ಟರ್ನ್ ಔಟ್ ಲುಕ್ ಉಳ್ಳಂತಹ ಉಡುಪುಗಳನ್ನು ನಮ್ಮ ಇಚ್ಛೆ, ಅಗತ್ಯ ಅಥವಾ ಸಂದರ್ಭಕ್ಕೆ ತಕ್ಕಂತೆ ಧರಿಸುತ್ತೇವೆ. ನೀವು ಮನೆಯಲ್ಲಿ ನಿಮಗೆ ಆರಾಮದಾಯಕ ಎನಿಸುವ ಯಾವುದೇ ಬಟ್ಟೆಯನ್ನು ಧರಿಸಬಹುದು.
ಅಂದರೆ ದಿನವಿಡೀ ನೀವು ನೈಟಿಯನ್ನೇ ಧರಿಸಿರಬಹುದು ಎಂದು ಖಂಡಿತ ಅರ್ಥೈಸಿಕೊಳ್ಳಬೇಡಿ. ಮನೆಯಲ್ಲಿ ನಿಮ್ಮ ಕೆಲಸ, ನಿಮ್ಮ ಆರಾಮ ಮತ್ತು ಮನೆಯ ಹಿರಿಕಿರಿಯರ ಸಂಬಂಧಕ್ಕೆ ಅನುಸಾರವಾಗಿ ನಿಮ್ಮ ಉಡುಪು ಇರಬೇಕು. ಅದು ಸಲ್ವಾರ್ ಕಮೀಸ್, ಸೀರೆ ಅಥವಾ ಟಾಪ್ಸ್ ಆಗಿರಬಹುದು. ಆದರೆ ಹೊರಗೆ ಹೋಗುವಾಗ, ಮುಖ್ಯವಾಗಿ ಸಮಾರಂಭಗಳಿಗೆ ಹೊರಡುವಾಗ ಡ್ರೆಸ್ ಬಗ್ಗೆ ವಿಶೇಷ ಗಮನ ನೀಡುವುದು ಅಗತ್ಯ. ಈ ಕಾರಣದಿಂದ ಕೊಳ್ಳಲು, ಧರಿಸಲು, ಮ್ಯಾನೇಜ್ ಮಾಡಲು ಅನುಕೂಲವಾಗುವಂತೆ ಡ್ರೆಸ್ಗಳನ್ನು ವಿಭಾಗಿಸಬಹುದಾಗಿದೆ.
ಪಾರ್ಟಿವೇರ್ ಹಬ್ಬ, ಸಮಾರಂಭ ಮತ್ತು ಪಾರ್ಟಿಗಳಲ್ಲಿ ವೈಬ್ರೆಂಟ್ ಕಲರ್ಡ್ ಡ್ರೆಸ್ಗಳಿಂದ ಸಿಂಗರಿಸಿಕೊಂಡು ನೀವು ಸಂಭ್ರಮಿಸಬಹುದು. ಇತ್ತೀಚೆಗೆ ಡ್ಯೂಯೆಲ್ ಮತ್ತು ಮಲ್ಟಿ ಕಲರ್ಡ್ ಸೀರೆಗಳು ಹೆಚ್ಚು ಪ್ರಚಲಿತಾಗಿವೆ. ಚಂದೇರಿ, ಕಾಂಜೀವರಂ, ಭಾಂದಿನಿ, ಬನಾರಸೀ ಸೀರೆಗಳು ಯಾವುದೇ ಏಜ್ ಗ್ರೂಪ್ನವರಿಗೂ ಹೊಂದಿಕೆಯಾಗುತ್ತದೆ. ಚಳಿಗಾಲವಾದರೆ ಒಂದು ಪಾಶ್ಮಿನಾ ಶಾಲನ್ನು ಸ್ಟೈಲ್ ಆಗಿ ಹೆಗಲ ಮೇಲೆ ಇಳಿಬಿಟ್ಟರಾಯಿತು.
ಪಟಿಯಾಲಾ ಸಲ್ವಾರ್, ಚೂಡೀದಾರ್ ಮೇಲೆ ಅನಾರ್ಕಲಿ ಅಥವಾ ಆಬ್ಲಿಕ್ ಕಾಲರ್ವುಳ್ಳ ಬ್ರೊಕೇಡ್ ಕುರ್ತಾ ಅಥವಾ ಗ್ಲಾಸೀ ಫ್ಯಾಬ್ರಿಕ್ನ ಕಾಂಟ್ರಾಸ್ಟ್ ಮಿಡಲ್ ಕಟ್ನ ಡಿಸೈನರ್ ಕುರ್ತಾ ಅಥವಾ ಹೈನೆಕ್, ಫ್ರಂಟ್ ಓಪನ್ ಉಳ್ಳ ಕುರ್ತಾ, ಸ್ಲೀವ್ ಲೆಸ್ ಶ್ರಗ್ ಗೌನ್ ಅಥವಾ ಸುಂದರವಾದ ಲಾಂಗ್ ಜ್ಯಾಕೆಟ್ನ್ನು ಧರಿಸಬಹುದು. ಕಫ್ತಾನ್ ಅಥವಾ ಸ್ಟೈಲಿಶ್ ಲೇಸ್ ಮ್ಯಾಕ್ಸಿಯಲ್ಲಿ ನೀವು 40ನ್ನೇ ಮೀರಿದವರಾದರೂ ಯಂಗ್ ಆಗಿ ಕಣ್ಸೆಳೆಯುವಂತೆ ಕಾಣುವಿರಿ.
ಚಿಕ್ಕ ವಯಸ್ಸಿಗೆ ಹುಡುಗಿಯರು ಜಂಪ್ ಸೂಟ್, ಫ್ಲಾಶೀ ಟಾಪ್ ಜೊತೆಗೆ ಲಾಂಗ್ ಸ್ಕರ್ಟ್, ಫ್ಲೋರೋಸೆಂಟ್ ಕಲರ್ಸ್, ತ್ರೀಫೋರ್ತ್ ಗೌನ್ನೊಂದಿಗೆ ಹಾಲ್ಟರ್ ಕಾಲರ್ವುಳ್ಳ ಪ್ರಿಂಟೆಡ್ ಲಾಂಗ್ ಫ್ರಾಕ್, ಪ್ಯಾಚ್ ವರ್ಕ್ ಸ್ಲೀವ್ ನೊಂದಿಗೆ ಕಾಕ್ಟೇಲ್ಪೋರ್ವ್ ಡ್ರೆಸ್, ಟ್ಯೂನಿಕ್, ಸ್ಪೆಗೆಟಿ ಯಾವುದನ್ನಾದರೂ ಧರಿಸಿ ಮಿಂಚಬಹುದು. ಸ್ಟೋಲ್, ಬೆಲ್ಟ್, ಕ್ಯಾಪ್, ಹ್ಯಾಟ್, ಸ್ಕಾರ್ಫ್, ಕಲರ್ಸ್, ಮಿಟನ್ಸ್ ಇತ್ಯಾದಿ ಆ್ಯಕ್ಸೆಸರೀಸ್ನಿಂದ ಮತ್ತಷ್ಟು ಆಕರ್ಷಕವಾಗಿ ತೋರಬಹುದು.
ಪಿಕ್ನಿಕ್, ಔಟಿಂಗ್ಗಳಿಗೆ ಹೋಗುವಾಗ ಕಸೂತಿ ಕೆಲಸ ಮಾಡಿರುವ ಹಿಪ್ಪೀ ಬ್ಲೌಸ್ನ ಬೋಹೊ ಡ್ರೆಸ್, ಕಾಂಟ್ರಾಸ್ಟ್ ಟಾಪ್ವುಳ್ಳ ಜಂಪ್ ಸೂಟ್, ಕ್ಯಾಷರಿ ಟಾಪ್, ಡೆನಿಮ್ ಜೀನ್ಸ್ ಪ್ಯಾಂಟ್, ಶಿಮರ್ ಲೆಗಿಂಗ್ ಜೊತೆಗೆ ಪ್ಲೇನ್ ಕುರ್ತಾ ಅಥವಾ ಕುರ್ತಾದ ಜೊತೆಗೆ ಪ್ರಿಂಟೆಡ್ ಸ್ಲೀವ್ ಲೆಸ್ ಜ್ಯಾಕೆಟ್, ಫ್ಲೇಯರ್ಡ್ ಜೀನ್ಸ್, ಡೆನಿಮ್ ಶಾರ್ಟ್ಸ್, ಚಳಿಗಾಲದಲ್ಲಿ ಮಿನಿ ಸ್ಕರ್ಟ್ನೊಂದಿಗೆ ಕಲರ್ಫುಲ್ ಟೈಟ್ಸ್ ಅಥವಾ ಥರ್ಮ್ ಲೆಗಿಂಗ್ಸ್ ಇವುಗಳನ್ನು ಆರಿಸಿಕೊಂಡು ಧರಿಸಿರಿ. ಬಣ್ಣಬಣ್ಣದ ಬ್ರೈಟ್ ಕಲರ್ಡ್ ಡ್ರೆಸ್ಗಳನ್ನು ಲೇಯರಿಂಗ್ ಸ್ಟೈಲ್ನಲ್ಲಿ ಧರಿಸಿ. ಸ್ಲೀವ್ ಲೆಸ್ ಜ್ಯಾಕೆಟ್ನೊಂದಿಗೆ ಟರ್ಟ್ ಕಲರ್ನ ಶರ್ಟ್, ಚಳಿಗಾಲಕ್ಕೆ ಚೆನ್ನಾಗಿ ಹೊಂದುತ್ತದೆ.
ಆಫೀಸ್ ಫಾರ್ಮಲ್ ವೇರ್
ನೀವು ಆಫೀಸ್ಗೆ ಹೋಗುವವರಾಗಿದ್ದರೆ, ಅಲ್ಲಿ ಡ್ರೆಸ್ ಕೋಡ್ ಇದ್ದರೆ ಅದನ್ನೇ ಧರಿಸಿ. ಇಲ್ಲವಾದರೆ ಅಲ್ಲಿನ ರೂಢಿಗೆ ತಕ್ಕಂತೆ ಸೀರೆ ಅಥವಾ ಶರ್ಟ್ ಪ್ಯಾಂಟ್, ಟೈಕೋಟ್, ಕಟ್ ಕಾಲರ್, ಪ್ಲೇನ್ ಕಾಲರ್, ಟರ್ಟ್ ಕಾಲರ್ ಕೋಟ್, ಲಾಂಗ್ ಕೋಟ್ಮುಂತಾದುವನ್ನು ಧರಿಸಿ. ಸೀರೆ, ಲೈಟ್ ಪ್ರಿಂಟ್ಉಳ್ಳ ಸಾಬರ್ ಸೂಟ್ ಅಥವಾ ಸೌಮ್ಯವಾದ ಸ್ಮಾರ್ಟ್ ಡ್ರೆಸೆಸ್ ಆಫೀಸ್ಗಳಿಗೆ ಉಪಯುಕ್ತವಾಗಿರುತ್ತವೆ. ಡಾರ್ಕ್ ಡೆನಿಮ್ ಜೀನ್ಸ್ ನೊಂದಿಗೆ ವೈಟ್ ಅಥವಾ ಲೈಟ್ ಕಲರ್ಸ್ ಶರ್ಟ್ ಉದ್ಯೋಗಿಗಳಿಗೆ ಹೊಂದಿಕೆಯಾಗುತ್ತದೆ. ಬಣ್ಣ ಬಣ್ಣದ, ಹೊಳೆಯುವ, ಡಿಸೈನರ್ ಮತ್ತು ಅಂಗ ಪ್ರದರ್ಶನ ಮಾಡುವ ಡ್ರೆಸೆಸ್ ದೂರವಿಡಿ. ಇಂತಹ ಡ್ರೆಸ್ಗಳು ಇತರರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಿರಲಿ. ವರ್ಕ್ ಪ್ಲೇಸ್ನಲ್ಲಿ ಯಾರದೇ ಕೆಲಸಕ್ಕೂ ಭಂಗ ತಾರದಂತೆ ಡ್ರೆಸ್ಮಾಡಿಕೊಳ್ಳುವುದೇ ಬುದ್ಧಿವಂತಿಕೆ. ನೀವು ಉದ್ಯೋಗಿಯಾಗಿಲ್ಲದಿದ್ದರೂ, ಎಂದಾದರೂ ಯಾವುದೇ ಆಫೀಸ್ಗೆ ಹೋಗಬೇಕಾದ ಸಂದರ್ಭ ಬಂದಾಗ ಈ ವಿಷಯವನ್ನು ನೆನಪಿನಲ್ಲಿಡಿ. ಇಂತಹ ಸ್ಥಳಗಳಲ್ಲಿ ಮೀಟಿಂಗ್ಗೆ ಹೋಗುವಾಗ ಸ್ಮಾರ್ಟ್ ಬ್ಲಾಕ್ ಜ್ಯಾಕೆಟ್, ಬ್ಲೇಝರ್ ಅಥವಾ ಹೆಗಲಿನ ಮೇಲೆ ಒಂದು ಲೈಟ್ ಕಲರ್ ಶಾಲು ಚೆನ್ನಾಗಿ ಹೊಂದುತ್ತದೆ.
ವಿವಾಹ ಅಥವಾ ಸೆರೆಮೋನಿಯಲ್ ವೇರ್
ಮದುವೆಗಳಿಗೆ ಗೋಲ್ಡನ್, ಸಿಲ್ವರ್, ಶೈನಿಂಗ್ವುಳ್ಳ ಬ್ರೈಟ್ ಬೋಲ್ಡ್ ಕಲರ್ಡ್ ಡ್ರೆಸೆಸ್ನ್ನು ಎಲ್ಲರೂ ಇಷ್ಟಪಡುತ್ತಾರೆ. ಬನಾರಸೀ ಮತ್ತು ಟ್ರೆಡಿಶನಲ್ ಸೀರೆಗಳನ್ನೂ ಸಹ ಮೆಚ್ಚಿ ಉಡುತ್ತಾರೆ. ಕುಟುಂಬಕ್ಕೆ ಸಂಬಂಧಿಸಿದ ಅಥವಾ ಗೆಳತಿಯ ಮದುವೆಯಾದರೆ ಹೆವಿ ವರ್ಕ್ನ ಲಹಂಗಾ ಮತ್ತು ಚುನ್ನೀ ಅಥವಾ ಹೊಳೆಯುವ ಚುನರೀ ಕೆಲಸದ ಲಹಂಗಾ ಮತ್ತು ಹೆವಿ ವರ್ಕ್ವುಳ್ಳ ಬ್ಯಾಕ್ಲೆಸ್ಚೋಲಿ ಧರಿಸಬಹುದು. ಲೇಟೆಸ್ಟ್ ಲಹಂಗಾಗಳಲ್ಲಿ ರಾಯಲ್ ಲುಕ್ ನೀಡಲು ಜ್ಯಾಕೆಟ್, ರೋಲ್ಸ್, ಕ್ಯಾಪ್ನ್ನು ಬಳಸಲಾಗುತ್ತದೆ.
ರಿಸೆಪ್ಶನ್ಗೆ ಟಿಶ್ಶೂ ಸೀರೆ ಅಥವಾ ಮುತ್ತು, ಚಮಕಿ, ಜರಿದಾರಗಳ ಕೆಲಸ ಮಾಡಿದ ಸೀರೆಯೊಂದಿಗೆ ಶಾರ್ಟ್ ಸ್ಲೀವ್ಸ್ ನ ಎಲಿಗೆಂಟ್ ಬ್ಯಾಕ್ಲೆಸ್ ಬ್ಲೌಸ್ ಧರಿಸಬಹುದು ಅಥವಾ ಅನಾರ್ಕಲಿ ಸೂಟ್, ಎಂಬ್ರಾಯಿಡರಿ ಮಾಡಿರುವ ಟಿಶ್ಶೂ ಸ್ಕರ್ಟ್ ಅಥವಾ ಗ್ಲಾಸಿ ಫ್ಯಾಬ್ರಿಕ್ನ ಲಾಂಗ್ ಫ್ರಾಕ್ ಇವುಗಳಲ್ಲಿ ಬೇಕಾದುದನ್ನು ಆರಿಸಿಕೊಂಡು ಆಭರಣಗಳೊಂದಿಗೆ ಸಿಂಗರಿಸಿಕೊಂಡಾಗ ನಿಮ್ಮ ಸೌಂದರ್ಯಕ್ಕೆ ಸಾಟಿಯೇ ಇರದು.
ಮದುವೆಗೆ ಪೂರಕವಾದ ಪೂರ್ವಭಾವೀ ಕಾರ್ಯಕ್ರಮಗಳಿಗೆ ಹೋಗುವಾಗ ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಸೂಕ್ತವಾಗಿರುತ್ತವೆ. ಅರಿಶಿನ, ಸಂಗೀತ, ಮೆಹಂದಿ ಮುಂತಾದ ಸಂದರ್ಭಗಳಲ್ಲಿ ನಿಮ್ಮ ಡ್ರೆಸ್ನಿಂದ ನೀವು ಮದುಮಕ್ಕಳ ಆನಂದದಲ್ಲಿ ಭಾಗಿಯಾಗಿರುವಿರೆಂಬ ಅನುಭವ ಅವರಿಗೆ ಉಂಟಾಗುತ್ತದೆ.
ಎಕ್ಸೈರ್ಸೈಜ್, ವಾಕಿಂಗ್, ಜಾಗಿಂಗ್ ವೇರ್ ವಾಕಿಂಗ್ಗೆ ಸಡಿಲವಾದ ಕುರ್ತಾ ಪೈಜಾಮ, ಟಾಪ್ ಬ್ರೌಸರ್ಗಳನ್ನು ಜಾಗಿಂಗ್ನ ಟ್ರ್ಯಾಕ್ ಸೂಟ್ಸ್ ಮತ್ತು ವ್ಯಾಯಾಮಕ್ಕೆ ಶಾರ್ಟ್ಸ್, ಮಂಡಿಯವರೆಗಿನ ಲೆಂಗಿಂಗ್ಸ್, ಕಾಟನ್ ಸ್ಲೀವ್ ಲೆಸ್ ಟಾಪ್ಸ್ ಇವು ಸೂಕ್ತವಾಗಿರುತ್ತವೆ. ಈ ಉಡುಪುಗಳಿಂದ ಶರೀರವನ್ನು ಬೇಕಾದಂತೆ ತಿರುಗಿಸಲು ಅನುಕೂಲವಾಗಿರುತ್ತದೆ ಮತ್ತು ಬೆವರೂ ಸಹ ಹೀರಲ್ಪಡುತ್ತವೆ.
ಸಿಂಪಲ್ ಡ್ರೆಸ್
ಕೆಲವು ಸಂದರ್ಭಗಳಲ್ಲಿ ನಮ್ಮ ದಿನನಿತ್ಯದ ಅಥವಾ ಆಡಂಬರದ ಉಡುಗೆ ಧರಿಸುವುದು ಸೂಕ್ತವಾಗಿರುವುದಿಲ್ಲ. ಕಾಯಿಲೆಯಾದವರನ್ನು ನೋಡಲು ಆಸ್ಪತ್ರೆಗೆ ಅಥವಾ ಮನೆಗೆ ಹೋಗುವಾಗ ಅಥವಾ ದುಃಖಸೂಚಕ ಸ್ಥಳಗಳಿಗೆ ಹೋಗುವಾಗ ಸರಳವಾದ, ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಯನ್ನು ಧರಿಸುವುದು ಒಳ್ಳೆಯದು.
ನೈಟ್ ವೇರ್
ಕೆಲವು ಮಹಿಳೆಯರಿಗೆ ನೈಟ್ ಗೌನ್ ಅಥವಾ ನೈಟಿ ಅದೆಷ್ಟು ಪ್ರಿಯವೆಂದರೆ, ಅವರು ಮನೆಯಲ್ಲಿ ಸದಾ ಅದನ್ನೇ ಧರಿಸಿರುತ್ತಾರೆ. ಕೆಲವರಂತೂ ಹಾಲು, ತರಕಾರಿ ತರಲೂ ಸಹ ಅದರಲ್ಲೇ ಹೋಗುತ್ತಾರೆ. ಆದರೆ ಇದು ಸರಿಯಾದ ರೀತಿಯಲ್ಲ. ನೈಟ್ ಗೌನ್ಎಂದರೆ ರಾತ್ರಿ ಧರಿಸುವ ಉಡುಪು ಎಂದು ತಿಳಿದಿರಬೇಕು. ನೈಟ್ ವೇರ್ನಲ್ಲಿ ಪೈಜಾಮ, ಕುರ್ತಾ, ಟಾಪ್ಗಳ ನೈಟ್ ಸೂಟ್ ಸಹ ದೊರೆಯುತ್ತವೆ. ಇವು ವಿವಿಧ ಕಲರ್, ಪ್ರಿಂಟ್ ಮತ್ತು ಫ್ಯಾಬ್ರಿಕ್ಗಳಲ್ಲಿ ಉಪಲಬ್ಧವಿದ್ದು ನಿಮಗೆ ಬೇಕಾದುದನ್ನು ಆರಿಸಿಕೊಳ್ಳಬಹುದು.
ಸ್ಪೋರ್ಟ್ಸ್ ವೇರ್
ಸಡಿಲವಾದ ಸ್ಪೋರ್ಟ್ಸ್ ಟಾಪ್ಸ್, ಶಾರ್ಟ್ಸ್, ಸ್ಕರ್ಟ್ಗಳು ಆಟವಾಡಲು ಅನುಕೂಲವಾಗಿರುತ್ತವೆ. ಸ್ವಿಮಿಂಗ್ಗಾಗಿ ಒನ್ಪೀಸ್, ಟೂ ಪೀಸ್, ಬಿಕಿನಿಗಳು ಮತ್ತು ಸ್ವಿಮ್ ಸೂಟ್ಗಳಲ್ಲಿ ದೊರೆಯುತ್ತವೆ. ಇದಲ್ಲದೆ ಬೇರೆ ಡ್ರೆಸ್ನಲ್ಲಿ ಈಜುವುದು ಅನಾನುಕೂಲಕರವಲ್ಲದೆ ಹಾಸ್ಯಾಸ್ಪದ ಆಗುತ್ತದೆ.
– ಡಾ. ನೀರಜಾ