ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯ ಶೈಲಿಯಲ್ಲಿ ಪಾರಂಗತೆಯಾಗಿ ದೇಶವಿದೇಶಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನದಿಂದ ಅಪಾರ ಜನಮನ್ನಣೆ ಗಳಿಸಿರುವ ದೀಪಾರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ.......?
ನಾಲ್ಕು ದಶಕಗಳಿಂದ ಎಡೆಬಿಡದೆ ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯ ಶೈಲಿಯಲ್ಲಿ ಪರಿಶ್ರಮಿಸುತ್ತಿರುವ ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ, ವಿಖ್ಯಾತ ನಾಟ್ಯಗುರು ದೀಪಾ ನಾಟ್ಯಗುರು ದೀಪಾ ನಾರಾಯಣನ್ ಅರ್ಥಾತ್ ದೀಪಾ ಶಶೀಂದ್ರನ್ ತಮ್ಮ ಅಸಂಖ್ಯ ನೃತ್ಯ ಪ್ರದರ್ಶನಗಳಿಂದ ಖ್ಯಾತರಾದರು. ತಮ್ಮ `ಕೂಚಿಪುಡಿ ಪರಂಪರಾ ಫೌಂಡೇಶನ್' ಮೂಲಕ ವೇದಾಂತಂ ಲಕ್ಷ್ಮಿನಾರಾಯಣ ಶಾಸ್ತ್ರೀಯ ಚಿನ್ನ ಸತ್ಯಂ ಪರಂಪರೆಯ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ ನಿರತರಾದ ದೀಪಾ, ಪರಿಣಿತ ಅಭಿನಯ ಮನೋಜ್ಞ ನೃತ್ಯ ಪ್ರಸ್ತುತಿ ಅಪೂರ್ವ ನೃತ್ಯ ಸಂಯೋಜನೆಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ.
43 ವರ್ಷಗಳು ಕೂಚಿಪುಡಿ ನೃತ್ಯಭ್ಯಾಸ ಮಾಡಿ ಪ್ರಬುದ್ಧತೆ ಸಾಧಿಸಿರುವ ಅತ್ಯಂತ ನೈಪುಣ್ಯತೆ ಪಡೆದ ಪ್ರತಿಭಾವಂತ ಸಾಧಕಿ ದೀಪಾ. ಶಂಕರಾಭರಣ ಚಲನಚಿತ್ರ ಖ್ಯಾತಿಯ ಮಂಜುಭಾರ್ಗವಿ ಅವರ ಪ್ರಧಾನಶಿಷ್ಯರಾಗಿ ಅವರಲ್ಲಿ 8 ವರ್ಷದ ಹುಡುಗಿ ನೃತ್ಯ ಕಲಿಯಲು ಆರಂಭಿಸಿ, ಅವರ ಮಾರ್ಗದರ್ಶನದಲ್ಲೇ ತನ್ನ `ರಂಗಪ್ರವೇಶ'ವನ್ನು ನೆರೀರಿಸಿಕೊಂಡು, ಸತತ ಮೂರು ದಶಕಗಳು ಅವರಲ್ಲಿ ನಾಟ್ಯ ಶಿಕ್ಷಣ ಪಡೆದು ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಗ್ಗಳಿಕೆ ಅವರದು.
ನೃತ್ಯಾಭ್ಯಾಸಕ್ಕೆ ನಾಂದಿ
ಮೂಲತಃ ದೀಪಾ, ಕೇರಳದವರಾದರೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಬದುಕು ಕಟ್ಟಿಕೊಂಡವರು. ಬಿ.ಇ.ಎಲ್ ಅಧಿಕಾರಿ ನಾರಾಯಣನ್ ನಾಯರ್ ಮತ್ತು ಶ್ರೀದೇವಿಯವರ ಮಗಳು. ಐದನೇ ವಯಸ್ಸಿಗೇ ಕಲಾಮಂಡಲಂ ಉಷಾ ದಾತಾರ್ ಮತ್ತು ಡಾ. ಸಾವಿತ್ರಿ ರಾಮಯ್ಯ ಅವರಲ್ಲಿ ಭರತನಾಟ್ಯ ಕಲಿತು 8ನೇ ವರ್ಷಕ್ಕೆ ಕೂಚಿಪುಡಿ ನೃತ್ಯಕೋವಿದೆ ಮಂಜುಭಾರ್ಗವಿಯವರ `ಪದ್ಮಾವತಿ ಕಲಾನಿಕೇತನ' ಸೇರಿ ಅವರ ಮೊದಲ ಶಿಷ್ಯೆ ಎನಿಸಿಕೊಂಡರು.
ಯಾವುದಾದರೂ ಒಂದು ನೃತ್ಯ ಶೈಲಿಯನ್ನು ಅನುಸರಿಸು ಎಂಬ ಅವರ ಸಲಹೆಯಂತೆ ದೀಪಾ, ಕೂಚಿಪುಡಿಯನ್ನು ಆಯ್ದುಕೊಂಡರು. ತಮ್ಮ 12ನೇ ವಯಸ್ಸಿನಲ್ಲಿ ಮಂಜುಭಾರ್ಗವಿಯವರೊಂದಿಗೆ ದೇಶಾದ್ಯಂತ ಸಂಚರಿಸಿ ನೂರಾರು ಪ್ರದರ್ಶನ ನೀಡಿದರು. ಗುರುಗಳ ಗರಡಿಯಲ್ಲಿ ಚೆನ್ನಾಗಿ ನುರಿತ ದೀಪಾ, ತಮ್ಮ 16ನೇ ವಯಸ್ಸಿಗೇ, ಇಂದಿನ ಕೆಲವು ಕೂಚಿಪುಡಿ ಖ್ಯಾತ ಕಲಾವಿದೆಯರಿಗೆ, ಹಲವು ವರ್ಷಗಳು ತಾವು ನಾಟ್ಯ ಶಿಕ್ಷಣ ನೀಡಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಇದುವರೆಗೂ ಒಬ್ಬರೇ ಗುರುಗಳಿಂದ ಶಿಕ್ಷಣ ಪಡೆದುದರಿಂದ ತಮ್ಮ ನೃತ್ಯಶೈಲಿ ಅಪ್ಪಟವಾಗಿ ಉಳಿದುಕೊಂಡು ಬಂದಿದೆ ಎನ್ನುವರು.

ವೃತ್ತಿ ಪ್ರವೃತ್ತಿ
ಸತತವಾಗಿ ನೃತ್ಯ ಪ್ರದರ್ಶನಗಳನ್ನು ನೀಡುತ್ತಲೇ ದೀಪಾ, ಕಾನೂನು ಪದವೀಧರೆಯಾಗಿ, ಜೊತೆಗೆ ಪಿ.ಜಿ.ಡಿ ಮಾಡಿ ಸಾಫ್ಟ್ ವೇರ್ ಇಂಡಸ್ಟ್ರಿಯಲ್ಲಿ ಎಚ್.ಆರ್.ಡಿ ತಜ್ಞರಾಗಿ ಅನೇಕ ಕಾರ್ಪೋರೆಟ್ ಕಂಪನಿಗಳಲ್ಲಿ ಉದ್ಯೋಗ ನಿರ್ವಹಿಸಿದ್ದಾರೆ. ಈಗಾಗಲೇ ಉದ್ಯೋಗರಂಗದಲ್ಲಿ 25 ವರ್ಷಗಳ ಅನುಭವ ಗಳಿಸಿ, ಕೈತುಂಬಾ ಸಂಪಾದನೆಯಿದ್ದರೂ ನೃತ್ಯದ ಒಲವಿನಿಂದ ಉದ್ಯೋಗವನ್ನು ತ್ಯಜಿಸಿ, ತಮ್ಮ ಭವಿಷ್ಯವನ್ನು ಸಂಪೂರ್ಣ ನೃತ್ಯ ಸೇವೆಗೆ ಮುಡಿಪಾಗಿಟ್ಟಿರುವ ವೈಶಿಷ್ಟ್ಯ ಅವರದು. ಮದುವೆಯಾಗಿ ಮಕ್ಕಳಾದರೂ ದೀಪಾ, ನೃತ್ಯ ಕೈಂಕರ್ಯ ಬಿಡಲಿಲ್ಲ.





