ಮತ್ಸರ ಅಥವಾ ಈರ್ಷ್ಯೆಯ ಭಾವನೆಯನ್ನು ಇತ್ತೀಚೆಗೆ ಮನೋವಿಜ್ಞಾನಿಗಳು ಹಾಗೂ ಸಮಾಜ ವಿಶ್ಲೇಷಕರು ಒಂದು ಹೊಸ ದೃಷ್ಟಿಕೋನದಿಂದ ನೋಡತೊಡಗಿದ್ದಾರೆ. ಅವರ ಸಂಶೋಧನೆಯ ಪ್ರಕಾರ, ಯಾರಾದರೂ ಇತರರ ಪ್ರಗತಿಯನ್ನು ಕಂಡು ಮತ್ಸರಪಟ್ಟರೆ ಗಾಬರಿಯಾಗುವ ಬದಲು, ಅದರ ಸಕಾರಾತ್ಮಕ ಪಕ್ಷವನ್ನು ಗಮನಿಸಿ. ಮತ್ಸರದಿಂದಾಗಿ ಪ್ರೇರಿತರಾಗಿ ತಮ್ಮ ದೆಸೆ ಸುಧಾರಿಸಲು ಯತ್ನಿಸಿದರೆ, ಪರಿಸ್ಥಿತಿ ತಾನಾಗಿ ಸುಧಾರಿಸುತ್ತದೆ. ಇದರ ಲಾಭ ಎಂದರೆ, ಈ ಮತ್ಸರ ಇನ್ನಷ್ಟು ಕುಗ್ಗಿಸುವ ಬದಲು ಖುಷಿಯ ಭಾವನೆ ಜಾಗೃತಗೊಳಿಸುತ್ತದೆ.
ಇನ್ನೊಬ್ಬರ ಪ್ರಗತಿ ಅಥವಾ ಯಶಸ್ಸು ಕಂಡು ನಾವು ಅವರಂತೆಯೇ ಆಗಬೇಕೆಂದು ಮತ್ಸರದಿಂದ ಕುದಿಯುತ್ತಾ ನೀವು ಹೆಚ್ಚು ಹೆಚ್ಚಾಗಿ ಪರಿಶ್ರಮಪಡುವ ಸಂಕಲ್ಪ ತೊಟ್ಟರೆ, ಈ ಮತ್ಸರ ನಿಮಗೆ ಒಳ್ಳೆಯದೇ ಮಾಡಿತಲ್ಲವೇ? ಇದು ನಿಮ್ಮ ಭವಿಷ್ಯಕ್ಕೆ ಶುಭ ಸಂಕೇತ ಹೌದು.
ಹೊಸ ಪ್ರಯೋಗ ಮಾಡಿ
ಯಾವುದೇ ಭಾವನೆಗಳನ್ನು ಕಂಟ್ರೋಲ್ ಮಾಡಲಾಗದು ಎಂಬುದು ನಿಜ. ಬದಲಿಗೆ ನಮ್ಮ ದೃಷ್ಟಿಕೋನವನ್ನಂತೂ ಬದಲಿಸಿಕೊಳ್ಳಬಹುದು ಅಲ್ಲವೇ? ಅಂದರೆ ನಮ್ಮ ದೃಷ್ಟಿಕೋನವನ್ನು ಸರಿಯಾದ ಫ್ರೇಮಿಗೆ ಹಾಕಿಕೊಂಡು ನಮ್ಮನ್ನು ಉತ್ತಮ ವಾತಾವರಣಕ್ಕಾಗಿ ತಯಾರಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬರಿದೇ ಹೊಟ್ಟೆ ಉರಿಯಿಂದ ಏನನ್ನೂ ಸಾಧಿಸಲಾಗದು. ಜೊತೆಗೆ ಹೃದಯ, ಲಿವರ್, ಅಧಿಕ ರಕ್ತದೊತ್ತಡ ಇತ್ಯಾದಿ ರೋಗಗಳೂ ಅಮರಿಕೊಳ್ಳುತ್ತವೆ.
ಸಮಯ ಸಂದರ್ಭ ನೋಡಿಕೊಂಡೂ ಸಹ ನಿಮ್ಮ ಮತ್ಸರದ ಲಾಭ ಪಡೆಯಬಹುದು. ಅಂದರೆ ವಿಶ್ವ ಹೊಸ ಹೊಸ ಪ್ರಯೋಗಗಳಿಂದ ಮುಂದುವರಿಯುತ್ತಿದೆ, ನೀವು ಸಹ ಹಾಗೇ ಮಾಡಿ. ಸಮಯ ಈಗ ಹೊಚ್ಚ ಹೊಸತನ, ತಾಜಾತನ ಬಯಸಿದರೆ, ನೀವು ಸಹ ಹಾಗೇ ಮಾಡುವುದರತ್ತ ಗಮನಹರಿಸಿ.
ಗುರಿ ಅಚಲವಾಗಲಿ
ಮನಸ್ಸಿನಲ್ಲಿ ಮತ್ಸರದ ಭಾವನೆ ಅಡಗಿದ್ದರೆ, ನಿಮ್ಮ ಗಮನವನ್ನು ಬೇರೆಡೆಗೆ ಹರಿಸುವುದರಿಂದ ನಿಜಕ್ಕೂ ಲಾಭವೇ ಆಗುತ್ತದೆ. ಈ ವಿಷಯದಲ್ಲಿ ಸೋಮಾರಿ, ಕೈಲಾಗದ ಜನ ಬರೀ ಚಿಂತಿಸುವುದರಲ್ಲೇ ಕಳೆದುಬಿಡುತ್ತಾರೆ, ತಮ್ಮ ಅದೃಷ್ಟ ಚೆನ್ನಾಗಿಲ್ಲವೆಂದು ವಿಧಿಯನ್ನು ಹಳಿಯುತ್ತಾರೆ. ಆದರೆ ಸರಿಯಾಗಿ ಯೋಚಿಸುವವರು ಹೀಗೆಲ್ಲ ಆಗಲು ಅವಕಾಶ ಕೊಡದೆ ಮನಸ್ಸನ್ನು ತುಸು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ತಕ್ಷಣ ತಮ್ಮ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ಯತ್ನಿಸುತ್ತಾರೆ. ತಮ್ಮದೇ ಒಂದು ಗುರಿ ಇರಿಸಿಕೊಂಡು ಅದನ್ನು ನೆರವೇರಿಸಿಕೊಳ್ಳಲು ಮತ್ಸರವನ್ನೂ ಒಂದು ಮೆಟ್ಟಿಲಾಗಿಸಿಕೊಳ್ಳುತ್ತಾರೆ.
ಹೀಗೆ ಅಸೂಯೆ ಸಹ ಸಕಾರಾತ್ಮಕ ಭಾವ ಹುಟ್ಟಿಸಿ ಮುಂದುವರಿದರೆ, ನಿಮ್ಮಲ್ಲಿ ಒಂದು ಹೊಸ ತರಂಗವನ್ನು ಕ್ರಿಯೇಟ್ ಮಾಡುವಂಥ ಹೊಸ ಹೊಸ ಕಥೆಗಳನ್ನು ಕೇಳಬೇಕು ಅಥವಾ ಓದಬೇಕು. ಇದು ನಿಮ್ಮ ಶಕ್ತಿಯನ್ನು ಎಷ್ಟೋ ಪಾಲು ಹೆಚ್ಚಿಸುತ್ತದೆ ಹಾಗೂ ನೀವು ಒಂದು ಒಳ್ಳೆಯ ಹೆಸರು, ಹುದ್ದೆ, ಸ್ಥಿತಿಗೇರಲು ಚಿಮ್ಮುವ ಹಲಗೆಯಾಗಿ ಸಹಕರಿಸುತ್ತದೆ.
ನೀವೇ ಲೆಕ್ಕಹಾಕಿ ನಿರ್ಧರಿಸಿ
ನಿಮಗೆ ನೀವೇ ಸ್ಪರ್ಧೆ ಒಡ್ಡಿಕೊಳ್ಳುವುದು ನಿಜಕ್ಕೂ ಉತ್ತಮ ಎನಿಸುತ್ತದೆ. ಅಂದರೆ ಪ್ರತಿದಿನ ಹಿಂದಿನ ದಿನಕ್ಕಿಂತ ಉತ್ತಮ ಉತ್ಪಾದನೆ ಮಾಡುತ್ತಿರಬೇಕು. ಇದಕ್ಕಾಗಿ ಒಂದು ಕ್ಯಾಲೆಂಡರ್ ಮಾಡಿಟ್ಟುಕೊಂಡರೆ ಲಾಭಕಾರಿ. ಜೊತೆಗೆ ನೀವೇ ನಿಮ್ಮ ಕುರಿತು ಸರಿಯಾಗಿ ಲೆಕ್ಕ ಹಾಕಿಕೊಳ್ಳಬೇಕು, ಆಗಾಗ ಈ ಕ್ಯಾಲೆಂಡರ್ ಗಮನಿಸುತ್ತಿರಬೇಕು. ಸಮಯದ ಚಕ್ರ ಮತ್ತು ಪ್ರಕೃತಿ ನಮಗೆ ಒಂದಕ್ಕಿಂತ ಒಂದು ಉತ್ತಮ ವ್ಯವಸ್ಥೆಗಳನ್ನು ಒದಗಿಸುತ್ತದೆ. ಈ ಕುರಿತಾಗಿ ನಾವು ಸರಿಯಾಗಿ ವಿಚಾರ ಮಾಡಬೇಕಷ್ಟೆ.
ನಿಮಗೆ ನೀವೇ ಹೀಗೆ ಸಲಹೆ ಕೊಟ್ಟು ವಿಮರ್ಶಿಸಿದರೆ, ನಿಮ್ಮೆಲ್ಲ ಕುಂದುಕೊರತೆಗಳೂ ನಿಮಗೆ ಸ್ಪಷ್ಟ ಅರ್ಥವಾಗುತ್ತದೆ. ನಿಮ್ಮ ಕೊರತೆಯನ್ನೇ ನಿಮ್ಮ ಸವಾಲನ್ನಾಗಿ ಎದುರಿಸಿದರೆ, ನಿಜಕ್ಕೂ ಅದು ಆತ್ಮವಿಶ್ವಾಸದ ಪ್ರತೀಕವಾಗುತ್ತದೆ. ಇದರಲ್ಲಿ ಸ್ವಲ್ಪವೂ ಹಿಂಜರಿಕೆ ಬೇಡ. ನಿಮ್ಮ ದೂರು, ಕೋಪ, ಸಿಟ್ಟುಸೆಡವು ಬಿಟ್ಟು ಸಂಭವನೀಯತೆಗಳನ್ನು ಜಾಗೃತಗೊಳಿಸಿ, ಜೀವನವನ್ನು ಹಸನಾಗಿಸಿ!
– ಪಿ. ಪೂರ್ಣಿಮಾ