ರಾತ್ರಿ 10 ಗಂಟೆ ದಾಟಿತ್ತು.. ಕಾವೇರಿ ಮತ್ತು ಅವಳ ಪತಿ ಸೋಮೇಶ್‌ ಮಲಗುವ ತಯಾರಿ ನಡೆಸಿದ್ದರು. ಅಷ್ಟರಲ್ಲಿ ಕರೆಗಂಟೆಯ ಸದ್ದಾಯಿತು. ಕಾವೇರಿ ಕಿಟಕಿಯಲ್ಲಿ ಇಣುಕಿ ನೋಡಿದಾಗ, ಮಗಳು ಮಿನ್ನಿಯ ಬೆಸ್ಟ್ ಫ್ರೆಂಡ್‌ ತನುಜಾ ಮತ್ತು ಅವಳ ತಾಯಿ ತಂದೆಯರಾದ ರವಿಶಂಕರ್‌ ಹಾಗೂ ಅಂಜನಾ ನಿಂತಿರುವುದನ್ನು ಖಾತ್ರಿಪಡಿಸಿಕೊಂಡು, ನಂತರ ಬಾಗಿಲು ತೆರೆದಳು.

ಸೋಮೇಶ್‌ ದಂಪತಿಗಳು ಅವರನ್ನು ಸ್ವಾಗತಿಸಿ ಹಾಲ್‌ನಲ್ಲಿ ಕೂರಿಸಿ, ವಿಚಾರಿಸಿಕೊಂಡರು. ಮಿನಿ ಮತ್ತು ತನುಜಾ ಒಟ್ಟಿಗೆ ಸಿ.ಎ ಕಲಿಯುತ್ತಿದ್ದರು. 10 ದಿನಗಳ ನಂತರ ಇವರ ಪರೀಕ್ಷೆ ಇತ್ತು. ರವಿಶಂಕರ್‌ಸಹ ನಗರದ ಖ್ಯಾತ ಆಡಿಟರ್‌ ಎನಿಸಿದ್ದರು.

ಚಳಿಯಲ್ಲಿ ಬಂದವರಿಗೆ ಒಂದಿಷ್ಟು ಕಾಫಿ ಕೊಟ್ಟು ಲೋಕಾಭಿರಾಮವಾಗಿ ಬಂದವರನ್ನು ವಿಚಾರಿಸಿಕೊಂಡರು. ಆಗ ರವಿ ಕೇಳಿದರು, “ಮಿನಿ, ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸಿದ್ದಿ ತಾನೇ ಕಣಮ್ಮ……”

“ಹ್ಞೂಂ ಅಂಕಲ್, ಒಂದೇ ಒಂದು ಚಾಪ್ಟರ್‌ನಲ್ಲಿ ಮಾತ್ರ ಸ್ವಲ್ಪ ಕನ್‌ಫ್ಯೂಷನ್‌, ಇದೆ ಅಷ್ಟೆ.”

“ಹೌದಾ….? ಎಲ್ಲಿ ತೋರಿಸಮ್ಮ, ಹೇಗೂ ಇಷ್ಟು ದೂರ ಬಂದಿರುವಾಗ ಸ್ವಲ್ಪ ಕ್ಲಿಯರ್‌ ಮಾಡಿಯೇ ಹೊರಡುತ್ತೀನಿ,” ಎಂದರು.

“ಥ್ಯಾಂಕ್ಸ್ ಅಂಕಲ್….. ಈಗ್ಲೇ ಬುಕ್ಸ್ ತರ್ತೀನಿ ಇರಿ,” ಎಂದು ಉತ್ಸಾಹದಿಂದ ಒಳನಡೆದಳು. ತನುಜಾ ಸಹ ಅವಳ ಕೋಣೆಗೆ ಹೋದಳು.

ಅಷ್ಟರಲ್ಲಿ ಅಂಜನಾ, “ಇರಲಿ ಬಿಡಿ, ಈಗಾಗಲೇ 10.20 ಆಯ್ತು. ಪಾಠ ಹೇಳುವಷ್ಟರಲ್ಲಿ ಇನ್ನೂ ತಡ ಆಗಬಹುದು. ಅದಲ್ಲದೆ ಮಿನಿಯಂಥ ಬ್ರೈಟ್‌ ಸ್ಟೂಡೆಂಟ್‌ಗೆ ಇದೆಷ್ಟು ಮಹಾ ಕಷ್ಟ?” ಎಂದಳು.

“ನೀನು ಕಾಫಿ ಕುಡಿಯುತ್ತಾ ಕಾವೇರಿಯವರ ಜೊತೆ ಮಾತನಾಡುತ್ತಿರು. ಅಷ್ಟರಲ್ಲಿ ನಾನು ಮಕ್ಕಳ ಡೌಟ್ಸ್ ಕ್ಲಿಯರ್‌ಮಾಡಿರ್ತೀನಿ,” ಎಂದರು.

ಮಿನಿ ಅಲ್ಲಿಗೆ ಬುಕ್ಸ್ ತಂದಾಗ ಅಂಜನಾ, “ನಾವಿಲ್ಲೇ ಕುಳಿತು ಕಾಫಿ ಕುಡಿಯುತ್ತೇವೆ. ನೀವು ಫ್ರೆಂಡ್ಸ್ ತುಸು ಒಳಗೆ ಹೋಗಿ ಪಾಠ ನೋಡಿ,” ಎಂದಳು.

ರವಿ ಗಂಭೀರವಾಗಿ, “ಇರಲಿ ಬಾಮ್ಮ ಮಿನಿ, ನೀನು ಬುಕ್ಸ್ ಕೊಡು. ಈ ಕಾಡುಹರಟೆಯಲ್ಲಿ ಏನೂ ಸ್ವಾರಸ್ಯವಿಲ್ಲ,” ಎಂದರು.

ಹೆಡೆ ಎತ್ತುವ ಸ್ವಾರ್ಥ

ಹೀಗೆ ಅಂಜನಾ ತನ್ನ ಪತಿ ಕಾವೇರಿ ಮಗಳು ಮಿನಿಗೆ ಪಾಠ ಹೇಳಿಕೊಡಬಾರದು ಎಂದು ಅದನ್ನು ತಪ್ಪಿಸಲು ನಿರರ್ಥಕ ಮಾತುಗಳ ಮೂಲಕ ಪ್ರಯತ್ನಿಸುತ್ತಿದ್ದಳು. ಅಲ್ಲಿ ವಿಚಿತ್ರ ವಾತಾರಣ ನಿರ್ಮಾಣವಾಗಿತ್ತು. ಪತಿ ತನಗೆ ಗೊತ್ತಿದ್ದನ್ನು ಮಕ್ಕಳಿಗೆ ಕಲಿಸೋಣ ಎಂದು ಪ್ರಯತ್ನಿಸುತ್ತಿದ್ದರೆ, ಪತ್ನಿ ಅದಕ್ಕೆ ಕಲ್ಲು ಹಾಕುತ್ತಿದ್ದಳು. ಕಾವೇರಿ ದಂಪತಿಗಳು ಪರಸ್ಪರ ಮುಖ ನೋಡಿಕೊಂಡರು. ತಾಯಿಯ ವರ್ತನೆಯಿಂದಾಗಿ ಗೆಳತಿ ಎದುರು ತನುಜಾಳಿಗೂ ಸಂಕೋಚವಾಯಿತು.

ಹೆಂಡತಿಯ ಮಾತಿಗೆ ಮಹತ್ವ ಕೊಡದೆ ರವಿಶಂಕರ್‌, ಆ ಮಕ್ಕಳಿಬ್ಬರ ಓದಿಗೆ ನೆರವಾಗತೊಡಗಿದರು. ಅಂತೂ 15 ನಿಮಿಷದಲ್ಲಿ ಕಾಫಿ, ಮಾತುಕಥೆ ಮುಗಿಯಿತು ಎಂಬಂತೆ ಅಂಜನಾ, “ನಡೆಯಿರಿ….. ಹೊರಡೋಣ ಈಗಾಗಲೇ ತಡವಾಗಿದೆ….” ಎಂದು ಹೇಳಿದಳು.

“ಇರು ಅಂಜೂ…. ಇನ್ನೂ ಸ್ವಲ್ಪ ಟೈಂ ಆಗುತ್ತೆ. ನೀವೆಲ್ಲ ಒಳಗೆ ಕುಳಿತು ಸ್ವಲ್ಪ ಹೊತ್ತು ಟಿ.ವಿ ನೋಡುತ್ತಿರಿ,” ಎಂದರು ರವಿ.

“ಇಲ್ಲ ಇಲ್ಲ…. ನಂಗೆ ನಿದ್ದೆ ಬರ್ತಿದೆ,” ಎಂದು ಕೃತಕವಾಗಿ ಆಕಳಿಸಿದಳು. ರವಿ ಮಿನಿಗೆ ಪಾಠ ಹೇಳುವುದನ್ನು ಇನ್ನು ಅವಳು ಸಹಿಸದಾದಳು.

ಅಷ್ಟರಲ್ಲಿ ಅವಳ ಮಗಳಾದ ತನುಜಾ, “ಅಮ್ಮ ಸ್ವಲ್ಪ ಹೊತ್ತು ಇರು. ಇನ್ನೊಂದು 10 ನಿಮಿಷದಲ್ಲಿ ಎಲ್ಲಾ ಮುಗಿಯುತ್ತೆ,” ಎಂದು ವಿನಂತಿಸಿಕೊಂಡಳು.

“ಇಲ್ಲ ಇಲ್ಲ… ಬಹಳ ತಡವಾಯ್ತು. ನಡೆಯಿರಿ ಹೊರಡೋಣ,” ಎಂದು ಪಟ್ಟು ಬಿಡದೆ ವಾದಿಸಿದಳು.

ಆಗ ತನುಜಾ ತುಸು ಸಿಡುಕುತ್ತಾ, “ಏನಮ್ಮ ನೀನು, ಬೋರ್‌ ಆಗುತ್ತಿದೆ ಹೊರಡೋಣ ಎಂದು ಮನೆಯಿಂದ ಹೊರಡಿಸಿ ಇಲ್ಲಿಯವರೆಗೆ ಕರೆತಂದು ಈಗ ಸಾರ್ಥಕ ಕೆಲಸ ಆಗುತ್ತಿರುವಾಗ ಅಡ್ಡಿಪಡಿಸಿದರೆ ಹೇಗೆ? ತುಸು ಸಮಾಧಾನದಿಂದ 10 ನಿಮಿಷ ಒಳಗೆ ಕೂತಿರಬಾರದೇ? ಅಪ್ಪ ಚೆನ್ನಾಗಿ ಎಕ್ಸ್ ಪ್ಲೇನ್‌ ಮಾಡ್ತಿದ್ದಾರೆ, ನಿಜಕ್ಕೂ ಟಫ್‌ಚಾಪ್ಟರ್‌ಇದು. ಮಿನಿಗೂ ಎಷ್ಟೋ ಹೆಲ್ಪ್ ಆಗುತ್ತೆ. ಸ್ವಲ್ಪ ಇರಮ್ಮ…..” ಎಂದಳು.

“ಅದೆಲ್ಲ ಬೇಡ…. ನಡಿ. ಇನ್ನೊಮ್ಮೆ ಬಂದರಾಯಿತು. ಮಿನಿಯಂಥ ಬ್ರೈಟ್‌ಸ್ಟೂಡೆಂಟ್‌ಗೆ ಇದೇನೂ ಕಷ್ಟವಲ್ಲ. ಅವಳಂತೂ 10ನೇ, ಪಿ.ಯು.ಸಿ.ನಲ್ಲೂ  ನಿನಗಿಂತ ಟಾಪ್‌ಮಾರ್ಕ್ಸ್ ತೆಗೆದಿದ್ದಾಳೆ,” ಎಂದು ಹೂಂಕರಿಸಿದಳು. ಇದನ್ನು ಕೇಳಿ ಕಾವೇರಿಗೆ ನಿಜಕ್ಕೂ ಪಿಚ್ಚೆನಿಸಿತು. `ಅಬ್ಬಾ! ಈ ಹೆಂಗಸು, ಏನೆಲ್ಲ ತಲೆಯಲ್ಲಿ ತುಂಬಿಕೊಂಡಿದೆ,’ ಎಂದುಕೊಂಡಳು. ಈ ಮಾತುಗಳಿಂದ ಅಂಜನಾಳ ಮನದಲ್ಲಿ ಎಷ್ಟು ಮತ್ಸರ ತುಂಬಿಕೊಂಡಿದೆ ಎಂಬುದು ಸ್ಪಷ್ಟ ಕಾಣಿಸುತ್ತಿತ್ತು. ಒಂದೇ ಕಡೆ ಓದು ಸಹಪಾಠಿಗಳೆಂದ ಮೇಲೆ ಮಾರ್ಕ್ಸ್ ನಲ್ಲಿ ತುಸು ಹೆಚ್ಚು ಕಡಿಮೆ ಇರುವುದಿಲ್ಲವೇ?

ಅಂಜನಾ ಎದ್ದು ಬಾಗಿಲ ಬಳಿ ಹೋಗಿ ನಿಂತಾಗ, ವಿಧಿಯಿಲ್ಲದೆ ರವಿಶಂಕರ್‌, ತನುಜಾ ಸಹ ಏಳಲೇಬೇಕಾಯಿತು. ಆಕೆಯ ಈ ಮತ್ಸರದ ವರ್ತನೆಯಿಂದ ತಂದೆ ಮಗಳು ತಲೆ ತಗ್ಗಿಸುವಂತಾಗಿತ್ತು. ಮೂರೂ ಹೊರಟ ನಂತರ ಮಿನಿ ಪೆಚ್ಚುಮೋರೆ ಹಾಕಿಕೊಂಡು, “ಅಂಕಲ್‌ಗೆ ಈ ವಿಷಯದಲ್ಲಿ ತುಂಬಾ ನಾಲೆಜ್‌ ಇದೆ. ಎಷ್ಟು ಚೆನ್ನಾಗಿ ವಿವರಿಸುತ್ತಿದ್ದರು…. ಇನ್ನೂ ಸ್ವಲ್ಪ ಹೊತ್ತು ಇದ್ದಿದ್ದರೆ ಪೂರ್ತಿ ಚಾಪ್ಟರ್‌ ಮುಗಿಯುತ್ತಿತ್ತು….” ಎಂದಳು.

ಕಾವೇರಿ ಮಗಳನ್ನು ಸಮಾಧಾನಿಸುತ್ತಾ, “ಹೋಗಲಿ ಬಿಡಮ್ಮ, ಅಂಕಲ್ ಯಾವಾಗ ಫ್ರೀ ಇರ್ತಾರೆ ಕೇಳಿಕೊಂಡು ಅವರ ಮನೆಗೇ ಹೋಗು ಅಥವಾ ಫೋನಿನಲ್ಲೇ ವಿಚಾರಿಸಿಕೋ,” ಎಂದಳು.

“ಅಲ್ಲಿಗೆ ಹೋಗುವುದರಿಂದ ಲಾಭ ಇಲ್ಲಮ್ಮ. ಆಂಟಿ ಅಲ್ಲಿಯೂ ಕಿರಿಕಿರಿ ಮಾಡದೆ ಬಿಡುವುದಿಲ್ಲ. ಅವರು ಫ್ರೀ ಇರುವಾಗ ಫೋನಿನಲ್ಲೇ ವಿಚಾರಿಸ್ತೀನಿ.”

ಕಾವೇರಿ ಸೋಮೇಶ್‌ಮಗಳಿಗೆ ಇನ್ನಷ್ಟು ಸಮಾಧಾನವೇನೋ ಹೇಳಿದರು. ಆದರೆ ಅವರಿಗೆ ತೀರಾ ಬೇಸರವಾಗಿತ್ತು. ಎರಡು ಕುಟುಂಬಗಳ ಸುದೀರ್ಘ ಸ್ನೇಹಕ್ಕೆ ಅಂಜನಾಳ ಮಾತು ಕತ್ತರಿ ಹಾಕಿತ್ತು. ಕಾವೇರಿಗಂತೂ ನಿದ್ರಿಸುವವರೆಗೂ ಚಿಂತೆ ತಪ್ಪಲಿಲ್ಲ. ರವಿ ತಮ್ಮ ಮಗಳಿಗೆ ತುಸು ಸಹಾಯ ಮಾಡಿದ ಮಾತ್ರಕ್ಕೆ ಅಂಜನಾ ಅಷ್ಟೊಂದು ಅಸೂಯೆ ಪಡಬೇಕೇ? ಅಂಜನಾಳ ಸ್ವಾರ್ಥ ತಮ್ಮ ಸುದೀರ್ಘ ಸ್ನೇಹ ಗಾಳಿಗೆ ತೂರುವಷ್ಟು ಪ್ರಬಲವೇ? ಮನುಷ್ಯತ್ವದ ಮೂಲಭೂತ ಗುಣಗಳಾದ ಪರರಿಗೆ ಸಹಾಯ ಮಾಡುವಿಕೆ ಸ್ವಾರ್ಥ ದೃಷ್ಟಿಗೆ ಅಂಥ ಘೋರ ಅಪರಾಧ ಎನಿಸಿದೆಯೇ?

ಇದರಿಂದ ಮುಕ್ತಿ ಪಡೆಯಿರಿ

ತನುಜಾಳಿಗಂತೂ ತನ್ನ ತಾಯಿಯ ವ್ಯವಹಾರದಿಂದ ಸ್ನೇಹಿತೆ ಮನೆಯಲ್ಲಿ ಅವಳ ಪೋಷಕರೆದುರು ತಲೆ ತಗ್ಗಿಸುವಂತಾಗಿತ್ತು. ರವಿಶಂಕರ್‌ಗಂತೂ ಹೆಂಡತಿಯ ವರ್ತನೆಯಿಂದ ಬಹಳ ದುಃಖವಾಗಿತ್ತು. ಸ್ನೇಹಿತನ ಮನೆಯಲ್ಲಿ ಎಲ್ಲರೆದುರು ಸಹಾಯ ಮಾಡುತ್ತೇನೆಂದು ಹೋಗಿ ಹೀಗೆ ನಡುವೆ ಬಿಟ್ಟುಬರುವುದೇ? ಅಂಜನಾಳ ಮನಸ್ಸೇಕೆ ಇಷ್ಟು ಕುಗ್ಗಿಹೋಗಿದೆ? ತನ್ನ ಮಗಳ ಆಪ್ತ ಗೆಳತಿಗೆ ಸಹಾಯ ಮಾಡಬಾರದೆನ್ನುವಷ್ಟು ಸ್ವಾರ್ಥ ಹೆಡೆ ಎತ್ತಿದೆಯೇ?

ಮಾನಸಿಕ ವಿಚಾರಕ್ಕೆ ಸಂಬಂಧಿಸಿದ ಇತ್ತೀಚಿನ ಸಂಶೋಧನೆಗಳ ಪ್ರಕಾರ, ಜನರಲ್ಲಿ ಅಸೂಯೆ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಅವರಲ್ಲಿ ಟೆನ್ಶನ್‌ ಹೆಚ್ಚುತ್ತಿದೆ. ಈ ತರಹದ ಅಸೂಯೆಯ ಭಾವನೆ ಕಾರ್ಯಕ್ಷೇತ್ರ, ಕುಟುಂಬ, ಗೆಳೆತನ, ರೊಮಾನ್ಸ್ ಎಲ್ಲಿ ಬೇಕಾದರೂ ಕಾಣಿಸಬಹುದು. ಅಸೂಯೆ ನಿಮ್ಮ ಮನಸ್ಸಿನ ಶಾಂತಿಯನ್ನೇ ಕದಡುವಂತಾಗಬಾರದು. ಆದ್ದರಿಂದ ನಿಮ್ಮ ಮನದಲ್ಲಿ ಅಸೂಯೆಯ ಭಾವನೆ ಇಣುಕಿದ ತಕ್ಷಣ ಅದನ್ನು ಕಿತ್ತೆಸೆಯಲು ಪ್ರಯತ್ನಿಸಿ. ಇಂದು ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಫೇಸ್‌ ಬುಕ್‌ ಇತ್ಯಾದಿಗಳಲ್ಲಿ ನಮ್ಮ ಪರಿಚಿತರು, ನೆಂಟರಿಷ್ಟರು ದೊಡ್ಡ ಹೋಟೆಲ್, ಮಾಲ್‌ಗಳಲ್ಲಿ ಮಜಾ ಮಾಡುತ್ತಿದ್ದರೆ, ವಿಭಿನ್ನ ಊರುಗಳಲ್ಲಿ ಪ್ರವಾಸ ಹೊರಟಿರುವ ಫೋಟೋ ನೋಡಿದರೆ ನಾವು ಅರಿಯದೆಯೇ ಅಸೂಯೆಗೆ ಒಳಗಾಗುತ್ತೇವೆ.

ಜೂಡಿತ್‌ ಮತ್ತು ಲಾಫ್‌ ತಮ್ಮ `ಎಮೋಶನ್‌ಫ್ರೀಡಮ್’ ಪುಸ್ತಕದಲ್ಲಿ ಒಂದೆಡೆ ಹೇಳುತ್ತಾರೆ, ಯಾರಿಗೂ ನಮ್ಮನ್ನು ನಾವು ಹೋಲಿಸಿಕೊಳ್ಳಲು ಹೋಗಬಾರದು. `ಯಾಕೋ ಏನೋ’ ತಮ್ಮ ಜಪಾನೀ ಕೃತಿಯಲ್ಲಿ, ಅಸೂಯೆಯನ್ನು ಹೊಗಳಿಕೆಯ ಮಾತುಗಳಾಗಿ ಬದಲಾಯಿಸಿ. ಆಗ ಆ ಹೊಗಳಿಕೆಯ ನುಡಿಗಳು ನಿಮ್ಮ ಜೀವನದಲ್ಲಿ ವಿಶೇಷ ಪಾತ್ರ ವಹಿಸಲಿವೆ. ಯಾವ ವ್ಯಕ್ತಿಯ ಬಗ್ಗೆ ನಿಮಗೆ ಕಿರಿಕಿರಿ ಎನಿಸುತ್ತದೋ, ಆಗ ಆ ವ್ಯಕ್ತಿ ಬಗ್ಗೆ ಅಸೂಯೆ ಉಂಟಾದರೆ ಅದನ್ನು ನಮ್ರತೆಯ ರೂಪದಲ್ಲಿ ಬದಲಾಯಿಸಿ. ಮುಂದೆ ಯಾರ ಜೊತೆಯೂ ನಿಮ್ಮನ್ನು ಹೋಲಿಸಿಕೊಳ್ಳಲು ಹೋಗದಿರಿ.

ಸ್ವಾರ್ಥಿ ಆಗಬೇಡಿ

ನಾವು ನಮ್ಮ ಈಗೋ, ಸ್ವಾರ್ಥ, ಅಸೂಯೆಗಳಂಥ ನೆಗೆಟಿವ್ ಭಾವನೆಗಳನ್ನು ಒಂದು ಬದಿಗಿರಿಸಿ, ಅದರ ಬದಲಿಗೆ ಪರೋಪಕಾರಿ ಎನಿಸಿದರೆ, ಅದರಿಂದ ನಮಗಾಗುವ ನಷ್ಟವಾದರೂ ಏನು? ಆತ್ಮವಿಶ್ವಾಸವುಳ್ಳ ವ್ಯಕ್ತಿಗಳೆಂದೂ ತಮ್ಮ ಜೀವನದಲ್ಲಿ ಸ್ವಾರ್ಥ, ಅಸೂಯೆಗಳಿಗೆ ಜಾಗ ಕೊಡುವುದಿಲ್ಲ.

ರಾಷ್ಟ್ರೀಯ ಖ್ಯಾತಿವೆತ್ತ ಪಾರೂಲ್‌ ಸೆಹಗಲ್ ತಮ್ಮ ಆನ್‌ಲೈನ್‌ ಶೋನಲ್ಲಿ ಹೇಳುತ್ತಾರೆ, “ಅಸೂಯೆ ಎಂಬುದು ಮಾನವನ ಬುದ್ಧಿಶಕ್ತಿಯನ್ನು ಮಂದ ಮಾಡುತ್ತದೆ. ಅಸೂಯೆ ಬಿಟ್ಟು ದೂರವಿರಲು ಆದಷ್ಟು ಸೋಶಿಯಲ್ ನೆಟ್‌ವರ್ಕ್‌ಸಹವಾಸ ತ್ಯಜಿಸಿರಿ. ಫೇಸ್‌ಬುಕ್‌ ಅಪ್‌ ಡೇಟ್ಸ್, ಟ್ವೀಟ್ಸ್, ಇನ್‌ಸ್ಟಾಗ್ರಾಂನ ಎಷ್ಟೋ ಪೋಸ್ಟ್ ಗಳು ನಿಮ್ಮ ಅಸೂಯೆ ಕೆರಳಿಸಲು ಕಾರಣವಾಗುತ್ತವೆ.”

`ರೆಬೆಕಾ ರೆಮೆರ್ಸನ್‌’ ತಮ್ಮ `ಡೋಂಟ್‌ ಎನ್ವಿ ಮೀ’ ಲೇಖನದಲ್ಲಿ ಹೇಳಿರುವ ವಿಚಾರಗಳು ಸಾಕಷ್ಟು ವೈರಲ್ ಆಗಿ ಮನ್ನಣೆ ಗಳಿಸಿದೆ. ಅದರಲ್ಲಿ ನಮಗೆ ಸದಾ ಇನ್ನೊಬ್ಬರ ಜೀವನ ಸುಖಮಯ ಎನಿಸುತ್ತದೆ. ನಮಗಿಂತ ಬೇರೆಯವರೆಲ್ಲ ಸುಖವಾಗಿದ್ದಾರೆ ಎಂದೇ ಅನಿಸುತ್ತದೆ. ಸ್ವಾರ್ಥ, ಅಸೂಯೆಗಳು ಎಂಥ ಆತ್ಮೀಯ ಸಂಬಂಧವನ್ನೂ ಕ್ಷಣಾರ್ಧದಲ್ಲಿ  ಕೆಡಿಸಬಲ್ಲವು. ಈ ಗುಣಗಳು ನಮ್ಮಲ್ಲಿ ನಕಾರಾತ್ಮಕ ಭಾವನೆಗಳನ್ನು ಹೆಚ್ಚಿಸುತ್ತವೆ. ಅದರಿಂದ ನಾವು ನಮ್ಮ ದೃಷ್ಟಿಯಲ್ಲೇ ಕುಗ್ಗುತ್ತೇವೆ. ಇದರಿಂದ ನಮ್ಮ ಜೀವನದ ದೃಷ್ಟಿಕೋನ ತೀವ್ರ ಪ್ರಭಾವಿತಗೊಳ್ಳುತ್ತದೆ. ಹೀಗಾಗಿ ಅಸೂಯೆ, ಸ್ವಾರ್ಥಗಳಂಥ ದುರ್ಗುಣಗಳಿಂದ ಸದಾ ದೂರವಿರಿ.   – ಎಚ್‌. ಪೂರ್ಣಿಮಾ

Tags:
COMMENT