ಮನೆಯ ಹಿಂಭಾಗಕ್ಕೆ ಹೋಗಿ ಒಂದಿಷ್ಟು ಕೊ.ಸೊಪ್ಪು ಕಿತ್ತುಕೊಂಡು ಬರೋಣ ಎಂದು ನೋಡಿದರೆ, ಅಲ್ಲಿ ಕಾಂಪೌಂಡ್ ಸಂಧಿಯಲ್ಲಿ ಹಾಗಲಬಳ್ಳಿ ಹಬ್ಬಿತ್ತು! ಜೊತೆಗೆ ಮೂಲೆಯಲ್ಲಿದ್ದ ಪಾಟ್‌ನಲ್ಲಿ ಬೆಳ್ಳುಳ್ಳಿ ಗಿಡ ಮೊಳಕೆ ಒಡೆದಿತ್ತು. ನನಗಂತೂ ಆಶ್ಚರ್ಯವಾಗಿತ್ತು!
ಅತ್ತ ನಾನು ಹಾಗಲಬೀಜ ನೆಟ್ಟಿರಲಿಲ್ಲ, ಇತ್ತ ಬೆಳ್ಳುಳ್ಳಿ ಗಿಡಕ್ಕೆ ಪ್ರಯತ್ನಿಸಿರಲಿಲ್ಲ… ಆದರೂ ಇವೆರಡೂ ಬಂದದ್ದು ಹೇಗೆ?
ನಾನು ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿರುವುದನ್ನು ಕಂಡು ನಮ್ಮ ಅಡುಗೆ ಭಟ್ಟರು, “ಮೇಡಂ, ನಾನೇ ಅವನ್ನು ಅಲ್ಲಿ ಹಾಕಿದ್ದೆ. ಅಸಲಿಗೆ ನಾನು ಅಡುಗೆಮನೆಯಲ್ಲಿ ಹಣ್ಣು ತರಕಾರಿ ಹೆಚ್ಚುತ್ತಿರುತ್ತೇನೆ. ಆಗ ಅದರ ತುದಿ, ಬುಡ ಕತ್ತರಿಸಿ, ಬೀಜ ಬೇರ್ಪಡಿಸಿ ಅಲ್ಲಿನಿಂದ ಹಿತ್ತಲಿಗೆ ಎಸೆದಿರುತ್ತೇನೆ. ಕಸ ಎಂದು ಎಸೆಯುವ ಬದಲು ಹಿತ್ತಲಿಗೆ ಎಸೆದಿದ್ದರಿಂದ ಈ ರೀತಿ ಮೊಳಕೆ ಒಡೆದು ಸಸಿ, ಬಳ್ಳಿ ಬಂದಿದೆ,” ಎಂದರು.
ಬನ್ನಿ, ಈ ರೀತಿ ತರಕಾರಿ ಹಣ್ಣುಗಳ ಭಾಗ ಕತ್ತರಿಸಿ ಅದನ್ನು ಹಿತ್ತಲ ನೆಲ, ಪಾಟ್, ಬಕೆಟ್, ಹಳೆಯ ಟಬ್ಬುಗಳಿಗೆ ಎಸೆಯುವುದರಿಂದ ಹೊಸ ಗಿಡ ಹೇಗೆ ಪಡೆಯಬಹುದೆಂದು ಯೋಚಿಸೋಣ.
ಶುಂಠಿ : ಗುಣಗಳ ಗಣಿ ಎನಿಸಿರುವ ಶುಂಠಿಯನ್ನು ಎಲ್ಲರೂ ಬಳಸುತ್ತಾರೆ. ಇದನ್ನು ಹೆಚ್ಚುವಾಗ ಸಾಮಾನ್ಯವಾಗಿ ನಾವು ಅದರ ಗಂಟಿನ ಭಾಗ ಎಸೆಯುತ್ತೇವೆ. ಒಮ್ಮೊಮ್ಮೆ ತುಸು ಚೆನ್ನಾಗಿಲ್ಲದ ಅಂಚಿನ ಭಾಗ ಸಹ ಬಿಸಾಡುತ್ತೇವೆ. ಈ ಗಂಟಿನ ಭಾಗವನ್ನು ಬಿಸಾಡದೆ, ಪಾಟ್‌ನಲ್ಲಿ ಹೂತಿಡಿ. ಕೆಲವೇ ದಿನಗಳಲ್ಲಿ ಶುಂಠಿಯ ಸುಂದರ ಸಸಿ ಮೊಳಕೆಯೊಡೆದಿರುತ್ತದೆ. ಗಿಡ ಬೆಳೆದು ಅಲಂಕಾರಿಕವಾಗಿಯೂ ರಂಜಿಸುತ್ತದೆ.
ಕ್ಯಾರೆಟ್ : ನಾವು ಕ್ಯಾರೆಟ್ ಹೆಚ್ಚುವಾಗ ಮೇಲ್ಭಾಗದ ಗಟ್ಟಿ ಸಿಪ್ಪೆಯನ್ನು ಎಸೆದುಬಿಡುತ್ತೇವೆ. ಈ ಭಾಗವನ್ನು ತುಸು ದಪ್ಪಗೆ ಕತ್ತರಿಸಿ, ಬಿಸಾಡುವ ಬದಲು ಫಲವತ್ತಾದ ಮಣ್ಣಿರುವ ಭಾಗದಲ್ಲಿ ಹೂತಿಟ್ಟು, 2-3 ದಿನ ಅಗತ್ಯಕ್ಕೆ ತಕ್ಕಷ್ಟು ನೀರು ಚಿಮುಕಿಸುತ್ತಾ ಆರೈಕೆ ಮಾಡಿದರೆ ವಾರ ಕಳೆಯುವಷ್ಟರಲ್ಲಿ ಮೊಳಕೊಡೆದು ಸಸಿ ಬರುತ್ತದೆ. ಅಂಗಳದ ಅಲಂಕಾರ ಹೆಚ್ಚಿಸುವ ಈ ಗಿಡ ಕೆಲವೇ ದಿನಗಳಲ್ಲಿ ಕ್ಯಾರೆಟ್ ನೀಡಲಾರಂಭಿಸುತ್ತದೆ. ಹೆಚ್ಚಲ್ಲದಿದ್ದರೂ ಸಲಾಡ್, ಕೋಸಂಬರಿಗೆ ಸಾಕಾಗುವಷ್ಟು ಬೆಳೆಯಬಹುದು. ಟೊಮೇಟೋ : ಸಾಮಾನ್ಯವಾಗಿ ಟೊಮೇಟೊ ಕೊಳೆತಿದೆ ಎಂದು ನಾವು ಬೇಗನೆ ಅದನ್ನು ಬಿಸಾಡುತ್ತೇವೆ. ಹಾಗೆ ಮಾಡಬೇಡಿ. ಸಂದೇಹ ಬಂದ ಹಣ್ಣುಗಳನ್ನು ಒಂದು ಕಡೆ ಇರಿಸಿ, ಒಣಗಿಸಿ, ಆ ಬೀಜಗಳನ್ನು ಮಣ್ಣಲ್ಲಿ ನೆಡಬೇಕು. ಕೆಲವೇ ದಿನಗಳಲ್ಲಿ ಈ ಹಸಿರು ಗಿಡ ಕಂಪು ಬೀರುತ್ತಾ ಬೆಳೆಯುತ್ತದೆ. ಇದು ದೊಡ್ಡದಾದಂತೆ ಉದ್ದದ ಬಿದಿರಿನ ಕಡ್ಡಿಗಳನ್ನು ಸಿಗಿಸಿ, ಆಸರೆ ನೀಡಿ. ಆಮೇಲೆ ಕೆಂಪು ಟೊಮೇಟೋ ಹಣ್ಣು ಗಿಡದ ತುಂಬಾ ತುಂಬಿಕೊಂಡು ಕಣ್ಣಿಗೆ ಹಬ್ಬವೆನಿಸುತ್ತದೆ.
ಕ್ಯಾಪ್ಸಿಕಂ : ಇದನ್ನು ನೀವು ಯಾವುದೇ ಹಳೆಯ ಮುರುಕಲು ಬಕೆಟ್, ಟಬ್‌ಗಳಲ್ಲಿ (ಕೆಳ ಭಾಗದಲ್ಲಿ ಅಗಲ ರಂಧ್ರ ಕೊರೆದು) ಮಣ್ಣು ತುಂಬಿಸಿ ಸುಲಭವಾಗಿ ಬೆಳೆಯಬಹುದು. ಮಾಗಿದ ಕಾಯಿ ಹೆಚ್ಚುವಾಗ ಉಳಿಯುವ ಬೀಜವನ್ನು ಇಂಥ ಮಣ್ಣಿಗೆ ಹಾಕಿದರಾಯ್ತು. ಸಮಯಕ್ಕೆ ಸರಿಯಾಗಿ ಈ ಗಿಡಕ್ಕೆ ನೀರು ಹನಿಸಿರಿ. ನೀವು ಬಯಸಿದಾಗ ದೊಣ್ಣ ಮೆಣಸಿನಕಾಯಿ ಕಿತ್ತು ಅಡುಗೆಗೆ ಬಳಸಬಹುದು.
ಬೆಳ್ಳುಳ್ಳಿ : 10 ಇಂಚು ಆಳವುಳ್ಳ ಕುಂಡಗಳಿಗೆ ಮಣ್ಣು ತುಂಬಿಸಿ. ಇದಕ್ಕೆ ನೀರು ಹಾಕಿ ಒದ್ದೆ ಮಾಡಿ. ನಂತರ ಮನೆಯಲ್ಲಿ ಬಳಸದೆ ಉಳಿದ ಬೆಳ್ಳುಳ್ಳಿಯ ಸಿಪ್ಪೆ ಸಮೇತ ಇದರಲ್ಲಿ ನೆಡಬೇಕು. 4-4 ಇಂಚು ಅಂತರದಲ್ಲಿ 2-3 ಗಿಡ ಬೆಳೆಯಬಹುದು. 10 ದಿನಗಳಲ್ಲಿ ಮೊಳಕೆಯೊಡೆದು, ಗಿಡ ಬರುತ್ತದೆ. ಅಂದವಾಗಿ ಸೊಂಪೆನಿಸುವ ಈ ಗಿಡ, ಮುಂದೆ ತಾಜಾ ಬೆಳ್ಳುಳ್ಳಿ ನೀಡುತ್ತದೆ.
ಇದೇ ತರಹ ಬದನೆ, ಬೀನ್ಸ್, ಸೀಮೆಬದನೆ, ಹಸಿಮೆಣಸು, ಆಲೂ…. ಇತ್ಯಾದಿ ಎಲ್ಲಾ ಬೆಳೆಯಬಹುದು. ಬೀಜ ವ್ಯರ್ಥ ಮಾಡದೆ ಹೀಗೆ ಗಿಡ ಬೆಳೆದು, ಬೇಕಾದಾಗ ಫಲ ಪಡೆಯಿರಿ.
– ಎಸ್. ಅಹಲ್ಯಾಬಾಯಿ