ಸ್ವಪ್ನಾ ಕೃಷ್ಣ ನಿರ್ದೇಶಕಿ, ನಿರ್ಮಾಪಕಿ
ದೇಹ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯ ಎಲ್ಲರ ಪ್ರೀತಿ ವಿಶ್ವಾಸವನ್ನು ಗೆಲ್ಲುತ್ತದೆ. ಇಂಥ ಒಂದು ಸಂದೇಶ ಒಂದು ಧಾರಾವಾಹಿಯ ಜೀವಾಳವಾಗಿ ಮೂಡಬಹುದು ಎಂಬುದನ್ನು ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ ನಿರ್ದೇಶಕಿ ಸ್ವಪ್ನಾ ಕೃಷ್ಣ. ಝೀ ಚಾನೆಲ್‌ನಲ್ಲಿ ಮೂಡಿಬರುತ್ತಿರುವ `ಸುಬ್ಬಲಕ್ಷ್ಮಿ ಸಂಸಾರ' ಹೆಂಗಳೆಯರ ಮನಸ್ಸನ್ನು ಹಿಡಿದು ಕೂಡಿಸಿದೆ. ಪ್ರತಿನಿತ್ಯ ಸಂಜೆ ತಪ್ಪದೇ ಎಲ್ಲರೂ ನೋಡುವ `ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿ ಒಬ್ಬ ಮುಗ್ಧ ಗೃಹಿಣಿಯ ಅಸಹಾಯಕತೆ, ಸಂಸಾರದಲ್ಲಿ ಪ್ರೀತಿಗಾಗಿ ಹಂಬಲಿಸುವ ಪತ್ನಿಯಾಗಿ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗನಿಗಾಗಿ ತನ್ನ ಬದುಕನ್ನು ಸವೆಸುವ ಸುಬ್ಬಲಕ್ಷ್ಮಿಯ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಅಂದಹಾಗೆ ಈ ಸ್ವಪ್ನಾ ಕಿರುತೆರೆಯ ಜನಪ್ರಿಯ ನಟಿ. ಸಾಕಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೃಷ್ಣ ಅವರ ಪತ್ನಿ. ತಮ್ಮದೇ ಆದ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ ಸೀರಿಯಲ್‌ಗಳನ್ನು ಕಿರುತೆರೆಗೆ ನೀಡುತ್ತಿದ್ದಾರೆ. `ಗಂಗಾ' ಧಾರಾವಾಹಿ ಕೂಡಾ ಇವರ ಸಂಸ್ಥೆಯಿಂದ ಆಗಿದೆ. ಯಾವುದೇ ಅಬ್ಬರವಿಲ್ಲದೆ ಸರಳವಾಗಿ ಜನರ ಮನ ಮುಟ್ಟುವಂತೆ ಧಾರಾವಾಹಿ ನೀಡುತ್ತಿರುವ ಸ್ವಪ್ನಾ ಕ್ಯಾಮೆರಾ ಹಿಂದೆ ನಿಂತು ಕ್ರಿಯೇಟೀವ್ ಆಗಿ ಏನಾದರೂ ಉತ್ತಮ ಕೆಲಸ ಮಾಡಬೇಕೆಂದು ನಿರ್ದೇಶನದ ಜವಾಬ್ದಾರಿ ಕೈಗೆತ್ತಿಕೊಂಡರಂತೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿದಾಗ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು. ನಾನು ಹುಟ್ಟಿ ಬೆಳೆದದ್ದು ಎಲ್ಲ ಬೆಂಗಳೂರಲ್ಲೇ. ಅಪ್ಪ ಅಮ್ಮ ಇಬ್ಬರೂ ಉದ್ಯೋಗದಲ್ಲಿದ್ದರು. ಪಿ.ಯು.ಸಿ ಓದುತ್ತಿರುವಾಗಲೇ ನಾನು ಫಣಿ ರಾಮಚಂದ್ರರ `ದಂಡಪಿಂಡಗಳು' ಧಾರಾವಾಹಿಯಲ್ಲಿ ನಟಿಸಿದ್ದೆ. ಅಲ್ಲಿಂದ ನನ್ನ ಆ್ಯಕ್ಟಿಂಗ್ ಜರ್ನಿ ಶುರುವಾಯಿತು. ಇಲ್ಲಿಯತನಕ ಸುಮಾರು 30-40 ಸೀರಿಯಲ್‌ಗಳಲ್ಲಿ ನಟಿಸಿದ ಅನುಭವ.
`ಸಪ್ತಪದಿ' ನನಗೆ ಹೆಸರು ತಂದುಕೊಟ್ಟಿದ್ದಲ್ಲದೇ, ಆ ಸೀರಿಯಲ್‌ನಲ್ಲಿ ಕ್ಯಾಮೆರಾ ವರ್ಕ್ ಮಾಡುತ್ತಿದ್ದ ಕೃಷ್ಣರವರ ಸ್ನೇಹ ಬೆಳೆದು ಇಬ್ಬರು ಮದುವೆಯಾದೆವು. ಎರಡನೇ ಮಗ ಹುಟ್ಟಿದಾಗ ನಾನು ನಟನೆಯಿಂದ ಬ್ರೇಕ್ ತೆಗೆದುಕೊಂಡೆ, ಆ ಸಮಯದಲ್ಲಿ ನಮ್ಮದೇ ಆದ ಪ್ರೊಡಕ್ಷನ್ ಹೌಸ್ ಶುರು ಮಾಡಿದೆ. `ಗೃಹಲಕ್ಷ್ಮಿ' ಸೀರಿಯಲ್ ಮಾಡಿದ್ದೆ. ಹಾಗೆಯೇ ನಾನು ಕ್ಯಾಮೆರಾ ಹಿಂದೆ ಸಾಕಷ್ಟು ಕೆಲಸ ಮಾಡುತ್ತಾ ಟೆಕ್ನಿಷಿಯನ್ ಆಗಿ ಬೆಳೆದೆ. ಎಡಿಟಿಂಗ್ ನೋಡಿಕೊಳ್ತಿದ್ದೆ. ನನ್ನ ಪತಿ ಕೃಷ್ಣ ತುಂಬಾನೆ ಎನ್‌ಕರೇಜ್‌ಮಾಡುತ್ತಿದ್ದರು. ನಾನು ನಿರ್ದೇಶಕಿಯಾಗುವಂತೆ ಉತ್ಸಾಹ ತುಂಬಿದ್ದೇ ಅವರು. ಒಂದೇ ಫೀಲ್ಡ್ ನಲ್ಲಿ ಇದ್ದುದರಿಂದ ಇಬ್ಬರಲ್ಲೂ ಒಳ್ಳೆ ಅಂಡರ್ ಸ್ಟಾಂಡಿಂಗ್ ಇತ್ತು.
`ಗಂಗಾ' ನನ್ನ ಮೊದಲ ನಿರ್ದೇಶನದ ಧಾರಾವಾಹಿ. ಬಹಳ ವರ್ಷಗಳಿಂದ ನನಗೆ ನಿರ್ದೇಶನ ಮಾಡುವ ಆಸೆ ಇದ್ದೇ ಇತ್ತು. ಅದರ ಜೊತೆಗೆ ಕೃಷ್ಣರ ಪ್ರೋತ್ಸಾಹ ಮತ್ತು ಅವರಿಂದ ಸಾಕಷ್ಟು ಕಲಿತುಕೊಳ್ಳುವ ಅವಕಾಶ ಸಿಕ್ಕಿತು.`ಗಂಗಾ' ಸೀರಿಯಲ್ ಸಾಕಷ್ಟು ಜನಪ್ರಿಯವಾಗಿದೆ. ನನಗೂ ಖುಷಿ ಕೊಟ್ಟಿದೆ. ಅದರ ಜೊತೆಯಲ್ಲೇ ಮತ್ತೊಂದು ಸೀರಿಯಲ್ ಶುರು ಮಾಡಿದೆ. ಅದೇ `ಸುಬ್ಬಲಕ್ಷ್ಮಿ ಸಂಸಾರ!' ನನ್ನ ನಿರ್ದೇಶನದ ಎರಡನೇ ಧಾರಾವಾಹಿ.
ನಿರ್ದೇಶನ ನನಗೇನು ಕಷ್ಟ ಅನಿಸುತ್ತಿಲ್ಲ. ತುಂಬಾನೇ ಇಂಟರೆಸ್ಟಾಗಿದೆ. ಹೊಸ ಹೊಸ ಭಾವನೆಗಳನ್ನು ಎಕ್ಸ್ ಪ್ಲೋರ್ ಮಾಡುತ್ತಾ ಹೋಗಬಹುದು. ನಟಿಯಿಂದ ಒಂದು ಪ್ರಮೋಷನ್ ಸಿಕ್ಕಿದೆ. ನಿರ್ಮಾಪಕಿಯಾಗಿ, ನಿರ್ದೇಶಕಿಯಾಗಿ, ಅದಕ್ಕೆಲ್ಲ ಸಪೋರ್ಟ್, ನನ್ನ ಫ್ಯಾಮಿಲಿ, ನನ್ನ ಅತ್ತೆ ಮನೆ, ಮೇಜರ್ ಆಗಿ ಕೃಷ್ಣ.