ವಿವಾಹ ಮುರಿದಾಗ ಸಮತೋಲನ ಅಗತ್ಯ

ವಿವಾಹ ಸಂಬಂಧವನ್ನು ಕಾಯ್ದುಕೊಂಡು ಹೋಗುವ ಜವಾಬ್ದಾರಿ ಈಗ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರ ಹೆಗಲೇರಿ ಕೂತಿದೆ. ವಿವಾಹ ಕಾನೂನುಗಳು ಮತ್ತು ನ್ಯಾಯಾಲಯಗಳು ತಮ್ಮ ನಿರ್ಧಾರಗಳಲ್ಲಿ ಹೆಂಡತಿಯರನ್ನು `ಮುಗ್ಧ’ ಎಂದು ಮನ್ನಿಸಿ, ಆದಾಯ ಮತ್ತು ಆಸ್ತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪಾಲು ಕೊಡಿಸಿ ಪರೋಕ್ಷ ರೂಪದಲ್ಲಿ ಜಗಳಕ್ಕೆ ಕುಮ್ಮಕ್ಕು ಕೊಡುತ್ತಿವೆ.

ಇತ್ತೀಚೆಗೆ ದೆಹಲಿ ಸೆಷನ್ಸ್ ನ್ಯಾಯಾಧೀಶರು ಮಹಿಳೆಯೊಬ್ಬಳಿಗೆ ತಿಂಗಳಿಗೆ ಒಂದೂವರೆ ಲಕ್ಷ ರೂ. ಜೀವನಾಂಶದ ರೂಪದಲ್ಲಿ ಕೊಡಿಸಿದರು. ಆದರೆ ಮಹಿಳೆ ಚೆನ್ನಾಗಿ ಓದು ಬಲ್ಲವಳು. ನೌಕರಿ ಮಾಡುವ ಅರ್ಹತೆ ಇದ್ದವಳು. ಪತಿಯ ಮನೆಯಲ್ಲಿದ್ದಾಗ ಆಕೆಗೆ ಸಿಗುವಷ್ಟು ಮೊತ್ತ, ಏಕಾಂಗಿಯಾಗಿರುವಾಗಲೂ ಲಭಿಸಬೇಕು, ಜೊತೆಗೆ ಪರಿಹಾರ ಮೊತ್ತ ಕೊಡ ಸಿಗಬೇಕು.

ಮದುವೆ ಮುರಿದು ಬಿದ್ದಾಗ ಹೆಂಡತಿಯರು ನಿರಾಶ್ರಿತರಾಗಬಾರದು. ಕುಟುಂಬ ಬೀದಿಗೆ ಬೀಳಬಾರದು ಎಂಬುದೇನೋ ಸರಿ, ಆದರೆ ಆ ಕಾರಣಕ್ಕಾಗಿ ಗಂಡ ಆರ್ಥಿಕವಾಗಿ ಗುಲಾಮನಾಗುವ ಕಾನೂನು ವ್ಯವಸ್ಥೆ ಕೂಡ ಸರಿಯಲ್ಲ.

ಇಂದಿನ ಯುಗದಲ್ಲಿ ಯುವಕ ಯುವತಿಯರು ತಮ್ಮ ತಮ್ಮ ಅಂತಸ್ತು ನೋಡಿಯೇ ವಿವಾಹವಾಗುತ್ತಾರೆ. ಆಸ್ತಿ ಗಂಡನ ಹೆಸರಿನ ಮೇಲೆಯೇ ಇರಬಹುದು. ಆದರೆ ಆ ಆಸ್ತಿಯ ಮೇಲೆ ಹೆಂಡತಿಗೆ ಪರಿಪೂರ್ಣ ಹಕ್ಕು ಇರುತ್ತದೆ. ಒಂದುವೇಳೆ ಗಂಡಹೆಂಡತಿ ಮದುವೆ ಮುರಿದುಕೊಂಡರೆ ಅದರ ದುಷ್ಪರಿಣಾಮ ಇಬ್ಬರ ಮೇಲೂ ಉಂಟಾಗಬೇಕು. ಆದರೆ ಆ ಮದುವೆ ಮುರಿಯಲು ಕೇವಲ ಗಂಡನನ್ನಷ್ಟೇ ಹೊಣೆಗಾರನನ್ನಾಗಿ ಮಾಡಬಾರದು.

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಿಗೆ ಪರಿಪೂರ್ಣ ಶಿಕ್ಷಣ ದೊರೆಯುತ್ತಿದೆ. ವಿವಾಹಕ್ಕೂ ಮುಂಚೆಯೇ ಯುವತಿಯರು ಉದ್ಯೋಗದ  ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಮನೆಯಲ್ಲಿ ಗಂಡಹೆಂಡತಿ ಇಬ್ಬರೂ ಉದೋಗಿಗಳಾಗಿದ್ದಾರೆ. ಮಕ್ಕಳ ಹೊರತಾಗಿ ಆರ್ಥಿಕ ಪಾಲುದಾರಿಕೆ ಕೂಡ ನಿಭಾಯಿಸುತ್ತಿದ್ದಾರೆ. ಇಂತಹ ಪತ್ನಿಯರು ಪತಿಯರನ್ನು ಜೀವನವಿಡೀ ಮೆಂಟೇನನ್ಸ್ ನ ಆರ್ಥಿಕ ಗುಲಾಮನನ್ನಾಗಿಸಿಕೊಳ್ಳುವುದು ವಿವಾಹ ವ್ಯವಸ್ಥೆಯನ್ನು ಹಾಳು ಮಾಡಬಹುದು.

ಇತ್ತೀಚೆಗೆ ಬಹಳಷ್ಟು ಪತಿಯರು ನೌಕರಿ ಬಿಟ್ಟು, ವ್ಯಾಪಾರ ತೊರೆದು, ಅಘೋಷಿತ ಗಳಿಕೆಗೆ ಇಳಿಯುತ್ತಾರೆ. ಇದರ ಮುಖ್ಯ ಉದ್ದೇಶ ಹೆಂಡತಿಗೆ ಜೀವನಾಂಶ ನೀಡಬಾರದು ಎಂಬುದಾಗಿರುತ್ತದೆ. ಅವರು ವಕೀಲರಿಗೆ ಹೆಚ್ಚು ಖರ್ಚು ಮಾಡುತ್ತಾರೆ, ಹೆಂಡತಿಯರಿಗೆ ಕಡಿಮೆ. ಏಕೆಂದರೆ ಅವರ ಮೈ ಮನಸ್ಸಿನಲ್ಲಿ ಅಹಂ ಪುಟಿದೇಳುತ್ತದೆ.

ಗಂಡನೇ ಹೆಂಡತಿಯ ಯೋಗಕ್ಷೇಮ ನೋಡಿಕೊಳ್ಳಬೇಕು ಎಂಬುದು ಇಂದಿನ ಸಮಾನತೆಯ ಯುಗದಲ್ಲಿ ತಪ್ಪು ಸಿದ್ಧಾಂತವಾಗಿದೆ. ಈ ಸಿದ್ಧಾಂತದಲ್ಲಿ ಬದಲಾವಣೆ ತರುವ ಅಗತ್ಯವಿದೆ. ಏಕೆಂದರೆ ಇದು ಕ್ರಮೇಣ ಬ್ಲ್ಯಾಕ್‌ಮೇಲ್‌ನ ಅಸ್ತ್ರವಾಗಿದೆ. ಪತ್ನಿಯರು ತಮ್ಮ ಗಂಡಂದಿರಿಗೆ `ನೀನು ನನ್ನ ಆದೇಶ ಪಾಲಿಸು, ಇಲ್ಲದಿದ್ದರೆ ಮೊಕದ್ದಮೆ ಎದುರಿಸಲು ಸಿದ್ಧನಾಗು’ ಎಂದು ಬೆದರಿಕೆ ಹಾಕುವ ಮಟ್ಟಕ್ಕೆ ಇಳಿದಿದ್ದಾರೆ.

ಈ ಮೊಕದ್ದಮೆಗಳಲ್ಲಿ ಇಬ್ಬರೂ ತೊಂದರೆಗೊಳಗಾಗುತ್ತಾರೆ. ತನ್ನ ನಿರ್ಧಾರದಿಂದಾಗಿ ಗಂಡ ಏಕಾಂಗಿಯಾಗುತ್ತಾನೆ, ಸಹಾಯಕ್ಕಾಗಿ ಅಂಗಲಾಚಬೇಕಾಗುತ್ತದೆ ಎಂಬುದನ್ನು ಪತ್ನಿಯರು ಮರೆತುಬಿಡುತ್ತಾರೆ. ಹೆಂಡತಿಯರೇನೂ ಖುಷಿಯಾಗಿರುವುದಿಲ್ಲ. ಅವರೂ ಕೂಡ ಖಿನ್ನತೆಗೆ ತುತ್ತಾಗುತ್ತಾರೆ. ಯಾರು ತನ್ನನ್ನು ಲೂಟಿ ಮಾಡುತ್ತಿರುತ್ತಾರೊ ಅವರ ಮೇಲೆಯೇ ಆಕೆ ಆಶ್ರಿತರಾಗಬೇಕಾಗುತ್ತದೆ. ಲೂಟಿ ಮಾಡುವರು ತಂದೆ ತಾಯಿ, ಅಣ್ಣ ಅತ್ತಿಗೆ, ಗೆಳೆಯ ಗೆಳತಿ ಇವರಲ್ಲಿ ಯಾರೇ ಆಗಿರಬಹುದು. ಅಮ್ಮನ ಮೇಲೆ ಅವಲಂಬಿಸಿರುವ ತನಕ ಮಕ್ಕಳು ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಒಂದುವೇಳೆ ಅವರು ಅಮ್ಮನ ಬಳಿಯೇ ಇರಬೇಕಾದ ಅನಿವಾರ್ಯತೆ ಬಂದರೆ ಅಪ್ಪನನ್ನು ತಮ್ಮಿಂದ ದೂರ ಮಾಡಿದ ಆರೋಪವನ್ನು ಅಮ್ಮನ ಮೇಲೆ ಹೊರಿಸುತ್ತಾರೆ. ಈ ಅಪರಾಧ ಪ್ರಜ್ಞೆಯಿಂದ ಆ ತಾಯಿಯ ಜೀವನ ಅರೆಬರೆಯಾಗಿ ಉಳಿದುಬಿಡುತ್ತದೆ. ನ್ಯಾಯಾಲಯಗಳ ಮುಖಾಂತರ  ವಿವಾಹ ಮುರಿದು ಬಿದ್ದಾಗ ಗಂಡ ಹೆಂಡತಿ ಇಬ್ಬರೂ ಸಮತೋಲನ ಕಾಯ್ದುಕೊಳ್ಳಬೇಕೇ ಹೊರತು, ಒಬ್ಬರಿಗೆ ದಂಡ, ಇನ್ನೊಬ್ಬರಿಗೆ ಸಹಾನುಭೂತಿಯುಳ್ಳ ಪರಿಹಾರ ಸಿಗುವಂತೆ ಮಾಡಬಾರದು.

ಮದುವೆ ಎನ್ನುವುದು ವಿಶೇಷ ಅನುಬಂಧ. ಅದನ್ನು ಮಾಲೀಕ ಕಾರ್ಮಿಕ ಎನ್ನುವ ನಿಯಮಕ್ಕೆ ಒಳಪಡಿಸಬಾರದು. ಹೆಂಡತಿ ಕಾರ್ಮಿಕಳೂ ಅಲ್ಲ, ಗಂಡ ಮಾಲೀಕನೂ ಅಲ್ಲ. ವಿವಾಹವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಹೊಣೆ ಇಬ್ಬರಿಗೂ ಇರುವಂತೆ, ಮುರಿದು ಬಿದ್ದಾಗ ಅದರ ಹಾನಿಯನ್ನು ಇಬ್ಬರೂ ಸಮಾನವಾಗಿ ಭರಿಸಬೇಕು.

ತೆರೆಯ ಹಿಂದಿನ ಸತ್ಯ

`ಪದ್ಮಾವತ್‌’ ಚಲನಚಿತ್ರ ಬಿಡುಗಡೆಯ ಕುರಿತಂತೆ ಎದ್ದ ವಿವಾದಗಳಿಂದ ತಿಳಿದುಬರುವ ಸಂಗತಿ ಏನೆಂದರೆ, ದೇಶದಲ್ಲಿ ಈಗ ಹಸಿವು, ಬಡತನ, ಭ್ರಷ್ಟಾಚಾರ, ಅನಾರೋಗ್ಯ, ಅವ್ಯವಸ್ಥೆ ಈ ಸಮಸ್ಯೆಗಳು ಇಲ್ಲಿ ಇಲ್ಲವೇನೋ ಎನಿಸುತ್ತದೆ. ಅದರಲ್ಲೂ ವಿಶೇಷವಾಗಿ ರಜಪೂತರಿಗೆ. ಸಂಜಯ್‌ ಲೀಲಾ ಬನ್ಸಾಲಿ ಅವರ `ಪದ್ಮಾವತ್‌’ ಚಲನಚಿತ್ರ ಒಂದೇ ಒಂದು ವಿಷಯವಾಗಿತ್ತು. ಈ ಚಿತ್ರ ಓಡದೇ ಇದ್ದರೆ ಅವರ ಉದ್ಧಾರವಾಗುತ್ತಿತ್ತು. ಈಗ ಆ ಚಿತ್ರ ಓಡುತ್ತಿದೆ. ಹೀಗಾಗಿ ಅವರ ಉದ್ದೇಶವೇ ಕೊನೆಗೊಂಡಿದೆ.

ಒಂದು ಇಡೀ ಜನಾಂಗವನ್ನು ಹೇಗೆ ರೊಚ್ಚಿಗೆಬ್ಬಿಸಬೇಕು ಎನ್ನುವುದಕ್ಕೆ ಈ ಇಡೀ ಆಂದೋಲನವೇ ಸಾಕ್ಷಿ. ಅದರಲ್ಲಿ ಎಲ್ಲ ಬಗೆಯ ಗೂಂಡಾಗಿರಿಯನ್ನು ಪ್ರದರ್ಶಿಸಲಾಯಿತು. ರಾಜ್ಯ ಸರ್ಕಾರಗಳು ಉಪದ್ರವ ನೀಡುವವರ ಮೇಲೆ ಕೈ ಎತ್ತಬಾರದು ಎಂದು ಪೊಲೀಸರಿಗೆ ಹುಕುಂ ಬೇರೆ ಕೊಟ್ಟಿದ್ದವು. ಎಲ್ಲೆಲ್ಲಿ ಈ ಚಲನಚಿತ್ರ ಬಿಡುಗಡೆಯಾಗಿತ್ತೋ, ಅಲ್ಲಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಭಾರಿ ಬಂದೋಬಸ್ತ್ ಮಾಡಬೇಕಾಗಿ ಬಂದಿತು.

ಈ ರೀತಿಯ ನಿರರ್ಥಕ ಪ್ರಕರಣಗಳನ್ನು ಕೈಗೆತ್ತಿಕೊಂಡು ವ್ಯರ್ಥ ಹಾಹಾಕಾರ ಎಬ್ಬಿಸುವುದು ಕೆಲವರಿಗೆ ಒಂದು ಫ್ಯಾಷನ್‌ಎಂಬಂತಾಗಿಬಿಟ್ಟಿದೆ. ಅದು ರಾಮಮಂದಿರ ಕುರಿತಾಗಿ ಇರಬಹುದು, ವಂದೇ ಮಾತರಂ ಕುರಿತಂತೆ ಆಗಿರಬಹುದು. ಗೋ ಹಿಂಸೆ, ದೇಶದ್ರೋಹ ಮತ್ತು ದೇಶಪ್ರೇಮದ ಕುರಿತಂತೆ ಜನರನ್ನು ಉದ್ರೇಕಿತರನ್ನಾಗಿ ಮಾಡಲಾಗುತ್ತದೆ. 21ನೇ ಶತಮಾನದಲ್ಲೂ ಸಾಕ್ಷರ ಭಾರತೀಯ ಜನತೆ ಈಗ ಕುರಿ ಮಂದೆಯ ಹಾಗೆ ನುಗ್ಗುವುದೇ ಆಗಿಬಿಟ್ಟಿದೆ.

ಪದ್ಮಾವತ್‌ನಲ್ಲಿ ರಜಪೂತರ ಆತ್ಮಗೌರವದ ಬಗ್ಗೆ ಏನು ಹೇಳಲಾಗಿದೆ ಅಥವಾ ಹೇಳಲಾಗಿಲ್ಲ ಎಂಬ ವಿಷಯ ಬಿಟ್ಟುಬಿಡಿ, ಆದರೆ ಮೇವಾಡದ ರಾಜಪುರೋಹಿತ ರಾಘವ್ ಚೇತನ್‌ರ ಬಣ್ಣವಂತೂ ಬಯಲಾಯಿತು. ಆದರೆ ರಾಜಾ ರತನ್‌ ರಾವ್ ರೊಂದಿಗೆ ಮುನಿಸಿಕೊಂಡು ಅಲ್ಲಾವುದ್ದೀನ್‌ ಖಿಲ್ಜಿಯನ್ನು ಭೇಟಿ ಮಾಡಿದ್ದ. ಒಂದುವೇಳೆ `ಪದ್ಮಾವತ್‌’ ಮಲಿಕ್‌ ಮೊಹಮ್ಮದ್‌ ಜಾಯ್ಸಿಯ ಕಾವ್ಯದ ಪ್ರಕಾರ ರಜಪೂತರ ಶೌರ್ಯಗಾಥೆಯಾಗಿದ್ದರೆ, ಅದು ರಾಜ ಪುರೋಹಿತರ ಬಂಡವಾಳ ಬಯಲು ಮಾಡುವಂಥದ್ದೂ ಆಗಿದೆ. ಅಪಮಾನದ ಸೇಡು ತೀರಿಸಿಕೊಳ್ಳಲು ಆ ಪಂಗಡದವರು ತಮ್ಮದೇ ಜನರನ್ನು ಹೇಗೆ ಮೋಸ ಮಾಡಿದರು ಎನ್ನುವುದೂ ತಿಳಿದುಬರುತ್ತದೆ.

ಚಾಣಕ್ಯ, ನಂದ ರಾಜರೊಂದಿಗೆ ನಡೆದುಕೊಂಡ ಹಾಗೆ ರಾಘವ್ ಚೇತನ್‌ ಕೂಡ ನಡೆದುಕೊಂಡಿದ್ದ. ಆದರೆ ಲೇಖನಿಯ ಕರಾಮತ್ತು ನೋಡಿ, ಈವರೆಗೆ ದೇಶ ಹಾಗೂ ಸಮಾಜದ ಮೇಲೆ ಅಧಿಕಾರ ಇದೇ ಯೋಚನೆಯುಳ್ಳವರದ್ದಾಗಿದೆ. ಅವರು ಉತ್ಪಾದನೆ ಅಥವಾ ರಕ್ಷಣೆಯಲ್ಲಿ ಕಿಂಚಿತ್ತೂ ತೊಡಗಿಕೊಳ್ಳದೆ ಅಧಿಕಾರದ ಚುಕ್ಕಾಣಿಯನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದಾರೆ.

ರಜಪೂತರು ಈ ನಿಟ್ಟಿನಲ್ಲಿ ಅತ್ಯಂತ ಕೆಟ್ಟ ರೀತಿಯಲ್ಲಿ ಬಳಕೆಯಾಗಿದ್ದಾರೆ. ಅವರು ಯುದ್ಧಕ್ಕೆ ಹೋಗುವ ಮುಂಚೆ ಪೂಜೆ ಪುನಸ್ಕಾರ ಮಾಡುತ್ತಿದ್ದರು. ಕುರಿ ಬಲಿ ಕೊಡುತ್ತಿದ್ದರು. ಲಿಂಗಕ್ಕೆ ಹಾಲೆರೆಯುತ್ತಿದ್ದರು. ಆದರೂ ಸೋಲುತ್ತಿದ್ದರು ಆಗ ಅವರ ಮಹಿಳೆಯರು ಬೆಂಕಿಗೆ ಆಹುತಿಯಾಗುವುದು ಅನಿವಾರ್ಯವಾಗುತ್ತಿತ್ತು.

ಸರ್ಕಾರ ಇವರ ಬಗ್ಗೆಯೂ ಗಮನಿಸಲಿ

ಒಡಿಶಾದಲ್ಲಿ ಕಾರ್ತಿಕ ಮಾಸ ಹಳ್ಳಿ, ನಗರಗಳ ವಿಧವೆಯರಿಗೆ ನಿರಾಳತೆಯ ತಿಂಗಳು ಎನ್ನಬಹುದು. ಆ ತಿಂಗಳಲ್ಲಿ ಅವರು ತಮ್ಮ ಮನೆ ತೊರೆದು ಜಗನ್ನಾಥ ಪುರಿಯ ದೇವಾಲಯದ ಹತ್ತಿರ ನಿರ್ಮಾಣಗೊಂಡ ಮನೆಗಳಲ್ಲಿ ಒಟ್ಟಿಗೆ ವಾಸಿಸುವುದರ ಮೂಲಕ ಪೂಜೆಯ ನೆಪದಲ್ಲಾದರೂ ಸರಿ ತಮ್ಮ ನೋವನ್ನು ತಮ್ಮಂಥ ನೂರಾರು ವಿಧವೆಯರೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.

ವಿಧವೆಯಾಗುವುದು ಯಾವುದೇ ಒಬ್ಬ ಮಹಿಳೆಯ ತಪ್ಪಿನಿಂದಲ್ಲ, ಅದು ಆಕೆಯ ಗಂಡನ ತಪ್ಪಿನಿಂದ. ಈಗಲೂ ವಿಧವೆಯರು ಸರಳ ಜೀವನ ನಡೆಸುವುದನ್ನು ಅನಿವಾರ್ಯವಾಗಿಸಲಾಗಿದೆ. ಹಳೆಯ ಪಾರಂಪರಿಕ ಯೋಚನೆ ಎಂತಹ ಆಧುನಿಕ ವಿಚಾರದ ಮಹಿಳೆಯರನ್ನು ಆವರಿಸಿಕೊಂಡುಬಿಡುತ್ತದೆ. ಅವರು ಮೂಢನಂಬಿಕೆಗಳಿಂದ ಕೂಡಿದ ಪೂಜೆ ಪುನಸ್ಕಾರಗಳಿಂದ ಬಹಿಷ್ಕಾರಗೊಳ್ಳುವ ಹೆದರಿಕೆಯಿಂದ ತಮ್ಮನ್ನು ಪ್ರತ್ಯೇಕಗೊಳಿಸಿಕೊಳ್ಳುತ್ತಾರೆ.

ಓಡಿಶಾದ ಹಾಗೆ ಪ್ರತಿಯೊಂದು ರಾಜ್ಯದಲ್ಲೂ ಕೂಡ ಮಹಿಳೆಯೊಬ್ಬಳು ವಿಧವೆಯಾಗುತ್ತಿದ್ದಂತೆಯೇ ಆಕೆಯ ಖುಷಿಯ ಬಾಗಿಲು ತಂತಾನೇ ಮುಚ್ಚಿಬಿಡುತ್ತದೆ. ಒಳ್ಳೆಯ ರುಚಿಕರ ಊಟ ಸಹ ಅವಳ ಪಾಲಿಗೆ ಬರುವುದಿಲ್ಲ.

ಅತ್ತೆ ಮಾವ ಇದ್ದರೆ ಆಕೆಯನ್ನು ಮನೆಯಿಂದ ಹೊರದಬ್ಬುವ ಮಾತುಗಳು ಪ್ರಸ್ತಾಪವಾಗುತ್ತವೆ. ಕೈಯಲ್ಲಿ ಹಣ ಇಲ್ಲದೆ ಇದ್ದರೆ ಪರಿಸ್ಥಿತಿ ಇನ್ನಷ್ಟು ಘೋರವಾಗುತ್ತದೆ. ಗಂಡ ಸಾಯುತ್ತಿದ್ದಂತೆ ಆಕೆಯ ಬಳಿ ಇದ್ದ ಕಾಗದಪತ್ರಗಳನ್ನು, ಬೀಗದ ಕೈಗಳನ್ನು ಆಕೆಯ ನಾದಿನಿ, ಮೈದುನರು ಇಲ್ಲವೇ ಮಗ ದೊಡ್ಡವನಾಗಿದ್ದರೆ ಅವನೇ ತನ್ನ ಕೈಗೆತ್ತಿಕೊಳ್ಳುತ್ತಾನೆ. ಯಾವುದೇ ಸೊಸೆಗೆ ತನ್ನ ವಿಧವೆ ಅತ್ತೆಯ ಬಗ್ಗೆ ಯಾವುದೇ ಮೋಹ ಇರುವುದಿಲ್ಲ. ಸುಮಾರು 10,000 ದಷ್ಟು ವಿಧವೆಯರು ಪ್ರತಿವರ್ಷ ಓಡಿಶಾದ ಪುರಿಗೆ ಬಂದು ಸೇರುತ್ತಾರೆ.

ಭಾರತದ ಒಟ್ಟು ಜನಸಂಖ್ಯೆಯಲ್ಲಿ 5 ಕೋಟಿಯಷ್ಟು ವಿಧವೆಯರಿದ್ದಾರೆ. ಓಡಿಶಾದಲ್ಲಿ ಅವರ ಪ್ರಮಾಣ ಹೆಚ್ಚಾಗಿದೆ. ಏಕೆಂದರೆ ಅಲ್ಲಿನ ಪುರುಷರು ಚಿಕ್ಕವಯಸ್ಸಿನ ಮಹಿಳೆಯರೊಂದಿಗೆ ಮದುವೆಯಾಗುತ್ತಾರೆ. ಪುರುಷ ವಿಧುರನಾದರೆ ತನಗೆ ಮಕ್ಕಳು ಇರಲಿ ಬಿಡಲಿ ವಿವಾಹವಾಗುತ್ತಾನೆ. ಆದರೆ ಮಕ್ಕಳಿರುವ ವಿಧವೆ ಮತ್ತೊಮ್ಮೆ ವಿವಾಹವಾಗುವುದು ಸಾಧ್ಯವೇ ಇಲ್ಲ.

ತ್ರಿವಳಿ ತಲಾಖ್‌ ಬಗ್ಗೆ ಮುಸ್ಲಿಂ ಮಹಿಳೆಯರ ದುರ್ದೆಶೆ ಕುರಿತಂತೆ ಸರ್ಕಾರ ಮೊಸಳೆ ಕಣ್ಣೀರು ಸುರಿಸುತ್ತಿದೆ. ಆದರೆ ಈ ವಿಧವೆಯರ ಕುರಿತಂತೆ ಒಂದೇ ಒಂದು ಶಬ್ದ ಕೂಡ ಉಚ್ಚರಿಸುವುದಿಲ್ಲ. ವಾರಾಣಸಿ ಮತ್ತು ಬೃಂದಾವನದಲ್ಲೂ ವಿಧವೆಯರ ದುರ್ಗತಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಬಿಳಿ ಸೀರೆಯುಟ್ಟ ಕೃಶದೇಹಿ ವಿಧವೆಯರು ಗುಂಪುಗುಂಪಾಗಿ ಬೀದಿ ಬೀದಿ ಸುತ್ತುತ್ತಿರುವುದು ಕಂಡುಬರುತ್ತಿದೆ. ಅವರಿಗೆ ಒಳ್ಳೆಯ ದಿನಗಳು ಬರಬಹುದೆ ಅಥವಾ ಹಿಂದೂ ಸಮಾಜದ ಮೂಢನಂಬಿಕೆಯ ಚಕ್ರದಡಿ ಹಾಗೆಯೇ ನಲುಗಿ ಹೋಗಬಹುದೆ?

Tags:
COMMENT