ವ್ಯಾಲೆಂಟೈನ್ ಡೇ ದಿನ ಬೆಳಗಾಗಿತ್ತು, “ರೀ, ನೀವು ನನ್ನನ್ನು ಪ್ರೀತಿಸುವುದೇ ನಿಜವಾದರೆ ಇವತ್ತು ಇಡೀ ದಿನ ಅಡುಗೆಮನೆ ಕೆಲಸ ನೀವೇ ನಿರ್ವಹಿಸಬೇಕು,” ಎಂದು ಹೇಳಿ ಹೆಂಡತಿ ಮತ್ತೆ ಮಲಗಿಬಿಟ್ಟಳು.
ಗಂಡ ಏನೂ ಮಾತನಾಡದೆ ಎದ್ದು ಸೀದಾ ಹೊರನಡೆದ.
ಪತ್ನಿ : ಎಲ್ಲಿಗೆ ಸವಾರಿ?
ಪತಿ : ನಾನೀಗಲೇ ಹೋಗಿ ಲಾಯರ್‌ನ ನೋಡ್ತೀನಿ. ನಿನ್ನಿಂದ ನನಗೆ ಡೈವೋರ್ಸ್ ಬೇಕು.
ಈ ಪತಿರಾಯ ವಕೀಲರ ಮನೆಗೆ ಹೋದವನೇ ಸ್ವಲ್ಪ ಹೊತ್ತಿನಲ್ಲೇ ಬಂದು ತಿಂಡಿ ತಯಾರಿಸತೊಡಗಿದ.
ಪತ್ನಿ : ಏನ್ರಿ ಆಯ್ತು…. ಇಷ್ಟು ಬೇಗ ವಾಪಸ್ಸು ಬಂದ್ರಿ?
ಪತಿ : ನೀನೇ ವಾಸಿ…. ಅಡುಗೆ ಮಾಡಲು ಹೇಳಿದೆ. ಅಲ್ಲಿ ಆತ ಹೆಂಡತಿಯ ಸೀರೆ ಒಗೆಯುತ್ತಿದ್ದ!
ಪತ್ನಿ : ಏನ್ರಿ, ಸದಾ ಆ ಹಾಳು ಮೊಬೈಲ್‌ನಲ್ಲೇ ಮುಳುಗಿರ್ತೀರಿ…. ಮನೆಯಲ್ಲಿ ಹೆಂಡತಿ, ಮಕ್ಕಳ ಜೊತೆ ಮಾತನಾಡುತ್ತಾ ತುಸು ಕಾಲ ಕಳೆಯಬಾರದೇ?
ಪತಿ : ಹಾಗೇ ಆಗಲಿ ಬಿಡು.
ಸ್ವಲ್ಪ ಹೊತ್ತಿಗೆ ಮನೆಯನ್ನು 2 ಸಲ ಸುತ್ತಿ ಬಂದ ಪತಿರಾಯ ಹೆಂಡತಿಗೆ ಹೇಳತೊಡಗಿದ.
ಪತಿ : ಅದ್ಸರಿ, ಇವತ್ತು ಏನು ಅಡುಗೆ ಮಾಡ್ತಿದ್ದಿ? ಈ ಕಡೆ ಬಾತ್ ರೂಮ್ ಟೈಲ್ಸ್ ಉಜ್ಜಿ ತುಂಬಾ ದಿನ ಆಯ್ತು ಅನ್ಸುತ್ತೆ, ಸ್ವಲ್ಪ ಅದನ್ನು ನೋಡು. ಬೇಗ ಒಂದು ಕಪ್ ಬಿಸಿ ಬಿಸಿ ಟೀ ಮಾಡು ಮಾರಾಯ್ತಿ. ಅದಿರಲಿ…. ನೀನು ಈ ತಿಂಗಳ ಖರ್ಚಿನ ಬಾಬತ್ತು ಹೇಳಲೇ ಇಲ್ಲವಲ್ಲ….? ನನ್ನ ಕೆಲವು ಶರ್ಟ್ಸ್ ಗುಂಡಿಗಳು ಹೋಗಿವೆ, ಸ್ವಲ್ಪ ಹೊಲಿದು ಕೊಡು. ಕೆಲವು ಹೊಲಿಗೆ ಬಿಟ್ಟಿವೆ. ಮಿಷನ್‌ನಲ್ಲಿ ಹೊಲಿದುಬಿಡು. ಆಮೇಲೆ……
ಪತ್ನಿ : ಇಗೊಳ್ಳಿ….. ನಿಮ್ಮ ಮೊಬೈಲ್ ಪೂರ್ತಿ ಚಾರ್ಜ್ ಆಯ್ತು. ಅದನ್ನು ನೋಡುತ್ತಾ ಆ ಸೋಫಾ ಮೇಲೆ ಕೂತಿರಿ, ಟೀ ಕೊಡ್ತೀನಿ.
ಪತಿರಾಯ ಕೈ ಕಟ್…. ಬಾಯ್ಮುಚ್!
ಪತಿ ಪತ್ನಿ ಇಬ್ಬರೂ ಒಂದೇ ಪ್ಲೇಟ್‌ನಿಂದ ಪಾನಿಪೂರಿ ಸವಿಯುತ್ತಿದ್ದರು. ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಾಗ, ಪತ್ನಿ ರೊಮ್ಯಾಂಟಿಕ್ ಮೂಡ್‌ನಲ್ಲಿ ಕೇಳಿದಳು, “ಮದುವೆ ಆಗಿ ಇಷ್ಟು ವರ್ಷ ಆಯ್ತು…. ಆದರೂ ನನ್ನ ಕಣ್ಣಿನಾಳದಲ್ಲಿ ಇನ್ನೂ ಏನೋ ಹುಡುಕುತ್ತಿದ್ದೀರಿ….” ಎಂದು ನಾಚಿಕೊಂಡಳು.
“ಹುಡುಕೋದೇನು ಬಂತು ಕರ್ಮ….. ಸ್ವಲ್ಪ ಮೆಲ್ಲಗೆ ತಿನ್ನು…. ನನ್ನ ಸರದಿಯೇ ಬರುತ್ತಿಲ್ಲ!” ಎಂದು ಪತಿ ಪೆಚ್ಚಾಗಿ ಹೇಳುವುದೇ?
ಗುಂಡ ಮಹಾ ಕರ್ರಗಿದ್ದ. ಅವನಿಗೆ ಬಿಳಿಯ ಉಡುಪುಗಳೆಂದರೆ ಬಲು ಇಷ್ಟ. ಹೊಸ ಅಚ್ಚ ಬಿಳಿಯ ಪೈಜಾಮಾ ಕುರ್ತಾ ಧರಿಸಿ ಹೆಂಡತಿಯ ಮುಂದೆ 3-4 ಸಲ ಸುಳಿದಾಡಿದ. ಅವಳು ಏನೂ ಹೇಳದೆ ತನ್ನ ಕೆಲಸ ಮಾಡುತ್ತಿದ್ದಳು.
ಗುಂಡ ತಡೆಯಲಾರದೆ ಕೇಳಿಯೇಬಿಟ್ಟ, “ನಾನು ಈ ಹೊಸ ಡ್ರೆಸ್‌ನಲ್ಲಿ ಹೇಗೆ ಕಾಣ್ತಿದ್ದೀನಿ?”
“ಗೋಣಿಚೀಲ ರಹಿತ ಇಜ್ಜಲು ಮೂಟೆಗೆ ಸುಣ್ಣ ಬಳಿದ ಹಾಗೆ!” ಎಂದಾಗ ಗುಂಡ ದೌಡು.
ಗುಂಡ ತನ್ನ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿದ್ದ. ಅವಳನ್ನು ಐಸಿಯು ವಾರ್ಡಿಗೆ ಶಿಫ್ಟ್ ಮಾಡಿದಾಗ ಗುಂಡ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ. ಅವಳಿಗೆ ಪ್ರಜ್ಞೆ ಮರಳಲು 2 ಗಂಟೆ ಕಾಲ ಬೇಕು ಎಂದರು.
ಗುಂಡ ಡಾಕ್ಟರ್‌ನ್ನು ಪರಿಪರಿಯಾಗಿ ಬೇಡಿಕೊಂಡ, “ಹೇಗಾದರೂ ಅವಳನ್ನು ಉಳಿಸಿಕೊಡಿ….”
“ನಮ್ಮ ಎಲ್ಲಾ ಪ್ರಯತ್ನಗಳೂ ಮೀರಿದ್ದಾಯ್ತು. ಜೀವ ಉಳಿಯುವ ಗ್ಯಾರಂಟಿ ಇಲ್ಲ. ನಿಮ್ಮ ನೆಂಟರಿಷ್ಟರನ್ನು ಕರೆಸಿಬಿಡಿ. ಅಂದಹಾಗೆ, ಈಕೆಗೆ ವಯಸ್ಸು ಎಷ್ಟು?” ಡಾಕ್ಟರ್ ಕೇಳಿದರು.
“ಇನ್ನೂ 40 ಅಷ್ಟೆ… ಸಾಯುವ ವಯಸ್ಸಲ್ಲ….”
“ಏನಾದರೂ ಪವಾಡ ನಡೆಯಬೇಕಷ್ಟೆ….. ನೋಡೋಣ….” ಎಂದರು ಡಾಕ್ಟರ್.
ಇವರ ಮಾತು ಮುಗಿಯುವ ಮುನ್ನವೇ ಅವಳ ದೇಹದಲ್ಲಿ ಸಂಚಲನೆ ಉಂಟಾಗಿತ್ತು. ಕೈ ಬೆರಳು ಅಲುಗಿತು. ಕ್ಷೀಣ ದನಿ ಹೊರಗೆ ಬಂತು.
“ನನಗಿನ್ನೂ 39 ಅಷ್ಟೆ…. 40 ಆಗಿಲ್ಲ….”
ನೆಂಟರಿಗೆ ಗುಂಡ “ಆಲ್ ಈಸ್ ವೆಲ್!” ಎಂದು ಮೆಸೇಜ್ ಕಳುಹಿಸಿದ.
ಮೊದಲ ಬಾರಿ ಗುಂಡ ಫ್ಲೈಟ್ ಏರಿದ್ದ. ಮಿಠಾಯಿ ಕೊಡಲು ಬಂದ ಗಗನಸಖಿಯನ್ನು ಕಂಡು ಆಶ್ಚರ್ಯದಿಂದ, “ನೀನು ನನ್ನ ಹೆಂಡತಿ ಥರಾನೇ ಕಾಣಿಸ್ತೀಯಾ!” ಎಂದು ಉದ್ಗರಿಸಿದ.
ಗುಂಡನ ಹ್ಯಾಪ್ ಮೋರೆಯಿಂದ ಸಿಟ್ಟಿಗೆದ್ದ ಅವಳು ರಪ್ಪನೆ ಅವನ ಕೆನ್ನೆಗೆ ಬಾರಿಸಿದಳು.
“ಅರೆ…. ನಿಮ್ಮಿಬ್ಬರ ಅಭ್ಯಾಸಗಳೂ ಒಂದೇ ತರಹ ಇವೆಯಲ್ಲ….” ಮುಗ್ಧನಾಗಿ ಗುಂಡ ಹೇಳಿದ.
ಅರುಣ್ : ಮಾನವನ ಬುದ್ಧಿ 24 ಗಂಟೆಯೂ ಕೆಲಸ ಮಾಡುತ್ತಲೇ ಇರುತ್ತದೆ. ಕೇವಲ 2 ಸಲ ಮಾತ್ರ ಅದು ಕೆಲಸ ಮಾಡದು.
ಕಿರಣ್: ಅದು ಯಾವಾಗ?
ಅರುಣ್ : ಗಣಿತದ ಪ್ರಶ್ನೆ ಪತ್ರಿಕೆ ಕಂಡಾಗ ಮತ್ತು ಮದುವೆಗೆ ಹುಡುಗಿ ನೋಡಲು ಹೋದಾಗ!
ಗುಂಡಿ ಚೆನ್ನಾಗಿ ಗೊರಕೆ ಹೊಡೆಯುತ್ತಿದ್ದಳು. ಕೊರೆಯುವ ಚಳಿಯಲ್ಲಿ ಎಲ್ಲಿಂದಲೋ ಕಟ ಕಟ ಸದ್ದು ಕೇಳಿಸಿತು.
ಗುಂಡಿ : ಅಯ್ಯೋ ನೋಡ್ರಿ…. ಎಲ್ಲೋ ಇಲಿ ಬಂದು ಸೇರಿಕೊಂಡಿರಬೇಕು. ಕಟ ಕಟ ಸದ್ದು ಬರ್ತಿದೆ, ನನ್ನ ಸೀರೆ ಹಾಳಾದರೆ ಕಷ್ಟ.
ಗುಂಡ : ಸೀರೆ ಮನೆ ಹಾಳಾಯ್ತು… ರಗ್ಗು ಪೂರ್ತಿ ನೀನೇ ಎಳೆದು ಹೊದ್ದುಕೊಂಡರೆ ನಾನು ಚಳಿಗೆ ನಡುಗಿ ಸಾಯ್ತಿದ್ದೀನಿ…. ನನ್ನ ಹಲ್ಲಿನ ಕಟ ಕಟ ಶಬ್ದವದು!
ಗುಂಡ ಗುಂಡಿ ಹುಣ್ಣಿಮೆ ರಾತ್ರಿಯಲ್ಲಿ ಮಹಡಿ ಮೇಲೆ ಮಲಗಿದ್ದರು.
ಗುಂಡಿ : ಡಿಯರ್, ನನಗೆ ಸೇರಿದ ಯಾವುದನ್ನು ಕಂಡರೆ ನಿನಗೆ ತುಂಬಾ ಇಷ್ಟ?
ಗುಂಡ : ನಿನ್ನ ಅನೇಕ ವಿಷಯಗಳು ನನಗೆ ಬಹಳ ಇಷ್ಟ. ಗೊತ್ತಾ?
ಗುಂಡಿ : ಹೌದಾ? ಅದಾವುದು?
ಗುಂಡ : ನಿನ್ನ ತಂಗಿ ಪ್ರಿಯಾ, ನಿನ್ನ ಫ್ರೆಂಡ್ ಪಿಂಕಿ, ನಿನ್ನ ತವರುಮನೆಯ ನೆರೆಯವಳು ಆಶಾ… ಇತ್ಯಾದಿ ಇತ್ಯಾದಿ….
ಗುಂಡಿ : ಹಾಗೇ ನನ್ನ ಈ ತಪರಾಕಿಯೂ ಅಲ್ಲವೇ?
ಸ್ವಲ್ಪ ಹೊತ್ತಿಗೆ ಮಹಡಿಯಿಂದ ಏನೋ ಬಿದ್ದಂತೆ ಆಯಿತಲ್ಲ ಎಂದು ಪಕ್ಕದ ಮನೆಯವರು ನೋಡಲು ಓಡಿಬಂದರಂತೆ!
ಟೀಚರ್ : `ಅವನು ಬಟ್ಟೆಗಳನ್ನು ಒಗೆದ’ ಮತ್ತು `ಅವನು ಬಟ್ಟೆಗಳನ್ನು ಒಗೆಯಲೇ ಬೇಕಾಯಿತು’ ಎಂಬ 2 ವಾಕ್ಯಗಳಿಂದ ನಿಮಗೇನು ವ್ಯತ್ಯಾಸ ತಿಳಿಯುತ್ತದೆ?
ವಿದ್ಯಾರ್ಥಿ : ಮೊದಲ ವಾಕ್ಯ ವ್ಯಕ್ತಿ ಅವಿವಾಹಿತ ಎಂದು, ಎರಡನೇ ವಾಕ್ಯ ವ್ಯಕ್ತಿ ವಿವಾಹಿತ ಎಂದೂ ತಿಳಿಸುತ್ತವೆ.
ಮದುವೆಯಾಗಿ 2 ವರ್ಷ ಕಳೆಯುವಷ್ಟರಲ್ಲಿ ಸರಳಾ ಗಂಡನೊಂದಿಗೆ ಸಾಕಷ್ಟು ಜಗಳವಾಡಿ ರೋಸಿಹೋಗಿದ್ದಳು. “ಮನೆಗಾಗಿ ನಾನು ಎಷ್ಟು ಕಷ್ಟ ಪಡ್ತೀನಿ ನೋಡಿ… ನನ್ನ ಕೊರಳಿಗೊಂದು ಕರಿಮಣಿ ಸರ ಕಟ್ಟಿ ಗೆದ್ದುಬಿಟ್ರಿ… ನನ್ನ ಪಾಡು ನೋಡಿ!”
ಆಗ ಅವಳ ಗಂಡ ರಮಣ ಅವಳನ್ನು ಕೂರಿಸಿಕೊಂಡು ವಿವರಿಸಿದ : “ಮನೆಯ ರೇಷನ್, 15,000, ಕರೆಂಟ್ ಬಿಲ್ 2 ಸಾವಿರ, ನೀರಿನ ಬಿಲ್ 2,000, ಮಕ್ಕಳ ಫೀಸ್ 10,000, ಮನೆ ಬಾಡಿಗೆ 8,000, ಔಷಧಿ ಖರ್ಚು 3 ಸಾವಿರ, ಪೆಟ್ರೋಲ್ ಖರ್ಚು 2,000 ಇನ್ನು ಉಳಿದ ಖರ್ಚು… 5 ಸಾವಿರ! ಇಷ್ಟೆಲ್ಲ ತೀರಿಸುತ್ತಿರುವುದು ಕರಿಮಣಿ ಕಟ್ಟಿದ್ದಕ್ಕೆ ತಾನೇ? ಒಬ್ಬನೇ ರೂಮಿನಲ್ಲಿ ಉಳಿದಿದ್ದರೆ 5 ಸಾವಿರದಲ್ಲಿ ನನ್ನ ಎಲ್ಲಾ ಖರ್ಚೂ ಕಳೆಯುತ್ತಿತ್ತು……”
ಗಂಡ ಹೆಂಡತಿ ಬೆಳಗಿನ ಪೇಪರ್ ಓದುತ್ತಾ ಕಾಫಿ ಗುಟುಕರಿಸುತ್ತಾ ಕುಳಿತಿದ್ದರು. ಒಂದು ಸುದ್ದಿ ಓದಿದ ಆಕೆ, “ನೋಡ್ರಿ…. 80 ವರ್ಷದ ಅವಿವಾಹಿತ ತಾತಾ ಒಬ್ಬರು ಮದುವೆ ಮಾಡಿಕೊಂಡರಂತೆ. ಹೀಗೂ ಉಂಟೆ…..?”
“ಪಾಪ! ಆ ತಾತಾ ಇಡೀ ಜೀವನ ಬುದ್ಧಿವಂತಿಕೆ ಇಂದ ಕಳೆದರು. ವೃದ್ಧಾಪ್ಯದಿಂದ ಅರಳು ಮರುಳು ಹೆಚ್ಚಾಗಿರಬೇಕು!”