ಅನೀತಾ ಕುಂಡೂ ಪರ್ವತಾರೋಹಿ
ಅನೀತಾ ಕುಂಡೂ ಎಂಥ ಧೈರ್ಯವಂತ ಹುಡುಗಿ ಎಂದರೆ ಎಂಥವರೂ ಅಚ್ಚರಿ ಪಡಬೇಕು. ಈಕೆ ಹರಿಯಾಣಾದ ಹಿಸಾರ್
ಜಿಲ್ಲೆಯ ಬಹು ಹಿಂದುಳಿದ ಹಳ್ಳಿ ಫರೀದಾಪುರ್ ನಿವಾಸಿ. ಅಲ್ಲಿಂದ ಆಕೆ ದಾಪುಗಾಲು ಹಾಕಿ ಮುಂದುವರಿದದ್ದು ಹೇಗೆಂದರೆ, ಅದು ಹೋಗಿ ನಿಂತದ್ದು ಎವರೆಸ್ಟ್ ಶಿಖರದ ಮೇಲೆಯೇ! ಅದೂ ಒಂದಲ್ಲ…. ಎರಡೆರಡು ಸಲ!
ಅನೀತಾ ಮೊದಲು 2013ರ ಮೇ 18ರಂದು ನೇಪಾಳದ ಮಾರ್ಗವಾಗಿ ಈ ಶಿಖರಾರೋಹಣ ಮಾಡಿದರು. ಅದಾದ ಮೇಲೆ ಆಕೆ 2017ರ ಮೇ 21ರಂದು ಎರಡನೇ ಸಲ ಚೀನಾ ಮಾರ್ಗವಾಗಿ ಈ ಅದ್ಭುತ ವಿಜಯ ಸಾಧಿಸಿದರು. ಇಂಥ ಕಠಿಣ ಮಾರ್ಗ ಆರಿಸಿದ ಪ್ರಥಮ ಭಾರತೀಯ ಮಹಿಳೆ ಆಕೆ.
ಪ್ರೇರಣೆಯ ಮೂಲ
ಅನೀತಾ ತಮ್ಮ ಕುರಿತಾಗಿ ಹೇಳುತ್ತಾರೆ,“ನಾನು 1986ರ ಜನವರಿ 26 ರಂದು ಹುಟ್ಟಿದೆ. ನನ್ನ ತಾಯಿ ರಾಜಪತಿ ದೇವಿ ಹಾಗೂ ತಂದೆ ಈಶ್ವರ್ ಸಿಂಗ್. ಅವರಿಬ್ಬರೂ ಅನಕ್ಷರಸ್ಥರು, ಆದರೆ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿದರು. ಹೀಗಾಗಿಯೇ ನಾನು ರಾಜ್ಯಶಾಸ್ತ್ರದಲ್ಲಿ M A ಮಾಡಲು ಸಾಧ್ಯವಾಯ್ತು.
“ನನ್ನ ತಂದೆ ರೈತ. 1-2 ಎಕರೆ ಹೊಲ ಇರಲಿಲ್ಲ. ಆದಾಯವಂತೂ ಬಹಳ ಕನಿಷ್ಠ. 2001ರಲ್ಲಿ ನನ್ನ ತಂದೆ ತೀರಿಕೊಂಡಾಗ ಕಾಲ ಕೆಳಗಿನ ನೆಲ ಕುಸಿದಂತಾಯ್ತು. ಅವರು ತೀರಿಕೊಂಡ ವರ್ಷದೊಳಗೇ ನನ್ನ ಮದುವೆ ಮಾಡಿ ಮುಗಿಸಿ ಎಂದು ನೆಂಟರು ಅಮ್ಮನ ಮೇಲೆ ಒತ್ತಡ ಹೇರಿದರು. ಆದರೆ ನನ್ನ ತಂದೆಗೆ ನಾನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಹೆಸರು ಗಳಿಸಬೇಕೆಂಬ ಆಸೆಯಿತ್ತು. ಹೀಗಾಗಿ ನಾನು ಈಗಲೇ ಮದುವೆ ಬೇಡವೆಂದೆ. ಎಲ್ಲರೂ ಕೋಪಿಸಿಕೊಂಡರು.
“12ನೇ ತರಗತಿ ಮುಗಿಸಿ ನಾನು ಉನ್ನತ ಶಿಕ್ಷಣಕ್ಕಾಗಿ ಪದವಿ ಪಡೆಯಲು ಕಾಲೇಜು ಸೇರಬಯಸಿದೆ, ಆದರೆ ನೆರೆಹೊರೆಯ ಮಂದಿ ಇದನ್ನು ಒಪ್ಪಲಿಲ್ಲ. ಅವರ ಅಭಿಪ್ರಾಯದಲ್ಲಿ ಹುಡುಗಿ ಹೆಚ್ಚು ಕಲಿತಷ್ಟೂ ಅವಳು ಆಧುನಿಕಳಾಗಿ ದಾರಿ ತಪ್ಪುತ್ತಾಳೆ, ಮುಂದೆ ಮದುವೆಗೆ ಅದಕ್ಕಿಂತ ಹೆಚ್ಚು ಓದಿದ ಗಂಡನ್ನು ಎಲ್ಲಿಂದ ತರುವುದು? ಕಾಲೇಜಿನಿಂದ ಹಾಗೇ ಓಡಿಹೋದರೂ ಆಶ್ಚರ್ಯವಿಲ್ಲ, ಹೀಗೆಲ್ಲ ಅಮ್ಮನಿಗೆ ಹೇಳಿ ಆಕೆಯ ತಲೆ ಕೆಡಿಸಿದರು. ಆದರೆ ನನ್ನ ಪುಣ್ಯಕ್ಕೆ ಅಮ್ಮ ಅವರಿಗೆ ಕಿವಿಗೊಡದೆ ನನ್ನನ್ನು ಮುಂದೆ ಓದಿಸಿದರು.
“ನಾನು ಮೊದಲಿನಿಂದಲೂ ಕಬಡ್ಡಿಯ ಕ್ರೀಡಾಪಟು, ಬಾಕ್ಸಿಂಗ್ ಸಹ ಕಲಿತಿದ್ದೆ. ಆದರೆ ಹಣದ ಕೊರತೆಯ ಕಾರಣ ಯಾವುದರಲ್ಲೂ ಹೆಚ್ಚು ತರಬೇತಿ ಹೊಂದಲು ಆಗಲಿಲ್ಲ. ನಾನು 2008ರಲ್ಲಿ ಹರಿಯಾಣಾ ಪೊಲೀಸ್‌ನಲ್ಲಿ ಕಾನ್‌ಸ್ಟೇಬಲ್ ಆಗಿ ಸೇರಿದೆ. ಆಗ ಡಿಪಾರ್ಟ್‌ಮೆಂಟ್‌ನಿಂದ ಪರ್ವತಾರೋಹಣಕ್ಕಾಗಿ ಫಾರ್ಮ್ ಸೆಲೆಕ್ಟ್ ಮಾಡಿದರು. ಇದಕ್ಕೆ ಸೇರಿದ ನಾನು ಮನದಲ್ಲಿ ಆಶಾಭಾವನೆ ಬೆಳೆಸಿಕೊಂಡೆ.
“ಮುಂದೆ ನಾನು ಎವರೆಸ್ಟ್ ಪರ್ವತಾರೋಹಣ ಮಾಡುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದಾಗ ನನ್ನ ಹಿರಿಯ ಅಧಿಕಾರಿಯೊಬ್ಬರು, ನಿನ್ನಂಥ ಹೆಂಗಸರಿಗಲ್ಲ ಈ ಸಾಹಸ, ತೆಪ್ಪಗಿರು ಎಂದು ಹಂಗಿಸಿದರು. ಆದರೆ ನಾನು ಧೈರ್ಯಗುಂದಲಿಲ್ಲ. ಆದರೆ ಈ ಪ್ರಾಜೆಕ್ಟ್ ಪೂರೈಸಲು ಹೆಚ್ಚಿನ ಮೊತ್ತದ ಹಣ ಬೇಕಿತ್ತು. ಹೀಗಾಗಿ ವಿಧಿಯಿಲ್ಲದೆ ನಾವು ಊರಿನಲ್ಲಿ ನಮಗಿದ್ದ ಒಂದೇ ಮನೆಯನ್ನು ಮಾರಬೇಕಾಯಿತು. ನನ್ನ ಚಿಕ್ಕಪ್ಪನ ಮಕ್ಕಳಾದ ರಮೇಶ್ ಮತ್ತು ಸಂದೀಪ್ ನನಗೆ ಇನ್ನಷ್ಟು ಹಣ ಜೋಡಿಸಿಕೊಟ್ಟರು.
“2013ರ ಏಪ್ರಿಲ್ ರಂದು ನೇಪಾಳದ ಏಷ್ಯನ್ ಟ್ರೆಕಿಂಗ್ ಕಂಪನಿ ನೆರವಿನಿಂದ ನಮ್ಮ ಪರ್ವತಾರೋಹಣದ ಯಾತ್ರೆ ಶುರುವಾಯಿತು. ಅದೇ ವರ್ಷ ಮೇ 30ರಂದು ಯಶಸ್ವಿಯಾಗಿ ಎವರೆಸ್ಟ್ ಏರಿ, ಭಾರತದ ಧ್ವಜ ಹಾರಿಸಿ, ಮರಳಿದ್ದಾಯಿತು.
“ನಾನು ಎವರೆಸ್ಟ್ ಶಿಖರ ಏರಿದಾಗ, ಬಲು ರೋಮಾಂಚನಗೊಂಡಿದ್ದೆ! ನನಗಂತೂ ದೇಹವಿಡೀ ಹೆಮ್ಮೆಯ ಭಾವ ತುಂಬಿ ಗಂಟಲುಬ್ಬಿ ಬಂದಿತ್ತು. ನನ್ನ ಕೈಲಿದ್ದ ಧ್ವಜ, ನನ್ನನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತ್ತು.”
ಎರಡನೇ ಸಲ ಯಶಸ್ವಿ
ನೇಪಾಳಕ್ಕೆ ಹೋಲಿಸಿದಾಗ ಚೀನಾ ಮಾರ್ಗವಾಗಿ ಎವರೆಸ್ಟ್ ಏರುವುದು ಖಂಡಿತಾ ಸುಲಭವಲ್ಲ. 2015ರಲ್ಲಿ ಅನೀತಾ ಈ ಮಾರ್ಗವಾಗಿ ಹೊರಟು ಗಮ್ಯ ತಲುಪಿದರು. ಆದರೆ ದುರಾದೃಷ್ಟವಶಾತ್, ಅದೇ ಸಮಯದಲ್ಲಿ ದೊಡ್ಡ ಭೂಕಂಪನ ನಡೆದು ಅವರ ಆಸೆಗಳಿಗೆ ತಣ್ಣೀರು ಬಿತ್ತು. ಆಗ ಚೀನಾ ಸರಕಾರ ಇವರ ತಂಡವನ್ನು ಮೇಲೇರಲು ಬಿಡಲೇ ಇಲ್ಲ.
ಅನೀತಾ ಹೇಳುತ್ತಾರೆ, “ನಾವು ಈಗಾಗಲೇ ಚಾರಣ ಶುರು ಮಾಡಿದ್ದೆವು. ಮಧ್ಯದಲ್ಲಿ ಅದನ್ನು ಮೊಟಕುಗೊಳಿಸಿ ಹಿಂದಿರುಗುವುದು ಎಂದರೆ ಬಲು ದುಃಖದ ಸಂಗತಿ. ಇದರಲ್ಲಿ ನನ್ನ ಬಹಳಷ್ಟು ಹಣ ಹೂಡಿಕೆ ಆಗಿತ್ತು. ಆದರೆ ಎಲ್ಲ ವ್ಯರ್ಥವಾಯ್ತು….. ಆದರೆ ಇದರಿಂದಲೂ ನಾನು ಧೃತಿಗೆಡಲಿಲ್ಲ. ಮುಂದೆ 2 ವರ್ಷಗಳ ನಂತರ 2017ರ ಏಪ್ರಿಲ್‌ನಲ್ಲಿ ಮತ್ತೆ ಅದೇ ಚೀನಾ ಮಾರ್ಗವಾಗಿ ಎವರೆಸ್ಟ್ ಶಿಖರದ ಕಡೆ ನಡೆದೆ. ಮೇ 21ರಂದು ಬೆಳಗ್ಗೆ 7 ಗಂಟೆ ಹೊತ್ತಿಗೆ ನಾನು ನನ್ನ ಗುರಿ ತುಲಪಿದ್ದೆ!”
ಹೆಚ್ಚಿದ ಆತ್ಮವಿಶ್ವಾಸ
ಅನೀತಾ ಮುಂದುವರಿಸುತ್ತಾರೆ, “2 ಸಲ ಹೀಗೆ ಯಶಸ್ವಿಯಾಗಿ ಪರ್ವತಾರೋಹಣ ಮುಗಿಸಿ, ನನ್ನ ಆತ್ಮವಿಶ್ವಾಸ ಬಹಳಷ್ಟು ಹೆಚ್ಚಿದೆ. ಎಂಥ ಭಯಂಕರ ಪರಿಸ್ಥಿತಿ ಇದ್ದರೂ ಅದನ್ನು ಎದುರಿಸುವುದು ಹೇಗೆ ಎಂಬುದನ್ನು ಎವರೆಸ್ಟ್ ಶಿಖರಾರೋಹಣ ಕಲಿಸುತ್ತದೆ. ಅದರಿಂದ ನಾವು ಜೀವನದಲ್ಲಿ ಹೇಗಿದ್ದರೂ ಬದುಕಿ ತೋರಿಸಬಹುದೆಂಬ ಪಾಠ ಕಲಿತೆ. ಅಲ್ಲಿ ನಾವು ಸಾಧಿಸಿದ ವಿಜಯಕ್ಕೆ ಯಾರೂ ಚಪ್ಪಾಳೆ ತಟ್ಟುವವರು ಇರುವುದಿಲ್ಲ. ಆಗ ನಮ್ಮ ಆತ್ಮವಿಶ್ವಾಸ ಒಂದೇ ಮೂಲಾಧಾರ. ಹೀಗಾಗಿ ನನ್ನ ಒಂದೊಂದು ಹೆಜ್ಜೆಯಿಂದಲೂ ನನ್ನ ಕನಸನ್ನು ನನಸಾಗಿಸುವ ಎತ್ತರ ಏರತೊಡಗಿದೆ. ಮುಂದಿನ ದಿನಗಳಲ್ಲಿ ವಿದೇಶಗಳ ಪರ್ವತಾರೋಹಣ ಮಾಡಿ ಅಲ್ಲಿ ಭಾರತದ ಧ್ವಜ ಹಾರಿಸಬೇಕು ಎಂದಿದ್ದೇನೆ!”
– ಸುಶೀಲಾ ಶರ್ಮ