ಬಿಸಿಬೇಳೆ ಭಾತ್ ಮಿಕ್ಸ್
ಸಾಮಗ್ರಿ : ಸುಮಾರು 250 ಗ್ರಾಂ ಹೆಚ್ಚಿದ ತರಕಾರಿ ಹೋಳು (ಬೀನ್ಸ್, ಕ್ಯಾರೆಟ್, ಆಲೂ, ಬಟಾಣಿ ಕಾಳು, ಕ್ಯಾಪ್ಸಿಕಂ, ನವಿಲುಕೋಸು ಇತ್ಯಾದಿ), 150 ಗ್ರಾಂ ಅಕ್ಕಿ, 100 ಗ್ರಾಂ ತೊಗರಿಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಹುಣಿಸೇ ಕಿವುಚಿದ ರಸ, ಬೆಲ್ಲ, ಈಸ್ಟರ್ನ್ ಬಿಸಿಬೇಳೆ ಭಾತ್ ಮಸಾಲ, ಒಗ್ಗರಣೆಗೆ ಅರ್ಧರ್ಧ ಸೌಟು ಎಣ್ಣೆ ತುಪ್ಪ, ಸಾಸುವೆ, ಜೀರಿಗೆ, ಕರಿಬೇವು, ಗೋಡಂಬಿ.
ವಿಧಾನ : ಮೊದಲು ದೊಡ್ಡ ಕುಕ್ಕರ್‌ನಲ್ಲಿ ತುಸು ತುಪ್ಪ ಬಿಸಿ ಮಾಡಿ ಗೋಡಂಬಿ ಹುರಿದು ತೆಗೆಯಿರಿ. ನಂತರ ಇದಕ್ಕೆ ಎಣ್ಣೆ ಹಾಕಿ, ಒಗ್ಗರಣೆ ಕೊಡಿ. ಆಮೇಲೆ ತರಕಾರಿ ಹೋಳು ಹಾಕಿ ಬಾಡಿಸಿ. ನಂತರ ತೊಳೆದ ಬೇಳೆ, ಅಕ್ಕಿ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಆಮೇಲೆ ಇದಕ್ಕೆ ಹುಣಿಸೇ ರಸ, ಉಪ್ಪು, ಬೆಲ್ಲ, ಇಂಗು, ಚಿಟಕಿ ಅರಿಶಿನ ಹಾಕಿ ಕೈಯಾಡಿಸಿ. ಈಸ್ಟರ್ನ್ ಬಿಸಿಬೇಳೆ ಭಾತ್ ಮಸಾಲ, ಇದಕ್ಕೆ 2 ಲೋಟ ನೀರು ಬೆರೆಸಿ ಚೆನ್ನಾಗಿ ಕುದಿಯಲು ಬಿಡಿ. ಅರೆ ಬೆಂದಿದೆ ಎನಿಸಿದಾಗ ಉಳಿದ ತುಪ್ಪ, ಗೋಡಂಬಿ ಹಾಕಿ ಕೆದಕಿ, 3 ಸೀಟಿ ಬರುವಂತೆ ಕೂಗಿಸಿ. ಬಿಸಿ ಇರುವಾಗಲೇ ಇದಕ್ಕೆ ಇನ್ನಷ್ಟು ತುಪ್ಪ ಹಾಕಿ, ಖಾರಾ ಬೂಂದಿ ಉದುರಿಸಿ ಸವಿಯಲು ಕೊಡಿ.
ಸ್ವಾದಿಷ್ಟ ವಾಂಗಿ ಭಾತ್
ಸಾಮಗ್ರಿ : 1 ಪಾವು ಅಕ್ಕಿಯಿಂದ ತಯಾರಿಸಿದ ಉದುರುದುರಾದ ಅನ್ನ, 250 ಗ್ರಾಂ ಬಿಳಿ ಬದನೇಕಾಯಿ, 1 ಕಪ್ ಕೊಬ್ಬರಿ ತುರಿ, ಅರ್ಧ ಕಪ್ ಬೆಂದ ಬಟಾಣಿ ಕಾಳು, ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಕ/ಉ ಬೇಳೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಈಸ್ಟರ್ನ್ ವಾಂಗಿ ಭಾತ್ ಮಸಾಲ, ಹುಣಿಸೇ ಕಿವುಚಿದ ರಸ, 2 ಚಿಟಕಿ ಅರಿಶಿನ.
ವಿಧಾನ : ಮೊದಲು ಬದನೆಯನ್ನು ತೆಳ್ಳಗೆ, ಉದ್ದಕ್ಕೆ 1 ಅಂಗುಲ ಇರುವಂತೆ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಟ್ಟು ಚಟಪಟಾಯಿಸಿ. ಇದಕ್ಕೆ ಬದನೆ ಹೋಳು ಹಾಕಿ ಮಂದ ಉರಿಯಲ್ಲಿ ಹದನಾಗಿ ಬಾಡಿಸಿ. ಆಮೇಲೆ ಕೊಬ್ಬರಿ ತುರಿ, ಬಟಾಣಿ ಹಾಕಿ ಕೆದಕಿ, ಉಪ್ಪು, ಈಸ್ಟರ್ನ್ ಮಸಾಲ, ಹುಣಿಸೇ ರಸ ಹಾಕಿ (ಹೆಚ್ಚು ನೀರಾಗದಂತೆ) ಪಲ್ಯ ಕೆದಕಬೇಕು. ಒಂದು ಬೇಸನ್ನಿಗೆ ಅನ್ನ ಹಾಕಿ ಹರಡಿಕೊಂಡು ಅದರ ಮೇಲೆ ಈ ಪಲ್ಯ ಹರಡಿ ಹದವಾಗಿ ಬೆರೆಸಿರಿ. ಇದನ್ನು ಸರ್ವಿಂಗ್ ಪ್ಲೇಟಿಗೆ ಹಾಕಿ, ಮೇಲೆ ಗರಿಗರಿ ಆಲೂ ಚಿಪ್ಸ್ ಉದುರಿಸಿ ಸವಿಯಲು ಕೊಡಿ.