ಕೋಶಾ ಮಾಂಗ್‌ ಶೋ

ಸಾಮಗ್ರಿ : 500 ಗ್ರಾಂ ಮಟನ್‌ ಪೀಸಸ್‌, 2 ಸೌಟು ರೀಫೈಂಡ್‌ ಎಣ್ಣೆ, ತುಸು ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹುಳಿ ಮೊಸರು, ಹೆಚ್ಚಿದ 4-5 ಈರುಳ್ಳಿ.

ವಿಧಾನ : ಮೊದಲು ಪ್ರೆಷರ್‌ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಚಟಪಟಾಯಿಸಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಅರಿಶಿನ ಹಾಕಿ ಚೆನ್ನಾಗಿ ಕೆದಕಬೇಕು. ಆಮೇಲೆ ಮಟನ್‌ ಪೀಸಸ್‌ ಹಾಕಿ ಚೆನ್ನಾಗಿ ಫ್ರೈ ಮಾಡಿ. ಆಮೇಲೆ ಮೊಸರು ಬೆರೆಸಿ ಮಂದ ಉರಿಯಲ್ಲಿ ಕುದಿಸಿ. ನಂತರ ಮುಚ್ಚಳ ಮುಚ್ಚಿರಿಸಿ 4-5 ಸೀಟಿ ಬರುವಂತೆ ಕೂಗಿಸಿ. ಬಿಸಿ ಇರುವಾಗಲೇ ಇದನ್ನು ಅನ್ನದ ಜೊತೆ ಸವಿಯಲು ಕೊಡಿ.

ಸ್ವಾದಿಷ್ಟ ಸಂದೇಶ್

ಸಾಮಗ್ರಿ : 150 ಗ್ರಾಂ ಪನೀರ್‌, ಅರ್ಧ ಕಪ್‌ ಮಸೆದ ಖೋವಾ, ತುಸು ಏಲಕ್ಕಿ ಪುಡಿ, ಹಾಲಲ್ಲಿ ನೆನೆಸಿದ ಕೇಸರಿ, ಅರ್ಧ ಕಪ್‌ಸಕ್ಕರೆ, ಉದ್ದಕ್ಕೆ ಹೆಚ್ಚಿದ ತುಸು ಬಾದಾಮಿ ಚೂರು.

ವಿಧಾನ : ಮೊದಲು ಪನೀರ್‌ ಹಾಗೂ ಖೋವಾ ಎರಡನ್ನೂ ಬೇರೆ ಬೇರೆಯಾಗಿ ಮಸೆಯಿರಿ. ಆಮೇಲೆ ಇವೆರಡರ ಜೊತೆ ಸಕ್ಕರೆ ಬೆರೆಸಿ ಮತ್ತೆ ಮತ್ತೆ ಮಸೆದು ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ, ಅರ್ಧ ಅಂಗುಲದ  ಪದರ ಬರುವಂತೆ ತಟ್ಟಿ ರೆಡ್ಡಿ ಮಾಡಿ. ಆಮೇಲೆ ಇದನ್ನು ಫ್ರಿಜ್‌ನಲ್ಲಿಟ್ಟು ಚೆನ್ನಾಗಿ ಸೆಟ್‌ ಆಗಲು ಬಿಡಿ. ನಂತರ ಮೇಲಿನ ಚಿತ್ರದಲ್ಲಿರುವಂತೆ ಗುಂಡಗೆ ಅಥವಾ ಡೈಮಂಡ್‌ ಆಕಾರದಲ್ಲಿ ಕತ್ತರಿಸಿ ಸವಿಯಲು ಕೊಡಿ.

ಮಿಷ್ಟಿ ದೋಯಿ

ಸಾಮಗ್ರಿ : 1 ಲೀ. ಫುಲ್ ಕ್ರೀಂ ಗಟ್ಟಿ ಹಾಲು, 300 ಗ್ರಾಂ ಮುದ್ದೆ ಬೆಲ್ಲ, 2 ಚಮಚ ಮೊಸರು.

ವಿಧಾನ : ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕಾಯಿಸಿ. ನಂತರ ಇದನ್ನು ಮಂದ ಉರಿಯಲ್ಲಿ ಕುದಿಸುತ್ತಾ, ಇದರ ಮುಕ್ಕಾಲು ಭಾಗ ಹಿಂಗುವಂತೆ ಮಾಡಿ. ನಂತರ ಒಂದು ಬಾಣಲೆಯಲ್ಲಿ ಪುಡಿ ಮಾಡಿದ ಮುದ್ದೆ ಬೆಲ್ಲ ಹಾಕಿ, ತುಸುವೇ ನೀರು ಬೆರೆಸಿ ಕರಗುವಂತೆ ಮಾಡಿ. ಇದನ್ನು ಕುದಿ ಹಾಲಿಗೆ ಬೆರೆಸಿಕೊಳ್ಳಿ. 5 ನಿಮಿಷ ಕೈಯಾಡಿಸಿ ಕೆಳಗಿಳಿಸಿ ಆರಲು ಬಿಡಿ. ತುಸು ಬೆಚ್ಚಗಿರುವಾಗಲೇ ಇದಕ್ಕೆ ಮೊಸರು ಬೆರೆಸಿ ಹೆಪ್ಪು ಹಾಕಿ. 2-3 ತಾಸು ಇದನ್ನು ಹಾಗೇ ಬಿಟ್ಟರೆ, ಗಟ್ಟಿ ಕೆನೆ ಮೊಸರು ಸಿದ್ಧವಾಗುತ್ತದೆ. ಸಿಹಿಯಾದ ಇದುವೇ ಮಿಷ್ಟಿ ದೋಯಿ! ಇದನ್ನು 2 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಕೋಲ್ಕತಾ ಬಿರಿಯಾನಿ

ಬಿರಿಯಾನಿ ಮಸಾಲೆ ಸಾಮಗ್ರಿ : ಒಂದಿಷ್ಟು ಏಲಕ್ಕಿ, ಲವಂಗ, ಚಕ್ಕೆ, ತುಸು ತೇದ ಜಾಯಿಕಾಯಿ ರಸ, ಸ್ಟಾರ್‌ ಅನೀಸ್‌, ಜೀರಿಗೆ, ಎಳ್ಳು, ಕಾಳುಮೆಣಸು.

ಮಟನ್‌ ಸಾಮಗ್ರಿ : 500 ಗ್ರಾಂ ಮಟನ್‌ ತುಂಡು, ಅರ್ಧ ಕಪ್‌ ಗಟ್ಟಿ ಹುಳಿಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್, ಗರಂ ಮಸಾಲ, ಚಾಟ್‌ ಮಸಾಲ, ವೈಟ್‌ ಪೆಪ್ಪರ್‌, ಬಿರಿಯಾನಿ ಮಸಾಲ.

ಬಿರಿಯಾನಿಗೆ ಸಾಮಗ್ರಿ : 2 ಕಪ್‌ ಬಾಸುಮತಿ ಅಕ್ಕಿ, 1 ಬೇ ಲೀಫ್‌, 4-5 ಏಲಕ್ಕಿ, 1 ಸಣ್ಣ ಚಮಚ ಲವಂಗ, 2-3 ತುಂಡು ದಾಲ್ಚಿನ್ನಿ, ತುಸು ತೇದ ಜಾಯಿಕಾಯಿ ರಸ, ಅರ್ಧರ್ಧ ಚಮಚ ಜೀರಿಗೆ, ಸೋಂಪು, ಎಳ್ಳು, ಕಾಳುಮೆಣಸು, 4 ಚಮಚ ತುಪ್ಪ, 5 ಚಮಚ ಬೆಣ್ಣೆ, ರುಚಿಗೆ  ತಕ್ಕಷ್ಟು ಉಪ್ಪು ಖಾರ, 3-4 ಈರುಳ್ಳಿ, 3 ಬೆಂದ ಮೊಟ್ಟೆ, 8-10 ಎಸಳು ಕೇಸರಿ, 2-3 ಆಲೂ, ಅರ್ಧ ಕಪ್‌ ಹಾಲು, 2-3 ಹನಿ ಗುಲಾಬಿ ಎಸೆನ್ಸ್, 4-5 ಹನಿ ಕೇದಗೆ ಎಸೆನ್ಸ್, ಅಲಂಕರಿಸಲು ಸಲಾಡ್‌.

ವಿಧಾನ : ಕಬ್ಬಿಣದ ಬಾಣಲೆಯಲ್ಲಿ ಎಲ್ಲಾ ಸಾಮಗ್ರಿಗಳನ್ನೂ ಬೇರೆ ಬೇರೆಯಾಗಿ ಹುರಿಯಿರಿ. ಈ ಮಸಾಲೆಗಳ ಪೌಡರ್ ಮಾಡಿಕೊಳ್ಳಿ. ಇದುವೇ ಬಿರಿಯಾನಿ ಮಸಾಲೆ. ಒಂದು ದೊಡ್ಡ ಬಟ್ಟಲಿಗೆ ಗಟ್ಟಿ ಮೊಸರು ಹಾಕಿ ಕಡೆಯಿರಿ. ಇದಕ್ಕೆ ಉಪ್ಪು, ಮಟನ್ ಹೊರತುಪಡಿಸಿ ಬಾಕಿ ಎಲ್ಲಾ ಸಾಮಗ್ರಿ ಸೇರಿಸಿ ಗಟ್ಟಿ ಪೇಸ್ಟ್ ಮಾಡಿಕೊಳ್ಳಿ. ಆಮೇಲೆ ಅವೆರಡನ್ನೂ ಬೆರೆಸಿ 4-5 ಗಂಟೆ ಕಾಲ ನೆನೆಯಲು ಬಿಡಿ. ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ನೆನೆಹಾಕಿಡಿ. ಆಮೇಲೆ ಬಿರಿಯಾನಿಯ ಎಲ್ಲಾ ಮಸಾಲೆ ಸೇರಿಸಿ ಒಂದು ಮಸ್ಲಿನ್‌ ಬಟ್ಟೆಯಲ್ಲಿ ಗಂಟು ಕಟ್ಟಿ ಸೀಲ್ ಮಾಡಿ. ಅದಕ್ಕೆ ಅಕ್ಕಿ, ಉಪ್ಪು, ತುಪ್ಪ, ಬೆಣ್ಣೆ, ಬೇ ಲೀಫ್‌ ಸೇರಿಸಿರಬಾರದು. ಒಂದು ದೊಡ್ಡ ಕುಕ್ಕರ್‌ನಲ್ಲಿ ನೀರು ಕುದಿಸಿ ಲೀಫ್‌, ಉಪ್ಪು, ಬೆಣ್ಣೆ, ತುಪ್ಪ, ಮಸಾಲೆ ಗಂಟನ್ನು ಹಾಕಿಡಿ. ಇದಕ್ಕೆ ಅಕ್ಕಿ, ನೀರು ಬೆರೆಸಿ ಅರ್ಧದಷ್ಟು ಬೇಯಿಸಿ. ಮೇಲ್ಭಾಗದ ನೀರು ಬಸಿದು, ಈ ಅನ್ನವನ್ನು ಅಗಲದ ಪರಾತದಲ್ಲಿ ಹರಡಿರಿ. ಬೇ ಲೀಫ್‌, ಮಸಾಲೆ ಗಂಟನ್ನು ತೆಗೆದುಬಿಡಿ. ಒಂದು ಬಾಣಲೆಯಲ್ಲಿ 3 ಚಮಚ ತುಪ್ಪ, ಬೆಣ್ಣೆ ಬಿಸಿ ಮಾಡಿ. ಇದರಲ್ಲಿ ಈರುಳ್ಳಿಯನ್ನು ಬಾಡಿಸಿ. ಆಮೇಲೆ ಹೆಚ್ಚಿದ ಆಲೂ, ಮಟನ್‌ ಹಾಕಿ ಬೇಯಲು ಬಿಡಿ. ಹಾಲಲ್ಲಿ ನೆನೆಸಿದ ಕೇಸರಿಗೆ ಕೇದಗೆ ಎಸೆನ್ಸ್, ಗುಲಾಬಿ ಎಸೆನ್ಸ್ ಹಾಕಿ 15 ನಿಮಿಷ ಬೇರೆ ಇರಿಸಿ. ಒಂದು ದೊಡ್ಡ ಪಾತ್ರೆಗೆ ಅನ್ನ, ಗ್ರೇವಿ, ಮಟನ್‌, ಆಲೂ, ಮೊಟ್ಟೆಗಳ ಪದರ ಜೋಡಿಸಿ. ಇದರ ಮೇಲೆ ತುಪ್ಪ, ಕೇಸರಿ ಮಿಶ್ರಣ ಹರಡಿರಿ. ಆಮೇಲೆ ಇವನ್ನು ಸರ್ವಿಂಗ್‌ ಪ್ಲೇಟ್‌ಗೆ ಹರಡಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ