ರಾಗಿ ದೋಸೆ

ಸಾಮಗ್ರಿ : 2 ಕಪ್‌ ರಾಗಿ ಹಿಟ್ಟು, ಅರ್ಧ ಕಪ್‌ ಹುರಿದ ರವೆ, 1 ಕಪ್‌ ಹುಳಿ ಮೊಸರು, 4-5 ಚಮಚ ಸಬ್ಬಕ್ಕಿ (4 ಘಂಟೆ ಕಾಲ ಮಜ್ಜಿಗೆಯಲ್ಲಿ ನೆನೆಸಿಡಿ), 2 ಈರುಳ್ಳಿ, 3 ಬಗೆಯ ಕ್ಯಾಪ್ಸಿಕಂ (1-1), 4 ಚಮಚ ತುರಿದ ಕ್ಯಾರೆಟ್‌, 1 ದೊಡ್ಡ ಟೊಮೇಟೊ, 2-2 ಚಮಚ ಸಣ್ಣಗೆ ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಶುಂಠಿ, 1 ಸಣ್ಣ ಚಮಚ ಈನೋ ಫ್ರೂಟ್‌ ಸಾಲ್ಟ್, ದೋಸೆಗೆ ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಖಾರ.

ವಿಧಾನ : ಮೊದಲು ಕ್ಯಾರೆಟ್‌ ತುರಿದುಕೊಂಡು, ಉಳಿದೆಲ್ಲ ತರಕಾರಿ ಸಣ್ಣಗೆ ಹೆಚ್ಚಿಡಿ. ರಾಗಿ ಹಿಟ್ಟಿಗೆ ಹುರಿದ ರವೆ, ನೆನೆದ ಸಬ್ಬಕ್ಕಿ, ಮೊಸರು, ಹೆಚ್ಚಿದ ಪದಾರ್ಥಗಳು, ಉಪ್ಪು, ಖಾರ ಎಲ್ಲಾ ಬೆರೆಸಿಡಿ. ಇದನ್ನು 40 ನಿಮಿಷ ಹಾಗೇ ನೆನೆಯಲು ಬಿಟ್ಟು, ನಂತರ ನಾನ್‌ಸ್ಟಿಕ್‌ ತವಾ ಮೇಲೆ ತುಸುವೇ ಎಣ್ಣೆ ಬಿಟ್ಟು, ದೋಸೆ ತಯಾರಿಸಿ. ಎರಡೂ ಬದಿ ಬೇಯಿಸಿ, ಬಿಸಿ ಬಿಸಿಯಾಗಿ ಪುದೀನಾ ಚಟ್ನಿ, ಟೊಮೇಟೊ ಕೆಚಪ್‌ ಜೊತೆ ಸವಿಯಲು ಕೊಡಿ.

ಅವಲಕ್ಕಿ ವೆಜ್‌ ಕಟ್‌ಲೆಟ್‌

ಸಾಮಗ್ರಿ : 1 ಕಪ್‌ ಪೇಪರ್‌ ಅವಲಕ್ಕಿ, ಅರ್ಧ ಕಪ್‌ ಹೆಸರುಬೇಳೆ, 2-2 ಚಮಚ ಹೆಚ್ಚಿದ ಹಸಿಶುಂಠಿ, ಹಸಿಮೆಣಸು, ಕೊ.ಸೊಪ್ಪು, ತುರಿದ ಕ್ಯಾರೆಟ್‌, ಬ್ರೋಕ್ಲಿ, ಅರ್ಧ ಕಂತೆ ಹೆಚ್ಚಿದ ಪಾಲಕ್‌ ಸೊಪ್ಪು, 2-3 ಚಮಚ ಅಕ್ಕಿಹಿಟ್ಟು, 2 ಬೆಂದ ಆಲೂಗಡ್ಡೆ (ಮ್ಯಾಶ್‌ಮಾಡಿ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ಶ್ಯಾಲೋ ಫ್ಲೈ ಮಾಡಲು 2 ಸೌಟು ರೀಫೈಂಡ್‌ ಎಣ್ಣೆ.

ವಿಧಾನ : ಹೆಸರು ಬೇಳೆಯನ್ನು 1 ಗಂಟೆ ಕಾಲ ನೆನೆಸಿಡಿ. ನಂತರ ಇದನ್ನು ಕಡಿಮೆ ಪ್ರಮಾಣದ ನೀರಲ್ಲಿ ಬೇಯಿಸಿ ಬಸಿದಿಡಿ. ಅದೇ ಸಮಯದಲ್ಲಿ ಅವಲಕ್ಕಿ ತುಸು ಹೊತ್ತು ನೆನೆಹಾಕಿ ನೀರು ಬೇರ್ಪಡಿಸಿ. ಈಗ ಅವಲಕ್ಕಿಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, ತುಸು ಬೇಳೆ ಬೇರೆಯಾಗಿಡಿ. ಈ ಮಿಶ್ರಣದಿಂದ ಚಿತ್ರದಲ್ಲಿರುವಂತೆ ಕಟ್‌ಲೆಟ್‌ ಆಕಾರ ನೀಡಿ. ಅದನ್ನು ಉಳಿದ ಬೇಳೆಯಲ್ಲಿ ಮತ್ತೆ ಹೊರಳಿಸಿ. ಹೀಗೆ ಸಿದ್ಧಗೊಂಡವನ್ನು ಅಳ್ಳಕವಾದ ಹೆಂಚಿನ ಮೇಲೆ ಹಾಕಿ, ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ, ಶ್ಯಾಲೋ ಫ್ರೈ ಮಾಡಿ. ಬಿಸಿಯಾದ ಇವನ್ನು ಟೊಮೇಟೊ ಸಾಸ್‌ ಜೊತೆ ಸವಿಯಿರಿ.

ಬೀಟ್‌ರೂಟ್‌ ಸ್ಟರ್‌ಫ್ರೈ

ಸಾಮಗ್ರಿ : 250 ಗ್ರಾಂ ಬೀಟ್‌ರೂಟ್‌, ಉದ್ದಕ್ಕೆ ಹೆಚ್ಚಿದ 2 ಈರುಳ್ಳಿ, 1 ತುಂಡು ಶುಂಠಿ, 2-3 ಹಸಿಮೆಣಸು, 3-4 ತುಂಡರಿಸಿದ ಒಣಮೆಣಸಿನಕಾಯಿ, 2 ಚಮಚ ನೈಲಾನ್‌ ಎಳ್ಳು, 2 ಚಮಚ ರೀಫೈಂಡ್‌ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಚಾಟ್ ಮಸಾಲ, ನಿಂಬೆರಸ, ಒಂದಿಷ್ಟು ಕರಿಬೇವು.

ವಿಧಾನ : ಬೀಟ್‌ರೂಟ್‌ನ ಸಿಪ್ಪೆ ಹೆರೆದು ಅದನ್ನು ಇಡಿಯಾಗಿ ಕುದಿ ನೀರಿಗೆ ಹಾಕಿ ಲಘು ಬೇಯಿಸಿ. ಆಮೇಲೆ ಹೊರತೆಗೆದು ಇದನ್ನು ಉದ್ದದ ತುಂಡಗಳಾಗಿ ಕತ್ತರಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಹಸಿಮೆಣಸು, ಒಣ ಮೆಣಸಿನಕಾಯಿ, ಈರುಳ್ಳಿ ಹಾಕಿ ಬಾಡಿಸಿ. ನಂತರ ಎಳ್ಳು ಹಾಕಿ. ಆಮೇಲೆ ಬೀಟ್‌ರೂಟ್‌ ಹಾಕಿ ಬೇಗ ಬೇಗ ಕೈಯಾಡಿಸಿ. ಸುಮಾರಾಗಿ ಬೆಂದ ನಂತರ ಉಪ್ಪು, ಮೆಣಸು ಹಾಕಿ ಕೆದಕಿ ಕೆಳಗಿಳಿಸಿ. ಇದನ್ನು ಸರ್ವಿಂಗ್‌ ಡಿಶ್‌ನಲ್ಲಿ ಹರಡಿ, ಚಿತ್ರದಲ್ಲಿರುವಂತೆ ಹೆಚ್ಚಿದ ಶುಂಠಿ, ಕರಿಬೇವಿನಿಂದ ಅಲಂಕರಿಸಿ ಸವಿಯಲು ಕೊಡಿ.

ಮೊಳಕೆ ಹೆಸರುಕಾಳಿನ ಢೋಕ್ಲಾ

ಸಾಮಗ್ರಿ : 2 ಕಪ್‌ ಮೊಳಕೆ ಕಟ್ಟಿದ ಹೆಸರುಕಾಳು, ಅರ್ಧ ಕಂತೆ ಪಾಲಕ್‌ ಸೊಪ್ಪು, 1 ತುಂಡು ಶುಂಠಿ, 3-4 ಹಸಿಮೆಣಸು, ಅರ್ಧ ಕಪ್‌ ಕಡಲೆಹಿಟ್ಟು, 2-3 ಚಮಚ ಎಣ್ಣೆ, 1 ಸ್ಯಾಚೆಟ್‌ ಈನೋ ಸಾಲ್ಟ್, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ.

ಒಗ್ಗರಣೆ ಸಾಮಗ್ರಿ : 2 ಚಮಚ ಎಣ್ಣೆ, ಅಗತ್ಯವಿದ್ದಷ್ಟು ಸಾಸುವೆ, ಜೀರಿಗೆ, ಸೋಂಪು, ಕರಿಬೇವು, 2 ಹಸಿಮೆಣಸು (ಉದ್ದಕ್ಕೆ ಹೆಚ್ಚಿದ್ದು), ಇಂಗು. ಒಂದಿಷ್ಟು ತೆಂಗಿನ ತುರಿ.

ವಿಧಾನ : ಮೊಳಕೆ ಕಟ್ಟಿದ ಹೆಸರುಕಾಳು, ಬ್ಲ್ಯಾಂಚ್‌ ಮಾಡಿದ ಪಾಲಕ್‌ ಸೊಪ್ಪು, ಹಸಿಶುಂಠಿ, ಹಸಿಮೆಣಸು ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಇದಕ್ಕೆ ಕಡಲೆಹಿಟ್ಟು, ಉಪ್ಪು ಬೆರೆಸಿ ಇಡ್ಲಿ ಹಿಟ್ಟಿನ ಹದಕ್ಕೆ ಗಟ್ಟಿಗೊಳಿಸಿ, ಜೊತೆಗೆ ಈನೋ ಸಹ ಬೆರೆಸಿ, ಚೆನ್ನಾಗಿ ಗೊಟಾಯಿಸಿ. ಇಡ್ಲಿ ಸ್ಟ್ಯಾಂಡಿಗೆ ಎಣ್ಣೆ ಸವರಿ, ಈ ಮಿಶ್ರಣ ಹಾಕಿಟ್ಟು, ಆವಿಯಲ್ಲಿ 10-12 ನಿಮಿಷ ಬೇಯಿಸಿ. ತಣಿದ ನಂತರ ಇದನ್ನು ಚೌಕಗಳಾಗಿ ಕತ್ತರಿಸಿ. ಒಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಅದನ್ನು ಢೋಕ್ಲಾಗಳ ಮೇಲೆ ಹರಡಿ, ತೆಂಗಿನ ತುರಿ ಉದುರಿಸಿ, ನಿಂಬೆರಸ ಹಿಂಡಿಕೊಳ್ಳಿ. ಬಿಸಿಬಿಸಿಯಾಗಿ ಇದನ್ನು ತುಪ್ಪ ಹಾಕಿ ಸವಿಯಲು ಕೊಡಿ.

ಸ್ವಾದಿಷ್ಟ ಪೌಷ್ಟಿಕ ಸಲಾಡ್‌ ಪರೋಟ

ಸಾಮಗ್ರಿ : ಗೋಧಿಹಿಟ್ಟು, ಮೈದಾ, ಜೋಳದ ಹಿಟ್ಟು, ಕಡಲೆಹಿಟ್ಟು, ಓಟ್ಸ್ ಹಿಟ್ಟು (ತಲಾ ಅರ್ಧರ್ಧ ಕಪ್‌), ಹೆಚ್ಚಿದ ಸೌತೆಕಾಯಿ, ಕ್ಯಾರೆಟ್‌, ಮೂಲಂಗಿ ತುರಿ, 3 ಬಗೆಯ ಕ್ಯಾಪ್ಸಿಕಂ, ಬ್ರೋಕ್ಲಿ, ಈರುಳ್ಳಿ ತೆನೆ (ತಲಾ ಅರ್ಧರ್ಧ ಕಪ್‌), ಒಂದಿಷ್ಟು ಹೆಚ್ಚಿದ ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಬೆಳ್ಳುಳ್ಳಿ, ಧನಿಯಾ, ಜೀರಿಗೆ, ಸೋಂಪು (ಹುರಿದು ಪುಡಿ ಮಾಡಿದ್ದು, ಒಟ್ಟಾರೆ 2 ಸಣ್ಣ ಚಮಚ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೊಸರು, ಪರೋಟ ತಯಾರಿಸಲು ಬೇಕಾದಷ್ಟು ಎಣ್ಣೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಟ್ಟಿಗೆ ಬೆರೆಸಿಕೊಂಡು, ಇದಕ್ಕೆ ತುಪ್ಪ ಬೆರೆಸಿ ನಾದಿಕೊಂಡು 2 ಗಂಟೆ ಕಾಲ ನೆನೆಯಲು ಬಿಡಿ. ನಂತರ ಸಣ್ಣ ಉಂಡೆ ಮಾಡಿ, ಲಟ್ಟಿಸಿ, ಹೆಂಚಿಗೆ ಹಾಕಿ ಎಣ್ಣೆ ಬಿಡುತ್ತಾ ಎರಡೂ ಬದಿ ಪರೋಟ ಬೇಯಿಸಿ.

ಲೋಬಿಯಾ ಟಿಕ್ಕಿ

ಸಾಮಗ್ರಿ : ಅರ್ಧ ಕಪ್‌ ಹಲಸಂದೆ ಕಾಳು, 1 ಆಲೂ ಬೇಯಿಸಿ ಮಸೆದದ್ದು, ಒಂದಿಷ್ಟು ಹೆಚ್ಚಿದ ಪುದೀನಾ, 2-3 ದೊಡ್ಡ ಚಮಚ ತುರಿದ ಕ್ಯಾರೆಟ್‌, 4 ಚಮಚ ಹೆಚ್ಚಿದ ಫ್ರೆಂಚ್‌ ಬೀನ್ಸ್ (ಹಬೆಯಲ್ಲಿ ಬೇಯಿಸಿದ್ದು), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಚಾಟ್‌ ಮಸಾಲ, 4 ಚಮಚ ಕಾರ್ನ್‌ ಫ್ಲೋರ್‌, 1 ಸೌಟು ಎಣ್ಣೆ.

ವಿಧಾನ : ಮೊದಲು ಹಲಸಂದೆ ಕಾಳನ್ನು 2-3 ಗಂಟೆ ಕಾಲ ನೆನೆಹಾಕಿಡಿ. ಕನಿಷ್ಠ ನೀರು ಬಳಸಿ ಇದನ್ನು ಕುಕ್ಕರ್‌ನಲ್ಲಿ ಬೇಯಿಸಿ. ನೀರು ಬಸಿದು, ಇದನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಆಮೇಲೆ ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. ಚಿತ್ರದಲ್ಲಿರುವಂತೆ ಆಕಾರ ಬರುವ ಹಾಗೆ ಸಣ್ಣ ಸಣ್ಣ ಉಂಡೆ ಮಾಡಿ ಟಿಕ್ಕಿ ತಟ್ಟಿಕೊಂಡು, ಎಣ್ಣೆ ಬಿಡುತ್ತಾ, ಶ್ಯಾಲೋ ಫ್ರೈ ಮಾಡಿ. ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಸ್ಪೈಸಿ ಬೀನ್ಸ್ ಭೇಲ್

ಸಾಮಗ್ರಿ : ಬೆಂದ ಹಣ್ಣು ಹುರುಳಿಕಾಯಿ ಬೀಜ (ರಾಜ್ಮಾ), ಬಿಳಿಯ ಹಲಸಂದೆ ಕಾಳು, ಮೊಳಕೆ ಕಟ್ಟಿದ ಹೆಸರುಕಾಳು, ಕಡಲೆಕಾಳು, ಹುರುಳಿಕಾಳು (ತಲಾ ಅರ್ಧರ್ಧ ಕಪ್‌), 2 ಈರುಳ್ಳಿ, 1 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ ಹಸಿಮೆಣಸಿನ ಪೇಸ್ಟ್, ಚಾಟ್‌ ಮಸಾಲ, ಕೆನೆ ಮೊಸರು, ಬೆಲ್ಲ, ಹುಣಿಸೇಹಣ್ಣು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, 10-12 ಪಾನೀಪೂರಿ, ಅರ್ಧ ಕಪ್‌ ಆಲೂ ಭುಜಿಯಾ (ರೆಡಿಮೇಡ್‌).

ವಿಧಾನ : ಈರುಳ್ಳಿ ಟೊಮೇಟೊ ಹೆಚ್ಚಿ ಹಾಕಿ, ಅದಕ್ಕೆ ಮೇಲಿನ ಬೇರೆಲ್ಲ ಸಾಮಗ್ರಿ ಸೇರಿಸಿ. ಕೊನೆಯಲ್ಲಿ ಚಿತ್ರದಲ್ಲಿರುವಂತೆ ಮೊಸರು, ಹುಣಿಸೇ ಬೆಲ್ಲದ ಚಟ್ನಿ ಸೇರಿಸಿ ತಕ್ಷಣ ಸವಿಯಲು ಕೊಡಿ.

ತಾವರೆ ಬೀಜ ಅಂಜೂರದ ಮಿಲ್ಕ್ ಶೇಕ್

ಸಾಮಗ್ರಿ : 750 ಮಿ.ಲಿ. ಗಟ್ಟಿ ಹಾಲು, 25-25 ಗ್ರಾಂ ತಾವರೆ ಬೀಜ ಅಂಜೂರ, 2 ಚಮಚ ಕಾರ್ನ್‌ಫ್ಲೋರ್‌, 2-2 ಚಮಚ ಪಿಸ್ತಾ ಬಾದಾಮಿ ಚೂರು, 2 ಚಿಟಕಿ ಏಲಕ್ಕಿಪುಡಿ, ಅರ್ಧ ಕಪ್‌ ಸಕ್ಕರೆ.

ವಿಧಾನ : ತಾವರೆ ಬೀಜಗಳನ್ನು ಬಾಣಲೆಯಲ್ಲಿ ತುಪ್ಪವಿಲ್ಲದೆ ಹುರಿಯಿರಿ. ಕೆಳಗಿಳಿಸಿ ಆರಿದ ನಂತರ ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ಅಂಜೂರವನ್ನು 2-3 ಗಂಟೆ ಕಾಲ ಹಾಲಲ್ಲಿ ನೆನೆಹಾಕಿ. ಇದನ್ನು ಬೇರೆಯಾಗಿ ರುಬ್ಬಿಕೊಳ್ಳಿ. ಕಾರ್ನ್‌ಫ್ಲೋರ್‌ಗೆ ಹಾಲು ಬೆರೆಸಿ ಕದಡಿಕೊಳ್ಳಿ. ಉಳಿದ ಹಾಲನ್ನು ದಪ್ಪ ದಳದ ಪಾತ್ರೆಯಲ್ಲಿ ಕಾಯಿಸಿ. ಇದು ಕುದ್ದು ಅರ್ಧದಷ್ಟು ಹಿಂಗಿದಾಗ ಇದಕ್ಕೆ ತಾವರೆ ಬೀಜದ ಪುಡಿ, ಅಂಜೂರದ ಪೇಸ್ಟ್, ಸಕ್ಕರೆ, ಕಾರ್ನ್‌ಫ್ಲೋರ್‌ ಮಿಶ್ರಣ, ಏಲಕ್ಕಿ ಎಲ್ಲವನ್ನೂ ಎಡಗೈಯಿಂದ ಬೆರೆಸುತ್ತಾ ಬಲಗೈಯಿಂದ ಗೊಟಾಯಿಸುತ್ತಿರಿ. ಇದು ತುಸು ಗಟ್ಟಿ ಆದಾಗ, ಪಿಸ್ತಾ ಬಾದಾಮಿ ಬೆರೆಸಿ ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಉಳಿದ ಪಿಸ್ತಾ ಬಾದಾಮಿ ಹಾಕಿ ಲೋಟಕ್ಕೆ ತುಂಬಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ