ಬೇಸನ್ ಸೀಖ್ ಕಬಾಬ್
ಸಾಮಗ್ರಿ : 2 ಕಪ್ ಕಡಲೆಹಿಟ್ಟು, 1 ಕಪ್ ಪಾಲಕ್ ಪೇಸ್ಟ್, ಅರ್ಧ ಕಪ್ ಸಣ್ಣಗೆ ಹೆಚ್ಚಿದ ಕ್ಯಾರೆಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಓಮ, ಹಸಿಮೆಣಸಿನ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿಯಲು ಎಣ್ಣೆ.
ವಿಧಾನ : ಬಾಣಲೆಯಲ್ಲಿ 4 ಚಮಚ ಎಣ್ಣೆ ಬಿಸಿ ಮಾಡಿ. ಇದಕ್ಕೆ ಪಾಲಕ್ ಸೊಪ್ಪಿನ ಪೇಸ್ಟ್, ಉಳಿದ ಎಲ್ಲಾ ಸಾಮಗ್ರಿ ಸೇರಿಸಿ ಮಂದ ಉರಿಯಲ್ಲಿ ಕೆದಕಬೇಕು. ಕೊನೆಯಲ್ಲಿ ಕಡಲೆಹಿಟ್ಟನ್ನು ಎಡಗೈಯಿಂದ ಸ್ವಲ್ಪ ಸ್ವಲ್ಪವಾಗಿ ಹಾಕಿಕೊಳ್ಳುತ್ತಾ ಗಂಟಾಗದಂತೆ ಬಲಗೈಯಿಂದ ಕೆದಕುತ್ತಿರಬೇಕು. ಮಿಶ್ರಣ ಸಾಕಷ್ಟು ಗಟ್ಟಿ ಆದಾಗ, ಇದನ್ನು ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ ಇದನ್ನು ದಪ್ಪ ನಿಂಬೆ ಗಾತ್ರದ ಉಂಡೆಗಳಾಗಿ ಮಾಡಿಕೊಳ್ಳಿ. ಅದರಿಂದ ಚಿತ್ರದಲ್ಲಿರುವಂತೆ ಅಂಗೈಗೆ ಜಿಡ್ಡು ಸವರಿಕೊಂಡು, ಮಣೆಯ ಮೇಲೆ ಸುರುಳಿ (ಸೀಖ್) ತಿರುಚಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಚಿತ್ರದಲ್ಲಿರುವಂತೆ ಸಲಾಡ್ ಜೊತೆ ಅಲಂಕರಿಸಿ ಸವಿಯಲು ಕೊಡಿ.
ಬೇಸನ್ ಪನೀರ್ ಫ್ರೀಟರ್ಸ್
ಸಾಮಗ್ರಿ : 1 ಕಪ್ ಕಡಲೆಹಿಟ್ಟು, 3-4 ದೊಡ್ಡ ಚಮಚ ಅಕ್ಕಿಹಿಟ್ಟು, 1 ಕಪ್ ಹುಳಿಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂಮಸಾಲ, ಚಾಟ್ ಮಸಾಲ, ಅಡುಗೆ ಸೋಡ, ಅರಿಶಿನ, 200 ಗ್ರಾಂ ಮಸೆದ ಪನೀರ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಈರುಳ್ಳಿ, ಕರಿಯಲು ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಮಸೆದ ಪನೀರ್ ಹಾಕಿ. ಇದರ ಮೇಲೆ ಕಡಲೆಹಿಟ್ಟು ಹಾಗೂ ಉಳಿದೆಲ್ಲ ಸಾಮಗ್ರಿ ಬೆರೆಸಿ ಪಕೋಡಾದಂತೆ ಮಿಶ್ರಣ ಕಲಸಿಕೊಳ್ಳಿ. ಮಜ್ಜಿಗೆ ಕಡಿಮೆ ಎನಿಸಿದರೆ ಇನ್ನಷ್ಟು ಬೆರೆಸಿಕೊಳ್ಳಿ. ಇದನ್ನು 3 ಗಂಟೆ ಕಾಲ ನೆನೆಯಲು ಬಿಡಿ. ನಂತರ ಜಿಡ್ಡು ಕೈನಿಂದ ಇದರ ಉಂಡೆ ಕಟ್ಟಿ, ಚಿತ್ರದಲ್ಲಿರುವ ಹಾಗೆ ಆಯತಾಕಾರ ಅಥವಾ ಚೌಕಾಕಾರದಲ್ಲಿ ಅಂಗೈ ಮೇಲೆ ಪಕೋಡ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಬಿಸಿ ಇರುವಾಗಲೇ ಇದನ್ನು ಟೊಮೇಟೊ ಸಾಸ್‌ಜೊತೆ ಸವಿಯಲು ಕೊಡಿ.