ಮಸಾಲೆ ಬದನೆ

ಗ್ರೇವಿಯ ಸಾಮಗ್ರಿ : 500 ಗ್ರಾಂ ಹುರಿದ ಕಡಲೆಬೀಜ, 500 ಗ್ರಾಂ ಹುರಿದ ನೈಲಾನ್‌ ಎಳ್ಳು, 1 ದೊಡ್ಡ ತೆಂಗಿನಕಾಯಿಯ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಹುರಿದು ಪುಡಿ ಮಾಡಿದ ಜೀರಿಗೆ, ಅರಿಶಿನ, ಹೆಚ್ಚಿದ ಪುದೀನಾ.

ಟೆಂಪರಿಂಗ್‌ ಸಾಮಗ್ರಿ : 1 ಕಿಲೋ ಸಣ್ಣ ಗಾತ್ರದ ತಾಜಾ ಗುಂಡು ಬದನೆ, 2 ಸೌಟು ರೀಫೈಂಡ್‌ ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಮೆಂತ್ಯ, ಕರಿಬೇವು, ಉದ್ದಕ್ಕೆ ಸೀಳಿದ ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಹುಣಿಸೆ ಕಿವುಚಿದ ರಸ, ಬೆಲ್ಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ತೆಂಗಿನ ತುರಿ ಹಾಕಿ ಹೊಂಬಣ್ಣಕ್ಕೆ ಘಮ್ಮೆಂದು ಹುರಿಯಿರಿ. ನಂತರ ಮಿಕ್ಸಿಗೆ ಇದನ್ನು ಹಾಕಿ ಜೊತೆಗೆ ಕಡಲೆಬೀಜ, ಎಳ್ಳು, ಧನಿಯಾಪುಡಿ, ಖಾರಾಪುಡಿ, ಜೀರಿಗೆ ಪುಡಿ ಎಲ್ಲಾ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಮಧ್ಯದಿಂದ 4 ಭಾಗ ಆಗುವಂತೆ ಸೀಳಿದ ಆದರೆ ತೊಟ್ಟು ಬಿಟ್ಟಿರದ ಬದನೆಗಳನ್ನು ಹಾಕಿ ಶ್ಯಾಲೋ ಫ್ರೈ ಮಾಡಿ ತೆಗೆದುಬಿಡಿ. ಅದೇ ಎಣ್ಣೆಗೆ ಒಗ್ಗರಣೆ ಕೊಡಿ. ಕರಿಬೇವು, ಹಸಿಮೆಣಸು ಹಾಕಿ ಬಾಡಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಿರಿ. ಆಮೇಲೆ ರುಬ್ಬಿದ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಕೈಯಾಡಿಸಿ. ಆಮೇಲೆ ಹುಣಿಸೇ ರಸ, ಉಪ್ಪು, ಅರಿಶಿನ ಸೇರಿಸಿ. ಕೊನೆಯಲ್ಲಿ  ಫ್ರೈ ಮಾಡಿದ ಬದನೆ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದನ್ನು ಬಿಸಿ ಬಿಸಿ ನಾನ್‌, ಕುಲ್ಚಾ, ರುಮಾಲಿ ರೋಟಿ ಜೊತೆ ಸವಿಯಲು ಕೊಡಿ.

ಹೈದರಾಬಾದೀ ವೆಜ್‌ ಬಿರಿಯಾನಿ

ಸಾಮಗ್ರಿ : ಹೆಚ್ಚಿದ ಬೀನ್ಸ್, ಕ್ಯಾರೆಟ್‌, ಆಲೂ, ನವಿಲುಕೋಸು, ಹೂಕೋಸು, ಹಸಿ ಬಟಾಣಿ (ಒಟ್ಟಾಗಿ 1 ಕಿಲೋ), 1 ಕಿಲೋ ಬಾಸುಮತಿ ಅಕ್ಕಿ, ಅರ್ಧ ಕಿಲೋ ತುಪ್ಪ, ಒಗ್ಗರಣೆಗೆ ಜೀರಿಗೆ, ಸೋಂಪು, ಚಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಪುದೀನಾ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಸರು, ನಿಂಬೆರಸ, ಅರಿಶಿನ, ಹಾಲಲ್ಲಿ ನೆನೆಸಿದ ಕೇಸರಿ.

ವಿಧಾನ : ಮೊದಲು ಈರುಳ್ಳಿ, ಬೆಳ್ಳುಳ್ಳಿಯನ್ನು ಬಾಡಿಸಿಕೊಂಡು ಬೇರೆಯಾಗಿ ಇಡಿ. ಈಗ ಒಂದು ಬೇಸನ್ನಿಗೆ ಮಿಶ್ರ ತರಕಾರಿ ಹೋಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊ.ಸೊಪ್ಪು, ಪುದೀನಾ, ಹಸಿಮೆಣಸಿನ ಪೇಸ್ಟ್, ಅರಿಶಿನ, ಉಪ್ಪು, ಖಾರ, ಮೊಸರು, ನಿಂಬೆರಸ, ಬಾಡಿಸಿದ ಈರುಳ್ಳಿ ಬೆಳ್ಳುಳ್ಳಿ ಹಾಕಿ ಚೆನ್ನಾಗಿ 1 ಗಂಟೆ ಕಾಲ ಮ್ಯಾರಿನೇಟ್‌ ಆಗಲು ಬಿಡಿ. ಒಂದು ದೊಡ್ಡ ಕುಕ್ಕರ್‌ನಲ್ಲಿ 2 ಸೌಟು ತುಪ್ಪ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ಇದಕ್ಕೆ ನೆನೆಸಿದ ಬಾಸುಮತಿ ಅಕ್ಕಿ, ಉಪ್ಪು, ಅಗತ್ಯವಿದಷ್ಟು ನೀರು ಹಾಕಿ ಅಕ್ಕಿ ಅರ್ಧ ಬೇಯುವಂತೆ ಮಾಡಿ. ಮೇಲು ಭಾಗದ ನೀರು ಬಸಿದುಬಿಡಿ. ಅದೇ ಒಲೆಯಲ್ಲಿ ಬಾಣಲೆ ಇಟ್ಟು ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ಮ್ಯಾರಿನೇಟೆಡ್‌ ತರಕಾರಿ ಹಾಕಿ ಬಾಡಿಸಿ. ಅರ್ಧದಷ್ಟು ಬೆಂದಿತೆನಿಸಿದರೆ, ಮೇಲೆ ಅರೆಬೆಂದ ಅನ್ನ ಹಾಕಿ ಬೇಗ ಬೇಗ ಕೈಯಾಡಿಸಿ. ಆಮೇಲೆ ಬಸಿದ ನೀರನ್ನು ಇದಕ್ಕೇ ಬೆರೆಸಿ, ಜೊತೆಗೆ ಕೇಸರಿ ಸಹ ಹಾಕಿಡಿ. ಇದನ್ನು ಮಧ್ಯಮ ಉರಿಯಲ್ಲಿ 4-5 ನಿಮಿಷ ಮುಚ್ಚಳವಿರಿಸಿ ಬೇಯಿಸಿ. ಕೊನೆಯಲ್ಲಿ ಇದರ ಮೇಲೆ ಬಾಡಿಸಿದ ಈರುಳ್ಳಿ ಹಾಕಿ ಬೆರೆತುಕೊಳ್ಳುವಂತೆ ಕೆದಕಿರಿ. ಬಿಸಿ ಬಿಸಿಯಾಗಿ ಇದನ್ನು ರಾಯ್ತಾ ಜೊತೆ ಸವಿಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ