ಪಾವ್ ಭಾಜಿ
ಸಾಮಗ್ರಿ : 4 ಚಮಚ ಎಣ್ಣೆ, 1-2 ಹೆಚ್ಚಿದ ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 4 ಹಸಿ ಮೆಣಸು, 1 ಕ್ಯಾಪ್ಸಿಕಂ, 1-1 ಕಪ್ ಬೆಂದ ಬೀನ್ಸ್, ಕ್ಯಾರೆಟ್, ಎಲೆಕೋಸು, ಹೂಕೋಸು, ಬೇಯಿಸಿ ಮಸೆದ ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪಾವ್ ಭಾಜಿ ಮಸಾಲ, ನಿಂಬೆ ರಸ, 4 ಬನ್, 2 ಚಿಟಕಿ ಅರಿಶಿನ.
ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಬಾಡಿಸಿ. ನಂತರ ಇದಕ್ಕೆ ಬೆಂದ ತರಕಾರಿ ಹಾಕಿ ಕೆದಕಬೇಕು. ನಂತರ ಇದಕ್ಕೆ ಅರಿಶಿನ, ಮಸಾಲೆ, ಟೊಮೇಟೊ, ಕ್ಯಾಪ್ಸಿಕಂ, ಉಪ್ಪು ಹಾಕಿ ಬಾಡಿಸಿ. ಆಮೇಲೆ ಹಸಿಮೆಣಸು ಹಾಕಿ ಕೆದಕಿ, ಅರ್ಧ ಕಪ್ ನೀರು ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಬೆಂದ ತರಕಾರಿಯನ್ನು ಮ್ಯಾಶರ್‌ನಿಂದ ನಡುನಡುವೆ ಮ್ಯಾಶ್ ಮಾಡುತ್ತಿರಿ. ಇದನ್ನು ಕೆಳಗಿಳಿಸಿ ನಿಂಬೆಹಣ್ಣು ಹಿಂಡಿಕೊಂಡು, ಟೋಸ್ಟ್ ಮಾಡಿದ ಬನ್ ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಸ್ಪೆಷಲ್ ಪ್ಯಾಟೀಸ್
ಸಾಮಗ್ರಿ : 2 ಕಪ್ ಹಸಿ ಬಟಾಣಿ ಕಾಳು (ಒಣ ಬಟಾಣಿ ಆದರೆ ಹಿಂದಿನ ರಾತ್ರಿ ನೆನೆಸಿ ಮಾರನೇ ದಿನ ಬೇಯಿಸಿ), 4-5 ಆಲೂಗಡ್ಡೆ (ಬೇಯಿಸಿ ಮಸೆದಿಡಿ), 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಕಾರ್ನ್‌ಫ್ಲೋರ್, ಶುಂಠಿ ಹಸಿಮೆಣಸಿನ ಪೇಸ್ಟ್, ಪುದೀನಾ ಚಟ್ನಿ, ಹುಣಿಸೆಯ ಹುಳಿಸಿಹಿ ಚಟ್ನಿ, ಚಾಟ್ ಮಸಾಲ, ಗರಂಮಸಾಲ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಕೊ.ಸೊಪ್ಪು, 2 ಸೌಟು ಎಣ್ಣೆ.
ವಿಧಾನ : ಬೆಂದ ಬಟಾಣಿಯನ್ನು ಲಘುವಾಗಿ ಮ್ಯಾಶ್ ಮಾಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿನ ಅರ್ಧದಷ್ಟು ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಉಪ್ಪು, ಖಾರ, ಅರಿಶಿನ ಶುಂಠಿ ಹಸಿಮೆಣಸಿನ ಪೇಸ್ಟ್, ಚಾಟ್ ಮಸಾಲ, ಗರಂಮಸಾಲ ಸೇರಿಸಿ ಕೆದಕಬೇಕು. ಬೆಂದ ಬಟಾಣಿ ಹಾಕಿ, ಅರ್ಧ ಕಪ್ ನೀರು ಬೆರೆಸಿ ಗಟ್ಟಿ ಗ್ರೇವಿ ಕುದಿಸಿ ಕೆಳಗಿಳಿಸಿ. ಚೆನ್ನಾಗಿ ಮಸೆದ ಆಲೂವಿಗೆ ಕಾರ್ನ್‌ಫ್ಲೋರ್, ಉಪ್ಪು, ಇಂಗು, ತುಸು ಕೊ.ಸೊಪ್ಪು ಹಾಕಿ ಮಿಶ್ರಣ ಕಲಸಿಡಿ. ಚಿತ್ರದಲ್ಲಿರುವಂತೆ ದಪ್ಪ ವಡೆಯ ಆಕಾರ ಬರಲು ಈ ಮಿಶ್ರಣವನ್ನು 8 ಭಾಗ ಮಾಡಿ, ಜಿಡ್ಡುಗೊಳಿಸಿದ ಅಂಗೈ ಮೇಲೆ ತಟ್ಟಿಕೊಂಡು, ಅಳ್ಳಕ ತವಾದಲ್ಲಿ ಎಣ್ಣೆ ಬಿಡುತ್ತಾ ಶ್ಯಾಲೋ ಫ್ರೈ ಮಾಡಿ. ಈ ಪ್ಯಾಟೀಸ್ ತಟ್ಟೆಯಲ್ಲಿ ಜೋಡಿಸಿಕೊಂಡು ಇದರ ಮೇಲೆ ಬಟಾಣಿ ಗ್ರೇವಿ, ಪುದೀನಾ ಚಟ್ನಿ, ಹುಳಿಸಿಹಿ ಚಟ್ನಿ, ಹೆಚ್ಚಿದ ಈರುಳ್ಳಿ, ಕೊ.ಸೊಪ್ಪು ಉದುರಿಸಿ ತಕ್ಷಣ ಸವಿಯಲು ಕೊಡಿ.
ಮಿಸಳ್ ಪಾವ್
ಸಾಮಗ್ರಿ : 2 ಕಪ್ ಮೊಳಕೆ ಕಟ್ಟಿದ ಹೆಸರುಕಾಳು, 2-3 ಬನ್, ಒಗ್ಗರಣೆಗೆ ಎಣ್ಣೆ ಸಾಮಗ್ರಿ, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಇಂಗು, ಗರಂಮಸಾಲ, ಚಾಟ್ ಮಸಾಲ, ಹೆಚ್ಚಿದ 2-3 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, ತುಸು ದಾಲ್ಚಿನ್ನಿ, ಲವಂಗ, ಧನಿಯಾ, 1 ಗಿಟುಕು ಕೊಬ್ಬರಿ ತುರಿ, ಹೆಚ್ಚಿದ 2 ಟೊಮೇಟೊ, 5-6 ಕೋಕಂ ಎಲೆಗಳು (ಅಥವಾ ರೆಡಿಮೇಡ್ ಕೋಕಂ ಜೂಸ್), ಅಲಂಕರಿಸಲು ಆಲೂ ಚಿಪ್ಸ್, ಮಿಕ್ಸ್ ಚರ್, ತುಸು ಹೆಚ್ಚಿದ ಕೊ.ಸೊಪ್ಪು.