ಟೇಸ್ಟಿ ರೆಡ್ ಮೀಟ್
ಸಾಮಗ್ರಿ : 5-6 ಮಟನ್ ತುಂಡುಗಳು, 1-2 ಈರುಳ್ಳಿ, 10-12 ಎಸಳು ಬೆಳ್ಳುಳ್ಳಿ, ಒಂದಿಷ್ಟು ಜೀರಿಗೆ, ಸೋಂಪು, ಚಕ್ಕೆ, ಲವಂಗ, ಧನಿಯಾ, ಒಣಮೆಣಸಿನಕಾಯಿ, ಅರ್ಧ ಸೌಟು ತುಪ್ಪ, 4-5 ಚಮಚ ರೀಫೈಂಡ್‌ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಪುಡಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಧನಿಯಾಪುಡಿ, ಗರಂಮಸಾಲ, ಚಾಟ್ ಮಸಾಲ, ಟೊಮೇಟೊ ಪೇಸ್ಟ್. ತುಸು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮಟನ್ ತುಂಡುಗಳಿಗೆ ತುಸು ಉಪ್ಪು, ಅರಿಶಿನ, ಖಾರ ಸೇರಿಸಿ ಈ ಮಿಶ್ರಣವನ್ನು ಅರ್ಧ ಗಂಟೆ ಕಾಲ ಮ್ಯಾರಿನೇಟ್‌ಗೊಳಿಸಿ. ಒಂದು ದೊಡ್ಡ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ, ಸೋಂಪು, ಪುಡಿಮೆಣಸು, ಚಕ್ಕೆ, ಲವಂಗ, ಇಡೀ ಧನಿಯಾ, ಒಣ ಮೆಣಸು, ಅರ್ಧದಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ನಿಧಾನವಾಗಿ ಬಾಡಿಸಿ. ಆರಿದ ನಂತರ ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ತಿರುವಿಕೊಳ್ಳಿ. ಅದೇ ಪ್ಯಾನಿನಲ್ಲಿ ತುಸು ಎಣ್ಣೆ, ತುಪ್ಪ ಎರಡೂ ಬಿಸಿ ಮಾಡಿ. ಅದಕ್ಕೆ ಉಳಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ಆಮೇಲೆ ಧನಿಯಾಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ ಹಾಕಿ ಬಾಡಿಸಿ. ಇದಕ್ಕೆ ಮಟನ್ ಹಾಕಿ ಚೆನ್ನಾಗಿ ಕೆದಕಿ, ನೀರು ಚಿಮುಕಿಸಿ, ಟೊಮೇಟೊ ಪೇಸ್ಟ್ ಸಹಿತ ರುಬ್ಬಿದ ಮಿಶ್ರಣ ಸಹ ಬೆರೆಸಿಕೊಂಡು ಚೆನ್ನಾಗಿ ಕೈಯಾಡಿಸಿ 4-5 ಸೀಟಿ ಬರುವಂತೆ ಕುಕ್ಕರ್ ಕೂಗಿಸಿ. ನಂತರ ಇನ್ನೊಮ್ಮೆ ಎಲ್ಲ ಬೆರೆತುಕೊಳ್ಳುವಂತೆ ಕೆದಕಿ, ಕೆಳಗಿಳಿಸಿ ಇದಕ್ಕೆ ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಅನ್ನ, ಚಪಾತಿ ಜೊತೆ ಸವಿಯಲು ಕೊಡಿ.
ಸಜ್ಜೆ ರೊಟ್ಟಿ
ಸಾಮಗ್ರಿ : 2-3 ಕಪ್ ಸಜ್ಜೆ ಹಿಟ್ಟು, 2 ಚಿಟಕಿ ಉಪ್ಪು, ಅಗತ್ಯವಿದ್ದಷ್ಟು ತುಪ್ಪ, ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಸಜ್ಜೆ ಹಿಟ್ಟು ಹಾಕಿಕೊಂಡು ಉಪ್ಪು, ಉಗುರು ಬೆಚ್ಚಗಿನ ನೀರು ಬೆರೆಸಿ ಚಪಾತಿ ಹಿಟ್ಟಿನಂತೆ ಮೃದುವಾಗಿ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು 1 ಗಂಟೆ ಕಾಲ ನೆನೆಯಲು ಬಿಡಿ. ನಂತರ ಮತ್ತೆ ತುಪ್ಪ ಬೆರೆಸಿ ನಾದಿಕೊಂಡು ಇದರಿಂದ ಸಣ್ಣ ಉಂಡೆಗಳಾಗಿಸಿ ದಪ್ಪ ಚಪಾತಿಗಳಾಗಿ ಲಟ್ಟಿಸಿ. ಅದು ಮಣೆಗೆ ಅಂಟದಿರಲು ಮೇಲ್ಭಾಗಕ್ಕೆ ಆಗಾಗ ತುಸು ಸಜ್ಜೆ ಹಿಟ್ಟು ಉದುರಿಸಿಕೊಳ್ಳಿ. ಈ ರೀತಿ ಸಿದ್ಧಪಡಿಸಿಕೊಂಡು ಕಾದ ತವಾಗೆ ಹಾಕಿ, ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ. ಬಿಸಿ ಇರುವಾಗಲೇ ಇದನ್ನು ಗ್ರೇವಿ, ಪಲ್ಯದ ಜೊತೆ ಸವಿಯಲು ಕೊಡಿ.
ಸ್ಪೆಷಲ್ ಕಾರ್ನ್ ಗ್ರೇವಿ
ಸಾಮಗ್ರಿ : 300 ಗ್ರಾಂ ತಾಜಾ ಕಾರ್ನ್, ಹೆಚ್ಚಿದ 2-3 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 3-4 ಇಡೀ ಒಣ ಮೆಣಸು, ತುಸು ಹಾಲು, ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಹುಳಿ ಮೊಸರು.
ವಿಧಾನ : ತಾಜಾ ಕಾರ್ನ್‌ಗೆ ತುಸು ನೀರು, ಹಾಲು, ಚಿಟಕಿ ಉಪ್ಪು ಹಾಕಿ ಚಿಕ್ಕ ಕುಕ್ಕರ್‌ನಲ್ಲಿ 1 ಸೀಟಿ ಬರುವಂತೆ ಬೇಯಿಸಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಜೀರಿಗೆ, ಸೋಂಪು, ಓಮ ಹಾಕಿ ಒಗ್ಗರಣೆ ಕೊಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ತುಂಡರಿಸಿದ ಒಣ ಮೆಣಸು ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಬೆಂದ ಕಾರ್ನ್ ಸೇರಿಸಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಉಪ್ಪು, ಖಾರ, ಅರಿಶಿನ, ಹುಳಿ ಮೊಸರು ಬೆರೆಸಿ ನಿಧಾನವಾಗಿ ಕೈಯಾಡಿಸುತ್ತಾ ಕುದಿಸಿರಿ. ಗ್ರೇವಿ ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ, ಮೇಲೆ ಟೊಮೇಟೊ ಸಾಸ್ ತೇಲಿಬಿಟ್ಟು ಬಿಸಿಯಾಗಿ ಅನ್ನದ ಜೊತೆ ಸವಿಯಲು ಕೊಡಿ.
ಸಜ್ಜೆಯ ಮಜ್ಜಿಗೆಹುಳಿ
ಸಾಮಗ್ರಿ : 1 ಕಪ್ ಸಜ್ಜೆ ಹಿಟ್ಟು, 2 ಕಪ್ ಹುಳಿ ಮೊಸರು, 3-4 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಗ್ಗರಣೆಗೆ ಜೀರಿಗೆ, ಸೋಂಪು, ಅರ್ಧ ಸೌಟು ತುಪ್ಪ, 2 ಕಪ್ ವೆಜ್ ಸ್ಟಾಕ್, ತುಸು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಒಂದು ಬಟ್ಟಲಿಗೆ ಸಜ್ಜೆ ಹಿಟ್ಟು, ಉಪ್ಪು, ಮೊಸರು ಬೆರೆಸಿಕೊಂಡು ಚೆನ್ನಾಗಿ ಗೊಟಾಯಿಸಿ. ಇದು ಇಡ್ಲಿ ಹಿಟ್ಟಿನ ಹದಕ್ಕಿರಲಿ. ಇದನ್ನು 2-3 ಗಂಟೆ ಕಾಲ ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಹಸಿ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನೆನೆದ ಹಿಟ್ಟನ್ನು ಚೆನ್ನಾಗಿ ಗೊಟಾಯಿಸಿ ಇದಕ್ಕೆ ಬೆರೆಸಿ, ಕೈಯಾಡಿಸಿ. ನಂತರ ವೆಜ್ ಸ್ಟಾಕ್ ಬೆರೆಸಿ ಮಿಶ್ರಗೊಳಿಸಿ, ಕುದಿಸಬೇಕು. ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಅನ್ನದ ಜೊತೆ ಸಂಡಿಗೆ, ಹಪ್ಪಳ ಹಾಕಿ ಸವಿಯಲು ಕೊಡಿ.
ಅಮಾನಾ
ಸಾಮಗ್ರಿ : ಅರ್ಧ ಕಪ್ ಹುಣಿಸೆ ಕಿವುಚಿದ ರಸ, ತುಸು ಜೀರಿಗೆ, ಸೋಂಪು, ಓಮ, ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಪುಡಿ ಉಪ್ಪು, ಬ್ಲ್ಯಾಕ್ ಸಾಲ್ಟ್, ಪುಡಿ ಮಾಡಿದ ಬೆಲ್ಲ, ಪುಡಿ ಮೆಣಸು, ತಾಜಾ ಪುದೀನಾ ಎಲೆ.
ವಿಧಾನ : ಮಿಕ್ಸಿಗೆ ನೇರವಾಗಿ ಜೀರಿಗೆ, ಸೋಂಪು, ಪುಡಿಮೆಣಸು, ಓಮ, ಏಲಕ್ಕಿ, ಬ್ಲ್ಯಾಕ್ ಸಾಲ್ಟ್ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಒಂದು ಪಾತ್ರೆಗೆ ಶುಚಿಗೊಳಿಸಿದ ಹುಣಿಸೇ ರಸ, ಬೆಲ್ಲದ ನೀರು, 4-5 ಕಪ್ ಫ್ರಿಜ್ ನೀರು, ಮಿಕ್ಸಿಯಲ್ಲಿನ ಪುಡಿ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಇದನ್ನು ಫ್ರಿಜ್‌ನಲ್ಲಿ 2 ತಾಸು ಇರಿಸಿ, ಇದರ ಮೇಲೆ ತಾಜಾ ಪುದೀನಾ ಎಲೆ ಹೆಚ್ಚಿ ಹಾಕಿ, ದಣಿದು ಬಂದವರಿಗೆ ಸವಿಯಲು ಕೊಡಿ. ಇದು ಹಸಿವು ಹೆಚ್ಚಿಸಿ, ತಿಂದ ಆಹಾರ ಜೀರ್ಣಿಸಿಕೊಳ್ಳಲು ಸಹಕಾರಿ.