ಬೇಕ್ಡ್ ಕೇಸರಿ ಕಡುಬು

ಕಣಕದ ಸಾಮಗ್ರಿ : 250 ಗ್ರಾಂ ಆಟಾ, 25 ಗ್ರಾಂ ರವೆ, ಅರ್ಧ ಸಣ್ಣ ಚಮಚ ಬೇಕಿಂಗ್‌ ಪೌಡರ್‌, 2-2 ಚಿಟಕಿ ಉಪ್ಪು, ಅರಿಶಿನ, ಹಾಲಲ್ಲಿ ನೆನೆಸಿದ ತುಸು ಕೇಸರಿ ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ ತುಪ್ಪ.

ಹೂರಣಕ್ಕಾಗಿ ಸಾಮಗ್ರಿ : 150 ಗ್ರಾಂ ಖೋವಾ, 125 ಗ್ರಾಂ ಸಕ್ಕರೆ, 25 ಗ್ರಾಂ ಸಣ್ಣ ರವೆ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್‌), 50 ಗ್ರಾಂ ತುರಿದ ಕೊಬ್ಬರಿ, ಅರ್ಧ ಸಣ್ಣ ಚಮಚ ಏಲಕ್ಕಿಪುಡಿ, ತುಸು ಕರ್ಬೂಜದ ಬೀಜ.

ವಿಧಾನ : ಕಣಕದ ಸಾಮಗ್ರಿಗಳನ್ನೆಲ್ಲ ಸೇರಿಸಿ ಮೃದುವಾದ ಪೂರಿ ಹಿಟ್ಟಿನಂತೆ ಕಲಸಿಡಿ. ಒರಳಿದ್ದರೆ ಅದಕ್ಕೆ ಹಾಕಿ ಹಾರೆಯಿಂದ ಕುಟ್ಟಬಹುದು ಅಥವಾ ಮತ್ತೆ ಮತ್ತೆ ಸಾಟಿ ತುಪ್ಪ ಹಾಕಿ ಚೆನ್ನಾಗಿ ನಾದಬೇಕು. ಅದೇ ತರಹ ಒಂದು ಬೇಸನ್ನಿಗೆ ಹೂರಣದ ಎಲ್ಲಾ ಸಾಮಗ್ರಿ ಹಾಕಿ ಕಲಸಬೇಕು. ಇದರಲ್ಲಿ ಗೋಡಂಬಿ ದ್ರಾಕ್ಷಿ ತುಪ್ಪದಲ್ಲಿ ಹುರಿದು, ರವೆಯನ್ನೂ ಹುರಿದಿರಬೇಕು. ನಂತರ ಕಣಕದಿಂದ ಸಣ್ಣ ಉಂಡೆ ಮಾಡಿ ಲಟ್ಟಿಸಿ. ಇದನ್ನು ಕಡುಬಿನ ಅಚ್ಚಿನಲ್ಲಿ ಹರಡಿಕೊಂಡು ಮಧ್ಯೆ 2-3 ಚಮಚ ಹೂರಣ ತುಂಬಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು, ಅದರ ಮೇಲೆ ತುಪ್ಪ ಸವರಿಡಿ. ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ ಇವನ್ನು ಬೇಕ್‌ ಮಾಡಿ, ಸವಿಯಿರಿ.

ಬೇಸನ್ಬರ್ಫಿ

ಸಾಮಗ್ರಿ : 150 ಗ್ರಾಂ ಕಡಲೆಹಿಟ್ಟು, 100 ಗ್ರಾಂ ಸಕ್ಕರೆ, 1 ಕಪ್‌ ಗಟ್ಟಿ ಹಾಲು, ಗೋಡಂಬಿ ದ್ರಾಕ್ಷಿ, ಬಾದಾಮಿ, ಪಿಸ್ತಾ, ಕರ್ಬೂಜಾ ಬೀಜ (ಒಟ್ಟಾಗಿ ಅರ್ಧ ಕಪ್‌,) ಅಗತ್ಯವಿದ್ದಷ್ಟು ತುಪ್ಪ, ಏಲಕ್ಕಿ ಪುಡಿ.

ವಿಧಾನ : ಕಡಲೆಹಿಟ್ಟು ಜರಡಿಯಾಡಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಗೋಡಂಬಿ, ದ್ರಾಕ್ಷಿಗಳನ್ನು ಹುರಿದು ತೆಗೆಯಿರಿ ನಂತರ ಇದಕ್ಕೆ ಹಾಲು, ಸಕ್ಕರೆ ಬೆರೆಸಿ. ಆಮೇಲೆ ಡ್ರೈಫ್ರೂಟ್ಸ್ ಸೇರಿಸಿ ಕೆದಕಬೇಕು. ನಂತರ ಕಡಲೆಹಿಟ್ಟು ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಡುನಡುವೆ ತುಪ್ಪ ಬೆರೆಸುತ್ತಾ ತಳ ಹಿಡಿಯದಂತೆ ಎಚ್ಚರವಹಿಸಿ. ಕೊನೆಯಲ್ಲಿ ಏಲಕ್ಕಿಪುಡಿ ಸೇರಿಸಿ ಜಿಡ್ಡು ಸವರಿದ ತಟ್ಟೆಯಲ್ಲಿ ಇದನ್ನು ಹರಡಿ, ಆರಿದ ನಂತರ ಬರ್ಫಿ ಕತ್ತರಿಸಿ ಸವಿಯಲು ಕೊಡಿ.

ಕೇಸರಿ ಖೋವಾ ಬರ್ಫಿ

ಸಾಮಗ್ರಿ : 150 ಗ್ರಾಂ ಖೋವಾ, 1 ಕಪ್‌ ಹಾಲು, 25 ಗ್ರಾಂ ಹಾಲಿನ ಪುಡಿ. ಅಗತ್ಯವಿದ್ದಷ್ಟು ತುಪ್ಪ. ಸಕ್ಕರೆ, ಏಲಕ್ಕಿ, ಹಾಲಲ್ಲಿ ನೆನೆದ  ಕೇಸರಿ, ಅರಿಶಿನ.

ವಿಧಾನ : ಖೋವಾ ಚೆನ್ನಾಗಿ ಮಸೆದು ಅದಕ್ಕೆ ಕೇಸರಿ, ಅರಿಶಿನ ಹಾಕಿ 30 ಕ್ಷಣಗಳು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ. ಇದನ್ನು ಹೊರ ತೆಗೆದು ಬಾಕಿ ಎಲ್ಲಾ ಸಾಮಗ್ರಿ ಸೇರಿಸಿ. ನಂತರ ತುಪ್ಪ ಸವರಿದ ಓವನ್‌ ಪ್ರೂಫ್‌ ಡಿಶ್ಶಿಗೆ ಈ ಮಿಶ್ರಣ ಹರಡಿ ಸಮನಾಗಿಸಿ. ನಂತರ ಇದನ್ನು ಬರ್ಫಿ ಆಕಾರದಲ್ಲಿ ಕತ್ತರಿಸಿ, 15-20 ನಿಮಿಷ ಮತ್ತೆ ಫ್ರಿಜ್‌ನಲ್ಲಿರಿಸಿ ಸವಿಯಲು ಕೊಡಿ.

ಕಾಜೂ ಕತಲೀ

ಸಾಮಗ್ರಿ : 500 ಗ್ರಾಂ ಗೋಡಂಬಿ ಪುಡಿ, ಅರ್ಧ ಕಪ್‌ ಕಾದಾರಿದ ಗಟ್ಟಿ ಹಾಲು, ಅಗತ್ಯವಿದ್ದಷ್ಟು ಸಕ್ಕರೆ, ತುಪ್ಪ, ಏಲಕ್ಕಿ, ಸಿಲ್ವರ್ ಫಾಯಿಲ್‌.

ವಿಧಾನ : ಒಂದು ಪ್ಯಾನಿನಲ್ಲಿ 1 ಲೋಟದಷ್ಟು ನೀರು ಬಿಸಿ ಮಾಡಿ. ಇದಕ್ಕೆ ಸಕ್ಕರೆ ಹಾಕಿ ಕುದಿಸಿ, ಏಲಕ್ಕಿ ಪುಡಿ ಹಾಕಿ ಪಾಕ ತಯಾರಿಸಿ. ಆಮೇಲೆ ಗೋಡಂಬಿ ಪುಡಿ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಡುನಡುವೆ ತುಪ್ಪ ಬೆರೆಸುತ್ತಾ ಗಮನಿಸಿಕೊಳ್ಳಬೇಕು. ಆಮೇಲೆ ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣ ಹರಡಿ ಸಮ ಮಾಡಿ. ಚೆನ್ನಾಗಿ ಆರಿದ ನಂತರ ಬರ್ಫಿ ಆಕಾರದಲ್ಲಿ ಕತ್ತರಿಸಿ. ಇವನ್ನು ಸಿಲ್ವರ್‌ ಫಾಯಿಲ್‌ನಿಂದ ಅಲಂಕರಿಸಿ, ಚಿತ್ರದಲ್ಲಿರುವೆತೆ ಸರ್ವ್ ‌ಮಾಡಿ.

ಹೆಸರುಹಿಟ್ಟಿನ ಲಡ್ಡು

ಸಾಮಗ್ರಿ : 150 ಗ್ರಾಂ ಹೆಸರುಹಿಟ್ಟು, 100 ಗ್ರಾಂ ಸಕ್ಕರೆ, ಅಗತ್ಯವಿದ್ದಷ್ಟು ತುಪ್ಪ, ಡ್ರೈ ಫ್ರೂಟ್ಸ್.

ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಡ್ರೈಫ್ರೂಟ್ಸ್ ಹುರಿದು ಪಕ್ಕಕ್ಕಿಡಿ. ಆಮೇಲೆ ಇದಕ್ಕೆ ಹೆಸರುಹಿಟ್ಟು ಹಾಕಿ ಮಂದ ಉರಿಯಲ್ಲಿ ಘಮ್ಮೆನ್ನುವಂತೆ ಹುರಿಯಿರಿ. ಇದನ್ನು ಕೆಳಗಿಳಿಸಿ ಬಟ್ಟಲಿಗೆ ಸುರಿದು, ಇನ್ನಷ್ಟು ತುಪ್ಪ, ಸಕ್ಕರೆ, ಡ್ರೈ ಫ್ರೂಟ್ಸ್ ಸೇರಿಸಿ. ಆರಿದ ನಂತರ ಬೇಗ ಬೇಗ ಉಂಡೆ ಕಟ್ಟಿದರೆ ಲಡ್ಡು ಸವಿಯಲು ಸಿದ್ಧ!

ಕಡಲೆಬೇಳೆ ಬರ್ಫಿ

ಸಾಮಗ್ರಿ : 150 ಗ್ರಾಂ ಕಡಲೆಬೇಳೆ, 100 ಗ್ರಾಂ ಸಕ್ಕರೆ, ಅಗತ್ಯವಿದ್ದಷ್ಟು ಕೊಬ್ಬರಿ ತುರಿ, ತುಪ್ಪ, ಏಲಕ್ಕಿ ಪುಡಿ.

ವಿಧಾನ : ಕಡಲೆಬೇಳೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ. ಒಂದು ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ. ಅದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ಕೆಳಗಿಳಿಸಿ, ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿ ಆರಲು ಬಿಡಿ. ನಂತರ ಬರ್ಫಿ ಆಕಾರದಲ್ಲಿ ಕತ್ತರಿಸಿ, ಸಿಲ್ವರ್‌ ಫಾಯಿಲ್‌ನಿಂದ ಅಲಂಕರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ