ಸ್ವಾದಿಷ್ಟ ಕಢೀ

ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, 3 ಕಪ್‌ ಹುಳಿ ಮೊಸರು, ಅರ್ಧರ್ಧ ಚಮಚ ಧನಿಯ, ಮೆಂತ್ಯ, ಜೀರಿಗೆ, ಸಾಸುವೆ, ಸೋಂಪು, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಒಗ್ಗರಣೆಗೆ ತುಸು ತುಪ್ಪ, ಕರಿಬೇವು, ಒಣ ಮೆಣಸಿನಕಾಯಿ, ಹೆಚ್ಚಿದ ಒಂದಿಷ್ಟು ಕೊ.ಸೊಪ್ಪು.

ವಿಧಾನ : ಒಂದು ಬಟ್ಟಲಿಗೆ ಕಡಲೆಹಿಟ್ಟು, ಮೊಸರು, ಸ್ವಲ್ಪ ನೀರು, ಉಪ್ಪು, ಖಾರ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಇಂಗು, ಕರಿಬೇವು, ಧನಿಯ, ಜೀರಿಗೆ, ಸಾಸುವೆ, ಸೋಂಪು ಹಾಕಿ ಚಟಪಟಾಯಿಸಿ. ನಂತರ ತುಂಡರಿಸಿದ ಒಣಮೆಣಸಿನಕಾಯಿ ಸಹ ಹಾಕಿ. ಆಮೇಲೆ ಅರಿಶಿನ ಹಾಕಿ ಕೆದಕಿ, ಮೊಸರಿನ ಮಿಶ್ರಣ ಬೆರೆಸಿ ಕೈಯಾಡಿಸಿ, ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಿ ಕೆಳಗಿಳಿಸಿ, ಕೊ.ಸೊಪ್ಪು  ಉದುರಿಸಿ. ಬಿಸಿಬಿಸಿಯಾಗಿ ಅನ್ನದ ಜೊತೆ ಸವಿಯಲು ಕೊಡಿ.

ವೆಜ್ಕೊಲ್ಹಾಪುರಿ

ಸಾಮಗ್ರಿ : ಅರ್ಧ ಸೌಟು ತುಪ್ಪ, 1 ಬಟ್ಟಲು ಹೆಚ್ಚಿ ಬೇಯಿಸಿದ ಬೀನ್ಸ್, ಕ್ಯಾರೆಟ್‌, ಎಲೆಕೋಸು, ಹೂಕೋಸು, ಆಲೂ ಹೋಳು ಇತ್ಯಾದಿ, 1 ಕಪ್‌ ಬೆಂದ ಹಸಿಬಟಾಣಿ, ಅರ್ಧ ಕಪ್‌ ತೆಂಗಿನ ತುರಿ, 4-5 ಒಣಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಖಾರದಪುಡಿ, ಧನಿಯಾಪುಡಿ, 1 ದೊಡ್ಡ ಚಮಚದಷ್ಟು ಏಲಕ್ಕಿ, ದಾಲ್ಚಿನ್ನಿ, ಲವಂಗ, ಮೊಗ್ಗು, 2-3 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 2-3 ಹುಳಿ ಟೊಮೇಟೊ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು ಹುರಿದ ನೈಲಾನ್‌ ಎಳ್ಳು.

ವಿಧಾನ : ತೆಂಗಿನ ತುರಿಗೆ ಧನಿಯಾಪುಡಿ, ಖಾರದಪುಡಿ, ಪುಡಿ ಮೆಣಸು, ಏಲಕ್ಕಿ ಮೊಗ್ಗು, ಬೆಳ್ಳುಳ್ಳಿ, ತುಸು ಈರುಳ್ಳಿ ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ, ಇಡೀ ಒಣ ಮೆಣಸಿನಕಾಯಿ ಹಾಕಿ ಅದಕ್ಕೆ ಹೆಚ್ಚಿದ ಈರುಳ್ಳಿ, ನಂತರ ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ರುಬ್ಬಿದ ಮಸಾಲೆ, ಅರಿಶಿನ ಹಾಕಿ ಮಂದ ಉರಿಯಲ್ಲಿ ಕೆದಕಿ ಹಸಿ ವಾಸನೆ ಹೋಗಲಾಡಿಸಿ. ಆಮೇಲೆ ಬೆಂದ ತರಕಾರಿ ಹಾಕಿ, ಉಪ್ಪು ಸೇರಿಸಿ ಕುದಿಸಿ. ಗ್ರೇವಿ ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ, ಹುರಿದ ಎಳ್ಳು, ಕೊ.ಸೊಪ್ಪು ಉದುರಿಸಿ ಬಿಸಿಬಿಸಿಯಾಗಿ ಚಪಾತಿ, ಅನ್ನದ ಜೊತೆ ಸವಿಯಲು ಕೊಡಿ.

ಮಟನ್ಬಿರಿಯಾನಿ

ಸಾಮಗ್ರಿ : 500 ಗ್ರಾಂ ಮಟನ್‌ (ವಿತ್‌ ಬೋನ್‌), ನೆನೆಹಾಕಿದ 2-3 ಕಪ್‌ ಬಾಸುಮತಿ ಅಕ್ಕಿ, 1-1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬೆಣ್ಣೆ, ಗರಂಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಖಾರದಪುಡಿ, ಧನಿಯಾಪುಡಿ, ಜೀರಿಗೆ ಸೋಂಪಿನಪುಡಿ, ಅರ್ಧ ಸಣ್ಣ ಚಮಚ ಕೇಸರಿ (ಹಾಲಲ್ಲಿ ನೆನೆಹಾಕಿ), 1 ಕಪ್‌ ಗಟ್ಟಿ ಮೊಸರು (ಹಂಗ್‌ ಕರ್ಡ್‌), 2-3 ಚಿಟಕಿ ಅರಿಶಿನ, ಅರ್ಧ ಸೌಟು ರೀಫೈಂಡ್‌ ಎಣ್ಣೆ, ಹೆಚ್ಚಿದ 4-5 ಈರುಳ್ಳಿ, 1 ಸಣ್ಣ ಗಡ್ಡೆ ಬೆಳ್ಳುಳ್ಳಿ, ಏಲಕ್ಕಿ, ಚಕ್ಕೆ, ಲವಂಗ, ಮೊಗ್ಗು (ಒಟ್ಟಾಗಿ 1 ದೊಡ್ಡ ಚಮಚ), ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಹಸಿಮೆಣಸು, ಹುಳಿ ಟೊಮೇಟೊ.

ವಿಧಾನ : ಮಟನ್‌ ಪೀಸ್‌ಗೆ ಗಟ್ಟಿ ಮೊಸರು, ಉಪ್ಪು, ಅರಿಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಬೆರೆಸಿ 4 ಗಂಟೆಗಳ ಕಾಲ ಫ್ರಿಜ್‌ನಲ್ಲಿರಿಸಿ ಮ್ಯಾರಿನೇಟ್‌ಗೊಳಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸ್ವಲ್ಪ ಎತ್ತಿರಿಸಿ ಉಳಿದ ಈರುಳ್ಳಿಯನ್ನು ಚೆನ್ನಾಗಿ ಫ್ರೈ ಮಾಡಿ ಬೇರೆ ಇಡಿ. ಆಮೇಲೆ ಪ್ರೆಷರ್‌ ಕುಕ್ಕರ್‌ನಲ್ಲಿ ಅಕ್ಕಿ, ಉಪ್ಪು, ಲವಂಗ, ಚಕ್ಕೆ, ಏಲಕ್ಕಿ, ಮೊಗ್ಗು ಹಾಗೂ 5 ಕಪ್‌ ನೀರು ಬೆರೆಸಿ 1 ಸೀಟಿ ಬರುವಂತೆ ಬೇಯಿಸಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಉಳಿದ ಈರುಳ್ಳಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಕೆದಕಬೇಕು. ಆಮೇಲೆ ಇದಕ್ಕೆ ಮ್ಯಾರಿನೇಟೆಡ್‌ ಮಟನ್‌ ಸೇರಿಸಿ ದೊಡ್ಡ ಉರಿಯಲ್ಲಿ 7-8 ನಿಮಿಷ ಬೇಯಿಸಿ. ನಂತರ ಮಂದ ಉರಿ ಮಾಡಿಕೊಂಡು ಇದಕ್ಕೆ ಧನಿಯಾಪುಡಿ, ಜೀರಿಗೆ ಪುಡಿ, ಖಾರದಪುಡಿ ಹಾಕಿ ಮಟನ್‌ ಚೆನ್ನಾಗಿ ಬೇಯುವಂತೆ ಮಾಡಿ. ಆಮೇಲೆ ಇದಕ್ಕೆ ಟೊಮೇಟೊ, ಉಪ್ಪು, ಅರ್ಧದಷ್ಟು ಗರಂಮಸಾಲ, ಕೊ.ಸೊಪ್ಪು, ಅರ್ಧದಷ್ಟು ಗರಂಮಸಾಲ, ಕೊ.ಸೊಪ್ಪು ಸೇರಿಸಿ ಮತ್ತಷ್ಟು ಹೊತ್ತು ಬಾಡಿಸಿ, ಕೆಳಗಿಳಿಸಿ. ಒಂದು ದೊಡ್ಡ ಪಾತ್ರೆಯಲ್ಲಿ ಮೊದಲು ಒಂದು ಪದರ ಅನ್ನ, ಅದರ ಮೇಲೆ ಮಟನ್‌ ಮಿಶ್ರಣ, ಹೀಗೆ ಅವರೆಡನ್ನೂ ಪೂರ್ತಿ ಮಾಡಿ. ಕೊನೆಯಲ್ಲಿ ಇದರ ಮೇಲೆ ನೆನೆಸಿದ ಕೇಸರಿ, ಬೆಣ್ಣೆ, ಪುದೀನಾ ಹಾಗೂ ಉಳಿದ ಗರಂಮಸಾಲ ಹಾಕಿ ಅಲ್ಯುಮಿನಿಯಂ ಫಾಯಿಲ್‌ನಿಂದ ಕವರ್‌ ಮಾಡಿ, 180 ಡಿಗ್ರಿ ಸೆಂ. ಶಾಖದಲ್ಲಿ  ಪ್ರೀಹೀಟೆಡ್‌ ಓವನ್ನಿನಲ್ಲಿ 20 ನಿಮಿಷ ಬೇಕ್‌ ಮಾಡಿ. ಕೊನೆಯಲ್ಲಿ ಈರುಳ್ಳಿ ಫ್ರೈನಿಂದ ಅಲಂಕರಿಸಿ, ಬಿಸಿಬಿಸಿಯಾಗಿ ಟೊಮೇಟೊ ರಾಯ್ತಾ ಜೊತೆ ಸವಿಯಲು ಕೊಡಿ.

ಪನೀರ್ಗೋಲ್ಡ್ ಕಾಯಿನ್ಸ್

ಸಾಮಗ್ರಿ : 500 ಗ್ರಾಂ ತಾಜಾ ಪನೀರ್‌, 1 ಕಪ್‌ ಖೋವಾ, 2 ಚಮಚ ರೀಫೈಂಡ್‌ ಎಣ್ಣೆ, 1 ಕಪ್‌ ಬ್ರೆಡ್‌ ಕ್ರಂಬ್ಸ್, 8-10 ಒಣದ್ರಾಕ್ಷಿ, 8-10 ಬಾದಾಮಿ ಚೂರು, 1 ಚಮಚ ಪ್ರೊಸೆಸ್ಡ್ ಚೀಸ್‌, 3-4 ಹಸಿಮೆಣಸು, ಅರ್ಧ ಕಪ್‌ ಹಂಗ್‌ ಕರ್ಡ್‌, 1 ಚಮಚ ಮೈದಾ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು.

ವಿಧಾನ : ಖೋವಾ, ಹಸಿಮೆಣಸು, ದ್ರಾಕ್ಷಿ, ಬಾದಾಮಿ, ಪ್ರೊಸೆಸ್ಡ್ ಚೀಸ್‌ ಮತ್ತು ಹಂಗ್‌ ಕರ್ಡ್‌ ಇತ್ಯಾದಿ ಚೆನ್ನಾಗಿ ಬೆರೆಸಿ ನುಣುಪಾದ ಮಿಶ್ರಣ ಸಿದ್ಧಪಡಿಸಿ. ನಂತರ ಪನೀರ್‌ (ಕಾಟೇಜ್‌ ಚೀಸ್‌)ನ್ನು ಚಿತ್ರದಲ್ಲಿರುವಂತೆ ಬಿಲ್ಲೆಗಳಾಗಿ ಕತ್ತರಿಸಿ, ಅದರ ಎರಡೂ ಬದಿ ಖೋವಾ ಮಿಶ್ರಣ ಮೆತ್ತಿಕೊಳ್ಳುವಂತೆ ಮಾಡಿ. ಮೈದಾಗೆ ತುಸು ಉಪ್ಪು, ಪುಡಿಮೆಣಸು ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಮಿಶ್ರಣ ಕಲಸಿಡಿ. ಅದರಲ್ಲಿ ಈ ಪನೀರ್‌ ಬಿಲ್ಲೆಗಳನ್ನು ಅದ್ದಿಕೊಂಡು ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ ನಾನ್‌ಸ್ಟಿಕ್‌ ಪ್ಯಾನ್‌ನಲ್ಲಿ ಹೊಂಬಣ್ಣ ಬರುವಂತೆ ಎರಡೂ ಬದಿ ಫ್ರೈ ಮಾಡಿ. ಆಮೇಲೆ ಚಿತ್ರದಲ್ಲಿರುವಂತೆ ಪುದೀನಾ ಚಟ್ನಿ, ಈರುಳ್ಳಿ ಸಲಾಡ್‌ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಹಾಗಲ ಪಲ್ಯ

ಸಾಮಗ್ರಿ : 4-5 ಹಸಿರು ಹಾಗಲಕಾಯಿ, ಅರ್ಧ ಸೌಟು ರೀಫೈಂಡ್‌ ಎಣ್ಣೆ, 1-2 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, 1 ಚಮಚ ಹೆಚ್ಚಿದ ಶುಂಠಿ, 1-2 ಹೆಚ್ಚಿದ ಟೊಮೇಟೊ, 2 ಚಿಟಕಿ  ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಜೀರಿಗೆಪುಡಿ, ಧನಿಯಾಪುಡಿ, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು.

ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕರಿಬೇವಿನ ಸಮೇತ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಹಸಿಮೆಣಸು ಹಾಕಿ ಬಾಡಿಸಿ. ಆಮೇಲೆ ಸಣ್ಣಗೆ ಹೆಚ್ಚಿದ ಹಾಗಲಕಾಯಿ ಸೇರಿಸಿ ಮಂದ ಉರಿಯಲ್ಲಿ ತುಸು ನೀರು ಚಿಮುಕಿಸಿ ಚೆನ್ನಾಗಿ ಬಾಡಿಸಿ. ಆಮೇಲೆ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಬೇಕು. ಕೊನೆಯಲ್ಲಿ ಉಪ್ಪು, ಖಾರ ಹಾಗೂ ಉಳಿದ ಮಸಾಲೆ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಇದಕ್ಕೆ ಕೊ.ಸೊಪ್ಪು ಸೇರಿಸಿ, ಬಿಸಿಯಾಗಿ ಚಪಾತಿ ಜೊತೆ ಸಲಾಡ್‌ನೊಂದಿಗೆ ಸವಿಯಲು ಕೊಡಿ.

ಗ್ರೀನ್ಪೀಸ್ಕರೀ

ಸಾಮಗ್ರಿ : 2 ಕಪ್‌ ಬೇಯಿಸಿದ ಹಸಿ ಬಟಾಣಿ, 2-3 ಆಲೂ, ಅಗತ್ಯವಿದ್ದಷ್ಟು ಎಣ್ಣೆ, 1-2 ಟೊಮೇಟೊ, 4-5 ಹಸಿ ಮೆಣಸಿನಕಾಯಿ, 1 ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಜೀರಿಗೆ ಪುಡಿ, ಸೋಂಪಿನ ಪುಡಿ, ಗರಂಮಸಾಲ, ಇಂಗು, ನಿಂಬೆ ರಸ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಹಸಿಮೆಣಸು ಟೊಮೇಟೊ ಬೆರೆಸಿ ಪೇಸ್ಟ್ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ತೆಳುವಾಗಿ ಉದ್ದಕ್ಕೆ ಹೆಚ್ಚಿದ ಆಲೂ ಹಾಕಿ ಕರಿದು ತೆಗೆಯಿರಿ. ಇದರಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಇಂಗು, ಜೀರಿಗೆಪುಡಿಯ ಒಗ್ಗರಣೆ ಕೊಡಿ. ಆಮೇಲೆ ಇದಕ್ಕೆ ಧನಿಯಾಪುಡಿ, ಶುಂಠಿ, ಟೊಮೇಟೊ ಪೇಸ್ಟ್ ಮಿಶ್ರಣ ಹಾಕಿ ಮಂದಉರಿಯಲ್ಲಿ ಕೆದಕಬೇಕು. ಆಮೇಲೆ ಇದಕ್ಕೆ ಲಘುವಾಗಿ ಮಸೆದ ಬಟಾಣಿ, ಆಲೂ ಫ್ರೈ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ, ಗ್ರೇವಿ ಗಟ್ಟಿಯಾಗಿ ಬರಲು ಬೇಕಾದಷ್ಟು ನೀರು ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಕೆಳಗಿಳಿಸಿದ ಮೇಲೆ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಪೂರಿ, ಚಪಾತಿ ಜೊತೆ ಸವಿಯಲು ಕೊಡಿ.

ಚೆಟ್ಟಿನಾಡ್ಚಿಕನ್

ಸಾಮಗ್ರಿ : 500 ಗ್ರಾಂ ಬೋನ್‌ಲೆಸ್‌ ಚಿಕನ್‌, 2-3 ಎಸಳು ಕರಿಬೇವು, 1-1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ 2 ಈರುಳ್ಳಿ, 2-3 ಹುಳಿ ಟೊಮೇಟೊ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಹಸಿಮೆಣಸು, ತೆಂಗಿನತುರಿ, 1-2 ಒಣ ಮೆಣಸಿನಕಾಯಿ, 8-10 ಕಾಳುಮೆಣಸು, 1-1 ಸಣ್ಣ ಚಮಚ ಗಸಗಸೆ, ಜೀರಿಗೆ, ಸೋಂಪು, ಹುರಿಗಡಲೆ, ಚಕ್ಕೆ, ಲವಂಗ, ಏಲಕ್ಕಿ, ಮೊಗ್ಗು (ಒಟ್ಟಾರೆ 1 ಚಮಚ), ಅರ್ಧ ಸೌಟು ಎಣ್ಣೆ.

ವಿಧಾನ : ಒಣ ಮೆಣಸು, ಕಾಳುಮೆಣಸು, ಜೀರಿಗೆ, ಸೋಂಪು, ಚಕ್ಕೆ ಲವಂಗಗಳು, ಗಸಗಸೆ, ಹುರಿಗಡಲೆ, ತೆಂಗಿನ ತುರಿ, ತುಸು ಈರುಳ್ಳಿ, ಬೆಳ್ಳುಳ್ಳಿ ಎಲ್ಲ ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಪ್ರೆಷರ್‌ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಕರಿಬೇವಿನ ಸಮೇತ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಕೊನೆಯಲ್ಲಿ ಟೊಮೇಟೊ ಹಾಕಿ ಬಾಡಿಸಬೇಕು. ಆಮೇಲೆ ಇದಕ್ಕೆ ರುಬ್ಬಿದ ಮಸಾಲೆ, ಚಿಕನ್‌ ಪೀಸ್‌ ಹಾಕಿ ಹಸಿ ವಾಸನೆ ಹೋಗಲಾಡಿಸಿ, 1 ಕಪ್‌ ನೀರು ಬೆರೆಸಿ ಮಂದ ಉರಿಯಲ್ಲಿ ಕೆದಕುತ್ತಾ ಬೇಯಿಸಿ. ಗ್ರೇವಿ ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ, ಕೊ.ಸೊಪ್ಪುಪುದೀನಾ ಉದುರಿಸಿ, ಬಿಸಿಬಿಸಿ ಘೀರೈಸ್‌ ಜೊತೆ ಸವಿಯಲು ಕೊಡಿ.

ಬೇಸಿಲ್ ಫಿರನಿ

ಸಾಮಗ್ರಿ : 1 ಕಪ್‌ ಕಾದಾರಿದ ಹಾಲಲ್ಲಿ ನೆನೆದ ಬಾಸುಮತಿ ಅಕ್ಕಿ, 4 ಕಪ್‌ ಫುಲ್ ಕ್ರೀಂ ಹಾಲು, 2 ಕಪ್‌ ಸಕ್ಕರೆ, 1 ಚಿಟಕಿ ಕೇಸರಿ, ಅರ್ಧರ್ಧ ಸಣ್ಣ ಚಮಚ ಏಲಕ್ಕಿ ಪುಡಿ ತುಳಸಿ ಬೀಜ, 1 ಚಮಚ ಪಿಸ್ತಾ ಚೂರು, 8-10 ತುಳಸಿ ಎಲೆಗಳು.

ವಿಧಾನ : ಚಿಕ್ಕ ಪ್ರೆಷರ್‌ ಕುಕ್ಕರ್‌ನಲ್ಲಿ ಹಾಲು ಕಾಯಿಸಿ, ಉಳಿದೆಲ್ಲ ಸಾಮಗ್ರಿಗಳನ್ನೂ ಮಿಕ್ಸಿಯಲ್ಲಿ ತರಿತರಿಯಾಗಿ ತಿರುವಿಕೊಂಡು ಇದಕ್ಕೆ ಬೆರೆಸಿ, ಮಂದ ಉರಿಯಲ್ಲಿ ಕೆದಕಬೇಕು. 5 ನಿಮಿಷ ಬಿಟ್ಟು ತುಳಸಿ ಬೀಜ, ಎಲೆಗಳನ್ನೂ ಸೇರಿಸಿ ಕುದಿಸಬೇಕು. ಚೆನ್ನಾಗಿ ಕುದಿ ಬಂದು ಖೀರು ಗಟ್ಟಿಯಾದಾಗ, ಕೆಳಗಿಳಿಸಿ, ಪಿಸ್ತಾ ಚೂರು ಉದುರಿಸಿ, ಸವಿಯಲು ಕೊಡಿ.

ಅನಾನಸ್ಹಲ್ವಾ

ಸಾಮಗ್ರಿ : 500 ಗ್ರಾಂ ಅನಾನಸ್‌, ಅರ್ಧ ಕಪ್‌ ಅನಾನಸ್‌ ರಸ, 1 ಚಿಟಕಿ ಕೇಸರಿ, 2-3 ಚಿಟಕಿ ಏಲಕ್ಕಿ ಪುಡಿ, 1 ಚಮಚ ಪಿಸ್ತಾ ಚೂರು, ತುಸು ಸಕ್ಕರೆ ತುಪ್ಪ.

ವಿಧಾನ : ಅನಾನಸ್‌ ಸಿಪ್ಪೆ ಹೆರೆದು, ಅದನ್ನು ಸಣ್ಣ ಹೋಳಾಗಿಸಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಅನಾನಸ್‌ಹೋಳು ಹಾಕಿ ಚೆನ್ನಾಗಿ ಬಾಡಿಸಿ. ಆಮೇಲೆ ಇದಕ್ಕೆ ಅದರ ರಸ, ಹಾಲಲ್ಲಿ ನೆನೆಸಿದ ಕೇಸರಿ ಹಾಕಿ ಕೈಯಾಡಿಸಿ. ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಾ ಹಲ್ವಾ ತಳಹಿಡಿಯದಂತೆ ನೋಡಿಕೊಳ್ಳಿ. ಕೆಳಗಿಳಿಸಿ, ಪಿಸ್ತಾ ಉದುರಿಸಿ ಬಿಸಿಯಾಗಿ ಸವಿಯಲು ಕೊಡಿ.

ಕ್ಷೀರಪಾಕ

ಸಾಮಗ್ರಿ : 1 ಲೀ. ಫುಲ್ ಕ್ರೀಂ ಗಟ್ಟಿ ಹಾಲು, 2 ಚಿಟಕಿ (ಹಾಲಲ್ಲಿ ನೆನೆಸಿದ) ಕೇಸರಿ, ಅರ್ಧ ಕಪ್‌ ಅಕ್ಕಿ, ಅಗತ್ಯವಿದ್ದಷ್ಟು ತುಪ್ಪ, ಏಲಕ್ಕಿ ಪುಡಿ, ಪಚ್ಚ ಕರ್ಪೂರ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, ಅರ್ಧ ಕಪ್‌ ಸಕ್ಕರೆ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ದ್ರಾಕ್ಷಿ ಗೋಡಂಬಿಗಳನ್ನು ಹುರಿದು ಬೇರೆ ಇಡಿ. ಮತ್ತಷ್ಟು ತುಪ್ಪದೊಂದಿಗೆ ಲಘುವಾಗಿ ಅಕ್ಕಿ ಹುರಿಯಿರಿ. ಚಿಕ್ಕ ಪ್ರೆಷರ್‌ ಕುಕ್ಕರ್‌ನಲ್ಲಿ ಮೊದಲು ಹಾಲು ಕಾಯಿಸಿ. ಆಮೇಲೆ ಇದಕ್ಕೆ ಅಕ್ಕಿ ಸಕ್ಕರೆ ಏಲಕ್ಕಿ ಪುಡಿ, ಕೇಸರಿ, ಪಚ್ಚ ಕರ್ಪೂರ ಇತ್ಯಾದಿ ಬೆರೆಸಿ 2 ಸೀಟಿ ಬರುವಂತೆ ಬೇಯಿಸಿ. ಮುಚ್ಚಳ ತೆರೆದ ಮೇಲೆ ಇದಕ್ಕೆ ದ್ರಾಕ್ಷಿ ಗೋಡಂಬಿ, ಇನ್ನಷ್ಟು ತುಪ್ಪ ಹಾಕಿ ಕೆದಕಿ, ಪೀಸಸ್‌ ಆಗಿ ತೆಗೆದು ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ